ಹೆಚ್ಚುತ್ತಿರುವ ತೈಲ ಬೆಲೆ; ಭೌಗೋಳಿಕ ರಾಜಕೀಯ ಘರ್ಷಣೆಗಳಿಗೆ ಒದಗಿಸಲಿದೆ ನೆಲೆ!

ಟ್ರಂಪ್ ಸರಕಾರ ಕಚ್ಛಾ ತೈಲದ ಬೆಲೆಯನ್ನ ತನ್ನಿಚ್ಛೆಗೆ ಕುಣಿಸಲು ಯೋಜನೆ ಹಾಕಿಕೊಂಡಿದೆ ಎನ್ನುವ ಊಹಾಪೋಹ ಮುಂದುವರಿಯುತ್ತಿರುವುದು ಜಗತ್ತಿನ ಬೆನ್ನುಹುರಿಯಲ್ಲಿ ಸಣ್ಣನೆಯ ಕಂಪನ ಶುರುವಾಗಲು...
ಹೆಚ್ಚುತ್ತಿರುವ ತೈಲ ಬೆಲೆ; ಭೌಗೋಳಿಕ ರಾಜಕೀಯ ಘರ್ಷಣೆಗಳಿಗೆ ಒದಗಿಸಲಿದೆ ನೆಲೆ!
ಹೆಚ್ಚುತ್ತಿರುವ ತೈಲ ಬೆಲೆ; ಭೌಗೋಳಿಕ ರಾಜಕೀಯ ಘರ್ಷಣೆಗಳಿಗೆ ಒದಗಿಸಲಿದೆ ನೆಲೆ!
ಟ್ರಂಪ್ ಸರಕಾರ ಕಚ್ಛಾ ತೈಲದ ಬೆಲೆಯನ್ನ ತನ್ನಿಚ್ಛೆಗೆ ಕುಣಿಸಲು ಯೋಜನೆ ಹಾಕಿಕೊಂಡಿದೆ ಎನ್ನುವ ಊಹಾಪೋಹ ಮುಂದುವರಿಯುತ್ತಿರುವುದು ಜಗತ್ತಿನ ಬೆನ್ನುಹುರಿಯಲ್ಲಿ ಸಣ್ಣನೆಯ ಕಂಪನ ಶುರುವಾಗಲು ಕಾರಣವಾಗಿದೆ. ಈ ಊಹಾಪೋಹವನ್ನ ನಿಜ ಎನಿಸುವಂತೆ ಮಾಡುವ ನಿಟ್ಟಿನಲ್ಲಿ ಆಗುತ್ತಿರುವ ಬೆಳವಣಿಗೆಯ ಮೊದಲ ಹೆಜ್ಜೆ ಸಿರಿಯಾ ಮೇಲೆ ಅಮೇರಿಕದ  ದಾಳಿ.
