ಕರೆನ್ಸಿ ವಾರ್ ಗೆ ಸಿದ್ಧವಾಗುತ್ತಿದೆಯೇ ಅಮೆರಿಕಾ ?

ಸಾಕು ಈ ಗ್ಲೋಬಲೈಸೇಷನ್ ಎಂದು ದಿಟ್ಟ ನಿಲುವು ತಳೆದು ಅದನ್ನ ಜನರಿಗೆ ಮನದಟ್ಟು ಮಾಡಿ ಗೆದ್ದು ಬಂದವರು ಟ್ರಂಪ್...
ಕರೆನ್ಸಿ ವಾರ್ ಗೆ ಸಿದ್ಧವಾಗುತ್ತಿದೆಯೇ ಅಮೆರಿಕಾ?
ಕರೆನ್ಸಿ ವಾರ್ ಗೆ ಸಿದ್ಧವಾಗುತ್ತಿದೆಯೇ ಅಮೆರಿಕಾ?
ನಿಮಗೆಲ್ಲ ಗೊತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಅಧಿಕಾರಕ್ಕೆ ಬಂದ ದಿನದಿಂದ ಅಮೆರಿಕಾ ಫಸ್ಟ್ ಎನ್ನುವ ಹೇಳಿಕೆಯನ್ನ ಕೊಡುತ್ತಾ ಬಂದವರಿವರು. ಹಾಗೆ ನೋಡಲು ಹೋದರೆ ಕುಸಿದಿದ್ದ ಅಮೆರಿಕಾದ ವಿಶ್ವಾಸ ಮತ್ತು ಆರ್ಥಿಕತೆಯನ್ನ ಮತ್ತೆ ಹಳಿಯ ಮೇಲೆ ತರಲು ರಾಷ್ಟ್ರೀಯತೆಯೇ ಮದ್ದು, ಸಾಕು ಈ ಗ್ಲೋಬಲೈಸೇಷನ್ ಎಂದು ದಿಟ್ಟ ನಿಲುವು ತಳೆದು ಅದನ್ನ ಜನರಿಗೆ ಮನದಟ್ಟು ಮಾಡಿ ಗೆದ್ದು ಬಂದವರು ಟ್ರಂಪ್. 
ನವೆಂಬರ್ 2020ಕ್ಕೆ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮತ್ತೆ ಗೆದ್ದು ಅಧಿಕಾರ ನಡೆಸಲು ಟ್ರಂಪ್ ಅತ್ಯಂತ ಉತ್ಸುಕರಾಗಿದ್ದಾರೆ. ಅವರು ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲ ಒಂದು ಹೇಳಿಕೆಯನ್ನ ಕೊಡುತ್ತ ಜನ ಮನದಲ್ಲಿ ತಮ್ಮ ಇರುವಿಕೆ ಮಾಸದಂತೆ ನೋಡಿಕೊಳ್ಳುತ್ತ ಬಂದಿದ್ದಾರೆ. 
ಮಾರ್ನಿಂಗ್ ಕನ್ಸಲ್ಟ್ ಎನ್ನುವ ಒಂದು ಸಂಸ್ಥೆ ಪ್ರತಿ ದಿನ ಐದು ಸಾವಿರ ಅಮೆರಿಕನ್ನರನ್ನ ತಮ್ಮ ನಿಲುವನ್ನ ಕೇಳುತ್ತಾ ಬಂದಿದೆ. ಈ ಸರ್ವೆ ಕಾರ್ಯದಲ್ಲಿ ಇದು ಬೃಹತ್ ಡಾಟಾ ಕಲೆ ಹಾಕುತ್ತಿದೆ. ತಿಂಗಳಿಂದ ತಿಂಗಳಿಗೆ ರಾಜ್ಯವಾರು ಮಾಹಿತಿಯ ಜೊತೆಗೆ ಯಾವ ವಯೋಮಾನದವರು ಟ್ರಂಪ್ ನ್ನು ಬೆಂಬಲಿಸುತ್ತಾರೆ, ಯಾರು ಇಲ್ಲ ಹೀಗೆ ಎಲ್ಲಾ ತರಹದ ಮಹತ್ತರ ಮಾಹಿತಿಯನ್ನ ಇದು ಪಡೆದುಕೊಳ್ಳುತ್ತಿದೆ. ಚುನಾವಣೆ ಗೆಲ್ಲಲು ಇಂತಹ ಸರ್ಕಸ್ ಅತ್ಯವಶ್ಯಕ. ಇದರ ಜೊತೆಗೆ ಇಲ್ಲವೆಂದವರ ಮನಸ್ಸಿನ ಭಾವನೆಯನ್ನ ಕೂಡ ಅರಿತುಕೊಳ್ಳುವ ಪ್ರಯತ್ನವನ್ನ ಮಾಡಲಾಗುತ್ತದೆ. ಜೈ ಎಂದವರು ಖಂಡಿತ ವೋಟ್ ಮಾಡುತ್ತಾರೆ. ಧಿಕ್ಕಾರ ಕೂಗಿದವರಲ್ಲಿ ಒಂದೆರೆಡು ಪ್ರತಿಶತ ಜನ ಜೈ ಅಂದರೂ ಸಾಕು ಚುನಾವಣೆಯ ಫಲಿತಾಂಶ ಬದಲಾಗುತ್ತದೆ.
