ನಿಮ್ಮ ಮನೆಯ ನಿಜವಾದ ಮೌಲ್ಯವೆಷ್ಟು? ನಿಮಗೆ ಗೊತ್ತೇ?

ಇಂದಿನ ಹಣಕ್ಲಾಸು ಅಂಕಣ ಬರಹದ ಉದ್ದೇಶ ನಾವು ವಾಸಿಸುತ್ತಿರುವ ನಮ್ಮ ನೆಚ್ಚಿನ ಮನೆಯ ಮೌಲ್ಯ ಎಷ್ಟು ಎಂದು ತಿಳಿಯುವುದು. ನಾವು ತೆತ್ತ ಹಣ ಸರಿಯೇ ಇಲ್ಲವೇ ಎನ್ನುವುದನ್ನ ತಿಳಿಸಿಕೊಡುವುದು. ಇನ್ನೂ ಮನೆ...
ನಿಮ್ಮ ಮನೆಯ ನಿಜವಾದ ಮೌಲ್ಯವೆಷ್ಟು? ನಿಮಗೆ ಗೊತ್ತೇ?
ನಿಮ್ಮ ಮನೆಯ ನಿಜವಾದ ಮೌಲ್ಯವೆಷ್ಟು? ನಿಮಗೆ ಗೊತ್ತೇ?
ಜಯನಗರದ ಸೆಂಟ್ರಲ್ ಮಾಲ್ ಬೆಂಗಳೂರಿನಲ್ಲಿ ವಿಶ್ವ ಪ್ರಸಿದ್ದಿ ಪಡೆದಿದೆ. ದೇಶ ಯಾವುದೇ ಇರಲಿ ಅಲ್ಲಿನ ರಿಯಲ್ ಎಸ್ಟೇಟ್ ಬೆಲೆ ತಿಳಿದುಕೊಳ್ಳುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಇಂತಹ ಪ್ರಸಿದ್ಧ ಮಾಲ್ ನ ಸುತ್ತ ಮುತ್ತ ಒಂದಷ್ಟು ಅಪಾರ್ಟ್‌ಮೆಂಟ್‌ ಗಳು ಬರುತ್ತಿವೆ. ರಸ್ತೆಯಲ್ಲಿ ಕಂಡ ಮೊಬೈಲ್ ಸಂಖ್ಯೆಯ ಒತ್ತಿ ಅವುಗಳ ಬೆಲೆ ಕೇಳಿದೆ. ಕಾರಿನ ಹಿಂಭಾಗದಲ್ಲಿ ಆಸೀನಾಗಿದ್ದೆ ಆಕಸ್ಮಾತ್ ರಸ್ತೆಯಲ್ಲಿ ನೆಡೆಯುತ್ತ ಇದ್ದಿದ್ದರೆ ತಲೆ ಸುತ್ತಿ ಬಿಳುತ್ತಿದ್ದೆ ಖಂಡಿತ. ನಿಮ್ಮ ಊಹೆ ಸರಿಯಾಗಿದೆ. ಅಲ್ಲೇನಿದ್ದರೂ ಮೂರು ಕೋಟಿ ನಂತರದ ಬೆಲೆ ಅದೂ ಅಪಾರ್ಟ್‌ಮೆಂಟ್‌ ಗೆ! ಜಯನಗರದ ವಿವಿಧೆಡೆ ಇಂತಹುದೆ ಇನ್ನು ಕೆಲವಾರು ಕಡೆ ಫೋನ್ ಮಾಡಿ ವಿಚಾರಿಸಿದೆ. ಅವರೆಲ್ಲರದೂ ಕೋಟಿಯಲ್ಲೇ ರಾಗ !! ಇಲ್ಲಿನ ಬಹುತೇಕ ಅಪಾರ್ಟ್‌ಮೆಂಟ್‌ ಗಳ ಬೆಲೆ ಶುರುವಾಗುವುದೇ ಎರಡು ಕೋಟಿಯ ಮೀರಿ. ಅರೆಕ್ಷಣ ಇಲ್ಲಿ ಈ ಬೆಲೆ ಕೊಟ್ಟು ಕೊಳ್ಳುವರು ಇದ್ದಾರೆಯೇ? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು. ಆಶ್ಚರ್ಯ ತರಿಸುವ ವಿಷಯವೆಂದರೆ ನಾನು ವಿಚಾರಿಸಿದ ಏಜೆಂಟರು ಮರಳಿ ನನಗೆ ಕರೆ ಮಾಡಲಿಲ್ಲ! ಮೊದಲ ಕರೆಯಲ್ಲಿ ಅರೆ ಮನಸ್ಸಿನಿಂದ ಬೆಲೆ ಹೇಳಿದ ಅವರು' ಸಾರ್ ಕೇವಲ ಇನ್ನೆರೆಡು ಫ್ಲಾಟ್ ಖಾಲಿ ಇದೆ ಬೇಕಿದ್ದರೆ ಅರ್ಜೆಂಟಾಗಿ ಆಫೀಸಿಗೆ ಬನ್ನಿ' ಎಂದು ಮಾತು ಮುಗಿಸುತ್ತಿದ್ದರು. ಇಂತಹ ಮನೆಗಳ ನಿಜವಾದ ಮೌಲ್ಯ ಎಷ್ಟಿರಬಹದು? ಜಗತ್ತಿನ ವಿವಿಧ ದೇಶಗಳಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಇದಕ್ಕಿಂತ ಹೆಚ್ಚಿನ ಗುಣಮಟ್ಟದ ಮೂಲಭೂತ ಸೌಕರ್ಯ ಹೊಂದಿದ ಜಾಗದಲ್ಲಿ ಮನೆಗಳು ಸಿಗುವಾಗ ಇಲ್ಲೇಕೆ ಹೀಗೆ? 
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಎಂತಹ ಮಳೆ ಬಂದಿದೆ, ಅದರಿಂದ ಆದ ಪ್ರಾಣಹಾನಿ, ಆಸ್ತಿ ನಷ್ಟ ಎನ್ನುವುದರ ಲೆಕ್ಕಾಚಾರ ಟಿವಿ ಮತ್ತು ನ್ಯೂಸ್ ಪೇಪರ್ ಗಳಿಂದ ನಿಮಗೆಲ್ಲಾ ತಿಳಿದೇ ಇರುತ್ತದೆ. ಅದನ್ನ ಇಲ್ಲಿ ಹೊಸದಾಗಿ ಚರ್ಚಿಸುವ ಉದ್ದೇಶ ಖಂಡಿತ ಇಲ್ಲ. ಇಂದಿನ ಹಣಕ್ಲಾಸು ಅಂಕಣ ಬರಹದ ಉದ್ದೇಶ ನಾವು ವಾಸಿಸುತ್ತಿರುವ ನಮ್ಮ ನೆಚ್ಚಿನ ಮನೆಯ ಮೌಲ್ಯ ಎಷ್ಟು ಎಂದು ತಿಳಿಯುವುದು. ನಾವು ತೆತ್ತ ಹಣ ಸರಿಯೇ ಇಲ್ಲವೇ ಎನ್ನುವುದನ್ನ ತಿಳಿಸಿಕೊಡುವುದು. ಇನ್ನೂ ಮನೆ ಕೊಳ್ಳಲು ಸಾಲ ಮಾಡದವರಿಗೆ ಎಚ್ಚರ ಎನ್ನುವ ಒಂದು ಸಣ್ಣ ಕಿವಿ ಮಾತು ಹೇಳುವುದು. 
ನಿಮ್ಮ ಮನೆಯ ನಿಜವಾದ ಬೆಲೆ ತಿಳಿಯಲು ಈಗ ಇಲ್ಲಿ ವಿವರಿಸುವ ಉದಾಹರಣೆಯಂತೆ ಲೆಕ್ಕಾಚಾರ ಮಾಡಿ ಅದು ನಿಮ್ಮ ಮನೆಯ ನಿಜ ಮೌಲ್ಯವನ್ನ ನಿಮಗೆ ನೀಡುತ್ತದೆ. 
