ಹಣದುಬ್ಬರ ಮಾರಕವೇ? ಪೂರಕವೇ? ಜಪಾನ್ ಕೊಡುತ್ತಿದೆ ಜಗತ್ತಿಗೆ ಉತ್ತರ!

13 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಹತ್ತಿರಹತ್ತಿರ ಒಂದೂವರೆ ಕೋಟಿಯಷ್ಟು ಜನ ತನ್ನ ವಿರುದ್ಧ ಲಿಂಗದ ಬಗ್ಗೆ ಯಾವುದೇ ಆಕರ್ಷಣೆ ಹೊಂದಿಲ್ಲ. ಅಂದರೆ ಹುಡುಗನಿಗೆ ಹುಡುಗಿಯ ನೋಡಿ ಯಾವುದೇ ಭಾವನೆ ಬರುವುದೇ
ಜಪಾನ್
ಜಪಾನ್
ತಂತ್ರಜ್ಞಾನ ಅಥವಾ ಟೆಕ್ನಾಲಜಿ ಎನ್ನುವ ಪದ ಇಂದು ಅತ್ಯಂತ ಹೆಚ್ಚು ಮಹತ್ವದ ಮತ್ತು ಹೆಚ್ಚು ಚಾಲ್ತಿಯಲ್ಲಿರುವ ಪದ. ಟೆಕ್ನಾಲಜಿ ನಾವು ಬದುಕುವ ರೀತಿಯನ್ನೇ ಬದಲಿಸಿಬಿಟ್ಟಿದೆ ಎನ್ನುವುದು ಕೂಡ ಅಷ್ಟೇ ಮಹತ್ವದ್ದು. ತಂತ್ರಜ್ಞಾನ ಎಂದರೆ ಜಪಾನ್ ದೇಶದ ಹೆಸರು ಹೇಳದೆ ಮುಂದೆ ಹೋಗುವಂತೆಯೇ ಇಲ್ಲ! ಜಪಾನಿಯರ ಶಿಸ್ತು, ದೇಶಭಕ್ತಿ, ವರ್ಕ್ ಎಥಿಕ್ಸ್ ವಿಶ್ವದಲ್ಲಿ ಮನೆಮಾತಾಗಿದೆ. ಹನ್ನೆರೆಡು ಕೋಟಿ ಅರವತ್ತು ಲಕ್ಷ ಜನಸಂಖ್ಯೆಯ ಈ ಪುಟ್ಟ ದೇಶ ಎರಡನೇ ಮಹಾಯುದ್ಧದಲ್ಲಿ ಅಣು ಬಾಂಬಿಗೆ ತುತ್ತಾಗಿ ಜರ್ಝರಿತವಾಗಿದ್ದು  ನಂತರದ ದಿನಗಳಲ್ಲಿ ವಿಶ್ವವೇ ತನ್ನೆಡೆಗೆ ತಿರುಗಿ ನೋಡುವಂತೆ ಬೆಳೆದು ನಿಂತದ್ದು, ಎಲ್ಲಕ್ಕೂ ಮುಖ್ಯ ಚೀನಾ ಎನ್ನುವ ದೈತ್ಯ ಶಕ್ತಿಯ ಮುಂದೆ ಗಾತ್ರದಲ್ಲಿ ಲೆಕ್ಕವಿಲ್ಲ ಎನ್ನುವಂತಿದ್ದೂ  ಚೀನಾಕ್ಕೆ ತಲೆಬಾಗದೆ ನಿಂತಿರುವುದು ಹೀಗೆ ಒಂದೇ ಎರಡೇ... ಜಪಾನ್ಗೆ ಜಪಾನೇ ಸಾಟಿ. ನಮ್ಮಲ್ಲಿ ಅತಿಯಾದರೆ ಅಮೃತವೂ ವಿಷ ಎನ್ನುವ ಒಂದು ಗಾದೆ ಮಾತಿದೆ, ತಂತ್ರಜ್ಞಾನದ ವಿಷಯದಲ್ಲಿ ಜಪಾನಿಗೆ ಈ ಮಾತನ್ನ ಅನ್ವಯಿಸಬಹುದೇನೋ? ವಿಶ್ವದೆದುರು ತನ್ನ ಇರುವಿಕೆಯನ್ನ ಮತ್ತು ತನ್ನ ಮಹತ್ವವವನ್ನ ತೋರಿಸಲು ಸತತ ಪರಿಶ್ರಮದಿಂದ ನೆಡೆದ ಜಪಾನ್ ಮುಂದಿನ ದಿನಗಳು ಹೇಗಿರಬಹುದು? ಜಗತ್ತು ನಿಬ್ಬೆರಗಾಗಿ ನೋಡುವಂತ ಸಾಧನೆ ಮಾಡಿದ ಜಪಾನ್ ಎನ್ನುವ ದೇಶದ ಓಟಕ್ಕೆ ಕಡಿವಾಣ ಹಾಕುತ್ತಿರುವ ವಿಷಯಗಳೇನು ಎನ್ನುವುದರ ಬಗ್ಗೆ ಒಂದಷ್ಟು ಗಮನ ಹರಿಸೋಣ. 
ಡಿಫ್ಲೇಷನ್ ಎನ್ನುವ ಕರಿಮೋಡ: 
ಡಿಫ್ಲೇಷನ್ ಎನ್ನುವುದು ಇನ್ಫ್ಲೇಶನ್ ಗೆ ವಿರುದ್ಧವಾದದ್ದು. ಇನ್ಫ್ಲೇಶನ್ ನ್ನು ಹಣದುಬ್ಬರ ಎನ್ನುತ್ತವೆ. ಡಿಫ್ಲೇಷನ್ ಅನ್ನು ಹಣದ ಕುಸಿತ ಎನ್ನಬಹುದು. ಸರಳವಾಗಿ ಹೇಳಬೇಕೆಂದರೆ ಸಮಾಜದಲ್ಲಿನ ಸರಕು ಮತ್ತು ಸೇವೆಯ ಮೇಲಿನ ಬೆಲೆ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆಗೆ ಡಿಫ್ಲೇಷನ್ ಎನ್ನುತ್ತೇವೆ. ಉದಾಹರಣೆ ನೋಡಿ ವರ್ಷದ ನಂತರ ಭಾರತದಂತಹ ದೇಶದಲ್ಲಿ ಹಾಲಿನ ಬೆಲೆ 30 ರೂಪಾಯಿ ಇದದ್ದು 32 ಅಥವಾ 35 ಆಗುತ್ತೆ ಆದರೆ ಜಪಾನ್ ನಲ್ಲಿ ಹಾಲಿನ ಬೆಲೆ ಏರುವ ಬದಲು ಕುಸಿಯುತ್ತೆ. ಈ ಉದಾಹರಣೆಯನ್ನ ಸಮಾಜದ ಇತರ ಸರಕು ಮತ್ತು ಸೇವೆಗೂ ಅಳವಡಿಸಿಕೊಳ್ಳಿ. 
ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಒಂದು ಮಟ್ಟದ ಇನ್ಫ್ಲೇಶನ್ ಅಗತ್ಯ. ನೀವು ಕೂಡಿಟ್ಟ ಹಣಕ್ಕೆ ಬಡ್ಡಿಯೇ ಇಲ್ಲ! ನೀವು ಸಾಲದಲ್ಲಿ ಕಾರು ಕೊಂಡರೆ ಅದಕ್ಕೂ ಬಡ್ಡಿಯಿಲ್ಲ.
