ಏನಿದು ಹೊಸ ಪಿಡುಗು? ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಎನ್ನುವ ಗುಡುಗು!

ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಸೃಷ್ಟಿಕರ್ತರು ಯಾರು ಅವರ ಲೈನ್ ಆಫ್ ಬಿಸಿನೆಸ್ ಯಾವುದು ಇತ್ಯಾದಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಏನಿದು ಹೊಸ ಪಿಡುಗು? ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಎನ್ನುವ ಗುಡುಗು!
ಏನಿದು ಹೊಸ ಪಿಡುಗು? ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಎನ್ನುವ ಗುಡುಗು!
ಬೆಂಗಳೂರು ನಗರದಲ್ಲಿ ಮನೆಯ ಮುಂದೆ ಎರಡೆರಡು ಕಾರು ಇಂದು ಸಾಮಾನ್ಯ ಎನ್ನುವ ಮಟ್ಟಕ್ಕೆ ಕಾಣಸಿಗುತ್ತವೆ. ಕಾರಿನ ಮೇಲೆ ಕೋಟಿ ರೂಪಾಯಿ ಹಣವನ್ನ ಹಾಕಿ ಅದನ್ನ ರಸ್ತೆಯ ಬದಿಯಲ್ಲಿ ನಿಲ್ಲಿಸುವುದನ್ನ ಕೂಡ ಕಾಣುತ್ತೇವೆ. ಇಂಥವರ ಸಂಖ್ಯೆ ಎಷ್ಟಿದೆಯೂ ಅದಕ್ಕೂ ನೂರಾರು ಪಟ್ಟು ಜನ ತಿಂಗಳ ಕೊನೆಗೆ ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಹಣವಿಲ್ಲದೆ ನಿ ನಿಟ್ಟುಸಿರು ಬಿಡುವುದು ಕೂಡ ಈ ನಗರದಲ್ಲಿ ಅತಿ ಸಾಮಾನ್ಯ. 
ಇದು ಬೆಂಗಳೂರು ನಗರದ ಕತೆಯಷ್ಟೇ ಅಲ್ಲ , ಇದು ಜಗತ್ತಿನ ಎಲ್ಲಾ ಮಹಾನಗರಗಳ ಕತೆ. ಮುಂಬೈ ಮತ್ತು ದೆಹಲಿ ನಗರಗಳ ಕತೆ ಇನ್ನೂ ಘೋರ. ಅಲ್ಲಿ ಮರುಗುವಿಕೆಗೆ ಜಾಗವೇ ಇಲ್ಲ. ಡಾರ್ವಿನ್ ಮಹಾಶಯನ ''ಬಲಿಷ್ಠವಾದವುಗಳ ಉಳಿವು'' ಎನ್ನುವ ಸಿದ್ಧಾಂತವನ್ನ ಪ್ರಾಯೋಗಿಕವಾಗಿ ಮಾಡಲು ಇರುವ ನೆಲೆ ಎನ್ನುವ ಭಾವನೆ ನಿಮಗೆ ಬರುತ್ತದೆ. ಮೆಕ್ಸಿಕೋ ದೇಶಕ್ಕೋ ಅಥವಾ ಬ್ರೆಜಿಲ್ ದೇಶಕ್ಕೂ ಅಥವಾ ದಕ್ಷಿಣ ಅಮೆರಿಕಾದ ಕೆಲವು ದೇಶಗಳಿಗೆ ಭೇಟಿ ನೀಡಿ ಬಂದರೆ ನಮ್ಮ ಮುಂಬೈ ಅಥವಾ ದೆಹಲಿ ಎಷ್ಟೋ ವಾಸಿ ಎಂದು ನೀವು ಉಸುರುತ್ತೀರಿ!. ಇಷ್ಟೆಲ್ಲಾ ಹೋಲಿಕೆ ಕೊಡುತ್ತ ಬಂದುದರ ಅರ್ಥ ಬಹಳ ಸರಳ. ಜಗತ್ತಿನೆಲ್ಲೆಡೆ ಅತ್ಯಂತ ವೇಗವಾಗಿ ಅಸಮಾನತೆ ಎನ್ನುವ ಪಿಡುಗು ಹಬ್ಬುತ್ತಿದೆ. 
