ವಿತ್ತ ಜಗತ್ತಿನ ಚಂದುರಂಗದಾಟ, ಇಲ್ಲಿದೆ ಹಲವು ನೋಟ!

ಸೂರ್ಯ ಮುಳುಗದ ನಾಡು ನಮ್ಮದು ಎಂದು ಜಗತ್ತನ್ನೆಲ್ಲ ಆಳಿದ ಬ್ರಿಟಿಷರ ಕೆಟ್ಟ ಕಾಲ ಶುರುವಾಗಿದೆ. ಜಗತ್ತಿನ ಫೈನಾನ್ಸಿಯಲ್ ಕ್ಯಾಪಿಟಲ್ ಎಂದು ಹೆಸರುವಾಸಿಯಾಗಿದ್ದ ಲಂಡನ್ ಸದ್ದಿಲ್ಲದೇ ಆ ಹೆಸರನ್ನ ಕಳೆದುಕೊಳ್ಳುತ್ತಿದೆ.
ವಿತ್ತ ಜಗತ್ತಿನ ಚಂದುರಂಗದಾಟ, ಇಲ್ಲಿದೆ ಹಲವು ನೋಟ!
ವಿತ್ತ ಜಗತ್ತಿನ ಚಂದುರಂಗದಾಟ, ಇಲ್ಲಿದೆ ಹಲವು ನೋಟ!
ನಿನ್ನೆ ತಡ ರಾತ್ರಿ ಸ್ನೇಹಿತೆ ಬೇತಿ ವೆನಿಜುಲದ ರಾಜಧಾನಿ ಕಾರಕಸ್ ನಿಂದ ಕರೆ ಮಾಡಿದ್ದಳು . ಬೇತಿ ಬಾರ್ಸಿಲೋನಾ ದಲ್ಲಿ ಪರಿಚಯವಾದ ಸ್ನೇಹಿತೆ. ವೃತ್ತಿಯಿಂದ ವೈದ್ಯೆ. ಬಾರ್ಸಿಲೋನಾದಲ್ಲಿ ಇದ್ದಷ್ಟು ದಿನ ವಾಪಸ್ಸು ತನ್ನ ದೇಶಕ್ಕೆ ಹೋಗಿ ಅಲ್ಲಿನ ನೆಲದ ಏಳಿಗೆಗೆ ದುಡಿಯುತ್ತೇನೆ ಎನ್ನುವುದು ಆಕೆ ಪ್ರತಿ ಬಾರಿ ಸಿಕ್ಕಾಗೆಲ್ಲ ಹೇಳುತಿದ್ದ ಸಾಮಾನ್ಯ ಮಾತು. 
ಆಗೆಲ್ಲಾ, 'ಹುಷಾರು ನಿಮ್ಮ ದೇಶ ಅಮೇರಿಕಾದೊಂದಿಗೆ ಹುಚ್ಚಾಪಟ್ಟೆ ದ್ವೇಷ ಕಟ್ಟಿಕೊಂಡಿದೆ, ಜೊತೆಗೆ ಸ್ಪೈನಿನ ರಾಜ ಕಾರ್ಲೋಸ್ (ಅಂದಿನ ರಾಜ)ನೊಂದಿಗೆ ಕೂಡ ಮನಸ್ತಾಪ ಹೊಂದಿದೆ ಜಗತ್ತನ್ನ ತನ್ನಿಚ್ಚೆಗೆ ಕುಣಿಸುವ ಜನರ ದ್ವೇಷ ನಿಮ್ಮ ಹುಗೊ ಚಾವೇಸ್ ಕಟ್ಟಿಕೊಂಡಿದ್ದಾನೆ. ನಿಮ್ಮ ದೇಶದಲ್ಲಿ ಯಾವಾಗ ಬೇಕಾದರೂ ಅರಾಜಕತೆ ಶುರುವಾಗಬಹದು' ಎನ್ನುವ ಮಾತನ್ನ ನಾನು ಆಕೆಗೆ ಹೇಳುತ್ತಿದೆ. ಈ ಮಾತಿಗೆ ಈಗ ಹದಿನೈದು ವರ್ಷ. ಆಗ ವೆನಿಜುಲಾ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಆರ್ಥಿಕವಾಗಿ ಅತ್ಯಂತ ಬಲಿಷ್ಠ ದೇಶ ಎನ್ನುವ ಹೆಗ್ಗಳಿಕೆಯಿಂದ ಮೆರೆಯುತ್ತಿತ್ತು. ದಕ್ಷಿಣ ಅಮೇರಿಕಾ ದೇಶಗಳಲ್ಲಿ ವಿಷಯ ಯಾವುದೇ ಇರಲಿ, ವೆನಿಜುಲಾ ಮುಂಚುಣಿಯಲ್ಲಿದ್ದು ನಾಯಕ ರಾಷ್ಟ್ರ ಎನ್ನುವ ಪಟ್ಟ ಪಡೆದಿತ್ತು. ಹುಗೊ ಚಾವೇಸ್ನ ಪ್ರಸಿದ್ದಿ ಮತ್ತು ಕೀರ್ತಿ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನೂ ಮೀರಿಸುವಂತಿತ್ತು. ಇದು ಸಹಜವಾಗೇ ಬೇತಿಯಂತ ಜನರಲ್ಲಿ ತಮ್ಮ ದೇಶಕ್ಕೆ ವಾಪಸ್ಸು ಹೋಗಬೇಕು ಎನ್ನುವ ಆಸೆ ಮೂಡಿಸಿತ್ತು. ಅದರಂತೆ 2004 ರಲ್ಲಿ ಬೇತಿ ಕಾರಕಸ್ ಸೇರಿಕೊಂಡಳು. ಮದುವೆ, ಮುದ್ದಾದ ಎರಡು ಮಕ್ಕಳ ಜೊತೆಗೆ ತನ್ನ ವೈದ್ಯ ವೃತ್ತಿಯನ್ನ ನೆಡೆಸಿಕೊಂಡು ಹೋಗುತ್ತಿದ್ದ ಬೇತಿ ನಿನ್ನೆ ಅಚಾನಕ್ಕಾಗಿ ಕರೆ ಮಾಡಿ ಮಾತಿಗೆ ಸಿಕ್ಕಳು.  'ರಂಗ, ಜಗತ್ತಿನ ಒಂದು ಭಾಗ ಕ್ರಿಪ್ಟೋ ಕರೆನ್ಸಿ, ಡಿಜಿಟಲೈಸೇಷನ್ ಅಂತ ಓಡುತ್ತ ಇದ್ದರೆ ನಮ್ಮ ದೇಶ ಬಾರ್ಟರ್ ಸಿಸ್ಟಮ್ ಗೆ ಮರಳುತ್ತಿದೆ' ಎಂದು ಬಹಳ ಬಾವುಕಳಾಗಿ ನುಡಿದಳು. ಜೊತೆಗೆ ಕೊನೆಗೂ ನಿನ್ನ ಊಹೆ ನಿಜವಾಗಿ ಹೋಯಿತು ನನ್ನ ದೇಶದಲ್ಲಿ ಅರಾಜಕತೆ ತಾಂಡವಾಡುತ್ತಿದೆ ಎನ್ನುವುದನ್ನ ಕೂಡ ಸೇರಿಸಿದಳು. 
