ಚೀನಾ ದೇಶದ ನಕಲಿ ಚಿನ್ನದ ಕಥೆ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಚೀನಾ ದೇಶದ ನಕಲಿ ಚಿನ್ನದ ಕಥೆ!
ಚೀನಾ ದೇಶದ ನಕಲಿ ಚಿನ್ನದ ಕಥೆ!

ವಿಶ್ವದ ದೊಡ್ಡಣ್ಣನಾಗುವ ಆತುರದಲ್ಲಿ ಚೀನಾ ಒಂದಲ್ಲ ಹತ್ತಾರು ತಪ್ಪುಗಳನ್ನ ಮಾಡಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದ ತಪ್ಪು  ಇಲ್ಲದ ಬೇಡಿಕೆ ಸೃಷ್ಟಿಸುವುದು. ಇಂತಹ ಇಲ್ಲದ ಬೇಡಿಕೆಯನ್ನ ಪೂರೈಸಲು ತನ್ನ ಸಂಸ್ಥೆಗಳನ್ನ, ಜನರನ್ನ ದುಡಿಯುವಂತೆ ಮಾಡುವುದು. ಇಂತಹ ಕೆಲಸಗಳ ಎಷ್ಟು ದಿನ ಮುಚ್ಚಿಡಲಾದೀತು? ಒಂದಲ್ಲ ಒಂದು ದಿನ ಅದು ಬೆಳಕಿಗೆ ಬರಲೇಬೇಕು ಅಲ್ಲವೇ? ಇದೀಗ ಚೀನಾ ಕೂಡ ಅಂತಹ ಹೊಸ ಸುದ್ದಿಯೊಂದಕ್ಕೆ ತೆರೆದುಕೊಂಡಿದೆ. 

ತನ್ನ ಬಳಿಯಿರುವ ಒಟ್ಟು ಚಿನ್ನದ ರಿಸರ್ವ್ ನಲ್ಲಿ 4.2 ಪ್ರತಿಶತ ಚಿನ್ನ ನಿಜವಾದ ಚಿನ್ನವಲ್ಲ ಅದು ತಾಮ್ರ ಅಥವಾ ಟಂಗ್ಸ್ಟನ್ ಎನ್ನವ ಲೋಹವಾಗಿದೆ ಎನ್ನುವುದು ಇತ್ತೀಚೆಗೆ ಚೀನಾಗೆ ಅರಿವಾಗಿದೆ. ಚೀನಾದ ಪ್ರಮುಖ ಚಿನ್ನದ ವಹಿವಾಟು ನಿರ್ವಹಿಸುವ ಖಾಸಗಿ ಸಂಸ್ಥೆ ಕಿಂಗ್ಸ್ ಗೋಲ್ಡ್ ಎನ್ನುವ ಸಂಸ್ಥೆ ತಾನು ಪಡೆದಿದ್ದ  ಸಾಲದ ಮೇಲಿನ ಕಂತನ್ನ ಕಟ್ಟಲು ವಿಫಲವಾಗಿದೆ. ಇದು ಹೀಗೆ ಬಡ್ಡಿ ಮತ್ತು ಅಸಲು ನೀಡುವಲ್ಲಿ ವಿಫಲವಾದಾಗ ಇವರಿಗೆ ಹಣವನ್ನ ನೀಡಿದ್ದ ಹಣಕಾಸು ಸಂಸ್ಥೆಗಳು ಈ ರೀತಿಯ ಸಾಲ ಕೊಡಲು ಅವರು ಕಿಂಗ್ಸ್ ಗೋಲ್ಡ್ ನಿಂದ ಗ್ಯಾರೆಂಟಿಯಾಗಿ ಪಡೆದಿದ್ದ ಚಿನ್ನವನ್ನ ಪರೀಕ್ಷಿಸಿದಾಗ ಅದು ನಕಲಿ ಎನ್ನುವ ಅಂಶ ತಿಳಿದುಬಂದಿದೆ.

