ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

ಅಮೇರಿಕಾ ದೇಶದಲ್ಲಿ ಭಾರತದಲ್ಲಿ ಮೊಬೈಲ್ ಕೊಂಡಷ್ಟೇ ಸರಾಗವಾಗಿ ಗನ್ ಖರೀದಿಸಬಹದು ಎನ್ನುವುದು ನಗ್ನಸತ್ಯ.

Published: 17th January 2019 12:00 PM  |   Last Updated: 17th January 2019 11:46 AM   |  A+A-


Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

Posted By : SBV SBV
Source : Online Desk
ಯುದ್ಧ ಎನ್ನುವ ಶಬ್ದದಲ್ಲಿ ಒಂಥರಾ ಭಯವಿದೆ. ಯುದ್ಧ ಬದುಕಿಗೆ ಬೇಕೇ? ನೋಡಿ ನಮ್ಮಲ್ಲಿ ಕೆಲವು ಹಣಕಾಸು ಪಂಡಿತರು ಸಮಾಜದ ಮರು ನಿರ್ಮಾಣಕ್ಕೆ ಅಥವಾ ಬೆಳೆಯದೆ ನಿಂತಲ್ಲೇ ನಿಂತ ಸಮಾಜದ ಚಲನೆಗೆ ಯುದ್ಧ ಬೇಕು ಅನ್ನುತ್ತಾರೆ. ಯುದ್ಧದಿಂದ ಸಮಾಜದ ಅತಿ ಸಾಮಾನ್ಯ ವರ್ಗ ಬಹಳ ಪೆಟ್ಟು ತಿನ್ನುತ್ತದೆ. ತನ್ನದಲ್ಲದ ತಪ್ಪಿಗೆ ಭಾರಿ ಬೆಲೆಯನ್ನ ತೆರುತ್ತದೆ. ಇನ್ನು ಎರಡು ಕಡೆಯಲ್ಲೂ ಸಾಯುವುದು ಮಾತ್ರ ಸಾಮಾನ್ಯ ಸೈನಿಕ. ಯುದ್ಧದ ನಂತರದ ನೋವು, ಸಾಮಾಜಿಕ ತಲ್ಲಣ... ಇವುಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ಕಾದಂಬರಿಯಾದೀತು. ಯುದ್ಧ ಬೇಕೇ ಎಂದರೆ ಜಗತ್ತಿನ ಮುಕ್ಕಾಲು ಪಾಲು ಜನ ಒಕ್ಕೋರಲಲ್ಲಿ ಬೇಡ ಎನ್ನುತ್ತಾರೆ. 