ವೆನಿಜುಲಾದಲ್ಲಿ ಹಣದುಬ್ಬರ 741 ಪ್ರತಿಶತ. ಅದು ಮುಂಬರುವ ವರ್ಷದಲ್ಲಿ 2೦೦೦ ಪ್ರತಿಶತ ಮುಟ್ಟುವ ಎಲ್ಲಾ ಲಕ್ಷಣಗಳು ಹೆಚ್ಚಾಗಿವೆ. ಜನ ಹಣವನ್ನ ಮೂಟೆಯಲ್ಲಿ ತುಂಬಿಕೊಂಡು ಚೀಲದಲ್ಲಿ ವಸ್ತುಗಳ ತರುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಜನತೆ ದಿನೇ ದಿನೇ ಅಲ್ಲಿನ ಸರಕಾರ ಮತ್ತು ಹಣದ ಮೇಲಿನ ನಂಬಿಕೆಯನ್ನ ಕಳೆದು ಕೊಳ್ಳುತ್ತಿದ್ದಾರೆ. ಹೀಗಾಗಿ ಹಣಕ್ಕೆ ಪರ್ಯಾಯ ಹುಡುಕಿಕೊಳ್ಳಲು ತಯಾರಾಗಿದ್ದಾರೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ನ ಇದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ನೋಡಿ ಬೇತಿಯ ಬಳಿ ಸಕ್ಕರೆಯಿದೆ. ಆದರೆ ಆಕೆಗೆ ನಾಲ್ಕು ಮೊಟ್ಟೆ ಬೇಕು. ಸರಿ ಅರ್ಧ ಕೆಜಿ ಸಕ್ಕರೆ ಕೊಡುತ್ತೇನೆ, ನನಗೆ ಯಾರಾದರೂ ನಾಲ್ಕು ಮೊಟ್ಟೆ ಕೊಡುತ್ತೀರಾ?' ಎನ್ನುವ ಫೇಸ್ಬುಕ್ ಹೇಳಿಕೆಗೆ ಉತ್ತರ ಬರುತ್ತೆ, ವ್ಯಾಪಾರ ಕುದುರುತ್ತೆ. ವೆನಿಜುಲಾ ಆರ್ಥಿಕವಾಗಿ ಶತಮಾನ ಹಿಂದೂಗಿದೆ ಜೊತೆಗೆ ಅಲ್ಲಿನ ಜನರು ಹಣ ಹೊರುವ ಬಾಧೆ ತಪ್ಪಿಸಿಕೊಳ್ಳಲು ವಸ್ತು ವಿನಿಮಯದಂತಹ ಅತ್ಯಂತ ಹಳೆಯ ಪದ್ದತಿಗೆ ಜೈ ಅನ್ನುತ್ತಿದ್ದಾರೆ. ಬೇತಿ ದೇಶಬಿಡುವ ತರಾತುರಿಯಲ್ಲಿದ್ದಾಳೆ. 
ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಇನ್ನೊಂದು 8 ತಿಂಗಳಲ್ಲಿ ಹೊರ ಹೋಗಬೇಕು. ಹೀಗೆ ಬ್ರಿಟನ್ ಹೊರ ಹೋಗುವ ಪ್ರಕ್ರಿಯೆಗೆ ಬ್ರೆಕ್ಸಿಟ್ ಎನ್ನುತ್ತಾರೆ. ಇದೆಲ್ಲ ಇಂದಿಗೆ ಹಳಸಲು ಸರಕು. ಹೊಸ ವಿಷಯವೇನೆಂದರೆ ಬ್ರಿಟನ್ 'ನೋ ಡೀಲ್ ಬ್ರೆಕ್ಸಿಟ್' ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗೇನಾದರೂ ಆದದ್ದೇ ಆದರೆ ಬ್ರಿಟನ್ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟು ಸಮಾಜದ ರಿಕವರಿಗೆ ದಶಕಗಳು ಬೇಕು ಎನ್ನುವಂತಾಗುತ್ತದೆ.  ಗಮನಿಸಿ ಬ್ರಿಟನ್ ಹೊರ ಹೋಗುತ್ತಿರುವ ದೇಶ ಅದೊಂದು ಒಂದು ಕಡೆಯಾದರೆ, ಉಳಿದ ಒಕ್ಕೊಟದಲ್ಲಿರುವ ದೇಶಗಳ ಸಂಖ್ಯೆ  27ಇನ್ನೊಂದು ಕಡೆ ನಿಂತಿವೆ. ಬ್ರಿಟನ್ 27 ದೇಶದ ಒಕ್ಕೊಟದೊಂದಿಗೆ ವ್ಯವಹಾರ, ಚೌಕಾಸಿಗೆ ಕುಳಿತಿದೆ. ಅದು ಹೇಗೆ ಗೆದ್ದೀತು? ಬ್ರಿಟನ್ ಕೇಳುವ ವಿಷಯಗಳಿಗೆ ಯೂರೋಪಿಯನ್ ಯೂನಿಯನ್ ಸೊಪ್ಪು ಹಾಕುವುದಿಲ್ಲ ಹೀಗಾಗಿ ಬ್ರಿಟನ್ ಬರಿ ಕೈಲಿ ಅಂದರೆ ಯಾವುದೇ ಲಾಭವಿಲ್ಲದೆ ಹೊರ ನೆಡೆಯ ಬೇಕಾಗುತ್ತದೆ. ಇದಕ್ಕೆ ನೋ ಡೀಲ್ ಬ್ರೆಕ್ಸಿಟ್ ಅನ್ನುವುದು. 
