ನಮ್ಮ ಭಾವನೆ 'ಅವರ' ಬಂಡವಾಳ!

ಭಾರತ ರಷ್ಯಾ ಜೊತೆಗಿಂತ ಅಮೇರಿಕಾ ಜೊತೆ ಹೆಜ್ಜೆ ಹಾಕಬೇಕು ಅಂತ ಅಮೇರಿಕಾ ಫರ್ಮಾನು ಹೊರಡಿಸುತ್ತೆ. ಅಮೇರಿಕಾ ಹಾಕಿದ ತಾಳಕ್ಕೆ ಕುಣಿಯುವ ವ್ಯಕ್ತಿತ್ವ ಮೋದಿಯವರದ್ದಲ್ಲ!
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ರತಿ ದಿನ ತೈಲ ಬೆಲೆ ಏರುತ್ತಲೇ ಇದೆ. ಇದಕ್ಕೆ ಕಾರಣವೇನಿರಬಹದು?? ಭಾರತ ರಷ್ಯಾ ಜೊತೆಗಿಂತ ಅಮೇರಿಕಾ ಜೊತೆ ಹೆಜ್ಜೆ ಹಾಕಬೇಕು ಅಂತ ಅಮೇರಿಕಾ ಫರ್ಮಾನು ಹೊರಡಿಸುತ್ತೆ. ಅಮೇರಿಕಾ ಹಾಕಿದ ತಾಳಕ್ಕೆ ಕುಣಿಯುವ ವ್ಯಕ್ತಿತ್ವ ಮೋದಿಯವರದ್ದಲ್ಲ! ಅಮೇರಿಕಾ ಜೊತೆಗೆ ವ್ಯಾಪಾರ ಇರಬಹುದು, ಬೇರೆ ರೀತಿಯ ಸಂಬಂಧ ಇರಬಹದು ಮೋದಿ ಸುಲಭವಾಗಿ ನಮ್ಮ ತಾಳಕ್ಕೆ ಕುಣಿಯುವ ವ್ಯಕ್ತಿಯಲ್ಲ ಎನ್ನುವುದು ಅವರಿಗೆ ತಿಳಿದಿದೆ. ಅವರ ದೇಶ ಆರ್ಥಿಕವಾಗಿ ಕಂಗೆಟ್ಟಿದೆ ಅದನ್ನ ಉದ್ಧರಿಸಲು ಭಾರತ ಸೇರಿ ಅನೇಕ ದೇಶಗಳ ರೊಟ್ಟಿಯ ತುಂಡ ಕಸಿಯಬೇಕಿದೆ.. ಮೊದಲಾಗಿದ್ದರೆ ನಿಂಗೊಂದು ತುಂಡು ನೀಡುತ್ತೇವೆ ಎಂದಿದ್ದರೆ ತಲೆದೂಗುವ ಪ್ರಧಾನಿಗಳಿದ್ದರು... ಆದರೀಗ?? ಈಗ ಹೇಳಿ ಅವರಿಗೆ ಮೋದಿ 2019 ರಲ್ಲಿ ಗೆಲ್ಲುವುದು ಬೇಕಾ?