ಇದು ಟ್ರಂಪ್ ಗೆ ಗೊತ್ತಿರದ ರಹಸ್ಯವೇನಲ್ಲ. ಇದಕ್ಕಾಗಿ ಅವರು ಏನಾದರೂ ಮಾಡಬೇಕೆಲ್ಲವೇ? ಸಮಾಜದಲ್ಲಿ ಗುರುತಿಸಲ್ಪಡುವಷ್ಟು ಹಣಕಾಸು ಹರಿವು ಹೆಚ್ಚಬೇಕು. ಜನರಿಗೆ ಉದ್ಯೋಗ ಸಿಗಬೇಕು. ಒಟ್ಟಿನಲ್ಲಿ ಅಲ್ಲಿನ ಜನ ಸಾಮಾನ್ಯನ ನಿತ್ಯ ಜೀವನದಲ್ಲಿ ಒಂದಷ್ಟು ಉತ್ತಮ ಬದಲಾವಣೆ ಕಾಣಬೇಕು. ಸರಳವಾಗಿ ಹೇಳಬೇಕೆಂದರೆ ರಸವಿಲ್ಲದ ಅಲ್ಲಿನ ಕಬ್ಬಿನ ಜಲ್ಲೆಯಲ್ಲಿ ಮತ್ತೆ ರಸ ಜಿನುಗವಂತಾಗಬೇಕು. ಅಷ್ಟಾದರೆ ಅವರು ಮತ್ತೆ ಗೆಲ್ಲುತ್ತಾರೆ. ಇದಕ್ಕಾಗಿ ಟ್ರಂಪ್ ನ ಹೊಸ ಟ್ರಂಪ್ ಕಾರ್ಡ್ 'ಕರೆನ್ಸಿ ವಾರ್'. ಏನಿದು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ನೋಡಣ. 
ಕರೆನ್ಸಿ ವಾರ್ ಎಂದರೇನು? 
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಪಾಲು ಕಸಿಯಲು ಹಲವು ದೇಶಗಳು ತಮ್ಮ ಹಣದ ಮೌಲ್ಯವನ್ನ ಬೇರೆ ದೇಶದ ಮೌಲ್ಯಗಳ ಎದುರು ಅಪಮೌಲ್ಯ ಮಾಡಿಕೊಳ್ಳುವ ಕ್ರಿಯೆಗೆ ಕರೆನ್ಸಿ ವಾರ್ ಎನ್ನುತ್ತಾರೆ. ಒಂದು ಸಣ್ಣ ಉದಾಹರಣೆ ಇದನ್ನ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. 