2008ರಲ್ಲಿ ಲೇಮನ್ ಬ್ರದರ್ ಕುಸಿತ ಉಂಟಾಗಿ ಅಮೆರಿಕಾದ ಪೂರ್ಣ ಹಣಕಾಸು ವ್ಯವಸ್ಥೆಯ ಲೋಪದೋಷಗಳು ಜಗಜ್ಜಾಹೀರಾಗಿದ್ದವು. ಇದೀಗ ಚೀನಾ ಕೂಡ ಅಂತಹ ಒಂದು ಬೃಹತ್ ಆರ್ಥಿಕ ಕುಸಿತಕ್ಕೆ ಅಣಿಯಾಗುತ್ತಿದೆ. ಇಂತಹ ಸಾಲ ಕಿಂಗ್ಸ್ ಗೋಲ್ಡ್ ನಂತಹ ಸಂಸ್ಥೆಗೆ ಸಾಲವನ್ನು ನೇರವಾಗಿ ಬ್ಯಾಂಕಿಂಗ್ ಸಿಸ್ಟಮ್ ನಿಂದ ನೀಡಿಲ್ಲ. ಚೀನಾದ ರಾಜ್ಯದ ಅಧೀನಕ್ಕೆ ಒಳಪಟ್ಟ ಇನ್ಶೂರೆನ್ಸ್ ಕಂಪನಿಗಳು ಸಾಲ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಅಲ್ಲಿನ ಇನ್ಶೂರೆನ್ಸ್ ವ್ಯವಸ್ಥೆ ಕೂಡ ಕುಸಿದು ಬೀಳುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಗಮನಿಸಿ ಕಿಂಗ್ಸ್ ಗೋಲ್ಡ್ ಚೀನಾದಲ್ಲಿರುವ ಹತ್ತಾರು ಇಂತಹ ಸಂಸ್ಥೆಗಳಲ್ಲಿ ಒಂದು ಮಾತ್ರ! ಅಲ್ಲಿನ ಮೋಸದ ಆಟದಲ್ಲಿ ಚೀನಾದ 100 ಪ್ರತಿಶತ ಚಿನ್ನದಲ್ಲಿ 4 ಪ್ರತಿಶತಕ್ಕೂ ಹೆಚ್ಚು ನಿಜವಾದ ಚಿನ್ನವಲ್ಲ. ಈಗ ಉಳಿದ ಎಲ್ಲಾ ಸಂಸ್ಥೆಗಳು ಕೂಡ ಇದೆ ರೀತಿ ಚಿನ್ನವನ್ನ ಅಡವಿಟ್ಟು ಸಾಲವನ್ನ ಪಡೆದಿವೆ. ಸದ್ಯದ ಮಟ್ಟಿಗೆ ಅವು ಕಂತುಗಳನ್ನ ನೀಡುತ್ತಿವೆ. ಬ್ಯಾಂಕುಗಳು ತಮಗೆ ಅಡವಿಟ್ಟಿರುವ ಚಿನ್ನವನ್ನ ಪರೀಕ್ಷಿಸಲು ಶುರು ಮಾಡಿದರೆ? ಅವುಗಳು ಕೂಡ ನಿಜವಾದ ಚಿನ್ನ ಎಂದು ನಂಬುವುದು ಹೇಗೆ? ಚೀನಾ ದೇಶದಿಂದ ವಿಷಯಗಳು ಹೊರಬರುವುದು ಬಹಳ ಕಡಿಮೆ. ಅಂತಹ ಚೀನಾದಿಂದ ಇಷ್ಟು ದೊಡ್ಡ ಮೊತ್ತದ ಚಿನ್ನ ನಕಲಿ ಎನ್ನುವ ಸುದ್ದಿ ಹೊರಬಿದ್ದಿದೆ ಎಂದರೆ ಅದರ ಮೊತ್ತ ಕನಿಷ್ಠ ಇನ್ನೊಂದು ನಾಲ್ಕೈದು ಪಟ್ಟಾದರೂ ಹೆಚ್ಚಾಗಿರುತ್ತದೆ. ಇಂತಹ ಅವ್ಯವಹಾರ ಹೇಗಾಯ್ತು? ಎನ್ನುವುದನ್ನ ವಿವರವಾಗಿ ತಿಳಿದುಕೊಳ್ಳೋಣ.

ಅವ್ಯವಹಾರಕ್ಕೆ ಅಡಿಪಾಯ ಇಲ್ಲದ ಬೇಡಿಕೆ ಸೃಷ್ಟಿ:

ಚೀನಾ ಇಲ್ಲದ ಡಿಮ್ಯಾಂಡ್ ಅಥವಾ ಬೇಡಿಕೆಯನ್ನ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಮೇರಿಕಾದಲ್ಲಿ ಲೇಮನ್ ಬ್ರದರ್ ಬ್ಯಾಂಕ್ ಕುಸಿತಕ್ಕೆ ಪ್ರಮುಖ ಕಾರಣ ರಿಯಲ್ ಎಸ್ಟೇಟ್. ಅಲ್ಲಿ ನಿಂಜಾ ಸಾಲಗಳನ್ನ ನೀಡಲಾಯಿತು. ನಿಂಜಾ ಸಾಲ ಎಂದರೆ ನೋ ಇನ್ಕಮ್ ನೋ ಜಾಬ್ ಅಂಡ್ ಅಸೆಟ್ ಎಂದರ್ಥ. ಅಂದರೆ ಆದಾಯದ ಮೂಲವಿಲ್ಲದವರಿಗೆ, ಆಸ್ತಿಯಿಲ್ಲದವರಿಗೆ ಕೂಡ ಸಾಲವನ್ನ ಕೊಡಲಾಯಿತು. ಅವರಿಗೆ ಮನೆಯನ್ನ ನೋಂದಾವಣಿ ಮಾಡಿಕೊಟ್ಟು ಸಾಲವನ್ನ ಅವರ ತಲೆಗೆ ಕಟ್ಟಲಾಯಿತು. ಮುಂದೆ ಇಂತಹ ಸಾಲಗಾರರು ಕಂತನ್ನ ಕಟ್ಟಲಾಗದೆ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯಿತು. ಚೀನಾದಲ್ಲಿ ಈಗ ಆಗಿರುವ ಕಥೆ ಹೆಚ್ಚು ಕಡಿಮೆ ಇಂತಹುದು ಆದರೆ ನೇರವಾಗಿ ಜನತೆಯ ತಲೆಗೆ ಸಾಲವನ್ನ ಕಟ್ಟುವ ಬದಲು ಕಿಂಗ್ಸ್ ಗೋಲ್ಡ್ ನಂತಹ ಸಂಸ್ಥೆಗಳು ಈ ಕೆಲಸವನ್ನ ಮಾಡಿವೆ. ಗಮನಿಸಿ ಚೀನಾದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡಿ ಹೊಸ ನಗರಗಳನ್ನ ಸೃಷ್ಟಿಸಲಾಗಿದೆ. ಆದರೆ ನೆನಪಿಡಿ ಇದು ಕೇವಲ ವಸತಿ ಸಮುಚ್ಛಯವಲ್ಲ. ಇದೊಂದು ಪೂರ್ಣ ಪ್ರಮಾಣದ ನಗರಗಳ ನಿರ್ಮಾಣ. ಅಲ್ಲಿ ಎಲ್ಲವೂ ವಿಶ್ವ ದರ್ಜೆಯಲ್ಲಿದೆ. ಆದರೇನು ಇಂತಹ ನಗರಗಳಲ್ಲಿ ಅಂಗಡಿ, ಮನೆ ಕೊಳ್ಳಲು ಜನರು ಮುಂದೆ ಬರಲಿಲ್ಲ ಹೀಗಾಗಿ ಅತ್ಯುತ್ತಮ ಮಟ್ಟದಲ್ಲಿ ನಿರ್ಮಾವಾಗಿ ಕೂಡ ಜನರಿಲ್ಲದೆ ಇವುಗಳು ಘೋಸ್ಟ್ ಸಿಟಿಗಳು ಅಥವಾ ಸ್ಮಶಾನ ನಗರಗಳು ಎನ್ನಿಸಿಕೊಂಡಿದೆ. ಚೀನಾದಲ್ಲಿ ಇಂತಹ ಗೋಸ್ಟ್ ಸಿಟಿಗಳ ಪಟ್ಟಿ ದೊಡ್ಡದಿದೆ.

