ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ; ಪರಿಹಾರವಿದೆಯಾ ?

ನಾರ್ತ್ ಕೊರಿಯಾ ಎಂದ ತಕ್ಷಣ ಅಲ್ಲಿನ ಸರ್ವಾಧಿಕಾರಿ ಆತನ ದುರಾಡಳಿತದಲ್ಲಿ ನೊಂದು ಬೆಂದಿರುವ ಜನತೆ ಬದುಕೆಂದರೆ ನರಕ ಎನ್ನುವ ಚಿತ್ರಣವನ್ನ ನಮ್ಮ ಮೀಡಿಯಾಗಳು ಕಟ್ಟಿ ಕೊಟ್ಟಿವೆ. ಅದು ಸುಳ್ಳಲ್ಲ.
ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ ;ಪರಿಹಾರವಿದೆಯಾ ?
ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ ;ಪರಿಹಾರವಿದೆಯಾ ?
ನಾರ್ತ್ ಕೊರಿಯಾ ಎಂದ ತಕ್ಷಣ ಅಲ್ಲಿನ ಸರ್ವಾಧಿಕಾರಿ ಆತನ ದುರಾಡಳಿತದಲ್ಲಿ ನೊಂದು ಬೆಂದಿರುವ ಜನತೆ ಬದುಕೆಂದರೆ ನರಕ ಎನ್ನುವ ಚಿತ್ರಣವನ್ನ ನಮ್ಮ ಮೀಡಿಯಾಗಳು ಕಟ್ಟಿ ಕೊಟ್ಟಿವೆ. ಅದು ಸುಳ್ಳಲ್ಲ. ಸೌತ್ ಕೊರಿಯಾ ಎಂದ ತಕ್ಷಣ ಅಲ್ಲಿನ ಜಗಮಗಿಸುವ ಆಧುನಿಕತೆ, ಆರ್ಥಿಕತೆಯಲ್ಲಿ ಅದರ ಸಾಧನೆ, ಗಗನಚುಂಬಿ ಕಟ್ಟಡಗಳನ್ನ ತೋರಿಸಿ ಒಂದೇ ಭೂಪ್ರದೇಶದ ಎರಡು ದೇಶಗಳು ಹೇಗೆ  ಬಿನ್ನವಾಗಿವೆ, ಒಂದು ಜಗತ್ತಿನ ಆರ್ಥಿಕತೆಗೆ ಜೊತೆ ಜೊತೆಗೆ ಹೆಜ್ಜೆ ಹಾಕುತ್ತ ಚೀನಾ, ಅಮೇರಿಕಾ, ಯೂರೋಪು ದೇಶಗಳು ತಿರುಗಿ ನೋಡುವ ಮಟ್ಟಕ್ಕೆ ಬೆಳೆದರೆ ಇನ್ನೊಂದು ಜಗತ್ತಿನ ಶಾಂತಿಗೆ ಭಂಗ ತರುವ ಲಫಂಗನಾಗಿ ಬೆಳೆದಿದೆ ಎನ್ನುವ ಚಿತ್ರಣ ಜಗತ್ತಿನ ಮುಕ್ಕಾಲು ಪಾಲು ಜನರಿಗೆ ಕಟ್ಟಿಕೊಡಲಾಗಿದೆ. ಈ ಚಿತ್ರಣ ಮಾತ್ರ ಪೂರ್ತಿ ನಂಬಲು ಸಾಧ್ಯವಿಲ್ಲ. ಆರ್ಥಿಕತೆ, ಆಧುನಿಕತೆಯ ಓಟದಲ್ಲಿ ಸೌತ್ ಕೊರಿಯಾ ಎನ್ನುವ ದೇಶ ಮುಗ್ಗುರಿಸಿದೆ. ಅಲ್ಲಿನ ಸಮಸ್ಯೆಗಳು ನಾವು ಏನು ಮಾಡಬೇಕು ಏನು ಮಾಡಬಾರದು ಎಂದು ನಮಗೆ ತಿಳಿ ಹೇಳುತ್ತಿವೆ. ಅಭಿವೃದ್ಧಿಯ ಭರದಲ್ಲಿ ಮೂಲ ಮನುಷ್ಯತ್ವ ಮರೆಯುವ ಮಟ್ಟಕ್ಕೆ ಅಲ್ಲಿನ ಸಮಾಜ ಇಳಿದಿರುವುದು ಮಾತ್ರ ನಾಗರೀಕತೆಯ ಹೆಸರಿಗೆ ಕಳಂಕ. 