ಆದರೆ ಅವರ ಧ್ವನಿಯನ್ನ ಅವರ ಭಾವನೆಯನ್ನ ಕೇಳುವರಾರು? ಮೆಜಾರಿಟಿ ಅನ್ನುವುದು ಸುಮ್ಮನೆ ಬಳಸುವ ಶಬ್ದ. ಜಗತ್ತಿನ ಬಹುತೇಕ ದೇಶಗಳಲ್ಲಿ ಮೆಜಾರಿಟಿ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿದೆ. ಕೊನೆಗೂ ಜಗತ್ತನ್ನ ನಿಯಂತ್ರಿಸುವರು ಜಗತ್ತಿನ ಸಂಪತ್ತಿನ ಮೇಲೆ ಅಧಿಪತ್ಯ ಹೊಂದಿರುವ ಕೆಲವೇ ಕೆಲವು ಜನ ಮತ್ತು ಸಂಸ್ಥೆಗಳು ಮಾತ್ರ. ಜಗತ್ತಿನ ಯಾವ ಭಾಗದಲ್ಲಿ ದಂಗೆಯಾಗಬೇಕು? ಎಲ್ಲಿ ಆಂತರಿಕ ಕಲಹ ಸೃಷ್ಟಿಮಾಡಬೇಕು? ಯಾವ ಸರಕಾರ ಬೀಳಬೇಕು? ಇವೆಲ್ಲಾ ರಿಯಾಲಿಟಿ ಶೋಗಳಲ್ಲಿ ಆಗುವಂತೆ ಮೊದಲೇ ನಿರ್ಧರಿಸುವ ಇವರಿಗೆ ಬೇಕಾಗಿರುವುದು ತಮ್ಮ ಲಾಭವಷ್ಟೇ. ಅಂದರೆ ಗಮನಿಸಿ ಇದೊಂದು ವಿಷ ವರ್ತುಲ. ಇವರ ಸ್ವಾಮ್ಯದಲ್ಲಿರುವ ಕಾರ್ಖಾನೆಗಳು ವಸ್ತುವನ್ನು ಉತ್ಪಾದಿಸುತ್ತವೆ, ಜನ ಸಾಮಾನ್ಯರು ಅದನ್ನ ಖರೀದಿಸುತ್ತಾ ಇರಬೇಕು. ಅಷ್ಟೇ ಅಲ್ಲ ವರ್ಷದಿಂದ ವರ್ಷಕ್ಕೆ ಆ ಕೊಳ್ಳುವಿಕೆಯಲ್ಲಿ ಒಂದಷ್ಟು ಪ್ರತಿಶತ ಏರಿಕೆ ಕಾಣುತ್ತಲೇ ಇರಬೇಕು. ಅವರ ವಸ್ತುಗಳಿಗೆ ಬೇಡಿಕೆ ಕುಸಿದರೆ ಅದನ್ನ ರಿಸೆಶನ್ ಎನ್ನುತ್ತಾರೆ. ಸಮಾಜವನ್ನ ಮತ್ತೆ ಕೊಳ್ಳುವಿಕೆಯ ದಾರಿಗೆ ತರಲು ಇವರು ಏನು ಬೇಕಾದರೂ ಮಾಡುತ್ತಾರೆ. ಹೀಗೆ ಏನು ಬೇಕಾದರೂ ಮಾಡುವ ಪಟ್ಟಿಯ ಕೊನೆಯ ಅಸ್ತ್ರ 'ಯುದ್ಧ'. ಒಟ್ಟಿನಲ್ಲಿ ಸಮಾಜದಲ್ಲಿ ಸದಾ ಭಯ ಇರಲೇಬೇಕು ಇದು ಅವರ ಉದ್ದೇಶ. ಒಂದು ದೇಶ ಇನ್ನೊಂದು ದೇಶದ ಮೇಲೆ ಸಂಶಯ ಮತ್ತು ದ್ವೇಷ ಹೊಂದಿರಲೇಬೇಕು ಇದು ಕಡ್ಡಾಯ. ಇಲ್ಲದಿದ್ದರೆ 400 ಬಿಲಿಯನ್ ಡಾಲರ್(28 ಲಕ್ಷ ಕೋಟಿ ರೂಪಾಯಿ) ಮೀರಿದ ಶಸ್ತ್ರಾಸ್ತ್ರ ಉದ್ದಿಮೆ ನೆಡೆಯುವುದಾದರೂ ಹೇಗೆ? 

ಅಮೇರಿಕಾ ದೇಶದಲ್ಲಿ ಭಾರತದಲ್ಲಿ ಮೊಬೈಲ್ ಕೊಂಡಷ್ಟೇ ಸರಾಗವಾಗಿ ಗನ್ ಖರೀದಿಸಬಹದು ಎನ್ನುವುದು ನಗ್ನಸತ್ಯ. ಗನ್ ಪಾಲಿಸಿಯಲ್ಲಿ ತಿದ್ದುಪಡಿ ತನ್ನಿ ಎನ್ನುವ ಅಲ್ಲಿನ ನಾಗರಿಕರ ಕೂಗಿಗೆ ಬೆಲೆ ಸಿಕ್ಕಿಲ್ಲ. ಇದಕ್ಕೆ ಇವರು ಕೊಟ್ಟಿರುವ ಹೆಸರು ಮನುಷ್ಯನ ಭಾವನೆಯೊಂದಿಗೆ ಅವರು ವ್ಯಾಪಾರವನ್ನ ಬೆಸೆಯುವ ರೀತಿ ಸೋಜಿಗ ಹುಟ್ಟಿಸುತ್ತದೆ. ಇಲ್ಲಿ ಇಂತಹ ಖರೀದಿಯನ್ನ , ಪಾಲಿಸಿಯನ್ನ ಸಮರ್ಥಿಸುವಂತೆ 'ಇಟ್ ಇಸ್ ಬೆಟರ್ ಟು ಬಿ ಸೇಫ್ ದ್ಯಾನ್ ಸಾರೀ' ಎನ್ನುವ ಸ್ಲೋಗನ್ ತೇಲಿಬಿಡುತ್ತಾರೆ. ಸಮಾಜದ ಒಂದು ವರ್ಗ ಹೌದೌದು ಎಂದು ತಲೆ ಅಲ್ಲಾಡಿಸುತ್ತದೆ. 

