ಭಾರತದಲ್ಲಿ ಈರುಳ್ಳಿ, ಚೀನಾದಲ್ಲಿ ಹಂದಿ ಮಾಂಸ, ವೆನಿಜುಲಾದಲ್ಲಿ ಎಲ್ಲವೂ ದುಬಾರಿ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಭಾರತದಲ್ಲಿ ಈರುಳ್ಳಿ, ಚೀನಾದಲ್ಲಿ ಹಂದಿ ಮಾಂಸ, ವೆನಿಜುಲಾದಲ್ಲಿ ಎಲ್ಲವೂ ದುಬಾರಿ!
ಭಾರತದಲ್ಲಿ ಈರುಳ್ಳಿ, ಚೀನಾದಲ್ಲಿ ಹಂದಿ ಮಾಂಸ, ವೆನಿಜುಲಾದಲ್ಲಿ ಎಲ್ಲವೂ ದುಬಾರಿ!

ಬೆಲೆ ಏರಿಕೆ ಎನ್ನುವುದು ಪ್ರತಿಯೊಬ್ಬ ನಾಗರಿಕನೂ ಒಂದಲ್ಲ ಒಂದು ಬಾರಿ ಉಚ್ಚರಿಸಿರುವ ಪದವಾಗಿದೆ. ಬೆಲೆ ಏರಿಕೆ ಎಂದ ತಕ್ಷಣ ಅದನ್ನ ಯಾವುದಾದರೂ ಒಂದು ಪದಾರ್ಥ ಅಥವಾ ಸೇವೆಗೆ ಸೀಮಿತಗೊಳಿಸುವ ಅವಶ್ಯಕತೆ ಇಲ್ಲ. ಆದರೆ ಇಂದಿನ ಬರಹದಲ್ಲಿ ಪದಾರ್ಥಗಳ ಮೇಲಿನ ಬೆಲೆ ಏರಿಕೆ ಕುರಿತು ಹೆಚ್ಚಿನ ಗಮನ ನೀಡಲಾಗುತ್ತದೆ. ಗಮನಿಸಿ ಹೆಚ್ಚು ಕಡಿಮೆ ಬೇರೆ ವಸ್ತು ಅಥವಾ ಸೇವೆಯ ಮೇಲಿನ ಬೆಲೆ ಏರಿಕೆಗೆ ಕೂಡ ಇಲ್ಲಿ ಹೇಳಲಾಗುವ ಹಲವಾರು ಕಾರಣಗಳು ಲಾಗೂ ಆಗುತ್ತವೆ. 

ಭಾರತದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿರುವುದು ತಿಳಿದಿರುವ ವಿಷಯ. ಈರುಳ್ಳಿಯ ಕುರಿತು ಬರುತ್ತಿರುವ ಹೊಸ ಜೋಕುಗಳಿಗೆ ಕೂಡ ಕೊರತೆಯಿಲ್ಲ. ಕೆ.ಜಿಗೆ ಹತ್ತು ರೂಪಾಯಿ ಅಥವಾ ಇಪ್ಪತ್ತು ರುಪಾಯಿಗೆ ಮನೆ ಮುಂದೆ ಸಿಗುತ್ತಿದ್ದ ಈರುಳ್ಳಿ 200 ರುಪಾಯಿ ಕೆಜಿಗೆ ಎನ್ನುವ ಮಟ್ಟಕ್ಕೆ ಹೋಗಿ ಮುಟ್ಟಿದೆ. ಇದು ನಮ್ಮ ದೇಶದ ಕಥೆ ಮಾತ್ರವಲ್ಲ! ನಾವು ಈರುಳ್ಳಿ ಬೆಲೆಯ ಕುರಿತು ಚಿಂತಿಸುತ್ತಿದ್ದರೆ ಇದೇ ಸಮಯದಲ್ಲಿ ಚೀನಾ ದೇಶದಲ್ಲಿ ಹಂದಿ ಮಾಂಸದ ಬೆಲೆ ಕುರಿತು ಅಲ್ಲಿನ ಜನತೆ ಚಿಂತಿತರಾಗಿದ್ದಾರೆ. ಹಂದಿ ಮಾಂಸದ ಕೊರತೆ ಅದರ ಬೆಲೆಯನ್ನ 50 ಪ್ರತಿಶತಕ್ಕೂ ಹೆಚ್ಚು ಮಾಡಿದೆ. ನೆನಪಿಡಿ ಭಾರತ ಮತ್ತು ಚೀನಾ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು. ಇವರೆಡು ದೇಶಗಳ ನಡುವೆ ಜಗತ್ತಿನ 40 ಪ್ರತಿಶತಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಆಗುವ ತಲ್ಲಣಗಳು ಸದ್ದು ಮಾಡುತ್ತವೆ. 

