ಸ್ಥಿರವಾಗಿದ್ದ ಷೇರು ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಕಾರಣಗಳೇನು?
Published: 11th July 2019 12:00 PM | Last Updated: 18th July 2019 12:38 PM | A+A A-

ಸ್ಥಿರವಾಗಿದ್ದ ಷೇರು ಮಾರುಕಟ್ಟೆ ದಿಡೀರ್ ಕುಸಿತಕ್ಕೆ ಕಾರಣಗಳೇನು?
- ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಇದೆ ವರ್ಷ ಫೆಬ್ರವರಿಯಲ್ಲಿ ಮಂಡಿಸಿದ ಇಂಟಿರೀಮ್ ಬಜೆಟ್ ನ ಮುಂದುವರೆದ ಭಾಗ. ಬಜೆಟ್ ನಲ್ಲಿ ಹೊಸತೇನು ಇರಲಿಲ್ಲ. ಫೆಬ್ರವರಿಯಲ್ಲಿ ಮಂಡನೆಯಾದ ಹಲವು ಹತ್ತು ವಿಷಯಗಳನ್ನ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವ ಹೇಳಿಕೆ ಬಿಟ್ಟು. ಮನುಷ್ಯನ ಮೂಲಭೂತ ಸ್ವಭಾವವೇ ಹಾಗೆ ನಿನ್ನೆ ಕೊಟ್ಟ ಯಾವುದೇ ಸೌಲಭ್ಯ ಆತ ಮರೆತು ಬಿಡುತ್ತಾನೆ. ಇಂದೇನು? ಹೊಸತೇನು? ಎನ್ನುವುದು ಆತನ ಸ್ವಭಾವ. ಆ ನಿಟ್ಟಿನಲ್ಲಿ ಬಜೆಟ್ ಷೇರು ಮಾರುಕಟ್ಟೆಯನ್ನ ಉತ್ತೇಜಿಸುವಲ್ಲಿ ವಿಫಲವಾಗಿದೆ.
- ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ ಮೇಲೆ ಬರುವ ಆದಾಯದ ಮೇಲೆ ಸರ್ಚಾರ್ಜ್ ಹೆಚ್ಚಳ ಮಾಡಿರುವುದು ಈ ವಲಯದಲ್ಲಿ ಹೂಡಿಕೆ ಮಾಡಿದ್ದವರು ಹಣವನ್ನ ವಾಪಸ್ಸು ತೆಗೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹೂಡಿಕೆಯ ಮೇಲಿನ ಆದಾಯ 6 ರಿಂದ 7 ಪ್ರತಿಶತ ಇದ್ದರೂ ಅದನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಲಿಕೆ ಮಾಡಿದಾಗ ಗಳಿಕೆಯ ಸಂಖ್ಯೆ 2 ಅಥವಾ 3 ಪ್ರತಿಶತವಷ್ಟೇ. ಏಕೆಂದರೆ ವಿದೇಶಿ ವಿನಿಮಯದಲ್ಲಿನ ಬದಲಾವಣೆಗಳು ಮತ್ತು ಹಣ ವರ್ಗಾವಣೆಯಲ್ಲಿ ಆಗುವ ಕಡಿತ. ಇಲ್ಲಿನ ತೆರಿಗೆ ಎಲ್ಲವನ್ನೂ ತೆಗೆದ ಮೇಲೆ ಉಳಿಯುವುದು ಬಹಳ ಕಡಿಮೆ. ಹೀಗಾಗಿ 6 /7 ಪ್ರತಿಶತ ಆದಾಯ 2/3 ಪ್ರತಿಶತಕ್ಕೆ ಇಳಿಯುತ್ತದೆ. ಗಾಯದ ಮೇಲೆ ಬರಿಯ ಎಳೆದಂತೆ ಆದಾಯದ ಮೇಲೆ ಹಾಕಿರುವ ಸರ್ಚಾರ್ಜ್ FDI ಹೂಡಿಕೆದಾರರನ್ನ ತಮ್ಮ ಬಂಡವಾಳ ಅಥವಾ ಹೂಡಿಕೆಯನ್ನ ಹಿಂಪಡೆಯಲು ಪ್ರೇರೇಪಿಸಿದೆ. ಇದರ ಪರಿಣಾಮ ಮಾರುಕಟ್ಟೆ ಇನ್ನಿಲ್ಲದಂತೆ ನೆಲ ಕಚ್ಚಿದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತೊಂದು ಹೊಸ ವಂಚನೆ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಬ್ಯಾಂಕುಗಳ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಜನರಲ್ಲಿ ಬ್ಯಾಂಕ್ ಶೇರ್ ಗಳ ಮೇಲಿದ್ದ ನಂಬಿಕೆ ಬಹಳ ಕಡಿಮೆಯಾಗಿದೆ. ಹೂಡಿಕೆದಾರರ ಮನಸಿನ್ನಲ್ಲಿ ಇನ್ನೆಷ್ಟು ಅನುತ್ಪಾದಕ ಆಸ್ತಿಯಿದೆಯೂ ಯಾರಿಗೆ ಗೊತ್ತು? ಇನ್ನೆಷ್ಟು ವಂಚನೆ ಪ್ರಕಾರಗಳು ಬೆಳಕಿಗೆ ಬರದೆ ತೆರೆಯ ಮರೆಯಲ್ಲಿ ಇದೆಯೋ? ಎನ್ನುವ ಸಂಶಯ ಶುರುವಾಗಿದೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಬೆಲೆ ನೆಲ ಕಚ್ಚಿದೆ. ಒಟ್ಟು ಮಾರುಕಟ್ಟೆಯ ಮೌಲ್ಯ ಕುಸಿಯುವಲ್ಲಿ ಇವುಗಳು ಕೂಡ ತಮ್ಮದೇ ಆದ ದೇಣಿಗೆ ನೀಡಿವೆ.
- ಫೆಡರಲ್ ಬಡ್ಡಿ ದರ ಅಮೆರಿಕಾ ಬ್ಯಾಂಕಿನ ಆಂತರಿಕ ವ್ಯವಹಾರ ಅನ್ನುವಂತಿಲ್ಲ ಏಕೆಂದರೆ ಅಮೆರಿಕಾ ಫೆಡರಲ್ ಬಡ್ಡಿ ದರವನ್ನ ಏರಿಸಿದರೆ ಎಮರ್ಜಿಂಗ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ವಿದೇಶಿಯರು ತಕ್ಷಣ ಹಣವನ್ನ ಇಲ್ಲಿಂದ ತೆಗೆದು ಅಮೇರಿಕಾ ದಲ್ಲಿ ಮರು ಹೂಡಿಕೆ ಮಾಡುತ್ತಾರೆ. ಕೊನೆಗೂ ಹೂಡಿಕೆದಾರ ನೋಡುವುದು ಸ್ಥಿರತೆ ಮತ್ತು ಹೆಚ್ಚಿನ ಲಾಭಂಶ . ಅದು ತಮ್ಮ ನೆಲದಲ್ಲಿ ಸಿಗುತ್ತದೆ ಎಂದರೆ ಅವರು ಪ್ರಥಮ ಆದ್ಯತೆಯನ್ನ ಅಮೆರಿಕಕ್ಕೆ ನೀಡುತ್ತಾರೆ . ಫೆಡರಲ್ ಬಡ್ಡಿ ದರ ಈ ವರ್ಷ ಇಲ್ಲಿಯವರೆಗೆ ಹೆಚ್ಚೇನು ಆಗಿಲ್ಲ . ಆದರೆ ಹೆಚ್ಚಾಗುತ್ತದೆ ಎನ್ನುವ ಊಹಾಪೋಹ ಮಾರುಕಟ್ಟೆಯನ್ನ ಅತಂತ್ರಗೊಳಿಸಲು ಸಾಕು . ಈಗ ಆಗಿರುವುದು ಕೂಡ ಇದೆ
- ಖಾಸಗಿ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳಲ್ಲಿ 25 ಪ್ರತಿಶತ ಇದ್ದ ಪಬ್ಲಿಕ್ ಹೋಲ್ಡಿಂಗ್ ಅನ್ನು 35 ಪ್ರತಿಶತಕ್ಕೆ ಏರಿರಿಸುವುದು ಮತ್ತೆ ಷೇರುಗಳ ಮರು ಕೊಳ್ಳುವಿಕೆಯ ಮೇಲೆ 20 ಪ್ರತಿಶತ ತೆರಿಗೆ ವಿಧಿಸಿರುವುದು ಕೂಡ ಕಾರ್ಪೊರೇಟ್ ವಲಯದಲ್ಲಿ ಅಂತಹ ಒಳ್ಳೆಯ ಭಾವವನ್ನ ಹುಟ್ಟಿಹಾಕಿಲ್ಲ. ಇಂದು ಜಾಗತಿಕ ಮಾರುಕಟ್ಟೆ ಇಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಬಂಡವಾಳ ಹೂಡಿ , ತಯಾರಿಕೆ ಮಾಡಿ ಅದನ್ನ ಮಾರಿ ಕೂಡ ಲಾಭದ ಮುಖ ನೋಡುವುದು ದುಸ್ಸರ ಎನ್ನುವ ಸಮಯದಲ್ಲಿ ಇಂತಹ ನಿಬಂಧನೆಗಳು ಸಹಜವಾಗಿ ಬಂಡವಾಳಗಾರರ ಭಾವನೆಗೆ ಘಾಸಿ ಉಂಟುಮಾಡಿದೆ. ಇದರ ಪರಿಣಾಮ ಮಾರುಕಟ್ಟೆಯ ಮೇಲೂ ಆಗಿದೆ.