ಪೂರ್ಣ ಸಮಾಜವನ್ನ ಸಹಮತಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎನ್ನುವುದು ಅವರಿಗೆ ಗೊತ್ತು. ಒಗ್ಗೂಡಿಸುವಿಕೆ ಬಹಳ ಕಷ್ಟದ ಕೆಲಸ ಆದರೆ ಒಡೆಯುವಿಕೆ? ಅದು ಸುಲಭ. ಸಮಾಜವನ್ನ ಛಿದ್ರ ಮಾಡಿದಷ್ಟೂ ಯಾರಿಗೆ ಲಾಭ ಹೆಚ್ಚು?. ಇದನ್ನ ಇಲ್ಲಿ ಉಲ್ಲೇಖಿಸುವ ಉದ್ದೇಶ ಲಾಭಕ್ಕಾಗಿ ತನ್ನ ದೇಶದ ಜನರನ್ನೂ ಬಿಡದವರು ಪ್ರಪಂಚದ ಇತರ ದೇಶಗಳ ಬಗ್ಗೆ ಯಾವ ಭಾವನೆ ತಾನೇ ಹೊಂದಿರಲು ಸಾಧ್ಯ? 

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ವ್ಯಾಪಾರ 2017 ರ ಅಂಕಿ-ಅಂಶದ ಪ್ರಕಾರ 28 ಲಕ್ಷ ಕೋಟಿಯನ್ನ ಮೀರುತ್ತದೆ. ಈ ಅಂಕಿ-ಅಂಶವನ್ನ ನಿಖರವೆಂದು ಒಪ್ಪಲು ಬರುವುದಿಲ್ಲ. ಏಕೆಂದರೆ ಚೀನಾ ತನ್ನ ಖರೀದಿ ಇರಬಹದು ಅಥವಾ ಮರು ಮಾರಾಟವನ್ನ ಬಹಳ ಗುಪ್ತವಾಗಿ ಇಡುತ್ತದೆ. ಇದರ ಅರ್ಥ ಇದೊಂದು ಅಂದಾಜು ಸಂಖ್ಯೆಯಷ್ಟೇ ಆದರೆ ಮೊತ್ತ ಈ ಸಂಖ್ಯೆಗಿಂತ ಬಹಳ ಹೆಚ್ಚಾಗಿರುವ ಸಾಧ್ಯತೆ ಹೆಚ್ಚು. ಯಾವುದೇ ಕಾರಣಕ್ಕೂ ಇದು ಕಡಿಮೆಯಾಗುವ ಸಾಧ್ಯತೆಯಿಲ್ಲ. ಇಷ್ಟೇ ಅಲ್ಲದೆ ಈ ವ್ಯಾಪಾರ ವರ್ಷದಿಂದ ವರ್ಷಕ್ಕೆ 2.5 ಇಂದ 3 ಪ್ರತಿಶತ ಏರಿಕೆ ಕಾಣುತ್ತಲೆ ಹೋಗುತ್ತಿದೆ ಎಂದರೆ ಇದೆಂತಹ ಲಾಭದಾಯಕ ಉದ್ದಿಮೆ ಎಂದು ಪ್ರತ್ಯೇಕ ಹೇಳಬೇಕಿಲ್ಲ ಅಲ್ಲವೇ? 

