ಚೀನಾದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ, ಎಲ್ ಟಿಟಿಇ ನಂತರ ಹೊಸ ಆತಂಕ!

ಚೀನಾ ಹಣೆದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ ಬಿದ್ದಿದೆ. ಎದ್ದು ಬರಲು ಅದಕ್ಕೆ ಸಹಾಯಹಸ್ತ ಬೇಕಿದೆ.
ಚೀನಾದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ, ಎಲ್ ಟಿಟಿಇ ನಂತರ ಹೊಸ ಆತಂಕ!
ಚೀನಾದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ, ಎಲ್ ಟಿಟಿಇ ನಂತರ ಹೊಸ ಆತಂಕ!
ಶ್ರೀಲಂಕಾದ ಟೀ ಮತ್ತು ಕಾಫಿ ಎಸ್ಟೇಟ್ ಗಳಲ್ಲಿ ಕೂಲಿಗಳಾಗಿ ಹೋದ ತಮಿಳರು ಅಲ್ಲಿ ಸಮಾನತೆಗಾಗಿ ಹೋರಾಟ ಶುರು ಮಾಡಿದ್ದು ಅದು ಉಗ್ರರೂಪ ಪಡೆದು ಅಹಿಂಸೆಯ ಮಾರ್ಗದಲ್ಲಿ ನೆಡೆದದ್ದು, ಪ್ರಭಾಕರನ್ ಎನ್ನುವ ವ್ಯಕ್ತಿಯ ನೇತೃತ್ವದಲ್ಲಿ ತಮಿಳರ ಹಿತ ಕಾಯಲು ಎಲ್ ಟಿಟಿಇ ಎನ್ನುವ ಸಂಸ್ಥೆ ಹುಟ್ಟಿದ್ದು ನಂತರ ತಮಿಳರ ಮತ್ತು ಶ್ರೀಲಂಕಾ ಸರಕಾರದ ನಡುವೆ ಸರಿ ಸುಮಾರು 27 ವರ್ಷಗಳ ಕಾಲ ಶಸ್ತ್ರಹೋರಾಟ ನೆಡೆದದ್ದು ಇಂದಿಗೆ ಇತಿಹಾಸ. ಆದರೆ ಇತಿಹಾಸದಲ್ಲಿ ನೆಡೆದ ತಪ್ಪುಗಳ ಕರಾಳ ಛಾಯೆ ಇಂದು ಆವರಿಸಿದೆ. ಅದೇನು? ಅದು ಭಾರತಕ್ಕೆ ಏಕೆ ಅಷ್ಟೊಂದು ತಲೆನೋವಾಗಿ ಪರಿಣಮಿಸಬಹದು? ಎನ್ನುವುದನ್ನ ಇಂದಿನ ಅಂಕಣದಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. 
ಅಂದಿನ ಶ್ರೀಲಂಕಾ ಸರಕಾರ ಎಲ್ ಟಿಟಿಇ ಉಪಟಳ ತಡೆಯಲು ಸಾಧ್ಯವಾಗದೆ ಭಾರತ ಸರಕಾರದ ಮುಂದೆ ಸಹಾಯಕ್ಕೆ ಕೈ ಚಾಚಿತ್ತು. ಆದರೇನು ನಮ್ಮ ತಮಿಳುನಾಡು ತನ್ನ ಜನರ ವಿರುದ್ಧ ಹೋರಾಡಲು ಸರಕಾರ ಮಿಲಿಟರಿ ಕಳಿಸುವುದರ ವಿರುದ್ಧ ದೊಡ್ಡ ದನಿಯೆತ್ತಿತ್ತು. ಅಂದಿನ ಭಾರತದ ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರಕಾರ ತನ್ನ ಅಲಿಪ್ತ ನೀತಿಯನ್ನ ಮುಂದುವರಿಸುತ್ತದೆ. ಜೊತೆಗೆ ರಾಜಕೀಯವಾಗಿ ಕೂಡ ತಮಿಳುನಾಡಿನ ಬೆಂಬಲ ಬೇಕಾದ ಸಂದರ್ಭವದು ಹೀಗಾಗಿ ತಮಿಳುನಾಡು ಹೇಳಿದಕ್ಕೆ ಕೇಂದ್ರ ಸರಕಾರ ತಲೆಯಾಡಿಸಿತ್ತು. ಹೆಸರಿಗೆ ಪೀಸ್ ಕೀಪಿಂಗ್ ಟಾಸ್ಕ್ ಫೋರ್ಸ್ ಎನ್ನುವ ಒಂದು ತುಕಡಿ ಸೈನ್ಯವನ್ನ ಕಳಿಸುತ್ತದೆ. ಅದೂ ಕೂಡ ಹೆಚ್ಚಿನ ದಿನ ಅಲ್ಲಿ ಇರುವುದಿಲ್ಲ ಅದನ್ನ ವಾಪಸ್ಸು ಕರೆಸಲಾಗುತ್ತದೆ. 2007 ರಲ್ಲಿ ರಾಜಕೀಯ ಮತ್ತು ಇತರ ಕಾರಣಗಳಿಂದ ಅಮೇರಿಕಾ ಕೂಡ ಶ್ರೀಲಂಕಾಗೆ ನೀಡುತ್ತಿದ್ದ ನೇರ ಮಿಲಿಟರಿ ಸಹಾಯವನ್ನ ನಿಲ್ಲಿಸುತ್ತದೆ. ಶ್ರೀಲಂಕಾ ಎನ್ನುವ ಒಂದು ಪುಟ್ಟ ದ್ವೀಪ ದೇಶ ತನ್ನದೇ ನೆಲದಲ್ಲಿ ನೆಲೆ ಕೊಟ್ಟ ತಪ್ಪಿಗೆ ವಲಸೆ ಬಂದವರಿಂದ ಭಾರಿ ಪೆಟ್ಟು ತಿನ್ನುತ್ತದೆ. ದೇಶದಲ್ಲಿ ಅರಾಜಕತೆ. ರಸ್ತೆ ನೀರು ಮತ್ತು ಆಹಾರಗಳಲ್ಲಿ ವ್ಯತ್ಯಯ. ಗುಡ್ಡಗಾಡು ಪ್ರದೇಶವನ್ನ ಹೊಂದಿರುವ ಶ್ರೀಲಂಕಾದಲ್ಲಿ ಬದುಕು ಶಿಲಾಯುಗದ ಬದುಕಿಗಿಂತ ಕಡೆ ಎನ್ನುವ ಮಟ್ಟಕ್ಕೆ ತಲುಪುತ್ತದೆ. ಹತ್ತಾರು ಕಿಲೋಮೀಟರ್ ತಲುಪಲು ನಾಲ್ಕೈದು ಗಂಟೆ ಬೇಕು ಎನ್ನುವ ಪರಿಸ್ಥಿತಿ. ಕಾರಣ ರಸ್ತೆ ಸರಿಯಿಲ್ಲ ಎನ್ನುವುದು ಒಂದಾದರೆ ಹೆಜ್ಜೆ ಹೆಜ್ಜೆಗೆ ಎದುರಾಗುವ ತಪಾಸಣಾ ಕೇಂದ್ರಗಳು. ಅಲ್ಲೆಲ್ಲ ತಂಡವಾಡುತ್ತಿದ್ದದ್ದು ಅಪನಂಬಿಕೆ! ಹೌದು ಯಾರು ಯಾವ ಘಳಿಗೆಯಲ್ಲಿ ಯಾವ ರೂಪದಲ್ಲಿ ಬಂದು ದಾಳಿ ನೆಡೆಸುತ್ತಾರೆ ಎನ್ನುವುದನ್ನ ಹೇಳಲು ಬರುತ್ತಿರಲಿಲ್ಲ. ನಿತ್ಯ ಬದುಕಿಗೆ ಇಷ್ಟೊಂದು ಹೊಡೆದಾಟವಾದರೆ ಇನ್ನು ಬದಲಾವಣೆಯ, ಅಭಿವೃದ್ಧಿಯ ಮಾತೆಲ್ಲಿ? ಶ್ರೀಲಂಕಾ ಸರಕಾರಕ್ಕಂತೂ ಹೇಗಾದರೂ ಸರಿಯೇ ಎಲ್ಟಿಟಿಇ ಯಿಂದ ಮುಕ್ತಿ ಪಡೆದರೆ ಸಾಕು ಎನ್ನುವ ಮನಸ್ಥಿತಿ. 