ಯೂರೋಪ್ ದೇಶಗಳಲ್ಲಿ ಬೆಲೆ ಏರಿಕೆ ಏಷ್ಯಾ ದೇಶಗಳಲ್ಲಿ ಆದಂತೆ ಆಗುವುದಿಲ್ಲ. ಅಲ್ಲೇನಿದ್ದರೂ ಬೆಲೆ ಏರಿಕೆ ಅತ್ಯಂತ ಕಡಿಮೆ. ಅಂದರೆ ವರ್ಷಾನುಗಟ್ಟಲೆ ಹಾಲಿನ ಬೆಲೆ, ತರಕಾರಿ ಬೆಲೆ, ಮಾಂಸದ ಬೆಲೆ... ಹೀಗೆ ಜನ ಸಾಮಾನ್ಯನ ನಿತ್ಯ ಬಳಕೆಯ ಪದಾರ್ಥಗಳ ಬೆಲೆ ಏರಿಕೆ ಬಹಳ ಕಡಿಮೆ. ಆದರೆ ಈಗೇನಾಗಿದೆ, ಇಲ್ಲಿಯೂ ಇವುಗಳ ಬೆಲೆಯಲ್ಲಿ ಬದಲಾವಣೆ ಆಗುತ್ತಿದೆ. 

ಯೂರೋಪಿನಲ್ಲಿ 2018ಕ್ಕೆ ಹೋಲಿಸಿದರೆ 2019 ರಲ್ಲಿ 2 ಪ್ರತಿಶತ ಏರಿಕೆ ಕಂಡಿದೆ. ಭಾರತೀಯರಿಗೆ ಈ ಬೆಲೆ ಏರಿಕೆ, ಏರಿಕೆಯೇ ಅಲ್ಲ ಅನ್ನಿಸಬಹುದು. ಆದರೆ ಮೊದಲೇ ಹೇಳಿದಂತೆ ಯೂರೋಪಿನ ರಾಷ್ಟ್ರಗಳಲ್ಲಿ ವರ್ಷಾನುಗಟ್ಟಲೆ ಬೆಲೆ ಬದಲಾವಣೆ ಆಗುತ್ತಿರಲಿಲ್ಲ ಎನ್ನುವುದನ್ನ ಗಮನಿಸಿದಾಗ ಮತ್ತು ಬೆಲೆ ಏರಿಕೆಯನ್ನ ಪರ್ಸೆಂಟೇಜ್ ಲೆಕ್ಕದಲ್ಲಿ ನೋಡಿದಾಗ ಇಲ್ಲಿಯೂ ಬಿಸಿ ನಿಧಾನವಾಗಿ ತಟ್ಟುತ್ತಿದೆ ಎನ್ನುವುದರ ಅರಿವಾಗುತ್ತದೆ. 