ಇತ್ತೀಚೆಗಂತೂ ನೆಗೆಟಿವ್ ಇಂಟರೆಸ್ಟ್ ಹಾವಳಿ ಬೇರೆ ಇಲ್ಲಿ ಹೆಚ್ಚಾಗಿದೆ. ಅಂದರೆ ಕಾರಿನ ಬೆಲೆ ಹತ್ತು ಸಾವಿರ ಎಂದುಕೊಳ್ಳಿ ಕಾರು ಮಾರುವ ಸಂಸ್ಥೆ ಗ್ರಾಹಕರಿಗೆ ಕಾರು ಕೊಳ್ಳಲು ಪ್ರೇರೇಪಿಸಿ ವರ್ಷದ ನಂತರ 9,800 ಕೊಟ್ಟರೆ ಸಾಕು ಎನ್ನುತ್ತದೆ!!. ಇನ್ನೂ ಸರಳವಾಗಿ ಹೇಳಬೇಕೆಂದರೆ ಇದು ಸಕ್ಕರೆ ಖಾಯಿಲೆ ಇದ್ದಂತೆ. ಸಕ್ಕರೆ ಅಂಶ ತುಂಬಾ ಹೆಚ್ಚಾದರೆ ಆರೋಗ್ಯಕ್ಕೆ ತೊಂದರೆ. ತುಂಬಾ ಕಡಿಮೆಯಾದರೂ ಜೀವ ಹೋಗುವ ಅಪಾಯ ಇರುತ್ತದೆ. ದೇಹಕ್ಕೆ ಸಕ್ಕರೆ ಖಾಯಿಲೆ ಇದ್ದಂತೆ ದೇಶಕ್ಕೆ ಇನ್ಫ್ಲೇಶನ್ ಮತ್ತು ಡಿಫ್ಲೇಷನ್. ಇವೆರಡರ ನಡುವಿನ ಸಮತೋಲನ ಮಾತ್ರ ದೇಶದ ಆರ್ಥಿಕತೆ ಜೊತೆಜೊತೆಗೆ ಮಿಕ್ಕೆಲ್ಲಾ ವಿಷಯಗಳನ್ನು ಸುಸ್ಥಿತಿಯಲ್ಲಿಡುತ್ತದೆ. 
ಹೀಗಾದಾಗ ಏನಾಗುತ್ತೆ ಅಂದರೆ ಬ್ಯಾಂಕ್ಗಳಿಗೆ ಕೆಲಸ ಕಡಿಮೆಯಾಗುತ್ತೆ. ಗಮನಿಸಿ ಜಪಾನ್ ಆರ್ಥಿಕತೆ ಬ್ಯಾಂಕ್ ಅವಲಂಬಿತ. ಬ್ಯಾಂಕ್ಗಳ ಬಳಿ ಸಾಲ ಕೇಳುವರ ಸಂಖ್ಯೆ ಕಡಿಮೆಯಾಗುತ್ತದೆ. ಇರುವ ಹಣವನ್ನ ಯಾರಿಗಾದರೂ ಕೊಡಬೇಕು ಅದರಿಂದ ಒಂದಷ್ಟು ಹಣಗಳಿಸಬೇಕು ಅದು ನಿಯಮ. ಇದೊಂತರ ವಿಚಿತ್ರ ಸನ್ನಿವೇಶ. ಇಲ್ಲಿ ವಸ್ತು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿಯುತ್ತದೆ. ಹೀಗಾಗಿ ಸರಕಾರದ ಬಳಿ ಸಾರ್ವಜನಿಕ ಕೆಲಸಗಳನ್ನ ಮಾಡಲು ಕೂಡ ಹಣವಿರುವುದಿಲ್ಲ. ಉದಾಹರಣೆಗೆ ಮೆಟ್ರೋ ದುರಸ್ಥಿ, ಪಾರ್ಕುಗಳ ಮೈಂಟೆನನ್ಸ್ ಹೀಗೆ ಹಲವಾರು ಸಣ್ಣ ಪುಟ್ಟ ಕೆಲಸಗಳಿಗೂ ಸರಕಾರದ ಬಳಿ ಹಣವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಜಪಾನಿ ಸರಕಾರ ಅಸೆಟ್ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನ ಜಪಾನಿನ ಸೆಂಟ್ರಲ್ ಬ್ಯಾಂಕ್ ಹಣಕೊಟ್ಟು ಖರಿಸುತ್ತದೆ. ಸರಕಾರದ ಬಳಿ ಹಣ ಸಂಗ್ರಹಣೆಯಾಗುತ್ತದೆ ಮತ್ತು ಅದು ಅದನ್ನ ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸುತ್ತದೆ. 
