ಅಮೇರಿಕಾ-ಚೀನಾ ಟ್ರೇಡ್ ವಾರ್; ಹೆಚ್ಚು ಕಳೆದುಕೊಳ್ಳುವವರು ಯಾರು?

ಇವತ್ತಿನ ಅಂಕಣದ ತಲೆಬರಹ ಇದೇಕೆ ಹೀಗಿದೆ? ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಹಳ ಸರಳ. ಟ್ರೇಡ್ ವಾರ್ ಎನ್ನುವುದು ಒಂದು ದೇಶ ಇನ್ನೊಂದು ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅಥವಾ...
ಅಮೇರಿಕಾ- ಚೀನಾ ಟ್ರೇಡ್ ವಾರ್! ಹೆಚ್ಚು ಕಳೆದುಕೊಳ್ಳುವವರು ಯಾರು?
ಅಮೇರಿಕಾ- ಚೀನಾ ಟ್ರೇಡ್ ವಾರ್! ಹೆಚ್ಚು ಕಳೆದುಕೊಳ್ಳುವವರು ಯಾರು?
ಇವತ್ತಿನ ಅಂಕಣದ ತಲೆಬರಹ ಇದೇಕೆ ಹೀಗಿದೆ? ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಹಳ ಸರಳ. ಟ್ರೇಡ್ ವಾರ್ ಎನ್ನುವುದು ಒಂದು ದೇಶ ಇನ್ನೊಂದು ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅಥವಾ ಆ ದೇಶದ ಬೆಳವಣಿಗೆಯ ವೇಗವನ್ನ ತಡೆಯಲು ನೆಡೆಸುವ ಅತ್ಯಂತ ಕೀಳು ದರ್ಜೆಯ ರಾಜಕೀಯದಾಟ. 
ಹೌದು ಹೆಸರಿಗೆ ಇದು ಟ್ರೇಡ್ ವಾರ್ ಆದರೆ ಇದರ ಹಿಂದಿನ ಕಾರಣಗಳು ಮಾತ್ರ ರಾಜಕೀಯ ಪ್ರೇರಿತ. ಅಮೇರಿಕಾ ಇತ್ತೀಚಿನ ದಿನಗಳಲ್ಲಿ ಚೀನಾ ದೇಶದ ಹಲವು ವಸ್ತುಗಳ ಮೇಲೆ ಸುಂಕ ಏರಿಸಿದ್ದು ಅದಕ್ಕೆ ಸೆಡ್ಡು ಹೊಡೆದು ಚೀನಾ ಕೂಡ ಅಮೆರಿಕಾದ ಉತ್ಪನ್ನಗಳ ಮೇಲೆ ನಿರ್ಬಂಧ/ ಹೆಚ್ಚಿನ ತೆರಿಗೆ ಹಾಕಿದ್ದು ಕೂಡ ಇವತ್ತಿಗೆ ಹೊಸ ವಿಷಯವೇನೂ ಅಲ್ಲ. ಈ ರೀತಿಯ ಹೊಡೆದಾಟದಲ್ಲಿ ಅಮೇರಿಕಾ ಮತ್ತು ಚೀನಾ ಎರಡೂ ದೇಶಗಳು ನಷ್ಟ ಅನುಭವಿಸುವುದು ಗ್ಯಾರಂಟಿ. ಹೆಚ್ಚು ನಷ್ಟ ಅನುಭವಿಸುವರು ಯಾರು? ಎನ್ನುವುದಷ್ಟೆ ಬಾಕಿ ಉಳಿದಿರುವುದು ಹೀಗಾಗಿ ತಲೆಬರಹ ಹೆಚ್ಚು ಕಳೆದು ಕೊಳ್ಳುವವರು ಯಾರು? ಎನ್ನುವ ಪ್ರಶ್ನೆಯನ್ನ ಹೊತ್ತಿದೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಇವೆರಡು ದೇಶಗಳ ನಡುವಿನ ಟ್ರೇಡ್ ವಾರ್ ಬೇರೆ ದೇಶಗಳ ಮೇಲೂ ಪರಿಣಾಮ ಬೀರಲಿದೆ. ಇಂದಿನ ಅಂಕಣದಲ್ಲಿ ಈ ಟ್ರೇಡ್ ವಾರ್ ನಿಂದ ಏನೇನಾಗಬಹದು ತಿಳಿದುಕೊಳ್ಳೋಣ. 