ಅಮೆರಿಕಾ ದೇಶದಲ್ಲಿ ಕೂಡ ಇದು 2.6 ಪ್ರತಿಶತ ಏರಿಕೆ ಕಾಣುತ್ತಿದೆ. ಇನ್ನು ವೆನಿಜುಯೆಲಾ ಎನ್ನುವ ದೇಶದ ಕಥೆ ಬೇರೆಯದು. ಅದು ನಾಗರಿಕ ಸಮಾಜ ತಲೆ ಎತ್ತಿ ನಿಲ್ಲಲಾಗದ ಸನ್ನಿವೇಶವನ್ನ ಸೃಷ್ಟಿಸಿದೆ. ಇಲ್ಲಿನ ಸಾಮಾನ್ಯ ನಾಗರಿಕನ ಮಿನಿಮಮ್ ವೇತನವನ್ನ 300 ಪ್ರತಿಶತ ಏರಿಸಲಾಗಿದೆ. ಅಂದರೆ ಕನಿಷ್ಠ18 ಸಾವಿರ ಬೊಲಿವರ್ಸ್ ವೇತನವಿದೆ. ಇದನ್ನ ಅಮೆರಿಕನ್ ಡಾಲರಿಗೆ ಪರಿವರ್ತಿಸಿದರೆ ಅದು 7 ಡಾಲರಿಗಿಂತ ಕಡಿಮೆಯಾಗುತ್ತದೆ. ಗಮನಿಸಿ ಇದು ತಿಂಗಳ ವೇತನ. ಹೊಟ್ಟೆ ತುಂಬಾ ಒಪ್ಪತ್ತು ಊಟ ಮಾಡಲು 5 ಡಾಲರ್ ವ್ಯಯಿಸಬೇಕು! ಅಂದರೆ ತಿಂಗಳ ಸಂಬಳ ಒಂದು ದಿನಕ್ಕೂ ಸಾಲದು!! ಇಲ್ಲಿ ಬೆಲೆ ಏರಿಕೆ 20 ಲಕ್ಷ ಪ್ರತಿಶತ!!! ಭಾರತ, ಯೂರೋಪ್, ಚೀನಾ ಮತ್ತು ಜಗತ್ತಿನ ಬೇರೆ ದೇಶಗಳಲ್ಲಿ ಇದು ಎರಡು ಅಂಕಿ ದಾಟುವುದಿಲ್ಲ. ಅಲ್ಲಿನ ಜನರ ಬದುಕು ಹೇಗಿರಬಹುದು ಎನ್ನುವುದನ್ನ ಊಹಿಸಿಕೊಳ್ಳಲೂ ಅಸಾಧ್ಯ. 

ಬೆಲೆ ಏರಿಕೆ ಏಕಾಗುತ್ತದೆ? 

ಇದಕ್ಕೆ ಹಲವಾರು ಕಾರಣಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನ ಹೀಗೆ ಪಟ್ಟಿ ಮಾಡಬಹುದು. 

1. ಬೇಡಿಕೆ ಮತ್ತು ಸರಬರಾಜು ನಡುವಿನ ಅಂತರ ಇದಕ್ಕೆ ಬಹುಮುಖ್ಯ ಕಾರಣ. ಉದಾಹರಣೆ ನೋಡೋಣ, ಮಾರುಕಟ್ಟೆಯಲ್ಲಿ100 ಕೆ.ಜಿ ಈರುಳ್ಳಿಗೆ ಬೇಡಿಕೆ ಇದೆ ಅಂದುಕೊಳ್ಳಿ. ಆದರೆ ಕಾರಣಾಂತರಗಳಿಂದ ಮಾರುಕಟ್ಟೆಗೆ ಕೇವಲ 50 ಕೆ.ಜಿ ಅಥವಾ 60 ಕೆ.ಜಿ ಈರುಳ್ಳಿ ಬಂದರೆ ಆಗೇನಾಗುತ್ತೆ? ಸಹಜವಾಗೇ ಈರುಳ್ಳಿಯ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದಂತೆ ಪದಾರ್ಥದ ಬೆಲೆಯೂ ಏರುತ್ತದೆ. ಪದಾರ್ಥಗಳ ಬೆಲೆ ಏರಲು ಇದೊಂದು ಅತ್ಯಂತ ಸಾಮಾನ್ಯ ಮತ್ತು ಸಹಜ ಕಾರಣವಾಗಿದೆ. ಆದರೆ ಇಂದು ಈ ಕಾರಣಕ್ಕಿಂತ ಬೇರೆ ಕಾರಣಗಳಿಗೆ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿರುವುದು ವಿಪರ್ಯಾಸ. 

