ಚಿನ್ನ
ಚಿನ್ನ

ಕ್ರಿಪ್ಟೋ ಕರೆನ್ಸಿ ಯುಗದಲ್ಲಿ ಮಾಸುವುದೇ ಚಿನ್ನದ ಹೊಳಪು ?

ನಾವು ಹೆಚ್ಚು ಖರೀದಿಸಬಹುದು, ಹೀಗೆ ನೂರಾರು ವಿಚಾರ ನಿಮ್ಮ ತಲೆಯಲ್ಲಿ ಹೊಕ್ಕು ಕೆಲಕ್ಷಣ ನಿಮ್ಮ ಚಿಂತನೆಗೆ ಹಚ್ಚಿರಬಹುದು. ಬನ್ನಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಏಕೆ ಇಷ್ಟು ಮಹತ್ವ ಪಡೆದಿದೆ, ಈ ಮಹತ್ವ
ಬಂಗಾರ, ಸಾಮಾನ್ಯ ಜನರ ಭಾಷೆಯಲ್ಲಿ ಗೋಲ್ಡ್! ಈ ಗೋಲ್ಡ್ ಮೇಲೆ ಜಗತ್ತಿನ ಜನರಿಗೆ ಇನ್ನಿಲ್ಲದ ವ್ಯಾಮೋಹ. ಬಂಗಾರ ಕೂಡ ಬೆಳ್ಳಿ, ತಾಮ್ರ ದಂತೆ ಒಂದು ಲೋಹ, ಅದರೆ ಹೊಡಿಕೆದಾರರಿಗೆ ಚಿನ್ನದ ಮೇಲೆ ಎಲ್ಲಕಿಂತ ಹೆಚ್ಚು ಮೋಹ ಏಕೆ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏಕಿಷ್ಟು ಸದ್ದು? ಏಕೆ ಇದರ ಬೆಲೆ ಮಾರುಕಟ್ಟೆಯಲ್ಲಿ ಇಷ್ಟೊಂದು ಏರಿಳಿತ ಕಾಣುತ್ತೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಬೆಲೆ ಇಳಿಯುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಕಡಿಮೆ ಆದರೆ ಒಳ್ಳೆಯದೇ ಅಲ್ಲವೇ? ನಾವು ಹೆಚ್ಚು ಖರೀದಿಸಬಹುದು, ಹೀಗೆ ನೂರಾರು ವಿಚಾರ ನಿಮ್ಮ ತಲೆಯಲ್ಲಿ ಹೊಕ್ಕು ಕೆಲಕ್ಷಣ ನಿಮ್ಮ ಚಿಂತನೆಗೆ ಹಚ್ಚಿರಬಹುದು. ಬನ್ನಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಏಕೆ ಇಷ್ಟು ಮಹತ್ವ ಪಡೆದಿದೆ, ಈ ಮಹತ್ವ ಎಂದಿನಿಂದ ಸಿಕ್ಕಿತು, ಇಂದಿನ ಇದರ ಸ್ಥಿತಿ, ಮುಂದಿನ ಇದರ ಗತಿ ಇವುಗಳ ನೋಡೋಣ. 
ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದಲ್ಲ, ಕ್ರಿಸ್ತ ಪೂರ್ವ 5 ನೇ ಶತಮಾನದಲ್ಲಿ ಇಂದಿನ ಟರ್ಕಿ ದೇಶಕ್ಕೆ ಸೇರಿದ ಲಿಡಿಯ ದಲ್ಲಿ ಕೊಡು ಕೊಳ್ಳುವಿಕೆಯ ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು. ನಾಣ್ಯ ಎಷ್ಟು ತೂಕ ಹೊಂದಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿರ್ಧಾರ ಆಗ್ತಾ ಇತ್ತು. 19 ನೇ ಶತಮಾನದಲ್ಲಿ ಜಗತ್ತಿನ ಬಹು ಪಾಲು ದೇಶಗಳು ತಮ್ಮ ಕರೆನ್ಸಿ ಮೌಲ್ಯ ಚಿನ್ನದೊಂದಿಗೆ ಹೋಲಿಕೆ ಮಾಡುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಣಿಕೆ ಕಷ್ಟವಾಯ್ತು, ವ್ಯಾಪಾರ, ವಹಿವಾಟಿಗೆ ಹೊರಡುವ ನಾವಿಕರು ನೂರಾರು ಕೆಜಿ ಚಿನ್ನವ ಸಾಗಿಸುವುದು ಸುಲಭದ ಕೆಲಸವಾಗಿರಲಿಲ್ಲ, ಜೊತೆಗೆ ಕಳ್ಳ ಕಾಕರ ಭಯ ಬೇರೆ. ಹೀಗಾಗಿ ಪೇಪರ್ ಮೇಲೆ ಮೌಲ್ಯ ಮುದ್ರಿಸಿ ತೊಡಗಿದರು. ಇಂತಹ ಪೇಪರ್ ಕೊಟ್ಟು ಅಷ್ಟೇ ಮೌಲ್ಯದ ಚಿನ್ನ ಪಡೆಯುವ ಅವಕಾಶ ಕಲ್ಪಿಸಲಾಯಿತು, ಚಿನ್ನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಇದರಿಂದ ತಪ್ಪಿತು. ಯಾವ ದೇಶ ಅತಿ ಹೆಚ್ಚು ಬಂಗಾರ ಹೊಂದಿದೆಯೋ ಆ ದೇಶ ಹೆಚ್ಚು ಶ್ರೀಮಂತ ದೇಶ ಎಂದು ಪರಿಗಣಿಸಲಾಗುತಿತ್ತು. 1870 ರಿಂದ 1914 ರ ವರೆಗೆ ಚಿನ್ನ ವಹಿವಾಟಿನ ಮೂಲವಾಗಿತ್ತು. ಮೊದಲನೇ ಮಹಾಯುದ್ದದ ನಂತರ, ಸಾಂಬಾರು ಪದಾರ್ಥ, ಬೆಳ್ಳಿ, ತಾಮ್ರಗಳು ಕೂಡ ನಾಣ್ಯದ ಮೌಲ್ಯ ಅಳೆಯುವ ಸಾಧನಗಳಾಗಿ ಉಪಯೋಗಿಸಲ್ಪಟವು, ಇಂಗ್ಲೆಂಡ್ ಹಾಗು ಅದರ ಸಾಮಂತ ದೇಶಗಳು ಮಾತ್ರ ಬಂಗಾರವನ್ನು ಮೌಲ್ಯ ಅಳೆಯುವ ಸಾಧನವನ್ನಾಗಿ ಬಳಸುತ್ತಿದ್ದವು. 1854 ರಲ್ಲಿ ಪೋರ್ಚುಗಲ್, 1871 ರಲ್ಲಿ ಜೆರ್ಮನಿ ಹೀಗೆ ಎಲ್ಲರೂ ಬಂಗಾರದ ಹಿಂದೆ ಬಿದ್ದರು. ಒಂದು ಗ್ರಾಂ ಚಿನ್ನಕೆ ಇಷ್ಟು ಬೆಲೆ ಎಂದು ನಿಗದಿಪಡಿಸಿದರು. ಅಮೇರಿಕಾ ಆ ದಿನಗಳಲ್ಲಿ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿತ್ತು. 