ಹೀಗೆ ಜಪಾನ್ ಸರಕಾರ ಹೊರಡಿಸುವ ಬಾಂಡ್ ಗಳನ್ನ ಕೊಳ್ಳುವ ಜಪಾನ್ ಸೆಂಟ್ರಲ್ ಬ್ಯಾಂಕ್ ಬಳಿ ಇಂತಹ ಬಾಂಡ್ ಮೇಲಿನ ಹಣದ ಮೊತ್ತ 553 ಟ್ರಿಲಿಯನ್ ಯೆನ್ ಅಥವಾ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದರೆ ಅದೆಷ್ಟು ದೊಡ್ಡ ಮೊತ್ತ ಎನ್ನುವುದರ ಅರಿವಾದೀತು ಸದ್ಯದ ಸ್ಥಿತಿಯಲ್ಲಿ  ಜಪಾನ್ ಸೆಂಟ್ರಲ್ ಬ್ಯಾಂಕ್ ನ ಬಳಿ ಇನ್ನಷ್ಟು ಬಾಂಡ್ ಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲಕ್ಕೂ ಒಂದು ಮಿತಿ ಎಂದಿರುತ್ತದೆ. ಸರಕಾರದ ಬಳಿ ಹಳೆ ಬ್ಯಾಂಡ್ಗಳನ್ನ ಬಿಡಿಸಿಕೊಳ್ಳಲು ಹಣವಿಲ್ಲ!! ಮಜಾ ನೋಡಿ ಜಪಾನ್ ಸಮೃದ್ಧ ದೇಶ ಆದರೆ ಅವರು ಈ ರೀತಿಯ ಹೊಸ ಆರ್ಥಿಕ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಸರಕಾರ ಮತ್ತು ಸೆಂಟ್ರಲ್ ಬ್ಯಾಂಕ್ ದೇಶದಲ್ಲಿ ಹಣದುಬ್ಬರ ಹೆಚ್ಚಿಸಲು ಹರಸಾಹಸ ಪಟ್ಟರೂ ಇದು ಎರಡು ಪ್ರತಿಶತ ಮೀರಿ ಹೋಗುತ್ತಿಲ್ಲ. 
ಸದ್ಯಕ್ಕೆ ಜಪಾನ್ ದೇಶದ ಗುರಿ ಅಲ್ಪ ಮಟ್ಟಿಗಾದರೂ ಸರಿಯೇ ಹಣದುಬ್ಬರ ಹೆಚ್ಚಾಗುವಂತೆ ನೋಡಿಕೊಳ್ಳುವುದು ಆ ಮೂಲಕ ಮತ್ತೆ ಸಮಾಜವನ್ನ ಏರುಗತಿಯತ್ತ ಸಾಗಿಸುವುದು.  
