ಆಷಾಢಕ್ಕೂ ಆರ್ಥಿಕತೆಗೂ ಉಂಟೆ ನಂಟು?
ಆಷಾಢಕ್ಕೂ ಆರ್ಥಿಕತೆಗೂ ಉಂಟೆ ನಂಟು?

ಆಷಾಢಕ್ಕೂ ಆರ್ಥಿಕತೆಗೂ ಉಂಟೆ ನಂಟು?

ಅಯ್ಯೋ ಬಿಡ್ರಿ ನಾವು ಭಾರತೀಯರು ಹೀಗೆ ಎಂದು ಸಿನಿಕರಾಗುವುದು ಬೇಕಿಲ್ಲ. ಜಗತ್ತಿನಲ್ಲಿ ನಾವೊಬ್ಬರೇ ಹೀಗೆ ಎಂದು ನಮ್ಮನ್ನು ನಾವು ಹಳಿದುಕೊಳ್ಳುವುದು ಬೇಕಿಲ್ಲ.
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸ ಆಷಾಢ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಏಳನೇ ತಿಂಗಳು.  ಈ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನೆಡೆಯುವುದೇ ಇಲ್ಲ. ಭಾರತದಲ್ಲಿ ಆಷಾಢ ಎಂದರೆ ಅನಿಷ್ಟ ಎನ್ನುವಷ್ಟು ನಂಬಿಕೆ ಮನೆಮಾಡಿದೆ. 
ಈ ತಿಂಗಳನ್ನ ನಮ್ಮ ಜನ ಅಷ್ಟೊಂದು ನಿರ್ಲಕ್ಷಿಸಿ ಬಿಡಲು ಕಾರಣಗಳು ಏನೇ ಇರಲಿ ವ್ಯಾವಹಾರಿಕ ದೃಷ್ಟಿಯಿಂದ ಈ ತಿಂಗಳು ಮಾತ್ರ ಸಪ್ಪೆ. ಅಂಕಿಅಂಶದ ಪ್ರಕಾರ ಭಾರತೀಯ ಮದುವೆ ಉದ್ಯಮ 15 ಬಿಲಿಯನ್ ಡಾಲರ್ ವ್ಯವಹಾರ. ಈ ತಿಂಗಳಲ್ಲಿ ಈ ನಡುವೆ ಅಲ್ಲೊಂದು ಇಲ್ಲೊಂದು ಎನ್ನುವ ಮದುವೆ ಕಾರ್ಯಗಳು ನಡೆಯುತ್ತವೆ ಉಳಿದಂತೆ ಬಹತೇಕ ಸ್ತಬ್ಧ. ಈ ವ್ಯವಹಾರವನ್ನ ನಂಬಿ ಬದುಕು ಕಂಡಿರುವ ಬಹುತೇಕ ಜನರಿಗೆ ಆಷಾಢ ಎಂದರೆ ಚಳಿ-ಜ್ವರ. ನಮ್ಮ ಜನರ ಮನಸ್ಥಿತಿ ಅರಿತಿರುವ ಬಹುರಾಷ್ಟೀಯ ಕಂಪನಿಗಳು, ಕಾರು ಮಾರುವ ಸಂಸ್ಥೆಗಳು, ಬ್ರಾಂಡೆಡ್ ಬಟ್ಟೆ, ಚಪ್ಪಲಿ ಮಾರುವ ಅಂಗಡಿಗಳು ತಮ್ಮ ದರದಲ್ಲಿ ಒಂದಷ್ಟು ಕಡಿತ ಮಾಡುತ್ತಾರೆ. ಎಲ್ಲೆಡೆ ಡಿಸ್ಕೌಂಟ್ ಸೇಲ್ ಎನ್ನುವ ಬೋರ್ಡುಗಳದ್ದೇ ಸಾಮ್ರಾಜ್ಯ.  ಹೀಗೆ ಡಿಸ್ಕೌಂಟ್ ಸೇಲ್ ಮಾಡಿ ಕೂಡ ಉಳಿದ ತಿಂಗಳಿಗೆ ಹೋಲಿಸಿದರೆ ನಮ್ಮ ಬಿಸಿನೆಸ್ ಕಡಿಮೆ ಎನ್ನುವುದು ಇವರೆಲ್ಲರ ಸಾಮಾನ್ಯ ರಾಗ. ನಂಬಿಕೆ ಎನ್ನುವುದು ಎಷ್ಟು ಪ್ರಬಲ ಎನ್ನುವುದಕ್ಕೆ ಆಷಾಢ ಒಂದು ಉತ್ತಮ ಉದಾಹರಣೆ. 
ಅಯ್ಯೋ ಬಿಡ್ರಿ ನಾವು ಭಾರತೀಯರು ಹೀಗೆ ಎಂದು ಸಿನಿಕರಾಗುವುದು ಬೇಕಿಲ್ಲ. ಜಗತ್ತಿನಲ್ಲಿ ನಾವೊಬ್ಬರೇ ಹೀಗೆ ಎಂದು ನಮ್ಮನ್ನು ನಾವು ಹಳಿದುಕೊಳ್ಳುವುದು ಬೇಕಿಲ್ಲ. ನಮ್ಮ ನೆರೆಯ ಬುದ್ಧನ ದೇಶ ಎಂದು ಪ್ರಖ್ಯಾತಿ ಪಡೆದಿರುವ ಚೀನಾ ದೇಶದಲ್ಲೂ ಇದೆ ರೀತಿ ಆಗುತ್ತೆ. ಇಂಗ್ಲಿಷ್ ಕ್ಯಾಲಂಡರ್ ನ ಪ್ರಕಾರ ವರ್ಷದ ಎಂಟನೇ ತಿಂಗಳು, ಚೈನೀಸರ ಕ್ಯಾಲಂಡರ್ ಪ್ರಕಾರ ವರ್ಷದ ಏಳನೇ ತಿಂಗಳನ್ನ ಅವರು 'ಘೋಸ್ಟ್ ಮಂತ್' ಅಂತಲೇ ಕರೆಯುತ್ತಾರೆ. 
ಸತ್ತವರ ಆತ್ಮಗಳು ಭೂಮಿಯ ಮೇಲೆ ಓಡಾಡುತ್ತಿರುತ್ತವೆ ಹೀಗಾಗಿ ಹೊಸ ಬಿಸಿನೆಸ್ ಮಾಡವುದು, ಹೊಸ ಕಾರಿಗೆ ಸಹಿ ಹಾಕುವುದು, ಮದುವೆ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎನ್ನುವ ಭಾವನೆ ಚೀನಿಯರದ್ದು. ಚೀನಿಯರ ವ್ಯಾಪಾರ ವಹಿವಾಟು ಈ ತಿಂಗಳಲ್ಲಿ ಗಣನೀಯವಾಗಿ ಕುಸಿಯುತ್ತದೆ. ಇವತ್ತು ಜಗತ್ತು ಒಂದು ಮನೆಯಂತಾಗಿದೆ ಬಹುರಾಷ್ಟ್ರೀಯ ಕಂಪನಿಗಳಿಗೆ ಈ ನಂಬಿಕೆಗಳ ಮೇಲೆ ನಂಬಿಕೆಯಿಲ್ಲ ಏನಾದರು ಸರಿಯೇ ನಮ್ಮ ಸೇಲ್ಸ್ ಕುಸಿಯಬಾರದು ಎನ್ನವುದು ಅವರ ಲೆಕ್ಕಾಚಾರ. ಹೀಗಾಗಿ ಹೆಚ್ಚಿನ ಜಾಹೀರಾತು ಗ್ರಾಹಕನಿಗೆ ಹೆಚ್ಚಿನ ಆಮಿಷ ಒಡ್ಡುತ್ತಲೇ ಬರುತ್ತಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಅಂದಿನ ಬದುಕಿಗೆ ಅನುಗುಣವಾಗಿ ಮಾಡಿದ ಒಂದು ಬದುಕುವ ವಿಧಾನ ನಂತರದ ದಿನಗಳಲ್ಲಿ ಹೇಗೆ ಆ ದೇಶದ ಕಸ್ಟಮ್ ಎನ್ನುವಂತೆ ಬೆಳೆದು ಬಿಡುತ್ತದೆ ಎನ್ನವುದು ಅಚ್ಚರಿ ಮೂಡಿಸುತ್ತೆ. ಬಹುರಾಷ್ಟೀಯ ಕಂಪನಿಗಳ ಕಸರತ್ತು ಹೇಗೆ ಹಳೆಯ ನಂಬಿಕೆಯ ಮುಂದೆ ಮುದುಡಿ ಕೂರುತ್ತದೆ ಎನ್ನವುದು 'ನಂಬಿಕೆ' ಹೇಗೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಹಜವಾಗಿ ಸರಳವಾಗಿ ದಾಟುತ್ತ ಬಂದಿದೆ ಎನ್ನುವುದು ಕೂಡ ಅಷ್ಟೇ ಅಚ್ಚರಿ ಹುಟ್ಟಿಸುತ್ತದೆ. 
ಫಿಲಿಪಿನೋ ದೇಶದ್ದು ಸೇಮ್ ಕಥೆ. ಅತೃಪ್ತ ಆತ್ಮಗಳು ಬ್ಯಾಡ್ ಲಕ್ ತರುತ್ತವೆ ಎನ್ನುವುದು ಇವರ ನಂಬಿಕೆ. ಯಾವುದೇ ಹೊಸ ಕೆಲಸ ಶುರು ಮಾಡಲು ಹಿಂದೇಟು ಹಾಕುತ್ತಾರೆ. ಇದರ ಪ್ರಭಾವ ಒಂದು ತಿಂಗಳಲ್ಲ ಮೂರು ತಿಂಗಳಿರುತ್ತದೆ ಎನ್ನವುದು ಇವರ ನಂಬಿಕೆ. ಘೋಸ್ಟ್ ಮಂತ್ ನಲ್ಲಿ ಪಾತಾಳ ತಲುಪುವ ವ್ಯಾಪಾರ ವಹಿವಾಟು ಮುಂದಿನ ಎರಡು ತಿಂಗಳು ತೆವಳುತ್ತಲೇ ಸಾಗುತ್ತದೆ. 
ಜಪಾನ್ ನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ಸರಿಸುಮಾರು 20 ದಿನಗಳ ಕಾಲ ವಿವಿಧ ಹಬ್ಬಗಳನ್ನ ಹಮ್ಮಿಕೊಳ್ಳುತ್ತಾರೆ. ಜುಲೈ ನಲ್ಲಿ ಸತ್ತ ಪೂರ್ವಿಕರ ನೆನಪಿಗೆ ಎಂದು ಒಂದು ಹಬ್ಬ ಮಾಡಿಕೊಳ್ಳುತ್ತಾರೆ. ಹೀಗೆ ಹಬ್ಬಗಳನ್ನ ಏರ್ಪಡಿಸಿ ಸಾಕಷ್ಟು ವ್ಯಾಪಾರ ವಹಿವಾಟು ಹೆಚ್ಚಿಸುವ ಕಾರ್ಯ ಮಾಡಿದ್ದರೂ ಮನೆ ಕೊಳ್ಳುವಿಕೆ, ಮನೆ ಬದಲಾಯಿಸುವಿಕೆ, ಕಾರು ಕೊಳ್ಳುವುದು ಕಡಿಮೆ ಎಂತಲೇ ಹೇಳಬಹದು. 
ಎಷ್ಟೇ ಆದರೂ ನಾವು ಏಷ್ಯನ್ ಮೂಲದವರು ಎಲ್ಲೂ ಒಂದು ಕಡೆ ಸಂಬಂಧದ ಕೊಂಡಿ ಬೆಸೆದಿರುತ್ತದೆ ಹೀಗಾಗಿ ಎಲ್ಲೋ ಒಂದುಕಡೆ ನಮ್ಮ ಆಚರಣೆಗಳು ಕೂಡ ಸಾಮ್ಯತೆ ಕಾಣುತ್ತದೆ ಎಂದು ಸಮಾಧಾನ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನ್ಯೂಜಿಲ್ಯಾಂಡ್ ನಲ್ಲಿ ಕೂಡ ಜುಲೈ ತಿಂಗಳು ಅಷ್ಟಕಷ್ಟೇ ಇದಕ್ಕೆ ಮುಖ್ಯ ಕಾರಣ ಈ ತಿಂಗಳು ವರ್ಷದ ಅತಿ ಹೆಚ್ಚು ಚಳಿ ಹೊಂದಿರುವ ತಿಂಗಳಾಗಿದೆ. ಚಳಿ ಹೆಚ್ಚಾಗಿರುವುದರ ಕಾರಣ ಜನರು ಮನೆಯಿಂದ ಹೊರಬರಲು ಇಚ್ಛಿಸುವುದಿಲ್ಲ ಜೊತೆಗೆ ಕುಸಿದ ಟೂರಿಸಂ ಸಹಜವಾಗೇ ವ್ಯಾಪಾರ -ವಹಿವಾಟು ಕುಸಿಯುವಂತೆ ಮಾಡುತ್ತದೆ. 
