ಹೂಡಿಕೆ ಜಗತ್ತಿನಲ್ಲಿ ಸಂಚಲನ ಭಾರತಕ್ಕೆ ಬಫ್ಫೆಟ್ ಆಗಮನ!?

ಇವತ್ತು ವಾರೆನ್ ಬಫ್ಫೆಟ್ ಹೆಸರು ಕೇಳದವರಾರು? ಜಗತ್ತಿನ ಷೇರು ಮಾರುಕಟ್ಟೆಯ ಮೇಲಿನ ಹೂಡಿಕೆಗಳ ಸರದಾರನೀತ!. ಹೇಳಿಕೊಳ್ಳುವ ಹಣವಂತರಲ್ಲದ ಮನೆತನದಿಂದ ಬಂದು ತನ್ನ ಬುದ್ಧಿಶಕ್ತಿಯಿಂದ ಇಂದು
ಹೂಡಿಕೆ ಜಗತ್ತಿನಲ್ಲಿ ಸಂಚಲನ ಭಾರತಕ್ಕೆ ಬಫ್ಫೆಟ್ ಆಗಮನ!?
ಹೂಡಿಕೆ ಜಗತ್ತಿನಲ್ಲಿ ಸಂಚಲನ ಭಾರತಕ್ಕೆ ಬಫ್ಫೆಟ್ ಆಗಮನ!?
ಇವತ್ತು ವಾರೆನ್ ಬಫ್ಫೆಟ್ ಹೆಸರು ಕೇಳದವರಾರು? ಜಗತ್ತಿನ ಷೇರು ಮಾರುಕಟ್ಟೆಯ ಮೇಲಿನ ಹೂಡಿಕೆಗಳ ಸರದಾರನೀತ!. ಹೇಳಿಕೊಳ್ಳುವ ಹಣವಂತರಲ್ಲದ ಮನೆತನದಿಂದ ಬಂದು ತನ್ನ ಬುದ್ಧಿಶಕ್ತಿಯಿಂದ ಇಂದು ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರ ಎನ್ನುವ ಹೆಗ್ಗಳಿಕೆ ಪಡೆಯುವ ತನಕ ವಾರ್ನರ್ ನೆಡೆದು ಬಂದ ಹಾದಿ ಇದೆಯಲ್ಲ ಅದೊಂದು ರೋಚಕ ಕಥೆ. 
ಹಾಲಿವುಡ್ ನಲ್ಲಿ ಷೇರು ಮಾರುಕಟ್ಟೆ ಮತ್ತು ಅಲ್ಲಿನ ಹೂಡಿಕೆಗಳ ಕುರಿತು ಸಾಕಷ್ಟು ಚಲನಚಿತ್ರಗಳು ಆಗಲೇ ಬಂದಿವೆ. ಆದರೂ ವಾರೆನ್ ಬಫ್ಫೆಟ್ ಬದುಕು ಖಂಡಿತ ಚಲನ ಚಿತ್ರ ಮಾಡಬಹುದಾದ ವಿಷಯ. ಇವತ್ತಿನ ಲೇಖನ ವಾರೆನ್ ಬಫ್ಫೆಟ್ ಬದುಕು ಅಥವಾ ಬವಣೆಯ ಕುರಿತು ಅಂತ ನೀವು ಅಂದು ಕೊಂಡರೆ ನಿಮ್ಮ ಊಹೆ ತಪ್ಪು!. ಬಫ್ಫೆಟ್ ಹೂಡಿಕೆ ಮಾಡುತ್ತಾರೆ ಅಂದರೆ ಕನಿಷ್ಠ ಪಕ್ಷ ಆ ಕ್ಷೇತ್ರ ಇನ್ನೊಂದು ಹತ್ತು ವರ್ಷ ಇರುತ್ತದೆ ಅಥವಾ ಇವತ್ತಿಗೆ ಅದೇನು ಮಹಾ ಅನ್ನಿಸದಿದ್ದರೂ ಇನ್ನೊಂದು ದಶಕದಲ್ಲಿ ಅದು ಖಂಡಿತ ಉತ್ತುಂಗ ತಲುಪುತ್ತದೆ ಎನ್ನುವುದು ಬಫ್ಫೆಟ್ ಅರಿತವರು ಮತ್ತು ಆತನ ಹೂಡಿಕೆಯ ಪರಿಯನ್ನ ಹತ್ತಾರು ವರ್ಷದಿಂದ ಗಮನಿಸಿದವರು ನುಡಿಯುವ ಮಾತು. 