ಇಲ್ಲಿ ರಾಜಕೀಯ ತಲ್ಲಣಗಳು, ಅಸ್ಥಿರತೆ ಕೂಡ ಇದೆ. 2017 ರಲ್ಲಿ ಮೂನ್ ಜೇ-ಇನ್ ಸೌತ್ ಕೊರಿಯಾ ದೇಶದ ಹೊಸ ಪ್ರೆಸಿಡೆಂಟ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಮುಂದೆ ಸಮಾಜವನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಉತ್ತರ ಹುಡುಕವ ಸವಾಲು ಎದುರಾಗಿದೆ. ಸೌತ್ ಕೊರಿಯಾ ದೇಶ ಜಗತ್ತಿನ ಕಣ್ಣಿಗೆ ಜಗಮಗಿಸುವ ಸುಂದರ ಸಂಪದ್ಭರಿತ ದೇಶ ಬೆಳಕಿನ ಕೆಳಗೆ ಕತ್ತಲೆ ಎನ್ನುವ ಮಾತಿನಂತೆ ಆ ದೇಶದಲ್ಲಿ ಇರುವ ಸಮಸ್ಯೆಗಳೇನು ನೋಡೋಣ. 
ಭ್ರಷಾಚಾರ: ತನ್ನ ಹಿಂದಿನ ಪ್ರೆಸಿಡೆಂಟ್ ಭ್ರಷ್ಟಾಚಾರದಿಂದ ಹೆಸರು ಕೆಡೆಸಿಕೊಂಡು ಪದವಿ ಕಳೆದುಕೊಂಡಿರುವುದು ಜನರಿಗೆ ತಿಳಿದ ವಿಷಯ. ಜನರ ಮನದಲ್ಲಿ ಸರಕಾರದ ಕಾರ್ಯದ ಬಗ್ಗೆ ಮರು ವಿಶ್ವಾಸ ಹುಟ್ಟಿಸುವುದು ಮತ್ತು ಅಧಿಕಾರಿ ವರ್ಗದಲ್ಲಿ ಕೂಡ ಬೇರೂರಿರುವ ಲಂಚಗುಳಿತನವನ್ನ ಹೋಗಲಾಡಿಸುವುದು ಮೂನ್ ಜೆಇನ್ ಮುಂದಿರುವ ಮಹಾನ್ ಸವಾಲು. ಜನರ ವಿಶ್ವಾಸಗಳಿಸದೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಕಷ್ಟದ ಕೆಲಸ, ಭ್ರಷ್ಟಾಚಾರ ನಿರ್ಮೂಲವಾಗದೆ ಜನರು ಸರಕಾರವನ್ನ ನಂಬುವುದಿಲ್ಲ. ಸೌತ್ ಕೊರಿಯಾದ ಹೊಸ ಪ್ರೆಸಿಡೆಂಟ್ ಗೆ ಇದೊಂಥರ ಬಿಸಿ ತುಪ್ಪ. 
ಹಿರಿಯ ನಾಗರೀಕರ ವೇಶ್ಯಾವಾಟಿಕೆ:  ಸೌತ್ ಕೊರಿಯಾ ದೇಶದ ಜನಸಂಖ್ಯೆ ಐದು ಕೋಟಿ. ಇದರಲ್ಲಿ ಅರ್ಧಕ್ಕೂ ಹೆಚ್ಚು ಜನ ಹಿರಿಯ ನಾಗರಿಕರು ಅಂದರೆ 65 ವರ್ಷಕ್ಕೂ ಮೇಲ್ಪಟ್ಟವರು! ಶಾಲೆ ಕಾಲೇಜುಗಳಿಗೆ ಸೇರುವ ಮಕ್ಕಳ ಪ್ರಮಾಣ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ 20 ಪ್ರತಿಶತ ಕುಸಿದಿದೆ ಎಂದರೆ ಇಲ್ಲಿನ ಸಮಸ್ಯೆಯ ಅರಿವಾದೀತು. ಕೆಲಸ ಮಾಡಲು ಜನರಿಲ್ಲ ಹೀಗಾಗಿ ಸಾಯುವವರೆಗೂ ದುಡಿಯಲೇ ಬೇಕಾದ ಅನಿವಾರ್ಯತೆ ಸೌತ್ ಕೊರಿಯಾ ಜನರದ್ದು. ನಿವೃತ್ತಿ ಎನ್ನುವುದು ಇಲ್ಲಿ ಕೇವಲ ಒಂದು ಪದವಷ್ಟೇ ಆಗಿ ಉಳಿದಿದೆ. ತಮ್ಮ ಜೀವಿತದ ಅಷ್ಟು ವರ್ಷ ಕೆಲಸ ಮಾಡಿದ ನಂತರ ಸಿಗುವ ಪಿಂಚಣಿ ಹೊಟ್ಟೆಗಾದರೆ ಬಟ್ಟೆಗಿಲ್ಲ. ಬಟ್ಟೆಗಾದರೆ ಮಾತ್ರೆಗಿಲ್ಲ ಎನ್ನುವ ಪರಿಸ್ಥಿತಿ ಅವರದು. ಎರಡೂವರೆ ಕೋಟಿ ಹಿರಿಯ ನಾಗರೀಕರಲ್ಲಿ ಮೂವತ್ತು ಲಕ್ಷಕ್ಕೂ ಮೀರಿದ ಜನರ ಪಿಂಚಣಿ ಸೌತ್ ಕೊರಿಯಾದಲ್ಲಿ ಪರವಾಗಿಲ್ಲ ಎಂದು ಬದುಕಲು ಬೇಕಾಗಿರುವ ಹಣದ ಅರ್ಧದಷ್ಟು. ಕಡು ಬಡತನ ಇವರ ಜೀವನ ದೊಂದಿಗೆ ಮಿಳಿತವಾಗಿದೆ. ಮಕ್ಕಳು ತಮ್ಮ ತಮ್ಮ ದಾರಿ ಹಿಡಿದಿದ್ದಾರೆ, ಪತಿಯನ್ನ ಕಳೆದುಕೊಂಡ ವಿಧವೆಯರು, ಗಂಡನ ಬಿಟ್ಟವರು ಹೀಗೆ ನೂರಾರು ಕಾರಣದಿಂದ ಒಂಟಿ ಬಾಳುತ್ತಿರುವ 5೦ ವರ್ಷ ದಾಟಿದ ಮಹಿಳೆಯರು ಬದುಕಿಗೆ ವೇಶ್ಯಾವೃತ್ತಿಯನ್ನ ಆಯ್ದುಕೊಂಡಿದ್ದಾರೆ. ಸೌತ್ ಕೊರಿಯಾ ನಾಗರೀಕತೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. 'ಗ್ರಾನಿ ಪ್ರಾಸ್ಟಿಟ್ಯೂಷನ್' ಎನ್ನುವ ಹೊಸ ಪದ ಇಲ್ಲಿಂದ ಹುಟ್ಟಿದೆ. ಸಿಯೋಲ್ ನಗರದ ರಸ್ತೆಯಲ್ಲಿ ಗ್ರಾಹಕನಿಗೆ ಕಾಯುತ್ತ ನಿಂತ ಮಹಿಳೆಯರಲ್ಲಿ ಅತಿ ಹಿರಿಯ ವೇಶ್ಯೆಯ ವಯಸ್ಸು 82 ಎಂದರೆ ನೀವು ನಂಬಲೇಬೇಕು.!  ಚಾನೆಲ್ ನ್ಯೂಸ್ ಏಷ್ಯಾ ಮುಂದೆ ಯಾವುದೇ ಎಗ್ಗಿಲ್ಲದೆ  ತನ್ನ ಬದುಕಿನ ಬವಣೆ ಬಿಚ್ಚಿಟ್ಟು ಸೌತ್ ಕೊರಿಯಾದಲ್ಲಿ ನೆಡೆಯುತ್ತಿರುವ ಈ ಹೇಯ ಕೃತ್ಯವ ಜಗತ್ತಿಗೆ ತಿಳಿಸಿದ ಮೇಡಂ ಪಾರ್ಕ್ ವಯಸ್ಸು 78, ಈಕೆ ಈ ವೃತ್ತಿಯಲ್ಲಿ ಇರುವ ಎರಡನೇ ಹಿರಿಯ ನಾಗರೀಕಳು. ಈ ವೃತ್ತಿಯಲ್ಲಿ ತೊಡಗಿಸಿ ಕೊಂಡಿರುವ ಯಾವ ಮಹಿಳೆಯೂ ಐವತ್ತಕ್ಕಿಂತ ವಯಸ್ಸಿನಲ್ಲಿ ಚಿಕ್ಕವರಿಲ್ಲ. ಇಂತವರನ್ನ ಇಲ್ಲಿ' ಬಚ್ಚುಸ್ ಲೇಡೀಸ್'  (‘Bacchus ladies) ಎಂದು ಕರೆಯಲಾಗುತ್ತದೆ. 'ಬದುಕಬೇಕು, ಬದುಕಲು ಹಣಬೇಕು ನಮಗೆ ಸಿಗುತ್ತಿರುವ ಪಿಂಚಣಿ ಯಾವುದಕ್ಕೂ ಸಾಲದು ಎನ್ನುವುದು.'ಅನಿವಾರ್ಯತೆಯಿಂದ ಈ ವೃತ್ತಿಯಲ್ಲಿ ತೊಡಗಿಕೊಂಡಿರುವುದಾಗಿ ಇವರೆಲ್ಲಾ ಹೇಳುವ ಕತೆಗಳಲ್ಲಿ ಸಾಮಾನ್ಯ ದಾರ. 
