ತೈಲ ಬೆಲೆ ಹೆಚ್ಚಳ, ನಾನ್ ಪರ್ಫಾರ್ಮಿಂಗ್ ಅಸೆಟ್ ಕಾಟ: ನಿಲ್ಲದ ಪರದಾಟ...!

ಒಂದೇ ಸಮನೆ ಏರುತ್ತಿರುವ ತೈಲ ಬೆಲೆ ಭಾರತದ ಮಟ್ಟಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗೆ ನೋಡಲು ಹೋದರೆ ವಿಶ್ವದ ಎಲ್ಲಾ ದೇಶಗಳು ತೈಲ ಬೆಲೆಯ ಹೆಚ್ಚಳದಿಂದ ತತ್ತರಿಸಿ ಹೋಗಿವೆ.
ತೈಲ ಬೆಲೆ ಹೆಚ್ಚಳ, ನಾನ್ ಪರ್ಫಾರ್ಮಿಂಗ್ ಅಸೆಟ್ ಕಾಟ: ನಿಲ್ಲದ ಪರದಾಟ...!
ತೈಲ ಬೆಲೆ ಹೆಚ್ಚಳ, ನಾನ್ ಪರ್ಫಾರ್ಮಿಂಗ್ ಅಸೆಟ್ ಕಾಟ: ನಿಲ್ಲದ ಪರದಾಟ...!
ಒಂದೇ ಸಮನೆ ಏರುತ್ತಿರುವ ತೈಲ ಬೆಲೆ ಭಾರತದ ಮಟ್ಟಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗೆ ನೋಡಲು ಹೋದರೆ ವಿಶ್ವದ ಎಲ್ಲಾ ದೇಶಗಳು ತೈಲ ಬೆಲೆಯ ಹೆಚ್ಚಳದಿಂದ ತತ್ತರಿಸಿ ಹೋಗಿವೆ. 
2018 ರಲ್ಲಿ ಅಂದರೆ ಕಳೆದ ಎಂಟು ತಿಂಗಳಲ್ಲಿ ಜಗತ್ತಿನಲ್ಲಿ ತೈಲಬೆಲೆ 20 ಪ್ರತಿಶತ ಹೆಚ್ಚಳ ಕಂಡಿದೆ. ಇನ್ನು ಹನ್ನೆರಡು ತಿಂಗಳ ಲೆಕ್ಕಾಚಾರ ತೆಗೆದುಕೊಂಡರೆ ಬೆಲೆಯ ಹೆಚ್ಚಳ 4೦ ಪ್ರತಿಶತ ಎನ್ನುವುದು ತಿಳಿದು ಬರುತ್ತದೆ. ಅಂದರೆ ವರ್ಷದ ಹಿಂದೆ ನೂರು ರೂಪಾಯಿ ಲೀಟರಿಗೆ ಇದ್ದ ತೈಲ ಬೆಲೆ ಇಂದು ನೂರನಲವತ್ತು ಅಂದಹಾಗೆ ಆಯಿತು. ಕಳೆದ ನಾಲ್ಕು ವರ್ಷದಿಂದ ಕಡಿಮೆಯಿದ್ದ ತೈಲಬೆಲೆ ಭಾರತದ ಮಟ್ಟಿಗೆ ವರದಾನವಾಗಿತ್ತು. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಕಾನಮಿ ಎನ್ನುವ ಹೆಗ್ಗಳಿಕೆ ಪಡೆಯಲು ಕೂಡ ಅದೇ ಕಾರಣವಾಗಿತ್ತು. ಇದೀಗ ಎಲ್ಲವೂ ಉಲ್ಟಾ ಆಗಿದೆ. ಬ್ಯಾರಲ್ ಕಚ್ಚಾ ತೈಲ 8೦ ಡಾಲರಿನ ಆಸುಪಾಸಿನಲ್ಲಿದೆ. ಒಂದು ಅಂದಾಜಿನ ಪ್ರಕಾರ ಕಚ್ಚಾತೈಲ ಬೆಲೆ ಬ್ಯಾರಲಿಗೆ 1೦ ಅಮೆರಿಕನ್ ಡಾಲರ್ ಹೆಚ್ಚಿದರೆ ಭಾರತದ ಅಭಿವೃದಿ 0.2 ರಿಂದ ೦.3 ಪ್ರತಿಶತ ಕುಂಠಿತವಾಗುತ್ತದೆ. ಹೆಚ್ಚುವ ತೈಲ ಬೆಲೆ ಸರಣಿ ಪರಿಣಾಮ ಬೀರುತ್ತದೆ. ಹೀಗಾಗಿ ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. 