ಮುದಿತನ ಎನ್ನುವ ಮಹಾ ಸಮಸ್ಯೆ: 
ಜಪಾನ್ ದೇಶ ವೇಗವಾಗಿ ಮುದಿತನದತ್ತ ಸಾಗುತ್ತಿದೆ. ಸದ್ಯಕ್ಕೆ ಕೆಲಸ ಮಾಡುವವರು ಹತ್ತು ಜನರಿದ್ದರೆ ಏಳು ಜನ ನಿವೃತ್ತರು ಇದ್ದಾರೆ. ಅಂದರೆ ಅಲ್ಲಿನ ಸಮಸ್ಯೆಯ ಬಿಸಿ ನಿಮಗೆ ತಿಳಿದೀತು. ಇಲ್ಲವಾದರೆ ಒಂದು ಸಣ್ಣ ಉದಾಹರಣೆ ಗಮನಿಸಿ ಆಗ ಸಮಸ್ಯೆಯ ಅಗಾಧತೆ ನಿಮ್ಮದಾಗುತ್ತೆ. ಒಬ್ಬ ನಿವೃತ್ತನಿಗೆ ಪಿಂಚಣಿ ಕೊಡಲು ಕನಿಷ್ಠ ನಾಲ್ಕು ಜನ ಕೆಲಸ ಮಾಡಬೇಕು. ಅಂದರೆ ಏಳು ಜನ ನಿವೃತ್ತರಿಗೆ ಪಿಂಚಣಿ ಕೊಡಲು 32 ಜನ ಕೆಲಸ ಮಾಡುತ್ತಿರಬೇಕು. ಆದರೆ ಜಪಾನಿನಲ್ಲಿ 32 ರ ಬದಲು ಕೆಲಸ ಮಾಡುತ್ತಿರುವರ ಸಂಖ್ಯೆ ಕೇವಲ ಹತ್ತು!. ಈ ಅನುಪಾತದಲ್ಲಿ ಜಪಾನ್ ಎಷ್ಟು ದಿವಸ ತನ್ನ ನಿವೃತ್ತರಿಗೆ ಪಿಂಚಣಿ ಕೊಡಬಹುದು? ಹಡಗಿನಲ್ಲಿ ನೀರು ತುಂಬುತ್ತಿದೆ. ಇಂದಲ್ಲ ನಾಳೆ ಹಡಗು ಮುಳುಗದೇ ಇದ್ದೀತೆ? 
13 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಹತ್ತಿರಹತ್ತಿರ ಒಂದೂವರೆ ಕೋಟಿಯಷ್ಟು ಜನ ತನ್ನ ವಿರುದ್ಧ ಲಿಂಗದ ಬಗ್ಗೆ ಯಾವುದೇ ಆಕರ್ಷಣೆ ಹೊಂದಿಲ್ಲ. ಅಂದರೆ ಹುಡುಗನಿಗೆ ಹುಡುಗಿಯ ನೋಡಿ ಯಾವುದೇ ಭಾವನೆ ಬರುವುದೇ ಇಲ್ಲ. ಹುಡುಗಿಯರಿಗೂ ಹುಡುಗನ ಬಗ್ಗೆ ಯಾವುದೇ ಭಾವನೆಯಿಲ್ಲ!!. ಮೂರು ಕೋಟಿ ನಲವತ್ತು ಲಕ್ಷ ಜನ ಹಿರಿಯ ನಾಗರಿಕರು. ಹೀಗಾಗಿ ಹದಿಮೂರೂವರೆ ಕೋಟಿಯಲ್ಲಿ ಐದು ಕೋಟಿಗೂ ಮೀರಿದ ಜನ ಮಕ್ಕಳು ಮಾಡಿಕೊಳ್ಳುವ ಸ್ಥಿತಿಯಲಿಲ್ಲ. ಉಳಿದ ಜಪಾನಿಯರ ಕಥೆ ಕೇಳಿದರೆ ದಂಗಾಗಬಹುದು. ಇವರಲ್ಲಿ ಒಂದಷ್ಟು ಜನರದು ಉಡಾಫೆ ಬುದ್ಧಿ ಇವರಿಗೆ ಮನೆ ಮಕ್ಕಳು ಸಂಸಾರ ಬೇಕಿಲ್ಲ, ಇವರದೇನಿದ್ದರೂ ಒಂದು ರಾತ್ರಿಯಲ್ಲಿ ಮುಗಿಯುವ ಸಂಬಂಧ. ನಾಳೆ ಹೊಸ ಬದುಕು. ಇನ್ನು