ಜಯನಗರದ  ಮೂರು ಕೊಠಡಿಯ ಅಪಾರ್ಟ್‌ಮೆಂಟ್‌ ಬೆಲೆ ನಿಮ್ಮ ಹೆಸರಿಗೆ ಬಂದು ವಾಸಿಸಲು ಯೋಗ್ಯವಾಗುವಂತೆ ಪೀಠೋಪಕರಣ ಎಲ್ಲ ಹೊಂದಿಸುವ ವೇಳೆಗೆ ಎರಡೂವರೆ ಕೋಟಿ ರೂಪಾಯಿ ಅಂದುಕೊಳ್ಳಿ. ಇದೆ ಮನೆಯನ್ನ ನೀವು ಬಾಡಿಗೆಗೆ ಪಡೆಯಲು ಕೇಳಿ ನೋಡಿ, ಇಲ್ಲಿ ಇಂತಹ ಮನೆಯನ್ನ ಬಾಡಿಗೆ ಪಡೆಯಲು 45 ರಿಂದ 50 ಸಾವಿರ ರೂಪಾಯಿ ಮಾಸಿಕ. ಅಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ. ಹೀಗೆ ಆರು ಲಕ್ಷ ವಾರ್ಷಿಕ ಆದಾಯ ಪಡೆಯಲು ಇಂದಿನ ಬ್ಯಾಂಕಿನ ಬಡ್ಡಿಯ ಪ್ರಕಾರ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದನ್ನ ಲೆಕ್ಕ ಹಾಕಿ. ಬರುವ ಮೊತ್ತಕ್ಕೆ ಹತ್ತು ಅಥವಾ ಇಪ್ಪತ್ತು ಪ್ರತಿಶತ ಹೆಚ್ಚಿಗೆ ಸೇರಿಸಿ, ಹೀಗೆ ಬರುವ ಮೊತ್ತವೇ ನಿಮ್ಮ ಮನೆಯ ನಿಜವಾದ ಮೌಲ್ಯ! ಉದಾಹರಣೆ ಸಂಖ್ಯೆಯಲ್ಲಿ ನೋಡೋಣ. 
ವಾರ್ಷಿಕ ಬಾಡಿಗೆ: 6 ಲಕ್ಷ.  ಬ್ಯಾಂಕ್ ಠೇವಣಿ 6.25 ಪ್ರತಿಶತ ವಾರ್ಷಿಕ. ಅಂದರೆ 6 ಲಕ್ಷ ದುಡಿಯಲು ಎಷ್ಟು ಹಣವನ್ನ ಬ್ಯಾಂಕಿನಲ್ಲಿ ಇಡಬೇಕು? 
6 ಲಕ್ಷವನ್ನ ನೂರದಿಂದ ಗುಣಿಸಿ 6.25 ರಿಂದ ಭಾಗಿಸಿ  (6೦೦,೦೦೦ × 1೦೦/6.25 = 96೦೦೦೦೦) ಬರುವ ಮೊತ್ತ 96 ಲಕ್ಷ ಹೀಗೆ ಬಂದ 96 ಲಕ್ಷಕ್ಕೆ 2೦ ಪ್ರತಿಶತ ಮಾರುಕಟ್ಟೆಯ ಬೇಡಿಕೆ ಮೌಲ್ಯ ಸೇರಿಸಿ (96೦೦೦೦೦*2೦/1೦೦= 19,2೦,೦೦೦) ಅಂದರೆ ಹತ್ತೊಂಬತ್ತು ಲಕ್ಷ ಇಪ್ಪತ್ತು ಸಾವಿರ ರೂಪಾಯಿ. ಒಟ್ಟು ಒಂದು ಕೋಟಿ ಹದಿನೈದು ಲಕ್ಷ ಇಪ್ಪತ್ತು ಸಾವಿರ (96 ಲಕ್ಷ ಪ್ಲಸ್ 19.2೦ ಲಕ್ಷ = ಒಂದು ಕೋಟಿ ಹದಿನೈದು ಲಕ್ಷ ಇಪತ್ತುಸಾವಿರ) ಇದು ನಿಮ್ಮ ಮನೆಯ ನಿಜವಾದ ಮೌಲ್ಯ!. ಎರಡೂವರೆ ಕೋಟಿಯ ನಿಮ್ಮ ಮನೆಯ ನಿಜ ಮೌಲ್ಯ ಒಂದು ಕೋಟಿ ಹದಿನೈದು ಲಕ್ಷ ಮಾತ್ರ!! 
