ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?

ಹದಗೆಡುತ್ತಿರುವ ವಾತಾವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ 12 ಸೊನ್ನೆ ಹಾಕಿ....
ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?
ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?
ಪ್ರತಿ ವರ್ಷ ಜೂನ್ ತಿಂಗಳ 5 ನೇ ದಿನವನ್ನ ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ಆ ದಿನ ಸಾಮಾಜಿಕ ಜಾಲತಾಣದಲ್ಲಿ ಅಬ್ಬರ! ಹೌದು ನೀರು ಉಳಿಸಿ, ಗಿಡ ಬೆಳಸಿ, ಅರಣ್ಯ ನಾಶದ ಬಗ್ಗೆ ವಿಷಾದ ವ್ಯಕ್ತಪಡಿಸುವುದು. ಹೀಗೆ ಒಂದಲ್ಲ ಹಲವು ರೀತಿಯ ಸಂದೇಶಗಳನ್ನ ತಮ್ಮ ಗೋಡೆಯ ಮೇಲೆ ಹಂಚಿಕೊಂಡು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ಪುಟ್ಟ ಪರಿಸರವಾದಿಗಳಾಗಿ ಪರಿವರ್ತನೆಗೊಂಡಿರುತ್ತಾರೆ. 
ಇದೊಂದು ಸಮೂಹ ಸನ್ನಿ!. ಇಂತಹ ಸಮೂಹ ಸನ್ನಿ ರಸ್ತೆಗಿಳಿದು ಕೆಲಸಮಾಡುವ ಮಟ್ಟಕ್ಕೆ ಬೆಳೆದು ಬಿಟ್ಟರೆ ಸಾಕು!! ಅಲ್ಲಿಗೆ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪ್ಲಾನೆಟ್ ಬಿಟ್ಟು ಹೋಗಬಹದು. ಇಷ್ಟೆಲ್ಲಾ ಪೀಠಿಕೆ ಹಾಕುವ ಉದ್ದೇಶ ಬಹಳ ಸರಳ. ಗಮನಿಸಿ ನೋಡಿ ಜಗತ್ತಿನಲ್ಲಿ ಯಾವುದೇ ಅತಿ ಸಣ್ಣ ಅಥವಾ ಅತಿ ದೊಡ್ಡದು ಏನೇ ಘಟಿಸಲಿ ಆದರ ಹಿಂದೆ 'ಹಣ' ಎನ್ನುವುದು ಇದ್ದೇ ಇರುತ್ತದೆ. ಬದುಕಿಗೆ ಉಸಿರು ಹೇಗೋ ಹಾಗೆ ಜಗತ್ತಿಗೆ 'ಹಣ' ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅವಶ್ಯಕ ಹಣವನ್ನ ಗಳಿಸಲು ಮನುಷ್ಯ ಯಾವ ಹಂತಕ್ಕೂ ಹೋಗಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಆನೆಗಳ ಕೊಂದು ಅವುಗಳ ದಂತವನ್ನ, ಕಾಡನ್ನ ಕಡಿದು ಮರವನ್ನ ಮಾರಿಕೊಂಡ ಒಬ್ಬ ವೀರಪ್ಪನ್ ಹೆಸರು ನೆನೆಪಿಗೆ ಬರುತ್ತದೆ. ಇಂತಹ ವೀರಪ್ಪನ್ ವ್ಯವಸ್ಥೆಯ ಅತ್ಯಂತ ಚಿಕ್ಕ ಕೊಂಡಿ. ಅಮೆರಿಕಾ, ಯೂರೋಪು, ಚೀನಾ ದೇಶಗಳು ವಿಶ್ವದ ದೊಡ್ಡಣ್ಣನಾಗಲು ಜಟಾಪಟಿಯಲ್ಲಿ ಯಾವುದನ್ನೂ ಲೆಕ್ಕಿಸದೇ ನಾವು ಕುಳಿತ ರೆಂಬೆಯನ್ನ ಕತ್ತರಿಸುವ ಹುಂಬುತನಕ್ಕೆ ಬಿದ್ದಿದ್ದಾರೆ. ಈಗಾಗಲೇ ನಮ್ಮ ಭೂಮಿಗೆ ನಾವು ಹೊಡೆದಿರುವ ಮೊಳೆಗಳ ಲೆಕ್ಕ ಇಡುವರಾರು? ಹಾಗೆಂದು ಪ್ರಕೃತ್ತಿ ಸುಮ್ಮನೆ ಬಿಡುವುದಿಲ್ಲ. ನಾವು ಮಾಡಿದ ತಪ್ಪುಗಳಿಗೆ ಅದು ದಂಡ ವಿಧಿಸುತ್ತದೆ ಖಂಡಿತ. 