ಬಫ್ಫೆಟ್ ಎಲ್ಲರಿಗೂ ತಿಳಿದಿರುವಂತೆ ಅಂತಾರಾಷ್ಟ್ರೀಯ ಮಟ್ಟದ ಮಹಾನ್ ಹೂಡಿಕೆದಾರ. ಆದರೆ ಇಲ್ಲಿಯವರೆಗೆ ಭಾರತದಲ್ಲಿ ಒಂದು ರೂಪಾಯಿ ಕೂಡ ಅವರು ಹೂಡಿಕೆ ಮಾಡಿಲ್ಲ!! ಎಂದರೆ ನೀವು ನಂಬಲೇಬೇಕು. ಇದಕ್ಕೆ ಕಾರಣಗಳೇನೇ ಇರಲಿ ವಾರೆನ್ ಬಫ್ಫೆಟ್ ಹಣ ಭಾರತದಲ್ಲಿ ಹೂಡಿಕೆಯಾಗಿಲ್ಲ ಅನ್ನುವ ಕಾರಣಕ್ಕೆ ನೂರಾರು ಪ್ರಭಲ ಹೂಡಿಕೆದಾರರು ಕೂಡ ಭಾರತದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಿದ್ದು ಸುಳ್ಳೇನಲ್ಲ. ಬಫ್ಫೆಟ್ ನಷ್ಟು ಪ್ರಖ್ಯಾತರಲ್ಲದ ಆದರೆ ಪ್ರಮುಖರಾದ ಹೂಡಿಕೆದಾರರು ಮತ್ತು ಮಾರುಕಟ್ಟೆ ವಿಮರ್ಶಕರು ಭಾರತದ ಮಾರುಕಟ್ಟೆ ಹೂಡಿಕೆಗೆ ಉತ್ತಮವಾದದ್ದು ಎನ್ನುವ ಹೇಳಿಕೆಗಳನ್ನ ನೀಡುತ್ತಲೇ ಬಂದಿದ್ದಾರೆ. ಜಗತ್ತಿನ ಎಷ್ಟೋ ಹೆಸರಾಂತ ದೇಶಗಳ ಆರ್ಥಿಕ ಸ್ಥಿತಿಗಿಂತ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎನ್ನುವುದು ಕೂಡ ಸುಳ್ಳೇನಲ್ಲ, ಪರಿಸ್ಥಿತಿ ಹೀಗಿದ್ದೂ ವಾರೆನ್ ಬಫ್ಫೆಟ್ ಮಾತ್ರ ಭಾರತದಲ್ಲಿ ಹೂಡಿಕೆ ಮಾಡಲೇ ಇಲ್ಲ. ಭಾರತದಲ್ಲಿ ಬಫ್ಫೆಟ್ ಯಾವಾಗ ಹೂಡಿಕೆ ಮಾಡಬಹದು ಎನ್ನುವುದು ಕೂಡ ಬೆಟ್ಟಿಂಗ್ ವಿಷಯವಾಗಿ ಹೋಯಿತು! ನಂತರ ಸರಿ ಆತ ಭಾರತದಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೂ ಆಯಿತು. ಹಲವಾರು ವರ್ಷದಿಂದ ಮರೆತು ಸುಮ್ಮನಾಗಿದ್ದ ವಿಷಯಕ್ಕೆ ಸಣ್ಣ ಮಟ್ಟಿನ ಜೀವ ಬಂದದ್ದು ಕೇಂದ್ರ ಸರಕಾರ ಡಿಮೋನಿಟೈಸೇಶನ್ ಮಾಡಿದ ನಂತರ ಅಂದರೆ ನಿಮಗೆ ಆಶ್ಚರ್ಯವಾಗಬಹದು. ಹೀಗೆ ಸಣ್ಣನೆಯ ಭರವಸೆ ಕಳೆದ ಮೂರು