ಎರಡನೇ ಮಹಾಯುದ್ದದ ನಂತರ ಜಗತ್ತಿನ ಎಲ್ಲ ದೇಶಗಳು ತಮ್ಮ ಕರೆನ್ಸಿ ಮೌಲ್ಯ ಅಮೆರಿಕಾದ ಡಾಲರ್ ಮೌಲ್ಯದೊಂದಿಗೆ ತುಲನೆ ಮಾಡಿ ನಿಗದಿ ಮಾಡಲು ಶುರು ಮಾಡಿದರು, ಅಂದಿಗೆ ಜಗತ್ತಿನ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿದ್ದ ಅಮೇರಿಕಾಗೆ ಅನಾಯಾಸವಾಗಿ ಓದಗಿದ ಪಟ್ಟ ಅದು. ಒಂದು ಔನ್ಸ್ (28.34 ಗ್ರಾಂ) ಗೆ 30 ಡಾಲರ್ ಬೆಲೆ ಕಟ್ಟಲಾಗಿತ್ತು, ಬೆಲೆ ಏರಿಕೆ ಕಂಡು ಅದು 45 ಡಾಲರ್ ಆದಾಗ ಎಲ್ಲರೂ ಅದರ ಲಾಭ ಪಡೆಯಲು ತಮ್ಮಲಿದ್ದ ಪತ್ರ ( ಕರೆನ್ಸಿ ನೋಟ್ ) ಕೊಟ್ಟು ಚಿನ್ನ ಪಡೆಯಲು ಹವಣಿಸಿದರು, ಇರದ ಚಿನ್ನ ತರುವುದಾದರೂ ಎಲ್ಲಿಂದ? ಮೌಲ್ಯ ಹೆಚ್ಚಿದ್ದು ಕಾಲ್ಪನಿಕ! ಅಂದರೆ ಮನುಷ್ಯನ ಮನಸ್ಸಿನಲ್ಲಿ ಆತ ಸೃಷ್ಟಿಸಿದ 'ಆಟದಲ್ಲಿ' ಬಂಗಾರ ಹೆಚ್ಚಾಗಿತ್ತು. ಇದ್ದ ಬಂಗಾರವೇನೂ ಮೊಟ್ಟೆ ಇಟ್ಟಿರಲಿಲ್ಲ. ಹೀಗಾಗಿ ಬಂಗಾರದ ಒಟ್ಟು ಮೊತ್ತ ಇದ್ದಷ್ಟೇ ಇತ್ತು. ಆದರೇನು 'ಆಟದಲ್ಲಿ' ಭಾಗಿಯಾದವರಿಗೆ ಲಾಭ ಮುಖ್ಯ. ತಮ್ಮ ಬಂಗಾರದ ಮೌಲ್ಯ ಹೆಚ್ಚಾಗಿದೆ ಎಂದು ತಿಳಿದದ್ದೇ ತಡ, ನೋಟು ಕೊಟ್ಟು ಬಂಗಾರ ಬೇಕು ಎನ್ನುವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕೇಳಿದವರಿಗೆಲ್ಲ ನೋಟು ಪಡೆದು ಚಿನ್ನ ಕೊಡಲು ಹೇಗೆ ತಾನೇ ಸಾಧ್ಯ? ಇಲ್ಲದ ಚಿನ್ನವ ತರುವುದಾದರೂ ಎಲ್ಲಿಂದ? 1971 ರಲ್ಲಿ ಕೊನೆಗೆ ಅಂದಿನ ಅಮೇರಿಕಾ ಅಧ್ಯಕ್ಷ ನಿಕ್ಸನ್ ಬಂಗಾರದೊಂದಿಗೆ ಡಾಲರ್ ಮೌಲ್ಯವನ್ನ ನಿರ್ಧರಿಸುವ ನಿಲುವನ್ನು ತೆಗೆದು ಹಾಕುತ್ತಾನೆ. 