ಇಡೀ ಜಗತ್ತನ್ನ ಒಂದು ಸಂತೆ ಅಥವಾ ಮಾರುಕಟ್ಟೆ ಎಂದುಕೊಳ್ಳಿ. ಅಲ್ಲಿ ಕುಳಿತ ವ್ಯಾಪಾರಿಗಳನ್ನ ಅಮೆರಿಕಾ, ಭಾರತ, ಚೀನಾ, ಜಪಾನ್ ಹೀಗೆ ಹೆಸರಿಸೋಣ. ಅಮೆರಿಕಾದ ಒಂದು ಡಾಲರ್ ಭಾರತದ ಎಪ್ಪತ್ತು ರುಪಾಯಿಗೆ ಸಮ ಎಂದುಕೊಳ್ಳೋಣ. ಅಮೇರಿಕಾ ಬಳಿ ದಂಟಿನ ಸೊಪ್ಪು ಉಂಟು ಅದನ್ನ ಅವರು ಒಂದು ಡಾಲರಿಗೆ ಹತ್ತು ಕಟ್ಟು ಕೊಡುತ್ತಾರೆ ಎಂದುಕೊಳ್ಳೋಣ. ಚೀನಾ ದೇಶ ತನ್ನ ಬಳಿಯಿರುವ ಸೊಪ್ಪನ್ನ ಕೂಡ ಅಷ್ಟೇ ಬೆಲೆಗೆ ಮಾರುತ್ತಿದೆ ಎಂದುಕೊಳ್ಳಿ. ಇಂತಹ ಸಮಯದಲ್ಲಿ ಅಮೇರಿಕಾ ಇದಕ್ಕಿದ್ದಂತೆ ತನ್ನ ಡಾಲರ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಮೌಲ್ಯ ಗೊಳಿಸಿಕೊಳ್ಳುತ್ತದೆ. ಅಂದರೆ ಒಂದು ಡಾಲರ್ ಎಪ್ಪತ್ತು ರೂಪಾಯಿ ಬದಲು 65 ರೂಪಾಯಿ ಅಥವಾ 62 ರುಪಾಯಿಗೆ ಇಳಿಸುತ್ತದೆ. ಅಂದರೆ ಭಾರತದ ಕೊಳ್ಳುವ ಶಕ್ತಿ ಹೆಚ್ಚಿತು. ಹತ್ತು ಕಟ್ಟು ಸೊಪ್ಪಿಗೆ 70 ರೂಪಾಯಿ ಕೊಡುವ ಬದಲು ಇದೀಗ ಭಾರತ 63 ರೂಪಾಯಿ ಕೊಟ್ಟರೆ ಸಾಕು. ಇಂತಹ ಸಂಧರ್ಭದಲ್ಲಿ ಎಲ್ಲರೂ ಅಮೆರಿಕಾದ ಸೊಪ್ಪು ಕೊಳ್ಳಲು ಬಯಸುತ್ತಾರೆ. ಇದರಿಂದ ಚೀನಾ ಕೂಡ ತನ್ನ ಹಣದ ಮೌಲ್ಯವನ್ನ ಅಪಮೌಲ್ಯಗೊಳಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಉಳಿಸಿಕೊಳ್ಳುವ ಸಲುವಾಗಿ ಅದು ಅಮೆರಿಕಾಕ್ಕಿಂತ ಹೆಚ್ಚಿನ ಅಪಮೌಲ್ಯ ಮಾಡಿಕೊಳ್ಳುತ್ತದೆ. ಹತ್ತು ಕಟ್ಟು ಸೊಪ್ಪಿಗೆ ಅಮೇರಿಕಾ 63 ರೂಪಾಯಿ ಕೇಳುತ್ತಿದೆ ನಾನು 60 ರುಪಾಯಿಗೆ ಕೊಡುತ್ತೇನೆ ಎನ್ನುತ್ತದೆ. ಗಮನಿಸಿ ಅಮೆರಿಕಾ, ಚೀನಾ ಅಲ್ಲದೆ ಇನ್ನು ಹಲವು ಸಣ್ಣ ಪುಟ್ಟ ದೇಶಗಳು ಸೊಪ್ಪನ್ನ ಮಾರುತ್ತಿದ್ದರೆ? ಅವುಗಳು ಕೂಡ ಮೌಲ್ಯವನ್ನ ಕಡಿಮೆ ಮಾಡುವ ಈ ಆಟದಲ್ಲಿ ವಿಧಿಯಿಲ್ಲದೇ ಪಾಲ್ಗೊಳ್ಳುತ್ತವೆ. ಹೀಗೆ ಒಬ್ಬರ ಮೇಲೆ ಒಬ್ಬರು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ತಮ್ಮ ಹಣವನ್ನ ಅಪಮೌಲ್ಯಗೊಳಿಸಿ ಕೊಳ್ಳುವ ಕ್ರಿಯೆಗೆ ವಿತ್ತ ಲೋಕದಲ್ಲಿ ಕರೆನ್ಸಿ ವಾರ್ ಎನ್ನುತ್ತಾರೆ. 
ತಮ್ಮ ಹಣದ ಮೌಲ್ಯವನ್ನ ಅವರೇ ಏಕೆ ಕಡಿಮೆ ಮಾಡಿಕೊಳ್ಳುತ್ತಾರೆ? ಇದು ಎಲ್ಲರಿಗೂ ಲಾಭದಾಯಕವೇ? 