ಜಗತ್ತನ್ನ ತಮ್ಮಿಚ್ಚೆಗೆ ಕುಣಿಸುವ ಬೆರಳೆಣಿಕೆ ಮನೆತನಗಳಲ್ಲಿ ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ ಪ್ರಮುಖವಾದವು. ಇವರದು 'ಎಲೈಟ್ ಕ್ಲಬ್'! ಇಲ್ಲಿನ ಸದಸ್ಯರಾಗುವುದು ಸಾಧ್ಯವೇ ಇಲ್ಲ. ಜಗತ್ತಿನ ಬಹುಪಾಲು ವ್ಯಾಪಾರ -ವಹಿವಾಟು ಇವರ ಅಂಕೆಯಲ್ಲಿವೆ. ಜಗತ್ತಿನ ಬಹುಪಾಲು ದೇಶಗಳಲ್ಲಿ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಯಾರಾಗಬೇಕು ಎನ್ನುವುದನ್ನ ನಿರ್ಧರಿಸುವುದು ಇವರು. ಜಗತ್ತಿನಲ್ಲಿ ಯುದ್ಧ ಸೃಷ್ಟಿಸುವುದು ಇವರು, ಶಾಂತಿ ಮಂತ್ರ ಜಪಿಸುವುದು ಇವರು, ತೊಟ್ಟಿಲು ತೂಗುವುದು ಮಗುವನ್ನೂ ಹಿಂಡುವುದು ಎರಡೂ ಇವರ ಕೆಲಸ. ಯಾಂತ್ರಿಕ ಬದುಕ ಸೃಷ್ಟಿಸಿದವರು ಇವರು. ನಿಮಗೆ ಚಿಂತಿಸಲು ಆತ್ಮಾವಲೋಕನ ಮಾಡಿಕೊಳ್ಳಲು ಸಮಯ ನೀಡದವರು ಇವರು. ಹೆಚ್ಚು ಕಡಿಮೆ ಜಗತ್ತು ನಡೆಯುವುದು ಇವರ ಅಣತಿಯಂತೆ. ನೀವು ಬಿಗ್ ಬಾಸ್ ಅಥವಾ ಇನ್ನೊಂದು ರಿಯಾಲಿಟಿ ಶೋ ನೋಡಿ ಇದು ಸ್ಕ್ರಿಪ್ಟೆಡ್ ಎಂದು ಹಲವು ಬಾರಿ ಮನಸ್ಸಿನಲ್ಲಿ ಅಂದುಕೊಂಡಿರಬಹದು. ನಿಜ ಜೀವನ ಹಾಗಲ್ಲ ಎನ್ನುವ ನಿಲುವು ನಿಮ್ಮದಾಗಿದ್ದರೆ ದಯವಿಟ್ಟು ಅದನ್ನ ಬದಲಿಸಿಕೊಳ್ಳಿ. ಎಲ್ಲಿ?ಯಾವಾಗ? ಏನು ಆಗಬೇಕೆನ್ನುವುದನ್ನ 'ಅವರು' ಬಹಳ ಮುಂಚೆಯೇ ನಿರ್ಧರಿಸಿರುತ್ತಾರೆ. ನಮ್ಮ-ನಿಮ್ಮ ಕಣ್ಣಿಗೆ ವಿಶ್ವನಾಯಕರಂತೆ ಕಾಣುವ ಟ್ರಂಪ್ ಇರಬಹುದು ಥೆರೆಸಾ ಮೇ ಇರಬಹುದು ಅಥವಾ ಏಂಜೆಲಾ ಮರ್ಕೆಲ್ ಇರಬಹುದು ಇವರೆಲ್ಲಾ ನಿಮಿತ್ತ ಮಾತ್ರ. 'ಅವರ' ಅಣತಿ ಪಾಲಿಸಲು ಇರುವ ಗುಲಾಮರಷ್ಟೇ! ಇವರ ಅಣತಿಯಂತೆ ನಡೆಯುವರಿಗೆ ಮಾತ್ರ ಅಧಿಕಾರ. ಇಲ್ಲವೆಂದು ಇವರ ವಿರುದ್ಧ ಸಿಡಿದೆದ್ದ ನಾಯಕರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ದಕ್ಷಿಣ ಅಮೇರಿಕಾ ದೇಶಗಳ ಬಹಳಷ್ಟು ನಾಯಕರು ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದವರು ದಿನವೊಪ್ಪತ್ತಿನಲ್ಲಿ ಇಲ್ಲವಾಗಿ ಹೋಗಿಬಿಟ್ಟರೆಂದರೆ? 'ಅವರ' ಶಕ್ತಿ ಎಷ್ಟಿರಬಹುದೆನ್ನುವ ಅರಿವು ನಿಮ್ಮದಾಯಿತು ಎಂದು ಕೊಳ್ಳುತ್ತೇನೆ. ಇರಲಿ. 