ತಿಂಗಳಿಂದ ತೀವ್ರತೆ ಪಡೆದು ಮಾತುಕತೆ ಜೋರಾಗೆ ನೆಡೆಯುತ್ತಾ ಬಂದಿದೆ. ಒಂದು ಮಾಹಿತಿಯ ಪ್ರಕಾರ  ಒನ್ 97 ಕಮ್ಯುನಿಕೇಷನ್ ಲಿಮಿಟೆಡ್ ನಲ್ಲಿ ಬಫ್ಫೆಟ್ ಆಗಲೇ ಒಂದಷ್ಟು ಪಾಲು ಪಡೆದಿದ್ದಾರೆ ಎನ್ನುವ ಸುದ್ದಿಯಿದೆ. 27 ಆಗಸ್ಟ್ 2018ಬಫ್ಫೆಟ್ ನ ಸಂಸ್ಥೆ  ಬೆರ್ಕ್ ಶೈರ್  ಹಾತ್ ವೆ  360 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು (2,500 ಕೋಟಿ  ರೂಪಾಯಿ) 97 ಕಮ್ಯುನಿಕೇಷನ್ ಲಿಮಿಟೆಡ್  ವರ್ಗಾಯಿಸಿದೆ ಎನ್ನುವುದು ಕೂಡ ವಿತ್ತ ವಲಯದಲ್ಲಿ ಅತ್ಯಂತ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಈ ವಾರದಲ್ಲಿ ಎಲ್ಲವೂ ಜಗತ್ತಿನ ಮುಂದೆ ವಿವರವಾಗಿ ತೆರೆದುಕೊಳ್ಳಲಿದೆ. 
ಗಮನಿಸಿ ಡಿಮೋನಿಟೈಸೇಶನ್ ನಂತರ ದೇಶದಲ್ಲಿ ಹಣದ ಹರಿವು ಬಹಳಷ್ಟು ಕಡಿಮೆಯಾಯಿತು. ಹೀಗಾಗಿ ಪೆಟಿಎಂ, ಮೊಬೈಕ್ವಿಕ್ ಜೊತೆಗೆ ಬಹಳಷ್ಟು ವಾಲೆಟ್ ಗಳು ಜಾರಿಗೆ ಬಂದವು. 97 ಕಮ್ಯುನಿಕೇಷನ್ ಲಿಮಿಟೆಡ್ ನಲ್ಲಿ ಚೀನಾದ ಅಲಿಬಾಬಾ ಸಂಸ್ಥೆ ಹೂಡಿಕೆ ಮಾಡಿತು. ಇದರ ವಾಲೆಟ್ ಇಂದು ಭಾರತದ ಮಾರ್ಕೆಟ್ ಲೀಡರ್ ಎನ್ನುವ ಹಣೆಪಟ್ಟಿ ಹೊಂದಿರುವ ಪೇಟಿಎಂ. ವಾರ್ನರ್ ಬಫ್ಫೆಟ್ ಕೂಡ ಇದೀಗ ಪೆಟಿಎಂ ನಲ್ಲಿ 2500 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದು ಈ ಕ್ಷೇತ್ರದಲ್ಲಿ ಇರುವ ಶಕ್ತಿಯನ್ನ ತೋರಿಸುತ್ತಿದೆ. ಬಫ್ಫೆಟ್ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರು ಎಂದು ಬೇರೆ ಹೂಡಿಕೆದಾರರು ಮುಗಿ ಬೀಳುವುದು ಗ್ಯಾರಂಟಿ. 
