ಆರ್ ಬಿ ಐ ವಿತ್ತ ನೀತಿ ಕೇಂದ್ರ ಸರಕಾರಕ್ಕೆ ಫಜೀತಿ!

ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟಸಾಧ್ಯ.
ಆರ್ ಬಿ ಐ ವಿತ್ತ ನೀತಿ ಕೇಂದ್ರ ಸರಕಾರಕ್ಕೆ ಫಜೀತಿ!
ಆರ್ ಬಿ ಐ ವಿತ್ತ ನೀತಿ ಕೇಂದ್ರ ಸರಕಾರಕ್ಕೆ ಫಜೀತಿ!
ಭಾರತದಂತಹ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶದಲ್ಲಿ ಏನೇ ಮಾಡಿದರೂ ಅದರಿಂದ ಲಾಭ ಪಡೆಯುವರ ಸಂಖ್ಯೆ ಮತ್ತು ನಷ್ಟ ಹೊಂದುವರ ಸಂಖ್ಯೆ ಕೂಡ ದೊಡ್ಡದಾಗೇ ಇರುತ್ತದೆ. ಸಮಾಜದ ಒಂದು ವರ್ಗ ಸರಕಾರದ ನಿರ್ಧಾರ ಯಾವುದೇ ಇರಲಿ ಅದರಿಂದ ತೊಂದರೆಗೆ ಒಳಾಗುತ್ತದೆ. ಇನ್ನೊಂದು ವರ್ಗ ಅದೇ ನಿರ್ಧಾರದಿಂದ ಖುಷಿ ಪಡುತ್ತದೆ. ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟಸಾಧ್ಯ. 
ಸದ್ಯಕ್ಕೆ ಏರುಗತಿಯಲ್ಲಿರುವ ಬ್ಯಾಂಕ್ ಇಂಟರೆಸ್ಟ್ ರೇಟ್ ಅದಕ್ಕೊಂದು ಅತ್ಯುತ್ತಮ ಉದಾಹರಣೆ. 2014 ರಲ್ಲಿ ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಸಮಯದಲ್ಲಿ ಇದ್ದ ರೆಪೋ ರೇಟ್ 8ಪ್ರತಿಶತ. ಅಂದಿನಿಂದ ರೆಪೋ ರೇಟ್ ಕುಸಿತ ಕಾಣಲು ಶುರುವಾಗಿ 6 ಪ್ರತಿಶತ ಕಂಡಿತು. ಕಳೆದ ನಾಲ್ಕು ವರ್ಷದಲ್ಲಿ ಜೂನ್ ತಿಂಗಳಲ್ಲಿ ಪ್ರಥಮ ಬಾರಿಗೆ ಆರ್ ಬಿ ಐ ೦.25 ಪ್ರತಿಶತ ದರವನ್ನ ಏರಿಸಿದ್ದು ರೆಪೋ ರೇಟ್ 6. 25 ಪ್ರತಿಶತ ತಲುಪಿತು. ತೀರಾ ಇತ್ತೀಚಿಗೆ ಅಂದರೆ ಆಗಸ್ಟ್ 2018ರಲ್ಲಿ ಆರ್ ಬಿ ಐ ಮತ್ತೊಮ್ಮೆ 0.25 ಪ್ರತಿಶತ ಬಡ್ಡಿದರ ಏರಿಸಿದ್ದು, ಸದ್ಯದ ರೆಪೋ ರೇಟ್ 6.50 ಪ್ರತಿಶತವಿದೆ. ಇನ್ನು ಬಡ್ಡಿ ದರ ಹೆಚ್ಚು ಮಾಡದಂತೆ ಕೇಂದ್ರ ಸರಕಾರ ಆರ್ ಬಿಐ ಮೇಲೆ ಒತ್ತಡ ಹೇರಿದೆ. ಹೀಗಾಗಿ ಬಡ್ಡಿ ದರ ಮತ್ತಷ್ಟು ಹೆಚ್ಚಾಗದೆ ಯಥಾಸ್ಥಿತಿ ಕಾಯ್ದು ಕೊಂಡಿದೆ. ಹೀಗೆ ಬಡ್ಡಿ ದರ ಹೆಚ್ಚಾಗುವುದರಿಂದ ಮತ್ತು ಕಡಿಮೆಯಾಗುವುದರಿಂದ ಏನಾಗುತ್ತದೆ? ಎನ್ನುವುದನ್ನ ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ಹೀಗೆ ಬಡ್ಡಿ ದರ ಹೆಚ್ಚು -ಕಡಿಮೆಯಾಗಲು ಕಾರಣವಾದ ಹಣದುಬ್ಬರ ಎಂದರೇನು ಮತ್ತು ರೆಪೋ ರೇಟ್ ಎಂದರೇನು ಎನ್ನುವುದನ್ನ ಕೂಡ ತಿಳಿದುಕೊಂಡರೆ ಬಡ್ಡಿ ದರದ ಏರುಪೇರಾಟದ ಲಾಭ ನಷ್ಟಗಳ ಅರಿಯಲು ಸಹಾಯಕವಾಗುತ್ತದೆ. 