ನೆನಪಿಡಿ ಯುನೈಟೆಡ್ ಕಿಂಗ್ಡಮ್ ನ ಅರ್ಧಕ್ಕೂ ಹೆಚ್ಚು ಆಹಾರ ಪದಾರ್ಥಗಳು ಯೂರೋಪಿಯನ್ ಯೂನಿಯನ್ ನಿಂದ ಸರಬರಾಜಾಗುತ್ತದೆ. ಅಂದರೆ ತನಗೆ ಬೇಕಾದ ಆಹಾರ ಪದಾರ್ಥಗಳ ಪೂರ್ಣ ಸರಬರಾಜು ಮಾಡುವ ಶಕ್ತಿ ಈ ದೇಶಕ್ಕೆ ಇಲ್ಲ. ಇದು ಒಂದು ಅವಲಂಬಿತ ದೇಶ. ಬೇರಾವುದಾದರೂ ವಿಷಯಕ್ಕೆ ಅವಲಂಬಿತವಾಗಿದ್ದರೆ ಪರವಾಗಿಲ್ಲ ಎನ್ನಬಹದು ಆದರೆ ಇಲ್ಲಿ ಅತ್ಯಂತ ಮೂಲಭೂತವಾದ ಆಹಾರಕ್ಕೆ ಈ ದೇಶ ಅವಲಂಬಿತವಾಗಿದೆ. ಒಂದೆರಡು ದಿನ ಕಸ್ಟಮ್ಸ್ ಅಥವಾ ಇನ್ನ್ಯಾವುದೇ ಕಾರಣ ಹೇಳಿ ಪದಾರ್ಥ ದೇಶ ತಲುಪುವುದು ತಡವಾದರೆ ಆಹಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೋಗಲಿ ಸ್ಟಾಕ್ ತರಿಸಿ ಶೇಖರಿಸಿ ಇಡೋಣ ಅಂದರೆ ಇಲ್ಲಿ ಅದಕ್ಕೆ ಬೇಕಾದ ಶೇಖರಣಾ ವ್ಯವಸ್ಥೆಯೇ ಇಲ್ಲ!  
ಸೂರ್ಯ ಮುಳುಗದ ನಾಡು ನಮ್ಮದು ಎಂದು ಜಗತ್ತನ್ನೆಲ್ಲ ಆಳಿದ ಬ್ರಿಟಿಷರ ಕೆಟ್ಟ ಕಾಲ ಶುರುವಾಗಿದೆ. ಜಗತ್ತಿನ ಫೈನಾನ್ಸಿಯಲ್ ಕ್ಯಾಪಿಟಲ್ ಎಂದು ಹೆಸರುವಾಸಿಯಾಗಿದ್ದ ಲಂಡನ್ ಸದ್ದಿಲ್ಲದೇ ಆ ಹೆಸರನ್ನ ಕಳೆದುಕೊಳ್ಳುತ್ತಿದೆ. ನೋ ಡೀಲ್ ಬ್ರೆಕ್ಸಿಟ್ ನ ಸುಳಿವು ಸಿಗುತ್ತಲೆ ಅನೇಕ ಹಣಕಾಸು ಸಂಸ್ಥೆಗಳು ತಮ್ಮ ಜಾಗವನ್ನ ಬದಲಿಸುತ್ತಿವೆ. ದೈತ್ಯ ಡಚ್ ಬ್ಯಾಂಕ್ ತನ್ನ ಮುಕ್ಕಾಲು ಪಾಲು ವಹಿವಾಟನ್ನ ಆಗಲೇ ಜರ್ಮನಿಯ ಫ್ರಾಂಕ್ಫರ್ಟ್ ನಗರಕ್ಕೆ ಆಗಲೇ ವರ್ಗಾಯಿಸಿದೆ. 