2. ಸದ್ದು ಗದ್ದಲವಿಲ್ಲದೆ ಏರುತ್ತಿರುವ ತೈಲದ ಬೆಲೆ ಕೂಡ ಪದಾರ್ಥಗಳ ಬೆಲೆ ಏರಿಕೆಗೆ ದೇಣಿಗೆ ನೀಡುತ್ತಿದೆ. 

3. ವಾತಾವರಣ ಬದಲಾವಣೆ ಜಗತ್ತಿನ ಅತಿ ದೊಡ್ಡ ಸಮಸ್ಯೆಯಾಗಿದೆ. ಜಗತ್ತಿನ ಶ್ರೀಮಂತ ಮತ್ತು ಬಲಶಾಲಿ ರಾಷ್ಟ್ರಗಳು ಕೇವಲ ಸಭೆ ನಡೆಸಿ ಕೈತೊಳೆದುಕೊಳ್ಳುತ್ತಿವೆ. ನಿಜವಾಗಿ ವಾತಾವರಣ ಬದಲಾವಣೆ ತಡೆಯಲು ಏನು ಮಾಡಬೇಕೋ ಅದನ್ನ ಮಾತ್ರ ಮಾಡುತ್ತಿಲ್ಲ. ಹೀಗಾಗಿ ಆಯಾ ಋತುಗಳಲ್ಲಿ ಯಾವ ತರಕಾರಿ ಹಣ್ಣುಗಳು ಹೇರಳವಾಗಿ ಸಿಗುತ್ತಿದ್ದವೋ ಅವುಗಳಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಸಹಜವಾಗೇ ಬೆಲೆ ಏರಿಕೆ ಎನ್ನುವ ಪೆಡಂಭೂತ ಬಲಶಾಲಿಯಾಗಿದೆ. 

4. ಜನರಲ್ಲಿನ ಆಹಾರ ಪದ್ಧತಿ ಬದಲಾಗಿದೆ. ಅಂದರೆ ಕಳೆದ ಎರಡು ಅಥವಾ ಮೂರು ದಶಕಗಳಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಒಂದು ಲೆಕ್ಕಾಚಾರದ ಪ್ರಕಾರ 7 ಕೆ.ಜಿ ಧಾನ್ಯಗಳ ಬಳಕೆಯಿಂದ 1 ಕೆ.ಜಿ ಮಾಂಸ ತಯಾರಾಗುತ್ತದೆ. ಚೀನಾ, ಭಾರತ ಮುಂತಾದ ದೇಶಗಳಲ್ಲಿ ಮಾಂಸಾಹಾರ ಸೇವಿಸುವರ ಸಂಖ್ಯೆ ಹೆಚ್ಚಾದಂತೆ, ಪಶುಗಳಿಗೆ ಧಾನ್ಯ ತಿನ್ನಿಸಿ ನಂತರ ಅವನ್ನ ತಿನ್ನುವ ಅಭ್ಯಾಸ ಹೆಚ್ಚಾಗುತ್ತಿದೆ. ಇದರಿಂದ ಧವಸ ಧಾನ್ಯಗಳ ಬೆಲೆ ಏರಿಕೆಯಾಗುತ್ತಿದೆ. 