ಇದು ಕೂಡ ಒಂದು ರೀತಿಯಲ್ಲಿ ಪಕ್ಕಾ ಲೆಕ್ಕವಲ್ಲ, ಏಕೆಂದರೆ ವಾರ್ಷಿಕವಾಗಿ ನೀವು ಆ ಮನೆಯ ಮೇಲೆ ಕಟ್ಟುವ ಪ್ರಾಪರ್ಟಿ ಟ್ಯಾಕ್ಸ್ ಮತ್ತು ಉಳಿದ ಖರ್ಚುಗಳ ಲೆಕ್ಕ ಹಾಕಿದರೆ ನಿಮ್ಮ ಮನೆಯ ಮೌಲ್ಯ ಇನ್ನಷ್ಟು ಕುಸಿತ ಕಾಣುತ್ತದೆ. ಅಪಾರ್ಟ್‌ಮೆಂಟ್‌ ಮೇಲಿನ ಮೌಲ್ಯವಂತೂ ಇನ್ನೂ ಕಡಿಮೆ. ಐದು ಅಥವಾ ಹತ್ತು ವರ್ಷದಲ್ಲಿ ಒಂದಲ್ಲ ಒಂದು ಖರ್ಚು ಬರುತ್ತಲೇ ಇರುತ್ತದೆ, ಜೊತೆಗೆ ಮಾಸಿಕ ನಿಗದಿತ ಮೂರುಸಾವಿರ ಅಥವಾ ಅದಕ್ಕೂ ಹೆಚ್ಚಿನ ಮೈಂಟೆನನ್ಸ್ ಖರ್ಚು ಇವೆಲ್ಲ ಲೆಕ್ಕ ಹಾಕಿದರೆ ಜಯನಗರದ ಎರಡೂವರೆ ಕೋಟಿ ಅಪಾರ್ಟ್‌ಮೆಂಟ್‌ ನ ನಿಜವಾದ ಮೌಲ್ಯ ಒಂದು ಕೋಟಿ ಮೀರಬಾರದು. 
ಈಗ ನೀವೆಲ್ಲ ನನ್ನ ಒಂದು ಪ್ರಶ್ನೆ ಖಂಡಿತ ಕೇಳುತ್ತೀರಿ, "ನಮ್ಮ ಮನೆಯ ಈಗಿನ ಮಾರುಕಟ್ಟೆಯ ಮೌಲ್ಯ ಸುಳ್ಳು, ಅದರ ನಿಜವಾದ ಬೆಲೆ ಅದರ ಕೇವಲ ಅರ್ಧದಷ್ಟು ಎಂದಿರಲ್ಲ ಹಾಗಾದರೆ ಉಳಿದರ್ಧ ನಾವೇಕೆ ಹೆಚ್ಚಿಗೆ ಕೊಟ್ಟೆವು"? ಮಾರುಕಟ್ಟೆಯಲ್ಲಿ ಈ ರೀತಿಯ ಹೆಚ್ಚಿನ ಬೆಲೆಯೇಕೆ ಸೃಷ್ಟಿಯಾಯಿತು? 
ಗಮನಿಸಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಲು ಪ್ರಮುಖವಾಗಿ ಕಾರಣಗಳು ಇವು:- 
  • ಎರಡು ಸಾವಿರ ಇಸವಿಯಲ್ಲಿ ಬೆಂಗಳೂರಿನ ಸೈಟ್ ಬೆಲೆ ಹೆಚ್ಚು ಕಡಿಮೆ ಹತ್ತರಿಂದ ಹದಿನೈದು ಲಕ್ಷ (3೦*4೦ ಅಳತೆಯ ಜಾಗಕ್ಕೆ, ಆವರೇಜ್) ಇಂದು ಅದು ಕೋಟಿ ಮೀರಿ ಹೋಗಿದೆ. ಸೈಟ್ ಮೇಲಿನ ಹೂಡಿಕೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎನ್ನುವ ಹೂಡಿಕೆದಾರರ ಆಸೆ ಇಂದಿನ ಬೆಲೆಗೆ ಪ್ರಮುಖ ಕಾರಣ. ಮೊದಲ ಹೂಡಿಕೆದಾರರು ಇದರಿಂದ ಫಲ ಅನುಭವಿಸುತ್ತಾರೆ ಮಿಕ್ಕವರ ಹಣ ಸೈಟ್ ನಲ್ಲಿ ಬ್ಲಾಕ್ ಆಗುತ್ತದೆ. ಒಮ್ಮೆ ಕೈಯಿಂದ ಹಣ ಹೋದ ಮೇಲೆ ಅದನ್ನ ಕಡಿಮೆಗೆ ಮಾರಲು ಹೇಗೆತಾನೆ ಆದೀತು? 
  • ಭಾರತೀಯರಲ್ಲಿ ಮನೆ ಅಥವಾ ಸೈಟು ಹೊಂದುವುದು ಒಂದು ರೀತಿಯ ಮಾನಸಿಕ ಬಲಿಷ್ಟತೆ ತಂದು ಕೊಡುತ್ತದೆ. ಹೀಗಾಗಿ ಸ್ವಂತ ಮನೆ ಹೊಂದಬೇಕು ಎನ್ನುವ ಜನರ ಮಾನಸಿಕ ಸ್ಥಿತಿ ಬೆಲೆಯೇರಿಕೆಗೆ ಇನ್ನೊಂದು ಕಾರಣ. 
  •  ಆಸೆಬುರುಕ ದಲ್ಲಾಳಿಗಳು ನಿಜವಾದ ಗ್ರಾಹಕ ಮತ್ತು ಮಾರುವವನ ಮಧ್ಯೆ ಒಂದು ದೊಡ್ಡ ಕಂದಕವನ್ನೇ ಸೃಷ್ಟಿಸಿದ್ದಾರೆ. 
  • ಎಲ್ಲಕ್ಕೂ ಪ್ರಮುಖವಾಗಿ ಇವುಗಳ ಬೆಲೆಯನ್ನ ನಿಯಂತ್ರಿಸುವ ಒಂದು ಸಂಸ್ಥೆ ಇಲ್ಲದೆ ಇರುವುದು. ಮಾರುವನ ಮನಸ್ಸಿನಲ್ಲಿ ಬಂದ ಬೆಲೆಯನ್ನ ಹೇಳುತ್ತಾನೆ. ಇಂತ ಪ್ರದೇಶದ ಬೆಲೆ ಇಷ್ಟು ಮೀರಿ ಹೋಗಬಾರದು ಎನ್ನುವ ಬೆಲೆ ನಿಗದಿಪಡಿಸುವ ಅಧಿಕಾರ ಹೊಂದಿರುವ ಸಂಸ್ಥೆ ಬೇಕೇ ಬೇಕು. ಸರಕಾರ ಇದಕ್ಕಿಂತ ಕಡಿಮೆ ಬೆಲೆ ತೋರಿಸುವ ಹಾಗಿಲ್ಲ ಎಂದು ತನಗೆ ಬರಬೇಕಾದ ಆದಾಯವನ್ನ ಗಟ್ಟಿ ಮಾಡಿಕೊಂಡಿದೆ ಅಷ್ಟೇ, ಗ್ರಾಹಕನ ಒಳಿತಿಗಾಗಿ ಇದಕ್ಕಿಂತ ಮೀರಿ ಹಣವನ್ನ ಕೊಡುವಂತಿಲ್ಲ ಎನ್ನುವ ಬೆಲೆ ನಿಗದಿ ಪಟ್ಟಿ ಸರಕಾರ ನೀಡುವ ಅವಶ್ಯಕತೆ ಹೆಚ್ಚಾಗಿದೆ. 