ಭಾರತದಲ್ಲಿ 2019 ನೇ ಇಸವಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದು ಭಾರತಕ್ಕೆ ಅಷ್ಟೇಅಲ್ಲ ಇಡೀ ವಿಶ್ವಕ್ಕೆ ಕೂಡ ಅತ್ಯಂತ ಮಹತ್ತರ ಘಟನೆಯಾಗಲಿದೆ. ನೀವೆಲ್ಲಾ ಈಗಾಗಲೇ ಕೇಂಬ್ರಿಡ್ಜ್ ಅನಾಲಿಟಿಕ ಬಗ್ಗೆ ಕೇಳಿಯೇ ಇರುತ್ತೀರಿ. ಇದು ಕೇಂದ್ರದಲ್ಲಿ ಈಗಿರುವ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ತಪ್ಪಿಸುವುದಕ್ಕೆ ನೆಡೆದ ಹುನ್ನಾರ! ಅದರ ಜೊತೆಗೆ ಮತ್ತೆರೆಡು ಪ್ರಬಲ ಅಸ್ತ್ರಗಳಿವೆ ಅವೆಂದರೆ ವಿನಿಮಯ ದರ (ಫಾರಿನ್ ಎಕ್ಸ್ಚೇಂಜ್) ಮತ್ತು ತೈಲ ಬೆಲೆ. ಈ ಅಸ್ತ್ರಗಳ ಜೊತೆಗೆ ಡಾಟಾ ಇದ್ದು ಬಿಟ್ಟರೆ ಮುಗಿಯಿತು. ' ಅವರು' ಯಾರು ಸರಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಬಯಸುತ್ತಾರೆ ಅವರೇ ಮುಂದಿನ ಸರಕಾರ ನೆಡೆಸುತ್ತಾರೆ. ಈ ಮೂರು ಅಸ್ತ್ರಗಳ ಪ್ರಯೋಗ ಹೇಗೆ ಮಾಡುತ್ತಾರೆ ಎನ್ನುವುದರ ಪಕ್ಷಿನೋಟ ಒದಗಿಸಲು ಕೆಳಗಿನ ಸಾಲುಗಳಲ್ಲಿ ಪ್ರಯತ್ನ ಪಟ್ಟಿದ್ದೇನೆ. 
೧) ಡೇಟಾ ಸಂಗ್ರಹಣೆ: ಇದರ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅವಶ್ಯಕೆತೆ ಇಲ್ಲ. ನಮಗೆಲ್ಲಾ ತಿಳಿದಿರುವಂತೆ ಫೇಸ್ಬುಕ್ ಇರಬಹದು ಅಮೆಝೋನ್ ಇರಬಹದು ಅಥವಾ ಉಳಿದ ವೆಬ್ ಸೈಟ್ ಗಳು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬಗ್ಗೆ ಸಂಗ್ರಹಿಸಲು ಸಾಧ್ಯವಾಗುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಅದನ್ನ ರಾಜಕೀಯ ಪಕ್ಷಗಳಿಗೆ ಹಣ ಪಡೆದು ಮಾರುತ್ತಾರೆ. ನಮ್ಮ ಮನಸ್ಸಿನ ಭಾವನೆಯ ಮ್ಯಾಪಿಂಗ್ ನೆಡೆಯುತ್ತದೆ. ನಂತರದ್ದು ನಮ್ಮ ಭಾವನೆಗೆ ತಕ್ಕಂತೆ ರಾಜಕೀಯ ಪಕ್ಷಗಳ ನಡವಳಿಕೆ ಬದಲಾಯಿಸಿ ನಮ್ಮ ಮನಸ್ಸನ್ನ ಗೆಲ್ಲುವುದು ಅದನ್ನ ಅವರಿಗೆ ಬೇಕಾದ ವೋಟ್ ಆಗಿ ಪರಿವರ್ತಿಸುವುದು. ಈ ವಿಷಯ ಜನಸಾಮಾನ್ಯನಿಗೆ ತಲುಪಿದೆ. ಇದರಷ್ಟೇ ಪ್ರಮುಖವಾದ ಉಳಿದೆರೆಡು ಅಂಶಗಳು ಕಣ್ಣೆದುರಿಗೆ ಇದ್ದರೂ ಜನ ಸಾಮಾನ್ಯ ಅದನ್ನ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅದನ್ನ ಸಾಧ್ಯವಾದಷ್ಟು ಸರಳವಾಗಿ ವಿವರಿಸುವುದು ಈ ಲೇಖನದ ಉದ್ದೇಶ. 
