ಹೀಗಿದ್ದೂ ನಾವೆಲ್ಲಾ ಒಂದಲ್ಲಾ ಒಂದು ಬಾರಿ ಇಂಡಿಯನ್ ಏರ್ಲೈನ್ಸ್ ನಷ್ಟದಲ್ಲಿ ನೆಡೆಯುತ್ತಿದೆ ಎನ್ನುವ ಮಾತನ್ನ ಕೇಳಿಯೇ ಇರುತ್ತೇವೆ. ಇದರ ಜೊತೆ ಜೊತೆಗೆ ಕಿಂಗ್ ಫಿಷರ್ ಸಂಸ್ಥೆ ದಿವಾಳಿ ಎದ್ದು ಹೋಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹಾರಾಟ ಪ್ರಾರಂಭಿಸಿದ ಒಂದು ವಾರದಲ್ಲೇ ಏರ್ ಒಡಿಶಾ ಉಸ್ಸಪ್ಪಾ ಅಂತ ಕೊತದ್ದು ಸುದ್ದಿಯಾಗಲಿಲ್ಲ. ಭಾರತದಲ್ಲಿ ಇಂದು ವಿಮಾನಯಾನ ನೆಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದೇ ಒಂದು ಸಂಸ್ಥೆ ಕೂಡ ಲಾಭದಾಯಕವಾಗಿಲ್ಲ ಎಂದರೆ ಉತ್ಪ್ರೇಕ್ಷೆ ಎನಿಸಬಹದು ಆದರೆ ಇದು ಸತ್ಯ. ಸ್ವಾತಂತ್ರ್ಯ ಬಂದು 70 ವರ್ಷಕ್ಕೂ ಹೆಚ್ಚಾದರೂ ಇಂದಿಗೂ ಜಗತ್ತು ನಿಂತು ನೋಡುವ 'ನಮ್ಮದು' ಎನ್ನುವ ಒಂದು ಏರ್ಲೈನ್ ಇಲ್ಲ ಎನ್ನುವುದು ಖೇದಕರ. ಗಮನಿಸಿ ನೋಡಿ ಗಾತ್ರದಲ್ಲಿ ಭಾರತಕ್ಕಿಂತ ಅತ್ಯಂತ ಸಣ್ಣ ದೇಶಗಳಾದ ಫ್ರಾನ್ಸ್, ಜರ್ಮನಿ, ಸಿಂಗಾಪುರ, ಮಲೇಶಿಯಾ, ಥೈಲ್ಯಾಂಡ್, ದುಬೈ, ಕತಾರ್ ಹೀಗೆ ಹತ್ತು ಹಲವು ದೇಶಗಳು ತಮ್ಮ ದೇಶವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ತಮ್ಮದೇ ಆದ ಏರ್ಲೈನ್ ಗಳನ್ನ ಹೊಂದಿವೆ. ಆದರೆ ಭಾರತ? ಆಶ್ಚರ್ಯದ ವಿಷಯವೆಂದರೆ ಮೇಲಿನ ಸಾಲಿನಲ್ಲಿ ಉಲ್ಲೇಖಿಸಿರುವ ದೇಶಗಳ ಜನಸಂಖ್ಯೆಗೂ ಮೀರಿದ ಪ್ರಯಾಣಿಕರ ಸಂಖ್ಯೆ ನಮ್ಮ ದೇಶದಲ್ಲಿದೆ ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ್ದು ಎಂದು ಗುರುತಿಸಿಕೊಳ್ಳುವ ಒಂದು ವಿಮಾನಯಾನ ಸಂಸ್ಥೆಯಿಲ್ಲ!. ಅಲ್ಲದೆ ವಾರ್ಷಿಕ ವ್ಯಾಪಾರ ವೃದ್ಧಿಯ ಪ್ರಮಾಣ 20 ಪ್ರತಿಶತ ಮೀರುತ್ತಿದೆ. ವಸ್ತು ಸ್ಥಿತಿ ಹೀಗಿದ್ದೂ ನಮ್ಮೆಲ್ಲಾ ಏರ್ಲೈನ್ ಗಳು ನಷ್ಟದಲ್ಲಿವೆ. ಕಿಂಗ್ ಫಿಷರ್ ಮುಚ್ಚಿದಾಗ ವಿಜಯ್ ಮಲ್ಯನ ನೆಡವಳಿಕೆ ಸರಿಯಿಲ್ಲ ಆತ ಹಣವನ್ನ ಬೇರೆಯ ಕಾರ್ಯಗಳಿಗೆ ಉಡಾಯಿಸಿಬಿಟ್ಟ ಎನ್ನುವ ಮಾತುಗಳು ಕೇಳಿ ಬಂದವು. ಇಂಡಸ್ಟ್ರಿಯಲ್ಲಿರುವ ಜನರಿಗೆ ಹಣಕಾಸು ವಿದ್ಯಮಾನಗಳ ತಿಳಿದುಕೊಂಡವರಿಗೆ ಅದು ಪೂರ್ಣ ಸತ್ಯವಲ್ಲದ ಮಾತು ಎನ್ನುವುದು ತಿಳಿದಿತ್ತು. ಇನ್ನು ಇಂಡಿಯನ್ ಏರ್ಲೈನ್ ಗೆ ಸರಕಾರ ಸದಾ ಹಣವನ್ನ ಸುರಿಯುತ್ತಲೇ ಇದೆ. ಹೀಗಾಗಿ ಅದು ಬದುಕಿಕೊಂಡಿದೆ. ಕಳೆದ ಆರೆಂಟು ತಿಂಗಳಿಂದ ಮುಚ್ಚುವ ಸುದ್ದಿಯಲ್ಲಿರುವ ಇನ್ನೊಂದು ಭಾರತೀಯ ವಿಮಾನ ಸಂಸ್ಥೆ ಜೆಟ್ ಏರ್ವೇಸ್. ಈ ಸಂಸ್ಥೆ ಹನ್ನೊಂದು ವರ್ಷದ ಒಟ್ಟು ನಷ್ಟದ ಮೊತ್ತ 1600 ಕೋಟಿಗೂ ಮೀರಿದೆ ಎಂದು ತನ್ನ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ. ಇದೀಗ ಈ ಸಂಸ್ಥೆಯನ್ನ ಉಳಿಸಲು ಹೆಣಗಾಟ ಶುರುವಾಗಿದೆ. ಏಕೆ? ಮತ್ತು ಹೇಗೆ? ಎನ್ನುವುದನ್ನ ತಿಳಿದುಕೊಳ್ಳುವ ಮುಂಚೆ ಭಾರತೀಯ ವಿಮಾನ ಸಂಸ್ಥೆಗಳು ನಷ್ಟದಲ್ಲೇಕಿವೆ ಎನ್ನುವುದನ್ನ ತಿಳಿದುಕೊಳ್ಳೋಣ.