ಜಾಗತಿಕ ಮಧ್ಯಮವರ್ಗಕ್ಕೆ ಗುದ್ದು, ಬೇಕಾಗಿದೆ ಹೊಸ ಆರ್ಥಿಕ ಮದ್ದು!

ಜಪಾನ್ ದೇಶದ್ದು ಅತ್ಯಂತ ವಿಚಿತ್ರ ಸಮಸ್ಯೆ. ಜಗತ್ತಿನ ಮತ್ಯಾವ ದೇಶವೂ ಅನುಭವಿಸದ ವಿಚಿತ್ರ ಸಮಸ್ಯೆ. ಅದೇನೆಂದರೆ ಇಲ್ಲಿನ ಜನರ ಬಳಿ ಹಣವಿದೆ ಆದರೆ ಅವರು ಅದನ್ನ ಖರ್ಚು ಮಾಡುವುದಿಲ್ಲ. ಹಣವನ್ನ....
ಜಾಗತಿಕ ಮಧ್ಯಮವರ್ಗಕ್ಕೆ ಗುದ್ದು ! ಬೇಕಾಗಿದೆ ಹೊಸ ಆರ್ಥಿಕ ಮದ್ದು!!
ಜಾಗತಿಕ ಮಧ್ಯಮವರ್ಗಕ್ಕೆ ಗುದ್ದು ! ಬೇಕಾಗಿದೆ ಹೊಸ ಆರ್ಥಿಕ ಮದ್ದು!!
ಭಾರತದಲ್ಲಿ ಬದುಕು ದುಸ್ತರ ಎನ್ನುವುದಕ್ಕೆ ಮುಂಚೆ ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳು ಎನಿಸಿಕೊಂಡ ಅಮೇರಿಕಾ ಜಪಾನ್ ಮತ್ತು ಚೀನಾ ದೇಶಗಳ ಸದ್ಯದ ಆರ್ಥಿಕ ಪರಿಸ್ಥಿತಿ ಅಲ್ಲಿನ ಮಧ್ಯಮ ವರ್ಗ ಮತ್ತು ಜನ ಸಾಮಾನ್ಯನ ಬದುಕಿನ ಬವಣೆಗಳನ್ನ ಒಂದಷ್ಟು ಅರಿತುಕೊಳ್ಳುವ ಪ್ರಯತ್ನ ಮಾಡೋಣ. ಜೊತೆಗೆ ಭಾರತದಲ್ಲಿ ಕೂಡ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯ ಕುರಿತು ಒಂದಷ್ಟು ತಿಳಿಯುವ ಪ್ರಯತ್ನ ಮಾಡೋಣ. 
ಗಮನಿಸಿ ನಮ್ಮೆಲ್ಲರ ಸಾಮಾನ್ಯ ಗ್ರಹಿಕೆ ಹಣವಿಲ್ಲದಿದ್ದರೆ ಮಾತ್ರ ಸಮಾಜದಲ್ಲಿ ಮತ್ತು ವ್ಯಕ್ತಿಗತವಾಗಿ ಸಮಸ್ಯೆ ಶುರುವಾಗುತ್ತದೆ. ಒಂದು ದೇಶ ಅತ್ಯಂತ ಸಂಪದ್ಭರಿತವಾಗಿದ್ದರೆ ಆ ದೇಶದಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆ ಇರಲು ಸಾಧ್ಯವಿಲ್ಲ ಎನ್ನುವುದು. ಆದರೆ ನಮ್ಮ ಗ್ರಹಿಕೆ ತಪ್ಪು! ಸಮಾಜದಲ್ಲಿ ಜನರ ಬಳಿ ಹೇರಳ ಹಣವಿದೆ, ದೇಶದಲ್ಲಿ ಹಣಕ್ಕೆ ಕೊರತೆಯಿಲ್ಲ ಹೀಗಿದ್ದೂ ಆ ದೇಶ ಅತ್ಯಂತ ಸಮಸ್ಯೆಯಿಂದ ಬಳಲುತ್ತಿದೆ ಎಂದರೆ ನೀವು ನಂಬಲೇಬೇಕು. ಆ ದೇಶದ ಹೆಸರು ಜಪಾನ್! 
ಜಪಾನ್ ದೇಶದ್ದು ಅತ್ಯಂತ ವಿಚಿತ್ರ ಸಮಸ್ಯೆ. ಜಗತ್ತಿನ ಮತ್ಯಾವ ದೇಶವೂ ಅನುಭವಿಸದ ವಿಚಿತ್ರ ಸಮಸ್ಯೆ. ಅದೇನೆಂದರೆ ಇಲ್ಲಿನ ಜನರ ಬಳಿ ಹಣವಿದೆ ಆದರೆ ಅವರು ಅದನ್ನ ಖರ್ಚು ಮಾಡುವುದಿಲ್ಲ. ಅಂದರೆ ಅವಶ್ಯಕತೆ ಮೀರಿ ಹಣವನ್ನ ಖರ್ಚು ಮಾಡುವರಲ್ಲ ಜಪಾನಿಯರು. ಹೀಗಾಗಿ ಮನೆ ಇರಬಹದು ಅಥವಾ ಕಾರು ಇರಬಹುದು ಇವುಗಳ ಬೆಲೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಸಮಾಜದಲ್ಲಿ 'ಕೊಳ್ಳುವಿಕೆ' ಕುಸಿದರೆ ಇಡೀ ದೇಶವೇ ಕುಸಿದಂತೆ. ಇದನ್ನ ನಾವೇ ತೋಡಿಕೊಂಡ ಹಳ್ಳ ಎನ್ನಬಹದು. ಜಪಾನೀ ಸರಕಾರ ಜನರು ಉಳಿಸುವ ಹಣದ ಮೇಲೆ ಬಡ್ಡಿ ಕೊಡುವುದಿಲ್ಲ, ಸಾಲದಕ್ಕೆ ಅವರು ಆ ಹಣವನ್ನ ಖರ್ಚು ಮಾಡಲು ಪ್ರೋತ್ಸಹಿಸುತ್ತದೆ. ಇದನ್ನ ಮೀರಿಯೂ ಹಣವನ್ನ ಬ್ಯಾಂಕಿನಲ್ಲಿ ಇಟ್ಟರೆ ಅಂತವರಿಗೆ ನೆಗಟಿವ್ ಬಡ್ಡಿ ವಿಧಿಸುತ್ತದೆ. ಅಂದರೆ ಹಣವನ್ನ ಬ್ಯಾಂಕಿನಲ್ಲಿ ಇಟ್ಟ ತಪ್ಪಿಗೆ ಗ್ರಾಹಕರೇ ಬ್ಯಾಂಕಿಗೆ ಬಡ್ಡಿಯನ್ನ ಕೊಡಬೇಕು. ಇದೊಂತರ ವಿಚಿತ್ರ ಸನ್ನಿವೇಶ. ಇಲ್ಲಿ ವಸ್ತು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿಯುತ್ತದೆ. ಹೀಗಾಗಿ ಸರಕಾರದ ಬಳಿ ಸಾರ್ವಜನಿಕ ಕೆಲಸಗಳನ್ನ ಮಾಡಲು ಕೂಡ ಹಣವಿರುವುದಿಲ್ಲ. ಉದಾಹರಣೆಗೆ ಮೆಟ್ರೋ ದುರಸ್ಥಿ, ಪಾರ್ಕುಗಳ ಮೈಂಟೆನೆನ್ಸ್ ಹೀಗೆ ಹಲವಾರು ಸಣ್ಣ ಪುಟ್ಟ ಕೆಲಸಗಳಿಗೂ ಸರಕಾರದ ಬಳಿ ಹಣವಿರುವುದಿಲ್ಲ. ನಿಮಗೆ ನಗು ಬರಬಹದು ಎಂತಹ ವ್ಯವಸ್ಥೆಯನ್ನ ಹಣೆದುಕೊಂಡಿದ್ದೇವೆ ಎಂದು. ನಿಜ ಬ್ಯಾಂಕುಗಳ ಬಳಿ ಹೇರಳವಾಗಿ ಹಣವಿದೆ ಆದರೆ ಸರಕಾರದ ಖಜಾನೆ ಖಾಲಿ ಖಾಲಿ!! ಇಂತಹ ಸಂದರ್ಭದಲ್ಲಿ ಜಪಾನಿ ಸರಕಾರ ಅಸೆಟ್ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನ ಜಪಾನಿನ ಸೆಂಟ್ರಲ್ ಬ್ಯಾಂಕ್ ಹಣಕೊಟ್ಟು ಖರಿಸುತ್ತದೆ. ಸರಕಾರದ ಬಳಿ ಹಣ ಸಂಗ್ರಹಣೆಯಾಗುತ್ತದೆ ಮತ್ತು ಅದು ಅದನ್ನ ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸುತ್ತದೆ. ಸರಿ ಇಲ್ಲಿ ಸಮಸ್ಯೆ ಎಲ್ಲಿ ಬಂತು? ಎನ್ನುವ ನಿಮ್ಮ ಪ್ರಶ್ನೆಗೆ ಮುಂದಿನ ಸಾಲುಗಳಲ್ಲಿ ಉತ್ತರ ದೊರೆಯಲಿದೆ. ಜೊತೆಗೆ ಅಬ್ಬಾ ಹೀಗೂ ಉಂಟಾಗಬಹದು ಎನ್ನುವ ಭಾವನೆ ನಿಮ್ಮ ಮನದಲ್ಲಿ ಉಂಟಾಗುತ್ತದೆ ಖಚಿತ. 
ಹೀಗೆ ಜಪಾನ್ ಸರಕಾರ ಹೊರಡಿಸುವ ಬಾಂಡ್ ಗಳನ್ನ ಕೊಳ್ಳುವ ಜಪಾನ್ ಸೆಂಟ್ರಲ್ ಬ್ಯಾಂಕ್ ಬಳಿ ಇಂತಹ ಬಾಂಡ್ ಮೇಲಿನ ಹಣದ ಮೊತ್ತ 553 ಟ್ರಿಲಿಯನ್ ಯೆನ್ ಅಥವಾ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದರೆ ಅದೆಷ್ಟು ದೊಡ್ಡ ಮೊತ್ತ ಎನ್ನುವುದರ ಅರಿವಾದೀತು. ಇದನ್ನ ಇನ್ನಷ್ಟು ಸರಳವಾಗಿ ಹೇಳಬೇಕಂದರೆ ನಮಗೆಲ್ಲ ಆಪೆಲ್ ಸಂಸ್ಥೆ ಗೊತ್ತು. ಅದೆಷ್ಟು ದೊಡ್ಡ ಸಂಸ್ಥೆ ಎನ್ನುವುದನ್ನ ಬಿಡಿಸಿ ಹೇಳಬೇಕಾಗಿಲ್ಲ. ಅದೆಷ್ಟೋ ಚಿಕ್ಕ ಪುಟ್ಟ ದೇಶಗಳ ಬಜೆಟ್ ಮೀರಿದ ಸಂಸ್ಥೆ ಅದು. ಅಂತಹ ಸಂಸ್ಥೆಯ ಐದು ಪಟ್ಟು ಹೆಚ್ಚಿನ ಮಾರುಕಟ್ಟೆ ಮೌಲ್ಯದ  ಹಣವನ್ನ  ಜಪಾನೀ ಸೆಂಟ್ರಲ್ ಬ್ಯಾಂಕ್ ಬಾಂಡ್ ಕೊಂಡಿದೆ. ಇನ್ನಷ್ಟು ಸರಳವಾಗಿ ಹೇಳಬೇಕಂದರೆ ಜಪಾನ್ ದೇಶದ ವಾರ್ಷಿಕ ಬಜೆಟ್ ನ ಹಣವದು. ಈಗೇನಾಗಿದೆ ಎಂದರೆ ಜಪಾನ್ ಸೆಂಟ್ರಲ್ ಬ್ಯಾಂಕ್ ನ ಬಳಿ ಇನ್ನಷ್ಟು ಬಾಂಡ್ ಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲಕ್ಕೂ ಒಂದು ಮಿತಿ ಎಂದಿರುತ್ತದೆ. ಸರಕಾರದ ಬಳಿ ಹಳೆ ಬ್ಯಾಂಡ್ಗಳನ್ನ ಬಿಡಿಸಿಕೊಳ್ಳಲು ಹಣವಿಲ್ಲ!! ಮಜಾ ನೋಡಿ ಜಪಾನ್ ಸಮೃದ್ಧ ದೇಶ ಆದರೆ ಅವರು ಈ ರೀತಿಯ ಹೊಸ ಆರ್ಥಿಕ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಸರಕಾರ ಮತ್ತು ಸೆಂಟ್ರಲ್ ಬ್ಯಾಂಕ್ ದೇಶದಲ್ಲಿ ಹಣದುಬ್ಬರ ಹೆಚ್ಚಿಸಲು ಹರಸಾಹಸ ಪಟ್ಟರೂ ಇದು ಎರಡು ಪ್ರತಿಶತ ಮೀರಿ ಹೋಗುತ್ತಿಲ್ಲ. 