ಒಂದು ದೇಶ ಇನ್ನೊಂದು ದೇಶಕ್ಕೆ ಬೇಕಾದ ವಸ್ತುವನ್ನ ಕಳಿಸುವ ಕ್ರಿಯೆಗೆ ರಫ್ತು (ಎಕ್ಸ್ಪೋರ್ಟ್) ಎನ್ನುತ್ತೇವೆ. ಇನ್ನೊಂದು ದೇಶದಿಂದ ವಸ್ತುಗಳ ತರಿಸಿಕೊಳ್ಳುವ ಕ್ರಿಯೆಗೆ ಆಮದು (ಇಂಪೋರ್ಟ್) ಎನ್ನುತ್ತೇವೆ. ಯಾವುದೇ ದೇಶ ತನ್ನ ದೇಶಕ್ಕೆ ಬರುವ ವಸ್ತುವಿನ ಮೇಲಿನ ಸುಂಕವನ್ನ ಹೆಚ್ಚಿಸಿದರೆ ಅದು ಅಪೊರೋಕ್ಷವಾಗಿ ಆ ದೇಶದೊಂದಿಗೆ ವ್ಯಾಪಾರ ಮಾಡಲು ಇಚ್ಛಿಸುವುದಿಲ್ಲ ಅಥವಾ ವ್ಯಾಪಾರ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಉದ್ದೇಶವಾಗಿರುತ್ತದೆ. ಹೀಗೆ ತನ್ನ ವಸ್ತುಗಳ ಮೇಲೆ ಹೆಚ್ಚಿದ ಸುಂಕದ ಕಾರಣ ಆ ದೇಶದ ವ್ಯಾಪಾರ/ರಫ್ತು ಕುಸಿಯುತ್ತದೆ. 
ಹಿಂದೆಲ್ಲ ಅಮೇರಿಕಾ ನೆಡೆದದ್ದೇ ದಾರಿ ಎನ್ನುವಂತಿತ್ತು ಆದರೆ ಈಗ ಕಾಲ ಬದಲಾಗಿದೆ. ರಫ್ತು ಕುಸಿದ ದೇಶ ತನ್ನ ದೇಶಕ್ಕೆ ಬರುತ್ತಿದ್ದ ವಸ್ತುವಿನ ಮೇಲಿನ ಸುಂಕ ಹೆಚ್ಚಿಸಿ ಯಾವ ದೇಶ ತನ್ನ ರಫ್ತು ಕುಸಿಯುವಂತೆ ಮಾಡಿತು ಆ ದೇಶಕ್ಕೆ ಮರು ಉತ್ತರ ನೀಡುತ್ತದೆ . ಈ ಎಲ್ಲಾ ಒಟ್ಟು ಕ್ರಿಯೆಗೆ ಟ್ರೇಡ್ ವಾರ್ ಎನ್ನುತ್ತೇವೆ . ಉದಾಹರಣೆ ನೋಡೋಣ . ಅಮೇರಿಕಾ  ಚೀನಾ ದೇಶದಿಂದ ಹಲವಾರು ವಸ್ತುಗಳನ್ನ ಆಮದು ಮಾಡಿಕೊಳ್ಳುತ್ತದೆ. ಕಾರಣವೇನೇ ಇರಲಿ ಅಮೇರಿಕಾ ಹೀಗೆ ತರಿಸಿಕೊಳ್ಳುವ ಹಲವು ಉತ್ಪನ್ನಗಳ ಮೇಲೆ ೨೫ ಪ್ರತಿಶತ ಸುಂಕವನ್ನ ಹೆಚ್ಚಿಸಿದೆ . ಹೀಗಾಗಿ ಅಮೇರಿಕಾ ಪ್ರಜೆಗಳು ಆ ವಸ್ತುಗಳ ಕೊಳ್ಳಲು ಹೆಚ್ಚಿನ ಹಣ ತೆರಬೇಕು . ಸಾಧಾರಣವಾಗಿ ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರ ಕುಸಿಯುತ್ತದೆ . ಚೀನಾ ಕೂಡ ಅಮೇರಿಕಾ ದೇಶದಿಂದ ಹಲವು ಉತ್ಪನ್ನಗಳ ತರಿಸಿಕೊಳ್ಳುತ್ತದೆ . ಇದೀಗ ಚೀನಾ ಕೂಡ ಅವುಗಳ ಮೇಲೆ ಸುಂಕವನ್ನ ಹೆಚ್ಚಿಸಿದೆ . ಇದಕ್ಕೆ ಟ್ರೇಡ್ ವಾರ್ ಎಂದು ಮಾರುಕಟ್ಟೆಯಲ್ಲಿ ಹೆಸರಿಟ್ಟಿದ್ದಾರೆ . ಇರಲಿ . 
ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳುತ್ತಾರೆ. We are not in a trade war with China, that war was lost many years ago by the foolish, or incompetent, people who represented the U.S. Now we have a Trade Deficit of $500 Billion a year, with Intellectual Property Theft of another $300 Billion. We cannot let this continue!.  ಅವರ ಪ್ರಕಾರ ಚೀನಾ ದೇಶ ಅಮೇರಿಕಾ ದೇಶದ ಹಲವು ಉತ್ಪನ್ನಗಳನ್ನ ನಕಲು ಮಾಡುತ್ತದೆ ಜೊತೆಗೆ ಅದು ಇತ್ತೀಚಿಗೆ ಸೈಬರ್ ವಾರ್ ನಲ್ಲಿ ಕೂಡ ತೊಡಗಿಕೊಂಡಿದೆ . ಇಂತಹ ಚೀನಾವನ್ನ ಸುಮ್ಮನೆ ಬಿಡಲು ಹೇಗೆ ಸಾಧ್ಯ ? ಇದು ಟ್ರೇಡ್ ವಾರ್ ಅಲ್ಲ . ಇದು ಚೀನಾಕ್ಕೆ ನೀಡುತ್ತಿರುವ ಶಿಕ್ಷೆ. 
ಟ್ರಂಪ್ ಇಲ್ಲಿ ಒಂದು ದೊಡ್ಡ ವಿಷಯವನ್ನ ಮರೆತಿದ್ದಾರೆ. ಇಲ್ಲಿ ಅವರ ಎದುರಾಳಿ ಇರಾಕ್, ಸಿರಿಯಾ ಅಥವಾ ಇರಾನ್ ನಂತಹ ಪುಟ್ಟ ದೇಶವಲ್ಲ. ಅದರ ಎದುರಾಳಿ ಚೀನಾ ಎನ್ನುವ ಜಗತ್ತಿಗೆ ಉತ್ಪನ್ನಗಳನ್ನ ಮಾರುವ ದೈತ್ಯ ಕಾರ್ಖಾನೆ. ಅಮೇರಿಕಾ ಶುರು ಮಾಡಿರುವ ಈ ಆಟದಲ್ಲಿ ಯಾರಿಗೆ ಎಷ್ಟು ನಷ್ಟ ಎನ್ನುವುದನ್ನ ನೋಡೋಣ ಬನ್ನಿ. 
ಅಮೆರಿಕಾಕ್ಕೆ ಏನು ನಷ್ಟ? 
  1. ಸೋಯಾಬಿನ್ ಅಮೇರಿಕಾದಿಂದ ಹೆಚ್ಚು ರಫ್ತು ಮಾಡಲ್ಪಡುವ ಕೃಷಿ ಉತ್ಪನ್ನ. ಹೊಸದಾಗಿ ಹೇಳುವುದಿನ್ನೇನು ಎಲ್ಲರ ಊಹೆಯಂತೆ ಚೀನಾ ಇದರ ಅತಿ ಹೆಚ್ಚು ಪಾಲುದಾರ. ಇದೀಗ ಅಮೆರಿಕಾದ ನೆಡೆಗೆ ಹೊಡೆತ ಕೊಟ್ಟಿರುವ ಚೀನಾದ ನೆಡೆಯಿಂದ ಅಮೆರಿಕಾದ 18 ರಾಜ್ಯಗಳಲ್ಲಿ ಲಕ್ಷಾಂತರ ಜನ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸೋಯಾಬಿನ್ ಜೊತೆಗೆ ಸೇಬು ಹಣ್ಣಿನ ಉತ್ಪಾದಕರಿಗೂ ಭಾರಿ ಹೊಡೆತ ಬೀಳಲಿದೆ. 
