'ವರೋಪಚಾರವಾಗಿ ತಮ್ಮ ಮಾವಂದಿರು ತಮಗೆ ನೂರು ರಥಗಳನ್ನು, ನೂರು ಉಡುಗೆಗಳನ್ನು, ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿ ಕೊಡಬೇಕೆಂದಿದ್ದಾರೆ...'

ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿಯನ್ನು ಕೊಡಬೇಕೆಂದಿದ್ದಾರೆ...ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದಶರಥ, ವಸಿಷ್ಠ, ವಾಮದೇವ, ಮಂತ್ರಿಗಳು.... ಎಲ್ಲ ಬಹುಶಃ ಒಂದಿಪ್ಪತ್ತು ಮಂದಿ ಬಂದಿದ್ದಾರೆ ಮಿಥಿಲೆಗೆ. ಅವರನ್ನೆಲ್ಲ ಯಥೋಚಿತವಾಗಿ ಬಿಡದಿಯಲ್ಲಿ ಇಳಿಸಿದ್ದಾರೆ. "ಹೇಗೂ ವಿವಾಹಾನಂತರ ಸೊಸೆಯಂದಿರು ಇಲ್ಲಿಗೇ ಬರುತ್ತಾರೆ, ಎಲ್ಲರೂ ಬಂದರೆ ಆ ಮಹಾರಾಜರಿಗೆ ಹೆಚ್ಚು ಕೆಲಸ. ಆದ್ದರಿಂದ ಎಲ್ಲರೂ ಹೋಗುವ ಅವಶ್ಯಕತೆ ಇಲ್ಲ" ಎಂದು ಪಟ್ಟದ ರಾಣಿ ಕೌಸಲ್ಯೆ ಹೇಳಿದ್ದರಿಂದ ದಿಬ್ಬಣ ಪೂರ್ಣ ಸಣ್ಣದಾಗಿತ್ತು. ತಿಂಗಳೂ ಆಗಿರದಿದ್ದರೂ, ಮಗನನ್ನು ಕಂಡು ಎಷ್ಟೋ ಕಾಲವಾದಂತೆನಿಸಿತು ದಶರಥನಿಗೆ. "ಸೊಸೆ ಹೇಗಿದ್ದಾಳೆ? ನಿನಗೆ ಒಪ್ಪಿಗೆಯೇ? "ಅಪ್ಪನ ಪ್ರಶ್ನೆಗೆ ರಾಮರು ಅಪ್ರತಿಭರಾದಂತೆ "ನಾನು ಆಕೆಯನ್ನು ಕಂಡೇ ಇಲ್ಲ" ಎಂದರು. "ಕ್ಷಾತ್ರ ವಿವಾಹವೆಂದು, ವೀರ್ಯ ಶುಲ್ಕವೆಂದು ಹೇಳಿದ್ದರಿಂದ, ನೋಡುವ ಅವಶ್ಯಕತೆಯೇ ಉಳಿಯಲಿಲ್ಲ" ಎಂದು ಮಾತು ಮುಗಿಸಿದರು ಅಕೃತ್ರಿಮವಾಗಿ. 
ಅಂದು ಸಂಜೆ ಮಾತನಾಡುತ್ತಿದ್ದಾಗ ಲಕ್ಷ್ಮಣ ಅಪ್ಪನಿಗೆ ಹೇಳಿದ; ಶಿವ-ರಾಮರ ಸಂದರ್ಶನ, ಧನುರ್ಭಂಗ, ಇತ್ಯಾದಿಗಳನ್ನು. "ಶಂಕರ ಇದ್ದಿದ್ದರಿಂದ ಬಿಲ್ಲೆತ್ತಲು ಯಾರಿಗೂ ಆಗಿರಲಿಲ್ಲವೆಂಬುದು ಅಣ್ಣನಿಂದ ಆಮೇಲೆ ಗೊತ್ತಾಯಿತು, ಆದರೆ ಬಹುಶಃ ಈಶ್ವರಾಂಶ ಬಿಲ್ಲನ್ನು ಬಿಟ್ಟಿದ್ದರಿಂದ ಅದು