ಕೆಲವರು ಆನ್ಲೈನ್ ಫೋನೋಗ್ರಫಿ ಗೆ ಅಡಿಕ್ಟ್ ಆಗಿದ್ದಾರೆ. ಇನ್ನು ಕೆಲವರು ತಮ್ಮ ಲೈಗಿಂಕ ಭಾವನೆಗಳನ್ನ ಪೂರ್ಣಗೊಳಿಸಿಕೊಳ್ಳಲು ಹೆಣ್ಣು ರೋಬೋಟ್ ಗಳ ಮೊರೆ ಹೋಗಿದ್ದಾರೆ. ಇವೆಲ್ಲವುಗಳ ಮೀರಿ ಉಳಿದ ಸಾಮಾನ್ಯರು ಎನಿಸಿಕೊಂಡ ಜನರಲ್ಲೂ ಹಲವು ಲೈಗಿಂಕ ದೌರ್ಬಲ್ಯಗಳಿವೆ. ಮಕ್ಕಳು ಮಾಡಿಕೊಳ್ಳಲು ಸೇರುವ ಹೆಣ್ಣುಗಂಡಿನ ಸಂಖ್ಯೆ ಜಪಾನಿನಲ್ಲಿ ತೀವ್ರಗತಿಯಲ್ಲಿ ಕುಸಿಯುತ್ತಿದೆ. ಟೆಕ್ನಾಲಜಿ ಇವರ ಯುವಜನತೆಯನ್ನ ಯಾವ ಮಟ್ಟಕ್ಕೆ ಹಾಳುಗೆಡವಿದೆ ಅನ್ನವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಟೆಕ್ನಾಲಜಿಯನ್ನ ಬರೆಸೆಳೆದು ಅಪ್ಪಿಕೊಳ್ಳುತ್ತಿರುವ ಭಾರತದಂತಹ ದೇಶಕ್ಕೆ ಎಚ್ಚರಿಕೆಯ ಕರೆಘಂಟೆ. 
ಎತ್ತ ಸಾಗಿದೆ ಜಪಾನ್? 
  1. ಜಪಾನ್ ನಲ್ಲಿ ಮಕ್ಕಳ ಡೈಪರ್ ಗಿಂತ ಹಿರಿಯ ನಾಗರಿಕರ ಡೈಪರ್ ಮಾರಾಟದ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತದೆ ಅಂಕಿ-ಅಂಶ. ಜಪಾನಿನ ಯುವಜನತೆಯ ಸಂತಾನೋತ್ಪತ್ತಿಯಲ್ಲಿ ಆಸಕ್ತಿ ಇಲ್ಲದಿರುವುದನ್ನ ಇದು ಎತ್ತಿ ತೋರಿಸುತ್ತದೆ. 
  2. ಇದೆ ರೀತಿಯಲ್ಲಿ ಮುಂದುವರೆದರೆ 2060ರ ವೇಳೆಗೆ ಜಪಾನಿನ ಜನಸಂಖ್ಯೆ ಹನ್ನೆರೆಡುವರೇ ಕೋಟಿಯಿಂದ ಎಂಟೂವರೆ ಕೋಟಿಗೆ ಇಳಿಯುವ ಸಾಧ್ಯೆತೆಗಳು ದಟ್ಟವಾಗಿದೆ. 
  3. ದುಡಿಯುವ ಮತ್ತು ನಿವೃತ್ತರ ನಡುವಿನ ಅಂತರದ ಕಾರಣದಿಂದ ಪಬ್ಲಿಕ್ ಡೆಟ್ ಹೆಚ್ಚಾಗಿದೆ. ಜಪಾನಿನ ಜಿಡಿಪಿ 100 ಅಂದುಕೊಂಡರೆ ಪಬ್ಲಿಕ್ ಡೆಟ್ ಜಿಡಿಪಿಯ 240 ಪ್ರತಿಶತ ಎನ್ನುವುದು ಆತಂಕಕಾರಿ ಅಂಶ. ಇದು ಇಂದಿನ ಅಂಕಿ ಅಂಶ ಮುಂಬರುವ ದಿನಗಳಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ. 