ಪೆಟ್ರೋಲ್ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರು ಮಟ್ಟದಲ್ಲಿ ಇದ್ದು ಅದರ ಬಿಸಿ ಆಗಲೇ ಭಾರತಕ್ಕೆ ತಟ್ಟುತ್ತಿದೆ.  ಅಮೇರಿಕಾದಲ್ಲಿ ಬಡ್ಡಿ ದರವನ್ನ 0.25 ಪ್ರತಿಶತ ಮಾರ್ಚ್ ತಿಂಗಳಲ್ಲಿ ಏರಿಸಲಾಗಿದೆ. 2018 ರ ಕೊನೆಯವರೆಗೆ ಇದು ಇನ್ನೊಂದು 0.25 ಪ್ರತಿಶತ ಹೆಚ್ಚಾಗಿ ಫೆಡರಲ್ ಬಡ್ಡಿ ದರ 2% ಆಗಲಿದೆ. ಬಡ್ಡಿ ದರ ಹೆಚ್ಚಾದರೆ ಉತ್ಪನ್ನಗಳ ಬೆಲೆ ತಾನಾಗೆ ಹೆಚ್ಚುತ್ತೆ. ಅದು ನೇರವಾಗಿ ಗ್ರಾಹಕನ ಖರ್ಚು ಮಾಡುವ ಸಾಮರ್ಥ್ಯಕ್ಕೆ ಕೊಡುವ ಪೆಟ್ಟು. ನೆನಪಿರಲಿ ಅಮೇರಿಕಾ ಜಗತ್ತಿನ 25 ಭಾಗ ಕಚ್ಛಾ ತೈಲದ ಬಳಕೆದಾರ, ಹೆಚ್ಚಾದ ಬೆಲೆಗಳು ಹೊಡೆತ ನೀಡುವುದು ಮೋಜಿನ ಖರ್ಚಿಗೆ, ಸುಖಾಸುಮ್ಮನೆ ವಾರಾಂತ್ಯದಲ್ಲಿ ಲಾಂಗ್ ರೈಡ್ , ಜಾಲಿ ರೈಡ್ ಹೋಗುವ ಪರಿಪಾಠಕ್ಕೆ, ಇದು ನೇರವಾಗಿ ಕಚ್ಛಾ ತೈಲದ ಬೆಲೆ  ಇಳಿಯಲು ಕಾರಣವಾಗಬಹುದು. ಇದು ಮೊದಲನೇ ಕಾರಣ.
ಎರಡನೇ ಮುಖ್ಯ ಕಾರಣ ಅಮೇರಿಕಾದಲ್ಲಿ ಹೆಚ್ಚಾದ ಬಡ್ಡಿ ದರ, ಭಾರತದಲ್ಲಿ ಕಡಿಮೆಯಾದ ಬಡ್ಡಿ ದರ ಹಾಗು ಡಾಲರ್ ಎದುರು ಕುಸಿಯುತ್ತಿರುವ ರುಪಾಯಿ.  ಹೂಡಿಕೆಗೆ ಉದಯೋನ್ಮುಖ ದೇಶಗಳನ್ನು ನೆಚ್ಚಿಕೊಂಡಿದ್ದ ಜಾಗತಿಕ ಹೊಡಿಕೆದಾರರಿಗೆ ಉದಯೋನ್ಮುಖ ದೇಶಗಳು ಹಾಗೂ ಕಚ್ಛಾ ತೈಲದ ಮೇಲಿನ ಹೂಡಿಕೆಯ ಹೊರತಾಗಿ ಡೆಟ್ ಬಾಂಡ್ ಗಳು ಹೂಡಿಕೆಗೆ ಹೆಚ್ಚು ವಿಶ್ವಾಸಾರ್ಹ ದಾರಿ ತೆರೆದು ಕೊಟ್ಟಿವೆ. ಹಾಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚು ಹೂಡಿಕೆದಾರರು ಅಮೇರಿಕಾದ ಡೆಟ್ ಬಾಂಡ್ ಗಳಲ್ಲಿ ಹಣ ತೊಡಗಿಸುತ್ತಾರೆ. ಗಮನಿಸಿ ನೋಡಿ ತೈಲ ಬೆಲೆ ಕುಸಿದರೂ ಅಥವಾ ಹೆಚ್ಚಿದರೂ ಅಮೇರಿಕಾ ಮಾತ್ರ ಲಾಭಗಳಿಸುತ್ತಲೇ ಇರಬೇಕು ಹಾಗೆ ವ್ಯವಸ್ಥೆಯನ್ನ ಕಟ್ಟಲಾಗಿದೆ.