ಕ್ಲೈಮೇಟ್ ಚೇಂಜ್ ಅಥವಾ ವಾತಾವರಣ ಬದಲಾವಣೆ ಎನ್ನುವ ಮಾತು ಕಳೆದ ಒಂದು ದಶಕದಿಂದ ಹೆಚ್ಚಾಗಿ ಚಾಲ್ತಿಗೆ ಬಂದಿರುವ ಪದ. ಪ್ರಕೃತ್ತಿಯಲ್ಲಿರುವ ನೈಸರ್ಗಿಕ ಸಂಪತ್ತನ್ನ ಹಿತ ಮಿತವಾಗಿ ಬಳಸುತ್ತಾ ಬಂದಿದ್ದರೆ ಎಲ್ಲರಿಗೂ ಒಳ್ಳೆಯದಿತ್ತು. ಅಮೆರಿಕಾ ಎನ್ನುವ ದೇಶ ಕೈಗಾರಿಕಾ ಕ್ರಾಂತಿಗೆ ಮುಂದಾಗುತ್ತದೆ. ಈ ಕ್ರಾಂತಿಯ ಮೂಲಕ ಅದು ಸೃಷ್ಟಿ ಮಾಡಿದ ಸಂಪತ್ತು, ಅಲ್ಲಿನ ಜನರ ಜೀವನದಲ್ಲಿ ಆದ  ಬದಲಾವಣೆ ಜಗತ್ತಿನ ಇತರ ರಾಷ್ಟ್ರಗಳ ಕಣ್ಣನ್ನ ಕೂಡ ಕುಕ್ಕುತ್ತದೆ. ಉಳಿದದ್ದು ಇತಿಹಾಸ. ಒಬ್ಬರ ಹಿಂದೆ ಒಬ್ಬರು ಹಠಕ್ಕೆ ಬಿದ್ದವರಂತೆ ತಮ್ಮ ದೇಶದ ನೈಸರ್ಗಿಕ ಸಂಪನ್ಮೂಲವನ್ನ ಲೂಟಿ ಹೊಡೆದರು. ಅದು ಸಾಲದು ಎನ್ನಿಸಿದಾಗ ಇತರ ಬಡ ದೇಶಗಳಿಂದ ಅದನ್ನ ಆಮದು ಮಾಡಿಕೊಂಡು ಅದನ್ನ ಸಿದ್ದ ವಸ್ತುವನ್ನಾಗಿ ಮಾರ್ಪಡಿಸಿ ಮತ್ತೆ ಅದನ್ನ ಹೆಚ್ಚಿನ ಬೆಲೆಗೆ ಅದೇ ಬಡ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿದವು. ಇದೊಂದು ವಿಷ ವರ್ತುಲ. ಒಮ್ಮೆ ಇಂತಹ ಚಕ್ರದಲ್ಲಿ ಸಿಕ್ಕರೆ ಅಲ್ಲಿಗೆ ಮುಗಿಯಿತು. 
ಹೀಗೆ ಪ್ರಕೃತ್ತಿಗೆ ಆಗಿರುವ  ಹಾನಿಯ ಮೊತ್ತ ಇಷ್ಟು ಎಂದು ಸಂಖ್ಯೆಯಲ್ಲಿ ಹೇಳಿದರೆ ಅದು ಒಂದು ಅಂದಾಜು ಸಂಖ್ಯೆಯೇ ಹೊರತು ನಿಜವಾಗಿ ಆದ ಹಾನಿಯನ್ನ ವರ್ಣಿಸಲು ಕೂಡ ಸಾಧ್ಯವಿಲ್ಲ. 20/30 ವಯಸ್ಸಿನ ಜನರು ಹೃದಯಾಘಾತ, ಕ್ಯಾನ್ಸರ್ ನಂತಹ ಮಾರಕ ರೋಗದಿಂದ ಸಾಯುತ್ತಿದ್ದಾರೆ. ಒತ್ತಡ ಮತ್ತು ಮಾನಸಿಕ ಖಿನ್ನತೆ 'ಹಣ' ದ ಹಿಂದಿನ ಓಟದ ಬಳುವಳಿ. 