ಹಗುರವಾಗಿರಬಹುದೆಂದುಕೊಂಡು, ಮುರಿದ ಎರಡು ಭಾಗಗಳನ್ನು ಬಂಡಿಯಲ್ಲೆಳೆದುಕೊಂಡು ಹೋದಾಗಲೂ ಸೇವಕರು ಕಷ್ಟ ಪಡುತ್ತಿರುವುದನ್ನು ಕಂಡಿದ್ದೆ. ಹೀಗಾಗಿ ಅಂದು ಸಂಜೆ ಧನುರ್ಮನೆಗೆ ಹೋಗಿ ಅದನ್ನು ಅಲ್ಲಾಡಿಸಿದೆ, ಇಲ್ಲ. ಅದು ಕಬ್ಬಿಣದ ಬಿಲ್ಲು, ಅಷ್ಟು ಸುಲಭವಲ್ಲ. ಮುರಿದಿದ್ದ ಅರ್ಧ ಎತ್ತಲೇ ನನಗೆ ಕಷ್ಟವಾಯಿತು. ಅಣ್ಣ ಅದನ್ನು ಹೇಗೆ ಅಷ್ಟು ಸುಲಭವಾಗಿ ಎತ್ತಿದನೋ ಅರ್ಥವೇ ಆಗುತ್ತಿಲ್ಲ. ಮೇಲ್ನೋಟಕ್ಕೆ ಅಷ್ಟು ಸುಕುಮಾರವಾಗಿ ಕಾಣುವ ಅಣ್ಣನ ತೋಳು ಅಷ್ಟು ಗಟ್ಟಿ ಹೇಗೋ ತಿಳಿಯಲೇ ಇಲ್ಲ . ಎತ್ತುವುದೆಂದರೇನು , ಅದನ್ನು ಬಗ್ಗಿಸುವುದೆಂದರೇನು , ಮುರಿಯುವಷ್ಟು ಬಲ ಪ್ರಯೋಗ ಮಾಡುವುದೆಂದರೇನು ... " ವಿಸ್ಮಯದಿಂದ ಕಣ್ಣು ಬಿಟ್ಟು ಹೇಳುತ್ತಿದ್ದ ಲಕ್ಷ್ಮಣ ; " ಶಿವ ಹೋದಮೇಲೇ ಅಷ್ಟು ಗಟ್ಟಿ ಇರಬೇಕಿದ್ದರೆ, ಈಶ್ವರ ಇದ್ದಾಗ ಅದಿನ್ನೆಷ್ಟು ಭಾರವಿತ್ತೋ" ! 
   *************
"ಸಾಧ್ಯವೇ ಇಲ್ಲ, ಇದಾವ ಸಂಪ್ರದಾಯ! ಮೊದಲಿನಿಂದ ಬಂದಿದೆ ಎಂದರೂ ವಿಮರ್ಶಿಸದೇ ಪಾಲಿಸಬೇಕೆಂದೇನೂ ಇಲ್ಲವಲ್ಲ ! ಗುರುಗಳು ಕಲ್ಪವನ್ನು ಪಾಠ ಮಾಡುತ್ತಿದ್ದಾಗಲೇ ಈ ವೈವಾಹಿಕ ಕರ್ಮಗಳನ್ನು ಅಧ್ಯಯನ ಮಾಡಿದ್ದೆ . ಆದರೆ ಅದರಲ್ಲಿ ಇವೆಲ್ಲ ಇಲ್ಲವಲ್ಲ? "ಶ್ರೀರಾಮರು ಶತಾನಂದರಲ್ಲಿ ಕೊಂಚ ಗಡುಸಾಗಿಯೇ ವಿರೋಧಿಸಿದರು. 
ಮಾರನೆಯ ದಿನದ ವಿವಾಹ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಶ್ರೀರಾಮರಲ್ಲಿ ಬಂದಿದ್ದರು ಶತಾನಂದರು. ನಾಗೋಲಿ, ಹೂವೀಳ್ಯ, ಎದರುಗೊಳ್ಳುವುದು, ವರಪೂಜೆ, ಗೌರಿ ಪೂಜೆ, ಅಂತರ್ಪಟ, ಜೀರಿಗೆ ಬೆಲ್ಲ, ಮಾಂಗಲ್ಯ ಧಾರಣೆ.... ಮುಗಿಯದ ಈ ಪಟ್ಟಿಯನ್ನು ಕೇಳಿ ಅಸಹನೆಯಿಂದ ಹೇಳಿದರು ರಾಮರು. 