ಪೆಟಿಎಂ ಇಂದು 3೦ ಕೋಟಿ ಜನರನ್ನ ಗ್ರಾಹಕರನಾಗಿ ಪಡೆದಿದೆ ಎಂದರೆ ಮಾರುಕಟ್ಟೆಯ ಮೇಲಿನ ಅದರ ಹಿಡಿತದ ಅರಿವು ನಿಮ್ಮದಾಗಬಹದು. 2016 ನವೆಂಬರ್ ತಿಂಗಳಲ್ಲಿ ಡಿಮೋನಿಟೈಸೇಶನ್ ಆದ ನಂತರ ಒಂದೇ ತಿಂಗಳಲ್ಲಿ 1 ಕೋಟಿ ಗ್ರಾಹಕರನ್ನ ಪಡೆದ ಹೆಗ್ಗಳಿಕೆ ಕೂಡ ಪೆಟಿಎಂ ವಾಲೆಟ್ ಗೆ ಸೇರುತ್ತದೆ. ಇದೀಗ ನೀವು ಒಂದುಪ್ರಶ್ನೆ ಕೇಳಬಹದು ಅಷ್ಟೊಂದು ಗ್ರಾಹಕರನ್ನ ಪಡೆದಿದೆ ಸಾಕಷ್ಟು ವಹಿವಾಟು ನೆಡೆಸುತ್ತಿದೆ ಮತ್ತು ಮಾರುಕಟ್ಟೆಯ ಅಧಿಪತ್ಯ ಹೊಂದಿದೆ ಹೀಗಿರುವಾಗ ಅದೇಕೆ ಬಫ್ಫೆಟ್ ಅಂತವರು ಹೂಡಿಕೆ ಮಾಡುತ್ತೇನೆ ಅಂದ ತಕ್ಷಣ ಸರಿ ಎಂದು ಒಪ್ಪಿ ಬಿಡುತ್ತಾರೆ? ಇದಕ್ಕೆ ಉತ್ತರ ಬಹಳ ಸರಳ, ನೋಡಿ ಈ ಎಲೆಕ್ಟ್ರಾನಿಕ್ ವಾಲೆಟ್ ಗಳು ಗ್ರಾಹಕರನ್ನ ಸೆಳೆಯುವ ಭರದಲ್ಲಿ ಅವರಿಗೆ ಕ್ಯಾಶ್ ಡಿಸ್ಕೌಂಟ್ಸ್ ಅಥವಾ ಕ್ಯಾಶ್ ಬ್ಯಾಕ್ ಎನ್ನುವ ಆಮಿಷಗಳನ್ನ ಒಡ್ಡುತ್ತಿವೆ. ಉದಾಹರಣೆಗೆ ನೀವು ಕೊಂಡ ವಸ್ತುವಿನ ಬೆಲೆ 1೦೦ ರೂಪಾಯಿ ಎಂದುಕೊಳ್ಳಿ ಪೆಟಿಎಂ ಹೇಳುತ್ತದೆ ಇದನ್ನ ನೀವು ಪೆಟಿಎಂ ಮೂಲಕ ಪಾವತಿಸಿದರೆ ನಿಮಗೆ ಐದು ರೂಪಾಯಿ ಅಥವಾ ಹತ್ತು ರೂಪಾಯಿ ವಾಪಸ್ಸು ಕೊಡುತ್ತೇವೆ ಎಂದು. ಹೀಗೆ ಗ್ರಾಹಕರ ಸಂಖ್ಯೆಯೇನೋ ಹೆಚ್ಚಿತು ಅದರ ಜೊತೆಗೆ ಗ್ರಾಹಕರಿಗೆ ನೀಡುವ ಕ್ಯಾಶ್ ಬ್ಯಾಕ್ ಸಂಸ್ಥೆಯ ಹಣವನ್ನ ಕೂಡ ಕರಗಿಸುತ್ತ ಹೋಯಿತು. ಇವತ್ತು ಇನ್ನೂ ಭಾರತದ ಮಟ್ಟಿಗೆ ಈ ಯಾವುದೇ ವಾಲೆಟ್ ಇರಲಿ ಇನ್ನೂ ಲಾಭದಾಯಕವಲ್ಲ. ಇಲ್ಲಿ ಲಾಭಗಳಿಸುವ ಮುನ್ನ ನೂರಾರು ಕೋಟಿ ರೂಪಾಯಿ ಕಳೆದುಕೊಳ್ಳಲು ಸಿದ್ಧರಿರಬೇಕು. ಆದರೆ ಮುಂಬರುವ ವರ್ಷಗಳಲ್ಲಿ ಕಳೆದುಕೊಂಡ ಅಷ್ಟೋ ಹಣದ ಜೊತೆಗೆ ಇನ್ನಷ್ಟು ಲಾಭ ಮಾಡುವ ಅವಕಾಶವಿದೆ. ಹೀಗಾಗಿ ವಾರ್ನರ್ ನಂತವರು ಹಣ ಹೂಡುತ್ತಾರೆ. ಹೂಡುತ್ತೇನೆ ಎಂದ ತಕ್ಷಣ 97 ಕಮ್ಯುನಿಕೇಷನ್ ಲಿಮಿಟೆಡ್ ನಂತಹ ಸಂಸ್ಥೆಗಳು ಮರು ಮಾತಿಲ್ಲದೆ ಒಪ್ಪಿಕೊಳ್ಳುತ್ತವೆ. 
ಸದ್ಯಕ್ಕೆ ಲಾಭ ಕೊಡದ ಸಂಸ್ಥೆ ಅಥವಾ ವ್ಯವಹಾರದ ಮೇಲೆ ಬಫ್ಫೆಟ್ ಹೂಡಿಕೆ ಮಾಡಲು ಇರುವ ಕಾರಣಗಳೇನು? 
  • ಸದ್ಯದ ಪರಿಸ್ಥಿಯಲ್ಲಿ ಯೂರೋಪು ಮತ್ತು ಅಮೇರಿಕಾ ಏಳುವ ಮತ್ತು ಮೊದಲಿನ ಓಘ ಕಂಡುಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.  
  • ಭಾರತದಲ್ಲಿ ಹೂಡಿಕೆಯಿಲ್ಲ ಸ್ವಲ್ಪವಾದರೂ ಇರಲಿ ಎನ್ನುವ ಲೆಕ್ಕಾಚಾರ. 
  •  ವೇಗವಾಗಿ ಬೆಳೆಯುತ್ತಿರುವ ಭಾರತೀಯ ಯುವ ಜನತೆಯ ಸಂಖ್ಯೆ ಜೊತೆಗೆ ಹೆಚ್ಚಿರುವ ಅವರ ಖರ್ಚು ಮಾಡುವ ಶಕ್ತಿ. 
  • ರಸ್ತೆ ಬದಿಯ ಸೊಪ್ಪು ಮಾರುವ ವ್ಯಾಪಾರಿ ಕೂಡ ಪೆಟಿಎಂ ವಾಲೆಟ್ ಬಳಸುತ್ತಿರುವ ದೃಶ್ಯಗಳು ಜಗತ್ತಿನ ಜನರ ಹುಬ್ಬೇರಿಸಿವೆ. ಅದು ಬಫ್ಫೆಟ್ ನ ಭಾರತದ ಬಗ್ಗೆಯ ಧೋರಣೆಯ ಬದಲು ಮಾಡಿರಲೂಬಹುದು. ಇಲ್ಲಿ ಒಂದು ವಿಷಯವ ಹೇಳಬೇಕಿದೆ ಟೆಕ್ನಾಲಜಿ ಮತ್ತು ಅದನ್ನ ವೇಗವಾಗಿ ಅಪ್ಪಿಕೊಳ್ಳುವುದರಲ್ಲಿ ಭಾರತ ಜಗತ್ತಿನ ಎಷ್ಟೋ ಮುಂದುವರಿದ ದೇಶಗಳಿಗಿಂತ ಮುಂದಿದೆ. 