ಇಂತಹ ಉದ್ದಿಮೆಯ ಮಾರ್ಕೆಟ್ ಲೀಡರ್ ಅಥವಾ ಸಿಂಹಪಾಲು ಅಮೇರಿಕಾ ದೇಶಕ್ಕೆ ಸೇರಿದ್ದು. ತಮ್ಮ ಉದ್ದಿಮೆ ಯಾವ ಕಾರಣಕ್ಕೂ ನಿಲ್ಲಬಾರದು ಜೊತೆಗೆ ಅಭಿವೃದ್ಧಿಯನ್ನ ಕಾಣುತ್ತಿರಲೇಬೇಕು ಇದು ಅವರ ಅಲಿಖಿತ ಕಾನೂನು. ಇಂದಿನ ಲೇಖನದಲ್ಲಿ ಜಗತ್ತಿನ ಪ್ರಮುಖ ಶಸ್ತ್ರಾಸ್ತ್ರ ಗುತ್ತಿಗೆದಾರ ಕಂಪನಿಯ ಹೆಸರು ಮತ್ತು ವಿವರಗಳನ್ನ ನೋಡೋಣ. 

  1. ಲಾಕ್ ಹೀಡ್ ಮಾರ್ಟಿನ್: ಈ ಸಂಸ್ಥೆ ಅಮೇರಿಕಾ ದೇಶಕ್ಕೆ ಸೇರಿದ್ದು 4೦೦ ಬಿಲಿಯನ್ ಮಾರುಕಟ್ಟೆಯಲ್ಲಿ 50 ಬಿಲಿಯನ್ ತನ್ನ ತೆಕ್ಕೆಗೆ ತೆಗೆದುಕೊಂಡು ಪ್ರಥಮ ಸ್ಥಾನದಲ್ಲಿದೆ. ಎಫ್ -25 ಅಮೇರಿಕಾದ ಅತಿ ದುಬಾರಿ ಫೈಟರ್ ಜೆಟ್ ಅನ್ನು ತಯಾರಿಸಿ ಮಾರುವುದು ಇದರ ಕೆಲಸ. ಪೆಂಟಗಾನ್ ನ ಬೇಕು ಬೇಡಗಳ ಪೂರೈಕೆಯ ಗುತ್ತಿಗೆ ಕೂಡ ಇದರ ಕೈಲಿದೆ. ವಾರ್ಷಿಕ 8 ಪ್ರತಿಶತಕ್ಕೂ ಹೆಚ್ಚಿನ ಗ್ರೋಥ್ ರೇಟ್ ದಾಖಲಿಸುತ್ತ ಇದು ಮುನ್ನಡೆಯುತ್ತಿದೆ. 
  2. ಬೋಯಿಂಗ್: ಇದು ಅಮೆರಿಕಾಕ್ಕೆ ಸೇರಿದ ಸಂಸ್ಥೆ. 27 ಬಿಲಿಯನ್ ವಹಿವಾಟು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಇದು ಕೂಡ ಪೆಂಟಗಾನ್ ಹಾಕುವ ಆರ್ಡರ್ ಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಹವಣಿಸುತ್ತಲೇ ಇರುತ್ತದೆ. ಕೆಸಿ-46 ಎನ್ನುವ ವಾರ್ ಟ್ಯಾಂಕರ್ ಏರ್ಕ್ರಾಫ್ಟ್ ತಯಾರಿಸುವುದರಲ್ಲಿ ನಿಧಾನವಾದ ಕಾರಣ ಸಂಸ್ಥೆಯ ಮಾರಾಟ ಕುಸಿದಿದೆಯಂತೆ! ಅಂದಹಾಗೆ ಮೇಲೆ ಹೇಳಿರುವ ವಹಿವಾಟು ಶಸ್ತ್ರಾಸ್ತ್ರ ಮಾರಿ ಬಂದದ್ದು. ಏಕೆಂದರೆ ಬೋಯಿಂಗ್ ನಾಗರೀಕ ವಿಮಾನಗಳನ್ನ ಕೂಡ ತಯಾರಿಸುತ್ತದೆ. 
  3. ರೇಥಿಯೋನ್: ಮತ್ತೊಂದು ಅಮೇರಿಕಾ ದೇಶಕ್ಕೆ ಸೇರಿದ ಸಂಸ್ಥೆ. ಹತ್ತಿರತ್ತಿರ 24 ಬಿಲಿಯನ್ ವಹಿವಾಟು ಹೊಂದಿದೆ. ಇದೊಂದು ಗೈಡೆಡ್ ಮಿಸೈಲ್ ತಯಾರಿಸುವುದರಲ್ಲಿ ನಿಪುಣತೆ ಹೊಂದಿರುವ ಸಂಸ್ಥೆ. ಮಿಸೈಲ್ ಡಿಫೆನ್ಸ್ ಸಿಸ್ಟಮ್ ವಿಭಾಗದಲ್ಲಿ ಇದನ್ನ ಲೀಡರ್ ಎಂದು ಕರೆಯಬಹದು. 
  4. ಬಿಎಈ ಸಿಸ್ಟಮ್ಸ್: ಇದು ಯುನೈಟೆಡ್ ಕಿಂಗ್ಡಮ್ ಗೆ ಸೇರಿದ ಸಂಸ್ಥೆ. 23 ಬಿಲಿಯನ್ ವಹಿವಾಟನ್ನ ತನ್ನ ಹೆಸರಿಗೆ ಬರೆದುಕೊಳ್ಳುವಲ್ಲಿ ಗೆದ್ದ ಸಂಸ್ಥೆ. ಅಮೆರಿಕಾಗೆ ನೆಲದ ಮೇಲೆ ಚಲಿಸುವ ವಾರ್ ಟ್ಯಾಂಕರ್ ತಯಾರುವ ಗುತ್ತಿಗೆ ಪಡೆದಿದೆ. 
  5. ನಾರ್ತ್ ರೋಪ್ ಗೃಮ್ಮನ್: ಏರೋಸ್ಪೇಸ್ ಡಿಫೆನ್ಸ್ ನಲ್ಲಿ ತನ್ನ ಕಾರ್ಯಕ್ಷೇತ್ರ ಹೊಂದಿರುವ ಈ ಅಮೆರಿಕನ್ ಸಂಸ್ಥೆ 22 ಬಿಲಿಯನ್ ಡಾಲರ್ ಗೂ ಹೆಚ್ಚಿನ ವಹಿವಾಟು ನೆಡೆಸುತ್ತದೆ. 
ಹೀಗೆ ಕ್ರಮವಾಗಿ ಜನರಲ್ ಡೈನಾಮಿಕ್ಸ್ (ಅಮೇರಿಕಾ), ಏರ್ಬಸ್ ಗ್ರೂಪ್ (ಟ್ರಾನ್ಸ್ ಯೂರೋಪಿಯನ್) ಥೇಲ್ಸ್ (ಫ್ರಾನ್ಸ್) ಲಿಯೋನಾರ್ಡೊ (ಇಟಲಿ), ಅಲಾಮಾಜ್-ಅಂತೆ (ರಷ್ಯಾ) . ಜಗತ್ತಿನ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದಕ ಗುತ್ತಿಗೆದಾರ ಸಂಸ್ಥೆಗಳಾಗಿವೆ. ಗಮನಿಸಿ ನೋಡಿ ಪ್ರಥಮ ಹತ್ತು ಸ್ಥಾನದಲ್ಲಿ ಏಷ್ಯಾ ದೇಶದ ಒಂದು ಸಂಸ್ಥೆಯಿಲ್ಲ. ಇನ್ನು ಹಲವು ದಶಕಗಳು ಕಳೆದರೂ ಅಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. 

