ವೃತ್ತಿಯ ಜಾಗವನ್ನ ಪ್ರವೃತ್ತಿ ತುಂಬಿದಾಗ ನಿವೃತ್ತಿಯ ಮಾತೆಲ್ಲಿ? 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ವೃತ್ತಿಯ ಜಾಗವನ್ನ ಪ್ರವೃತ್ತಿ ತುಂಬಿದಾಗ ನಿವೃತ್ತಿಯ ಮಾತೆಲ್ಲಿ?
ವೃತ್ತಿಯ ಜಾಗವನ್ನ ಪ್ರವೃತ್ತಿ ತುಂಬಿದಾಗ ನಿವೃತ್ತಿಯ ಮಾತೆಲ್ಲಿ?

ಜಗತ್ತು ಹಿಂದಿಗಿಂತ ಇಂದು ಹೆಚ್ಚು ಸಂಕೀರ್ಣ. ಕಾರಣವಿಷ್ಟೇ, ಹಿಂದೆ 10 ವರ್ಷಗಳಲ್ಲಿ ಆಗುತಿದ್ದ ಬದಲಾವಣೆ ಇಂದು ವರ್ಷದಲ್ಲಿ ಆಗುತ್ತಿದೆ. ಇವುಗಳ ನೇರ ಪ್ರಭಾವ ಮನುಷ್ಯನ ಮೇಲೆ ಆಗುವುದು ಕೂಡ ಸಹಜ ತಾನೆ? ಹಿಂದೆ 60 ವಯೋಮಾನ ನಿವೃತ್ತಿಯ ವಯಸ್ಸು ಎಂದು ನಿಗದಿಪಡಿಸಲಾಗಿತ್ತು. ಗ್ರೀಸ್ ನಂತಹ ದೇಶದಲ್ಲಿ ನಿವೃತ್ತಿ ವಯಸ್ಸು 55 ಇತ್ತು. ಜಾಗತಿಕ ಹಣಕಾಸು ಬಿಕ್ಕಟ್ಟು ಯೂರೋಪಿನಂತಹ ದೇಶದಲ್ಲಿ ನಿವೃತ್ತಿ ವಯಸ್ಸು 65 ರಿಂದ 67ರ ವರೆಗೆ ಏರಿಕೆ ಕಾಣುವಂತೆ ಮಾಡಿದೆ. ಭಾರತದಂತಹ ದೇಶದಲ್ಲಿ ಸರಕಾರಿ ಕೆಲಸದವರಿಗೆ ಮಾತ್ರ ನಿವೃತ್ತಿ ವಯಸ್ಸು ಲಾಗೂ ಆಗುತ್ತದೆ ಉಳಿದವರ ಪಾಲಿಗೆ ಆ ಸೌಲಭ್ಯವೂ ಇಲ್ಲ. ನಿವೃತ್ತಿ ವಯಸ್ಸುಎಷ್ಟಾದರೂ ಸರಿ! ಆದರೆ ಅಲ್ಲಿಯವರೆಗೆ ನಿಮ್ಮ 'ಕೆಲಸ' ಇರುತ್ತದೆಯೇ? ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿದೆ. 

ಭಾರತವೊಂದೇ ಅಲ್ಲ ವಿಶ್ವದಾದ್ಯಂತ ಅನಿಶ್ಚಿತತೆ ಕೆಲಸ ಮತ್ತು ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ವಸ್ತುಸ್ಥಿತಿ ಹೀಗಿರುವಾಗ ಜಗತ್ತಿನ ಒಂದು ವರ್ಗ 40ಕ್ಕೋ ಅಥವಾ 50ಕ್ಕೋ ಸ್ವಯಂ ನಿವೃತ್ತಿ ಪಡೆಯಲು ಬಯಸುತ್ತಿದೆ. ಇನ್ನೊಂದು ವರ್ಗ ವಿಧಿಯಿಲ್ಲದೇ 40 ಅಥವಾ 50ಕ್ಕೆ ಕೆಲಸಕ್ಕೆ ಬೈ ಹೇಳಬೇಕಿದೆ. ಆಟೋಮೈಸೇಶನ್ ಜೊತೆಗೆ ನಾವು 40 ಅಥವಾ 50 ತಲುಪುವ ವೇಳೆಗೆ ಹೊಸದಾಗಿ ಕೆಲಸಕ್ಕೆ ಸಿದ್ಧ ಗೊಂಡ ಯುವ ಪೀಳಿಗೆಯ ಪಡೆ ಕಾಯುತ್ತಿರುತ್ತದೆ. 