ತೈಲ ಬೆಲೆ ಹೆಚ್ಚಾಗಲು ಮುಖ್ಯ ಕಾರಣಗಳೇನು? 
  • ಅಮೆರಿಕನ್ ಪ್ರೆಸಿಡೆಂಟ್ ಟ್ರಂಪ್ ಇರಾನಿನ ಜೊತೆಯ ನ್ಯೂಕ್ಲಿಯರ್ ಒಪ್ಪಂದದಿಂದ ಹೊರನೆಡೆದಿರುವುದು ಇರಾನಿ ಕಚ್ಚಾ ತೈಲ ಸರಬರಾಜು ಮೇಲಿನ ನಂಬಿಕೆಯನ್ನ ಕಡಿಮೆಮಾಡಿದೆ. ಯಾವಾಗ ಏನಾಗುತ್ತದೆಯೋ ಎನ್ನುವ ಅವ್ಯಕ್ತ ಭಯ ಒಂದು ರೀತಿಯ ಅಸ್ಥಿರತೆಯನ್ನ ಸೃಷ್ಟಿಸಿದೆ. ಗಮನಿಸಿ ಲಾಗಾಯ್ತಿನಿಂದ ಭಾರತ ಇರಾನಿನಿಂದಲೆ ತೈಲವನ್ನ ಕೊಳ್ಳುತ್ತಾ ಬಂದಿದೆ. 
  • ವೆನಿಜುಯೆಲಾ ದಲ್ಲಿರುವ ಅರಾಜಕತೆಯಿಂದ ಅಲ್ಲಿನ ತೈಲ ಉತ್ಪನ್ನ ದಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ ಜಗತ್ತಿನಲ್ಲಿ ಅಲ್ಪ ಮಟ್ಟಿನ ತೈಲ ಕೊರತೆ ಉಂಟಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. 
  • ಯಾವುದೇ ವಸ್ತುವಿನ ಬೆಲೆ ದಿಡೀರ್ ಎಂದು ಹೆಚ್ಚಾಗುವುದಿಲ್ಲ ಬೇಡಿಕೆ ಮತ್ತು ಅದರ ಸಿಗುವಿಕೆ ವಸ್ತುವಿನ ಬೆಲೆಯನ್ನ ನಿಗದಿ ಮಾಡುತ್ತವೆ. ಕೊರತೆ ಬೇಡಿಕೆಯನ್ನ ಹೆಚ್ಚಿಸುತ್ತದೆ ಮತ್ತು ಬೆಲೆಯನ್ನ ಕೂಡ ಹೆಚ್ಚುವಂತೆ ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ತೈಲದ ಬೆಲೆ ಕೊರತೆಗಿಂತ ಮೀರಿ ಹೆಚ್ಚಾಗಲು ಕಾರಣ ಪರಿಸ್ಥಿತಿಯ ಲಾಭ ಪಡೆದು ಹೆಚ್ಚು ಹಣ ಮಾಡುವ ದಲ್ಲಾಳಿ ಮನಸ್ಥಿತಿ. 
  • ಗಮನಿಸಿ ಇಲ್ಲಿ ಎರಡು ರೀತಿಯ ಹೊಡೆತ ನಮ್ಮ ಮೇಲೆ ಆಗಲಿದೆ. ತೈಲ ಬೆಲೆ ಹೆಚ್ಚಿದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ಹಣದುಬ್ಬರ ಹೆಚ್ಚುತ್ತದೆ. ನಮ್ಮ ರುಪಾಯಿಯ ಮೌಲ್ಯ ಕುಸಿಯುತ್ತದೆ. ಹೀಗೆ ಕುಸಿದ ರೂಪಾಯಿ ಮೌಲ್ಯ ತೈಲ ಬೆಲೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಎರಡು ಅಲುಗಿನ ಕತ್ತಿ ಇದ್ದಂತೆ ಅಪಾಯ ಮಾತ್ರ ತಪ್ಪಿದ್ದಲ್ಲ. 
ಭಾರತ ಏನು ಮಾಡಬೇಕು? ಅಥವಾ ಮಾಡಿದೆ? 
ಭಾರತ ತನ್ನ ಬಹುಕಾಲದ ವ್ಯಾಪಾರದ ಸಂಬಂಧಿ ಇರಾನ್ ನಿಂದ ಒಂದೆರಡು ಹೆಜ್ಜೆ ಮುಂದು ಹೋಗಿ ಸೌದಿ ಅರೇಬಿಯಾ ಮತ್ತು ರಷ್ಯಾ ಜೊತೆಗೆ ತೈಲ ಸರಬರಾಜಿನ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ಭಾರತದ ಎನರ್ಜಿ ಮಿನಿಸ್ಟರ್ ಧರ್ಮೇಂದ್ರ ಪ್ರಧಾನ್ ಸೌದಿ ಅರೇಬಿಯಾದ ಆಯಿಲ್ ಮಿನಿಸ್ಟರ್ ಖಾಲಿದ್ ಜೊತೆ ಒಂದು ಸುತ್ತಿನ ಮಾತುಕತೆ ನೆಡೆಸಿದ್ದಾರೆ. ಸೌದಿ ಅಡಚಣೆಯಿಲ್ಲದ ಮತ್ತು ಹೆಚ್ಚು ಏರಿಳಿತವಿಲ್ಲದ ತೈಲ ಸರಬರಾಜು ಮಾಡುವುದಾಗಿ ಹೇಳಿದೆ. ಅದಿನ್ನೂ ಕಾರ್ಯರೂಪಕ್ಕೆ ಬರಬೇಕಿದೆ. ಕಳೆದ ತಿಂಗಳು ಸೌದಿ ದೇಶದ ಆಯಿಲ್ ದೈತ್ಯ ಕಂಪನಿ ಸೌದಿ ಆರಂಕೋ ಭಾರತದೊಂದಿಗೆ 44 ಬಿಲಿಯನ್ ಅಮೆರಿಕನ್ ಡಾಲರಿನ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ತೈಲ ಕಂಪನಿಗಳ ಸಹಯೋಗದೊಂದಿಗೆ ಮೆಗಾ ರಿಫೈನರಿ ಭಾರತದಲ್ಲಿ ಸ್ಥಾಪಿಸುವುದು ಉದ್ದೇಶ. 
ಭಾರತ ಸರಕಾರ ಏನೇನು ಮಾಡಬಹುದು ಅದನ್ನೆಲ್ಲಾ ಮಾಡುತ್ತಿದೆ. ಸಮಸ್ಯೆಯ ಕ್ಲಿಷ್ಟತೆಯ ಅರಿವು ಅದಕ್ಕಿದೆ ಆದರೇನು ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬಂದು ಪಲ ನೀಡಲು ಸಮಯ ಬೇಕಾಗುತ್ತದೆ. 2040 ರ ವೇಳೆಗೆ ಭಾರತ ಜಗತ್ತಿನ ಹೆಚ್ಚು ಎನೆರ್ಜಿ ಬೇಡುವ ದೇಶ ಎನ್ನಿಸಿಕೊಳ್ಳಲಿದೆ. ಅಂದರೆ ಅದು ತೈಲವಿರಲಿ, ಸೋಲಾರ್ ಇರಲಿ ಅಥವಾ ಬೇರೆ ರೂಪದಲ್ಲಿರಲಿ ಭಾರತ ಎಲ್ಲವನ್ನೂ ಜಗತ್ತಿಗಿಂತ ಹೆಚ್ಚು ಬೇಡುತ್ತದೆ. ಹೀಗಾಗಿ ಇಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಂದಿನ ದಿನದಲ್ಲಿ ಮತ್ತೆ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವುದ ತಪ್ಪಿಸಲಿದೆ. 