ಬ್ರೆಕ್ಸಿಟ್ ಗೆ ಹಸಿರು ನಿಶಾನೆ ಸಿಕ್ಕಾಗ ಬ್ರಿಟನ್ ನ ಹಣ ಪೌಂಡ್ 20 ಪ್ರತಿಶತ ಕುಸಿತ ಕಂಡಿತು. ಇದೀಗ ನೋ ಡೀಲ್ ಬ್ರೆಕ್ಸಿಟ್ ಆದರೆ ಇನ್ನೊಂದು ಹದಿನೈದು ಪ್ರತಿಶತ ಕುಸಿತ ಕಾಣಲಿದೆ. ಆಗಲೆ ಸಮಾಜ ವಲಸೆ, ಧರ್ಮಗಳ ಹೆಸರಲ್ಲಿ ಸಾಕಷ್ಟು ಬೆಂಡಾಗಿದೆ. ಇದರ ಜೊತೆಗೆ ಆರ್ಥಿಕವಾಗಿ ನೋ ಡೀಲ್ ಬ್ರೆಕ್ಸಿಟ್ ಯುನೈಟೆಡ್ ಕಿಂಗ್ಡಮ್ ಅನ್ನು ಯುನೈಟೆಡ್ ಆಗಿ ಇಡಬಲ್ಲದೇ ಎನ್ನುವುದು ಪ್ರಶ್ನೆ. 
ರಷ್ಯಾ ತನ್ನ ಬಳಿಯಿದ್ದ ಅಮೇರಿಕಾದ ಟ್ರೆಷರಿ ಬಾಂಡ್ ನಲ್ಲಿ 84 ಪ್ರತಿಶತ ಮಾರಾಟ ಮಾಡಿಬಿಟ್ಟಿದೆ. ಇದೇನು? ಏಕೆ? ಎನ್ನುವುದಕ್ಕೆ ಮೊದಲು ಅಮೇರಿಕಾದ ಟ್ರಷರಿ ಬಾಂಡ್ ಎಂದರೇನು ಎನ್ನುವುದನ್ನ ತಿಳಿದುಕೊಳ್ಳೋಣ. ಇದೊಂದು ಅಮೇರಿಕಾ ಸರಕಾರ ಹೊರಡಿಸುವ ಡೆಟ್ ಬಾಂಡ್ ಅಂದರೆ ಸಾಲಪತ್ರ. ಸಾಮಾನ್ಯವಾಗಿ ಇದರ ಮೆಚುರಿಟಿ ಹತ್ತು ವರ್ಷಕ್ಕೆ ಮೇಲ್ಪಟ್ಟಿರುತ್ತದೆ. ಇದರಲ್ಲಿ ಬಡ್ಡಿಯ ಸಂದಾಯ ಅರ್ಧ ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಇದು ಅಮೇರಿಕಾ ಸರಕಾರ ಮಾರುವ ಸಾಲಪತ್ರ ಆದುದರಿಂದ ಇದು ಸಮಾಜದಲ್ಲಿ ಹೆಚ್ಚು ನಂಬಿಕೆಗೆ ಪಾತ್ರವಾಗಿದೆ. ಹೀಗಾಗಿ ಇದು ರಿಸ್ಕ್ ಫ್ರೀ ಅಥವಾ ಅತ್ಯಂತ ಕಡಿಮೆ ಅಪಾಯ ಇರುವ ಹೂಡಿಕೆ ಎನ್ನುವ ಹೆಸರು ಪಡೆದಿದೆ. ಈಗ ಗಮನಿಸಿ ನೋಡಿ ರಷ್ಯಾ ಇಂತಹ ನೂರು ಡಾಲರ್ ಮೌಲ್ಯದ ಬಾಂಡ್ ಹೊಂದಿದ್ದರೆ ಅದರಲ್ಲಿ 84 ಡಾಲರ್ ಮೌಲ್ಯವನ್ನ ಮಾರಾಟಮಾಡಿದೆ. ರಷ್ಯಾ ಅಮೇರಿಕಾದ ಅತಿ ಹೆಚ್ಚು ಡೆಟ್ ಬಾಂಡ್ ನಲ್ಲಿ ಹೂಡಿಕೆ ಮಾಡಿರುವ ದೇಶವೇನಲ್ಲ ಹೀಗಾಗಿ ಅವರು ತಮ್ಮ 84 ಪ್ರತಿಶತ ಬಾಂಡ್ ಹೂಡಿಕೆ ಮಾರಾಟ ಮಾಡಿದರೂ ನಮಗೇನೂ ಅದರಿಂದ ನಷ್ಟವಿಲ್ಲ ಎನ್ನುವುದು ಅಮೇರಿಕಾದ ಉವಾಚ. ಆದರೆ ಇಲ್ಲಿ ನೆನಪಿಡಬೇಕಾದ ಒಂದು ಅಂಶವಿದೆ. ಅದೇನೆಂದರೆ ಸಾಮಾನ್ಯವಾಗಿ ಅಮೇರಿಕಾದ ಟ್ರಷರಿ ಬಾಂಡ್ ಅನ್ನು ಸಮಯಕ್ಕೆ ಮುಂಚೆ ಹೀಗೆ ಬಿಕರಿ ಮಾಡುವುದಿಲ್ಲ. ಇವು ಸಮಾಜದಲ್ಲಿ ಹೆಚ್ಚು ವಿಶ್ವಾಸಾರ್ಹತೆ ಹೊಂದಿರುವ ಬಾಂಡ್ಗಳು. ಇವನ್ನ ಸಮಯಕ್ಕೆ ಮುಂಚೆ ಮಾರುತ್ತಾರೆ ಎಂದರೆ..? ಎನ್ನುವ ಒಂದು ಅಪನಂಬಿಕೆ ಹೂಡಿಕೆದಾರರಲ್ಲಿ ಶುರುವಾಗುತ್ತದೆ. ರಷ್ಯಾ ಅಮೆರಿಕಾದ ಡೆಟ್ ಬಾಂಡ್ ನಲ್ಲಿ ಹೂಡಿಕೆ ಮಾಡಿರುವ ದೇಶಗಲ್ಲಿ ಹದಿನಾಲ್ಕನೇ ಸ್ಥಾನ ಹೊಂದಿದೆ. ಅಚಾನಕ್ಕಾಗಿ ರಷ್ಯಾದ ಈ ನೆಡೆ ದೈತ್ಯ ಅಮೇರಿಕಾ ಎನ್ನುವ ಹಡಗಿಗೆ ಒಂದು ಸಣ್ಣ ರಂಧ್ರವನ್ನಂತೂ ಕೊರೆದಿದೆ. ಹೀಗೆ ರಷ್ಯಾ ಮಾರಿದ ಟ್ರಷರಿ ಬಾಂಡ್ ಖರೀಸಿದವರು ಯಾರು? ಎನ್ನುವುದು ಅಮೇರಿಕಾಕ್ಕೆ ಆಗಿರುವ ಪೆಟ್ಟಿನ ಸಾಂದ್ರತೆಯನ್ನ ತಿಳಿಸುತ್ತದೆ. ಆಗಸ್ಟ್ 15, 2018 ಖರೀದಿದಾರನ ಹೆಸರು ಬಿಡುಗಡೆಯಾಗಲಿದೆ. ಊಹೆಯಂತೆ ಚೀನಾ ಖರೀದಿದಾರನಾಗಿದ್ದರೆ ಅಮೇರಿಕಾಕ್ಕೆ ಅದರಿಂದ ಹೆಚ್ಚು ನಷ್ಟ. ಚೀನಾ ಅಮೇರಿಕಾದ ಸಾಲ ಪತ್ರ ಖರಿದಿಸಿರುವ ದೇಶಗಳಲ್ಲಿ ಅಗ್ರ ಸ್ಥಾನದಲ್ಲಿದೆ. 1.3 ಟ್ರಿಲಿಯನ್ ಅಮೇರಿಕನ್ ಸಾಲ ಪತ್ರದ ಒಡೆಯ ಚೀನಾ! ಆಕಸ್ಮಾತ್ ಚೀನಾ ಡೆಟ್ ಬಾಂಡ್ ಮಾರಲು ಶುರು ಮಾಡಿದರೆ..?? ಚೀನಾದ ತಾಳಕ್ಕೆ ಅಮೇರಿಕಾ ಕುಣಿಯದೆ ಬೇರೆ ದಾರಿಯಿಲ್ಲ. 