ಮೇಲಿನ ಸಾಲುಗಳಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ವ್ಯಾಪಾರದ ಮೇಲಿನ ಹಿಡಿತ ಸಾಧಿಸಲು ಇಂತಹ ಆಟವನ್ನ ಶುರುಮಾಡುತ್ತಾರೆ. ಇದು ಖಂಡಿತ ಎಲ್ಲಾ ದೇಶಗಳಿಗೂ ಲಾಭದಾಯಕವಲ್ಲ. ಸಣ್ಣ ಪುಟ್ಟ ದೇಶಗಳು ಇಷ್ಟವಿಲ್ಲದಿದ್ದರೂ ತಮ್ಮ ಹಣವನ್ನ ಅಪಮೌಲ್ಯಗೊಳಿಸಿಕೊಳ್ಳುವ ದರ್ದಿಗೆ ಬೀಳುತ್ತಾರೆ. ಇದು ಅಮೆರಿಕಾ ದೇಶಕ್ಕೆ ಹೆಚ್ಚು ಲಾಭದಾಯಕ. ಅದಕ್ಕೆ ಕಾರಣಗಳು ಹೀಗಿವೆ. 
  1. ಜಗತ್ತಿನ ಮುಕ್ಕಾಲು ಪಾಲು ವ್ಯಾಪಾರ ನೆಡೆಯುವುದು ಡಾಲರ್ ಅನ್ನು ವಿನಿಮಯವನ್ನಾಗಿ ಬಳಸುವುದರ ಮೂಲಕ ಹೀಗಾಗಿ ಜಗತ್ತಿನ ಎಲ್ಲಾ ದೇಶಗಳು ತಮ್ಮ ಫಾರಿನ್ ರಿಸರ್ವ್ ಹಣವನ್ನ ಡಾಲರ್ ನಲ್ಲಿ ಇಡುತ್ತದೆ. 70 ಲಕ್ಷ ರೂಪಾಯಿ ಕೊಟ್ಟು ಒಂದು ಲಕ್ಷ ಡಾಲರ್ ರಿಸರ್ವ್ ನಲ್ಲಿ ಇಟ್ಟಿದ್ದರೆ ಅಮೇರಿಕಾ ತನ್ನ ಡಾಲರ್ ಮೌಲ್ಯವನ್ನ ಅಪಮೌಲ್ಯ ಗೊಳಿಸಿದರೆ, ನಮ್ಮ ಡೆಪಾಸಿಟ್ ಮೌಲ್ಯ ಕೂಡ ಕರಗುತ್ತದೆ. 70 ಲಕ್ಷ ಇದೀಗ ಹೊಸ ಮೌಲ್ಯದಲ್ಲಿ 63 ಲಕ್ಷಕ್ಕೆ ಕುಸಿಯುತ್ತದೆ. ಅಲ್ಲಿ ಕಡಿಮೆ ಬೆಲೆಗೆ ಸೊಪ್ಪು ಸಿಕ್ಕಿತು ಎಂದು ಹಿಗ್ಗುವಂತಿಲ್ಲ! ಅದರ ದುಡ್ಡನ್ನ ಬೇರೆಯ ರೀತಿಯಲ್ಲಿ ಅಮೇರಿಕಾ ವಸೂಲಿ ಮಾಡಿರುತ್ತದೆ. 
  2. ಅಮೆರಿಕಾ ತನ್ನ ಡಾಲರ್ ಮೌಲ್ಯವನ್ನ ಕುಸಿಯುವಂತೆ ಮಾಡಲು ಹೆಚ್ಚಿನ ಡಾಲರ್ ಅನ್ನು ಮಾರಬೇಕು. ಜಗತ್ತಿನ ಇತರ ದೇಶಗಳು ರಿಸರ್ವ್ ಹಣವನ್ನ ಸರಿತೂಗಿಸಲು ಕೊಳ್ಳುತ್ತಾರೆ. ಪ್ರತಿ ಬಾರಿ ಡಾಲರ್ ಉಪಯೋಗಿಸಿ ಮಾಡುವ ವಹಿವಾಟಿನಲ್ಲಿ ಒಂದಂಶ ಸದ್ದಿಲ್ಲದೇ ಅಮೇರಿಕಾ ವಿನಿಮಯದ ದರ ಬದಲಾವಣೆಯಲ್ಲಿ ಪಾಲು ಪಡೆದಿರುತ್ತದೆ. 