ಹಣದುಬ್ಬರ ಅಥವಾ ಜನ ಸಾಮಾನ್ಯನ ಭಾಷೆಯಲ್ಲಿ ಇನ್ಫ್ಲೇಶನ್ ಎಂದರೆ ವಸ್ತುವಿನ ಬೆಲೆಯಲ್ಲಿ ಸತತ ಏರಿಕೆ ಕಾಣುವುದು. ಅಂದರೆ ಉದಾಹರಣೆ ನೋಡಿ ವರ್ಷದ ಹಿಂದೆ ಒಂದು ಕೆ.ಜಿ ಅಕ್ಕಿಯ ಬೆಲೆ ನಲವತ್ತು ರೂಪಾಯಿ ಆದರೆ ಅದೇ ಅಕ್ಕಿಯನ್ನ ಇಂದು ಕೊಳ್ಳಲು ಹೋದರೆ ನಲವತ್ತೈದು ರೂಪಾಯಿ. ಹೀಗೆ ವಸ್ತುವಿನ ಬೆಲೆ ಸಮಯದಿಂದ ಸಮಯಕ್ಕೆ ಏರುಗತಿ ಕಂಡರೆ ಅದನ್ನ ಹಣದುಬ್ಬರ ಎನ್ನುತ್ತವೆ. ಇದಕ್ಕೆ ವಿರುದ್ಧವಾಗಿ ವಸ್ತುವಿನ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಂಡರೆ ಅದನ್ನ ಡಿಫ್ಲೇಷನ್ ಎನ್ನುತ್ತೇವೆ. ಗಮನಿಸಿ ಬೆಲೆಯೇರಿಕೆ ಅಥವಾ ಇಳಿಕೆ ಎನ್ನುವುದು ಮನುಷ್ಯನ ದೇಶದಲ್ಲಿ ಸಕ್ಕರೆ ಅಂಶ ಇದ್ದಂತೆ. ಅತ್ಯಂತ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಇದನ್ನ ಒಂದು ಹಂತದಲ್ಲಿ ಹಿಡಿತದಲ್ಲಿ ಇಡುವ ಅವಶ್ಯಕತೆಯಿದೆ. ಹೀಗೆ ಸಮಾಜದಲ್ಲಿ ವಸ್ತುಗಳ ಬೆಲೆ ತೀರಾ ಏರುಪೇರಾಗದಂತೆ ತಡೆಯಲು ಆರ್ ಬಿಐ ಬಳಸುವ ಅಸ್ತ್ರ ರೆಪೋ ರೇಟ್. ಇದನ್ನ ನೀವು ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬಳಸುವ ಇನ್ಸುಲಿನ್ ಗೆ ಹೋಲಿಸಬಹದು. 
ರೆಪೋ ರೇಟ್ ಎಂದರೆ ಸೆಂಟ್ರಲ್ ಬ್ಯಾಂಕ್ ಅಂದರೆ ಆರ್ ಬಿ ಐ ತನ್ನ ಬಳಿಯಿರುವ ಹಣವನ್ನ ಇತರ ಬ್ಯಾಂಕ್ಗಳಿಗೆ ಸಾಲ ನೀಡುವಾಗ ಅವಕ್ಕೆ ವಿಧಿಸುವ ಬಡ್ಡಿ ದರ. ಗಮನಿಸಿ ಇದು ದೇಶದ ಅತಿ ದೊಡ್ಡ ಮತ್ತು ಇತರ ಬ್ಯಾಂಕ್ಗಳ ನಡವಳಿಕೆ ಗಮನಿಸುವ ಬ್ಯಾಂಕು ಇತರ ಬ್ಯಾಂಕುಗಳಿಗೆ ಸಾಲ ನೀಡುವ ಹಣದ ಮೇಲೆ ವಿಧಿಸುವ ಬಡ್ಡಿ ಇಲ್ಲಿ ಸಾಮಾನ್ಯ ಗ್ರಾಹಕನ ಪ್ರವೇಶವಿಲ್ಲ. ಉದಾಹರಣೆ ನೋಡಿ. ಆರ್ ಬಿ ಐ ತನ್ನ ಬಳಿ ಇದ್ದ ಸಾವಿರ ರೂಪಾಯಿಯನ್ನ ಎಸ್ಬಿಐ ಬ್ಯಾಂಕಿಗೆ ಸಾಲ ನೀಡುತ್ತದೆ. ಹಾಗು ಅದರ ಮೇಲೆ ಬಡ್ಡಿ ವಿಧಿಸುತ್ತದೆ. ಹೀಗೆ ಆರ್ ಬಿ ಐ ಇತರ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ರೇಟ್ ಎನ್ನುತ್ತಾರೆ. ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕನಿಗೆ ವಿಧಿಸುವ ಬಡ್ಡಿ ದರ ರೆಪೋ ರೇಟ್ ಗಿಂತ ಹೆಚ್ಚಾಗಿರುತ್ತದೆ. 
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ತೈಲ ಬೆಲೆ ಇಲ್ಲಿ ನಾವು ತೈಲಕ್ಕೆ ಹೆಚ್ಚಿನ ಬೆಲೆ ತೆರುವ ಹಾಗೆ ಮಾಡಿದೆ.  ಇದೊಂದು ಚೈನ್ ರಿಯಾಕ್ಷನ್. ತೈಲ ಬೆಲೆ ಹೆಚ್ಚಾದ ತಕ್ಷಣ ಟ್ರಾನ್ಸ್ಪೋರ್ಟ್ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಸಹಜವಾಗೇ ಎಲ್ಲಾ ಸರಕುಗಳ ಬೆಲೆ ಹೆಚ್ಚಾಗುತ್ತದೆ. ಇಂತಹ ಸ್ಥಿತಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಆರ್ ಬಿ ಐ ಮಧ್ಯ ಪ್ರವೇಶಿಸುತ್ತದೆ. ಮೊದಲೇ ಹೇಳಿದಂತೆ ಇದು ಸರಿ ಅಥವಾ ತಪ್ಪು ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಸದ್ಯದ ಮಟ್ಟಿಗೆ ಹೇಳುವುದಾದರೆ ಕಳೆದ ಹತ್ತು ದಿನದಿಂದ (ನವೆಂಬರ್ 2018) ತೈಲ ಬೆಲೆ ಇಳಿಮುಖವಾಗಿದೆ. ಇದು ಭಾರತದ ಮಟ್ಟಿಗಂತೂ ಸಂತೋಷದ ವಿಷಯ. ಈ ರೀತಿಯ ಜಯ ಸಿಗಲು ಕೇಂದ್ರ ಸರಕಾರದ ಮುಖ್ಯಸ್ಥರು ರಷ್ಯಾ, ಇರಾನ್ ಮತ್ತು ಸೌದಿ ದೇಶಗಳಿಗೆ ಭೇಟಿ ನೀಡಿದ್ದು ಮತ್ತು ಸಂಧಾನ ಮಾಡಿಕೊಂಡದ್ದು ಎಂದು ವಿವರಿಸುವ ಅಗತ್ಯವಿಲ್ಲವಷ್ಟೆ. ಇರಲಿ.  ಮುಖ್ಯವಾಗಿ ಇದನ್ನ ಮೂರು ಭಾಗವಾಗಿ ವಿಭಾಗಿಸಿ ಯಾರಿಗೆ ಲಾಭ ಯಾರಿಗೆ ನಷ್ಟ ಎಂದು ನೋಡಬಹದು. ಜೊತೆಗೆ ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಇಡಲು ಇದು ಅವಶ್ಯಕ ಕೂಡ. 