ಸೂರ್ಯನಾರಾಯಣ ರಾವ್ ನ್ಯೂಜಿಲ್ಯಾಂಡ್ ನ ಆಕ್ಲ್ಯಾಂಡ್ ನಲ್ಲಿ ಹದಿನೈದು ವರ್ಷ ಹಿಂದೆ ಮನೆ ಖರೀದಿಸಿದಾಗ ಆ ಮನೆಯ ಬೆಲೆ ಒಂದು ಲಕ್ಷ ಇಪ್ಪತ್ತೈದು ಸಾವಿರ ನ್ಯೂಜಿಲ್ಯಾಂಡ್ ಡಾಲರ್. ಇಂದು ಅದೇ ಮನೆಯ ಬೆಲೆ ಒಂದು ಮಿಲಿಯನ್ ಡಾಲರ್ ಮೀರಿ ಹೋಗಿದೆ. ಇಲ್ಲಿ ಜನ ಸಾಮಾನ್ಯ ಮನೆ ಖರೀದಿಸಲು ಸಾಧ್ಯವಿಲ್ಲ. ಅದು ಜನ ಸಾಮಾನ್ಯನ ಕೈಮೀರಿ ಹೋಗಿದೆ. ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಹೀಗೆ ನೆಲ ಮತ್ತು ಮನೆಯ ಬೆಲೆ ಹೆಚ್ಚಾಗಲು ಕಾರಣ ಚೀನಿಯರು. ನಿಧಾನವಾಗಿ ಚೀನಿಯರು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶದ ನೆಲವನ್ನ ಕೇಳಿದಷ್ಟು ಹಣ ತೆತ್ತು ಕೊಳ್ಳುತ್ತಿದ್ದಾರೆ. ಚೀನಿ ಸರಕಾರ ಎಲ್ಲಿ ನೇರವಾಗಿ ಹೂಡಿಕೆ ಮಾಡಿ ಮತ್ತು ವ್ಯಾಪಾರ ಮಾಡಿ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲ ನೆಲವನ್ನ ಕೇಳಿದ ಬೆಲೆ ಕೊಟ್ಟು ತನ್ನ ಜನರಿಂದ ಖರೀದಿ ಮಾಡಿಸುತ್ತಿದೆ. ಯೂರೋಪಿನ ಬಹುತೇಕ ನಗರಗಳಲ್ಲಿ ಇಂದು ಚೀನಿಯರದೇ ವ್ಯಾಪಾರ. ಒಮ್ಮೆ ಚೀನಿಯರು ಮಾರುಕಟ್ಟೆ ಪ್ರವೇಶಿಸಿದರೆ ಮುಗಿಯಿತು, ಅಲ್ಲಿ ಇತರರು ನಿಂತು ವ್ಯಾಪಾರ ಮಾಡಲು ಸಾಧ್ಯವಿಲ್ಲ ಅಷ್ಟು ಅಗ್ಗದಲ್ಲಿ ವ್ಯಾಪಾರ ಮಾಡಿ ಮಾರುಕಟ್ಟೆಯನ್ನ ಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. 