ಅತಿ ಉಳಿತಾಯ, ಅತಿ ಶಿಸ್ತು ಕೂಡ ಒಳ್ಳೆಯದಲ್ಲ. ನಮ್ಮ ಹಿರಿಯರು ಅತಿಯಾದರೆ ಅಮೃತವೂ ವಿಷ ಎಂದದ್ದು ಇದಕ್ಕೇ ಇರಬೇಕು. 
ಇನ್ನು ಚೀನಾ ದೇಶದ್ದು ಜಪಾನ್ ಗೆ ತದ್ವಿರುದ್ದ ಕಥೆ! ಅಮೇರಿಕಾ ಹಾಕಿರುವ ನಿರ್ಬಂಧಗಳು, ಟ್ರೇಡ್ ವಾರ್ ಅದನ್ನ ಹೈರಾಣು ಮಾಡಿದೆ. ಸಾಮಾನ್ಯವಾಗಿ ಜಗತ್ತಿನೆಲ್ಲೆಡೆ ಮಧ್ಯಮ ವರ್ಗ ಎನ್ನುವುದಕ್ಕೆ ಬೇರೆ ಬೇರೆ ರೀತಿಯ ಡೆಫಿನಿಷನ್ ಇದೆ. ಇಷ್ಟು ಸಂಪತ್ತು ಹೊಂದಿದ್ದರೆ ಅವರನ್ನ ಮಧ್ಯಮ ವರ್ಗ ಎನ್ನಬಹದು ಎನ್ನುವುದಕ್ಕೆ ಬೇರೆ ಬೇರೆ ಅಳತೆಗೋಲುಗಳಿವೆ. ಅವೆಲ್ಲವ ಮೀರಿ ಜಗತ್ತಿಗೆಲ್ಲ ಅನ್ವಯಿಸುವಂತ ಒಂದು ಡೆಫಿನಿಷನ್ ಎಂದರೆ ಕನಿಷ್ಠ ಎರಡು ಕಾರು, ವರ್ಷಕ್ಕೆ ಎರಡು ಅಥವಾ ಮೂರು ವಿದೇಶಿ ಪ್ರವಾಸ ಮಾಡುವ ಬಲವುಳ್ಳವರನ್ನ ಮಧ್ಯಮ ವರ್ಗ ಎನ್ನಬಹದು. ಉಳಿದಂತೆ ಭಾರತದಲ್ಲಿ ಇರುವ ಮಧ್ಯಮ ವರ್ಗ ಅದು ಕಲ್ಪನೆಯಷ್ಟೇ! ಭಾರತದಲ್ಲಿರುವುದು ಅತ್ಯಂತ ಬಡ ಮಧ್ಯಮವರ್ಗ. ಇರಲಿ. ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಧ್ಯಮ ವರ್ಗ ಎನ್ನಿಸಿಕೊಳ್ಳುವ ಮಟ್ಟದ ಜನರ ಸಂಖ್ಯೆ ಕಳೆದ ಒಂದೆರೆಡು ದಶಕದಲ್ಲಿ ಚೀನಾದಲ್ಲಿ ಅತ್ಯಂತ ಹೆಚ್ಚಿನ ವೇಗದಲ್ಲಿ ವೃದ್ಧಿಯಾಯಿತು. ಚೀನಾ ಜಗತ್ತಿನ ಎಲ್ಲಾ ದೇಶದ ಎಕಾನಾಮಿಯನ್ನ ಹಿಂದಿಕ್ಕಿ ಅಭಿವೃದ್ಧಿ ಪಥದಲ್ಲಿರುವಾಗ ಜನಿಸಿದ ಒಂದು ಪೀಳಿಗೆ ಸೋಲು, ಅಥವಾ ಆರ್ಥಿಕ ಹತಾಶೆಯನ್ನ ಕಂಡೆ ಇರಲಿಲ್ಲ. ಈಗೇನಾಗಿದೆ ಬೀಜಿಂಗ್ ನಲ್ಲಿ ಕಳೆದ ಒಂದು ವರ್ಷದಲ್ಲಿ ಅಪಾರ್ಟ್ಮೆಂಟ್ ಬಾಡಿಗೆಯಲ್ಲಿ 40 ಪ್ರತಿಶತ ಏರಿಕೆ ಕಂಡಿದೆ. ಅಮೇರಿಕಾ ಸಾರಿರುವ ಟ್ರೇಡ್ ವಾರ್ ನಿಂದ ಅನೇಕ ವಸ್ತುಗಳ ಬೆಲೆ 20 ರಿಂದ 30 ಪ್ರತಿಶತ ಏರಿಕೆ ಕಂಡಿದೆ. ಹಣ್ಣು ತರಕಾರಿ ಬೆಲೆಗಳು ಕೂಡ ಗಗನ ಮುಟ್ಟುತ್ತಿವೆ. ಗಮನಿಸಿ ಉಪ್ಪಿನಕಾಯಿ ಮಾಡುವ ಕಂಪನಿ ಸ್ಟಾಕ್ ಮಾರ್ಕೆಟ್ ನಲ್ಲಿ ನೊಂದಾಯಿಸುಕೊಳ್ಳುವ ಮಟ್ಟಕ್ಕೆ ಬೆಳೆದ ಚೀನಾ ಅದೇ ಕಂಪನಿಯ ಶೇರನ್ನ 200 ಪ್ರತಿಶತ ಏರಿಕೆ ಕಾಣುವಂತೆ ಕೂಡ ಮಾಡುತ್ತದೆ. ಇಲ್ಲೆಲ್ಲಾ ಹೂಡಿಕೆ ಮಾಡಿದ ಜನ ಇವತ್ತು ಪಾಪರ್! ಇವತ್ತು ಅಂತಹ ಕಂಪನಿಗಳು ಇನ್ನಿಲ್ಲದ ಕುಸಿತ ಕಂಡಿವೆ. ಹೀಗಾಗಿ ಚೀನಾದಲ್ಲಿ ಯಾವ ವೇಗದಲ್ಲಿ ಮಧ್ಯಮವರ್ಗ ಏರಿಕೆ ಕಂಡಿತೋ ಅಷ್ಟೇ ವೇಗದಲ್ಲಿ ಕುಸಿತವನ್ನೂ ಕಾಣುತ್ತಿದೆ. ಇಲ್ಲಿನ ಯುವ ಜನತೆ ಸರಕಾರ ನಮ್ಮನ್ನ  ಹೊಲದಲ್ಲಿ ಬೆಳೆಯುವ 'ಕಳೆ' ಯಂತೆ ಕಿತ್ತೆಸೆಯುತ್ತಿದೆ ಎನ್ನುತ್ತಾರೆ. ಇನ್ನೊಂದು ವರ್ಗ ನಾವು ಸರಕಾರಕ್ಕೆ ಟೇಬಲ್ ಮೇಲೆ ಕಡಿಯಲು ಮಲಗಿಸಿರುವ ಪ್ರಾಣಿಯಂತೆ., ಸರಕಾರಕ್ಕೆ ಬೇಕಿರುವುದು ಮಾಂಸವಷ್ಟೇ ಎಂದು ಸರಕಾರವನ್ನ ಟೀಕಿಸುವ ಮಟ್ಟಕ್ಕೆ ಬಂದಿದ್ದಾರೆ. 