ವಾತಾವರಣ ಬದಲಾವಣೆಯಿಂದ ಆಗುವ ತೊಂದರೆಗಳನ್ನ ಪಟ್ಟಿ ಮಾಡುತ್ತಾ ಹೋದರೆ ಅದೊಂದು ವಿಜ್ಞಾನ ಬರಹವಾಗುತ್ತದೆ. ಇಲ್ಲಿನ ಉದ್ದೇಶ ವಾತಾವರಣ ಬದಲಾವಣೆಗೆ ಜಗತ್ತಿನ ದೊಡ್ಡ ಮತ್ತು ಅತಿ ದೊಡ್ಡ ಸಂಸ್ಥೆಗಳು ಏನು ಮಾಡುತ್ತಿವೆ? ಎನ್ನುವುದನ್ನ ತಿಳಿದುಕೊಳ್ಳುವುದು. 
2018ರಲ್ಲಿ ಜಗತ್ತಿನ 7000 ಸಂಸ್ಥೆಗಳು ಕಾರ್ಬನ್ ಡಿಸ್ಕ್ಲೋಶರ್ ಮಾಡುವ ಒಂದು ಸರ್ವೆಯಲ್ಲಿ ಪಾಲುಗೊಂಡು ವಿವರಗಳನ್ನ ಹಂಚಿಕೊಂಡಿವೆ. ಇನ್ನೂ ಸಾವಿರಾರು ಸಂಸ್ಥೆಗಳು ಈ ಸಮಸ್ಯೆಯನ್ನ ಇನ್ನು ಅಷ್ಟೊಂದು ತೀವ್ರವಾಗಿ ತೆಗೆದುಕೊಂಡಿಲ್ಲ. ಇಂತಹ ಒಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 80 ಪ್ರತಿಶತ ಸಂಸ್ಥೆಗಳು ಇದೊಂದು ಜಾಗತಿಕ ಸಮಸ್ಯೆ ಇದಕ್ಕೆ ಪರಿಹಾರ ಅತ್ಯಂತ ಬೇಗ ಕಂಡುಕೊಳ್ಳಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗೆ ಹದಗೆಡುತ್ತಿರುವ ವಾತಾವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಖರ್ಚಿನ ಲೆಕ್ಕವನ್ನ ಮುಂದಿಟ್ಟಿವೆ. ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ 12 ಸೊನ್ನೆ ಹಾಕಿ ನೀವೇ ಲೆಕ್ಕ ಹಾಕಿ!. ಟೆಕ್ನಾಲಜಿ, ಜಗತ್ತು ಎಷ್ಟೆಲ್ಲಾ ಮುಂದುವರಿದಿದೆ ಎಂದು ಉಬ್ಬುವ ನಾವು ಬದುಕಿನ ಸಾಮಾನ್ಯ ತತ್ವವನ್ನ ಮರೆತದ್ದು ಇದಕ್ಕೆ ಕಾರಣ. ಇದು ಹೇಗಾಯಿತೆಂದರೆ ನಿದ್ದೆಗೆಟ್ಟು ವಾರಗಟ್ಟಲೆ ಹಣವನ್ನ ಸಂಪಾದಿಸಿ ಅದರ 90 ಪ್ರತಿಶತ ಹಣವನ್ನ ಸ್ಲೀಪ್ ಡಿಸ್ಆರ್ಡರ್ ಗುಣಪಡಿಸಲು ಖರ್ಚು ಮಾಡಿದಂತೆ!. 
