ದೊಡ್ಡಣ್ಣನಾಗಲು ಜಟಾಪಟಿ; ಚೀನಾದ ಸಾಲದ ಖೆಡ್ಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಜಿಬೌಟಿ !!

ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ...
ಚೀನಾ
ಚೀನಾ
ಚೀನಾ ದೇಶ ಬಹಳ ಮಹತ್ವಾಕಾಂಕ್ಷೆ ಇರುವ ದೇಶ. ಅಲ್ಲಿನ ಕಮ್ಯುನಿಸ್ಟ್ ಸರಕಾರದ ಮುಂದೆ ದೇಶವನ್ನ ಹೀಗೆ ಮುನ್ನೆಡೆಸಬೇಕು ಮತ್ತು ಅದು ಜಗತ್ತಿನ ಏಕೈಕ ಅಧಿಪತಿಯಾಗಿರಬೇಕು ಎನ್ನುವ ನೀಲಿನಕ್ಷೆ ತಯಾರಿದೆ ಆ ನಿಟ್ಟಿನಲ್ಲಿ ಅವಿರತ ತಾಲೀಮು ಕೂಡ ನೆಡೆದಿದೆ. ತನ್ನ ಕಾರ್ಯ ಸಾಧನೆಗಾಗಿ ಚೀನಾ ಎಂತಹ ತ್ಯಾಗಕ್ಕೂ ಸಿದ್ದ., ಎಂತಹ ಹೋರಾಟಕ್ಕೂ ಸಿದ್ದ ಇಂಗ್ಲಿಷ್ ನಲ್ಲಿ ರೂಥ್ಲೆಸ್ ಎನ್ನುವ ಪದವಿದೆ ಅದು ಚೀನಾ ದೇಶಕ್ಕೆ ಸರಿಯಾಗಿ ಹೊಂದುತ್ತದೆ. ಚೀನಾ ಜಗತ್ತಿನ ಕಾರ್ಖಾನೆಯಾಗಿ ಮಾರ್ಪಾಟಾಗಿ ದಶಕಗಳು ಕಳೆದಿವೆ. ಅಲ್ಲಿನ ನಗರಗಳು ಯಾವುದೇ ಮುಂದುವರಿದ ದೇಶಗಳ ನಗರಗಳನ್ನು ನಾಚಿಸುವಂತೆ ಜಗಮಗಿಸುತ್ತವೆ. ಆದರೇನು ಅಲ್ಲಿನ ಜನರ ಜೀವನ ಸುಖಮಯವಾಗಿದೆಯೇ? ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಜನರ ಸುಖ ದುಃಖದ ಲೆಕ್ಕವಿಡುತ್ತಾ ಕೂತರೆ ಜಗತ್ತಿನ ದೊಡ್ಡಣ್ಣನಾಗುವುದು ಯಾವಾಗ? ಎನ್ನುವುದು ಅಲ್ಲಿನ ಕಮ್ಯೂನಿಸ್ಟ್ ಸರಕಾರದ ಆಲೋಚನೆ. ಹೀಗಾಗಿ ಅಲ್ಲಿ ಮೆಗಾ ಫ್ಯಾಕ್ಟರಿ ಗಳು ತಲೆ ಎತ್ತಿವೆ. ನಿಮಗೆ ಗೊತ್ತೇ? ಅವೆಷ್ಟು ದೊಡ್ಡವು ಎಂದರೆ ಅಲ್ಲಿ ಕೆಲಸ ಮಾಡುವ ಕೆಲಸಗಾರರು ಒಮ್ಮೆ ಫ್ಯಾಕ್ಟರಿ ಪ್ರವೇಶಿಸಿದರೆ ಹೊರಜಗತ್ತಿಗೆ ಮತ್ತೆ ಬರುವುದು ಐದು ಅಥವಾ ಹತ್ತು ವರ್ಷದ ನಂತರ. ಅಲ್ಲೇ ಕೆಲಸ ನಿದ್ದೆ.. ಅಲ್ಲೇ ಮದುವೆ.. ಅಲ್ಲೇ ಮಕ್ಕಳು ಅಲ್ಲೇ ಎಲ್ಲಾ ಜೀವನ ಅಂತಾಗಿದೆ. ಅವರಿಗೆ ಕೊಡುವ ವೇತನ ಮಾತ್ರ ಬಹಳ ಕಡಿಮೆ. ಜೀತವಿಲ್ಲ ಎಂದವರು ಯಾರು? ಇಂದಿಗೂ ಚೀನಾದಲ್ಲಿ ಹೊಸ ಮಾದರಿಯ ಜೀತ ಕಾನೂನು ಬದ್ದವಾಗಿ ನೆಡೆಯುತ್ತಿದೆ. ಮೊದಲೇ ಹೇಳಿದಂತೆ ಅಲ್ಲಿನ ಆಡಳಿತ ನೆಡೆಸುವ ಜನಕ್ಕೆ ಇದಾವುದೂ ಮುಖ್ಯವಲ್ಲ ಅವರಿಗೇನಿದ್ದರೂ ಜಗತ್ತಿನ ದೊಡ್ಡಣ್ಣನಾಗಬೇಕು ಎನ್ನುವ ಹಂಬಲ ಅದಕ್ಕೆ ತನ್ನ ಜನರಾದರೂ ಸರಿ ಬೇರೆಯಾರಾದರೂ ಸರಿಯೇ ಅವರ ಬಲಿ ಕೊಡಬೇಕೆಂದರೆ ಅದಕ್ಕೂ ಸೈ ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ಹೊಸೆದ ಹೊಸ ಮಾರ್ಗವೇ ಒನ್ ಬೆಲ್ಟ್ ಒನ್ ರೋಡ್ ಎನ್ನುವ ಪರಿಕಲ್ಪನೆ. ಇದೇನು ಪೂರ್ಣ ಹೊಸದಲ್ಲ ಹಿಂದೆ ವ್ಯಾಪಾರ ವಾಣಿಜ್ಯಕ್ಕೆ ಬಳಸುತ್ತಿದ್ದ ಸಿಲ್ಕ್ ರೂಟ್ ಅನ್ನು ಮತ್ತೆ ಹೊಸದಾಗಿ ಉನ್ನತ ಮೂಲಭೂತ ಸೌಕರ್ಯಗಳ ಮೂಲಕ ನಿರ್ಮಿಸುವುದು ಆ ಮೂಲಕ ಜಗತ್ತಿಗೆ ಚೀನಾದ ಮೂಲಕ ಸಂಪರ್ಕ ಕಲ್ಪಿಸುವುದು. ಸರಿ ವ್ಯಾಪಾರಕ್ಕೆ ಅನುಕೂಲವಾಗುವುದಾದರೆ ಅದರಿಂದ ತೊಂದರೆಯೇನು? ಮಾಡಲಿ ಬಿಡಿ ಎನ್ನಬಹುದು. ಆದರೆ ಚೀನಾದ ಮನಸ್ಥಿತಿ ಅರಿತವರು ಇದರಿಂದ ಬೆಚ್ಚಿ ಬೀಳುತ್ತಾರೆ. ಇದಕ್ಕೆ ಕಾರಣಗಳೇನು ಎನ್ನುವುದನ್ನ ನೋಡೋಣ. 