ನೂರು ಡಾಲರ್ ಎಂದು ಮುದ್ರಿಸಿರುವ ಪೇಪರ್ ಕೊಟ್ಟರೆ ಇಂದು ನಮಗೆ ಚಿನ್ನದ ಕಿಲುಬು ಕೂಡ ಸಿಗುವುದಿಲ್ಲ. ನಿಕ್ಸನ್ ಅಂದಿಗೆ ಎದುರಾದ ಸಮಸ್ಯೆ ಬಗೆಹರಿಸಿದರು, ಹೂಡಿಕೆದಾರರು ತಮ್ಮ ಕೈಲಿದ್ದ ಮೌಲ್ಯವಿಲ್ಲದ ಪೇಪರ್ ನಂಬಲೇ ಇಲ್ಲ! ವಿಪರ್ಯಾಸ ನೋಡಿ ಜಗತ್ತಿನಲ್ಲಿ ಇಂದಿಗೆ ಅತಿ ಹೆಚ್ಚು ನಂಬಿಕೆ ಪಡೆದಿರುವ ಕರೆನ್ಸಿ ಇದೆ ಅಮೆರಿಕನ್ ಡಾಲರ್!. ಅನಾದಿ ಕಾಲದಿಂದಲೂ ಕೇವಲ ಕೆಲವು ಜನ ಮಾಡುವ ತಪ್ಪುಗಳಿಗೆ, ಕಪ್ಪ ಕೊಡುವುದು ಜನ ಸಮಾನ್ಯ ಮಾತ್ರ! ಜಾಗತಿಕ ಮಾರುಕಟ್ಟೆಯಲ್ಲಿ ಇಂದಿಗೂ ಚಿನ್ನ ಏಕೆ ಪ್ರಸ್ತುತ ಎನ್ನುವುದು ಬುದ್ದಿವಂತ  ಓದುಗ ಗ್ರಹಿಸಿರುತ್ತಾನೆ ಎಂದು ಭಾವಿಸುವೆ. 
ಸರಿ, ಹೀಗಿರುವಾಗ ಚಿನ್ನದ ಮೌಲ್ಯ ಕುಸಿಯುವುದೇಕೆ? 
* ಗಮನಿಸಿ, ಚಿನ್ನದ ಮೌಲ್ಯವನ್ನು ಇಂದಿಗೂ ಡಾಲರ್ ನಲ್ಲಿ ಅಳೆಯುತ್ತೇವೆ. ಡಾಲರ್ ಮೌಲ್ಯ ಹೆಚ್ಚಿದರೆ ಚಿನ್ನದ ಮೌಲ್ಯ ಕುಸಿಯುತ್ತೆ, ಚಿನ್ನ ಸಂಗ್ರಹಿಸಿ ಇಡಲು ಹಣ ಖರ್ಚು ಮಾಡುತ್ತಿರಿ, ಇದರಿಂದ ಯಾವುದೇ ಬಡ್ಡಿ, ಅಥವಾ ವೃದ್ದಿ ಇಲ್ಲ, ಇದೊಂದು ಮಾನಸಿಕ ಧೈರ್ಯ ಕೊಡುವ ಹೂಡಿಕೆ ಅಷ್ಟೇ, ಹೆಚ್ಚಿದ ಡಾಲರ್ ಮೌಲ್ಯ ನಿಮ್ಮ ಸಂಗ್ರಹಣ ಖರ್ಚು ಹೆಚ್ಚಿಸುತ್ತೆ, ಹೀಗಾಗಿ ಹೂಡಿಕೆದಾರ ಇದರಲ್ಲಿ ನಿರಾಸಕ್ತಿ ತೋರಿಸುತ್ತಾನೆ, ನಮಗೆಲ್ಲಾ ಗೊತ್ತಿರುವಂತೆ ಡಿಮ್ಯಾಂಡ್ ಇಲ್ಲದೆ ಸಪ್ಲೈ ಮೌಲ್ಯ ಕಳೆದುಕೊಳ್ಳುತ್ತದೆ. 