ಎಂತಹ ಸಮಯದಲ್ಲೂ ಲಾಭ ನಷ್ಟದ ಲೆಕ್ಕಾಚಾರ ಹಾಕುವ ಪಕ್ಕಾ ವ್ಯಾಪಾರಿ ಮನೋಭಾವದ ಸಂಸ್ಥೆಗಳು ಇದರಲ್ಲಿ ಕೂಡ ಒಂದು ಹೊಸ ವ್ಯಾಪಾರ ಕಂಡಿದ್ದಾರೆ. ಮುಂಬರುವ ದಿನಗಳಲ್ಲಿ ನವೀಕರಿಸಬಹದುದಾದ ಎನರ್ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಗಗನ ಮುಟ್ಟಲಿದೆ. ಇಂತಹ ಸಂಸ್ಥೆಗಳ ವ್ಯಾಪಾರ ವಹಿವಾಟಿನ ಅಂದಾಜು 2.1 ಟ್ರಿಲಿಯನ್ ಅಮೆರಿಕನ್ ಡಾಲರ್. ಅಂದರೆ ವಾತಾವರಣ ಕೆಡದಂತೆ ತಡೆಯಲು ಮಾಡುವ ಖರ್ಚಿನ ಎರಡು ಪಟ್ಟು ವ್ಯಾಪಾರದ ವಾಸನೆ ಅವರ ಮೂಗಿಗೆ ಆಗಲೆ ಬಡಿದಿದೆ. 
ವಿಶ್ವ ಬದುಕುವ ರೀತಿಯನ್ನ ನಿರ್ಧರಿಸುವ ಕೆಲವೇ ಕೆಲವು ಮಂದಿ ಮುಂದಿನ ದಿನಗಳು ಹೀಗಿರಬೇಕು ಎನ್ನುವ ನೀಲನಕ್ಷೆಯನ್ನ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ಅಮೆರಿಕಾದ ಅಧ್ಯಕ್ಷ ಚೀನಾ ಮತ್ತು ಭಾರತ ಕ್ಲೈಮೇಟ್ ಚೇಂಜ್ ಅನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಅಮೇರಿಕಾ ಮತ್ತು ಚೀನಾ ಭೂಮಿಗೆ ಮಾಡಿರುವ ಹಾನಿಯ ಹತ್ತನೇ ಒಂದು ಭಾಗ ಕೂಡ ಮಾಡಿರದ ಭಾರತವನ್ನ ಕೂಡ ಸೇರಿಸಿ ಹೇಳಿಕೆ ಕೊಟ್ಟಿರುವುದು ಭಾರತದ ಇತ್ತೀಚಿನ ದಿನಗಳ ಓಟಕ್ಕೆ ಸಿಕ್ಕ ಬಳುವಳಿ. 
ವರ್ಷದಿಂದ ವರ್ಷಕ್ಕೆ ಹೆಚ್ಚು ತಯಾರಾಗುತ್ತಿರುವ ಮೊಬೈಲ್ ಮತ್ತು ಲ್ಯಾಪ್ ಟಾಪ್, ಕಂಪ್ಯೂಟರ್ಗಳು ತಲೆನೋವಾಗಿ ಬದಲಾಗಲಿವೆ. ಬಳಲಿ ಕೆಟ್ಟ ಇಂತಹ ಡಿವೈಸಸ್ ಗಳನ್ನ ಬಿಸಾಕುವುದರು ಎಲ್ಲಿ? ಹಾಗೆಯೇ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು ನೇಪಥ್ಯ ಸೇರಲಿವೆ. ಇವುಗಳ ಹಲವು ಭಾಗ ಮರು ಬಳಕೆ ಮಾಡಿಕೊಂಡರೂ ಉಳಿದದ್ದ ಎಸೆಯುವುದೆಲ್ಲಿ? ಹೀಗೆ ಒಂದಲ್ಲ ಹತ್ತು ಪ್ರಶ್ನೆಗಳು ಸಾವಾಲುಗಳು ನಮ್ಮ ಮುಂದಿವೆ. 