ಮಹತ್ವಾಕಾಂಕ್ಷೆಯ ಒನ್ ಬೆಲ್ಟ್ ಒನ್ ರೋಡ್ ಚೀನಾ ದೇಶವನ್ನ ಏಷ್ಯಾ, ಯುರೋಪ್, ಮಿಡ್ಲ್ ಈಸ್ಟ್ ಮತ್ತು ಆಫ್ರಿಕಾ ದೇಶದೊಂದಿಗೆ ಬೆಸೆಯಲಿದೆ. ಇಷ್ಟು ಜಾಗವನ್ನ ಬೆಸೆಯಲು ರಸ್ತೆ ಮಾಡಬೇಕು ಮತ್ತಿತರೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಇದಕ್ಕೆಲ್ಲಾ ಹೇರಳವಾಗಿ ಹಣ ಖರ್ಚಾಗುತ್ತದೆ. ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ ಎನ್ನುತ್ತದೆ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಎನ್ನುವ ವಾಷಿಂಗ್ಟನ್ ಮೂಲದ ಸಂಸ್ಥೆ. ಚೀನಾ ಸಾಲ ಕೊಡುವಾಗ ತೋರುವ ಒಳ್ಳೆಯತನ ವಸೂಲಿ ಸಮಯದಲ್ಲಿ ತೋರುವುದಿಲ್ಲ ಎನ್ನುವುದು ಚೀನಾ ದೇಶದಿಂದ ಸಾಲ ಪಡೆದ ದೇಶಗಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಹೀಗೆ ಸಾಲ ಪಡೆದ ದೇಶಗಳು ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾದರೆ ಅವುಗಳ ಸ್ವಾತಂತ್ರ್ಯ ಕೂಡ ಮುಗಿದಂತೆಯೇ. ಚೀನಾ ನಿಧಾನವಾಗಿ ಅಲ್ಲಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಶುರುಮಾಡುತ್ತದೆ. ಅಲ್ಲಿನ ಪ್ರಮುಖ ನಿರ್ಧಾರಗಳು ಚೀನಾದ ಅನುಮತಿಯಿಲ್ಲದೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪಕ್ಕದ ಶ್ರೀಲಂಕಾ ದೇಶ. ಒಂದು ಬಂದರು ನಿರ್ಮಿಸಲು ಚೀನಾ ದೇಶದಿಂದ ಸಾಲ ಪಡೆಯುತ್ತಾರೆ ಆದರೆ ಅದನ್ನ ಮರುಪಾವತಿಸಲು ಆಗುವುದಿಲ್ಲ. ಚೀನಾ ದೇಶ ಆ ಬಂದರನ್ನ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಲ್ಲಿನ ಪೂರ್ಣ ನಿರ್ವಹಣೆ ಇವತ್ತು ಚೀನಾದ ಹಿಡಿತದಲ್ಲಿದೆ. ಒಮ್ಮೆ ಆ ದೇಶದಲ್ಲಿ ಕಾಲೂರಿದ ಮೇಲೆ ನಿಧಾನವಾಗಿ ಅಲ್ಲಿ ಅರಾಜಕತೆ ಸೃಷ್ಟಿಸಿ ಪೂರ್ಣ ದೇಶವನ್ನ ಕಬಳಿಸಿಬಿಡುತ್ತದೆ ಚೀನಾ! ಎಲ್ ಟಿಟಿಇ ನಂತರ ಶಾಂತವಾಗಿದ್ದ ಶ್ರೀಲಂಕ ಇದೀಗ ಬುದ್ಧರ ಮುಸ್ಲಿಮರ ನಡುವೆ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ. ಅಲ್ಲಿ ಅರಾಜಕತೆ ನಿಧಾನಕ್ಕೆ ತಲೆಯೆತ್ತುತ್ತಿದೆ. 
ಇನ್ನು ನಮ್ಮ ಇನ್ನೊಂದು ನೆರೆಯ ರಾಷ್ಟ್ರ ಪಾಕಿಸ್ತಾನದ ಕಥೆಯನ್ನ ಹೇಳುವಂತಿಲ್ಲ. ಚೀನಾ ಈಗಾಗಲೆ 50 ಬಿಲಿಯನ್ ಡಾಲರ್ ಹಣವನ್ನ ಸಾಲದ ರೂಪದಲ್ಲಿ ನೀಡಿದೆ. ಇದಕ್ಕೆ ಹಾಕಿರುವ ಬಡ್ಡಿಯ ದರ ಕೂಡ ದೊಡ್ಡದೇ. ಪಾಕಿಸ್ತಾನ ಬಡ್ಡಿಯ ಹಣವನ್ನ ಮರುಪಾವತಿಸಲು ಆಗದೆ ಕುಸಿಯುವ ಸಾಧ್ಯತೆಗಳು ಬಹಳ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಕಡಿಮೆ ಪಾಕಿಸ್ತಾನ ಇಂದು ಚೀನಾದ ಹಿಡಿತದಲ್ಲಿದೆ ಎಂದು ಹೇಳಬಹದು. ಅಲ್ಲಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಚೀನಾ ಸರಕಾರ ಎನ್ನುವುದು ಇಂದು ಗೌಪ್ಯವಾಗೇನು ಉಳಿದಿಲ್ಲ. 