  •  ಮುಂಬರುವ ದಿನಗಳಲ್ಲಿ  ಇಂದಿಗೆ 3೦ ಕೋಟಿ ಇರುವ ಬಳಕೆದಾರರು ಐವತ್ತು ಅಥವಾ 8೦ ಆಗುವ ಸಾಧ್ಯತೆಯನ್ನ ಅಲ್ಲಗೆಳಯಲು ಬರುವುದಿಲ್ಲ. 
  • ಕೇವಲ ಇದರಿಂದ ಬರುವ ಲಾಭದ ಮೇಲಷ್ಟೆ ಕಣ್ಣಿಟ್ಟಿರದೆ ಅಲ್ಲಿ ಶೇಖರಣೆಯಾಗುವ ದತ್ತಾಂಶಗಳ ಮೇಲೂ ಗಮನವಿರಬಹದು. ಇವತ್ತಿಗೆ ಮಾಹಿತಿ ಇದ್ದರೆ ಅದನ್ನ ಹೇಗೆಲ್ಲ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹದು ಮತ್ತು ಇನ್ನಷ್ಟು ಹಣ ಮಾಡಬಹದು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಬಫ್ಫೆಟ್ ಗೆ ಇದೊಂದು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡಿದ್ದರೆ ಅದರಲ್ಲಿ ಆಶ್ಚರ್ಯ ಪಡುವುದೇನಿಲ್ಲ. 
  • ಇವೆಲ್ಲವುದರ ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆ ಕೂಡ ಖಂಡಿತ ತನ್ನ ಪಾಲನ್ನ ನೀಡಿದೆ. ಗಮನಿಸಿ ಬಫ್ಫೆಟ್ ಮೂಲಭೂತ ಹೂಡಿಕೆದಾರ. ಅಪಾಯವನ್ನ ತೆಗೆದುಕೊಳ್ಳುತ್ತಾರೆ ಆದರೆ ಇತರ ಹೂಡಿಕೆದಾರರಂತೆ ಅಲ್ಲ. ಅವರದ್ದು ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳುವ ಗುಣ. ಎಲ್ಲಿ ಲಾಭ ಬರುತ್ತದೆಯೋ ಅಲ್ಲಿ ಹೂಡಿಕೆ ಮಾಡು ಎನ್ನುವ ಮನೋಭಾವ ಅವರದ್ದಲ್ಲ. ಹೀಗಾಗಿ ಬಫ್ಫೆಟ್ ಭಾರತಕ್ಕೆ ಬರುತ್ತಿದ್ದಾರೆ ಎಂದರೆ ಅದು ನಿಜಕ್ಕೂ ನಮ್ಮ ಸಮಾಜ ಸುಧಾರಣೆ ಕಂಡಿದೆ ಎನ್ನುವುದರ ದೋತ್ಯಕ. 
