ನಮ್ಮ ಸಮಾಜವೂ 'ಗಿಗ್ ಎಕಾನಮಿ'ಯತ್ತ ಸಾಗುತ್ತಿದೆಯೇ ?

ಇವತ್ತಿನ ಸಮಾಜವನ್ನ 'ಗಿಗ್ ಎಕಾನಮಿ 'ಎನ್ನುತ್ತಾರೆ. ಇವತ್ತಿನ ಹುಡುಗರನ್ನ ಮಿಲ್ಲೆನ್ನಿಯಲ್ಸ್ ಎನ್ನುತ್ತಾರೆ. ಏನು?ಯಾಕೆ? ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ನಮ್ಮ ಸಮಾಜವೂ 'ಗಿಗ್ ಎಕಾನಮಿ'ಯತ್ತ ಸಾಗುತ್ತಿದೆಯೇ ?
ಎರಡು ಅಥವಾ ಮೂರು ದಶಕದ ಹಿಂದೆ ಬೆಂಗಳೂರಿನಲ್ಲಿ ಎಚ್ ಎಂ ಟಿ,  ಬಿ ಹೆಚ್ ಈ ಎಲ್ , ಬಿ ಇ ಎಲ್, ಹೆಚ್ ಎ ಎಲ್, ಹೀಗೆ ಇನ್ನೊಂದು ನಾಲ್ಕೈದು ಸಂಸ್ಥೆಗಳ ಹೆಸರು ಬಿಟ್ಟು ಬೇರೆ ಹೆಸರು ಹೇಳಿದರೆ ಜನಕ್ಕೆ ಗೊತ್ತಾಗುತ್ತಿರಲಿಲ್ಲ! ಗೊತ್ತಾಗುವುದಕ್ಕೆ ಅಷ್ಟೊಂದು ಹೆಸರುವಾಸಿ ಸಂಸ್ಥೆಗಳು ಕೂಡ ಇರಲಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇಲ್ಲಿ ಕೆಲಸ ಮಾಡುವ ಜನರಿಗೆ ಒಂದು ರೀತಿಯ ವಿಶೇಷ ಗೌರವ ಸಮಾಜದಲ್ಲಿ ಸಿಗುತಿತ್ತು. ಉಳಿದಂತೆ ಯಾವುದಾದರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಜೀವನದಾಟ ಮುಗಿಸುವುದು ಅಂದಿನ ಬದುಕಾಗಿತ್ತು. ಜನರ ಮುಂದೆ ಆಯ್ಕೆಗಳು ಬಹಳ ಕಡಿಮೆಯಿದ್ದವು. ಮೊದಲನೇ ಆಯ್ಕೆ ಸರಕಾರಿ ಕೆಲಸ ಮಾಡುವುದು, ಎರಡನೇ ಆಯ್ಕೆ ಸರಕಾರಿ ಕೃಪಾ ಪೋಷಿತ ಸಂಸ್ಥೆಗಳಲ್ಲಿ ಕೆಲಸ ಮಾಡುವುದು, ಮೂರನೇ ಆಯ್ಕೆ ಬಹು ದೊಡ್ಡ ಪಬ್ಲಿಕ್ ಲಿಮಿಟೆಡ್ ಸಂಸ್ಥೆಗಳಲ್ಲಿ ದುಡಿಯುವುದು, ಇಲ್ಲೆಲ್ಲೂ ಸಿಗದೇ ಹೋದರೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ದುಡಿಯುವುದು ಅದೂ ಸಿಗಲಿಲ್ಲವೆಂದರೆ ಯಾವುದಾದರೂ ಚಿಕ್ಕ ಪುಟ್ಟ ವ್ಯಾಪಾರ ಮಾಡುವುದಷ್ಟೇ ಅಂದಿನ ಜನರ ಮುಂದಿದ್ದ ಆಯ್ಕೆಗಳು. ಮೊದಲೇ ಹೇಳಿದಂತೆ ಅಂದಿನ ಜನರ ಮುಂದೆ ಆಯ್ಕೆಗಳು ಬಹಳ ಕಡಿಮೆಯಿದ್ದವು. ಆಯ್ಕೆ ಕಡಿಮೆಯಿದ್ದಾಗ ದ್ವಂದ್ವ ಮತ್ತು ಗೊಂದಲಗಳು ಕಡಿಮೆ. ಆಯ್ಕೆ ಹೆಚ್ಚಾದಷ್ಟೂ ಗೊಂದಲ ಹೆಚ್ಚು. ಅಂದಿನ ಸಮಾಜದಲ್ಲಿ ಸ್ಥಿರತೆ ಎನ್ನುವ ಪದಕ್ಕೆ ಅರ್ಥವಿತ್ತು. ಕೆಲಸ ಮತ್ತು ಬದುಕಿನಲ್ಲಿ ಸ್ಥಿರತೆಗೆ ಮಹತ್ವವಿತ್ತು. ಒಬ್ಬ ವ್ಯಕ್ತಿ ಒಂದು ಕೆಲಸಕ್ಕೆ ಸೇರಿದರೆ ತನ್ನ ಜೀವನ ಪೂರ್ತಿ ಅದೇ ಸಂಸ್ಥೆಯಲ್ಲಿ ಕೆಲಸ ಮಾಡಿ ಕೊನೆಗೆ ನಿವೃತ್ತಿ ಪಡೆಯುತ್ತಿದ್ದ. ಆಗೆಲ್ಲಾ ಯಾರಾದರೂ ಕೆಲಸ ಬಿಡುತ್ತೇನೆ ಎಂದರೆ ಆತನನ್ನ ಅಪರಾಧಿಯಂತೆ ನೋಡಲಾಗುತಿತ್ತು. ಅಕಸ್ಮಾತ್ ಆತನನ್ನ ಯಾವುದಾದರು ಕಾರಣಕ್ಕೆ ಕೆಲಸದಿಂದ ಸಂಸ್ಥೆ ತೆಗೆದು ಬಿಟ್ಟರೆ ಜೀವನ ಮುಗಿದು ಹೋಯಿತು ಎನ್ನುವ ಭಾವನೆ ಅಂದಿನ ಜನರಲ್ಲಿತ್ತು!. ಇಂದು... ಇಂದೇನಾಗಿದೆ?? ಬದುಕು ಎಷ್ಟು ವೇಗ ಪಡೆದು ಕೊಂಡಿದೆ ಎಂದರೆ ಎಷ್ಟು ವೇಗ ಪಡೆದುಕೊಂಡಿದೆ ಎಂದು ಅರಿಯಲು ಕೂಡ ಪುರಸೊತ್ತಿಲದಷ್ಟು!!. ಬದುಕು ಕೇವಲ ವೇಗವನ್ನಷ್ಟೇ ಪಡೆದುಕೊಳ್ಳಲಿಲ್ಲ ತನ್ನ ಜೊತೆಗೆ ಜನರಿಗೆ ಅನೇಕ ಆಯ್ಕೆಗಳನ್ನ ಹೊತ್ತು ತಂದಿತು., ಆಯ್ಕೆಗಳ ಜೊತೆಗೆ ಅಸ್ಥಿರತೆ ಸದ್ದಿಲ್ಲದೆ ಬದುಕನ್ನ ಯಾವಾಗ ಆವರಿಸಿಕೊಂಡಿತು ಎನ್ನುವುದು ಕೂಡ ತಿಳಿಯಲಿಲ್ಲ. ಇವತ್ತಿನ ಸಮಾಜವನ್ನ 'ಗಿಗ್ ಎಕಾನಮಿ 'ಎನ್ನುತ್ತಾರೆ. ಇವತ್ತಿನ ಹುಡುಗರನ್ನ ಮಿಲ್ಲೆನ್ನಿಯಲ್ಸ್ ಎನ್ನುತ್ತಾರೆ. ಏನು?ಯಾಕೆ? ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. 
ಏನಿದು ಗಿಗ್ ಎಕಾನಮಿ? 