ಇನ್ನು ಯೂರೋಪಿನದ್ದು ಬೇರೆಯದೇ ಕಥೆ. ಪೋರ್ಚುಗಲ್, ಸ್ಪೇನ್, ಇಟಲಿ ದೇಶಗಳು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಟೂರಿಸಂ ಮತ್ತು ಇತರ ಅತಿ ಅವಶ್ಯಕ ವಲಯ ಮಾತ್ರ ಕಾರ್ಯ ನಿರ್ವಹಿಸುತ್ತವೆ ಉಳಿದಂತೆ ಮುಕ್ಕಾಲು ವ್ಯಾಪಾರ ವಹಿವಾಟು ಸ್ತಬ್ಧವಾಗಿರುತ್ತದೆ. ಕೊಡುವ-ಕೊಳ್ಳುವ ಕಾರ್ಯಗಳು ಸ್ಥಗಿತವಾಗುತ್ತವೆ. ಯೂರೋಪಿನ ಬಹಳ ದೇಶಗಳಲ್ಲಿ ಜೂನ್, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಯಾವುದಾದರೂ ಒಂದು ತಿಂಗಳು ರಜಾ ನೀಡುವುದು ಸಂಸ್ಕೃತಿಯಾಗಿ ಹೋಗಿದೆ.  ಸಾಮಾನ್ಯವಾಗಿ ಜನ ಈ ವೇಳೆಯಲ್ಲಿ ತಾವಿದ್ದ ಊರು ಬಿಟ್ಟು ಬೇರೆಡೆಗೆ ಹೋಗುತ್ತಾರೆ. ಹೀಗಾಗಿ ಲೆಕ್ಕಾಚಾರಕ್ಕೆ ಕೂತರೆ ಈ ತಿಂಗಳುಗಳಲ್ಲಿ ವ್ಯಾಪಾರ ಲಾಭವಂತೂ ನೀಡುವುದಿಲ್ಲ.  
ಗ್ರಹಗತಿ ಅನುಸರಿಸಿ ಬರುವ ಮುಸ್ಲಿಮರ ಹಬ್ಬ ರಮಧಾನ್ (ರಂಜಾನ್) ನಮ್ಮ ಆಷಾಢದ ಆಜುಬಾಜಿನಲ್ಲಿ ಬರುತ್ತದೆ. ಈ ಹಬ್ಬದ ಸಮಯದಲ್ಲಿ ಸಾಮಾನ್ಯ ಮುಸ್ಲಿಮನ ಹಾವಭಾವದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ವರ್ಷ ಪೂರ್ತಿ ಲೌಕಿಕದಲ್ಲಿ ಮಿಂದೆದ್ದ ಬಾಂಧವರು ದಾನ ಧರ್ಮದ ಮನಸ್ಥಿತಿ ತಲುಪುತ್ತಾರೆ ಇದರಿಂದ ಇಡೀ ಮುಸ್ಲಿಂ ಜಗತ್ತಿನಲ್ಲಿ ವ್ಯಾಪಾರ ವಹಿವಾಟು ನಿಧಾನವಾಗುತ್ತದೆ. ಇದರ ಪರಿಣಾಮ ಮುಸ್ಲಿಮೇತರ ಸಮಾಜಕ್ಕೂ ತಟ್ಟುತ್ತದೆ. 