ನಿವೃತ್ತಿ ಎಂದ ತಕ್ಷಣ ಬದುಕಿನಿಂದ ನಿವೃತ್ತಿ ಅಂತಲ್ಲ. ಹೊಟ್ಟೆಗಾಗಿ ದುಡಿಯುವ ವಾಡಿಕೆಯಿಂದ (ರೊಟೀನ್) ನಿವೃತ್ತಿ ಎಂದರ್ಥ. ಉಳಿದಂತೆ ತನಗಿಷ್ಟ ಬಂದ ಕಾಯಕದಲ್ಲಿ ವ್ಯಕ್ತಿ ತೊಡಗಿಕೊಳ್ಳಬಹುದು. ಹೀಗಾಗಿ ನಮ್ಮ ವಲಯದಲ್ಲಿ (ವೈಯಕ್ತಿಕ ಹಣಕಾಸು ಯೋಜಕ-ಪರ್ಸನಲ್ ಫೈನಾನ್ಸ್ ಪ್ಲಾನ್ನರ್ಸ್) 40 ಅಂದರೆ ಹೊಸ 60 ಎನ್ನುವ ಹೊಸ ವ್ಯಾಖ್ಯೆಯಿದೆ. ಅಂದರೆ 60ರ ಬದಲು 40ಕ್ಕೆ ಬದುಕಲು ದುಡಿಯುವುದರಿಂದ ಮುಕ್ತಿ ಪಡೆಯುವುದು. ಹೀಗೆ 40ಕ್ಕೆ ಅಥವಾ 50ಕ್ಕೆ ನಿವೃತ್ತಿ ಪಡೆಯಲು ಏನು ಮಾಡಬೇಕು? ಎಷ್ಟು ಉಳಿಸಬೇಕು? ಹೇಗೆ ಹೂಡಿಕೆ ಮಾಡಬೇಕು? ನೀವೀಗಾಗಲೇ 40 ಅಥವಾ 50ರ ವಯೋಮಾನದವರಾದರೆ ಮತ್ತು ನೀವು ನಿವೃತ್ತಿ ಪಡೆಯಲು ಯೋಚಿಸುತ್ತಿದ್ದರೆ ನೀವು ನಿವೃತ್ತಿ ಪಡೆಯುವಷ್ಟು ಉಳಿಸಿದ್ದೀರಾ? ನೀವು ಉಳಿಸಿರುವುದು ಮುಂದಿನ ನಿಮ್ಮ ಜೀವನಕ್ಕೆ ಸಾಕೆ? ಇನ್ನೂ ಮುಂತಾದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ನೋಡೋಣ ಬನ್ನಿ. 

ಎಲ್ಲದಕ್ಕೂ ಮೊದಲು ಇಲ್ಲಿ ಒಂದು ವಿಷಯ ನೇರವಾಗಿ ಹೇಳಿಬಿಡುತ್ತೇನೆ. ಬದುಕಲು ತಿಂಗಳಿಗೆ ಎಷ್ಟು ಹಣ ಬೇಕು? ಎನ್ನುವುದು ಪ್ರತಿ ವ್ಯಕ್ತಿ ಮತ್ತು ಕುಟುಂಬವನ್ನ ಅವಲಂಬಿಸುತ್ತದೆ. ಬೆಂಗಳೂರಿನಂತಹ ನಗರದಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿಯಲ್ಲಿ ಬದುಕುವ ಕುಟುಂಬಗಳು ಎಷ್ಟೋ ಇವೆ ಹಾಗೆಯೇ ಅದೇ 10 ಸಾವಿರವನ್ನ ಒಪ್ಪೊತ್ತಿನ ಊಟಕ್ಕೆ ವ್ಯಯಿಸುವ ಕುಟುಂಬಗಳೂ ಬೇಕಾದಷ್ಟಿವೆ. ಇದು ವಿಶ್ವದ ಎಲ್ಲಾ ನಗರಗಳಿಗೂ ಅನ್ವಯವಾಗುತ್ತದೆ. ಹಾಗಾಗಿ ನಾನು 4 ಜನ ಇರುವ ಒಂದು ಕುಟುಂಬಕ್ಕೆ ಬದುಕಲು ತಿಂಗಳಿಗೆ 50 ಸಾವಿರ ರೂಪಾಯಿ ಬೇಕು ಎಂದು ಊಹಿಸಿಕೊಂಡಿದ್ದೇನೆ. ಓದುಗರು ಅವರವರ ಖರ್ಚಿಗೆ ತಕ್ಕಂತೆ ಲೆಕ್ಕ ಮಾಡಿಕೊಳ್ಳಬಹುದು. 

