ವಲಯವಾರು ಬಜೆಟ್ ನೀಡುತ್ತಿದೆ ಉತ್ತಮ ಚಿತ್ರಣ, ಆದರೂ ಮಾರುಕಟ್ಟೆಯಲ್ಲೇಕೆ ನಿಲ್ಲದ ತಲ್ಲಣ?

2018-19 ರ ಬಜೆಟ್ ನ ಮುಕ್ಕಾಲು ಪಾಲು ಶಕ್ತಿ ಕೃಷಿ ವಲಯದಲ್ಲಿರುವ ನೂರಾರು ಹುಳುಕುಗಳಿಗೆ ಒಂದು ಪರಿಹಾರ ಹುಡುಕುವುದರಲ್ಲಿ ಕಳೆದಿದೆ ಅಂದರೆ ಅದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕೆಲಸ.
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
ವಿತ್ತೀಯ ವಲಯದಲ್ಲಿ ಒಂದು ಮಾತಿದೆ ಅದನ್ನ ಮುಕ್ಕಾಲು ಪಾಲು ಜನ ಕೇಳಿಯೇ ಇರುತ್ತೀರಿ. ಅಮೇರಿಕಾಕ್ಕೆ ನೆಗಡಿಯಾದರೆ ಇಡೀ ಪ್ರಪಂಚ ಸೀನುತ್ತದೆ ಎನ್ನುವುದು ಆ ಮಾತು. ಈಗ ಅದು ಇನ್ನಷ್ಟು ಬದಲಾಗಿದೆ ಅಮೇರಿಕಾ ಮಾತ್ರವಲ್ಲ ಇರಾನ್ ನಲ್ಲಿ ಜರಗುವ ಯಾವುದೊ ಒಂದು ಘಟನೆ ಇರಬಹದು, ನಾರ್ತ್ ಕೊರಿಯಾ ಗುಟುರು ಹಾಕಿದ್ದಿರಬಹದು ಷೇರು ಮಾರುಕಟ್ಟೆ ಕುಸಿಯಲು ಕಾರಣ ಬೇಕಷ್ಟೆ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಇಂದಿನ ಲೇಖನದ ಉದ್ದೇಶ ಷೇರುಮಾರುಕಟ್ಟೆಯ ಕುಸಿತ ಒಂದನ್ನೇ ಕುರಿತು ಹೇಳುವುದಲ್ಲ. ವಾರದ ಹಿಂದೆ ಬಜೆಟ್ ಮಂಡನೆಯಾಗಿದೆ ಅದರಲ್ಲಿ ಯಾವ ವಲಯ/ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಹೂಡಿಕೆದಾರ ಯಾವ ವಲಯದಲ್ಲಿ ತನ್ನ ಹಣವನ್ನ ಹೂಡಿಕೆ ಮಾಡಬಹದು ಎನ್ನುವುದನ್ನ ಕೂಡ ತಿಳಿಸುವುದು ಉದ್ದೇಶವಾಗಿದೆ. ಹಾಗಾದರೆ ತಡವಿನ್ನೇಕೆ? ವಲಯವಾರು ಬಜೆಟ್ ಪರಿಣಾಮಗಳತ್ತ ಒಂದು ಸುತ್ತ ಹಾಕೋಣ. 
ಕೃಷಿ ವಲಯ: 2018-19 ರ ಬಜೆಟ್ ನ ಮುಕ್ಕಾಲು ಪಾಲು ಶಕ್ತಿ ಕೃಷಿ ವಲಯದಲ್ಲಿರುವ ನೂರಾರು ಹುಳುಕುಗಳಿಗೆ ಒಂದು ಪರಿಹಾರ ಹುಡುಕುವುದರಲ್ಲಿ ಕಳೆದಿದೆ ಅಂದರೆ ಅದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕೆಲಸ. ಈ ಮಟ್ಟಿಗೆ ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ್ದು ಇದೆ ಮೊದಲು ಅಂದರೆ ಕೂಡ ತಪ್ಪಾಗಲಾರದು. ಕೃಷಿ ಉತ್ಪನ್ನಗಳ ಮೇಲಿನ ಬೆಂಬಲ ಬೆಲೆ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಿಸಿರುವುದು ಈ ಕ್ಷೇತ್ರಕ್ಕೆ ಆನೆಯ ಬಲವನ್ನ ತಂದುಕೊಟ್ಟಿದೆ. ಹೂಡಿಕೆದಾರರು ಕೃಷಿಗೆ ಸಂಬಂಧ ಪಟ್ಟ ಕಂಪನಿಗಳ ಷೇರಿನ ಮೇಲೆ ಹೂಡಿಕೆ ಮಾಡಬಹದು. ನೇರವಾಗಿ ಕೃಷಿಯಲ್ಲದಿರುವ ಟ್ರ್ಯಾಕ್ಟರ್ ಉತ್ಪಾದನೆ ಮಾಡುವ ಕಂಪನಿಗಳ ಷೇರಿನ ಮೇಲೆ ಕೂಡ ಹೂಡಿಕೆ ಮಾಡಬಹದು. ಅಲ್ಲದೆ ಆಗ್ರೋ ಕೆಮಿಕಲ್ ಕಂಪನಿಗಳ ಷೇರಿನ ಮೇಲಿನ ಹೂಡಿಕೆ ಕೂಡ ಲಾಭ ತಂದುಕೊಡಲಿವೆ. ತೋಟಗಾರಿಕೆಗೆ ಸಂಬಂಧಪಟ್ಟ ಉತ್ಪನ್ನಗಳ ಮೇಲಿನ ಹೂಡಿಕೆ ಕೂಡ ಉತ್ತಮವಾಗಿದೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಕೃಷಿ ಮತ್ತು ಕೃಷಿಗೆ ಸಂಬಂಧ ಪಟ್ಟ ಕಂಪನಿಗಳ ಮೇಲೆ ಹೂಡಿಕೆ ಮಾಡಿ ಅವುಗಳು ಉತ್ತಮ ಫಲಿತಾಂಶ ನೀಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದೆ. 
ವೈದ್ಯಕೀಯ ಕ್ಷೇತ್ರ:  ಇದನ್ನ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಹತ್ತಿರತ್ತಿರ 50 ಕೋಟಿ ಜನರ ಜೀವನದಲ್ಲಿ ಬದಲಾವಣೆ ತರಬಲ್ಲ ಮಹತ್ವಾಕಾಂಕ್ಷಿ ಯೋಜನೆಯನ್ನ ಕೇಂದ್ರ ಸರಕಾರ ಘೋಷಿಸಿದೆ. ಇದಾಗಲೆ ಮೋದಿ ಕೇರ್ ಎನ್ನುವ ಹೆಸರು ಪಡೆದು ಮನೆ ಮನೆಯ ಮಾತಾಗಿದೆ. ಐದು ಲಕ್ಷದವರೆಗೆ ಜನ ಸಾಮಾನ್ಯನ ವೈದ್ಯಕೀಯ ಖರ್ಚನ್ನ ಸರಕಾರ ಭರಿಸಲು ಸಿದ್ಧವಾಗಿದೆ. ಇದರಿಂದ ಸಹಜವಾಗೇ ವೈದ್ಯಕೀಯ ಸೇವೆ ನೀಡುವ ಮತ್ತು ಇದಕ್ಕೆ ಸಂಬಂಧ ಪಟ್ಟ ಫಾರ್ಮಾ ಕಂಪನಿಗಳ ಉತ್ಪನ್ನಗಳ ಬೇಡಿಕೆ ದ್ವಿಗುಣವಾಗಲಿದೆ. ಇಂತಹ ಕಂಪನಿಗಳ ಮೇಲಿನ ಹೂಡಿಕೆ ಕೂಡ ಮುಂಬರುವ ವರ್ಷಗಳಲ್ಲಿ ಲಾಭದಾಯಕವೆಂದು ಸಾಬೀತಾಗಲಿದೆ. 