ಇಂತಹ ನಗರ ನಿರ್ಮಾಣಕ್ಕೆ ಬೇಕಾಗುವ ಹಣವನ್ನ ಬ್ಯಾಂಕಿಂಗ್ ವ್ಯವಸ್ಥೆ ಕೊಡಲು ಸಿದ್ಧವಿರಲಿಲ್ಲ ಹಾಗಾಗಿ ಹಣವನ್ನ ಶಾಡೋ ಬ್ಯಾಂಕಿಂಗ್ ಮೂಲಕ ಪಡೆಯಲಾಗಿದೆ:

ಮುಖ್ಯವಾಹಿನಿ ಹಣಕಾಸು ವ್ಯವಸ್ಥೆ ಬಿಟ್ಟು ಬೇರೆ ಮೂಲಗಳಿಂದ ಕೊಟ್ಟ ಸಾಲವನ್ನ ಶಾಡೋ ಬ್ಯಾಂಕಿಂಗ್ ಎಂದು ಕರೆಯಲಾಗುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಬ್ಯಾಂಕ್ ಅಲ್ಲದ ಇತರ ಹಣಕಾಸು ಸಂಸ್ಥೆಗಳ ಒಕ್ಕೂಟ ಸಾಲವನ್ನ, ಹಣದ ಹರಿವನ್ನ ವ್ಯವಸ್ಥೆಯಲ್ಲಿ ಹೆಚ್ಚು ಮಾಡುತ್ತವೆ. ಗಮನಿಸಿ ಈ ರೀತಿಯ ಹಣವನ್ನ, ಸಾಲವನ್ನ ಅವು ನೀಡುವಾಗ ಮುಖ್ಯವಾಹಿನಿ ಬ್ಯಾಂಕುಗಳು ಒಳಪಡುವ ನಿಬಂಧನೆಗಳಿಗೆ ಇವುಗಳು ಒಳಪಡುವುದಿಲ್ಲ.

ಉದಾಹರಣೆ ನೋಡೋಣ. ಚೀನಾದ ಸ್ಟೇಟ್ ಇನ್ಶೂರೆನ್ಸ್ ಕಂಪನಿ ಎನ್ನುವ ಸಂಸ್ಥೆ ಚೀನಾದ ಬ್ಯಾಂಕಿನಿಂದ ಸಾಲವನ್ನ ಪಡೆಯುತ್ತದೆ. ಇದು ಸಾಮನ್ಯವಾಗಿ ಶಾರ್ಟ್ ಟರ್ಮ್ ಲೋನ್. ಅದನ್ನ ಚೀನಾ ಸ್ಟೇಟ್ ಇನ್ಶೂರೆನ್ಸ್ ಕಂಪನಿ ಕಿಂಗ್ಸ್ ಗೋಲ್ಡ್ ಸಂಸ್ಥೆಗೆ ಸಾಲವಾಗಿ ಕೊಡುತ್ತದೆ. ಅಂದರೆ ಅದು ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಯಾರಿಗೆ ಸಾಲ ಸಿಗುವುದಿಲ್ಲ ಅವರಿಗೆ ಲಾಗ್ ಟರ್ಮ್ ಸಾಲವನ್ನ ನೀಡುತ್ತದೆ. ಅದು ಗೃಹ ಸಾಲ ಅಥವಾ ವಾಹನ ಸಾಲ ಅಥವಾ ಹೆಚ್ಚಿನ ಬಡ್ಡಿಗೆ ಕೆಲವು ಇಂಡಸ್ಟ್ರಿಗಳಿಗೆ ಕೂಡ ಸಾಲವನ್ನ ನೀಡುತ್ತದೆ. ಗಮನಿಸಿ ಮುಖ್ಯವಾಹಿನಿ ಬ್ಯಾಂಕ್ ನಿಂದ ಶಾರ್ಟ್ ಟರ್ಮ್ ಸಾಲ ಪಡೆದು ತನ್ನ ಗ್ರಾಹಕರಿಗೆ ಲಾಂಗ್ ಟರ್ಮ್ ಸಾಲ ಕೊಡುತ್ತಾರೆ. ಬ್ಯಾಂಕಿಗೆ ಹಣ ಮರಳಿಸಲು ಇನ್ನೊಂದು ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ ಅಥವಾ ಗ್ರಾಹಕರಿಂದ ಬರುವ ಕಂತಿನ ಹಣವನ್ನ ಬಳಸಿಕೊಳ್ಳುತ್ತಾರೆ. ಅಂದರೆ ಇವೆಲ್ಲ ಸಮಯಾಧಾರಿತ.