ಸಿಯೋಲ್ ನಗರದ ಸೂಗ್ಸಿಲ್ ಸೈಬರ್ ಯೂನಿವರ್ಸಿಟಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವ ಲೀ ಹೊ-ಸುನ್ ಹಲವು ವರ್ಷಗಳ ಕಾಲ ಈ ಬಚ್ಚುಸ್ ಲೇಡೀಸ್ ಬಗ್ಗೆ ಅಧ್ಯಯನ ಮಾಡಿ ಕೊನೆಗೆ ಏಕೆ ಹೀಗೆ ಆಗುತ್ತಿದೆ ಎನ್ನುವುದರ ಬಗ್ಗೆ ತನ್ನ ನಿಲುವನ್ನ ಹೇಳಿದ್ದಾರೆ. ಆತನ ಪ್ರಕಾರ ಹಿಂದೆ ಒಬ್ಬರು ದುಡಿದು ತರುವ ಹಣದಲ್ಲಿ ಆರಾಮಾಗಿ ಬದುಕಬಹುದಿತ್ತು ಇಂದು ಇಬ್ಬರ ಆದಾಯದಲ್ಲೂ ಬದುಕಲು ಸಾಧ್ಯವಿಲ್ಲ. ಹಣದುಬ್ಬರ, ಕಂಡದೆಲ್ಲ ಬೇಕೆನ್ನುವ ಕೊಳ್ಳುಬಾಕ ಮನಸ್ಥಿತಿ. ಹೆತ್ತವರನ್ನ ಹೊರೆ ಎನ್ನುವಂತೆ ನೋಡುವ ಯುವ ಜನರ ಮನಸ್ಥಿತಿ ಇಂದಿನ ಸೌತ್ ಕೊರಿಯಾ ಪರಿಸ್ಥಿತಿಗೆ ಕಾರಣ ಎಂದು ಹೇಳುತ್ತಾ ಇದಕ್ಕೆ ಪರಿಹಾರ ಕೂಡ ಉಂಟು ನಮ್ಮ ಹಿರಿಯರ ಸಮಸ್ಯೆ ಬಗೆಹರಿಸಲು ಮೊದಲು ಯುವ ಜನರ ಸಮಸ್ಯೆ ಅವರ ಮಾನಸಿಕ ಸ್ಥಿತಿ ಸರಿ ಮಾಡಬೇಕು ಎನ್ನುತ್ತಾರೆ. ನಾಗರೀಕ ಸಮಾಜ ತಲೆತಗ್ಗಿಸ ಬೇಕಾದ ಸಮಸ್ಯೆ ಪರಿಹಾರ ಕಾಣದೆ ಹಲವಾರು ವರ್ಷಗಳಿಂದ ಸೌತ್ ಕೊರಿಯಾದಲ್ಲಿ ಹೆಚ್ಚು ಸದ್ದು ಮಾಡದೆ ಏನೂ ಆಗಿಲ್ಲವೇನೂ ಎನ್ನುವಂತೆ ನೆಡೆಯುತ್ತಿದೆ. ಹೊಸ ಪ್ರೆಸಿಡೆಂಟ್ ತಮ್ಮ ಸಮಸ್ಯೆಯ ಕಿಂಚಿತ್ತಾದರೂ ಪರಿಹರಿಸಿಯಾನು ಎನ್ನುವ ಆಶಾಭಾವ ಈ ಹಿರಿಯ ಜೀವಿಗಳದು. 