ಹೂಡಿಕೆ ಮೇಲಿನ ಬಡ್ಡಿ ದರ: ಮೊದಲ ಸಾಲಿನಲ್ಲಿ ಹೇಳಿದಂತೆ ನಮ್ಮದು ಅತ್ಯಂತ ದೊಡ್ಡ ದೇಶ. ಎಲ್ಲಾ ನಿರ್ಧಾರಗಳು ಎಲ್ಲರಿಗೂ ಅನುಕೂಲ ಮಾಡಿಕೊಡುವುದಿಲ್ಲ. ಆದರೆ ಬಡ್ಡಿ  ದರ ಏರಿಕೆಯಿಂದ 12 ಕೋಟಿಗೂ ಮೀರಿ ಇರುವ ಹಿರಿಯ ನಾಗರಿಕರ ಮುಖದಲ್ಲಿ ಮಾತ್ರ ಒಂದು ಸಣ್ಣನೆಯ ನಗು ಮೂಡಿಸಿರುವುದು ಮಾತ್ರ ಸುಳ್ಳಲ್ಲ. ಗಮನಿಸಿ ಇಂಗ್ಲೆಂಡ್ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆಯಷ್ಟು ನಮ್ಮಲ್ಲಿ ಹಿರಿಯ ನಾಗರಿಕರು ಇದ್ದಾರೆ!  ಇವರ ಆದಾಯದ ಮೂಲ ಜೀವನ ಪೂರ್ತಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಒಂದಷ್ಟು ಹಣ. ಅದನ್ನ ಬ್ಯಾಂಕಿನಲ್ಲಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಅವರ ಜೀವನ ಸಾಗಬೇಕು. ಸೋಶಿಯಲ್ ಸೆಕ್ಯುರಿಟಿ ಇಲ್ಲದ ನಮ್ಮ ದೇಶದಲ್ಲಿ ಪಿಂಚಣಿ ಗಳಿಸುವ ಸಂಖ್ಯೆ ನಗಣ್ಯ. ಹೀಗಾಗಿ ಈ ವರ್ಗದ ಜನರ ಜೊತೆಗೆ ಕೈಲಾಗದವರು, ಅಸಹಾಯಕರು ಸೀಮಿತ ಹಣದ ಮೇಲಿನ ಬಡ್ಡಿಯಲ್ಲಿ ಜೀವನ ಸಾಗಿಸುವ ಲಕ್ಷಾಂತರ ಜನರಿಗೆ ಒಳಿತಾಗಲಿದೆ. ಆರ್ಥಿಕವಾಗಿ ಶಕ್ತರಲ್ಲದ  ಮತ್ತು ಶೋಷಿತರ ಕಲ್ಯಾಣಕ್ಕೆ ತೆರೆದ ಟ್ರಸ್ಟ್ ಗಳು ಕೂಡ ಇದರಿಂದ ಒಂದಷ್ಟು ಲಾಭ ಪಡೆಯಲಿವೆ. 