  2. ಟ್ರೇಡ್ ವಾರ್ನಿಂದ ಅಮೇರಿಕಾದಲ್ಲಿ ಒಟ್ಟು 1300 ಪದಾರ್ಥಗಳ ಮೇಲಿನ ಬೆಲೆ ಹೆಚ್ಚಾಗಿದೆ. ನಿನ್ನೆಯ ತನಕ ಕೊಡುತ್ತಿದ್ದ ಬೆಲೆ ಇಂದಿನಿಂದ ಒಮ್ಮೆಲೆ ಹೆಚ್ಚಾಗಿದೆ. ಇದರ ಬಿಸಿ ನೇರವಾಗಿ ತಟ್ಟುವುದು ಜನ ಸಮಾನ್ಯರಿಗೆ. ಚೀನಾ ಬಹಳ ಬುದ್ದಿವಂತಿಕೆಯಿಂದ ಇಂತಹ ಉತ್ಪನ್ನಗಳ ಮೇಲೆ ಬೆಲೆ ಏರಿಸಿದೆ ಜನಸಾಮಾನ್ಯರ ನಿತ್ಯದ ಬಳಕೆಯ ವಸ್ತುಗಳ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. 
  3. ಪೌಲ್ಟ್ರಿ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ, ಹಾಗೆಯೇ ಸಾಕು ಪ್ರಾಣಿಗಳ ಆಹಾರದ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ. 
  4. ಕೆಲವು ಫ್ರೂಟ್ಸ್ ಗಳಾದ ಸೇಬು, ಬೆಣ್ಣೆ ಹಣ್ಣು ಗಳ ಬೆಲೆ ಹೆಚ್ಚಾಗಲಿದೆ ಜೊತೆಗೆ ತರಕಾರಿಯ ಬೆಲೆಯೂ ಹೆಚ್ಚಾಗಲಿದೆ. 
  5. ಡೈರಿ ಉತ್ಪನ್ನಗಳಾದ ಬೆಣ್ಣೆ , ಮೊಸರು ಮತ್ತು ಕ್ರೀಮ್ಗಳು ಇನ್ನಷ್ಟು ಹೆಚ್ಚಾಗಲಿವೆ. 
  6. ಸಮುದ್ರದ ಉತ್ಪನ್ನಗಳಾದ ಮೀನು ಶೈತಿಕರಿಸಿ ಇಡಲಾಗುವ ಎಲ್ಲಾ ಸಮುದ್ರದ ಪದಾರ್ಥಗಳ ಬೆಲೆ ಕೂಡ ಹೆಚ್ಚಾಗಲಿದೆ. 
  7. ತಂಬಾಕು ಪದಾರ್ಥಗಳು, ಜೊತೆಗೆ ವೈನ್, ಬಿಯರ್ ವಿಸ್ಕಿ ಗಳ ಬೆಲೆ ಕೂಡ ಮುಗಿಲ ಮುಟ್ಟಲಿವೆ. 
  8. ಸಣ್ಣ ಪ್ಯಾಸೆಂಜರ್ ಕಾರುಗಳ ಬೆಲೆ ಹೆಚ್ಚಾಗಲಿದೆ. 
ಚೀನಾದಲ್ಲಿ  ಯಾವ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ ? 
ಮೊದಲೆ ಹೇಳಿದಂತೆ ಹೊಡೆದಾಟಕ್ಕೆ ನಿಂತರೆ ಒಬ್ಬರಿಗೆ ಮಾತ್ರ ನಷ್ಟವಲ್ಲ. ಹೊಡೆದಾಟದಲ್ಲಿ ಭಾಗಿಯಾದ ಎಲ್ಲರೂ ಅದರ ನಷ್ಟವನ್ನ ಅನುಭವಿಸಲೇ ಬೇಕು. ಚೀನಾ ಕೂಡ ಇದಕ್ಕೆ ಹೊರತಲ್ಲ. ಚೀನಾದಲ್ಲಿ ಕೆಳಕಂಡ ಪದಾರ್ಥಗಳ ಬೆಲೆ ಹೆಚ್ಚಾಗಿದೆ. 