- ಆಟೋಮೊಬೈಲ್ ಇಂಡಸ್ಟ್ರಿ ಸಂಕ್ರಮಣ ಕಾಲಘಟ್ಟದಲ್ಲಿದೆ. ಮಾರುತಿ ತನ್ನ ಉತ್ಪಾದನೆಯನ್ನ ಕಡಿತಗೊಳಿಸುವುದಾಗಿ ಹೇಳಿದೆ. 2020 ರ ನಂತರ ಡೀಸೆಲ್ ಕಾರುಗಳನ್ನ ಉಪಯೋಗಿಸಬಾರದು ಎನ್ನುವ ಕೂಗು ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಭರಾಟೆ ಇಲ್ಲಿನ ಮಾರುಕಟ್ಟೆಯನ್ನ ತಲ್ಲಣಗೊಳಿಸಿವೆ. ಇದು ಬದಲಾವಣೆಯ ಸಮಯ. ಮುಂದೇನು ಎನ್ನುವುದರ ನಿಖರತೆಯಿಲ್ಲದ ಸಮಯ. ಹೀಗಾಗಿ ಆಟೋಮೊಬೈಲ್ ಕ್ಷೇತ್ರದ ಷೇರುಗಳು ಕೂಡ ಕುಸಿತ ಕಂಡಿವೆ. ಸಹಜವಾಗಿ ಮಾರುಕಟ್ಟೆಯ ಒಟ್ಟು ಮೌಲ್ಯ ಕುಸಿಯಲು ಇವು ಕೂಡ ಜೊತೆಯಾಗಿವೆ.
- ಸಮಾಜದಲ್ಲಿ ಬಳಕೆಯ ಮೌಲ್ಯ ಕುಸಿದಿದೆ. ಅಂದರೆ ಕನ್ಸಮ್ಷನ್ ಕಡಿಮೆಯಾಗಿದೆ. ಕುಸಿದ ಬೇಡಿಕೆ ಮಟ್ಟವನ್ನ ಏರಿಸಲು ಬಜೆಟ್ ನಲ್ಲಿ ಯಾವುದೇ ವಿಶೇಷ ಸವಲತ್ತು ನೀಡಿಲ್ಲ. ಮೆಟ್ರೋ ಸಿಟಿಗಳಲ್ಲಿ ವಾಸಕ್ಕೆ ಯೋಗ್ಯ ಲಕ್ಷಾಂತರ ಫ್ಲಾಟ್ ಗಳು ರಿಯಾಲಿಟಿ ಕ್ಷೇತ್ರವನ್ನ ಕಂಗಾಲು ಮಾಡಿದೆ. ರಿಯಾಲಿಟಿ ಕ್ಷೇತ್ರ ಹಲವಾರು ವರ್ಷದಿಂದ ಚಿಗುರುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಾರಿಯ ಬಜೆಟ್ ರಿಯಾಲಿಟಿ ಜೊತೆಗೆ ಇತರ ಕಾರ್ಯ ಕ್ಷೇತ್ರದಲ್ಲಿ ಕೂಡ ಕುಸಿಯ ಬೇಡಿಕೆಯ ಹೆಚ್ಚಿಸುವ ಯಾವ ಕಸರತ್ತು ಮಾಡಿಲ್ಲ. ಇದು ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.