ಇನ್ನು ಈ ವಾರದ ಇನ್ನೊಂದು ಮುಖ್ಯ ಅಂಶದ ಬಗ್ಗೆಯೂ ಒಂದಷ್ಟು ತಿಳಿದು ಕೊಳ್ಳೋಣ. 
  • ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಡಿಮಾನಿಟೈಸೇಶನ್ ನಿಂದ ಆರ್ಥಿಕತೆಯ ವೇಗ ಅಥವಾ ಅಭಿವೃದ್ಧಿಯ ವೇಗ ಕಡಿಮೆಯಾಗಿದೆ ಎನ್ನುವುದು ಬಹಳ ಜನ ತಿಳಿದುಕೊಂಡಿರುವ ಸುಳ್ಳು ಅಭಿವೃದ್ಧಿಯ ಕುಂಠಿತಕ್ಕೆ ರಘುರಾಮ್ ರಾಜನ್ ತೆಗೆದುಕೊಂಡ ಕೆಲವು ನಿರ್ಧಾರಗಳು ಮತ್ತು  ಮೂಲಭೂತವಾಗಿ ಬ್ಯಾಂಕ್ಗಳಲ್ಲಿ ಹೆಚ್ಚಾಗಿರುವ NPA  ಅಂದರೆ ನಾನ್ ಪರ್ಫಾರ್ಮಿಂಗ್ ಅಸೆಟ್ ಕಾರಣ ಎಂದಿದ್ದಾರೆ. ಗಮನಿಸಿ ಇಲ್ಲಿ ಪೂರ್ಣ ಸತ್ಯವಿಲ್ಲ. ರಾಜಕೀಯ ಹೊರತುಪಡಿಸಿ ನಾವು ತಿಳಿದುಕೊಳ್ಳಬೇಕಾದ ವಿಷಯಗಳಿವು. 
  • ಡಿಮಾನಿಟೈಸೇಶನ್ ನಿಂದ ಅಭಿವೃದ್ಧಿಯ ವೇಗ ಕಡಿಮೆಯಾಗಿಲ್ಲ ಎನ್ನುವುದು ಶುದ್ಧ ಸುಳ್ಳು. ಆದರೆ ಡಿಮಾನಿಟೈಸೇಶನ್ ನಿಂದಲೇ ವೇಗ ಕಡಿಮೆಯಾಯಿತು ಎನ್ನುವುದು ಕೂಡ ತಪ್ಪು. ಅವುಗಳ ಮಟ್ಟಿಗೆ ಅವು ದೇಣಿಗೆ ನೀಡಿವೆ.  
  • ಹೆಚ್ಚಾಗುತ್ತಿರುವ NPA ಅಂದರೆ ನಾನ್ ಪರ್ಫಾರ್ಮಿಂಗ್ ಅಸೆಟ್ ಅಭಿವೃದ್ಧಿಯ ವೇಗ ಅಥವಾ ಗ್ರೋಥ್ ರೇಟ್ ಕಡಿಮೆಯಾಗಲು ಕಾರಣ ಎನ್ನುವುದನ್ನ ಒಪ್ಪಲೇಬೇಕು. 