ಇನ್ಶೂರೆನ್ಸ್ ವಲಯ: ಈ ಕ್ಷೇತ್ರ ಕೂಡ ಅತ್ಯಂತ ಬಿರುಸಿನಿಂದ ಅಭಿವೃದ್ಧಿ ಕಾಣಲಿದೆ. ಇದು ಕೇಂದ್ರ ಸರಕಾರ ಜನ ಸಾಮಾನ್ಯನಿಗೆ ಐದು ಲಕ್ಷ ವೈದ್ಯಕೀಯ ಖರ್ಚನ್ನ ಭರಿಸುವ ಯೋಜನೆಯೊಂದಿಗೆ ತಳುಕು ಹಾಕಿಕೊಂಡಿದೆ. ಕೇಂದ್ರ ಸರಕಾರ ಹಣವನ್ನ ತನ್ನ ಬೊಕ್ಕಸದಿಂದ ಕೊಡಲು ಸಾಧ್ಯವಿಲ್ಲದ ಮಾತು. ಅಲ್ಲದೆ ಎಷ್ಟು ಜನ ರೋಗದಿಂದ ಆಸ್ಪತ್ರೆ ಸೇರಬಹದು ಎನ್ನುವ ಅಂದಾಜು ಹೇಗಾದೀತು? ಕೇಂದ್ರ ಸರಕಾರ ತನ್ನ ಭರವಸೆ ಉಳಿಸಿಕೊಳ್ಳಲು ಐದು ಲಕ್ಷ ರೂಪಾಯಿಗೆ ವಿಮೆ ಮಾಡಿಸುತ್ತದೆ. ಆಸ್ಪತ್ರೆಗಳು ವಿಮಾ ಕಂಪನಿಗಳ ಮೂಲಕ ಆದ ಖರ್ಚನ್ನ ಪಡೆಯಬಹದು. ಈಗಾಗಲೇ ವಿಮೆಯ ಕ್ಷೇತ್ರ ಅತ್ಯಂತ ಸುರಕ್ಷಿತ ಮತ್ತು ಒಂದು ಮಟ್ಟದಲ್ಲಿ ಸ್ಥಿರವಾದ ಲಾಭವನ್ನ ಕೊಡುವ ಕ್ಷೇತ್ರ ಎಂದು ಹೆಸರಾಗಿದೆ ಇದರ ಜೊತೆಗೆ ಕೇಂದ್ರ ಸರಕಾರ ಹೊಸ ಆರೋಗ್ಯ ವಿಮೆಯ ಯೋಜನೆಯಿಂದ ಈ ಕ್ಷೇತ್ರ ಮತ್ತಷ್ಟು ಹುಲುಸಾಗಿ ಫಸಲು ತೆಗೆಯಲಿದೆ. ಈ ಕ್ಷೇತ್ರದ ಮೇಲೆ ನಿರ್ಭಿಡೆಯಿಂದ ಹೂಡಿಕೆ ಮಾಡಬಹದು. 
ಶಿಕ್ಷಣ ಕ್ಷೇತ್ರ: ಭಾರತದಲ್ಲಿ ಬುದ್ದಿವಂತರು ನಿಲ್ಲುವುದಿಲ್ಲ ಅವರು ಇಲ್ಲಿನ ಮೂಲಭೂತ ಶಿಕ್ಷಣ ಪಡೆದು ಮುಂದುವರೆದ ದೇಶದ ಪಾಲಾಗುತ್ತಾರೆ ಎನ್ನುವ ಮಾತಿದೆ. ಅದು ಈಗಾಗಲೇ ಅಲ್ಪಸ್ವಲ್ಪ ಬದಲಾವಣೆ ಕಾಣುತ್ತಿದೆ. ಕೇಂದ್ರ ಸರಕಾರ ರೈಸ್ (RISE ) ಅಂದರೆ ರಿವೈಟಲೈಸಿಂಗ್ ಇನ್ಫಾಸ್ಟ್ರಕ್ಚರ್ ಅಂಡ್ ಸಿಸ್ಟಮ್ ಇನ್ ಎಜುಕೇಶನ್ ಎನ್ನುವ ಮಹತ್ತರ ಯೋಜನೆ ಹಮ್ಮಿಕೊಂಡಿದೆ. ಮುಂದಿನ 4 ವರ್ಷದಲ್ಲಿ ಈ ಯೋಜನೆ ಅಡಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ವ್ಯಯಿಸಲು ಸಿದ್ಧವಿದೆ. ರಿಸರ್ಚ್ ಮತ್ತು ಡೆವಲಪ್ಮೆಂಟ್ ಗೆ ಹೆಚ್ಚಿನ ಮಹತ್ವವನ್ನ ನೀಡಲಾಗುತ್ತಿದೆ. ಇದು ಇಲ್ಲಿನ ಪ್ರತಿಭೆಯನ್ನ ಇಲ್ಲೇ ಉಳಿಸಿಕೊಳ್ಳಲು ಸಹಾಯಕವಾಗಲಿದೆ. ಶಿಕ್ಷಣ ಕ್ಷೇತ್ರದದಲ್ಲಿ ಕೂಡ ಹೂಡಿಕೆ ಮಾಡಬಹದು. 