ಸಾಲದ ಮೇಲಿನ ಬಡ್ಡಿ ದರ: ಬಡ್ಡಿ ದರ ಕಳೆದ ನಾಲ್ಕು ವರ್ಷದಿಂದ ಇಳಿಮುಖವಾಗಿತು. ಇದು ರಿಯಲ್ ಎಸ್ಟೇಟ್ ಗೆ ವರದಾನವಾಗಿತ್ತು. ಲಕ್ಷಾಂತರ ಜನ ಇಳಿದ ಬಡ್ಡಿ ದರದ ಅನುಕೂಲ ಪಡೆದು ಮನೆ ಕಟ್ಟಲು, ಕಾರು ಕೊಳ್ಳಲು ಸಾಲ ಪಡೆದರು. ಇದೀಗ ಹೆಚ್ಚಾದ ಬಡ್ಡಿ ದರ ಸಾಲದ ಮೇಲೆ ಅವರು ಕಟ್ಟುತ್ತಿದ್ದ ಕಂತನ್ನ ಹೆಚ್ಚಾಗಿಸಲಿದೆ. ಹೊಸದಾಗಿ ಸಾಲ ಕೊಳ್ಳುವರು ಯೋಚಿಸಿ ಬಜೆಟ್ ಹೊಂದಿಸಿಕೊಂಡು ಸಾಲ ಮಾಡುವ ಹಾಗಾಗುತ್ತದೆ. ಜೊತೆಗೆ ಕಾರ್ಪೊರೇಟ್ ವಲಯ ಇಷ್ಟು ದಿನ ಕಡಿಮೆ ಬಡ್ಡಿ ದರದ ಪೂರ್ಣ ಲಾಭ ಪಡೆದವು. ಈಗ ಅವುಗಳಿಗೆ ಕೂಡ ತಮ್ಮ ಸಾಲದ ಮೇಲೆ ಕಟ್ಟುವ ಹಣದ ಮೊತ್ತ ಹೆಚ್ಚಾಗುತ್ತದೆ. ಹೊಸ ಸಾಲ ಮಾಡುವ ಮುನ್ನಾ ಎರಡು ಸಲ ಯೋಚಿಸುವ ಸ್ಥಿತಿ ಎದುರಾಗುತ್ತದೆ. ಇದರಿಂದ ಪ್ರಗತಿಯ ವೇಗ ಕುಂಟಾಗುತ್ತದೆ ಎನ್ನುವುದು ಕಾರ್ಪೊರೇಟ್ ವಲಯದ ಕೂಗು. 
ಷೇರು ಮಾರುಕಟ್ಟೆಯ ಮೇಲಿನ ಪರಿಣಾಮ: ಒಂದು ಹಂತದ ತನಕ ಹೆಚ್ಚಾಗುವ ಬಡ್ಡಿ ದರ ಷೇರು ಮಾರುಕಟ್ಟೆಯ ಮಟ್ಟಿಗೆ ಹುರುಪನ್ನೇ ತರುತ್ತದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯನ್ನ ಗಮನಿಸಿ ನೋಡಿ. ಅಲ್ಲಿ ಗೂಳಿಯ ಓಟ ಸ್ಪಷ್ಟವಾಗಿ ಕಾಣುತ್ತದೆ. ಬೆಲೆಯೇರಿಕೆ ಇರಬಹದು ಬಡ್ಡಿ ದರ ಏರಿಕೆಯಿರಬಹದು ಅದು ಬೆಳೆಯುತ್ತಿರುವ ಸಮಾಜದ ಲಕ್ಷಣ. ಸದ್ಯಕ್ಕೆ ಭಾರತದ ಷೇರುಮಾರುಕಟ್ಟೆ ಹೊಸ ಹುರುಪಿನೊಂದಿಗೆ ಮುನ್ನೆಡೆಯುತ್ತಿದೆ. ಜಗತ್ತಿನ ಪ್ರಮುಖ ದೇಶಗಳು ಆರ್ಥಿಕ ತಲ್ಲಣಗಳ ಹಾಸಿ ಹೊದ್ದಿರುವ ಸಮಯದಲ್ಲಿ ಭಾರತದ ಮಾರುಕಟ್ಟೆಯ ಓಟ ನಿಜಕ್ಕೂ ಆರೋಗ್ಯಕರ. 