  4. ಜಪಾನಿನಲ್ಲಿ ವಲಸಿಗರು ಇಲ್ಲವೇ ಇಲ್ಲ ಎನ್ನುವಷ್ಟು ಗೌಣ!  ಹೌದು ಜಪಾನಿನಲ್ಲಿ ವಲಸಿಗರ ಸಂಖ್ಯೆ ಎರಡು ಪ್ರತಿಶತಕ್ಕಿಂತ ಬಹಳ ಕಡಿಮೆ ಇದೆ. ಇದಕ್ಕೆ ಕಾರಣ ಜಪಾನಿಯರು ಎಷ್ಟೇ ಕೆಲಸದಲ್ಲಿ ದಕ್ಷರಾಗಿದ್ದರೂ ಕೇವಲ ಜಪಾನೀ ಭಾಷೆಯನ್ನ ಬಿಟ್ಟು ಇತರ ಭಾಷೆ ಕಲಿಯದೇ ಜಗತ್ತಿನ ಇತರ ದೇಶಗಳೊಂದಿಗೆ ಹೆಚ್ಚು ಸಂವಹನ ನೆಡೆಸದೆ ಇದದ್ದು. ಜಪಾನಿನ ಇಂದಿನ ಸಮಸ್ಯೆ ಬಗೆ ಹರಿಸಲು ವಲಸೆ ಅತ್ಯಂತ ಅವಶ್ಯಕ. 
ಕೊನೆ ಮಾತು: ಎರಡನೇ ಮಹಾಯುದ್ಧನ ಸೋಲಿನ ಹೊಡೆತದ ನಂತರ ಜಿಗಿದೆದಿದ್ದ ಜಪಾನ್  2010ರ ವರೆಗೆ ತನ್ನ ಓಟವನ್ನ ಮುಂದುವರಿಸಿತ್ತು. ಚೀನಾ ದೇಶ ಒಳಗೊಂಡು ಜಗತ್ತಿಗೆ ಜಗತ್ತೇ ಆರ್ಥಿಕವಾಗಿ ಕೆಂಗೆಟ್ಟಿದ್ದು ಸಹಜವಾಗೇ ಜಪಾನಿನ ಓಟಕ್ಕೆ ಬ್ರೇಕ್ ಹಾಕಿತ್ತು. ಬಾಹ್ಯ ಕಾರಣದ ಜೊತೆಜೊತೆಗೆ ಆಂತರಿಕ ಕಾರಣ ಜಪಾನ್ ದೇಶದ ಓಟಕ್ಕೆ ಕಡಿವಾಣ ಹಾಕಿದೆ. ತನ್ನ ಸಮಸ್ಯೆಗಳಿಗೆ ತಕ್ಷಣ ಉತ್ತರ ಕಂಡುಕೊಳ್ಳದೆ ಹೋದರೆ ಜಪಾನ್ ಯಶೋಗಾಥೆ ಚರಿತ್ರೆ ಸೇರಲಿದೆ. ಬಡ ದೇಶಗಳು ಕುಸಿಯುವುದು ಸಾಮಾನ್ಯ ವಿಷಯ ಆದರೆ ಅತ್ಯಂತ ಸಮೃದ್ಧ ದೇಶ ಕೂಡ ತನ್ನ ಸಮೃದ್ಧತೆಯ ಕಾರಣದಿಂದ ಕುಸಿಯಬಹದು ಎನ್ನುವುದಕ್ಕೆ ಜಪಾನ್ ಒಂದು ಉತ್ತಮ ಉದಾಹರಣೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com