* ಅಮೇರಿಕಾ ತನ್ನ ಕುಸಿದ ಮಾರುಕಟ್ಟೆಯ ಪುನರ್ ಜೀವನ ಗೊಳಿಸುವ ಉದ್ದೇಶದಿಂದ ತನ್ನ ಸಾಲ ಪತ್ರ (ಡೆಟ್ ಬಾಂಡ್ ) ದ ಮೇಲೆ ಹೆಚ್ಚಿನ ಬಡ್ಡಿ (ಇಂಟರೆಸ್ಟ್ ) ಕೊಡುವ ಆಮಿಷ ಒಡ್ಡಿದೆ , ಹಣಕಾಸಿನ ಆಟದಲ್ಲಿ ನಿಯಮಗಳ ಸೃಷ್ಟಿಸುವ ಅಮೆರಿಕನ್ನರು , ಹೇಗಾದರೂ ತನ್ನ ಡೆಟ್ ಬಾಂಡ್ ಮಾರಬೇಕೆನ್ನುವ ದರ್ದಿಗೆ ಬಿದ್ದಿದೆ , ಹೆಚ್ಚಿನ ಬಡ್ಡಿಯ ಆಸೆಗೆ ಹೂಡಿಕೆದಾರ ಡೆಟ್ ಬಾಂಡ್ ಗಳ ಕಡೆ ಮುಖ ಮಾಡಿರುವುದು , ಬಂಗಾರ ಬೆಲೆ ಇಳಿಯಲು ಇನ್ನೊಂದು ಕಾರಣ . 
* ಗ್ರೀಸ್ ಕುಸಿತ , ಅಸ್ಥಿರ ಯುರೋ ವಲಯ , ಅಲ್ಲಿನ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡಲು ಇದ್ದ ಪ್ರಮುಖ ಕಾರಣ , ಯೂರೋಪಿಯನ್ ಯೂನಿಯನ್ ಬ್ಯಾಂಕ್ , ಜರ್ಮನಿ ಹಾಗು ಫ್ರಾನ್ಸ್ ನೊಂದಿಗೆ ಮಾತುಕತೆ ನಡೆಸಿ , ಯುರೋ ಕರೆನ್ಸಿ ಒಡೆಯದಂತೆ , ಗ್ರೀಸ್ ಸಧ್ಯಕ್ಕೆ ಯುರೋ ವಲಯದಿಂದ ಹೊರ ಹೋಗದಂತೆ ತಡೆಯುವಲ್ಲಿ ಸಪಲವಾಗಿದೆ , ಘಂಟೆ , ದಿನದ ಲೆಕ್ಕದಲ್ಲಿ ಬಡ್ಡಿ ದುಡಿಯುವ ಹೂಡಿಕೆದಾರರು , ಸಹಜವಾಗಿ ಹೆಚ್ಚು ಬಡ್ಡಿ ಬರುವತ್ತ ಮುಖ ಮಾಡಿರುವುದು , ಬಂಗಾರದ ಕುಸಿತಕ್ಕೆ ಹೊಡೆದ ಇನ್ನೊಂದು ಕಲ್ಲು . 
* ಅಮೇರಿಕಾ ದೇಶಕ್ಕೆ ಸೆಡ್ಡು ಹೊಡೆದು ಇಲ್ಲಿ ತನಕ ಹೋರಾಟ ಕೊಟ್ಟು ಇದ್ದುದರಲ್ಲೇ ಗೆದ್ದಿರುವುದು ಚೀನಾ ದೇಶ, ಇದು ತನ್ನ ಕರೆನ್ಸಿ ಯುಆನ್ (YUAN) ನನ್ನು ರಿಸರ್ವ್ ಕರೆನ್ಸಿ ಮಾಡಲು ನಿರ್ಧರಿಸಿತ್ತು, ಅಂದರೆ ಡಾಲರ್ ಗೆ ಪರ್ಯಾಯ ಜಾಗತಿಕ ಕರೆನ್ಸಿ!, ಇದು