24 ರಿಂದ 30 ವಯಸ್ಸಿನ ಮುಕ್ಕಾಲು ಪಾಲು ಜನ ಇನ್ನೂ ತಮ್ಮ ಬ್ಯಾಚುಲರ್ ಜೀವನದಲ್ಲಿರುತ್ತಾರೆ. ಈ ಸಮಯದಲ್ಲಿ ಹೆಚ್ಚು ಮೋಜು ಮಾಡದೆ ಶಿಸ್ತು ಬದ್ಧ ಜೀವನ ನಡೆಸಿದ್ದೇ ಆದರೆ ತಮ್ಮ ಗಳಿಕೆಯ 50ಕ್ಕೂ ಹೆಚ್ಚು ಭಾಗ ಉಳಿಸಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಕಾಂಟ್ರಿಬ್ಯುಶನ್ ಟು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್. ನ್ಯಾಷನಲ್ ಪೆನ್ಷನ್ ಫಂಡ್ ಅಲ್ಲದೆ ಒಂದಷ್ಟು ಅಳೆದು ತೂಗಿ ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ 40 ಅಥವಾ 50ಕ್ಕೋ ನಿವೃತ್ತಿ ಪಡೆಯುವುದು ಕಷ್ಟವೇನಲ್ಲ. 

30 ರ ನಂತರ ಮದುವೆ... ನಂತರ ಮಕ್ಕಳು... ಹೀಗೆ ಖರ್ಚು ಹೆಚ್ಚಾಗುತ್ತದೆ. ಮನೆಯಲ್ಲಿ ಇಬ್ಬರೂ ದುಡಿಯುತ್ತಿದ್ದರೆ ಇಬ್ಬರ ವೇತನದಲ್ಲಿ ಕನಿಷ್ಟ ತಲಾ 20 ರಿಂದ 30 ಭಾಗ ಉಳಿಸುವ ಮತ್ತು ಹೂಡಿಕೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹೀಗೆ ಮಾಡಿದ್ದೇ ಆದಲ್ಲಿ ಇಬ್ಬರಲ್ಲಿ ಒಬ್ಬರು 40ಕ್ಕೂ ಇನ್ನೊಬ್ಬರು 50ಕ್ಕೂ ನಿವೃತ್ತಿ ಹೊಂದಬಹುದು. ಮತ್ತೆ ಇಬ್ಬರಲ್ಲಿ ಯಾರು ಮೊದಲು ನಿವೃತ್ತಿ ಪಡೆಯಬೇಕು ಎನ್ನವುದು ಅವರ ನಡುವೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಬದಲಾದ ಸನ್ನಿವೇಶದಲ್ಲಿ ಗಂಡು ಹೆಣ್ಣು ಎನ್ನುವುದು ದೈಹಿಕ ವ್ಯತ್ಯಾಸವಾಗಿ ಉಳಿದಿದೆಯಷ್ಟೆ. 

ನೀವೀಗಾಗಲೇ ನಲವತ್ತೋ ಅಥವಾ ಐವತ್ತರ ವಯೋಮಾನದವರಾದರೆ ಮತ್ತು ನೀವು ನಿವೃತ್ತಿ ಪಡೆಯಲು ಯೋಚಿಸುತ್ತಿದ್ದರೆ ನೀವು ನಿವೃತ್ತಿ ಪಡೆಯುವಷ್ಟು ಉಳಿಸಿದ್ದೀರಾ? ನೀವು ಉಳಿಸಿರುವುದು ಮುಂದಿನ ನಿಮ್ಮ ಜೀವನಕ್ಕೆ ಸಾಕೆ? ಎನ್ನುವುದನ್ನ ನಿಖರವಾಗಿ ಹೇಳಲು ಈ ಕೆಳಗಿನ ಸೂತ್ರ ಬಳಸಿ. ಭಾಗಲಬ್ಧ 1೦೦೦ ಕ್ಕಿಂತ ಹೆಚ್ಚಾಗಿದ್ದರೆ ನೀವು ನಿವೃತ್ತಿ ಹೊಂದಲು ಅರ್ಹರು! ಅಂದರೆ ನಿಮ್ಮಿಷ್ಟದ ಕೆಲಸ ಮಾಡಲು ಸೂಕ್ತ ಸಮಯ ಎಂದರ್ಥ. ಬನ್ನಿ ಸೂತ್ರ ಏನೆಂಬುದನ್ನು ನೋಡೋಣ. 