ಬಫ್ಫೆಟ್ ಕಳೆದ ವರ್ಷ ಭಾರತದ ಏರುತ್ತಿರುವ ಮಾರುಕಟ್ಟೆಯ ಬಗ್ಗೆ ಮತ್ತು ಅಲ್ಲಿ ಆತನ ಹೂಡಿಕೆ ಇರದಿರುವುದರ ಬಗ್ಗೆ ಮಾತನಾಡುತ್ತ 'ಭಾರತ ನಿಜಕ್ಕೂ ಹೂಡಿಕೆಗೆ ಇನ್ಕ್ರೆಡಿಬಲ್ ಮತ್ತು ಗೆಲುವಿನ ಸಂಭಾವ್ಯತೆ ಕೂಡ ಹೆಚ್ಚಾಗಿದೆ ಎನ್ನುವ ಮಾತನ್ನ ಹೇಳಿದ್ದರು. ಜೊತೆಗೆ 'ನೀವು ಯಾವುದಾದರು ಉತ್ತಮ ಕಂಪನಿ ಮಾರಾಟಕ್ಕಿದ್ದರೆ ಹೇಳಿ ನಾಳೆಯೇ ಭಾರತಕ್ಕೆ ಹಣದ ಥೈಲಿಯೊಂದಿಗೆ ಬರುತ್ತೇನೆ ' ಎಂದು ಹಾಸ್ಯವಾಗಿ ಹೇಳಿದ್ದರು. ಇದೀಗ ಬಫ್ಫೆಟ್ ಹೂಡಿಕೆ ನಿಜವಾಗಿದೆ. 
ಕೊನೆ ಮಾತು: ಒಬ್ಬ ಬಫ್ಫೆಟ್ ಭಾರತಕ್ಕೆ ಬಂದರೆ ಅದಕ್ಕೆ ಏಕಿಷ್ಟು ಅಬ್ಬರ? ಏಕಿಷ್ಟು ಸಡಗರ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಅನೇಕರಿಗೆ ಬರಬಹದು. ಬಫ್ಫೆಟ್ ಹೂಡಿಕೆ ಇಲ್ಲದೆ ನಾವು ಈ ಮಟ್ಟಿಗೆ ಬೆಳೆಯಲ್ಲವೇ? ಈಗ ಎಲ್ಲವೂ ಚನ್ನಾಗಿರುವಾಗ ಲಾಭ ಮಾಡಿಕೊಳ್ಳಲು ಬರುವ ಸಮಯಸಾಧಕ ಹೂಡಿಕೆದಾರ ಅವನಲ್ಲವೇ? ಎನ್ನುವ ಮಾತುಗಳು ಕೂಡ ವಿತ್ತವಲಯದಲ್ಲಿ ಎದ್ದಿವೆ. ಗಮನಸಿ ನೋಡಿ ಇಂತಹ ಹೂಡಿಕೆದಾರರು ಸಾಮಾನ್ಯವಾಗಿ ಒಂದು ಸಂಸ್ಥೆ ಅಥವಾ ಒಂದು ಕಾರ್ಯ ಕ್ಷೇತ್ರದಲ್ಲಿ ಮಾತ್ರ ಹೂಡಿಕೆ ಮಾಡುವುದಿಲ್ಲ! ಒಮ್ಮೆ ಅವರಿಗೆ ಇಲ್ಲಿನ ಮಾರುಕಟ್ಟೆಯ ಮತ್ತು ವ್ಯವಹಾರದ ರೀತಿ ಇಷ್ಟವಾದರೆ ಅವರು ಇತರ ಕಾರ್ಯ ಕ್ಷೇತ್ರದಲ್ಲಿ ಹಣವನ್ನ ನೀರಿನಂತೆ ಹರಿಸುತ್ತಾರೆ. ಆ ನಿಟ್ಟಿನಲ್ಲಿ ಹೌದು ಇದೊಂದು ಅಬ್ಬರ ಮತ್ತು ಸಡಗರದ ಸಂಗತಿ. ಟೆಕ್ನಾಲಜಿ ಸ್ಟಾರ್ಟ್ ಅಪ್ ಹುಡುಗರು ಮತ್ತು ಪ್ರೊಫೆಷನಲ್ ಗಳ ಮಟ್ಟಿಗಂತೂ ಇದೊಂದು ಅತ್ಯಂತ ಸಿಹಿ ಸುದ್ದಿ.  
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com