೨) ವಿನಿಮಯ ದರ ಅಥವಾ ಫಾರಿನ್ ಎಕ್ಸ್ಚೇಂಜ್: ನಿಮಗೆಲ್ಲಾ ತಿಳಿದಿರುವಂತೆ ವಿನಿಮಯ ದರ ದೇಶದಿಂದ ದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಆಯಾ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಜೊತೆಗೆ ಅನೇಕ ಕಾರಣಗಳು ಆಯಾ ದೇಶದ ವಿನಿಮಯ ದರವನ್ನ ನಿರ್ಧರಿಸುತ್ತವೆ. ಗಮನಿಸಿ ಜಗತ್ತಿನ ಮುಕ್ಕಾಲು ಪಾಲು ವಿನಿಮಯ ದರವನ್ನ ಅಮೇರಿಕಾ ಡಾಲರ್ ನ್ನು ಮಾಪನವನ್ನಾಗಿ ತೆಗೆದುಕೊಂಡು ಅದರೊಂದಿಗೆ ತುಲನೆ ಮಾಡಲಾಗುತ್ತದೆ. ಇದು ಬಹಳ ದಶಕಗಳಿಂದ ನೆಡೆದು ಬಂದಿರುವ ಆಚರಣೆ. ಇತ್ತೀಚಿಗೆ (ಎರಡು ಸಾವಿರದ ಒಂದನೇ ಇಸವಿಯ ನಂತರ)  ಯುರೋ ಕರೆನ್ಸಿ ಯನ್ನ ಡಾಲರಿಗೆ ಪರ್ಯಾಯವಾಗಿ ಬಳಸಲು ಶುರು ಮಾಡಿದರೂ ಯುರೋ ವಲದಯ ಆಂತರಿಕ ಸಮಸ್ಯೆಗಳಿಂದ ಅದು ಡಾಲರಿಗೆ ಸಮವಾದ ವಿನಿಮಯ ಮಾಪನವಾಗಲೇ ಇಲ್ಲ. ಉಳಿದಂತೆ ಯೆನ್ ಮತ್ತು ಯಾನ್ ಗಳು ಅಷ್ಟೇ ಜಗತ್ತಿಗೆ ಜಗತ್ತೇ ಡಾಲರ್ ನಂಬಿದಂತೆ ತಮ್ಮ ಕರೆನ್ಸಿ ಯನ್ನ ನಂಬುವಂತೆ ಮಾಡಲು ಆಗಲಿಲ್ಲ. ಇಷ್ಟೆಲ್ಲಾ ಅಮೆರಿಕನ್ ಡಾಲರ್ ಇಂದಿಗೂ ವಿತ್ತ ಜಗತ್ತಿನ ರಾಜ ಎನ್ನುವುದನ್ನ ತಿಳಿಸುವುದಕ್ಕೆ ಹೇಳಬೇಕಾಯಿತು. ಈಗ ಗಮನಿಸಿ ನೋಡಿ. ಚುನಾವಣೆ ಸಮಯದಲ್ಲಿ ಭಾರತದ ರೂಪಾಯಿ ಇನ್ನಿಲ್ಲದಂತೆ ಡಾಲರಿನ ಮುಂದೆ ಕುಸಿಯುತ್ತದೆ. ಚುನಾವಣೆಗೆ ಇನ್ನೂ ವರ್ಷವಿದ್ದರೂ ಈ ಪ್ರಕ್ರಿಯೆ ಆಗಲೇ ಶುರುವಾಗಿದೆ. ಒಂದು ಡಾಲರಿಗೆ 64/65 ಇದ್ದ ರೂಪಾಯಿ ನಿಧಾನವಾಗಿ 2019 ರ ವೇಳೆಗೆ 70 ಕ್ಕೆ ತಲುಪುತ್ತದೆ. ಡಾಲರಿನ ಬೆಲೆ ಹೆಚ್ಚಿದಷ್ಟೂ ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚುತ್ತದೆ. ಡಾಲರ್ ಬೆಲೆ ಏರಿಕೆ ನೇರವಾಗಿ ತೈಲ ಬೆಲೆಯನ್ನ ಏರಿಸುತ್ತದೆ. ಉಳಿದದ್ದು ಚೈನ್ ರಿಯಾಕ್ಷನ್!! ಏರಿದ ಹಣದುಬ್ಬರ. ಏರಿದ ಬೆಲೆಗಳು ಆಡಳಿತಾರೂಢ ಸರಕಾರದ ವಿರುದ್ಧ ಮತಚಲಾಯಿಸಲು ನಮ್ಮನ್ನ ಪ್ರೇರೇಪಿಸುತ್ತದೆ. ಇದರ ಜೊತೆಗೆ ಇನ್ನೊಂದು ಮಹತ್ತರ ವಿಷಯವೆಂದರೆ ವಿದೇಶದಲ್ಲಿರುವ ಕಾಳಧನವನ್ನ ಮರಳಿ ಭಾರತಕ್ಕೆ ಚುನಾವಣೆ ವೆಚ್ಚಕ್ಕೆ ಎಂದು ಅನ್ಯ ಮಾರ್ಗಗಳ ಮೂಲಕ ಭಾರತಕ್ಕೆ ತಂದಾಗ ಅವರಿಗೆ ಹೆಚ್ಚಿನ ರೂಪಾಯಿ ಸಿಗುತ್ತದೆ. ಹೀಗಾಗಿ ಅವರ ಚುನಾವಣೆಯ ಖರ್ಚನ್ನ ಕೇವಲ ವಿನಿಮಯ ದರದಲ್ಲಿನ ಏರುಪೇರಿನಲ್ಲಿ ತೂಗಿಸಿ ಬಿಡಬಹದು! 
೩) ಹೆಚ್ಚುತ್ತಿರುವ ತೈಲ ಬೆಲೆ: ಬಹಳ ಹಿಂದಿನಿಂದ 'ಅವರು' ತಮ್ಮ ಬೇಳೆ ಬೇಯಿಸಿಕೊಳ್ಳಲು ಇದನ್ನ ಬಳಸುತ್ತಾ ಬಂದಿದ್ದಾರೆ. ತೈಲ ಬೆಲೆ ತನ್ನ ಅಣತಿಯಂತೆ ಇದ್ದರೆ ಸರಿ. ಇಲ್ಲದಿದ್ದರೆ ಡಾಲರ್ ಮೌಲ್ಯದಲ್ಲಿ ಏರುಪೇರು ಮಾಡಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಾರೆ. ಇವೆರಡೂ ತಮ್ಮಿಚ್ಛೆಯಂತೆ ನೆಡೆಯುತ್ತಿಲ್ಲ ಎನಿಸಿದರೆ ತೈಲ ರಾಷ್ಟ್ರಗಳ ಮೇಲೆ ಒಳಗಿನಿಂದ ದಾಳಿಯನ್ನ ಶುರು ಮಾಡಿಸುತ್ತಾರೆ. ನಮ್ಮ ಕಣ್ಣ ಮುಂದೆ ವೆನಿಜುಲಾ ಕುಸಿದ ನಿದರ್ಶನವಿದೆ. ಕೆಲವೊಮ್ಮೆ ನೇರ ಯುದ್ಧ ಕೂಡ ಸಾರುತ್ತಾರೆ. ಸಿರಿಯಾ, ಇರಾಕ್ ಮೇಲಿನ ದಾಳಿ, ಟ್ಯುನೀಸಿಯಾದಿಂದ ಅರಬ್ ರಾಷ್ಟ್ರಗಳಿಗೆ ಹರಡಿದ ಮುಸ್ಲಿಂ ಬ್ರದರ್ ಹುಡ್ ಕ್ರಾಂತಿಯ ಕಿಚ್ಚು ಇವೆಲ್ಲಾ ಅವರು ಬರೆದ ಕತೆಗಳು! ಪಾತ್ರಧಾರಿಗಳಿಗೆ ಇದು ನಾಟಕ ಎನ್ನುವ ಅರಿವೂ ಇಲ್ಲದೆ ನಿಜವಾಗಿ ನೈಜ್ಯ ಯುದ್ಧ ಮಾಡುತ್ತಾರೆ. ನೆನಪಿರಲಿ ನಮ್ಮ ಭಾವನೆಗಳೇ ಅವರ ಬಂಡವಾಳ. 