ಡಿಸೆಂಬರ್ 16 ,2008 ರ ನಂತರ ಅಮೇರಿಕ ದೇಶ ಏಕೆ ತನ್ನ ಫೆಡರಲ್ ರೇಟ್ ಬದಲಾಯಿಸಲಿಲ್ಲ?  ಇಡಿ ಅಮೇರಿಕಾ ಅರ್ಥಿಕ ಮುಗಟ್ಟಿನಿಂದ ನಲುಗಿದ್ದು ಅಲ್ಲಿನ ಹಲವು ಬ್ಯಾಂಕ್ ಗಳು ಮಕಾಡೆ ಮಲಗಿದ್ದು ತಿಳಿದ ವಿಷಯ. ಅಂದು ರೇಟ್ ಹೆಚ್ಚಿಸಿದ್ದರೆ
ಮತ್ತಷ್ಟು ಹಣದುಬ್ಬರ ಹೆಚ್ಚಾಗಿ ಮಾರುಕಟ್ಟೆ ಹೆಚ್ಚು ಕುಸಿಯುವ ಸಾಧ್ಯತೆ ಇತ್ತು. ಹಾಗಾಗಿ ಅಮೇರಿಕಾ ಪ್ರತಿ ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಿದೆ.  ಸರಿ ಮತ್ತೇಕೆ ಈಗ ರೇಟ್ ಹೆಚ್ಚಿಸುವ ಸಾಹಸ? ರೇಟ್ ಹೆಚ್ಚಿಸುವುದರಿಂದ ಉಳಿತಾಯ ಮಾಡುವರಿಗೆ, ಬಂಡವಾಳಗಾರರಿಗೆ ಅನುಕೂಲವಾಗುತ್ತೆ. ಉಳಿದಂತೆ ಹಣದುಬ್ಬರ ಹೆಚ್ಚುತ್ತೆ. ಅಮೇರಿಕಾದಂತಹ ಮುಂದುವರಿದ ದೇಶಕ್ಕೆ ರೇಟ್ ಹೆಚ್ಚುವಿಕೆ ಹೆಗ್ಗಳಿಕೆಯಲ್ಲ ನೆನಪಿರಲಿ.
ಹಿಂದೆ ಯುದ್ಧ ಅಂದರೆ ಮದ್ದು ಗುಂಡು ಹಾರಿಸಿ ಮಾಡುವ ಯುದ್ದವಾಗಿತ್ತು ಇಂದು ಯುದ್ಧ ಅಂದರೆ  ಅದಕ್ಕೆ ಹಲವು ವ್ಯಾಖ್ಯಾನ ನೀಡಬಹುದು ಅದರಲ್ಲಿ ಒಂದು "ಕರೆನ್ಸಿ ವಾರ್" ಚೀನಾ ದೇಶ ದಶಕಗಳ ನಂತರ ತನ್ನ ಹಣವನ್ನು ಡಾಲರ್ ಎದುರು ಅಪಮೌಲ್ಯಗೊಳಿಸಿ ಕರೆನ್ಸಿ ವಾರ್ ಶುರು ಮಾಡಿ ಇಂದಿಗೆ ವರ್ಷ ಕಳೆದಿದೆ. ಇವತ್ತಿಗೆ ಇದು  ಹಳೆಯ ವಿಷಯ, ಗಮನಿಸಿ ಒಂದು ಡಾಲರ್ ಗೆ ಹಿಂದಿಗಿಂತ ಹೆಚ್ಚು ಚೀನಿ ಹಣ ವಿನಿಮಯದಲ್ಲಿ ಸಿಗುವ ಹಾಗೆ ಆಯಿತು.
ಹೂಡಿಕೆದಾರನಿಗೆ ಲಾಭ ಬೇಕು  ಅಷ್ಟೇ. ಅದು ಚೀನಾ, ಇಂಡಿಯಾ, ಬ್ರೆಜಿಲ್ ಯಾವುದಾದರೂ ಸರಿ. ಹೀಗೆ ಹಾರಿ ಹೋದ ಹೂಡಿಕೆದಾರರನ್ನು ಮತ್ತೆ ತನ್ನತ್ತ ಸೆಳೆಯಲು ಅಮೇರಿಕಾಗೆ ತನ್ನ ಫೆಡರಲ್ ಇಂಟರೆಸ್ಟ್ ರೇಟ್ (ಫೆಡರಲ್ ರಿಸರ್ವ್ )  ಹೆಚ್ಚಿಸದೇ ಬೇರೆ ದಾರಿ ಇರಲಿಲ್ಲ. ಚೀನಾದ ನೆಡೆಯನ್ನ ಗಮನಿಸುತ್ತಲೇ ಇರಬೇಕು. ಚೂರು ಹೆಚ್ಚು ಕಮ್ಮಿ ಆದರೂ ಅಮೇರಿಕಾ ತಲೆ ಮೇಲೆ ಕೈ ಹೊತ್ತು ಕೂರುವುದರಲ್ಲಿ ಸಂಶಯವಿಲ್ಲ.
ಅಮೇರಿಕಾ ತನ್ನ ನೆಡೆಯಲ್ಲಿ ಗೆದ್ದರೆ ಹೂಡಿಕೆದಾರ ಮುಂಬರುವ ದಿನಗಳಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿರುವ ಅಮೇರಿಕಾದ ಡೆಟ್ ಬಾಂಡ್ ಖರೀದಿಗೆ ಮುಗಿಬಿಳಲಿದ್ದಾನೆ. ಏನಿದು ಡೆಟ್? ಏನಿದು ಡೆಟ್ ಬಾಂಡ್? ಎನ್ನುವುದ ತಿಳಿದರೆ ಇದರ ಮೇಲೆ ಇನ್ನಷ್ಟು ಹಿಡಿತ ನಿಮ್ಮದಾಗಬಹುದು.
ಡೆಟ್ ಅಂದರೆ "ಸಾಲ"  ಡೆಟ್ ಬಾಂಡ್ ಎಂದರೆ " ಸಾಲ ಪತ್ರ"
ಹಣ ವಿನಿಮಯ  ಮಾಧ್ಯಮವಾಗಿ ಚಾಲ್ತಿಗೆ ಬರುವುದಕ್ಕೆ ಮುಂಚೆಯೇ ಡೆಟ್, ಸಾಲ ಚಲಾವಣೆಯಲಿತ್ತು. ಉದಾಹರಣೆ ನೋಡಿ  "ಸೇರು ರಾಗಿ ಕೊಟ್ಟಿರಕ್ಕಾ, ಮುಂದಿನವಾರ ಕೊಡ್ತೀನಿ"  ಎನ್ನುವ ಮಹಿಳೆಗೆ  ಅದು ಡೆಟ್ ಅನ್ನುವ ಅರಿವಿಲ್ಲ, ಇದೆಲ್ಲಾ ನಾಗರೀಕ ಸಮಾಜ ನಂತರದ ದಿನಗಳಲ್ಲಿ ಅನುಕೂಲಕ್ಕೆ ಹುಟ್ಟುಹಾಕಿದ ಪದಗಳಷ್ಟೇ. ಡೆಟ್ ಬಾಂಡ್ ಅಂದರೆ ಸಾಲ ಪತ್ರ, ಈ ಪತ್ರ ಹೊಂದಿರುವನು ನಮಗೆ ಇಷ್ಟು ಹಣ ಸಾಲ ಕೊಟ್ಟಿದ್ದಾನೆ ಇಷ್ಟು ವರ್ಷದ ನಂತರ ಇಷ್ಟು ಹಣ ವಾಪಸ್ಸು ಮಾಡಲಾಗುವುದು ಎಂದು ಬರೆದು ಕೊಟ್ಟ ಮುಚ್ಚಳಿಕೆ. ವಿಪರ್ಯಾಸ ನೋಡಿ ಅಮೇರಿಕಾ ಸರಕಾರ ನೀಡುವ ಸಾಲಪತ್ರ ಖರೀದಿಸಲು ಸಂತೆ ಶುರುವಾಗುತ್ತೆ.