ಸಾಧ್ಯವಾಗುವುದು ಜಗತ್ತಿನ ಎಲ್ಲಾ ದೇಶಗಳ ವಿಶ್ವಾಸಗಳಿಸಿದರೆ ಮಾತ್ರ, ಹೆಚ್ಚಿನ ಗೋಲ್ಡ್ ರಿಸರ್ವ್ ವಿಶ್ವಾಸಗಳಿಸಲು ಸಹಕಾರಿ, ಚೀನಾ ಹೆಚ್ಚು ಚಿನ್ನ ಖರೀದಿಸಲು ಅಣಿಯಾಗಿತ್ತು, ಆದರೆ ಅದದ್ದೆ ಬೇರೆ, ಚೀನಾದ ಹೂಡಿಕೆದಾರರು ಎಷ್ಟು ಕೊಬ್ಬಿ ಬೆಳೆದಿದ್ದಾರೆ ಎಂದರೆ ಚೀನಾ ಸರಕಾರ ತನ್ನೆಲ್ಲಾ ಪ್ರಯತ್ನದ ನಡುವೆ ಮಾರುಕಟ್ಟೆ ಕುಸಿತ ತಪ್ಪಿಸಲಾಗಿಲ್ಲ.  ಕಳೆದೆರಡು ವರ್ಷದಲ್ಲಿ  ಷೇರು ಮಾರುಕಟ್ಟೆಯಲ್ಲಿ ಕರಗಿ ಹೋದ ಸಂಪತ್ತು 3.2 ಟ್ರಿಲಿಯನ್ ಡಾಲರ್, ಅದು ಎಷ್ಟು ದೊಡ್ಡದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ, ಭಾರತದ ಷೇರು ಮಾರುಕಟ್ಟೆಯ ಒಟ್ಟು ಮೊತ್ತದ ಎರಡರಷ್ಟು! ಅಂದಾಜು ಆಯಿತೆ? ನಮ್ಮ ದೇಶದ ಒಟ್ಟು ಷೇರು ಮಾರುಕಟ್ಟೆಯ ಎರಡರಷ್ಟು ಅವರು ಹಣ ಕಳೆದು ಕೊಂಡರು ಎಂದರೆ ಅವರ ಮಾರುಕಟ್ಟೆ ಎಷ್ಟು ದೊಡ್ಡದಿರಬಹುದು! ಹೀಗಾಗಿ, ಡಾಲರ್ ಗೆ ಪರ್ಯಾಯ ತನ್ನ ಕರೆನ್ಸಿ ವಿಶ್ವದ ಮುಂದಿಡುವ ಚೀನಾ ದೇಶದ ಆಸೆ ಸಧ್ಯಕ್ಕೆ ಈಡೇರುವ ಲಕ್ಷಣಗಳಿಲ್ಲ, ಹೀಗಾಗಿ ಹೆಚ್ಚು ಚಿನ್ನ ಖರೀದಿಸುವ ತನ್ನ ನಿಲುವಿನಿಂದ ಚೀನಾ ಹಿಂದೆಸರಿದದ್ದು, ಚಿನ್ನದ ಬೆಲೆ ಕುಸಿತದ ಗೋರಿಗೆ ಹೊಡೆದ ಕೊನೆಯ ಮೊಳೆ. 
ಹೋಗಲಿ ಬಿಡಿ ಆದದ್ದು ಒಳ್ಳೆಯದೇ ಆಯಿತು, ನಾವು ಹೆಚ್ಚು ಖರೀದಿಸಬಹುದು ಎಂದು ನೀವು ಹಿಗ್ಗುವಂತಿಲ್ಲ, ಏಕೆ? ಬನ್ನಿ ಚಿನ್ನದ ಬೆಲೆ ಕುಸಿತ ಹೇಗೆ ಒಂದು ದೇಶದ ಅರ್ಥಿಕ ಸ್ಥಿತಿಯ ಅಲ್ಲೋಲಕಲ್ಲೋಲ ಮಾಡುತ್ತೆ ನೋಡೋಣ . 