ಕೊನೆ ಮಾತು: ಏರಿದ ಬಡ್ಡಿ ದರದಿಂದ ಕಾರ್ಪೊರೇಟ್ ವಲಯ, ಮನೆ /ಕಾರು ಅಥವಾ ಇತರ ಖರ್ಚುಗಳಿಗೆ ಸಾಲ ಮಾಡಿದ ಜನರಿಗೆ ಖರ್ಚು ಹೆಚ್ಚಾಗಲಿದೆ. ಇವರ ಸಾಲ ಇನ್ನಷ್ಟು ದುಬಾರಿಯಾಗಲಿದೆ. ಬ್ಯಾಂಕಿನಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಹಣವನ್ನ ನಂಬಿದ ಕೋಟ್ಯಂತರ ಜನರಿಗೆ ಇದರಿಂದ ಲಾಭವಾಗಲಿದೆ. ಇವರೆಡರಲ್ಲೂ ಇಲ್ಲದ ಇನ್ನೊಂದು ವರ್ಗದ ಜನಕ್ಕೆ ಇದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ. ಭಾರತದಂತ ಅತ್ಯಂತ ಜನಭರಿತ ದೇಶದಲ್ಲಿ ಬಡ್ಡಿ ದರವನ್ನ 6 ಪ್ರತಿಶತ ಇಡುವುದು ಸುಲಭದ ಮಾತಲ್ಲ! ಅದು ಸಾಧುವೂ ಅಲ್ಲ. ಹೀಗಾಗಿ ಏರಿದ ಬಡ್ಡಿ ದರ ಸದ್ಯದ ಮಟ್ಟಿಗಂತೂ ವರದಾನವೇ ಸರಿ. ಮಾರ್ಚ್ 2019ರ ಒಳಗೆ ಇನ್ನೆರೆಡು ಬಾರಿ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ ಆಗಲೂ ಬಡ್ಡಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರಕಾರಕ್ಕೆ ಬಡ್ಡಿ ದರ ಹೆಚ್ಚಿಸುವುದು ಬೇಕಿಲ್ಲ. ಇದೆ ತಿಂಗಳು ಅಂದರೆ 19 ನವೆಂಬರ್ 2018ಆರ್ ಬಿ ಐ ನೊಂದಿಗೆ ಕೇಂದ್ರ ಸರಕಾರ ಗುದ್ದಾಟ ನೆಡೆಸಿ ಕೆಲವು ಬ್ಯಾಂಕ್ಗಳ ಮೇಲಿನ ನಿಬಂಧನೆಯನ್ನ ತೆಗೆದು ಹಾಕಿಸುವಲ್ಲಿ ಸಫಲವಾಗಿದೆ. ಆರ್ ಬಿ ಐ ಸರಕಾರದ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಬಾರದು. ಆದರೇನು ಭಾರತದಂತ ದೊಡ್ಡ ದೇಶದಲ್ಲಿ ಬಹುಮತ ಪಡೆದು ಚುನಾಯಿತವಾದ ಸರಕಾರದ ಮುಂದೆ ಆರ್ ಬಿ ಐ ಮಣಿಯಲೇಬೇಕು. ಜಗತ್ತಿನ ಇತರ ದೇಶಗಳ ಆರ್ಥಿಕ ಸ್ಥಿತಿಗತಿ ನೋಡಿದರೆ ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಎನ್ನುವಂತಿದೆ ಭಾರತದ ಸದ್ಯದ ಸ್ಥಿತಿ. ಇದೆ ವರ್ಷ ಡಿಸೆಂಬರ್ ಐದು ಮತ್ತು ಮುಂದಿನ ವರ್ಷ ಅಂದರೆ 2019ರ ಫೆಬ್ರವರಿ 6 ರಂದು ಬಡ್ಡಿ ದರದ ಪರಿಷ್ಕರಣೆಯಿದೆ ಹೀಗಾಗಿ ಸೆಂಟ್ರಲ್ ಬ್ಯಾಂಕ್ ಮತ್ತು ಕೇಂದ್ರ ಸರಕಾರ ನಡುವೆ ಸದ್ಯದ ಮಟ್ಟಿಗಂತೂ ಗುದ್ದಾಟ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com