ಯೂರೋಪಿನಲ್ಲಿ ಇದರ ಪರಿಣಾಮ ಆಗಲೇ ಕಣ್ಣಿಗೆ ರಾಚಲು ಶುರುವಾಗಿದೆ. ಮಧ್ಯಮವರ್ಗ ಎನ್ನುವ ಪದ ದಿನ ಕಳೆದಂತೆ ಅರ್ಥ ಕಳೆದುಕೊಳ್ಳುತ್ತಾ ಹೋಗುತ್ತದೆ. ಯಾರನ್ನ ಮಧ್ಯಮವರ್ಗ ಎಂದು ವರ್ಗಿಕರಿಸಬಹದು ಎನ್ನುವುದಕ್ಕೆ ಹಣಕ್ಲಾಸು ಅಂಕಣದಲ್ಲಿ ಈ ಹಿಂದೆ ಬರೆದಿದ್ದ ಈ ಲೇಖನ ಓದಿ. ಜಗತ್ತಿನೆಲ್ಲೆಡೆ ಬ್ಯಾಂಕುಗಳ ಕುಸಿತ ಗೊತ್ತಿರುವ ವಿಷಯವೇ, 2008 ರಿಂದ ಈಚೆಗೆ ಬ್ರಿಟನ್ ಸರಕಾರ 80 ಬಿಲಿಯನ್ ಪೌಂಡ್ ಅನುದಾನ ಕಡಿತ ಮಾಡಿದೆ. ಹೀಗೆ ಅನುದಾನ ಕಡಿತ ಆಗಿರುವುದು ಶಿಕ್ಷಣ ಮತ್ತು ರಿಸರ್ಚ್ ಅಂತಹ ವಿಷಯಗಳಿಗೆ, ಕಾಕತಾಳೀಯ ಎನ್ನುವಂತೆ ಇಷ್ಟೇ ಮೊತ್ತದ ಹಣ (80 ಬಿಲಿಯನ್ ಪೌಂಡ್) ಹತ್ತಾರು ಅಗ್ರ ಬ್ಯಾಂಕರ್ ಗಳಿಗೆ 2008 ರಿಂದ ಈಚೆಗೆ ಬೋನಸ್ ರೂಪದಲ್ಲಿ ಸಂದಾಯವಾಗಿದೆ. ಇವತ್ತು ಜಗತ್ತಿನಲ್ಲಿ ಅತ್ಯಂತ ವೇಗದಲ್ಲಿ ಹೆಚ್ಚುತ್ತಿರುವುದು ಅಸಮಾನತೆ. ಇದು ಎಲ್ಲೆಡೆ ಆಗುತ್ತಿದೆ. ಆದರೆ ಲಂಡನ್ ನಗರದಲ್ಲಿ ಇದರ ತೀವ್ರತೆ ಅತಿ ಹೆಚ್ಚು. ಜೀವಿಸಲು ಬೇಕಾದ ಅವಶ್ಯ ವಸ್ತುಗಳ ಬೆಲೆ ಹೆಚ್ಚಳ ಇದಕ್ಕೆ ಕಾರಣ. 28 ಪ್ರತಿಶತ ಜನ ಬಡತನದ ರೇಖೆಯಲ್ಲಿ ಜೀವಿಸುತ್ತಿದ್ದಾರೆ. 66 ಪ್ರತಿಶತ ಜನ ಹೇಗೋ ದಿನ ದೂಡುತ್ತಿದ್ದಾರೆ. 
ತಂತ್ರಜ್ಞಾನ ಬೆಳೆದಂತೆ ಹಣ ಕೇವಲ ಕೆಲವೇ ಕೆಲವು ಜನರ ಕೈಯಲ್ಲಿ ಸಂಗ್ರಹವಾಗುತ್ತಾ ಹೋಯಿತು. 1980 ರ ದಶಕದಲ್ಲಿ ಲಂಡನ್ ನಂತಹ ನಗರದ 65 ಪ್ರತಿಶತ ಜನ ಮಧ್ಯಮವರ್ಗ ಎಂದು ಪರಿಗಣಿಸಲ್ಪಟ್ಟಿದ್ದರು ಇಂದು ಅವರ ಸಂಖ್ಯೆ ಅದರ ಅರ್ಧಕ್ಕೂ ಹೆಚ್ಚು ಕುಸಿದಿದೆ. ಇದು ಇಟಲಿ, ಸ್ಪೇನ್ ದೇಶಗಳಿಗೂ ಅನ್ವಯ. ಅಸಮಾನತೆ ಎನ್ನುವುದು ಮನುಷ್ಯ -ಮನುಷ್ಯರ ನಡುವೆ ಸೃಷ್ಟಿ ಮಾಡುತ್ತಿರುವ ಅಂತರ ಅಥವಾ ಸಂಬಂಧಗಳ ನಡುವೆ ಹಚ್ಚುತ್ತಿರುವ ಕಿಚ್ಚಿನ ಬಿಸಿಯನ್ನ 'ಹ್ಯೂಮನ್ ಗ್ಲೋಬಲ್ ವಾರ್ಮಿಂಗ್' ಎನ್ನುತ್ತಾರೆ. ನಮಗೆಲ್ಲಾ ಪ್ರಕೃತ್ತಿಯನ್ನ ಸರಿಯಾಗಿ ನೆಡೆಸಿಕೊಳ್ಳದೆ ಇರುವುದರ ಪರಿಣಾಮ ಜಗತ್ತಿನಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿರುವು ಗೊತ್ತಿರುವ ವಿಷಯ ಆದರೆ ನಮ್ಮ ನಡುವೆ ಹೆಚ್ಚುತ್ತಿರುವ ವಿತ್ತೀಯ ಅಂತರದ ಬಗ್ಗೆ ಜನರಲ್ಲಿ ತಿಳಿವಳಿಕೆಯ ಕೊರತೆಯಿದೆ. ಇಂತಹ ಆರ್ಥಿಕ ಅಂತರವನ್ನ ಕಡಿಮೆಗೊಳಿಸಲು ನಮ್ಮ ಅರಿವು ಮತ್ತು ಸಂಘಟನೆಯ ಹಸಿವು ಎರಡೂ ಹೆಚ್ಚಬೇಕು. 
ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಸೃಷ್ಟಿಕರ್ತರು ಯಾರು ಅವರ ಲೈನ್ ಆಫ್ ಬಿಸಿನೆಸ್ ಯಾವುದು ಇತ್ಯಾದಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಗಮನಿಸಿ ನೋಡಿ ಜಗತ್ತಿನಲ್ಲಿ ಏಳು ಬಿಲಿಯನ್ (7೦೦ ಕೋಟಿ) ಜನರಿದ್ದಾರೆ ಎಂದುಕೊಂಡರೆ ಅದರಲ್ಲಿ ಅರ್ಧ ಅಂದರೆ 3.5 ಬಿಲಿಯನ್ ಅಥವಾ 350 ಕೋಟಿ ಜನರ ಹಣ-ಆಸ್ತಿಯ ಒಟ್ಟು ಮೊತ್ತಕ್ಕೆ ಸಮನಾಗುವ ಸಂಪತ್ತು ಇಂದು ಕೇವಲ ಎಂಟು ಜನರ ಕೈಲಿದೆ. 
ಯಾರಿವರು ಎಂಟು ಜನ? 