ಇದಿಷ್ಟು ಅಮೇರಿಕಾಗೆ ಲಾಭ ಕೊಡುವ ವಿಷಯವಾಯ್ತು. ಅಂತರರಾಷ್ತ್ರೀಯ ಮಟ್ಟದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು  ನೋಡೋಣ.
ಭೌಗೋಳಿಕ ರಾಜಕೀಯ ಘರ್ಷಣೆಗಳು (geopolitical conflicts) ಹೆಚ್ಚಾಗಲಿವೆ. ಪೂರ್ವ ಏಷ್ಯಾ ದಲ್ಲಿ ಚೀನಾ, ಸೌತ್ ಕೊರಿಯಾ ಮತ್ತು ಜಪಾನ್ ನಡುವಿನ ತಿಕ್ಕಾಟ ಹೆಚ್ಚಾಗುತ್ತದೆ. ಇರಾನ್ ಪಶ್ಚಿಮ ದೇಶಗಳ ಬಗ್ಗೆ ಮುಖ್ಯವಾಗಿ ಅಮೇರಿಕಾ ಬಗ್ಗೆ ಇರುವ ತನ್ನ ಕಠಿಣ ಧೋರಣೆಯನ್ನ ಇನ್ನಷ್ಟು ಬಿಗಿಗೊಳಿಸಲಿದೆ. ರಷ್ಯಾ ನ್ಯಾಟೋ ವನ್ನು ಉಲ್ಲಂಘಿಸಿ ಉಕ್ರೈನ್ ಮೇಲಿನ ತನ್ನ ಹಿಡಿತವನ್ನ ಮತ್ತಷ್ಟು ಬಲಪಡಿಸಿ ಕೊಳ್ಳಲಿದೆ. ಕೊನೆಯದಾಗಿ ಜಗತ್ತಿನ ಹತ್ತು ದೊಡ್ಡ ಪೆಟ್ರೋಲಿಯಂ ಉತ್ಪಾದಕ ಎಂದು ದಶಕಗಳ ಕಾಲಬೀಗಿದ್ದ ಈಗಾಗಲೇ ದಯನೀಯ ಸ್ಥಿತಿಯಲ್ಲಿರುವ ವೆನಿಜುಲಾ  ಪೂರ್ಣ ಅವನತಿಯತ್ತ ನೆಡೆದಿದೆ. ಇಂದು ವೆನಿಜುಲಾದಲ್ಲಿ ಆಗುತ್ತಿರುವ ಆಂತರಿಕ ತಳಮಳಗಳ ತಿಳಿಸಿ ಹೇಳಲು ಇನ್ನೊಂದು ಪ್ರತ್ಯೇಕ ಲೇಖನ ಬರೆಯಬೇಕಾದೀತು. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ ದೇಶಗಳನ್ನ ಚೀನಾ, ಅಮೇರಿಕಾ ರಷ್ಯಾ ದೇಶಗಳು ತಮ್ಮ ಸಾಲದ ಸುಳಿಯಲ್ಲಿ ಬಂಧಿಸಿ ತಮ್ಮ ಅಧೀನದಲ್ಲಿ ಇಟ್ಟು ಕೊಳ್ಳಲಿವೆ. ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಧ್ರುವೀಕರಣವಾಗಿ ಪ್ರಪಂಚವನ್ನ ಚೀನಾ ಅಮೇರಿಕಾ ಜೊತೆಗೆ ರಷ್ಯಾ ಆಳಲಿದೆ. ಇವರುಗಳ ನಡುವಿನ ಮೇಲಾಟದ ಕಚ್ಛಾಟಕ್ಕೆ ಹಲವು ದೇಶಗಳು ನಲುಗಲಿವೆ.
ಇದೆಲ್ಲಾ ಸರಿ , ಭಾರತಕ್ಕೆ ಇದರಿಂದ ಏನಾಗುತ್ತೆ ?