5. ಎಲ್ಲಕ್ಕೂ ಮುಖ್ಯವಾಗಿ ಷೇರು ಮಾರ್ಕೆಟ್ ಇದ್ದಂತೆ ಕಮಾಡಿಟಿ ಮಾರ್ಕೆಟ್ ಕೂಡ ಇದೆ. ಅಂದರೆ ಸ್ಟಾಕ್ ಮಾರ್ಕೆಟ್ ನಲ್ಲಿ ಹೇಗೆ ವಿವಿಧ ಸಂಸ್ಥೆಗಳ ಷೇರುಗಳನ್ನ ಬೆಲೆಕಟ್ಟಿ ಕೊಡುಕೊಳ್ಳುವಿಕೆ ನಡೆಯುತ್ತದೆ ಹಾಗೆಯೇ ಕಮಾಡಿಟಿ ಮಾರ್ಕೆಟ್ ನಲ್ಲಿ ಪದಾರ್ಥಗಳ ಮೇಲೆ ಕೂಡ ಬೆಲೆಯನ್ನ ಕಟ್ಟಿ ಅವುಗಳನ್ನ ಕೊಳ್ಳುವುದು ಮತ್ತು ಮಾರುವುದು ನಡೆಯುತ್ತದೆ. ಗಮನಿಸಿ ಇಲ್ಲಿ ಯಾರೊಬ್ಬರೂ ಕೈಯಿಂದ ಯಾವುದೇ ಪದಾರ್ಥವನ್ನ ಮುಟ್ಟುವುದೇ ಇಲ್ಲ. ಎಲ್ಲಾ ವಹಿವಾಟು ಕಂಪ್ಯೂಟರ್ ಪರದೆಯ ಮೇಲೆ ಮುಗಿದು ಹೋಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಇದ್ದಂತೆ ಇಲ್ಲಿಯೂ ಕೂಡ 'ಫ್ಯೂಚರ್ಸ್' ಟ್ರೇಡಿಂಗ್ ಕೂಡ ಇದೆ. ಅಂದರೆ ಯಾವುದೇ ಪದಾರ್ಥದ ಬೆಲೆ ಮುಂದಿನ ಇಷ್ಟು ದಿನದಲ್ಲಿ ಇಷ್ಟು ಏರಲಿದೆ ಅಥವಾ ಇಳಿಯಲಿದೆ ಎನ್ನುವ ಆಧಾರದ ಮೇಲೆ ನೀವು ಅದನ್ನ ಕೊಳ್ಳುವ ಮತ್ತು ಮಾರುವ ಅವಕಾಶವಿದೆ. ಇದು ಒಂದು ರೀತಿಯ ಜೂಜು. ಇಲ್ಲಿ ಬೇರೊಬ್ಬರ ಕೈವಾಡವಿಲ್ಲದೆ ಸಹಜವಾಗಿ ಆದರೆ ಅದು ಬೇರೆಯ ಕಥೆ. ಆದರೆ ಇಲ್ಲಿನ ಮಧ್ಯವರ್ತಿಗಳು, ದಲ್ಲಾಳಿಗಳು, ರಾಜಕಾರಣಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಇಳಿಯುತ್ತಾರೆ. ಹೀಗಾಗಿ ಅವರ ಅಣತಿಯ ಮೇರೆಗೆ ಮಾರುಕಟ್ಟೆಯಲ್ಲಿ ಪದಾರ್ಥ ಹೇರಳವಾಗಿ ಇದ್ದೂ ಕೂಡ ಬೆಲೆ ಏರಿಕೆ ಆಗುತ್ತದೆ. ವಸ್ತುವಿನ ಬೆಲೆ ಏರಿಕೆ ಮತ್ತು ಇಳಿಕೆ ಬೇರೆಲ್ಲಾ ಕಾರಣಕ್ಕಿಂತ ಈ ಕಾರಣದಿಂದ ಹೆಚ್ಚಾಗಿ ಆಗುತ್ತಿದೆ. 

ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ ಎನ್ನುವಂತೆ ಇಂತಹ ಮಾರುಕಟ್ಟೆಯಲ್ಲಿ 'ಟ್ರೆಂಡ್' ಏನಿದೆ ಅಂತ ಅಭ್ಯಾಸ ಮಾಡಿ ಮತ್ತು ಅವುಗಳನ್ನ ಪಾಲಿಸಿ ಹಣ ಮಾಡಿಕೊಳ್ಳುತ್ತಿರುವವರ ಸಂಸ್ಥೆ ಮತ್ತು ವ್ಯಕ್ತಿಗಳ ಸಂಖ್ಯೆ ಅಸಂಖ್ಯ. ಇವೆಲ್ಲವುಗಳ ಮಧ್ಯೆ ರೈತಾಪಿ ಜನರಿಗೆ ಮಾತ್ರ ಎಂದಿಗೂ ಲಾಭ ಆಗುವುದೇ ಇಲ್ಲ. ಅವರಿಗೇನಿದ್ದರೂ ನಷ್ಟದ ಲೆಕ್ಕಾಚಾರ ಮಾತ್ರ. 

ಇಷ್ಟು ದೊಡ್ಡ ಮಟ್ಟದ ಬೆಲೆ ಏರಿಕೆ ಮಾಫಿಯಾಗಳ ಮುಂದೆ ನಾವೇನು ಮಾಡಬಹುದು? 

ಜನ ಸಾಮಾನ್ಯ ಯಾವಾಗಲೂ ಇದೆ ಪ್ರಶ್ನೆಯನ್ನ ಎಲ್ಲಾ ಕಾಲಕ್ಕೂ, ಎಲ್ಲಾ ವಿಷಯಕ್ಕೂ ಕೇಳುತ್ತಾ ಬಂದಿದ್ದಾನೆ. ಮನೆ , ನಿವೇಶನದಿಂದ ಈರುಳ್ಳಿ ಬೆಲೆ ಏರಿಕೆ ವರೆಗೆ ಎಲ್ಲಕ್ಕೂ ಒಂದೇ ಮದ್ದು! ಯಾವುದರ ಬೆಲೆ ಅಸಹಜವಾಗಿ ಏರಿದೆ ಅನ್ನಿಸುತ್ತದೆ ಅದನ್ನ ಕೊಳ್ಳುವುದು ಬಿಡುವುದು. ಗಮನಿಸಿ ಇಡಿ ಜಗತ್ತು ನಿಂತಿರುವುದು ಜನ ಸಾಮಾನ್ಯ ಎನ್ನುವ ಕೈಯಲ್ಲಿ. ಎಣಿಕೆ ಕಾಸು ಹಿಡಿದು ನಿಂತಿರುವ ಬಡವನ ಆಧಾರದ ಮೇಲೆ. ಇವರ ಸಂಖ್ಯೆ ಅತ್ಯಧಿಕ. ಇವರ ಒಗ್ಗೂಡುವಿಕೆ ಬಹಳ ಕಷ್ಟ, ಇವರನ್ನ ಒಂದು ಚಿಂತನೆಗೆ ಹಚ್ಚುವುದು ಇನ್ನೂ ಕಷ್ಟ. ಹೀಗಾಗಿ ಅವೈಜ್ಞಾನಿಕವಾಗಿ ವಸ್ತು ಮತ್ತು ಸರಕುಗಳ ಬೆಲೆ ಏರುತ್ತಲೇ ಇರುತ್ತದೆ. ನಾನೊಬ್ಬ ಈರುಳ್ಳಿ ಕೊಳ್ಳುವುದು ಬಿಟ್ಟರೇನು ಬದಲಾಗುತ್ತೆ? ಎಂದು ಪ್ರಶ್ನಿಸುವ ಬದಲು ಕೊಳ್ಳುವುದನ್ನ ನಿಲ್ಲಿಸಿ ನೋಡಿ. ಬದಲಾವಣೆ ನಿಧಾವಾದರೂ ಖಂಡಿತ ಬದಲಾವಣೆ ಸಾಧ್ಯ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com