ಬಿಲ್ ಗೇಟ್ಸ್: ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ, 75 ಬಿಲಿಯನ್ ಆಸ್ತಿಯ ಮಾಲೀಕ. ಜಗತ್ತಿನ ಪ್ರಪ್ರಥಮ ಟ್ರಿಲಿಯನೇರ್ ಆಗುವ ಸಂಭಾವ್ಯತೆ ಇರುವ ಏಕೈಕ ವ್ಯಕ್ತಿ ಎನ್ನುವ ಹೆಗ್ಗಳಿಕೆ ಹೊಂದಿರುವ ಈತನ ಬಗ್ಗೆ ಹೆಚ್ಚು ಹೇಳುವ ಅವಶ್ಯಕೆತೆ ಏನಿದೆ. ಬಿಲ್ ಗೇಟ್ಸ್ ಹೆಸರು ಕೇಳಿರದವರು ವಿರಳ ಎನ್ನಬಹದು. 
ಅಮಾನಿಸಿಯೊ ಒರ್ತೆಗಾ: ಜಗತ್ವಿಖ್ಯಾತ ಜಾರ ಸಂಸ್ಥೆಯ ಸಂಸ್ಥಾಪಕ, ಮಾಲೀಕ. ಮೂಲತಃ ಸ್ಪಾನಿಷ್ ದೇಶಕ್ಕೆ ಸೇರಿರುವ ಈತನ ಆಸ್ತಿ ಮೊತ್ತ 67 ಬಿಲಿಯನ್ ಡಾಲರ್ ಗಳು. ಜಾರ ಸಂಸ್ಥೆ ಟೆಕ್ಸ್ ಟೈಲ್ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಯಾಗಿದೆ. 
ವಾರೆನ್ ಬಫ್ಫೆಟ್: ಈತನ ಬಗ್ಗೆ ಅದೆಷ್ಟು ವರ್ಣರಂಜಿತ ಕತೆಗಳಿವೆ ಎಂದರೆ, ಅವನ್ನ ಕೇಳಿದರೆ ಬಫೆಟ್ ಹೌದ? ಇಷ್ಟೆಲ್ಲಾ ನಾನೇ ಮಾಡಿದ್ದ? ಎಂದು ಕೇಳುವಷ್ಟು. ವಾರೆನ್ ಬಫೆಟ್ ಹೆಸರು ಕೂಡ ಮನೆಮಾತು. ಸದ್ಯಕ್ಕೆ ಬೆರ್ಕ್ಶೈರ್ ಹಾತ್ ವೇ ಸಂಸ್ಥೆಯ ಅತಿ ಹೆಚ್ಚಿನ ಷೇರುದಾರ. ಹತ್ತಿರತ್ತಿರ 61 ಬಿಲಿಯನ್ ಆಸ್ತಿಯ ಮಾಲೀಕ. 
ಕಾರ್ಲೋಸ್ ಸ್ಲಿಮ್ ಹೆಲು: ಮೆಕ್ಸಿಕೋ ದೇಶದ ಟೆಲಿಕಾಂ ವ್ಯಾಪಾರದಲ್ಲಿ ತೊಡಗಿರುವ ಕಾರ್ಲೋಸ್ ಸ್ಲಿಮ್ ಹೆಲು 50 ಬಿಲಿಯನ್ ಡಾಲರಿನ ಒಡೆಯ. 
ಜೆಫ್ ಬೆಸೊಸ್: ಅಮೆಜಾನ್ ಸಂಸ್ಥೆಯ ಛೇರ್ಮನ್ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಇಲ್ಲಿ ವ್ಯಕ್ತಿಗಿಂತ ಸಂಸ್ಥೆ ಜಗತ್ತಿನೆಲ್ಲೆಡೆ ಮನೆಮಾತಾಗಿದೆ. ಇಂದು ಅಮೆಜಾನ್ ಎಂದರೆ ಅದರ ಹೆಸರು ಕೇಳಿರದವರಾರು? 45 ಬಿಲಿಯನ್ ಡಾಲರಿನ ಸಂಪತ್ತು ಈತನ ಲೆಕ್ಕದಲ್ಲಿದೆ. 
