ನಿಮ್ಮ ಮಕ್ಕಳಿಗೆ ನೀವೇ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್!
ನಿಮ್ಮ ಮಕ್ಕಳಿಗೆ ನೀವೇ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್!

ನಿಮ್ಮ ಮಕ್ಕಳಿಗೆ ನೀವೇ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್!

ಭಾರತದ ಹೈಯರ್ ಮಿಡಲ್ ಕ್ಲಾಸ್ ಸಂಕ್ರಮಣ ಸ್ಥಿತಿಯಲ್ಲಿದೆ. ಈ ಮಾತನ್ನ ಹೇಳಲು ಬಲವಾದ ಕಾರಣವಿದೆ. ನಮ್ಮ ಸುತ್ತ ಮುತ್ತಲಿನ ಜನರನ್ನ ಗಮನಿಸಿ ನೋಡಿ ಇದಕ್ಕೆ ಉತ್ತರ ಮತ್ತು ಕಾರಣ ಎರಡೂ ತಿಳಿಯುತ್ತದೆ.
ಭಾರತದ  ಹೈಯರ್ ಮಿಡಲ್ ಕ್ಲಾಸ್ ಸಂಕ್ರಮಣ ಸ್ಥಿತಿಯಲ್ಲಿದೆ. ಈ ಮಾತನ್ನ ಹೇಳಲು ಬಲವಾದ ಕಾರಣವಿದೆ. ನಮ್ಮ ಸುತ್ತ ಮುತ್ತಲಿನ ಜನರನ್ನ ಗಮನಿಸಿ ನೋಡಿ ಇದಕ್ಕೆ ಉತ್ತರ ಮತ್ತು ಕಾರಣ  ಎರಡೂ ತಿಳಿಯುತ್ತದೆ.
ಇಂದು ಆರ್ಥಿಕವಾಗಿ ಸಬಲರಾಗಿರುವ ಪೋಷಕರನ್ನ ಮಾತನಾಡಿಸಿ ನೋಡಿ ಅವರಲ್ಲಿ ಮುಕ್ಕಾಲು ಪಾಲು ಜನ ಬಾಲ್ಯದಲ್ಲಿ ಸರಕಾರಿ ಶಾಲೆಗೆ ಹೋದವರು. ಬಡತನದಲ್ಲಿ ಬಾಲ್ಯ ಕಳೆದವರು. ಸನ್ನಿವೇಶ ಮತ್ತು ಪರಿಶ್ರಮದ ಕಾರಣ ಇಂದು ಸಮಾಜದಲ್ಲಿ ಒಂದು ಸ್ಥಾನ ಪಡೆದುಕೊಂಡಿರುವ ಇಂಥವರಲ್ಲಿ ಒಂದು ಸಾಮಾನ್ಯ ಎಳೆಯನ್ನ ಕೂಡ ಕಾಣಬಹದು. 'ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡುವುದು ಬೇಡ' ಎನ್ನುವುದು ಅಥವಾ 'ನನಗೆ ಇನ್ನಷ್ಟು ಸೌಲಭ್ಯ ಸಿಕ್ಕಿದ್ದರೆ ಇನ್ನಷ್ಟು ಸಾಧಿಸುತ್ತಿದ್ದೆ, ಹೀಗಾಗಿ ನನ್ನ ಮಕ್ಕಳಿಗೆ ಯಾವ ಕೊರತೆಯೂ ಕಾಡಬಾರದು' ಎನ್ನುವುದು ಆ ಸಾಮಾನ್ಯ ಎಳೆಯಾಗಿದೆ. ಯೂರೋಪು ಮತ್ತು ಅಮೆರಿಕಾದಂತಹ ದೇಶಗಳಲ್ಲೂ ಪೋಷಕರು ಇಂತಹ ತಪ್ಪನ್ನ ಮಾಡುತ್ತಲೇ ಬಂದಿದ್ದಾರೆ. ಮಕ್ಕಳಿಗೆ ತಮ್ಮ ಜವಾಬ್ದಾರಿ ತಿಳಿಸದೆ ಬೆಳೆಸುವುದು ತಪ್ಪು. ಅದರಲ್ಲೂ ಹಣದ ಬಗ್ಗೆ ಮಕ್ಕಳ ಮುಂದೆ ಮಾತಾಡದೆ ಇರುವುದು ಕೂಡ ಇನ್ನು ದೊಡ್ಡ ತಪ್ಪು. ಮಕ್ಕಳಿಗೆ ಅವರಿಗೆ ಸಿಕ್ಕುತ್ತಿರುವ ಸವಲತ್ತಿನ ಖರ್ಚಿನ ಬಗ್ಗೆ ಹೇಳಬೇಕು. ಇಂತಹ ಸೌಲಭ್ಯ ಸಿಕ್ಕಿದ್ದು ಪರಿಶ್ರಮದಿಂದ ಎಂದು ಎಚ್ಚರಿಸುತ್ತಿರಬೇಕು. ಇಂದಿನ ಪರಿಸ್ಥಿತಿಯಲ್ಲಿ ಮಹಾನಗರಗಳಲ್ಲಿ ಮುಕ್ಕಾಲು ಪಾಲು ಪೋಷಕರಲ್ಲಿ ಸತಿ-ಪತಿ ಇಬ್ಬರೂ ದುಡಿಯುವ ಅನಿವಾರ್ಯತೆ  ಇದೆ. ಹೀಗಾಗಿ ಮಕ್ಕಳ ಜೊತೆ ಕಳೆಯುವ ಸಮಯವೂ ಕಡಿಮೆಯೇ. ಇದನ್ನ ಮರೆಮಾಚಲು ವಾರಾಂತ್ಯದಲ್ಲಿ ಮಾಲ್ ಗಳಲ್ಲಿ ಖರ್ಚು ಮಾಡುವುದು ಮನೆ ಮನೆಯ ಕಥೆಯಾಗಿದೆ. ಹಣಕಾಸು ವಿಷಯದಲ್ಲಿ ಪೋಷಕರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಮುಖ್ಯವಾದವುಗಳನ್ನ ಪಟ್ಟಿ ಮಾಡೋಣ. ನಂತರ ಪೋಷಕರಲ್ಲಿ ಇರುವ ಎರಡು ಪ್ರಮುಖ ಬಗೆಗಳನ್ನ ವಿಶ್ಲೇಷಿಸೋಣ. 
ಪೋಷಕರು ಮಕ್ಕಳ ಬೆಳೆಸುವಾಗ ಮಾಡುವ ಸಾಮಾನ್ಯ ತಪ್ಪುಗಳು ಹೀಗಿವೆ: 
  1. ಎಲ್ಲಕ್ಕೂ ಮೊದಲ ತಪ್ಪು 'ಪಾಪ ಅವನು/ಅವಳು ಇನ್ನು ಮಗು ಇಷ್ಟು ಬೇಗ ಅವನ/ಳ ತಲೆಗೇಕೆ ಇದೆಲ್ಲಾ ತುಂಬುವುದು? ನಾಲ್ಕು ದಿನ ಹಾಯಾಗಿರಲಿ ಮುಂದೆ ಈ ತಾಪತ್ರಯಗಳು ಇದ್ದದ್ದೆ'. ಎನ್ನುವುದು. ಇದು 90 ಪ್ರತಿಶತ ಭಾರತೀಯ ಮನೆಯ ಕಥೆ. ಪೋಷಕರೇ ಗಮನಿಸಿ ನಿಮ್ಮ ಮಗ ಅಥವಾ ಮಗಳು ಎಷ್ಟು ಬೇಗ ಆರ್ಥಿಕ ಸ್ವಾವಲಂಬಿಗಳಾಗುತ್ತಾರೆ ಅಷ್ಟೂ ಒಳ್ಳೆಯದು. ಅವರು ಫೈನಾನ್ಸಿಯಲ್ ಇಂಡಿಪೆಂಡೆಂಟ್ ಆಗಿಲ್ಲ ಎಂದರೆ ಅವರ ಬದುಕಿನಲ್ಲಿ ಇನ್ನು ಉದ್ದೇಶ (ಗುರಿ) ಸಿಕ್ಕಿಲ್ಲ ಎಂದು ಧಾರಾಳವಾಗಿ ಹೇಳಬಹದು. ನಿಮಗೆ ಗೊತ್ತೇ? ನಿಮ್ಮ ಮಗ ಅಥವಾ ಮಗಳು  ಮೂರು ವರ್ಷದವರಾಗಿದ್ದರೆ ನೀವು ಹಣದ ಬಗ್ಗೆ ಅವರೊಂದಿಗೆ ಸಂಭಾಷಿಸಲು  ಶುರು ಮಾಡಬಹದು. ಅವರಿಗೇನು ಗೊತ್ತಾಗುತ್ತದೆ ಎನ್ನುವ ಪ್ರಶ್ನೆ ಬೇಡ. ಅವುಗಳು ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿರುತ್ತವೆ. 
  2. ಎಲ್ಲವನ್ನೂ ಕೇಳಿದ ತಕ್ಷಣ ಕೊಡಿಸುವ, ಮಕ್ಕಳ ಪ್ರತಿ ಬೇಡಿಕೆಗೂ 'ಯಸ್' ಎನ್ನುವುದು ತಪ್ಪಿನ ಲಿಸ್ಟಿನಲ್ಲಿದೆ. ಮಕ್ಕಳಿಗೆ ತಾವು ಬೇಡಿಕೆ ಇಟ್ಟ ವಸ್ತುವಿನ ಮೌಲ್ಯದ ಬಗ್ಗೆ ತಿಳಿ ಹೇಳಬೇಕು. ಅದು ಬೇಕೇ? ಅದರ ಅವಶ್ಯಕತೆ ಇದೆಯೇ? ಎನ್ನುವುದರ ಬಗ್ಗೆ ಒಂದು ಸಣ್ಣ ಚರ್ಚೆಯಾಗಬೇಕು. ಸಾಧ್ಯವಾದರೆ ಅದರ ಕೊಳ್ಳುವಿಕೆಯನ್ನ ಮುಂದೂಡಬೇಕು. ಕೇಳಿದ್ದೆಲ್ಲ ಅನಾಯಾಸವಾಗಿ ಸಿಕ್ಕರೆ ಮುಂಬರುವ ದಿನಗಳಲ್ಲಿ ಮಕ್ಕಳಲ್ಲಿ ಯಾವುದರ ಬಗ್ಗೆಯೂ ಆಸಕ್ತಿ ಉಳಿಯುವುದಿಲ್ಲ. ಕಾಯುವಿಕೆಯನ್ನು ಕಲಿಸಬೇಕು. ಮುಂದೆ ಅವರು ಬೆಳೆದು ದೊಡ್ಡವರಾದಾಗ ಅವರು ಬಯಸಿದ್ದೆಲ್ಲ ತಕ್ಷಣ ಸಿಗದೇ ಹೋದರೆ ಅವರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. 
  3. ಮಕ್ಕಳಿಗೆ ಪಾಕೆಟ್ ಮನಿ ಕೂಡುವುದು ಕೂಡ ಬಹಳ ಮನೆಯಲ್ಲಿ ಸಾಮಾನ್ಯ. ಇನ್ನು ಅಸಂಖ್ಯಾತ ಮನೆಯಲ್ಲಿ ಪಾಕೆಟ್ ಮನಿ ಎನ್ನುವ ಕಾನ್ಸೆಪ್ಟ್ ಇಲ್ಲದೆ ಇರಬಹದು. ಆದರೆ ಮಕ್ಕಳು ಕೇಳಿದಾಗ ಹಣ ಕೊಡುವ ಪರಿಪಾಠವಂತೂ ಇದ್ದೇ ಇದೆ. ಹೀಗೆ ಹಣ ಕೊಡುವಾಗ ಏಕೆ? ಎಷ್ಟು? ಎಂದು ಕೇಳುವುದು ಸಾಮಾನ್ಯ. ಆದರೆ ನಂತರ ಕೊಟ್ಟ ದುಡ್ಡಿನಲ್ಲಿ ಎಷ್ಟು ಉಳಿಯಿತು ಎಂದು ಕೇಳುವ ಪರಿಪಾಠ ಮಾತ್ರ ನಮ್ಮಲ್ಲಿಲ್ಲ. ಅರ್ಥ ಬಹಳ ಸರಳ. ಕೊಟ್ಟ ದುಡ್ಡಿಗೆ ಮಕ್ಕಳ ಬಳಿ ಲೆಕ್ಕ ಕೇಳಿ. ಇದು ಸಾಮಾನ್ಯವಾಗಿ ಯಾರೂ ಮಾಡುವುದಿಲ್ಲ. ಮಕ್ಕಳಿಗೆ ತಾವು ಪಡೆದ ದುಡ್ಡಿಗೆ ಅಕೌಂಟೇಬಲ್ ಮಾಡಿ. ಖರ್ಚು ಮಾಡಿದ ಹಣಕ್ಕೆ ಲೆಕ್ಕ ಒಪ್ಪಿಸುವ ಅಭ್ಯಾಸ ಬೆಳಸಿ. ಇದು ಮುಂದೆ ಅವರ ಜೀವನದಲ್ಲಿ ಹಣಕಾಸು ಶಿಸ್ತಿಗೆ ದಾರಿಯಾಗುತ್ತದೆ. ಜೊತೆಗೆ ಸುಮ್ಮನೆ ಕೇಳಿದಾಗ ಹಣ ಕೊಡುವುದಕ್ಕಿಂತ ಯಾವುದಾದರೂ ಮನೆ ಕೆಲಸವನ್ನ ಹೇಳಿ ಇದನ್ನ ಮಾಡಿ ಮುಗಿಸಿದರೆ ಇಷ್ಟು ಹಣ ಕೊಡುವುದಾಗಿ ಹೇಳಬೇಕು. ಹತ್ತು ಶರ್ಟ್ ಮತ್ತು ಪ್ಯಾಂಟು ಇಸ್ತ್ರಿ ಮಾಡಿದರೆ ನೂರು ರೂಪಾಯಿ ಎನ್ನಿ. ಸುಮ್ಮನೆ ಪಿಜ್ಜಾ ತಿನ್ನಲು ಐನೂರು ಖರ್ಚು ಮಾಡಿದ ಮಕ್ಕಳಿಗೆ ನೂರು ರೂಪಾಯಿ ಬೆಲೆ ತಿಳಿಯುತ್ತದೆ. 
  4. ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎಂದು ವಿದೇಶಕ್ಕೆ ಕಳಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಗಮನಿಸಿ ಹೀಗೆ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾರುತ್ತಿರುವ 90 ಪ್ರತಿಶತ ಮಕ್ಕಳು ತಮ್ಮ ಪೋಷಕರ 'ಹಣದ ಬಲ' ದ ಮೇಲೆ ಹೋಗುತ್ತಿದ್ದಾರೆ. ಪೋಷಕರು ಕೂಡ ತಮ್ಮ ಸಂತಾನ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಾರೆ. ಮೇಲಿನ ಮೂರು ಕಾರಣಗಳಲ್ಲಿ ಒಂದನ್ನೂ ತಮ್ಮ ಸಂತಾನಕ್ಕೆ ಕಲಿಸದೆ ಇದ್ದುದರ ಪಲವಿದು. ಅವರಲ್ಲಿ ನಿಜಕ್ಕೂ ವಿದೇಶದಲ್ಲಿ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕ್ಷಮತೆ ಇದ್ದರೆ ಅವರಿಗೆ ವಿದೇಶಿ ವಿದ್ಯಾಲಯ ವಿದ್ಯಾರ್ಥಿ ವೇತನ ಕೊಟ್ಟು ಕರೆಸಿಕೊಳ್ಳುತ್ತದೆ. ಅಲ್ಲವೇ? ಅದು ಬಿಟ್ಟು ಭಾರತೀಯ ರುಪಾಯಿಯನ್ನ ವಿದೇಶಿ ಹಣಕ್ಕೆ ಪರಿವರ್ತಿಸಿ ಮಕ್ಕಳ ಹೆಚ್ಚಿನ ಓದಿಗೆ ಕಳಿಸುವುದು ಅಪರಾಧ. 
ಪೋಷಕರಲ್ಲಿ ಎರಡು ವಿಧ: 
  1. ತಮ್ಮ ಆರ್ಥಿಕ ಪರಿಸ್ಥಿತಿಯನ್ನ ಲೆಕ್ಕಿಸದೆ ಮಕ್ಕಳಿಗೆ ನೆರವು ಚಾಚುವ ಪೋಷಕರು: ಇಂತಹ ಪೋಷಕರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚು. ಇದನ್ನ ಪ್ರೀತಿ, ಸೆಂಟಿಮೆಂಟ್ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಪೋಷಕರ ಸಂಖ್ಯೆಯೂ ಅಸಂಖ್ಯ. ತಾವಿದ್ದ ಮನೆಯನ್ನ ಅಡವಿಟ್ಟು ಮಕ್ಕಳನ್ನ ಹೆಚ್ಚಿನ ಓದಿಗೆ ವಿದ್ಯಾಭ್ಯಾಸಕ್ಕೆ ಕಳಿಸಿದ ಪೋಷಕರ ಸಂಖ್ಯೆಯೂ ಬಹಳ. ಪೋಷಕರು ತಮ್ಮ ನಿವೃತ್ತಿ ಜೀವನವನ್ನ ಲೆಕ್ಕಿಸದೆ ಮಕ್ಕಳ ಮೇಲೆ ಖರ್ಚು ಮಾಡುತ್ತಾರೆ. ಮಕ್ಕಳ ಬಳಿ ಅವರು ಚಿಕ್ಕವರಿದ್ದಾಗ ಆರ್ಥಿಕತೆಯ ಬಗ್ಗೆ ಮಾತನಾಡಿದ್ದರೆ, ಅವರು ಕೇಳಿದಕ್ಕೆಲ್ಲ ಪ್ರಶ್ನಿಸದೆ 'ಯಸ್ ' ಅನ್ನದಿದ್ದರೆ ಇಂತಹ ವಿಷಮ ಪರಿಸ್ಥಿತಿ ಬರುತ್ತಿರಲಿಲ್ಲ. 
  2. ನಮ್ಮ ಬಳಿ ಸಂಪತ್ತಿದೆ ನಮ್ಮ ಮಕ್ಕಳಿಗೆ ಸಹಾಯ ಮಾಡುತ್ತೇವೆ ಎನ್ನುವ ಪೋಷಕರು: ಗಮನಿಸಿ ನಮ್ಮ ಮಕ್ಕಳನ್ನ ಒಂದು ದರ್ಜೆಯ ಬದುಕಿಗೆ ನಾವೇ ರೂಡಿ ಮಾಡಿರುತ್ತೇವೆ. ಅದರಲ್ಲಿ ತಪ್ಪಿಲ್ಲ. ಹಣ, ಯಶಸ್ಸು ಬಂದಾಗ ಅದನ್ನ ಆಸ್ವಾದಿಸುವುದು ತಪ್ಪಲ್ಲ. ವಿದೇಶಿ ಪ್ರಯಾಣವಿರಬಹದು, ಅತ್ಯುತ್ತಮ ಹೋಟೆಲ್ ಗಳಲ್ಲಿ ಊಟ ವಸತಿ ಇರಬಹದು ಇವೆಲ್ಲ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಗಂಡ ಹೆಂಡತಿ ಇಬ್ಬರೇ ಹೋಗಲು ಸಾಧ್ಯವಿಲ್ಲ ಅಲ್ಲವೇ? ಹೀಗಾಗಿ ಮಕ್ಕಳು ನಮ್ಮ ಯಶಸ್ಸಿನ ಸವಿಯನ್ನ ಸವಿಯಲು ಶುರು ಮಾಡುತ್ತಾರೆ. ಇದರಲ್ಲಿ ಅವರ ಪರಿಶ್ರಮವೇನು? ಈಗ ಅವರದಲ್ಲದ ಪರಿಶ್ರಮಕ್ಕೆ ಅವರು ಬದುಕುತ್ತಿರುವ ಜೀವ ಶೈಲಿಯನ್ನ ಉಳಿಸಿಕೊಳ್ಳುವ ಅಥವಾ ಅದಕ್ಕಿಂತ ಉನ್ನತ ಮಟ್ಟಕ್ಕೆ ಹೋಗುವ ಕಲೆಯನ್ನ ಮಕ್ಕಳಿಗೆ ಹೇಳಿ ಕೊಡಬೇಕು. ಇದು ಬಹಳಷ್ಟು ಪೋಷಕರು ಮಾಡುತ್ತಿಲ್ಲ. ಇಂತ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಆದರೆ  ಆರ್ಥಿಕವಾಗಿ ತಮ್ಮ ಹೆತ್ತವರನ್ನ ಅವಲಂಬಿಸುತ್ತಾರೆ. ನಮ್ಮ ಬಳಿ ಇರುವ ಹಣ ನಮ್ಮ  ಮಕ್ಕಳಿಗೆ ಅಲ್ಲವೇ? ಎಂದು ಸಮರ್ಥಿಸ ಕೊಳ್ಳುವ ಪೋಷಕರ ಸಂಖ್ಯೆ ಬಹಳ ಹೆಚ್ಚು. ಪರಾವಂಬಿ ಜೀವನ ಇವರದಾಗುತ್ತೆ. 
ಏನು ಮಾಡಿದರೆ ಸರಿ? 
ಗಮನಿಸಿ ಸನ್ನಿವೇಶ ಪರಿಸ್ಥಿತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂತೆ ಏನು ಮಾಡಬೇಕು ಎನ್ನುವುದು ಕೂಡ ಬದಲಾಗುತ್ತೆ. ಸಾಮಾನ್ಯವಾಗಿ ಹೇಳಬೇಕಂದರೆ  ನೀವೆಷ್ಟೇ ಆರ್ಥಿಕವಾಗಿ ಸ್ಥಿತಿವಂತರಾಗಿರಿ ನಿಮ್ಮ ಮಕ್ಕಳನ್ನ ಆರ್ಥಿಕವಾಗಿ ಸ್ವತಂತ್ರರನ್ನಾಗಿಸುವ ನಿಟ್ಟಿನಲ್ಲಿ ನಿಮ್ಮ ಯೋಚನೆಯಿರಲಿ. ಇದನ್ನ ಅವರು ಅಡಲ್ಟ್ ಹುಡ್ ಗೆ ಬಂದಾಗ ಖಂಡಿತ ಮಾಡಲು ಸಾಧ್ಯವಿಲ್ಲ. 
ಮಕ್ಕಳಿದ್ದಾಗ ಇದನ್ನ ಹೇಳಿ ಕೊಡಲು ಶುರು ಮಾಡಬೇಕು. ಹಣ ಗಳಿಸುವುದು ಎಷ್ಟು ಕಷ್ಟ ಆದರೆ ಅದನ್ನ ಖರ್ಚು ಮಾಡುವುದು ಎಷ್ಟು ಸುಲಭ ಎನ್ನುವುದನ್ನ ತಿಳಿಸಿ ಹೇಳಬೇಕು. ಮುಂದುವರೆದ ದೇಶಗಳಲ್ಲಿ ಆಗಲೇ  ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಎನ್ನುವ ಹೊಸ ಆರ್ಥಿಕ ತಜ್ಞರ ಪಡೆ ಮುಂದಿನ ಪೀಳಿಗೆಗೆ ಇದರ ಬಗ್ಗೆ ಜ್ಞಾನ ನೀಡಲು ಸಜ್ಜಾಗಿದೆ. ಎಲ್ಲಕ್ಕೂ ತಜ್ಞರನ್ನೇ ಅವಲಂಬಿಸಬೇಕಂದಲ್ಲ. ಸರಳವಾಗಿ ನಮ್ಮ ಆದಾಯ ಇಷ್ಟು ವ್ಯಯ ಇಷ್ಟು, ಇಷ್ಟು ಉಳಿಕೆ ಮುಂದಿನ ಜೀವನಕ್ಕೆ ಉಳಿತಾಯ ಮಾಡಲೇಬೇಕು ಎನ್ನುವ ಪಾಠವನ್ನ ಮಕ್ಕಳಿಗೆ ತಿಂಗಳಿಗೊಮ್ಮೆ ಮಾಡಿದರೂ ಸಾಕು. ಅವರಿಗೆ ಮುಂದಿನ ದಿನಗಳಲ್ಲಿ ಯಾವ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಅವಶ್ಯಕತೆ ಬರುವುದಿಲ್ಲ. ಎಲ್ಲವನ್ನೂ ಪ್ರೀತಿ -ಭಾವನೆಯಲ್ಲಿ ನೋಡುವ ಭಾರತೀಯ ಪೋಷಕರು ಹೊಸ ದಾರಿಗೆ, ಹೊಸ ಸವಾಲಿಗೆ ಸಜ್ಜಾಗಬೇಕಿದೆ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Related Stories

No stories found.

Advertisement

X
Kannada Prabha
www.kannadaprabha.com