  3. ಹೀಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆದಾಗ ಸಹಜವಾಗೇ ಅಮೆರಿಕಾದಲ್ಲಿ ಕೆಲಸದಲ್ಲಿ ಹೆಚ್ಚಳ, ಹೊಸ ಕೆಲಸ ಸೃಷ್ಟಿಯಾಗುತ್ತದೆ. 
  4. ಕುಸಿದ ಡಾಲರ್ ಅಂತರರಾಷ್ಟ್ರೀಯ ಹೂಡಿಕೆದಾರರನ್ನ ಸೂಜಿಗಲ್ಲಿನಂತೆ ಅಲ್ಲಿಗೆ ಸೆಳೆಯುತ್ತದೆ. ಹೂಡಿಕೆದಾರರಿಗೆ ಗೊತ್ತು ಆರು ತಿಂಗಳು ಅಥವಾ ವರ್ಷದ ನಂತರ ಅಮೆರಿಕಾ ತನ್ನ ಹಣವನ್ನ ಮತ್ತೆ ಪ್ರಬಲಗೊಳಿಸತ್ತದೆ ಎಂದು. ಹೀಗಾಗಿ ಅವರಿಗೆ ಹೆಚ್ಚಿನ ಲಾಭದ ವಾಸನೆ ಬರುತ್ತದೆ. ಅಮೇರಿಕಾದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತದೆ. ಬಂಡವಾಳ ಹರಿದು ಬಂದಂತೆ ಹೆಚ್ಚಿನ ಹೊಸ ಇಂಡಸ್ಟ್ರಿಗಳು ತಲೆಯೆತ್ತುತ್ತವೆ. ಸಹಜವಾಗಿ ಹೊಸ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತದೆ. 
  5. ಇಷ್ಟೆಲ್ಲಾ ಲಾಭ ಅಮೆರಿಕಕ್ಕೆ ಆಗುತ್ತಿರುವುದು  ಜಗತ್ತಿನ ಬಹುತೇಕ ರಾಷ್ಟ್ರಗಳು ಡಾಲರ್ ಅನ್ನುವಿನಿಮಯ ಮಾಧ್ಯಮವನ್ನಾಗಿ ಒಪ್ಪಿಕೊಂಡಿವೆ. ಹೀಗಾಗಿ ಇಂತಹ ಕರೆನ್ಸಿ ವಾರ್ ಸಮಯದಲ್ಲಿ ಅಮೇರಿಕಾ ಹೆಚ್ಚಿನ ಲಾಭವನ್ನ ಪಡೆದುಕೊಳ್ಳುತ್ತದೆ. 
  6. ಗಮನಿಸಿ ಈಗಾಗಲೇ ಅಮೆರಿಕಾ ಭಾರತ ಮತ್ತು ಚೀನಾ ದೇಶದ ಜೊತೆಯಲ್ಲಿ ಟ್ರೇಡ್ ವಾರ್ ನಡೆಸುತ್ತಿದೆ. ಚೀನಾ ಮತ್ತು ಭಾರತ ಸಮರ್ಥವಾಗಿ ಇದನ್ನ ಎದುರಿಸಿ ನಿಂತಿವೆ. ಅಮೆರಿಕಾ ತೆರಿಗೆಯನ್ನ ಹೆಚ್ಚಿಸಿದರೆ ಈ ದೇಶಗಳು ಕೂಡ ಯಾವ ಮುಲಾಜು ಇಲ್ಲದೆ ತಮ್ಮ ತೆರಿಗೆಯನ್ನ ಕೂಡ ಏರಿಸಿವೆ. 
ಜುಲೈ 3, 2019 ರಂದು ಟ್ರಂಪ್ ಒಂದು ಟ್ವೀಟ್ ಮಾಡುತ್ತಾರೆ. ಅದರಲ್ಲಿ ಅವರು ಚೀನಾ ಮತ್ತು ಯೂರೋಪ್ ಹಣವನ್ನ ಅಪಮೌಲ್ಯಗೊಳಿಸವ ಮೋಸದಾಟದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ. ಜೊತೆಗೆ ನಾವು ಅವರೊಂದಿಗೆ ಸಮವಾಗಿ ನಿಲ್ಲಬೇಕು. ಅಥವಾ ಪೆದ್ದರಂತೆ ಸುಮ್ಮನೆ ಕೂತು ನೋಡಬೇಕು. ಎಂದಿದ್ದಾರೆ.  ಇದು ಅಮೆರಿಕಾ ಕರೆನ್ಸಿ ವಾರ್ ಅಖಾಡಕ್ಕೆ ಇಳಿಯುವ ಸೂಚನೆ ಎಂದು ವಿತ್ತೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ. 