ಜಿಬೌಟಿ, ಮಾಲ್ಡೀವ್ಸ್, ಲಾವೋಸ್, ಮಂಗೋಲಿಯಾ, ಮೊಂಟೆನೆಗ್ರೋ, ತಜಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳ ಪರಿಸ್ಥಿತಿ ಕೂಡ ಪಾಕಿಸ್ತಾನ ಮತ್ತು  ಶ್ರೀಲಂಕಾ ದೇಶಕ್ಕಿಂತ ವಿಭಿನ್ನವಾಗೇನಿಲ್ಲ. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಮಾಲ್ಡೀವ್ಸ್ ದೇಶದಲ್ಲಿ ಕೂಡ ಎಮರ್ಜೆನ್ಸಿ ಡಿಕ್ಲೇರ್ ಮಾಡಿದ್ದರು. ಅದು ನಮ್ಮ ದೇಶದಲ್ಲಿ ಹೆಚ್ಚು ಸುದ್ದಿಯೇ ಆಗಲಿಲ್ಲ ಅದು ಬೇರೆ ವಿಷಯ. ಮಾಲ್ಡೀವ್ಸ್ ನಲ್ಲಿ ಕೂಡ ಮುಸ್ಲಿಮರ ಸಮಸ್ಯೆ ಎದುರಾಗಿತ್ತು ಇದೀಗ ಶ್ರೀಲಂಕಾದಲ್ಲಿ ಕೂಡ ಇದೆ ಸಮಸ್ಯೆ ಎದುರಾಗಿದೆ. 
ಜಿಬೌಟಿ ದೇಶದ ಸಾಲದ 89 ಪ್ರತಿಶತ ಚೀನಾಕ್ಕೆ ಸೇರಿದ್ದು ಎಂದರೆ ಅದರ ತೀವ್ರತೆಯೇ ಅರಿವಾದೀತು. ಕಿರ್ಗಿಸ್ತಾನ್ ನ ಸಾಲದ 71 ಪ್ರತಿಶತ ಚೀನಾಕ್ಕೆ ಸೇರಿದ್ದು. ಮಾಲ್ಡೀವ್ಸ್, ಮಂಗೋಲಿಯಾ ಇವೆಲ್ಲವನ್ನ ಚೀನಾ ಯಾವಾಗ ಬೇಕಾದರೂ ಅಪೋಷನ ತೆಗೆದುಕೊಳ್ಳುವ ಶಕ್ತಿ ಹೊಂದಿದೆ.
ಈ ರೀತಿ ಸಾಲ ಕೊಡಲು ಮತ್ತು ಬಡ್ಡಿಯ ದರವನ್ನ ವಿಧಿಸಲು ಅಂತಾರಾಷ್ಟ್ರೀಯ ಕಾನೂನು ಕಟ್ಟಲೆಗಳು ಇಲ್ಲವೇ? ಎನ್ನುವ ಪ್ರಶ್ನೆ ನೀವು ಕೇಳಬಹದು. ಉತ್ತರ ಇದೆ. ವರ್ಲ್ಡ್ ಬ್ಯಾಂಕ್ ಮತ್ತು ಇಂಟರ್ನ್ಯಾಷನಲ್ ಮೊನಿಟರಿ ಫಂಡ್ ತಯಾರಿಸುವ ನೀಲಿನಕ್ಷೆಯನ್ನ ಅನುಸರಿಸಬೇಕು. ಆದರೆ ಚೀನಾ ಇದನ್ನೆಲ್ಲ ಗಾಳಿಗೆ ತೋರಿ ಸಮಯಕ್ಕೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಕೊಟ್ಟ ಸಾಲಕ್ಕೆ ಆಯಾ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತ ಸಾಗಿದೆ. ಜಗತ್ತಿಗೆಲ್ಲಾ ನಾನೊಬ್ಬನೆ ಸಾಲ ಕೊಡುವವನು ಎನ್ನುವ ಭಾವನೆ ಚೀನಾ ದೇಶ ತೋರುತ್ತಿದೆ. 