ಯುವ ಜನತೆಯಲ್ಲಿ ಕ್ಷೀಣಿಸುತ್ತಿರುವ ಸಂತಾನೋತ್ಪತ್ತಿ ಶಕ್ತಿ: ವರ್ಷದಿಂದ ವರ್ಷಕ್ಕೆ ಯುವ ಜನತೆಯಲ್ಲಿ ಸಂತಾನೋತ್ಪತ್ತಿ ಶಕ್ತಿ ಕಡಿಮೆಯಾಗುತ್ತ ಬರುತ್ತಿರುವ ಅಘಾತಕಾರಿ ವಿಷಯ ಇಲ್ಲಿನ ಸರಕಾರಕ್ಕೆ ದೊಡ್ಡ ತಲೆ ನೋವಾಗಿದೆ. ಇದಕ್ಕೆ ಪರಿಹಾರ ಹುಡುಕುವುದು ಒಂದು ದಿನದ ಕೆಲಸವಲ್ಲ. ಇದನ್ನ ಪರಿಹರಿಸಲು ಒಂದು ಜೆನರೇಶನ್ ಕಳೆದು ಹೋಗುತ್ತದೆ. ಸಮಸ್ಯೆಯ ಮೂಲ ಹುಡುಕಿ ಅದಕ್ಕೆ ಉತ್ತರ ಹುಡುಕಿದರೂ ಸದ್ಯದ ಜನಾಂಗ ಮಾತ್ರ ಈ ಸಮಸ್ಯೆಯಿಂದ ಹೊರ ಬರಲು ಸಾಧ್ಯವಿಲ್ಲ. 
ಹೆಚ್ಚುತ್ತಿರುವ ಬಡವ-ಶ್ರೀಮಂತರ ಅಂತರ: ಇದೊಂದು ಅಂತಾರಾಷ್ಟ್ರೀಯ ಸಮಸ್ಯೆ. ಇದರಿಂದ ಸೌತ್ ಕೊರಿಯಾ ಕೂಡ ಹೊರತಾಗಿಲ್ಲ. ತಂತ್ರಜ್ಞಾನ ಹೆಚ್ಚಾದಂತೆ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಲೇ ಹೋಗುತ್ತಿದೆ. 
ಸೌತ್ ಕೊರಿಯಾದ ಟೂರಿಸಂ ಕೊಲ್ಲುತ್ತಿರುವ ಚೀನಾ: ಪಕ್ಕದಲ್ಲಿ ನಾರ್ತ್ ಕೊರಿಯಾ ಹೆಸರಲ್ಲಿ ಕುಳಿತಿರುವ ತುಘಲಕ್ ರಾಜ ಯಾವ ಘಳಿಗೆಯಲ್ಲಿ ಬೇಕಾದರೂ ಕ್ಷಿಪಣಿ ಸಿಡಿಸಬಹದು ಎನ್ನುವ ಭಯದಲ್ಲಿ ಸೌತ್ ಕೊರಿಯಾ ತಾಡ್ (THAAD) ಎನ್ನುವ ಕ್ಷಿಪಣಿ ತಡೆ ಹಿಡಿಯುವ ಸಾಧನವನ್ನ ಯಾವಾಗ ಸ್ಥಾಪಿಸಿತೊ ಅಂದಿನಿಂದ ಚೀನಾ ಸೌತ್ ಕೊರಿಯಾ ಬಗ್ಗೆ ಮುನಿಸಿಕೊಂಡಿತು. ಏಷ್ಯಾ ಖಂಡದಲ್ಲಿ ನನ್ನ ಬಿಟ್ಟು ಬೇರಾರು ಅಧಿಪತ್ಯ ವಹಿಸುವುದು ಅಥವಾ ಆ ಬಗ್ಗೆ ಯೋಚಿಸುವುದು ಕೂಡ ಚೀನಾ ಸಹಿಸುವುದಿಲ್ಲ. ತನ್ನ ದೇಶದ ರಕ್ಷಣೆಗೆ ಮಾತ್ರ ಈ ರೀತಿ ಮಾಡಿದ್ದೇನೆ ಎಂದು ಸೌತ್ ಕೊರಿಯಾ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಚೀನಾವಿಲ್ಲ. ಕಳೆದ ವರ್ಷ 18 ಮಿಲಿಯನ್ ಪ್ರವಾಸಿಗರನ್ನ ಸಿಯೋಲ್ ಪಡೆದಿತ್ತು. ಅದರಲ್ಲಿ 8 ಮಿಲಿಯನ್ ಚೀನಿ ಪ್ರಜೆಗಳು ಎಂದರೆ ಚೀನಿಯರ ಪ್ರಾಭಲ್ಯ ಅರ್ಥವಾಗಬಹುದು. ಚೀನಾ ದೇಶ ತನ್ನ ಟೂರ್ ಆಪರೇಟರ್ ಗಳಿಗೆ ಸೌತ್ ಕೊರಿಯಾಗೆ ತನ್ನ ಜನರನ್ನ ಕಳಿಸಿದಂತೆ ಆದೇಶ ನೀಡಿದೆ. ಪ್ರವಾಸವನ್ನೇ ನೆಚ್ಚಿಕೊಂಡಿದ್ದ ಹಲವು ಸೌತ್ ಕೊರಿಯಾ ಕಂಪನಿಗಳಲ್ಲಿ ಆಗಲೇ ನಡುಕ ಶುರುವಾಗಿದೆ. ಹೊಸ ಪ್ರೆಸಿಡೆಂಟ್ ಮುಂದೆ ಚೀನಾ ದೇಶವನ್ನ ಓಲೈಸುವ ಜವಾಬ್ಧಾರಿ, ಸವಾಲು ನಿಂತಿದೆ. 