2007 ರಲ್ಲಿ ಅಮೇರಿಕಾ ಕೂಡ ಕೈ ಬಿಟ್ಟಾಗ ಶ್ರೀಲಂಕಾ ಅನುಭವಿಸಿದ ಒಂಟಿತನ ಮತ್ತು ಅಸಹಾಯಕತೆ ಅಲ್ಲಿನ ಜನರು ಇಂದಿಗೂ ಮರೆತಿಲ್ಲ. ವಾರ ಪೂರ್ತಿ ದ್ವೀಪ ದೇಶದ ದಕ್ಷಿಣ ಭಾಗವನ್ನ ರೋಡ್ ಟ್ರಿಪ್ ಮೂಲಕ ಸುತ್ತುವಾಗ ಹಲವಾರು ಜನರೊಂದಿಗೆ ಸಂವಹನ ನೆಡೆಸುವ ಅವಕಾಶ ಸಿಕ್ಕಿತು ಆಗೆಲ್ಲ, ಅಲ್ಲೆಲ್ಲ ಬಿಟ್ಟ ಬಿಸಿ ಉಸಿರಿನಲ್ಲಿ ಕೇಳುವುದು ಇದೆ ಕಥೆ. ಇರಲಿ.. 
19, ಮೇ 2009 ರ ಒಂದು ಬೆಳಿಗ್ಗೆ ಎಲ್ಟಿಟಿಇ ಯ ಕೊನೆಯ ಹದಿನೆಂಟು ದಂಡನಾಯಕರನ್ನ ಹೊಡೆದುರಿಳಿಸಲಾಗುತ್ತದೆ. ಅವರ ಮಹಾನ್ ದಂಡನಾಯಕ ಪ್ರಭಾಕರನ್ ಕೂಡ ಹೆಣವಾಗುತ್ತಾನೆ. ಮರು ಘಳಿಗೆಯಿಂದ ಶ್ರೀಲಂಕಾದಲ್ಲಿ ಶಾಂತಿ ನೆಲೆಸುತ್ತದೆ. ಶ್ರೀಲಂಕವನ್ನ ಮರು ದಿನದಿಂದ ಅಭಿವೃದ್ಧಿ ಪಥಕ್ಕೆ ತರಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಮ್ಯಾಜಿಕ್ ನೆಡೆದೆ ಹೋಯಿತು!  ಇದಕ್ಕೆಲ್ಲ ಕಾರಣ ಚೀನಾ ಎನ್ನುವ ಮಹಾನ್ ಸಮಯ ಸಾಧಕ ದೇಶ. ಹೌದು ಚೀನಾ ಪುಟ್ಟ ಶ್ರೀಲಂಕವನ್ನ ಬೆರೆಳು ಹಿಡಿದು ನಡೆಸುತ್ತಾ ಬಂದಿದೆ. ಅಂದಿನ ದಿನಗಳಲ್ಲಿ ಅಂದರೆ 2007 ರ ನಂತರ ಶ್ರೀಲಂಕಾ ಒಂಟಿತನದಲ್ಲಿ ತನ್ನ ಸಮಸ್ಯೆಯಿಂದ ಬಳಲುತ್ತಿದ್ದಾಗ ಚೀನಾ ತನ್ನ ಮಿಲಿಟರಿಯೊಂದಿಗೆ ಶ್ರೀಲಂಕಾ ಸಹಾಯಕ್ಕೆ ಧಾವಿಸಿತು. ಎಲ್ಟಿಟಿಇ ಪ್ರಭಾಕರನ್ ಗೆ ಇಂಗ್ಲೆಂಡ್ ನಲ್ಲಿ ಮತ್ತು ನಾರ್ವೆ ದೇಶದಲ್ಲಿ ಸಾಕಷ್ಟು ಡಿಪ್ಲೊಮ್ಯಾಟಿಕ್ ಬೆಂಬಲವಿತ್ತು. ಅದನ್ನ ಬಳಸಿ ಅಮೆರಿಕಾದ ಮೇಲೆ ಒತ್ತಡ ತಂದು ಚೀನಾ ಶ್ರೀಲಂಕಾ ಪ್ರವೇಶಿಸದಂತೆ ತಡೆಯಲು ಪಪ್ರಯತ್ನಿಸುತ್ತಾನೆ. ಚೀನಾ ಭದ್ರತಾ ಮಂಡಳಿಯಲ್ಲಿ ತನಗಿರುವ ವೆಟೋ ಶಕ್ತಿಯನ್ನ ಬಳಸಿ ಎಲ್ಲರನ್ನೂ ಸುಮ್ಮನಾಗಿಸುತ್ತದೆ. ಹತ್ತಿರ ಹತ್ತಿರ ಐನೂರು ವರ್ಷಗಳ ಅಮೇರಿಕಾ ಮತ್ತು ಯೂರೋಪಿನ ಪ್ರಾಭಲ್ಯವನ್ನ ಚೀನಾ ಮೊಟ್ಟ ಮೊದಲ ಬಾರಿಗೆ ಮುರಿಯುತ್ತದೆ. ಶ್ರೀಲಂಕಾದಲ್ಲಿ ವಿಜಯ ಪತಾಕೆ ಹಾರಿಸುತ್ತದೆ. ಅಂದಿನಿಂದ ಇಂದಿನ ವರೆಗೆ ಚೀನಾ ಶ್ರೀಲಂಕಾದ ಜೊತೆ ಬಿಟ್ಟಿಲ್ಲ. 
ನನ್ನ ಪ್ರವಾಸ ಸಮಯದಲ್ಲಿ ಹಲವಾರು ಜನರನ್ನ ಮಾತನಾಡಿಸಿದೆ ಅವರಲ್ಲಿ ಭಾರತದ ಬಗ್ಗೆ ದ್ವೇಷವಿಲ್ಲ ಆದರೆ ಮಡುಗಟ್ಟಿರುವ ಬೇಸರ ಮಾತ್ರ ಅವರ ಮಾತುಗಳಲ್ಲಿ ಕೇಳಸಿಗುತ್ತದೆ. ಅದಕ್ಕೆ ಕಾರಣ ಅಂದು ಸಹಾಯ ಮಾಡಿದ ಚೀನಾ ನಿಧಾನವಾಗಿ ಶ್ರೀಲಂಕವನ್ನ ತನ್ನ ಉದ್ದಾರಕ್ಕೆ ತನ್ನ ಕೆಲಸಕ್ಕೆ ಚನ್ನಾಗಿ ಬಳಸಿಕೊಳ್ಳುತ್ತಿದೆ. ಚೀನಾ ಸಹಾಯದ ಹೆಸರಲ್ಲಿ ನೀಡಿರುವ ಹಣವನ್ನ ಶ್ರೀಲಂಕಾ ವಾಪಸ್ಸು ನೀಡುವುದಾದರೂ ಹೇಗೆ? ಅಷ್ಟೊಂದು ಹಣವನ್ನ ಚೀನಾ ಶ್ರೀಲಂಕಾದಲ್ಲಿ ಸುರಿದಿದೆ. ಹೊಸ ಕಾಮಗಾರಿಗಳನ್ನ ಚೀನಾ ಸರಕಾರ ಶ್ರೀಲಂಕಾ ಸರಕಾರದಿಂದ ಗುತ್ತಿಗೆ ಪಡೆಯುತ್ತದೆ. ಶ್ರೀಲಂಕಾ ಸರಕಾರ ಇಲ್ಲವೆನ್ನುವ ತಾಕತ್ತು ಹೊಂದಿಲ್ಲ. ಎಲ್ಲಕ್ಕಿಂತ ಹೆಚ್ಚಿನ ಆತಂಕಕಾರಿ ವಿಷಯವಂದರೆ ಚೀನಾ ಕಾಮಗಾರಿಗೆ ಎಂದು ಸಾವಿರಾರು ಸಂಖ್ಯೆಯಲ್ಲಿ ತನ್ನ ಜನರನ್ನ ತಂದು ಶ್ರೀಲಂಕಾ ದಲ್ಲಿ ಇಳಿಸುತ್ತಿದೆ. ಅಂದರೆ ಕೂಲಿ ಕೆಲಸಕ್ಕೆ ಸ್ಥಳೀಯ ಜನರನ್ನ ತೆಗೆದು ಕೊಳ್ಳುತ್ತಿಲ್ಲವೇ? ಕಣ್ಣೊರೆಸಲು ಒಂದಷ್ಟು ಜನರನ್ನ ತೆಗೆದುಕೊಂಡಿದ್ದಾರೆ. ಅದೂ ಜಂಟಿ ಕಾಮಗಾರಿ ಪ್ರಾಜೆಕ್ಟ್ ಗಳಲ್ಲಿ ಮಾತ್ರ! ಉಳಿದಂತೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಪೂರ್ಣ ಚೀನಿಯರು. ಕೂಲಿ ಮಾಡುವನಿಂದ ಇಂಜಿನಿಯರ್ ವರೆಗೆ ಎಲ್ಲರೂ ಚೀನಿಯರೇ!! ನಿನ್ನೆ ತಮಿಳು ಕೂಲಿಗಳು ನೀಡಿದ ತಲೆನೋವು ನಾಳೆ ಚೀನಿ ಕೂಲಿಗಳು ನೀಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಚೀನಾ ಸರಕಾರವೇ ಅವರಿಗೆ ಕುಮುಕ್ಕು ಕೊಟ್ಟರೆ?? ಶ್ರೀಲಂಕವನ್ನ ಚೀನಾದ ಕಪಿಮುಷ್ಟಿಯಿಂದ ಬಿಡಿಸುವರಾರು?? 
ಶ್ರೀಲಂಕಾ ದೇಶದೊಂದಿಗೆ ಚೀನಾದ ವ್ಯಾಪಾರ ಸಂಬಂಧ ಬಹಳ ಹಳೆಯದು, ಬಹಳ ಹಿಂದಿನಿಂದ ಚೀನಾ ಅಕ್ಕಿಯನ್ನ ಶ್ರೀಲಂಕಾದ ರಬ್ಬರ್ ಗೆ ವಸ್ತುವಿನಿಮಯ ರೂಪದಲ್ಲಿ ಟ್ರೇಡ್ ಮಾಡಲಾಗುತ್ತಿತ್ತು. ಆಗೆಲ್ಲ ಅವನ್ನ ಬೆಸೆದ ಸಂಬಂಧ ಬೌದ್ಧ ಧರ್ಮ. ಮಹತ್ವಾಕಾಂಕ್ಷಿ ಚೀನಾಕ್ಕೆ ಇವತ್ತು ಯಾವ ಧರ್ಮವೂ ಇಲ್ಲ. ಅದಕ್ಕೆ ಬೇಕಿರುವುದು ಜಗತ್ತಿನ ದೊಡ್ಡಣ್ಣನ ಪಟ್ಟ. ಹೀಗಾಗಿ ಚೀನಾ ಹಣಿಯುವುದು ಸಾಲದ ಖೆಡ್ಡಾ ಎನ್ನುವ ಹೊಸ ರೀತಿಯ ಯುದ್ಧ. ಸಹಾಯದ ರೂಪದಲ್ಲಿ ಹೆಚ್ಚು ಹೆಚ್ಚು ಹಣ ನೀಡುವುದು ಎಷ್ಟೊಂದು ಎಂದರೆ ಅವರು ಬೇಕೆಂದು ಬಯಸಿದರೂ ಚೀನಾಕ್ಕೆ ವಾಪಸ್ಸು ನೀಡಲಾಗಷ್ಟು. ಇಂತಹ ಸನ್ನಿವೇಶವನ್ನ ಉಪಯೋಗಿಸಿಕೊಂಡು ನಿಧಾನವಾಗಿ ಆ ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಚೀನಾದ ಕಾರ್ಯತಂತ್ರ. ಹೀಗೆ ಚೀನಾದ ಡೆಟ್ ಟ್ರ್ಯಾಪ್ ಅಥವಾ ಸಾಲದ ಖೆಡ್ಡಾ ದಲ್ಲಿ ಇರುವ ದೇಶಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು ಎಂದರೆ ನೀವು ಅಚ್ಚರಿ ಪಟ್ಟೀರಿ! ಇವುಗಳಲ್ಲಿ ಹತ್ತಿರತ್ತಿರ ಇಪ್ಪತ್ತು ದೇಶವನ್ನ ಚೀನಾ ಯಾವ ಘಳಿಗೆಯಲ್ಲೂ ಅಪೋಷನ ತೆಗೆದು ಕೊಳ್ಳಬಹದು. ಪಾಕಿಸ್ತಾನ, ಜಿಬೌಟಿ, ಮಾಲ್ಡಿವ್ಸ್ ಜೊತೆಗೆ ಶ್ರೀಲಂಕಾ ಕೂಡ ಈ ಪಟ್ಟಿಯಲ್ಲಿ ಬರುತ್ತದೆ. 