ಕೊನೆ ಮಾತು:  ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ ಇನ್ನೊಂದು ನಾಲ್ಕು ಮನೆತನೆಗಳು ಜಗತ್ತನ್ನ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟಿವೆ. ಇವತ್ತು ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಜಗತ್ತಿನ ಯಾವ ವ್ಯಕ್ತಿಯೂ ಆಹಾರ ಮತ್ತು ಬಟ್ಟೆಗಾಗಿ ಅಂದರೆ ಮೂಲಭೂತ ವಿಷಯಕ್ಕೆ ದುಡಿಯುವುದು ಬೇಕಿಲ್ಲ ಎನ್ನುವ ಮಟ್ಟಿಗೆ. ಆದರೇನು ಜನರನ್ನ ತಂತ್ರಜ್ಞಾನದ ಪೂರ್ಣ ಪ್ರಯೋಜನ ಪಡೆಯಲು ಬಿಟ್ಟರೆ ಅವರ ನಿಯಂತ್ರಣ ತಪ್ಪುವುದಿಲ್ಲವೇ ಇಷ್ಟೆಲ್ಲಾ ಹೊಡೆದಾಟ ಜಗತ್ತಿನ ಮೇಲಿರುವ ತಮ್ಮ ನಿಯಂತ್ರವನ್ನ ಕಾಯ್ದು ಕೊಳ್ಳುವುದು ಮತ್ತು ಇನ್ನಷ್ಟು ನಿಯಂತ್ರಣ ಸಾಧಿಸುವುದಕ್ಕೆ ಮಾತ್ರ!. ತಮ್ಮ ಈ ದಾರಿಯಲ್ಲಿ ಅಡ್ಡ ಬಂದವರನ್ನ ನಿವಾರಿಸುವ ಕಲೆ ಅವರಿಗೆ ತಿಳಿದಿದೆ. 2019 ರಲ್ಲಿ ಈಗಿರುವ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯ. ಅವರೆಷ್ಟೇ ತಿಪ್ಪರಲಾಗ ಹೊಡೆಯಲಿ ನಾವು ಮತದಾನ ಸರಿಯಾಗಿ ಮಾಡಿದರೆ ಗೆಲುವು ನಮ್ಮದೆ. ಉಳಿದಂತೆ ಹಣದುಬ್ಬರ ತಡೆಗೆ ಕೇಂದ್ರ ಸರಕಾರ ಆರ್ ಬಿ ಐ ಅನ್ನು ಅಸ್ತ್ರದಂತೆ ಬಳಸುವ ಸಾಧ್ಯತೆ ಇದೆ. ಅವರಿಗೆ ನಾವು ಒಡೆದು ಛಿದ್ರವಾಗುವುದು ಬೇಕು. ನಾವು ಛಿದ್ರವಾದಷ್ಟು ಅವರಿಗೆ ಲಾಭ. ಜಗತ್ತಿನ ಮೇಲಿನ ಅವರ ನಿಯಂತ್ರಣಕ್ಕೆ ಇನ್ನಷ್ಟು ಬಲ ಬರುತ್ತದೆ. 2019 ರಲ್ಲಿ ಈಗಿನ ಕೇಂದ್ರ ಸರಕಾರ ಸೋತರೆ ಅದು ಅವರ ಗೆಲುವು ಭಾರತದ ಸೋಲು. ಯಾರನ್ನ ಗೆಲ್ಲಿಸಬೇಕು ಅನ್ನುವುದು ಮಾತ್ರ ಈ ವಿಷಯಗಳ ಕಿಂಚಿತ್ತೂ ಅರಿವಿಲ್ಲದ ಜನಸಾಮಾನ್ಯನ ಕೈಲಿದೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com