  1. ಡೀಸೆಲ್ ವಾಹನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಹಲವು ಏರ್ ಕ್ರಾಫ್ಟ್ ಉತ್ಪನ್ನಗಳು, ಬೋಟ್ ಮತ್ತು ಕ್ರೂಸ್ ಶಿಪ್ ಗಳು ನಿನ್ನೆಗಿಂತ ಇಂದು ಹೆಚ್ಚು ಬೆಲೆ ಹೊಂದಿವೆ. 
  2. ಸ್ಪೇಸ್ ಕ್ರಾಫ್ಟ್ ಮತ್ತು ಅದರ ತಂತ್ರಜ್ಞಾನಕ್ಕೆ ಹೆಚ್ಚಿನ ಬೆಲೆ ತೆರಬೇಕು. ಸ್ಪೇಸ್ ಕ್ರಾಫ್ಟ್ ಲಾಂಚ್ ವೆಹಿಕಲ್ಸ್ ಮತ್ತು ಕಮ್ಯುನಿಕೇಷನ್ ಸ್ಯಾಟಲೈಟ್ಸ್ ದುಬಾರಿಯಾಗಲಿವೆ. 
  3. ಹಲವು ಕೈಗಾರಿಕಾ ಉತ್ಪನ್ನಗಳ ಬೆಲೆಯೇರಲಿದೆ. ಉದಾಹರಣೆಗೆ ರೈಲ್ವೆ ಟ್ರ್ಯಾಕ್, ಹೈಡ್ರಾಲಿಕ್ ಟರ್ಬೈನ್ಸ್  ಇತ್ಯಾದಿ. 
  4. ಹಲವು ವೈದ್ಯಕೀಯ ಉತ್ಪನ್ನಗಳ ಬೆಲೆ ಕೂಡ ಹೆಚ್ಚಾಗಲಿದೆ. ಉದಾಹರಣೆಗೆ ಆಪ್ಟಿಕಲ್ , ಅನಸ್ತೇಶಿಯಾ ನೀಡುವ ಉಪಕರಣ, ಕ್ಷ-ಕಿರಣ, ಪೇಸ್ ಮೇಕರ್ ಇತ್ಯಾದಿ. 
ಗಮನಿಸಿ ನೋಡಿ ಅಮೇರಿಕಾದಲ್ಲಿ ಜನ ಸಾಮಾನ್ಯನಿಗೆ ನಿತ್ಯ ಬೇಕಾಗುವ ಹಲವಾರು ಉತ್ಪನ್ನಗಳ ಬೆಲೆ ಹಚ್ಚಾಗಿದೆ. ಒಟ್ಟು 1300 ಪದಾರ್ಥಗಳ ಮೇಲಿನ ಬೆಲೆ ಹೆಚ್ಚಾಗಲಿದೆ ಎನ್ನುತ್ತದೆ ಅಧ್ಯಯನ. ಚೀನಾ ದೇಶದಲ್ಲಿ ಕೂಡ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಆದರೆ ಅದು ಅಮೇರಿಕಾದಲ್ಲಿ ಜನ ಸಾಮಾನ್ಯನಿಗೆ ನಿತ್ಯ ಜೀವನದಲ್ಲಿ ಎಷ್ಟು ತೊಂದರೆಯಾಗುತ್ತದೆ ಅಷ್ಟು ದೊಡ್ಡ ಮಟ್ಟದಲ್ಲಿ ಖಂಡಿತಾ ಅಲ್ಲ. ಹೀಗಾಗಿ ನೋವು ಅಮೇರಿಕಾಕ್ಕೆ ಹೆಚ್ಚು ಎಂದು ಹೇಳಬಹದು. ಆದರೆ ಇದು ಬಹಳ ಸಮಯದ ವರೆಗೆ ಮುಂದುವರಿದರೆ ಯಾರಿಗೂ ಒಳ್ಳೆಯದಲ್ಲ. ಚೀನಾ ಮತ್ತು ಅಮೇರಿಕಾ ದೇಶಗಳು ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕುತ್ತವೆ. ಜಗತ್ತಿನ ಎರಡು ದೊಡ್ಡ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲಿದರೆ ಉಳಿದ ದೇಶಗಳು ಕೂಡ ಸಹಜವಾಗೇ ಸೊರಗಲಿವೆ. ಇದು ಗ್ಲೋಬಲ್ ರಿಸೆಶನ್ ಗೆ ದಾರಿ ಕೂಡ ಆಗಬಲ್ಲದು. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com