" ಹಾಗಲ್ಲ, ಇದು ಹಿಂದಿನಿಂದ ಅನುಸರಿಸಿಕೊಂಡು ಬಂದಿದ್ದೇವೆ, ನಾವೆಲ್ಲರೂ ಬಹುಶಃ ನಿಮ್ಮಕಡೆಯವರು, ನಿಮ್ಮ ತಂದೆಯವರೂ ಇದೇ ರೀತಿ ಮದುವೆಯಾಗಿರಬಹುದು.... "ಏನೋ ಹೇಳುತ್ತಿದ್ದಂತೆಯೇ ಮತ್ತೆ ತಡೆದು ಹೇಳಿದರು ರಾಮರು. " ನೆನ್ನೆಯೇ ಅಪ್ಪ ಹೇಳಿದ್ದರು; "ಗಂಡಿನ ಕಡೆಯವರದೇನೂ ಇಲ್ಲ", ಎಂದು. ಅಸಲು ಹಸೇ ಮಣೆಗೆ ಅಪ್ಪನೇ ಬರುವುದಿಲ್ಲವಂತೆ, ಸಭಿಕರಲ್ಲಿ ಅವರೂ ಒಬ್ಬರಷ್ಟೇ. ಕನ್ಯಾ ಪಿತೃ ಹೇಗೆ ಮದುವೆ ಮಾಡಿ ಕೊಟ್ಟರೆ ಹಾಗೇ ಸಾಕು. ಸಾಕಿ ಸಲಹಿ, ಮಗಳನ್ನು ಕೊಡುವುದಲ್ಲದೇ ಗಂಡಿನ ಕಡೆಯವರ ಆಣತಿಗಳನ್ನು ಕೇಳುವುದು ಅದೆಷ್ಟು ಕಷ್ಟ. ಎಷ್ಟು ಸರಳವಾಗಿ ಮದುವೆಯಾದರೆ ಅಷ್ಟು ಒಳ್ಳೆಯದು ಎಂದಿದ್ದಾರೆ ಅಪ್ಪ. " 
ಹತಾಶೆಯಿಂದ ಶತಾನಂದರು ಹೇಳಿದರು; " ಹಾಗಾದರೆ ನಿನ್ನ ಅಭಿಪ್ರಾಯ ಏನು? ಏಕೆ ಈ ವಿರೋಧ? " ಸಂದಿಗ್ಧದಲ್ಲಿ ಕೇಳಿದ್ದಕ್ಕೆ, " ಪರ-ವಿರೋಧದ ಮಾತಲ್ಲ ಇದು, ಇದು ಅನಿವಾರ್ಯತೆಯ ವಿಷಯ ಅಷ್ಟೇ. "ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತ ಹೇಳಿದರು ರಾಮರು; " ನಾವು ವೈದಿಕರು ಎನ್ನುತ್ತೇವೆ. ವೇದದಲ್ಲಿ ಈ ಭಾರತಕ್ಕೆ ಮಾನ್ಯತೆ ಇದೆ ಎನ್ನುತ್ತೇವೆ. ಹೇಳಿ, ಯಾವ ವೇದದಲ್ಲಿ ನೀವು ಹೇಳಿದ ವೈವಾಹಿಕ ಕರ್ಮಗಳಿವೆ? ಯಾವ ಕಲ್ಪದಲ್ಲಿಯಾದರೂ ನೀವು ವಿವರಿಸಿದ ಮದುವೆಯ ಪಟ್ಟಿ ಇದೆಯೇ? ಉದಾಹರಣೆಗೆ ನೀವು ಹೇಳಿದ ಲಗ್ನಪತ್ರಿಕೆ ಶಾಸ್ತ್ರ. ಏಕೆ ಬೇಕದು? ಮದುವೆಯಾಗುವುದೇ ನಿಜವಾದಾಗ, ಅದಕ್ಕಾಗಿ ಏಕೆ ಈ ಲಗ್ನಪತ್ರಿಕೆ? ಏಕೆ ಈ ಲಗ್ನಪತ್ರಿಕೆ ಹಂಚುವ ಈ ಆರ್ಭಟ? ವಿವಾಹವೆನ್ನುವುದು ಗೃಹ್ಯಕಾರ್ಯ; ಮನೆಗೆ ಸೀಮಿತ. ಇದು ಬಹಿರಂಗ ಬೊಬ್ಬೆಯಲ್ಲ. ಸಮೀಪದ ಬಂಧುಗಳು ಯಾರಾದರೂ ಇದ್ದರೆ ಎಂಟು-ಹತ್ತು ಮಂದಿಗಳು ಸಾಕು. ನಾವು ನೋಡಿ ಎಷ್ಟು ಮಂದಿ ಬಂದಿದ್ದೇವೆ? ಬಯಸಿದ್ದರೆ ರಾಜ ಕುಮಾರನ ಮದುವೆಯೆಂದು ಸಾವಿರವಾದರೂ ಬರಬಹುದಿತ್ತೋ? ಇಲ್ಲ, ನಮ್ಮ ತಾಯಿಯೇ ಬಂದಿಲ್ಲ. ಆದ್ದರಿಂದ ಲಗ್ನ ಪತ್ರಿಕೆ ಎನ್ನುವುದು ವಿವಾಹಕ್ಕೆ ಅನಗತ್ಯವಷ್ಟೇ ಅಲ್ಲ, ಅದನ್ನು ಹಂಚುವುದು ಅಗತ್ಯವಿರದ ಶ್ರಮ. ಊರಿಗೆ ಹೋದಮೇಲೆ ಪ್ರಜಾ ಪ್ರತಿನಿಧಿಗಳಾದ್ದರಿಂದ ಜನರಿಗೆ ಊಟ ನೀಡುವುದು ಇದ್ದೇ ಇದೆ. ವಿವಾಹದಲ್ಲಿ ಬೇಡವೇ ಬೇಡ. ಅದರಲ್ಲಿಯೂ ಕನ್ಯಾ ಪಿತೃವಿಗೆ ಆ ಕಷ್ಟ ಖಂಡಿತ ಕೊಡಕೂಡದು. "
"ಲಗ್ನ ಪತ್ರಿಕೆಗೇ ಇಷ್ಟು ವಿರೋಧ ಮಾಡಿದ ಶ್ರೀರಾಮರು ಇನ್ನು ವರೋಪಚಾರಕ್ಕೆ ಏನು ಹೇಳುವರೋ" ಎಂದು ಕೊಂಡೇ ಕೊಂಚ ಶಂಕೆಯಿಂದ ಶತಾನಂದರು, " ವರೋಪಚಾರವಾಗಿ ತಮ್ಮ ಮಾವಂದಿರು ತಮಗೆ ನೂರು ರಥಗಳನ್ನು, ನೂರು ಉಡುಗೆಗಳನ್ನು, ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿಯನ್ನು ಕೊಡಬೇಕೆಂದಿದ್ದಾರೆ.."
ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ, ದುರಾಶಾ ಅಳಿಯನಿಗೋ, ದುರ್ಬಲ ಅಳಿಯನಿಗೋ, ಪರಾವಲಂಬಿ ಅಳಿಯನಿಗೋ ತಮ್ಮ ಮಗಳನ್ನು ಕೊಡುತ್ತಿಲ್ಲ ತಾನೇ? ಏನು ಇಷ್ಟೆಲ್ಲಾ ಕೊಟ್ಟು ನನ್ನನ್ನು ಕೊಂಡುಕೊಳ್ಳಬೇಕೆಂದಿದ್ದಾರೋ? ನನ್ನ ಹೆಂಡತಿಯನ್ನು ಸಾಕಲು ಯೋಗ್ಯತೆಯಿಲ್ಲದ ಗಂಡೇನು ನಾನು? ನನ್ನ ಹಿನ್ನೆಲೆಯೂ ಚನ್ನಾಗಿದೆ, ಅಕಸ್ಮಾತ್ ನಮ್ಮ ಮನೆ ಸಿರಿಮನೆಯಲ್ಲದಿದ್ದರೂ ಈ ಯಾವುದನ್ನೂ ನಾನು ಮುಟ್ಟುತ್ತಿರಲಿಲ್ಲ. ಏಕೆ? ನಿಮ್ಮ ಮಹಾರಾಜರಿಗೆ ನಮ್ಮೂರಿಗೆ ಯಾರನ್ನಾದರೂ ಕಳಿಸಿ ಮನೆ ಕಟ್ಟಿಸಿಕೊಡೋಣವೆಂದು ಎನ್ನಿಸಿಲ್ಲವೇ? ಅಡುಗೆ ಮಾಡಲು ಪಾತ್ರೆಗಳನ್ನು ಕೊಡಬೇಕು ಎಂದೆನ್ನಿಸಿಲ್ಲವೇ? ಉಂಗುರ, ಭುಜ ಕಿರೀಟ, ಇನ್ನಾವುದಾದರೂ ವಡವೆಗಳನ್ನು, ಮಲಗಲು ಮಂಚ, ಅದರ ಮೇಲೆ ಹಾಸುಗೆ, ಅದರೆ ಮೇಲೆ ಹೊದಿಯಲು ಹೊದಿಕೆ, ಓಡಾಡಲು ಚಪ್ಪಳಿ, ಇವುಗಳನ್ನು ಕೊಡುತ್ತಾರೋ? "ರಾಮರ ಮಾತು ಕಠಿಣವೆನಿಸಿತು. ಶತಾನಂದರು ಮಾತನಾಡದಾದರು. ಹೇಗೆ ವಿರೋಧಿಸುವುದೆಂದೇ ಗೊತ್ತಾಗದೇ ತುಂಬ ಒದ್ದಾಡಿದರು; ಕೊನೆಗೆ ಮಾತು ಬದಲಿಸಿದರು. "ಹೋಗಲಿ ಬಿಡಿ, ಬೇಸರ ಮಾಡಿಕೊಳ್ಳಬೇಡಿ. ಈಗ ವಿವಾಹ ಕರ್ಮಗಳ ಬಗ್ಗೆ ಒಂದು ನಿಶ್ಚಯಕ್ಕೆ ಬರೋಣ." (ಮುಂದುವರೆಯುವುದು...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com