ಇವತ್ತು ಎಲ್ಲವನ್ನೂ ಹಣದ ಮೂಲಕ ಅಳೆಯುವುತ್ತೇವೆ. ಜಗತ್ತಿನ ಶ್ರೀಮಂತರ ಪಟ್ಟಿಯನ್ನ ಬಿಡುಗಡೆ ಮಾಡುವ ಫೋರ್ಬ್ಸ್ ಇಂತಹ ಸಾಹುಕಾರರ ಒಟ್ಟು ಮೌಲ್ಯ ಇಷ್ಟು ಎಂದು ನಮೂದಿಸುತ್ತದೆ. ಸಮಯವಲ್ಲದ ಸಮಯದಲ್ಲಿ ಮಳೆ. ಚಳಿ, ಗಾಳಿ ಇವುಗಳು ನಮ್ಮ ಮನೆಯನ್ನ ಮುಳುಗಿಸಿದರೆ..? ಸದ್ಯ ಜೀವ ಉಳಿದರೆ ಸಾಕು ಎಂದು ಹಪಹಪಿಸುವ ಸಮಯ ಬಂದರೆ? ಆಗ ನಿಮ್ಮ ಮನೆಯ ಮೌಲ್ಯ ಎಷ್ಟಾದರೂ ಇರಲಿ ಅದನ್ನ ಕೊಳ್ಳುವರು ಯಾರು? ಬ್ಯಾಂಕಿನಲ್ಲಿ ಇರುವ ನಿಮ್ಮ ಹಣದ ಮೊತ್ತ ಕೇವಲ ಕಂಪ್ಯೂಟರ್ ಪರದೆಯ ಮೇಲಿನ ಒಂದು ಸಂಖ್ಯೆಯಾಗಿ ಉಳಿದುಕೊಳ್ಳುತ್ತದೆ. ಬದುಕಿನ ಸಾಮಾನ್ಯ ಸೂತ್ರ  ಸರಳ ಬದುಕು ಸುಂದರ ಬದುಕು ಎನ್ನುವುದು ಅದನ್ನ ಮರೆತು ನಮ್ಮ ಗ್ರಹವನ್ನ ನಾವೇ ಕುಲಗೆಡಿಸಿದ್ದೇವೆ. ಅದನ್ನ ಸಾಧ್ಯವಾದಷ್ಟು ಪುನಃ ಕಟ್ಟುವ ಹೊಣೆ ನಮ್ಮ ಮೇಲಿದೆ. ಅದರಲ್ಲೂ ವ್ಯಾಪಾರಿ ಬುದ್ದಿ, ಹಣ ಮಾಡಬೇಕು ಎನ್ನುವುದನ್ನ ಬಿಟ್ಟು ಒಮ್ಮನಿಸ್ಸಿನಿಂದ ಈ ಕಾರ್ಯ ಮಾಡಬೇಕಿದೆ. ನಾಲ್ಕು ಜನ ಸೇರಿದ ಕಡೆ ಎಂಟು ಗುಂಪಾಗುವ ಮನುಷ್ಯ ಈ ಕಾರ್ಯದಲ್ಲಿ ಒಗ್ಗಟ್ಟು ತೋರಿಸಿಯಾನೇ? ಎನ್ನುವುದು ಸದ್ಯದ ಪ್ರಶ್ನೆ. 
ಕೊನೆ ಮಾತು : ನಮ್ಮ ಬಳಿ ಹೆಚ್ಚಿನ ಸಮಯವಿಲ್ಲ. 2050ರ ವೇಳೆಗೆ ಹಲವು ಕಡೆ ಬಿಸಿಲು ಹೆಚ್ಚಾಗುತ್ತದೆ, ಹಲವು ಕಡೆ ಚಳಿ, ಇನ್ನು ಕೆಲವು ಕಡೆ ಪ್ರವಾಹ. ಹೀಗೆ ಹಲವು ಹತ್ತು ಬದಲಾವಣೆಗಳಾಗುತ್ತವೆ. ಮುಂದಿನ ಐದು ವರ್ಷದಲ್ಲಿ ನಮ್ಮ ತಪ್ಪನ್ನ ತಿದ್ದಿಕೊಳ್ಳುವ ಕೆಲಸ ಮಾಡದಿದ್ದರೆ ತಪ್ಪಿಗೆ ತಕ್ಕ ಶಾಸ್ತಿ ಖಂಡಿತ ಆಗುತ್ತದೆ. ಆ ದಿನ ಯಾರೂ ನಿಮ್ಮ ನೆಟ್ ವರ್ತ್ ಎಷ್ಟು ಎಂದು ಕೇಳುವುದಿಲ್ಲ. ಎದೆ ಉಬ್ಬಿಸಿ ಹೇಳುವ ಹುಮ್ಮಸ್ಸು ನಿಮ್ಮಲ್ಲೂ ಇರುವುದಿಲ್ಲ....  

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com