ಚೀನಾದ ಕಪಿ ಮುಷ್ಟಿಯಲ್ಲಿ ಶ್ರೀಲಂಕಾದ ಪ್ಲಾಂಟೇಷನ್, ಕನ್ಸ್ಟ್ರಕ್ಷನ್, ಪೋರ್ಟ್ ಸೇರಿಯಾಗಿದೆ. ಜಾಫ್ನದಲ್ಲಿ ಚೀನಾ ಲಕ್ಷಾಂತರ ಮನೆಯನ್ನ ಕಟ್ಟಲು ಶುರು ಮಾಡಿದೆ. ಅಲ್ಲಿನ ಬಂದರುಗಳಿನ ಮೇಲಿನ ಹಿಡಿತ ಬಹಳಷ್ಟು ಹೆಚ್ಚಾಗಿದೆ. ನಿಧಾನವಾಗಿ ಟೂರಿಸಂ ಕೂಡ ಅದರ ತೆಕ್ಕೆಗೆ ವಾಲುತ್ತಿದೆ. ಶ್ರೀಲಂಕಾದ ಉದ್ದಗಲಕ್ಕೂ ಚೀನಿ ಯಾತ್ರಿಕರ ದಂಡನ್ನ ಕಾಣಬಹದು.  ಶ್ರೀಲಂಕಾದ ಮೇಲಿನ ಚೀನಾದ ಬಿಗಿ ಹಿಡಿತ ಭಾರತಕ್ಕೆ ಮುಂಬರುವ ದಿನಗಳಲ್ಲಿ ಬಹಳ ತಲೆನೋವು ತರಲಿವೆ. ನೇಪಾಳದಲ್ಲಿ ಆಗಲೇ ಚೀನಾ ಸಹಾಯ ಹಸ್ತ ನೀಡಲು ಶುರು ಮಾಡಿದೆ ಅಲ್ಲಿಯೂ ಹಿಡಿತ ಹೊಂದಿದರೆ ಭಾರತವನ್ನ ಎಲ್ಲಾ ಕಡೆಯಿಂದ ಚೀನಾ ಸುತ್ತುವರಿಯಬಹದು. ಇದರ ಸುಳಿವು ಭಾರತಕ್ಕೆ ಇಲ್ಲವೆಂದಿಲ್ಲ ಅದಕ್ಕೆ ಈಗಿನ ಕೇಂದ್ರ ಸರಕಾರ ಕೂಡ ಶ್ರೀಲಂಕಾ ಸರಕಾರಕ್ಕೆ ಹೆಚ್ಚಿನ ಸಹಾಯ ನೀಡುತ್ತಿದೆ. ಜಾಫ್ನ ದಲ್ಲಿ ಲಕ್ಷವಲ್ಲದಿದ್ದರು ಸಾವಿರಾರು ಮನೆಯನ್ನ ತಾನೂ ಕಟ್ಟುತ್ತಿದೆ. ಗಮನಿಸಿ ಉತ್ತರ ಶ್ರೀಲಂಕಾ ತಮಿಳರ ಪ್ರಭಲ ಸ್ಥಾನವಾಗಿತ್ತು. ಎಲ್ಟಿಟಿಇ ಹೋರಾಟದಲ್ಲಿ ಸಾಕಷ್ಟು ಹಾನಿಯಾಗಿರುವುದು ಕೂಡ ಉತ್ತರ ಶ್ರೀಲಂಕದಲ್ಲೇ, ಹೀಗಾಗಿ ಶ್ರೀಲಂಕಾ ಸರಕಾರ ಉತ್ತರ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ನೆಡೆಸಲು ಚೀನಾಗೆ ಒಪ್ಪಿಗೆ ಕೊಟ್ಟಿದೆ. ಜಾಫ್ನ ದಿಂದ ಹಲವು ಗಂಟೆಯಲ್ಲಿ ನೀರಿನ ಮೂಲಕ ಭಾರತ ತಲುಪಿ ಬಿಡಬಹದು. ಇದು ಚೀನಾಕ್ಕೆ ಬಯಸದೆ ಬಂದ ಭಾಗ್ಯ. 