ಹೀಗೆ ದೇಶ ಭಾಷೆ ಧರ್ಮ ಮತ್ತು ಸಂಸ್ಕೃತಿಯ ಮೀರಿ ಜಗತ್ತಿನ ಬಹು ಪಾಲು ದೇಶಗಳು ಒಂದಲ್ಲ ಒಂದು ಹೆಸರಿನಲ್ಲಿ ಆಷಾಢ ಆಚರಿಸುತ್ತಲೇ ಬಂದಿವೆ ಆಷಾಢದ ಬದಲು ಘೋಸ್ಟ್ ಮಂತ್ ಇರಬಹದು, ಚಳಿ ಇರಬಹದು, ಧಾರ್ಮಿಕ ಆಚರಣೆ ಇರಬಹುದು. ಒಟ್ಟಿನಲ್ಲಿ ಇವು ಸದಾ ವ್ಯಾಪಾರ... ಲಾಭ ಎನ್ನುವ ಮನುಷ್ಯನ ಹಪಾಹಪಿಕೆಗೆ ಅಲ್ಪವಾದರೂ ಸರಿ 'ಬ್ರೇಕ್' ಹಾಕುತ್ತಿವೆ. ಈ ನಂಬಿಕೆಯ ಮುರಿಯುವ ಸಂಘರ್ಷ ಜಾರಿಯಲ್ಲಿದೆ. ನಮ್ಮ ಜಿಗುಟುತನ ಅಷ್ಟು ಸುಲುಭವಾಗಿ ಹೋದಿತೇ?  ವ್ಯಾಪರಸ್ಥರು ಮಾತ್ರ ತಮಗಾದ ವ್ಯಪಾರ ನಷ್ಟದ ಲೆಕ್ಕ ಹಾಕುತ್ತ ತಿಂಗಳು ಕಳೆಯುವುದನ್ನ ಕಾಯುತ್ತಾರೆ. 
ಬದುಕಿನ ಬಂಡಿ ಸಾಗುತ್ತಲೆ ಇರಬೇಕು. ಆಷಾಢ ಬಂದರೂ ಬದುಕಿನ ಗಾಡಿ ಮಾತ್ರ ನಿಲ್ಲವಂತಿಲ್ಲ. ಇತ್ತೀಚೆಗೆ ಮನೆಯಲ್ಲಿ ಹಿರಿಯರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಇದರ ಜೊತೆಗೆ ಯುವ ತಲೆಮಾರಿನ ಜನರಿಗೆ ಮಾಸದ ಅರಿವು ಕೂಡ ಕಡಿಮೆಯಾಗುತ್ತ ಬಂದಿದೆ. ಅವರಿಗೇನಿದ್ದರೂ ಇಂಗ್ಲಿಷ್ ಕ್ಯಾಲೆಂಡರ್ ಅಷ್ಟೇ ಪ್ರಪಂಚ. ಅಂತವರು ಆಷಾಢ ಬಂದರೂ ಕೊಳ್ಳುವಿಕೆಯಲ್ಲಿ ಕಡಿಮೆ ಮಾಡಿಲ್ಲ. ಆದರೆ ಇಂತವರ ಸಂಖ್ಯೆ ಇನ್ನೂ ಹೇಳಿಕೊಳ್ಳುವಷ್ಟಿಲ್ಲ. ಹೀಗಾಗಿ ಆಷಾಢ ಸಮಾಜದ ವೇಗಕ್ಕೆ ಸ್ಪೀಡ್ ಬ್ರೇಕರ್ ಅನ್ನಬಹದು. ನಿರಂತರ ಓಟದ ನಡುವೆ ಸ್ವಲ್ಪ ನಿಂತು ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನ ಅರಿತು ನೆಡೆಯುವುದು ಕೂಡ ಒಳ್ಳೆಯದೇ! ಆಷಾಢ ಭಾರತದ ಮಟ್ಟಿಗಂತೂ ವ್ಯಾಪಾರದ ದೃಷ್ಟಿಯಿಂದ ಸಪ್ಪೆ ತಿಂಗಳು.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Related Stories

No stories found.

Advertisement

X
Kannada Prabha
www.kannadaprabha.com