ಇನ್ನು ಸಾಲ ಕೇಳಿದ ಸಣ್ಣ ಪುಟ್ಟ ದೇಶಗಳನ್ನ ಸಾಲ ಕೊಟ್ಟು ನಿಧಾನವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಹೀಗೆ ಚೀನಾದ ಸಾಲದಲ್ಲಿ ಇರುವ ದೇಶಗಳ ಸಂಖ್ಯೆ ಹತ್ತಿರಹತ್ತಿರ ಎಪ್ಪತ್ತು! ಅದರಲ್ಲಿ 20 ದೇಶಗಳ ನಿಯಂತ್ರಣ ಈಗಾಗಲೇ ಚೀನಾದ ಕೈಲಿದೆ. 
ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಅಮೇರಿಕಾ ದೇಶಗಳ ಕತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಪಾಕಿಸ್ತಾನಕ್ಕೆ ಹೊಸ ನಾಯಕ ಸಿಕ್ಕಿದ್ದಾನೆ. ಆತ ಆಟಗಾರ ಭಾರತಕ್ಕೆ ಕೆಡುಕು ಮಾಡಲಾರ ಎನ್ನುವ ಮಾತುಗಳು ಕೇಳಿಬರುತ್ತಿದೆ. ನಾನು ಸಿಐಎ ಏಜೆಂಟ್ ಅಲ್ಲ, ರಾ ಅಥವಾ ಐಎಸ್ ಐ ಗೂ ಸೇರಿದವನಲ್ಲ ಆದರೆ ಗಮನಿಸಿ ನೋಡಿ ಇಲ್ಲಿಯತನಕ ಅಮೇರಿಕಾ ಮತ್ತು ಚೀನಾದ ಹಿಡಿತಕ್ಕೆ ಸಿಕ್ಕದೆ ಆರ್ಥಿಕವಾಗಿ ಸ್ವಾತಂತ್ರ್ಯವಾಗಿರುವುದು ಭಾರತ ಮಾತ್ರ! ಅಮೇರಿಕಾ ಮತ್ತು ಚೀನಾ ಎರಡೂ ಧಾರಾಳವಾಗಿ ಪಾಕಿಸ್ತಾನಕ್ಕೆ ದೇಣಿಗೆ ನೀಡಲು ಮುಂದಾಗುವುದು ಖಂಡಿತ. ಭಾರತವೆನ್ನುವ ಬೃಹತ್ ಆನೆಯನ್ನ ಖೆಡ್ಡಾಗೆ ತಳ್ಳಲು ಚೀನಾ ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಹೊಸ ನಾಯಕ ಚೀನಾದ ಆಟದ ಹೊಸ ದಾಳ. 
ವಿತ್ತ ಜಗತ್ತಿನಲ್ಲಿ ಆಗುತ್ತಿರುವ ಈ ಬದಲಾವಣೆಗಳು, ಜಗತ್ತಿನ ಆಡಳಿತದ ಚುಕ್ಕಾಣಿ ಹಿಡಿಯಲು ನೆಡೆಯುತ್ತಿರುವ ಹುನ್ನಾರಗಳು ಜಗತ್ತಿನ ಸಾಮಾನ್ಯನ ಬದುಕಿನಲ್ಲಿ ಸದ್ದಿಲದೆ ಸುನಾಮಿ ಎಬ್ಬಿಸುತ್ತವೆ. ಹೀಗಾಗಬಹದು ಎನ್ನುವ ಸ್ವಲ್ಪ ಮಟ್ಟಿನ ಅರಿವು ಇದ್ದರೆ ಹೊಡೆತದ ಪ್ರಭಾವದಿಂದ ಒಂದಷ್ಟು ಬಚಾವಾಗಬಹದು. ಮಾನಸಿಕ ಸಿದ್ಧತೆ ಕೂಡ ಮಾಡಿಕೊಳ್ಳಬಹದು. ಇವೆರೆಡೂ ಈ ಲೇಖನದಲ್ಲಿ ಸ್ವಲ್ಪವಾದರೂ ಆಗಿದ್ದರೆ ಅಲ್ಲಿಗೆ ಅದು ಸಾರ್ಥಕ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com