ಡಾಲರ್ ಎದುರು ಅಪಮೌಲ್ಯ ಗೊಳ್ಳುತ್ತಿರುವ ರುಪಾಯಿ ಮೌಲ್ಯ ಕುಸಿತ ತಡೆಗೆ ರಿಸೆರ್ವೆ ಬ್ಯಾಂಕ್ ಮಧ್ಯ ಪ್ರವೇಶಿಸಬೇಕಾಗಬಹುದು, ಸರಿಸುಮಾರು 1 ಡಾಲರ್ ಗೆ 66 ರುಪಾಯಿ ವಹಿವಾಟು ನಡೆಸುತ್ತಿದೆ, ಇದು 70 ಗಡಿ ದಾಟುವ ಎಲ್ಲಾ ಸಾಧ್ಯತೆ ಇದೆ. ಇದಾದರೆ ಮೊದಲ ಸಾಲಿನಲ್ಲಿ ಹೇಳಿದಂತೆ ಕುಸಿದ ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಲಿದೆ. ನೆನಪಿಡಿ ತೈಲ ಬೆಲೆ ನಿರ್ಧಾರ ವಾಗುವುದು ಡಾಲರ್ ನಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದರೂ, ರುಪಾಯಿ ಅಪಮೌಲ್ಯದ ಕಾರಣ ಕುಸಿದ ತೈಲ ಬೆಲೆ ನಮಗೆ ದಕ್ಕದೆ ಹೋಗಬಹುದು. ಈ ಹಿಂದೆ ಹೇಳಿದಂತೆ ಅಮೇರಿಕಾ ಹುಟ್ಟು ಹಾಕಿರುವ ಆಟದಲ್ಲಿ ಅವರು ಸೊತರೂ ಗೆಲ್ಲುತ್ತಾರೆ!!
ಚೀನಾ ಮತ್ತು ಅಮೇರಿಕಾ ನಡುವಿನ ಕಾದಾಟದಲ್ಲಿ ಭಾರತಕ್ಕೆ ಲಾಭವಾಗುವ ಸಾಧ್ಯತೆಯಿದೆ. ಹೆಚ್ಚಾದ ತೈಲಬೆಲೆ ಏರುತ್ತಿರುವ ಬೆಲೆಯಿಂದ ಕಳೆದುಕೊಂಡ ಹಣವನ್ನ ಮರಳಿಗಳಿಸಬಹದು ಆದರೂ ಲಾಭ ನಿಜ ಅರ್ಥದ ಲಾಭವಲ್ಲ! ಲಾಭ  ಎನ್ನುವುದು ಮರೀಚಿಕೆ ಮಾತ್ರ ಕೇಂದ್ರ ಸರಕಾರದಲ್ಲಿ ನರೇಂದ್ರ ಮೋದಿಯವರ ಸರಕಾರ ಶುರುವಾದ ಆದಿಯಿಂದ ಹೆಚ್ಚು ಕಡಿಮೆ ಇಲ್ಲಿಯವರೆಗೆ ತೈಲ ಬೆಲೆಯ ಮಟ್ಟಿಗೆ ಹೆಚ್ಚು ಕಡಿಮೆ ಭಾರತಕ್ಕೆ ವರವಾಗೇ ಪರಿಣಮಿಸಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅಮೇರಿಕಾ ದ ಚೀನಾದ ಜೊತೆಗಿನ ಗುದ್ದಾಟ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ತಿಳಿಯುವವರೆಗೆ ಭಾರತಕ್ಕೆ ಆತಂಕ ತಪ್ಪಿದ್ದಲ್ಲ.