2003 ರ ಅಂಕಿ ಅಂಶದ ಪ್ರಕಾರ ಭಾರತ ದೇಶ ಒಂದರಲ್ಲಿ ಚಿನ್ನಕೆ ಸಂಬಂದಿಸಿದ ವಹಿವಾಟು 40 ಬಿಲಿಯನ್ ಅಮೆರಿಕಾ ಡಾಲರ್ (ಸರಿ ಸುಮಾರು ಒಂದು ಬಿಲಿಯನ್ 65೦೦ ಕೋಟಿ ರುಪಾಯಿ ಅಂದರೆ 2 ಲಕ್ಷ 60 ಸಾವಿರ ಕೋಟಿ ರುಪಾಯಿ ವ್ಯವಹಾರ, 2013 ರಲ್ಲಿ ಭಾರತದ ರಕ್ಷಣಾ ಬಜೆಟ್ 38 ಬಿಲಿಯನ್ ಡಾಲರ್ ಎಂದರೆ ಈ ಉದ್ದಿಮೆಯ ಮಹತ್ವ ಅರಿವಾದಿತು )
ಇಂದು ಗಲ್ಲಿ ಗಲ್ಲಿಗೆ ಎರಡೋ ಮೂರೋ ಗೋಲ್ಡ್ ಲೋನ್ ಕೊಡುವ ಸಂಸ್ಥೆಗಳಿವೆ, ಪ್ರಖ್ಯಾತ ನಟರು, ಸಮಾಜದ ಗಣ್ಯರು ಇದರ ರಾಯಭಾರಿಗಳು, ಇಂತಹ ಸಂಸ್ಥೆಗಳು ಹೆಚ್ಚು ವಹಿವಾಟು ನಡೆಸಬೇಕೆಂಬ ಆತುರದಲ್ಲಿ ಆಭರಣ ದ ಮೌಲ್ಯದ 80 ಕೆಲವೊಮ್ಮೆ 90 ಭಾಗ ಸಾಲ ಕೊಡುತ್ತಾರೆ, ಚಿನ್ನದ ಬೆಲೆ ಕುಸಿತ ಹೀಗೆ ಮುಂದುವರಿದು, ಹಲವು ತಿಂಗಳು ಚೇತರಿಕೆ ಕಾಣದಿದ್ದರೆ, ಉದ್ಯಮ ಸಂಕಟಕ್ಕೆ ಸಿಲುಕುತ್ತದೆ, ಉದಾಹರಣೆ ಸಮೇತ ನೋಡಣ. 
 ಜನವರಿ 2015 , ಗುಂಡಪ್ಪನಿಗೆ ಅರ್ಜೆಂಟ್ ಹಣ ಬೇಕಿತ್ತು , ಗೋಲ್ಡ್ ಲೋನ್ ಕೊಡುವ ಸಂಸ್ಥೆಗೆ ಹೋದ ,, ಚಿನ್ನದ ಬೆಲೆ 28 ಸಾವಿರ ಹತ್ತು ಗ್ರಾಂ ಗೆ , ತನ್ನ ಬಳಿ ಇದ್ದ 100 ಗ್ರಾಂ ಚಿನ್ನ ಒತ್ತೆ ಇಟ್ಟು  ಪಡೆದದ್ದು ಎರಡು ಲಕ್ಷ ಇಪ್ಪತು ನಾಲ್ಕು ಸಾವಿರ ( ಎರಡು ಲಕ್ಷ ಎಂಬತ್ತು ಸಾವಿರದ ಎಂಬತ್ತು ಭಾಗ ), ಆಕಸ್ಮಾತ್  ಚಿನ್ನದ ಬೆಲೆ ಕುಸಿದು 23 ಸಾವಿರ ಪ್ರತಿ ಹತ್ತು ಗ್ರಾಂ ಗೆ ಆದರೇನು ಗತಿ? ಅಂದರೆ 100 ಗ್ರಾಂ ಚಿನ್ನದ ಬೆಲೆ ಎರಡು ಲಕ್ಷ ಮೂವತ್ತು ಸಾವಿರ, ಆತ ಪಡೆದ ಸಾಲದ ಮೊತ್ತದ ಅಜೂಬಾಜು, ಗುಂಡಪ್ಪ ಬಡ್ಡಿ ಏಕೆ ಕಟ್ಟುತ್ತಾನೆ ? ನನ್ನ ಕೈಲಿ ಆಗೋಲ್ಲ ಚಿನ್ನ ನೀವೇ ಇಟ್ಕೋಳಿ ಸ್ವಾಮಿ ಎನ್ನುವ ಸಾಧ್ಯತೆ ಹೆಚ್ಚು. ಹೀಗಾದ್ರೆ ಗೋಲ್ಡ್ ಲೋನ್ ಕೊಡುವ ಈ ಸಂಸ್ಥೆಗಳ ಗತಿಯೇನು? 