ಕೊನೆ ಮಾತು: ಶ್ರೀಲಂಕಾಗೆ ಅಂದು ಚೀನಾ ಬೇಕಾಗಿತ್ತು. ಇಂದು ಕೂಡ ಬೇಕು ಆದರೆ ಅತಿಯಾದರೆ ಅಮೃತವೂ ವಿಷವೆನ್ನುವ ಹಾಗೆ ಚೀನಾದ ಅತಿ ಪ್ರೀತಿ ಮತ್ತು ಆಂತರಿಕ ವಿಷಯದಲ್ಲಿ ಮೂಗು ತೋರಿಸುವುದು, ಜೊತೆಗೆ ಅಭಿವೃದ್ಧಿ ಹೆಸರಲ್ಲಿ ತನ್ನ ಜನರ ತಂದು ಠಿಕಾಣಿ ಹೂಡಿಸುತ್ತಿರುವುದು ಇದೆಲ್ಲ ಮುಂಬರುವ ದಿನಗಲ್ಲಿ ಶ್ರೀಲಂಕವನ್ನ ಕಬಳಿಸುವ ಮುನ್ಸೂಚನೆ. ಇದು ಶ್ರೀಲಂಕಾಗೆ ಅರಿವಾಗಿದೆ. ಅದಕ್ಕೆ ಅದು ಕೂಡ ಭಾರತದೊಂದಿಗೆ ಉತ್ತಮ ಬಾಂಧ್ಯವ ಹೊಂದಲು ಉತ್ಸುಕವಾಗಿದೆ. ಭಾರತಕ್ಕೂ ಹಣವನ್ನ ಸಾಲ ತಂದಾದರೂ ಸರಿಯೇ ಶ್ರೀಲಂಕಾಕ್ಕೆ ಕೊಡಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಶ್ರೀಲಂಕವನ್ನ ಚೀನಾದ ಕಪಿಮುಷ್ಟಿಯಿಂದ ಬಿಡಿಸುವ ಪ್ರಯತ್ನ ಮಾಡುವ ದರ್ದು ಇರುವುದು ಕೇವಲ ಭಾರತಕ್ಕೆ ಮಾತ್ರ. ಮುಂಬರುವ ದಿನಗಳಲ್ಲಿ ಇದು ಯಾವ ರೂಪ ಪಡೆಯುತ್ತದೆ? ಕಾದು ನೋಡಬೇಕು. ಗಮನಿಸಿ ಲೇಖನದಲ್ಲಿ ಪ್ರಜ್ಞಾಪೂರ್ವಕವಾಗಿಯೇ ಚೀನಾ ಶ್ರೀಲಂಕಾಕ್ಕೆ ಎಷ್ಟು ಹಣ ನೀಡಿದೆ ಇತ್ಯಾದಿ ಅಂಕಿ ಅಂಶವನ್ನ ಬಳಸಿಲ್ಲ. ಅದು ಅಷ್ಟೊಂದು ಮುಖ್ಯವಲ್ಲ. ಚೀನಾ ಹಣೆದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ ಬಿದ್ದಿದೆ. ಎದ್ದು ಬರಲು ಅದಕ್ಕೆ ಸಹಾಯಹಸ್ತ ಬೇಕಿದೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com