ಮಾರ್ಕ್ ಜುಕೆರ್ ಬರ್ಗ್: ಇವತ್ತು ಫೇಸ್ ಬುಕ್ ಎಷ್ಟು ಹೆಸರುವಾಸಿ ಸಾಮಾಜಿಕ ತಾಣ ಎಂದು ವಿವರಿಸುವ ಅವಶ್ಯಕೆತೆ ಇಲ್ಲವಷ್ಟೆ, ಇದರ ಸೃಷ್ಟಿಕರ್ತ, ಸಂಸ್ಥಾಪಕ ಮಾರ್ಕ್ ಇಂದು ಹತ್ತಿರತ್ತಿರ 45 ಬಿಲಿಯನ್ ಡಾಲರಿನ ಒಡೆಯ. 
ಲಾರಿ ಎಲಿಸಾನ್: ಒರಾಕಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಲಾರಿ ಹೆಸರಿಗಿಂತ ಸಂಸ್ಥೆ ಜನರಿಗೆ ಹೆಚ್ಚು ಪರಿಚಿತ. ಆದರೇನು ಈತನ ನೆಟ್ ವರ್ತ್ 43.6 ಬಿಲಿಯನ್ ಡಾಲರ್! 
ಮೈಕಲ್ ಬ್ಲೂಮ್ಬರ್ಗ್: ಬ್ಲೂಮ್ಬರ್ಗ್ ಸಂಸ್ಥೆಯ ಮಾಲೀಕ, ಇದೊಂದು ಫೈನಾನ್ಸಿಯಲ್, ಸಾಫ್ಟ್ ವೆರ್ ಡೇಟಾ ಮತ್ತು ಮೀಡಿಯಾ ಕಂಪನಿಯಾಗಿದೆ. 40 ಬಿಲಿಯನ್ ಡಾಲರಿನ ಆಸ್ತಿಯ ಮೇಲೆ ಈತ ವಿರಾಜಿತ. 
350 ಕೋಟಿ ಜನರ ಒಟ್ಟು ಆಸ್ತಿಯ ಮೌಲ್ಯ ಈ ಎಂಟು ಜನರ ಕೈಲಿದೆ ಎಂದರೆ ಅಸಮಾನತೆ ಎಷ್ಟರ ಮಟ್ಟಿಗೆ ಬೆಳೆದಿದೆ ಎನ್ನುವುದರ ಅರಿವು ನಿಮ್ಮದಾಗಬಹದು. ಇಲ್ಲಿ ನಮ್ಮ ದೇಶದ ಹೆಸರಾಂತ ಸಾಹುಕಾರರ ಹೆಸರಿಲ್ಲ! ಹೀಗೆ ಜಗತ್ತಿನ ಸಾವಿರ ಅತ್ಯಂತ ಹೆಚ್ಚು ಸಾಹುಕಾರರ ಪಟ್ಟಿ ಮಾಡಿದರೆ ಅವರ ನಡುವಿನ ಮೌಲ್ಯವನ್ನ ಕೂಡಿದರೆ ಮತ್ತು ಜಗತ್ತಿನ ಒಟ್ಟು ಮೌಲ್ಯದೊಂದಿಗೆ ಕಳೆದರೆ ಉಳಿವುದು ಒಂದು ಅಥವಾ ಎರಡು ಪ್ರತಿಶತ ಅಷ್ಟೇ!!. ಈಗ ಬೆಂಗಳೂರಿನ ಮನೆಯ ಮುಂದೆ ಎರಡು ಕಾರು ಇಟ್ಟವರು ಪಟ್ಟಿಯಲ್ಲಿ ಎಲ್ಲಿ ಬರುತ್ತಾರೆ ನೋಡಿ! ಇವರ ಸ್ಥಿತಿಯೇ ಹೀಗಾದರೆ ಇನ್ನು ಜನ ಸಾಮಾನ್ಯನ ಕತೆಯೇನು? 