ಹಳಸಿದ ಅಮೇರಿಕಾ ಟ್ರೇಡ್ ಸಂಬಂಧ: ಟ್ರಂಪ್ ತನ್ನ ದೇಶ ಸೌತ್ ಕೊರಿಯಾ ದೊಂದಿಗೆ 2012 ರಲ್ಲಿ ಮಾಡಿಕೊಂಡಿದ್ದ 'ಫ್ರೀ ಟ್ರೇಡ್ ಪ್ಯಾಕ್ಟ್' ಅನ್ನು 'ಹಾರ್ರಿಬಲ್' ಎಂದು ಕರೆದಿದ್ದಾರೆ. ಆ ಮೂಲಕ 2012 ರಲ್ಲಿ ಮಾಡಿಕೊಂಡಿದ್ದ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ತಿಲಾಂಜಲಿ ಹೇಳುವ ಕುರುಹು ನೀಡಿದ್ದಾರೆ. ಹೊಸ ಪ್ರೆಸಿಡೆಂಟ್ ಟ್ರಂಪ್ ನ ಮುನಿಸು ಕಡಿಮೆ ಮಾಡಬೇಕು. ಜೊತೆ ಜೊತೆಗೆ ಇತರ ಸೌತ್ ಏಷ್ಯಾ ದೇಶಗಳ ಜೊತೆ ಭಾಂದವ್ಯ ವೃದ್ಧಿಸಿಕೊಳ್ಳಬೇಕು. 
ಕೊನೆ ಮಾತು: ಸದ್ಯಕ್ಕೆ ಸೌತ್ ಕೊರಿಯಾ ಆಂತರಿಕವಾಗಿ ಸಾಕಷ್ಟು ನೊಂದಿದೆ. ಎಲ್ಲಕ್ಕೂ ಮುಖ್ಯ ಇಲ್ಲಿನ ಜನತೆ ವರ್ಷದಿಂದ ವರ್ಷಕ್ಕೆ ಮುದಿಯಾಗುತ್ತಿದೆ. ದೇಶದಲ್ಲಿ ದುಡಿಯುವ ಕೈ ಕಡಿಮೆಯಾಗುತ್ತಿದೆ. ಹಿರಿಯ ನಾಗರೀಕರ ಸಮಸ್ಯೆಗಳು ಆಗಸ ಮುಟ್ಟಿವೆ. ವಾಣಿಜ್ಯ ವ್ಯಾಪಾರಗಳ ಒಪ್ಪಂದಗಳನ್ನ ನವೀಕರಿಸಬೇಕಿದೆ. ಎಲ್ಲಕ್ಕೂ ಮುಖ್ಯ ಆರ್ಥಿಕತೆ, ಅಭಿವೃದ್ಧಿಯ ಓಟದಲ್ಲಿ ಗೆದ್ದೂ ಸೋತದೆಲ್ಲಿ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ರೀತಿಯ ಆತ್ಮಾವಲೋಕನ ಮತ್ತು ಸಮಸ್ಯೆಯ ಮೂಲಕ್ಕೆ ಹೋಗದಿದ್ದರೆ ಪರಿಹಾರ ಶಾಶ್ವತವಾಗುವುದಿಲ್ಲ. ಆ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಮುಂದೆ ಇರುವ ಸಮಸ್ಯೆ ಬಹು ದೊಡ್ಡದು. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com