ಪ್ರತಿ ದಿನ ಡಾಲರ್ ಅನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸಿ ನಡೆಯುವ ವ್ಯವಹಾರ 5 ಟ್ರಿಲಿಯನ್! ಒಂದು ಟ್ರಿಲಿಯನ್ ಅಂದರೆ ಒಂದು ಲಕ್ಷ ಕೋಟಿ. ಐದು ಟ್ರಿಲಿಯನ್ ಅಂದರೆ ಐದು ಲಕ್ಷ ಕೋಟಿ. ಇಷ್ಟು ದೊಡ್ಡ ಮೊತ್ತದ ವಹಿವಾಟು ಪ್ರತಿ ದಿನ ನೆಡೆಯುತ್ತದೆ ಎಂದರೆ ಅದರಿಂದ ಅಮೆರಿಕಾ ಹೆಚ್ಚಿನ ಯಾವುದೇ ಕಷ್ಟವಿಲ್ಲದೆ ವಿನಿಮಯದ ಮೂಲಕ ಗಳಿಸುವ ಲಾಭದ ಅರಿವು ನಿಮ್ಮದಾದೀತು. 
ಕೊನೆ ಮಾತು: ಟ್ರಂಪ್ ಕರೆನ್ಸಿ ವಾರ್ ಎನ್ನುವ ಮೋಸದಾಟಕ್ಕೆ ಸಜ್ಜಾಗುತ್ತಿದ್ದಾರೆ. ಜಗತ್ತು ಆಗಲೇ ಟ್ರೇಡ್ ವಾರ್ ನಲ್ಲಿ ಬೆಂದು ಬೇಸೆತ್ತಿದೆ. ಈಗ ಹೊಸ ಕರೆನ್ಸಿ ವಾರ್ ಶುರುವಾದರೆ ಅದು ಜಾಗತಿಕ ಮಾರುಕಟ್ಟೆಗೆ ಒಳ್ಳೆಯ ವಿಷಯವಂತೂ ಅಲ್ಲ. ಇದರ ಜೊತೆಗೆ ಪ್ರತಿ ಸಲವೂ ಅಮೆರಿಕಾ ದ ಕಾರ್ಯ ತಂತ್ರ ಗೆಲ್ಲಬೇಕು ಎಂದೇನಿಲ್ಲ. ಅದು ಕೆಲವೊಮ್ಮೆ ಬ್ಯಾಕ್ ಫೈರ್ ಆಗಬಹದು. ಗಮನಿಸಿ ಡಾಲರ್ ಅಪಮೌಲ್ಯ ಮಾಡಿಕೊಂಡರೆ ಅದು ಅಲ್ಲಿನ ಜನರ ಕೊಳ್ಳುವ ಶಕ್ತಿಯನ್ನ ಕಡಿಮೆ ಮಾಡಿಕೊಂಡಂತೆ. ಹೀಗಾಗಿ ಡೊಮೆಸ್ಟಿಕ್ ಡಿಮ್ಯಾಂಡ್ ಕುಸಿಯಬಹದು. ಹೀಗೇನಾದರೂ ಅವರು ಅಂದುಕೊಂಡ ಮಿತಿಗಿಂತ ಕುಸಿದರೆ ಕೇಕೆ ಹಾಕಿ ಕುಣಿಯಲು ಬಯಸಿರುವ ಅಮೆರಿಕಾ ಇನ್ನಿಲ್ಲದೆ ಕಣ್ಣೀರಿಡಬೇಕಾಬಹದು. ಅದು ಅವರಿಗೆ ಗೊತ್ತಿದೆ. ಅಧಿಕಾರ ಪಡೆಯಲು ಅಧಿಕಾರದಲ್ಲಿರುವರು ಎಂತಹ ರಿಸ್ಕ್ ತೆಗೆದುಕೊಳ್ಳಲ್ಲೂ ಸಿದ್ಧ. ಇಂತಹ ರಿಸ್ಕ್ ನಿಂದ ಏನಾಗಬಹದು? ಹೆಚ್ಚೆಂದರೆ ಟ್ರಂಪ್ ಅಧಿಕಾರ ಕಳೆದುಕೊಳ್ಳಬಹದು. ಆದರೆ ಅದರ ದೀರ್ಘಕಾಲದ ನೋವು ಮಾತ್ರ ಅನುಭವಿಸುವರು ಜಗತ್ತಿನ ಜನ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com