ಜಪಾನ್ ದೇಶದ್ದು ಡೆಫ್ಲೇಷನ್, ಚೀನಾದ್ದು ಇನ್ಫ್ಲೇಶನ್ ಸಮಸ್ಯೆ ಅಮೆರಿಕಾದ್ದು?? ನೋಡೋಣ ಬನ್ನಿ. ಅಮೇರಿಕಾದ್ದು ಈಗ ತಾನೇ ರಿಟೈರ್ ಅದ ಮನುಷ್ಯನ ಪರಿಸ್ಥಿತಿ. ಇಷ್ಟು ದಿನ ಜನರೆಲ್ಲಾ ಗೌರವ ಕೊಡುತ್ತಿದ್ದರು ಮಾಡಲು ಕೆಲವಿತ್ತು, ಇದೀಗ ನಿವೃತ್ತಿ ನಂತರ ಎಲ್ಲವೂ ಬದಲಾಗಿದೆ. ಜಗತ್ತಿನ ದೇಶಗಳ ಮುಂದೆ ದೊಡ್ಡಣ್ಣನ ಪಟ್ಟ ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದೆ. ಜೊತೆಗೆ ಚೀನಾದ ಮೇಲಿನ ಟ್ರೇಡ್ ವಾರ್ ಇಲ್ಲಿ ಕೂಡ ಸಾಕಷ್ಟು ಹಣದುಬ್ಬರ ಸೃಷ್ಟಿಮಾಡಿದೆ. ಚೀನಾ ದೇಶದಲ್ಲಿ ಆದಂತೆ ಇಲ್ಲಿ ಕೂಡ ಸದ್ದಿಲ್ಲದೇ ಮಧ್ಯಮವರ್ಗ ಮಾಯವಾಗುತ್ತಿದೆ. ಜನರಲ್ಲಿನ ಕೊಳ್ಳುವ ಶಕ್ತಿಯಲ್ಲಿ ಅಪಾರ ಇಳಿಕೆಯಾಗಿದೆ. ಟ್ರೇಡ್ ವಾರ್ ಯಾವ ದೃಷ್ಟಿಯಿಂದಲೂ ಸದ್ಯದ ಮಟ್ಟಿಗೆ ಅಮೆರಿಕಾಕ್ಕೂ ಲಾಭದಾಯಕವಾಗಿಲ್ಲ. ಜಗತ್ತಿನ ತುಂಬೆಲ್ಲಾ ಅಮೆರಿಕನ್ ಡ್ರೀಮ್ ಎನ್ನುವ ಅಲೆಯಿತ್ತು. ಇದೀಗ ಅದೊಂದು ಮರೀಚಿಕೆ ಎನ್ನುವುದು ಎಲ್ಲರಿಗೂ ತಿಳಿದಿದೆ. 
ಇನ್ನು ಭಾರತದ ಕಥೆ. ಗಮನಿಸಿ ಭಾರತ ಈಗ ತಾನೇ ಕೆಲಸಕ್ಕೆ ಸೇರಿದ ನವ ಯುವಕ. ಅಂದರೆ ಕಷ್ಟ ನಷ್ಟಗಳು ಏನೇ ಬರಲಿ ಅವನ್ನ ಎದುರಿಸಿ ನಿಲ್ಲುವ ತಾಕತ್ತು ಈ ದೇಶಕ್ಕಿದೆ. ಇಲ್ಲಿನ ಮಹಾನ್ ಸಮಸ್ಯೆ ಮತ್ತು ಮಹಾನ್ ಶಕ್ತಿ ಎರಡೂ ಇಲ್ಲಿನ ಯುವ ಜನತೆ!. ದಕ್ಷಿಣ ಭಾರತದಲ್ಲಿ ಯುವ ಜನತೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಜಗತ್ತಿನ ಇತರ ದೇಶಗಳಲ್ಲಿ ಜೊತೆಗೆ ಭಾರತಲ್ಲೇ ಕುಳಿತು ದುಡಿಯುತ್ತಿದ್ದಾರೆ. ಒಂದು ವರ್ಗ ಉನ್ನತಿಯನ್ನ ಕಾಣುತ್ತಿದ್ದಾರೆ. ಉತ್ತರ ಭಾರತದಲ್ಲಿನ ಯುವ ಜನತೆ ಬದುಕಿಗೆ ಬೇಕಾದ ಯಾವುದೇ ಕೌಶಲ್ಯವನ್ನ ಕೂಡ ವೃದ್ಧಿಸಿಕೊಳ್ಳದೆ ಸುಮ್ಮನೆ ಅಲೆದಾಡುತ್ತಿದ್ದರೆ. ಇವರೆಲ್ಲ ನೆಡೆದಾಡುವ ಟೈಮ್ ಬಾಂಬ್ಗಳಿದ್ದಂತೆ ಯಾವ ಸಮಯದಲ್ಲಿ ಸ್ಪೋಟವಾಗುತ್ತದೆ ಹೇಳಲು ಬಾರದು. ಗುರಿಯೇ ಇಲ್ಲದ, ಬದುಕಿಗೆ ಅರ್ಥವೇ ಇಲ್ಲದೆ ಬದುಕುತ್ತಿರುವ ಇಂತಹ ಕೋಟಿ ಸಂಖ್ಯೆಯ ಯುವ ಜನತೆ ಭಾರತಕ್ಕೆ ಅತಿ ದೊಡ್ಡ ಅಪಾಯ.ಇಷ್ಟೇ ಅಲ್ಲದೆ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ಕೂಡ ನಮ್ಮ ಆರ್ಥಿಕತೆಯ ಬುಡಮೇಲು ಮಾಡಿಬಿಡುತ್ತದೆ. ಸದ್ಯಕ್ಕೆ ಉತ್ತರ ಪ್ರದೇಶ ಒಂದರಲ್ಲೇ ಕೋಟಿಗೂ ಮೀರಿದ ಯುವಕರು ಕೆಲಸವಿಲ್ಲದೇ ಇದ್ದಾರೆ ಎನ್ನುತ್ತದೆ ಅಂಕಿಅಂಶ. ಭಾರತ ಈಗಿರುವ ಯುವ ಜನತೆಯ ಬದುಕಿಗೊಂದು ದಾರಿ ಹುಡುಕಬೇಕಿದೆ. ಜನಸಂಖ್ಯೆಯ ವೇಗಕ್ಕೆ ಕಡಿವಾಣ ಹಾಕಬೇಕಿದೆ. 
ಕೊನೆ ಮಾತು: ಬಡವನ ಜೀವನ ಜಗತ್ತಿನ ಎಲ್ಲಾ ದೇಶದಲ್ಲೂ ಸೇಮ್! ಶ್ರೀಮಂತನ ಜೀವನ ಕೂಡ ಅಷ್ಟೇ ಎಲ್ಲೆಡೆಯೂ ಸೇಮ್! ಸಮಾಜಕ್ಕೆ ಹೆಚ್ಚು ದುಡಿಯುವ, ಸಮಾಜವನ್ನ ಮುನ್ನೆಡಿಸಿಕೊಂಡು ಹೋಗುವುದರಲ್ಲಿ ಅತಿ ಹೆಚ್ಚಿನ ಯೋಗದಾನ ನೀಡುವ ಬಡ/ಮಧ್ಯಮ/ಶ್ರೀಮಂತ ಮಧ್ಯಮ ವರ್ಗ ಮಾತ್ರ ಹೆಚ್ಚಿನ ಹೊಡೆತ ತಿನ್ನುತ್ತದೆ. ಎಲ್ಲಿ ಏನೇ ಆಗಲಿ ಅದರ ಹೊಡೆತ ಮಾತ್ರ ಮೊದಲು ಬೀಳುವುದು ಈ ವರ್ಗಕ್ಕೆ. ಈ ವರ್ಗ ನಿಷ್ಠೆಯಿಂದ ದುಡಿಯುತ್ತಿರುವುದರಿಂದ ಜಗತ್ತು ಇಂದು ಈ ಮಟ್ಟದಲ್ಲಿ ಇರಲು ಸಾಧ್ಯವಾಗಿದೆ. ಆದರೆ ಸದ್ಯದ ಜಾಗತಿಕ ಪರಿಸ್ಥಿತಿ ಈ ವರ್ಗಕ್ಕೆ ಮಾರಕವಾಗಿದೆ. ಇದು ಜಗತ್ತಿನ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಸುದ್ದಿಯಂತೂ ಅಲ್ಲ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com