ಟೆಲಿಕಾಂ ವಲಯ: ಟೆಲಿಕಾಂ ವಲಯಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಈ ಹಣವನ್ನ ಈ ಕ್ಷೇತ್ರದ ಮೂಲಭೋತ ಸೌಕರ್ಯ ಹೆಚ್ಛ್ಸಿಸಲು ಮತ್ತು ಗುಣಮಟ್ಟ ಕಾಯ್ದು ಕೊಳ್ಳಲು ನೀಡಲಾಗಿದೆ. ಈ ಕ್ಷೇತ್ರ ಕೂಡ ಅತ್ಯಂತ ಹೆಚ್ಚಿನ ಲಾಭ ತಂದು ಕೊಡುವ ಸಾಧ್ಯತೆಗಳಿವೆ. 
ಹಣಕಾಸು ವಲಯ: ಬ್ಯಾಂಕ್ ಮತ್ತು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಕಂಪನಿಗಳ ಮೇಲಿನ ಹೂಡಿಕೆ ಕೂಡ ಈ ಸಮಯದಲ್ಲಿ ಅತ್ಯಂತ ಸಮಂಜಸವಾಗಿದೆ. ಅನುತ್ಪಾದಿತ ಆಸ್ತಿ ಯ ಭಾರದಿಂದ ಕುಸಿದಿದ್ದ ಬ್ಯಾಂಕಿಂಗ್ ವ್ಯವಸ್ಥೆಗೆ ಬಂಡವಾಳ ಮರು ಹೂಡಿಕೆ ಮೂಲಕ ಕೇಂದ್ರ ಸರಕಾರ ಹೊಸ ಚೈತನ್ಯವನ್ನ ನೀಡಿದೆ. ಹೀಗಾಗಿ ಈ ಈ ವಲಯದ ಮೇಲೆ ಯಾವುದೇ ಭಯ ಮತ್ತು ಸಂಶಯವಿಲ್ಲದೆ ಹೂಡಿಕೆ ಮಾಡಬಹದು. 
ಗಮನಿಸಿ ಇದೊಂದು ಚೈನ್ ಲಿಂಕ್ ಇದ್ದಹಾಗೆ ಒಂದು ವಲಯ ಚನ್ನಾಗಿ ಅಭಿವೃದ್ಧಿ ಹೊಂದಿದರೆ ಅದರ ಉತ್ತಮ ಪರಿಣಾಮ ಇನ್ನೊಂದು ವಲಯದ ಮೇಲೂ ಆಗುತ್ತದೆ. ಆ ನಿಟ್ಟಿನಲ್ಲಿ ಸಧ್ಯದ ಮಟ್ಟಿಗೆ ಎಲ್ಲಾ ಕ್ಷೇತ್ರದಲ್ಲೂ ಪಾಸಿಟಿವ್ ಮೂಡ್ ಇದೆ. ಬುದ್ದಿವಂತ ಹೂಡಿಕೆದಾರರು ಇದರ ಪ್ರಯೋಜನ ಪಡೆಯುತ್ತಾರೆ ಮತ್ತು ಪಡೆಯಬೇಕು. 