ಇದು ನಮ್ಮ ಎರಡು ಅಥವಾ ಮೂರು ದಶಕದ ಹಿಂದಿನ ಬದುಕಿನ ವ್ಯಾಖ್ಯೆಗೆ ಪೂರ್ಣ ತದ್ವಿರುದ್ದವಾದದ್ದು. ಅಂದರೆ ಇಲ್ಲಿ ಪರ್ಮನೆಂಟ್ ಕೆಲಸ ಎನ್ನುವ ಪದಕ್ಕೆ ಅರ್ಥವಿಲ್ಲ ಜೊತೆಗೆ ಪೂರ್ಣಾವಧಿ ಕೆಲಸ ಎನ್ನುವುದಕ್ಕೂ ಅರ್ಥವಿಲ್ಲ.  ಕೆಲಸಕ್ಕೆ ಎಂದು ಯಾವುದಾದರೂ ಸಂಸ್ಥೆಗೆ ಹೋಗಬೇಕು ಎನ್ನುವ ಪದಕ್ಕೂ ಅರ್ಥವಿಲ್ಲ. ಇಂದಿನ ಯುವಜನತೆ ಇಂಟರ್ನೆಟ್ ಮಾಧ್ಯಮ ಬಳಸಿ ತಾವು ಕುಳಿತಲ್ಲಿಂದ ಜಗತ್ತಿನ ಯಾರಿಗಾದರೂ ಸರಿಯೇ ಒಂದಷ್ಟು ದಿನಕ್ಕೆ ಅಥವಾ ಒಂದಷ್ಟು ವೇಳೆಗೆ ಕೆಲಸ ಮಾಡುತ್ತಾರೆ. ತಮ್ಮ ಕೆಲಸಕ್ಕೆ ತಕ್ಕ ಹಣ ಪಡೆಯುತ್ತಾರೆ. ಮುಂದೆ ಇಷ್ಟವಾದರೆ ಸರಿ ಇಲ್ಲದಿದ್ದರೆ ಮುಂದಿನ ವಾರ ಹೊಸ ಕೆಲಸ. ಹೊಸ ಬದುಕು. ಇದು ಗಿಗ್ ಎಕಾನಮಿ. ಇಲ್ಲಿ ಹಿಂದಿನಂತೆ ಕೆಲಸವನ್ನೇ ಬದುಕು ಎಂದು ಕೊಂಡ ಡೆಫಿನಿಷನ್ ಮಾಯವಾಗಿದೆ, ಇರುವುದೊಂದು ಬದುಕು ಅದನ್ನ ಬದುಕಲಿಕ್ಕೆ ಹಣ ಬೇಕು ಅದಕ್ಕೆ ಕೆಲಸ ಮಾಡಬೇಕು ಎನ್ನುವುದು ಮನಸ್ಥಿತಿ. ಜೊತೆಗೆ ಮಜಾ ನೋಡಿ ನಿನ್ನೆಯವರೆಗೆ ಅಕೌಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ತನ್ನ ವೃತ್ತಿಯನ್ನ ಬದಲಿಸಿ ತನ್ನ ಮನಸ್ಸಿಗೆ ಹೆಚ್ಚು ಹೊಂದುವ ಕೆಲಸ ಮಾಡಲು ಅವಾಕಾಶ ಮತ್ತು  ಆಯ್ಕೆ ಎರಡೂ ಇಲ್ಲಿದೆ! 
ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್  ಕೂಡ ನಿಖರವಾಗಿ ಗಿಗ್ ಎಕಾನಮಿ ಯಲ್ಲಿ ಕೆಲಸ ಮಾಡುತ್ತಿರುವ  ಜನರ ಸಂಖ್ಯೆಯನ್ನ ಇಷ್ಟೇ ಎಂದು ಹೇಳಲು ವಿಫಲವಾಗಿದೆ . ಆದರೆ ಅದರ ಅಂಕಿಅಂಶದ ಪ್ರಕಾರ ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಇದು 34 ಪ್ರತಿಶತ ಇದೆ  ಮತ್ತು ಇದರ ಸಂಖ್ಯೆ ಹೆಚ್ಚುತ್ತಾ 2020 ರ ವೇಳೆಗೆ 43 ಪ್ರತಿಶತ ತಲುಪುವ ಸಾಧ್ಯತೆಯಿದೆ ಎನ್ನುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ ನಾವು ನಿಖರವಾಗಿ ಯಾವುದೇ ಅಂಕಿಅಂಶ ನೀಡಲಾರೆವು ಕೂಡ! ಭಾರತದ ಜನಸಂಖ್ಯೆಯಂತಹ ಅತ್ಯಂತ ಸೂಕ್ಶ್ಮ ಸ್ಟಾಟಿಸ್ಟಿಕ್ಸ್ ನಮ್ಮ ಬಳಿ ಸರಿ ಇರುವುದಿಲ್ಲ ಅಂದ ಮೇಲೆ ಗಿಗ್ ಎಕಾನಮಿ ಯಲ್ಲಿ ದುಡಿಯುವರ ಸಂಖ್ಯೆ ಎಲ್ಲಿ ಲೆಕ್ಕ ಸಿಕ್ಕಿತು!! ಇರಲಿ ಬದಲಾದ ಭಾರತದಲ್ಲಿ ಗಿಗ್ ಆಗಲೇ ನೆಲೆಯೂರಿದೆ ಎನ್ನುವುದನ್ನ ಮಾತ್ರ ಹೇಳಬಹದು. 
ಈ ಗಿಗ್ ಎಕಾನಮಿ ಏಕೆ ಶುರುವಾಯ್ತು ? 
ಜಗತ್ತು ಇಂದಿಗೂ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ವಿಷಯ ಗೊತ್ತಿರುವುದೇ. ಇದರ ಹೊಡೆತದ ಬಿಸಿ ತಟ್ಟಿದ್ದು 2007/2008 ರಲ್ಲಿ ಯೂರೋಪಿನ ಮಟ್ಟಿಗೆ ಅದನ್ನ 2009 ಎಂದು ಹೇಳಬಹದು. ಈ ವೇಳೆಯ ನಂತರ ಜಗತ್ತು ಪೂರ್ಣ ಬದಲಾಗಿ ಹೋಗಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಲೇಬೇಕು, ಹೊಂದಿಕೊಳ್ಳಬೇಕು ಜೀವನದ ಬಂಡಿ ಎಳೆಯಲೇಬೇಕು. ಆಯ್ಕೆಗಳು ಬಹಳವಿರುವ ಈ ಸಮಯದಲ್ಲಿ ಆಯ್ಕೆಯಿಲ್ಲದೆ ಅಥವಾ ಬೇರೆ ದಾರಿಯಿಲ್ಲದೆ ಈ ಮಾರ್ಗವನ್ನ ಒಪ್ಪಿಕೊಳ್ಳಬೇಕಾಗಿರುವು ಇಂದಿನ ಬದುಕಿನ ಅಣಕವೇ ಸರಿ. ಉದಾಹರಣೆ ನೋಡೋಣ ಇದರಿಂದ ಗಿಗ್ ಎಕಾನಮಿ ಹುಟ್ಟಿನ ನಿಖರತೆ ನಿಮ್ಮದಾಗುತ್ತದೆ. ಅಮೇರಿಕಾ ದೇಶದಲ್ಲಿ 2003 ರ ಆಸುಪಾಸಿನಲ್ಲಿ ಯೂನಿವರ್ಸಿಟಿ ಡಿಗ್ರಿ ಪಡೆದು ಹೊರಬಂದ ವಿದ್ಯಾರ್ಥಿಯ ತಲೆಯ ಮೇಲಿನ ಸಾಲದ ಮೊತ್ತ 18 ಸಾವಿರ ಡಾಲರ್. 2015/2016 ರಲ್ಲಿ ಹೊರಬರುವ ವಿದ್ಯಾರ್ಥಿ ತಲೆಯ ಮೇಲಿರುವ ಶಿಕ್ಷಣದ ಮೇಲಿನ ಸಾಲದ ಮೊತ್ತ  37ಸಾವಿರ ಡಾಲರ್ !! ಅಂದರೆ ಹತ್ತಿರತ್ತಿರ 25 ಲಕ್ಷ ರೂಪಾಯಿ ! ಈ ಮೊತ್ತ ಅಲ್ಲಿನ ಜನರಿಗೂ ದೊಡ್ಡ ಮೊತ್ತವೇ ಸಂಶಯ ಬೇಡ. ಇಷ್ಟು ದೊಡ್ಡ ಮೊತ್ತವನ್ನ ತೀರಿಸುವ ಹೊಣೆಗಾರಿಕೆ ಆ ವ್ಯಕ್ತಿಯ ಮೇಲೆ ಇರುತ್ತದೆ. ಮೊದಲ ಬಾರಿಗೆ ಕೆಲಸದ ಮಾರುಕಟ್ಟೆ ಪ್ರವೇಶಿಸುವ ಹುಡುಗನಿಗೆ ಕಾಯುವ ಸಂಯಮವೆಲ್ಲಿ? ಸಮಯವೆಲ್ಲಿ? ಬದುಕಿನ ಬಂಡಿ ಎಳೆಯಲು ಹಣ ಬೇಕು ಅದಕ್ಕೆ ಯಾವ ಕೆಲಸವಾದರೇನು? ಎನ್ನುವ ಮನಸ್ಥಿತಿಯನ್ನ ಯುವಜನತೆ ಬೆಳೆಸಿಕೊಂಡಿದ್ದಾರೆ. ಇಲ್ಲಿ ಪೂರ್ಣಾವಧಿ ಮತ್ತು ಪರ್ಮನೆಂಟ್ ಎನ್ನುವ ಪದಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!. ಇದು ಭಾರತದಲ್ಲೂ ಕಾಲೂರಿಯಾಗಿದೆ. ಅಸ್ಥಿರತೆ ಎನ್ನುವುದು ಸ್ಥಿರವಾಗಿರುವ ಅಂಶ ಎನ್ನುವುದನ್ನ ಯುವಜನತೆ ಅರಿತು ಕೊಂಡಿದ್ದಾರೆ ಹಾಗಾಗಿ ಅವರ ಚಿಂತನೆಯ ಶೈಲಿಯೇ ಬದಲಾಗಿ ಹೋಗಿದೆ. ಅಂಕಿಅಂಶದ ಪ್ರಕಾರ ನಮ್ಮ ದೇಶದಲ್ಲಿ 7 ಕೋಟಿಗೂ ಮೀರಿದ ಹೆಣ್ಣು ಮಕ್ಕಳು ಮದುವೆ ಯಾಗಲು ಬಯಸುವುದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಂದರೆ ಗಮನಿಸಿ ಅಷ್ಟೇ ಸಂಖ್ಯೆಯ ಹಡುಗರು ಕೂಡ ಒಂಟಿ!. ಇವೆಲ್ಲಾ ಅಸ್ಥಿರತೆಯ ಪ್ರಭಾವ, ನಾಳಿನ ಬದುಕಿನ ಬಗ್ಗೆ ಸ್ಪಷ್ಟತೆ ಇಲ್ಲದರ ಪ್ರಸಾದ. 
ಗಿಗ್ ಎಕಾನಮಿ ಮಾರಕವೇ? ಪೂರಕವೇ? 