ಏರುಗತಿಯಲ್ಲಿ ಸಾಗುವ ತೈಲ ಬೆಲೆ ಜೊತೆಜೊತೆಗೆ ಉಳಿದ ಪದಾರ್ಥಗಳ ಮತ್ತು ಸೇವೆಯ ಬೆಲೆಯನ್ನ ಏರುಗತಿಯತ್ತ ಸೆಳೆಯುತ್ತದೆ. ಈಗಷ್ಟೆ ಭಾರತ ಬಡ್ಡಿ ದರವನ್ನ ಕಡಿಮೆಗೊಳಿಸಿದೆ. ಆದರೇನು ಹಣದುಬ್ಬರ ಹೆಚ್ಚಿದರೆ ಸರಕಾರ ಆರ್ ಬಿ ಐ ಸಹಯೋಗದೊಂದಿಗೆ ಬಡ್ಡಿ ದರವನ್ನ ಏರಿಸುತ್ತದೆ. ಮುಂದಿನ ಹತ್ತು ವರ್ಷದ ರೂಪಾಯಿ ಲೆಕ್ಕಾಚಾರ ಹಾಕಿ ಮನೆ ಕಾರು ಕೊಂಡ ಮಧ್ಯಮ ವರ್ಗದ ಜನರಿಂದ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ಸಾಲ ಪಡೆದ ಪ್ರತಿಯೊಬ್ಬರಿಗೂ ಇದರ ಬಿಸಿ ತಟ್ಟಲಿದೆ. ಗಮನಿಸಿ ನೋಡಿ ನಿಧಾನವಾಗಿಯಾದರೂ ಸರಿಯೇ ಭಾರತದಲ್ಲಿ ಬ್ಯಾಂಕಿನ ಬಡ್ಡಿ ದರ ಸ್ವಲ್ಪವೇ ಮತ್ತೆ ಏರತೊಡಗಿದೆ. ಇದು ಲಕ್ಷಾಂತರ ಜನರ ಬಜೆಟ್ ಮತ್ತು ಪ್ಲಾನಿಂಗ್ ಅನ್ನು ಉಲ್ಟಾ ಮಾಡಲಿದೆ.
ಹೀಗೆ ಪಟ್ಟಿ ಮಾಡುತ್ತಾ ಹೋಗಬಹದು ಅದರಿಂದ ಸಮಸ್ಯೆ ಇನ್ನಷ್ಟು ವಿವರವಾಗಿ ತಿಳಿಸಿದಂತೆ ಆಯಿತೇ ಹೊರತು ಅದಕ್ಕೆ ಪರಿಹಾರ ಸಿಗಲಿಲ್ಲ ಅಲ್ಲವೇ? ಇವಕ್ಕೆಲ್ಲ ಪರಿಹಾರ ಒಂದೇ ಸಾಲ ಮಾಡುವಾಗ ನಮ್ಮ ಮಿತಿಗಿಂತ ಕನಿಷ್ಠ ಇಪ್ಪತ್ತು ಪ್ರತಿಶತ ಕಡಿಮೆ ಮಾಡಬೇಕು ಆಗ ಜಾಗತಿಕ ಬದಲಾವಣೆಗಳು ನಮ್ಮನ್ನ ತಟ್ಟುವುದಿಲ್ಲ.
ಜಾಗತಿಕ ಸವಾಲುಗಳ ನಡುವೆ ಹಲವಾರು ರಾಜ್ಯಗಳ ಚುನಾವಣೆ ಮತ್ತು ಹತ್ತಿರದಲ್ಲೇ ಇರುವ ಲೋಕಸಭಾ ಚುನಾವಣೆ ಕೇಂದ್ರ ಸರಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲದ ವಿಷಯ. ಸರಕಾರ ತನ್ನ ಹಣಕಾಸು ನಿರ್ವಹಣೆ ಹೇಗೆ ಮಾಡುತ್ತದೆ ಎನ್ನುವುದು ಕಾದು ನೋಡಬೇಕಾಗಿರುವ ಇನ್ನೊಂದು ವಿಷಯ. ಕೇಂದ್ರ ಸರಕಾರ ಮಟ್ಟಿಗೆ ಕೊನೆಯ ವರ್ಷ ಸವಾಲಿನ ವರ್ಷವಾಗಲಿದೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com