ಅಮೇರಿಕಾ ದೇಶ ಆರ್ಥಿಕ ಸಂಕಷ್ಟಕ್ಕೆ ಒಳಗಾದರೆ ಜಗತ್ತಿನ ಎಲ್ಲಾದರೂ ಒಂದು ಕಡೆ ಯುದ್ಧ ಶುರುವಾಗುತ್ತದೆ. ತಮ್ಮ ಪಾಡಿಗೆ ತಾವಿದ್ದ ದೇಶದಲ್ಲಿ ಆಂತರಿಕ ಕಲಹ ಹುಟ್ಟಿಹಾಕುವುದು ಇಲ್ಲವೇ ಪಕ್ಕದ ದೇಶದೊಂದಿಗೆ ಯುದ್ಧಕ್ಕೆ ಇಳಿಯುವಂತೆ ಪ್ರಚೋದಿಸುವುದು ಯಾವುದಾದರೊಂದು ಪಕ್ಷಕ್ಕೆ ತನ್ನ ಬೆಂಬಲ ಸೂಚಿಸಿ ನಿಧಾನವಾಗಿ ಯುದ್ಧದಲ್ಲಿ ತನ್ನ ಮೂಗು ತೋರಿಸುವುದು. ಇದು ಕಾರ್ಯದ ನೀಲನಕ್ಷೆ. 