ಇದು ಮಳೆ ಬಂದರೆ ಒಳ್ಳೆಯದೇ? ಕೆಟ್ಟದೆ? ಅಂದಹಾಗೆ ಒಳ್ಳೆಯದೂ ಹೌದು, ಕೆಟ್ಟದ್ದು ಹೌದು. ಒಳ್ಳೆಯದು ಹೇಗೆಂದರೆ  1) ಜಗತ್ತಿನ ಎಲ್ಲಾ ಯೋಗ್ಯ ಅಭ್ಯರ್ಥಿಗಳು ಗಡಿಯ ಅಂತಕವಿಲ್ಲದೆ ತಾವು ಕುಳಿತಲ್ಲಿಂದ ಕೆಲಸ ಮಾಡಬಹದು 2) ತಮಗಿಷ್ಟ ಬಂದ ವೇಳೆಯಲ್ಲಿ ದುಡಿಯಬಹದು  3) ತಮಗಿಷ್ಟವಾದ ಕ್ಷೇತ್ರದಲ್ಲಿ ದುಡಿಯಬಹದು 4)ಕೆಲಸಕ್ಕೆ ಹೋಗಿಬರುವ ಅಂತಕವಿರುವುದಿಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋಗಬಹದು. 
ಮಾರಕ ಕೂಡ ಹೌದು ಏಕೆಂದರೆ ಮುಖ್ಯವಾಗಿ 1) ಅಸಂಘಟಿರಾಗಿ ಹೋಗುತ್ತೇವೆ. ಸಂಸ್ಥೆಯಲ್ಲಿ ಲೇಬರ್ ಸಂಘಟೆನೆಯಿರುತ್ತದೆ ಇಲ್ಲಿ ಅದು ಇರುವುದಿಲ್ಲ. 2) ಸಂಸ್ಥೆಗಳು ಅಥವಾ ಬಂಡವಾಳಗಾರರು ಅತ್ಯಂತ ಕಡಿಮೆ ಹಣಕ್ಕೆ ನಮ್ಮನ್ನ ದುಡಿಸಿಕೊಳ್ಳುತ್ತದೆ. 3) ನಾಳೆ ಏನು ಎನ್ನುವ ಅಸ್ಥಿರತೆ ಹೆಚ್ಚಾಗುತ್ತದೆ. ಹೆಚ್ಚಾದ ಅಸ್ಥಿರತೆ ಇಡೀ ಸಮಾಜದ ಸ್ವಾಸ್ಥಯವನ್ನ ಹಾಳು ಮಾಡುವ ಶಕ್ತಿ ಹೊಂದಿದೆ. 
ಹೊಸದೆಲ್ಲ ಅದ್ಭುತವೇನಲ್ಲ. ಬದುಕಿಗೆ ಬೇಕಾಗಿರುವುದು ಸ್ಥಿರತೆ ಮತ್ತು ನಂಬಿಕೆ . ಗಿಗ್ ಎಕಾನಮಿ ಯಂತಹ ಹೊಸ ಸಮಾಜ ನಿರ್ಮಾಣವಾಗುತ್ತಿರುವುದು ನಾಳಿನ ಮೇಲಿನ ಅಪನಂಬಿಕೆಯಲ್ಲಿ, ನಂಬಿಕೆಯಿಲ್ಲದೆ ಸ್ಥಿರತೆಗೆಲ್ಲಿ ಜಾಗ? ಲಾಭಕ್ಕಿಂತ ಇವುಗಳಿಂದ ನಷ್ಟವೇ ಜಾಸ್ತಿ. ಒಂಟಿ ಬದುಕುವುದು, ನಾನಾಯ್ತು ನನ್ನ ಬದುಕಾಯ್ತು ಎನ್ನವುದು ಹೆಚ್ಚಾಗಲಿದೆ. ಮೊದಲೇ ಸಂಘಟಿತರಲ್ಲದ ನಮ್ಮನ್ನ ಇನ್ನು ಶತಮಾನಗಳು ಕಳೆದರೂ ಸಂಘಟಿರಾಗದೆ ಇರಲು ಈ ರೀತಿಯ ಸಮಾಜ ಸದ್ದಿಲ್ಲದೇ ಸೃಷ್ಟಿಯಾಗಿದೆ. ಇದರ ನೇರವಾಗಿ ಲಾಭ ಪಡೆಯುವರು ಮಾತ್ರ ಬೆರಳೆಕೆಯ ಬಂಡವಾಳಗಾರರು! 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com