ಸರಿ ಹಾಗಾದರೆ ಬಜೆಟ್ ನಂತರ ಮಾರುಕಟ್ಟೆ ಕುಸಿದಿದೆ ಹತ್ತಿರತ್ತಿರ ಐದು ಲಕ್ಷ ಕೋಟಿ ರೂಪಾಯಿ ಷೇರು ಮಾರುಕಟ್ಟೆ ಒಂದೇ ದಿನದಲ್ಲಿ ಕಳೆದುಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಕಾಣದ ಕುಸಿತದ ಮೌಲ್ಯ ಒಂದೇ ದಿನದಲ್ಲಿ ಆಗಲು ಕಾರಣವೇನು? ಬಜೆಟ್ ಬಹುಪಾಲು ಎಲ್ಲಾ ಕ್ಷೇತ್ರಕ್ಕೂ ಪಾಸಿಟಿವ್ ಕಂಪನವನ್ನೇ ಹರಿಸಿದೆ ಹೀಗಿದ್ದೂ ಮಾರುಕಟ್ಟೆ ಕುಸಿದಿದ್ದೇಕೆ?? ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಮೇಲಿನ ತೆರಿಗೆ ನೀತಿ ಎನ್ನುವುದು ಹೊಸ ಕೂಗು. ಕಾರಣ ಅದಲ್ಲ. ಇದಕ್ಕೆ ನಿಜವಾದ ಕಾರಣಗಳು ಇಂತಿವೆ 
1) ಒಂದೇ ಸಮನೆ ಹೆಚ್ಚುತ್ತಿರುವ ತೈಲ ಬೆಲೆ. 2) ಅಮೇರಿಕಾದಲ್ಲಿ ಹೆಚ್ಚಿರುವ ಬಾಂಡ್ ಮೇಲಿನ ಲಾಭ 3) ಏರುತ್ತಿರುವ ತೈಲ ಬೆಲೆಯ ಪರಿಣಾಮವಾಗಿ ಭಾರತದಲ್ಲಿ ಹೆಚ್ಚಾಗಿರುವ ಹಣದುಬ್ಬರ. 4) ಎಲ್ಲದಕ್ಕೂ ಭಾವನಾತ್ಮಕವಾಗಿ ವಿವೇಚನೆಯಿಲ್ಲದೆ ಸ್ಪಂದಿಸುವ ಮನುಷ್ಯ ಸಹಜ ಗುಣ. ಇನ್ನೂ ಹತ್ತಾರು ಕಾರಣಗಳನ್ನ ಕೊಡಬಹದು ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ವಿಷಯ ತಾತ್ಕಾಲಿಕ ಕಾರಣ ಮಾಹಿತಿಯ ಕೊರತೆಯಿಂದ ಉಂಟಾದ ಸಮಸ್ಯೆ. ಆದರೇನು ಅದು ಕೂಡ ಮಾರುಕಟ್ಟೆ ಕುಸಿಯಲು ಒಂದು ಕಾರಣಾವಾಯಿತು.  
ಸಿನಿಕತೆ ಬಿಟ್ಟು ಪ್ರಾಯೋಗಿಕ ದೃಷ್ಟಿಕೋನದಿಂದ ನೋಡಿದರೆ ಇದೊಂದು ವಿನ್ ವಿನ್ ಸನ್ನಿವೇಶ. 2019 ರಲ್ಲಿ ಚುನಾವಣೆ ಬರಲಿದೆ ಈ ವರ್ಷ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಿರತೆಯನ್ನ ನಿರೀಕ್ಷಿಸಬಹದು. ಗಾಳಿ ಮಾತು ಊಹಾಪೋಹಗಳಿಗೆ ಕಿವಿಗೊಡದೆ ಮೇಲೆ ಹೇಳಿದ ಯಾವುದೇ ವಲಯದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡುತ್ತಿರುವ ಕಂಪನಿಯ ಪೂರ್ವಾಪರ ತಿಳಿಯಲು ಮಾತ್ರ ಮರೆಯಬೇಡಿ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com