ಸಮಾಜ, ಸರಕಾರ ಇವೆಲ್ಲ ನಮ್ಮಿಂದಲೇ ಸೃಷ್ಟಿಯಾದವು! ಅವುಗಳನ್ನ ಹಳಿಯುತ್ತಾ ಕೂರುವ ಬದಲು ನಮ್ಮಲ್ಲಿ ನಾವು ಒಂದಷ್ಟು ಬದಲಾವಣೆ ಮಾಡಿಕೊಂಡರೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದೇ ಇಲ್ಲ. ಎಲ್ಲಕ್ಕೂ ಮುಖ್ಯವಾಗಿ ಹಣಕಾಸು ಸಾಕ್ಷರತೆ ಇಂದು ಪ್ರಮುಖವಾಗಿ ಆಗಬೇಕಿರುವ ಕೆಲಸ. ಹೆಚ್ಚಿನ ಬೆಲೆ ತೆತ್ತು ಮತ್ತು ಅದಕ್ಕೆ ಬಡ್ಡಿ ಕಟ್ಟುತ್ತಾ ಇಂತಿಷ್ಟು ವರ್ಷ ಅಂತ ಅದಕ್ಕೆ ಬಿಗಿದುಕೊಳ್ಳುವ ಮನಸ್ಥಿತಿ ಬದಲಾಗಬೇಕು. ಇಂದು ಹಿಂದಿನಂತಿಲ್ಲ ವೇಗವಾಗಿ ಬದಲಾಗುವ ಜೀವನದಲ್ಲಿ ಒಂದುಕಡೆ ಮನೆ ಕೊಂಡು ವಾಸಿಸುವ ಪರಿಸ್ಥಿತಿಯಿಲ್ಲ, ಹೀಗಿದ್ದೂ ಜನ ಮಾತ್ರ ಇನ್ನೂ ಎರಡು ದಶಕದ ಹಿಂದಿನ ಮನಸ್ಥಿತಿಯಲ್ಲಿ ಅವರ ಪೋಷಕರು ಹೇಳಿಕೊಟ್ಟ ಹಣಕಾಸಿನ ಪಾಠವನ್ನೇ ನಿಜವೆಂದು ನಂಬಿ ಕುಳಿತಿರುವುದು ಮಾತ್ರ ವಿಪರ್ಯಾಸ. ಫ್ಯಾಷನ್ ಬದಲಾದಂತೆ ತಮ್ಮ ವೇಷಭೂಷಣ ಬದಲಾಯಿಸುವ ಜನಗಳಿಗೆ ಘಳಿಗೆಗೂ ಬದಲಾಗುವ ವಿತ್ತ ಜಗತ್ತಿನ ರೀತಿ-ನೀತಿಗಳಿಗೆ ಮಾತ್ರ ಕಣ್ಣಿದ್ದೂ ಕುರುಡು ಕಿವಿಯಿದ್ದೂ ಕಿವುಡು ಅನ್ನುವಂತೆ ಇರುವುದು ಇಂದಿನ ಸಮಸ್ಯೆಗಳಿಗೆ ಪ್ರಮುಖ ಕಾರಣ. ನೆನಪಿರಲಿ ಯೂರೋಪಿನಲ್ಲಿ ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ ಅನಿಯಂತ್ರಿತ ರಿಯಲ್ ಎಸ್ಟೇಟ್ ಬೆಲೆ ಏರಿಕೆ. ಇದೆ ತಪ್ಪು ಭಾರತದಲ್ಲೂ ಆಗುತ್ತಿದೆ. ಯೂರೋಪಿನಲ್ಲಿ ಆದ ನೋವು ನಷ್ಟ ಭಾರತಕ್ಕೆ ಆಗದಿರಲಿ ಎನ್ನುವುದಷ್ಟೆ ಆಶಯ. ಇಂತ ಆಶಯ ಈಡೇರಬೇಕೆಂದರೆ ನಿಮ್ಮ ಸಹಕಾರ ಬಹಳ ಮುಖ್ಯ. ಸಹಕರಿಸುವಿರಲ್ಲ? 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com