ನಿಮ್ಮ ಒಟ್ಟು ಹಣಕಾಸು ಮೌಲ್ಯವನ್ನ ನಿಮ್ಮ ವಯಸ್ಸಿನಿಂದ ಗುಣಿಸಿ ಬರುವ ಮೊತ್ತವನ್ನ ನಿಮ್ಮ ವಾರ್ಷಿಕ ಖರ್ಚಿನಿಂದ ಭಾಗಿಸಿ ಭಾಗಲಬ್ಧ 1೦೦೦ ಕ್ಕಿಂತ ಹೆಚ್ಚಾಗಿದ್ದರೆ ನೀವು ಸರಿಯಾದ ಹಾದಿಯಲ್ಲಿ ನಡೆದಿದ್ದೀರಿ ಎಂದರ್ಥ. ಗಂಡ ಹೆಂಡತಿ ಇಬ್ಬರೂ ನಿವೃತ್ತಿಯಲ್ಲೂ ಪಾಲುದಾರರು ಎಂದಾದರೆ ಇಬ್ಬರ ವಯಸ್ಸಿನ ಆವರೇಜ್ ತೆಗೆದುಕೊಳ್ಳಬೇಕು. ಇದನ್ನ ಒಂದು ಉದಾಹರಣೆ ಮೂಲಕ ನೋಡೋಣ. 

ರಾಮನ ವಯಸ್ಸು 42. ಆತನ ಹೆಂಡತಿ ಸೀತೆಯ ವಯಸ್ಸು 37. ಇವರಿಬ್ಬರ ಒಟ್ಟು ಆಸ್ತಿ ಮೊತ್ತ 5 ಕೋಟಿ. ಮತ್ತು ತಿಂಗಳಿಗೆ 50 ಸಾವಿರದಂತೆ ಅವರಿಗೆ ವಾರ್ಷಿಕ 6 ಲಕ್ಷ ಖರ್ಚಿಗೆ ಬೇಕು. ಇವರಿಬ್ಬರು ನಿವೃತ್ತಿ ಹೊಂದಲು ಅರ್ಹರೇ ನೋಡೋಣ ಬನ್ನಿ. 

ವಯೋಮಾನ 42+37= 79 ಇದನ್ನ ಎರಡರಿಂದ ಭಾಗಿಸಿ. ಭಾಗಲಬ್ಧ 39.5. ಒಟ್ಟು ಆಸ್ತಿ ಮೊತ್ತ 5 ಕೋಟಿ ಇದನ್ನ 39.5 ರಿಂದ ಗುಣಿಸಿ ಬಂದ ಮೊತ್ತವನ್ನ ವಾರ್ಷಿಕ ಖರ್ಚು 6 ಲಕ್ಷದಿಂದ ಭಾಗಿಸಿ ಭಾಗಲಬ್ಧ 3,291 ಅಂದರೆ 1೦೦೦ ಕ್ಕಿಂತ ಬಹುಪಾಲು ಹೆಚ್ಚು. ಹೀಗಾಗಿ ರಾಮ ಮತ್ತು ಸೀತೆ ನಿವೃತ್ತಿ ಹೊಂದಬಹುದು. ನೆನಪಿಡಿ ಇಂದು 50 ಸಾವಿರ, ಇನ್ನು  10 ವರ್ಷಗಳ ನಂತರ ಲಕ್ಷ ಬೇಕಾಗಬಹುದು. ಭಾಗಲಬ್ಧ 1೦೦೦ ಎನ್ನುವುದು ಕೇವಲ ಒಂದು ಸೂಚ್ಯಂಕವಷ್ಟೇ. ಅಲ್ಲದೆ ನೀವು ನಿಮ್ಮ ಮಕ್ಕಳಿಗೆ ಏನಾದರು ಆಸ್ತಿ ಬಿಟ್ಟು ಹೋಗಬೇಕೆ? ಅಥವಾ ಬೇಡವೇ? ಎನ್ನುವುದನ್ನ ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕು. ನನ್ನ ಪ್ರಕಾರ ಸಾವಿರ ಅತ್ಯಂತ ನಿರ್ಭಿಡೆಯಿಂದ ಜೀವಿಸುವ ಪಾಶ್ಚಾತ್ಯ ದೇಶದ ಜನರಿಗೆ ಹೊಂದುತ್ತದೆ. ಭಾರತೀಯ ಸ್ಥಿತಿಗತಿಯಲ್ಲಿ ಭಾಗಲಬ್ಧ 3೦೦೦ ಕ್ಕಿಂತ ಹೆಚ್ಚಿದ್ದರೆ ನೀವು ನಿವೃತ್ತಿಯಾಗಿ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಲು ಅಡ್ಡಿಯಿಲ್ಲ. 

ಉಳಿದವರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಶಿಸ್ತಿನಿಂದ ಉಳಿಕೆ-ಹೂಡಿಕೆ ಮಾಡುತ್ತಾ ಹೋಗಬೇಕು. ಹೂಡಿಕೆ ಕೂಡ, ಷೇರು ಮಾರುಕಟ್ಟೆಯಲ್ಲಿ ಹೂಡುವ ಮುನ್ನ ಸರಕಾರದಿಂದ ಮಾನ್ಯತೆ ಪಡೆದ ಸುರಕ್ಷಿತ ಜೊತೆಗೆ ತೆರಿಗೆಯ ಮೇಲೆಯೂ ವಿನಾಯ್ತಿ ನೀಡುವ ಹಲವು ಯೋಜನೆಗಳಿವೆ. ಅವುಗಳಲ್ಲಿ ಹೂಡಿಕೆ ಮಾಡಿ ನಂತರ ಹೆಚ್ಚುವರಿ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗ. 

ಕೊನೆ ಮಾತು: ಬ್ಯಾಂಕ್ ಬಡ್ಡಿ ದರ ಹೆಚ್ಚು ಹೆಚ್ಚು ಕುಸಿತ ಕಾಣುತ್ತಿರುವ ಈ ಸಮಯದಲ್ಲಿ ಎಲ್ಲಿ ಹೂಡಿಕೆ ಮಾಡುವುದು ಎನ್ನುವುದು ಹೆಚ್ಚು ಕ್ಲಿಷ್ಟವಾಗುತ್ತಾ ಹೋಗುತ್ತಿದೆ. ಹೂಡಿಕೆ ಸರಿಯಾಗಿಲ್ಲದಿದ್ದರೆ ಇಳಿ ವಯಸ್ಸಿನಲ್ಲಿ ಇನ್ನಷ್ಟು ತೊಂದರೆ ಎದುರಿಸಬೇಕಾಗುತ್ತದೆ.  ಹಿಂದೆ ಮಕ್ಕಳು ಹೆತ್ತವರನ್ನ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿತ್ತು. ನಮ್ಮ ಪೂರ್ವಿಕರು ಕೂಡ ನಿವೃತ್ತಿಗಾಗಿ ಎಂದು ವಿಶೇಷವಾಗಿ ಯಾವುದೇ ಯೋಜನೆಯನ್ನ ಮಾಡಿಕೊಳ್ಳುತ್ತಿರಲಿಲ್ಲ. ಬದಲಾದ ಸಮಯಕ್ಕೆ ತಕ್ಕಂತೆ ಹೊಂದಿಕೂಂಡು ನಡೆಯುವ ಹೊಸ ಜವಾಬ್ದಾರಿ ನಮ್ಮೆಲ್ಲರ ಬೆನ್ನೇರಿದೆ. ವೃತ್ತಿ ಪದವನ್ನ ಪ್ರವೃತ್ತಿ ಬದಲಾಯಿಸುತ್ತದೆ. ಪ್ರವೃತ್ತಿಗೆ ನಿವೃತ್ತಿಯ ಮಾತೆಲ್ಲಿ? ಅಲ್ಲವೇ? ವಿಷಯ ಯಾವುದೇ ಇರಲಿ ಇಳಿ ವಯಸ್ಸಿಗೆ ಒಂದಷ್ಟು ಭದ್ರತೆ ಮಾಡಿಕೊಳ್ಳುವುದು ಮಾತ್ರ ಅತ್ಯವಶ್ಯಕ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com