ಇವತ್ತು ಜನ ಸಾಮಾನ್ಯ ಒಂದು ನೆಡೆದಾಡುವ ಟೈಮ್ ಬಾಂಬ್ ಆಗಿದ್ದಾನೆ. ಯಾವ ಕ್ಷಣದಲ್ಲಿ ಸಿಡಿಯುತ್ತಾನೆ ಹೇಳಲು ಬಾರದು. ಮಹಾನಗರದಲ್ಲಿ ಟ್ರಾಫಿಕ್ ನಲ್ಲಿ ಆಗುವ ಜಗಳಗಳು., ಆಸ್ತಿಗಾಗಿ ಕೊಲೆ, ಮನೆ ಲೂಟಿ, ಸರಗಳ್ಳತನ, ಒಟ್ಟಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು ಅಸಮಾನತೆಯ ಬಳುವಳಿ. ನಾಳಿನ ಬದುಕಿಗೆ ಭರವಸೆಯೇ ಆಧಾರ ಅದಕ್ಕೆ ಚ್ಯುತಿ ಬಂದರೆ ಗತಿಯಿನ್ನೇನು? 
ಬದುಕಲು ಹಣ ಬೇಕು, ಹಣ ದುಡಿಯಲು ವೇಳೆ ಒತ್ತೆ ಇಡಬೇಕು, ಹಾಗೆ ಬಂದ ಹಣ ವ್ಯಯಿಸಿ ಉಳಿದ ವೇಳೆ ವ್ಯಯಿಸಬೇಕು? ವ್ಯಯಿಸುತ್ತ ಕ್ಷಯಿಸಿ ಹೋಗಬೇಕು. ಈ ವಿಷವರ್ತುಲ ಸೃಷ್ಟಿಯಾಗಿದೆ, ಜಗತ್ತಿನ 99 ಪ್ರತಿಶತ ಜನ ಈ ವರ್ತುಲದಲ್ಲಿ ಟ್ರ್ಯಾಪ್ ಆಗಿದ್ದಾರೆ. ಎಲ್ಲರಿಗೂ ಎತ್ತಲೂ ಓಡುವ ಧಾವಂತ, ಓಡುತ್ತಿದ್ದೇವೆ ಎನ್ನುವ ಭಾವನೆ ಆದರೆ ನಿಜವಾಗಿಯೂ ಆಗುತ್ತಿರುವುದೇನು? ಉತ್ತರ ಸಿಕ್ಕರೆ ಹಿಂದೆ ಮೋಕ್ಷ ಸಿದ್ಧಿ ಎನ್ನುತ್ತಿದರಲ್ಲ ಅದಕ್ಕೆ ಸಮ! . 
'ಹ್ಯೂಮನ್ ಗ್ಲೋಬಲ್ ವಾರ್ಮಿಂಗ್' ವಿರುದ್ಧ ಸೆಣೆಸುವ ಮಾತು ಹಾಗಿರಲಿ ಅದೇನೆಂದು ಜನರಿಗೆ ತಿಳುವಳಿಕೆ ಮೂಡಿಸುವುದು ಹೇಗೆ? ನಮ್ಮ ಅಜ್ಞಾನವೇ ನಮ್ಮ ಶತ್ರು ಹೊರತು ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಸೃಷ್ಟಿಕರ್ತರಲ್ಲ!. ಕೊನೆಗೂ ಜೀವನವೆಂದರೆ ಇನ್ನೊಬ್ಬರ ಅಜ್ಞಾನವನ್ನ ಬಂಡವಾಳ ಮಾಡಿಕೊಳ್ಳುವುದಷ್ಟೇ ಅಲ್ಲವೇ? Life is nothing but exploiting the ignorance of others. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com