ಉಪಸಂಹಾರ: ಜಗತ್ತಿನಲ್ಲಿ ಇಂದು ಸೃಷ್ಟಿಯಾಗಿರುವ ಎರಡು ಅತ್ಯಂತ ಹೇಯ ವಿಷಯಗಳೆಂದರೆ ಹಣ ಮತ್ತು ರಿಲೀಜನ್. ಇವೆರಡನ್ನ ಮೂಲವಾಗಿ ಇಟ್ಟುಕೊಂಡು ಅವರು ಜಗತ್ತನ್ನ ಆಳುತ್ತಿದ್ದಾರೆ. ಅವರಿಗೆ ಜನರನ್ನ ಒಗ್ಗೊಡಿಸಲು ಸಾಧ್ಯವಿಲ್ಲ ಎನ್ನುವುದು ಗೊತ್ತು ಹಾಗೆಯೇ ಜಗತ್ತಿನ ಸಕಲ ಜನರನ್ನ ನಿಗದಿತ ವಿಷಯದ ಬಗ್ಗೆ ಒಮ್ಮತಕ್ಕೆ ತರುವುದು ಕೂಡ ಸಾಧ್ಯವಿಲ್ಲ ಎನ್ನುವುದು ಕೂಡ ತಿಳಿದಿದೆ. ಹೀಗಾಗಿ ಅವರನ್ನ ವಿವಿಧ ಹೆಸರಿನಲ್ಲಿ ಛಿದ್ರ ಮಾಡುತ್ತಾ ಹೋಗುವುದು ಆ ಮೂಲಕ ತಮ್ಮ ಜೋಬು ತುಂಬಿಸಿಕೊಳ್ಳುವುದು ಅವರ ಹುನ್ನಾರ. ಇಲ್ಲಿಯ ತನಕ ಅವರು ಈ ಕಾರ್ಯದಲ್ಲಿ ಸಾಧಿಸುವ ಯಶಸ್ಸು ಅವರಲ್ಲಿ ಹೊಸ ಹುಮ್ಮಸ್ಸು ತಂದಿದೆ.

ಭಾರತ -ಪಾಕಿಸ್ತಾನ ಮಾತ್ರ ಧರ್ಮದ ಹೆಸರಲ್ಲಿ ಕಚ್ಚಾಡಿಕೊಂಡು ತಮ್ಮ ಬಳಿಯಿರುವ ಹಣವನ್ನ ಶಸ್ತ್ರಾಸ್ತ ಖರೀದಿಗೆ ಸುರಿಯುತ್ತವೆ. ಅಲ್ಲಿನ ಜನ ಈರುಳ್ಳಿ ಆಲೂಗೆಡ್ಡೆ ಕೊಳ್ಳಲು ಹಣವಿಲ್ಲದೆ ಪರದಾಡುತ್ತಾರೆ. ಯೂರೋಪಿನ ಕೆಲವು ದೇಶಗಳ ಡಿಫೆನ್ಸ್ ಬಜೆಟ್ ಇಲ್ಲ ಎನ್ನುವಷ್ಟು ತೃಣ. ಅವರೇಕೆ ಹಾಗೆ? ನಾವೇಕೆ ಹೀಗೆ? ಉತ್ತರಕ್ಕೆ ಮರಳಿ ಒಗ್ಗೂಡುವಿಕೆ ಮಧ್ಯ ಬರುತ್ತದೆ. ಅವರ ಸಹಸ್ರಾರು ಕೋಟಿ ಶಸ್ತ್ರಾಸ್ತ್ರ ವಹಿವಾಟು ನಿರಾತಂಕವಾಗಿ ನಿರಂತರವಾಗಿ ಮುಂದುವರೆಯುತ್ತದೆ.
Stay up to date on all the latest ಅಂಕಣಗಳು news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp