'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'!
Published: 16th May 2019 12:00 PM | Last Updated: 16th May 2019 08:27 AM | A+A A-

'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'!
- ಅವಶ್ಯಕತೆಯ ಆಧಾರದ ಮೇಲೆ ಖರ್ಚಿಗೆ ಆದ್ಯತೆ ನೀಡಿ. ಇವತ್ತಿನ ದಿನಗಳಲ್ಲಿ ಬಣ್ಣ ಬಣ್ಣದ ಜಾಹಿರಾತು ಎಂತವರನ್ನೂ ಸೆಳೆಯುತ್ತದೆ. ರಸ್ತೆಯ ಇಕ್ಕೆಲೆಗಳಲ್ಲಿ ಮೊಬೈಲ್ ಶಾಪ್ ಗಳದ್ದೆ ಸಾಮ್ರಾಜ್ಯ. ವ್ಯಕ್ತಿಯ ಸಂಬಳ ಎಷ್ಟಾದರೂ ಇರಲಿ ಅವರ ಕೈಲಿರುವ ಮೊಬೈಲ್ ಮಾತ್ರ ಹತ್ತಿಪ್ಪತ್ತು ಸಾವಿರಕ್ಕೆ ಕಡಿಮೆಯಿಲ್ಲ. ಬೇಡದ ವಿಷಯದ ಮೇಲೆ ವೆಚ್ಚ ಮಾಡಿ ಬೇಕಾದ ವಸ್ತು ಖರೀದಿಸಲು ಪರದಾಡುವ ಜನರ ಸಂಖ್ಯೆ ಹೆಚ್ಚು. ನೀವು ಅವರಿಗಿಂತ ಬಿನ್ನರಾಗಿ.
- ಮನೆ ಕೊಳ್ಳುವ ಮುಂಚೆ ಸಾವಿರ ಸಲ ಯೋಚಿಸಿ. ಅದೇ ಮನೆಯನ್ನು ಬಾಡಿಗೆಗೆ ಪಡೆದರೆ ಎಷ್ಟು ಹಣ, ಕೊಂಡರೆ ಎಷ್ಟು ಕಂತಿನ ಹಣ ಅನ್ನುವುದು ಮೊದಲು ತಿಳಿದುಕೊಳ್ಳಿ. ಎರಡರ ನಡುವೆ ಹೆಚ್ಚು ಅಂತರವಿರದಿದ್ದರೆ ಕೊಳ್ಳುವುದು ಒಳ್ಳೆಯದು. ಎಲ್ಲಕ್ಕೂ ಮುಖ್ಯ ಇಂದಿನ ಅಸ್ಥಿರ ದಿನಗಳಲ್ಲಿ ನಿಮ್ಮ ಕೆಲಸ ಒಂದೇ ನಗರದಲ್ಲಿ ಇರುತ್ತದೆ ಎನ್ನುವುದರ ಗ್ಯಾರಂಟಿ ಇಲ್ಲ. ಈ ಅಂಶವನ್ನು ಗಮನದಲ್ಲಿಡಿ. 2030 ರ ವೇಳೆಗೆ ಯೂರೋಪು ಮತ್ತು ಇತರ ಮುಂದುವರಿದ ದೇಶಗಳಲ್ಲಿ ಮನೆ ಕೊಳ್ಳುವುದು ‘ಔಟ್ ಡೇಟೆಡ್’ ಆಗಲಿದೆ. ಎಲ್ಲಿ ಕೆಲಸವಿದೆ ಅಲ್ಲಿ ದಿನದ ಬಾಡಿಗೆ, ವಾರದ ಬಾಡಿಗೆ ಅಥವಾ ತಿಂಗಳ ಬಾಡಿಗೆ ಆಧಾರದ ಮೇಲೆ ವಾಸಿಸಲು ಶುರು ಮಾಡುತ್ತಾರೆ. ಒಂದು ಸಣ್ಣ ಉದಾಹರಣೆ ನೋಡಿ ನನ್ನ ಪರಿಚಿತರೊಬ್ಬರು ಕೆಲಸ ಮಾಡುವುದು ಐಟಿಪಿಎಲ್ ನಲ್ಲಿ ಅದಕ್ಕೂ ಮುಂಚೆ ಪೀಣ್ಯದಲ್ಲಿ ಅವರ ಕೆಲಸ . ಮನೆಯನ್ನೂ ಹತ್ತಿರದಲ್ಲೇ ಕೊಂಡರು . ಈಗ ಅವರು ಐಟಿಪಿಎಲ್ ಓಡಾಡುವುದು ಅವರಿಗೆ ದುಃಸ್ವಪ್ನ . ಬಾಡಿಗೆ ಕೊಟ್ಟು ಹೋಗೋಣ ಅಂದರೆ ಇಲ್ಲಿ ೧೫ ಸಾವಿರದ ಮೇಲೆ ಒಂದು ರೂಪಾಯಿ ಬಾಡಿಗೆ ಬರುವುದಿಲ್ಲ . ಮಾಸಿಕ ಕಂತು ೪೭ ಸಾವಿರ ಕಟ್ಟಬೇಕು . ಸಾಲದಕ್ಕೆ ಐಟಿಪಿಎಲ್ ನಲ್ಲಿ ೨೫ ಸಾವಿರಕ್ಕೆ ಕಡಿಮೆ ಬಾಡಿಗೆ ಮನೆ ಸಿಕ್ಕುವುದಿಲ್ಲ . ಬೆಂಗಳೂರಿನಲ್ಲಿ ಹೀಗೆ ಬಳಲುವರ ಸಂಖ್ಯೆ ಲಕ್ಷದಲ್ಲಿದೆ . ಫ್ಲಾಟ್ ಮರು ಮಾರಾಟಕ್ಕೆ ಒಳ್ಳೆಯ ದರ ಕೂಡ ಸಿಕ್ಕುವುದಿಲ್ಲ .
- ಅವಶ್ಯಕತೆ ಇದ್ದರೆ ಮಾತ್ರ ಕಾರು ಕೊಳ್ಳಿ. ಕಾರು ಮೇಂಟೈನ್ ಖರ್ಚು ಮತ್ತು ವಾರ್ಷಿಕ ಅದರ ಇನ್ಶೂರೆನ್ಸ್ ಖರ್ಚು, ಪಾರ್ಕಿಂಗ್ ಪರದಾಟ, ಟ್ರಾಫಿಕ್ ಜಂಜಾಟ ಇವನ್ನು ಗಮನಿಸಿದರೆ ಬಾಡಿಗೆ ಕಾರಿನಲ್ಲಿ ಓಡಾಡುವುದು ತುಂಬಾ ಉತ್ತಮ. ಬೆಂಗಳೂರಿಗರ ಮನೆಯ ಮುಂದೆ ಬೆಚ್ಚಗೆ ಕವರ್ ಹೊದ್ದು ಕೂತ ಕಾರಗಳ ಸಂಖ್ಯೆ ಬಹಳ ಹೆಚ್ಚು. ವಾರಕ್ಕೆ ಒಮ್ಮೆ ಕಾರು ತೆಗೆಯುವರ ಸಂಖ್ಯೆಯೂ ಬಹಳ ಹೆಚ್ಚು. ಕಾರಿನ ಮೇಲಿನ ಹತ್ತು ಲಕ್ಷ ಅಥವಾ ಅದಕ್ಕೂ ಹೆಚ್ಚು ರಸ್ತೆಯಲ್ಲಿ ಸುಮ್ಮನೆ ಬಿದ್ದಿರುತ್ತದೆ ಮತ್ತು ಅದಕ್ಕೆ ನಿಮ್ಮ ಖಾತೆಯಿಂದ ಮಾಸಿಕ ಬಡ್ಡಿ ಸಮೇತ ಕಂತು ಹೋಗುತ್ತಿರುತ್ತದೆ.
- ಖರ್ಚು ಮಾಡಿ ನಂತರ ಮಿಕ್ಕಿದ್ದು ಉಳಿಸುವ ಜನರೇ ಜಾಸ್ತಿ ನೀವು ಅವರಲೊಬ್ಬರಾಗಬೇಡಿ. ನಿಮ್ಮ ಆದಾಯದ ಇಪ್ಪತ್ತು ಅಂಶ ಮೊದಲು ಉಳಿಸಿ ನಂತರ ಉಳಿದ ಹಣದಲ್ಲಿ ನಿಮ್ಮ ಬಜೆಟ್ ಹಾಕಿ.
- ಸಾಲ ಎನ್ನುವುದು ಒಂದು ವಿಷ ವರ್ತುಲ. ಬೇರೆ ದಾರಿಯೇ ಇಲ್ಲ ಎಂದಾಗ ಮಾತ್ರ ಸಾಲ ಮಾಡಬೇಕು ಅದೂ ಮಿತಿಯಲ್ಲಿ. ಸಾಲ ವಿಲ್ಲದಿದ್ದರೆ ನಿಮ್ಮ ಹಣಕಾಸು ಉತ್ತಮ ಮಾರ್ಗದಲ್ಲಿದೆ ಎನ್ನಬಹದು.
- ವರ್ಷ ಎನ್ನುವುದು ಹೇಗೆ ಕಳೆದು ಹೋಗುತ್ತದೆ ಎನ್ನವುದು ತಿಳಿಯುವುದೇ ಇಲ್ಲ. ನಾಳಿನ ನಿಮ್ಮ ಬದುಕಿಗೆ, ಮಕ್ಕಳ ಭವಿಷ್ಯಕ್ಕೆ ಉಳಿತಾಯ ಒಂದೇ ಸಾಲದು, ಹೂಡಿಕೆ ಕೂಡ ಬಹಳ ಮುಖ್ಯ. ಮಧ್ಯಮ ವರ್ಗ ಷೇರು ಮಾರುಕಟ್ಟೆಯ ಓನಾಮ ತಿಳಿಯದೆ ಏಜೆಂಟ್ ಹೇಳಿದ ಎಂದು ಹೂಡಿಕೆ ಮಾಡುವುದು ಈ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಐಟಿಯಲ್ಲಿ ಕೆಲಸ ಮಾಡುವರು ಸಿಪ್ ಅಥವಾ ಸಿಟ್ ನಲ್ಲಿ ಹೂಡಿಕೆಮಾಡುವುದು ಬುದ್ದಿವಂತರ ಲಕ್ಷಣ ಎಂದೇ ತಿಳಿದಿದ್ದಾರೆ. ಸರಿಯಾದ ಹೂಡಿಕೆ ಬಹಳ ಮುಖ್ಯ.