  • ಇದಕ್ಕೆಲ್ಲಾ ರಾಜನ್ ಕಾರಣ ಎಂದು ಮಧ್ಯ ರಾಜನ್ ಅವರ ಹೆಸರನ್ನ ಏಕೆ ಎಳೆದು ತಂದರೋ ತಿಳಿಯದು. ಹಾಗೆ ನೋಡಲು ಹೋದರೆ ನಾನ್ ಪರ್ಫಾರ್ಮಿಂಗ್ ಅಸೆಟ್ ಹೆಚ್ಚಾಗಿದೆ,  ನಮ್ಮ ಬ್ಯಾಂಕ್ಗಳ ಬ್ಯಾಲೆನ್ಸ್ ಶೀಟ್ ಸ್ವಚ್ಛಗೊಳಿಸಿ ಎನ್ನುವ ಹುಯಿಲು ಎಬ್ಬಿಸಿದ್ದೆ ರಾಜನ್!. ಆ ಮಟ್ಟಿಗೆ ನಾವು ಅವರಿಗೆ ಅಭಾರಿಯಾಗಿರಬೇಕು. 
ರಾಜೀವ್ ಕುಮಾರ್ ಅನವಶ್ಯಕವಾಗಿ ರಘುರಾಮ್ ರಾಜನ್ ಅವರ ಹೆಸರನ್ನ ಬಳಸಿದ್ದಾರೆ. ಅನುತ್ಪಾದಿತ ಆಸ್ತಿ ನಮ್ಮ ಬೆಳವಣಿಗೆಗೆ ಮಾರಕವಾಗಿದೆ ಒಪ್ಪೋಣ ಆದರೆ ರಾಜನ್ ಒಬ್ಬರು ಅಷ್ಟೊಂದು ಅನುತ್ಪಾದಿತ ಆಸ್ತಿಯ ಸಂಗ್ರಹಣೆ ಮಾಡಿದವರಲ್ಲ. ಅದು ಅವರ ನಿರ್ಧಾರದಿಂದ ಸೃಷ್ಟಿಯಾದದ್ದಲ್ಲ. ನಮ್ಮ ದೇಶದಲ್ಲಿ ಬ್ಯಾಂಕ್ನಲ್ಲಿರುವ ಹಣ ಜನ ಸಾಮಾನ್ಯನದ್ದು ಜೊತೆಗೆ ಬ್ಯಾಂಕ್ ದಿವಾಳಿ ಎದ್ದರೆ ಅದನ್ನ ಬೈಲ್ ಔಟ್ ಮಾಡುವುದು ಕೂಡ ಜನರ ದುಡ್ಡಿನಿಂದ ಹೀಗಾಗಿ ಯಾರಿಗೂ ಭಾದ್ಯತೆಯಿಲ್ಲ. ಒಂದು ಸಂಸ್ಥೆ ಇದಕ್ಕೆ ಹೊಣೆ ಎಂದು ಅದರ ಮೇಲೆ ಭಾದ್ಯತೆ ಹೊರಿಸದೆ ಸುಮ್ಮನೆ ಅವರಿವರ ಹೆಸರು ಹೇಳುವುದು ಸಮಸ್ಯೆಯ ಪರಿಹಾರ ಎಂದಿಗೂ ಅಲ್ಲ. 
ಭಾರತದಂತ ದೊಡ್ಡ ದೇಶದಲ್ಲಿ ಹೊಣೆಗಾರಿಕೆ ಮತ್ತು ಭಾದ್ಯತೆ ಜೊತೆ ಜೊತೆಗೆ ಅತ್ಯಂತ ಕಠಿಣ ಶಿಕ್ಷೆ ಎಲ್ಲಿಯವರೆಗೆ ನಿಗದಿಯಾಗುವುದಿಲ್ಲ ಅಲ್ಲಿಯವರೆಗೆ ಇವೆಲ್ಲಾ ಮತ್ತೆ ಪುನರಾವರ್ತನೆಯಾಗುತ್ತಲೆ ಇರುತ್ತದೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com