ಸರಿ ಹಾಗಾದರೆ ಚಿನ್ನದ ಬೆಲೆ ಏರುವುದೇಕೆ? 
ಅಲ್ಲದೆ ಜಗತ್ತಿನಾದ್ಯಂತ ಎಲ್ಲಾ ಹೂಡಿಕೆದಾರರು, ಸಂಸ್ಥೆಗಳು, ಚಿನ್ನದ ಬೆಲೆಯನ್ನ ಇನ್ನಿಲ್ಲದಂತೆ ಕುಸಿಯಲು ಬಿಡುವುದಿಲ್ಲ. ಹಣದುಬ್ಬರ ಏರುಗತಿ ಕಂಡರೆ ಸಹಜವಾಗಿ ಅವರು ಚಿನ್ನದ ಮೇಲೆ ಮತ್ತೆ ಹೂಡಿಕೆ ಶುರು ಮಾಡುತ್ತಾರೆ. ಚಿನ್ನದ ಬೆಲೆ ಕುಸಿಯುದಕ್ಕೆ ಕೊಟ್ಟ ಎಲ್ಲಾ ಕಾರಣಗಳ ಉಲ್ಟಾ ಮಾಡಿದರೆ ಚಿನ್ನದ ಬೆಲೆಯೇರಿಕೆ ಕಾರಣಗಳಾಗುತ್ತವೆ . ಅಮೆರಿಕನ್ನರು ಇಂದಿಗೂ ಚಿನ್ನವನ್ನ ಜಗತ್ತಿನ ಆರ್ಥಿಕತೆ ನಿಯಂತ್ರಿಸಲು 'ಬ್ರೇಕ್ ' ನಂತೆ ಊಪಯೋಗಿಸುತ್ತಾರೆ. 
ಕೊನೆ ಮಾತು: ಕ್ರಿಪ್ಟೋ ಕರೆನ್ಸಿ ಯುಗಕ್ಕೆ ನಾವು ಅಂಬೆಗಾಲಿಡಲು ಶುರು ಮಾಡಿದ್ದೇವೆ . ಜಗತ್ತು ಪೂರ್ತಿ ಈ 'ಹೊಸಹಣ' ಕ್ಕೆ ಹೊಂದಿಕೊಳ್ಳುವವರೆಗೆ ಚಿನ್ನದ ಮೋಹ ಮಾಸುವುದಿಲ್ಲ. ಆಟದ ನಿಯಮ ಬರೆಯುವರ ಮನಸ್ಸಿನಲ್ಲಿ ಏನಿದೆ? ಎನ್ನುವುದರ ಮೇಲೆ ಚಿನ್ನ ತನ್ನ ಹೊಳಪು ಕಳೆದುಕೊಳ್ಳುತ್ತದೆಯೋ ಇಲ್ಲ ಮಾರುಕಟ್ಟೆಯ ಎಂದಿನಂತೆ ಆಳುತ್ತದೆಯೂ ಎನ್ನುವುದು ನಿರ್ಧಾರವಾಗಲಿದೆ . ಇನ್ನೊಂದು ದಶಕ ಚಿನ್ನವನ್ನ ಹೂಡಿಕೆದಾರರು ಬಿಡುವ ಸಾಧ್ಯತೆ ಕಡಿಮೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Related Stories

No stories found.

Advertisement

X
Kannada Prabha
www.kannadaprabha.com