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ ಶ್ರೀಲಂಕಾದಲ್ಲಿ ಅರಾಜಕತೆ ಶುರುವಾಗಿದೆ. ಪಾಕೀಸ್ತಾನ ಹೇಗಿದೆ ಎನ್ನುವುದರ ಬಗ್ಗೆ ವಿಶೇಷವಾಗಿ ಹೇಳುವುದು ಬೇಡ. ಜಗತ್ತಿನ ಮೇಲೆ ಅಧಿಕಾರ ಹೊಂದಬೇಕು ಎನ್ನುವ ಚೀನಾ ದೇಶಕ್ಕೆ ಯುದ್ಧ ಮಾಡಿ ಎಲ್ಲಾ ದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಗೊತ್ತು ಅದಕ್ಕಾಗಿ ಅದು ಇಟ್ಟಿರುವ ಚಾಣಾಕ್ಷ ನೆಡಿಗೆ ಡೆಟ್ ಟ್ರ್ಯಾಪ್! ಯುದ್ಧಕ್ಕೆ ಖರ್ಚು ಮಾಡುವ ಹಣವನ್ನ ಪ್ರೀತಿಯಿಂದ ಯಾವುದಾದರೊಂದು ಪ್ರಾಜೆಕ್ಟ್ ಗೆ ಎಂದು ಸಾಲ ಕೊಡುವುದು ನಂತರ ಅದರ ವಸೂಲಿಯಾಗದಿದ್ದಾಗ ನಿಧಾನವಾಗಿ ಆ ದೇಶದ ಮೇಲೆ ನಿಯಂತ್ರಣ ಸಾಧಿಸುವುದು ಇದು ಚೀನಾ ದೇಶದ ಹೊಸ ನೆಡಿಗೆ. ಈ ಡೆಟ್ ಟ್ರ್ಯಾಪ್ ನಲ್ಲಿ ಸಿಕ್ಕಿ ನರಳುತ್ತರುವ ದೇಶಗಳ ಸಂಖ್ಯೆ ಬಹಳವಿದೆ. ಮೊದಲೇ ಹೇಳಿದಂತೆ ಹತ್ತಿರತ್ತಿರ 23 ದೇಶಗಳ ಮೂಗುದಾರ ಚೀನಾ ದೇಶದ ಬಳಿಯಿದೆ. ಹೊರ ಜಗತ್ತಿಗೆ ರಾಜಾರೋಷವಾಗಿ ಕೂಗಿ ಹೇಳದಿದ್ದರೂ ನಾರ್ತ್ ಕೊರಿಯಾ ಚೀನಾದೇಶದ ಅಣತಿಯಂತೆ ನೆಡೆಯುತ್ತದೆ ಎನ್ನುವುದು ಕೂಡ ತಿಳಿಯದ ವಿಷಯವೇನಲ್ಲ. ಒಟ್ಟಿನಲ್ಲಿ ಜಗತ್ತಿನ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಚೀನಾದ ಕಮ್ಯುನಿಸ್ಟ್ ಸರಕಾರದ ಹುಚ್ಚು ಮಹತ್ವಾಕಾಂಕ್ಷೆಗೆ ಹಣಕಾಸಿನ ಮೂಲಭೋತ ವಿಷಯಗಳ ಅರಿವಿಲ್ಲದ ಸಾವಿರಾರು ಜನ ತಮ್ಮದಲ್ಲದ ತಪ್ಪಿಗೆ ಮಣ್ಣಾಗಿ ಹೋಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಚೀನಾದ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಿದೆ. ಅದು ಸರಿ ಆದರೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವರು ಯಾರು?
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com