ಇದೊಂದು ಸರಪಳಿ ಇದ್ದಂತೆ. ಸರಪಳಿಯ ಒಂದು ತುಂಡು ಕಟ್ಟಾದರೆ ಅಲ್ಲಿಗೆ ಪೂರ್ಣ ವ್ಯವಸ್ಥೆ ಕುಸಿತ ಕಾಣುತ್ತದೆ ಚೀನಾ ಬ್ಯಾಂಕಿಂಗ್ ವಲಯದಲ್ಲಿ ಆಗಿರುವುದು ಇದೆ. ನೇರ ನೋಟದಲ್ಲಿ ಬ್ಯಾಂಕುಗಳು ಅಪಾಯಕಾರಿ ಸಂಸ್ಥೆ ಅಥವಾ ಜನರಿಗೆ ಸಾಲ ಕೊಟ್ಟಿಲ್ಲ ಎನ್ನಿಸುತ್ತದೆ. ಆದರೆ ಬ್ಯಾಂಕಿಂದ ಸಾಲ ಪಡೆದ ಇತರ ಹಣಕಾಸು ಸಂಸ್ಥೆಗಳು ಅದನ್ನ ಬೇಕಾಬಿಟ್ಟಿ ಕೊಟ್ಟು ವಸೂಲು ಮಾಡಲು ವಿಫಲವಾಗಿವೆ. ಅಲ್ಲದೆ ಇಂತಹ ಹಣ ಬಹುಮುಖ್ಯವಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆಯಾಗಿದೆ. ರಿಯಲ್ ಎಸ್ಟೇಟ್ ಕುಸಿತ ಕೂಡ ಅಪರೋಕ್ಷವಾಗಿ ಬ್ಯಾಂಕಿಂಗ್ ಕುಸಿತಕ್ಕೆ ಕಾರಣವಾಗಿದೆ, ಜೊತೆಗೆ ಚೀನಾದ ಇನ್ಶೂರೆನ್ಸ್ ಸಂಸ್ಥೆಗಳು ಕೂಡ ಇದರಿಂದ ಭಾರಿ ಹೊಡೆತ ತಿನ್ನಲಿವೆ.

ಕಿಂಗ್ಸ್ ಗೋಲ್ಡ್ ತನ್ನ ಕಂತನ್ನ ಕಟ್ಟಲು ವಿಫಲವಾಗಿದೆ ಏಕೆಂದರೆ ಅದು ತಾನು ಕೊಂಡ ಸಾಲವನ್ನ ಪೂರ್ತಿ ಇಂತಹ ನಗರಗಳ ನಿರ್ಮಾಣದಲ್ಲಿ ತೊಡಗಿಸಿತ್ತು. ಆದರೆ ಅವುಗಳು ಮಾರಾಟವಾಗದೆ ಸ್ಮಶಾನ ನಗರಗಳಾಗಿ ಮಾರ್ಪಟ್ಟಿದೆ. ಅಂದರೆ ಚೀನಾದ ಹಣ, ಹಣವಾಗಿ ಪರಿವರ್ತಿಸಲಾಗದ ಡೆಡ್ ಅಸೆಟ್ ನಲ್ಲಿ ಹೂಡಿಕೆಯಾಗಿದೆ. ಇದು ಸ್ಟೇಟ್ ಇನ್ಶೂರೆನ್ಸ್ ಸಂಸ್ಥೆಗಳಿಗೆ ಹೊಡೆತ ಬಿದ್ದಿದೆ. ಅವುಗಳು ಮುಖವಾಹಿನಿ ಬ್ಯಾಂಕಿಗೆ ಹಣ ಪಾವತಿಸಿಲ್ಲ. ಮುಖ್ಯ ವಾಹಿನಿ ಬ್ಯಾಂಕು ಒತ್ತೆಯಾಗಿ ನೀಡಿದ್ದ ಚಿನ್ನವನ್ನ ಮಾರಿ ತಮ್ಮ ಹಣವನ್ನ ವಸೂಲು ಮಾಡಲು ಮುಂದಾಗಿದ್ದಾರೆ ಆಗ ಅದು ನಿಜವಾದ ಚಿನ್ನವಲ್ಲ ನಕಲಿ ಚಿನ್ನ ಎನ್ನುವುದು ಬಯಲಾಗಿದೆ.

ವಿಶ್ವದಲ್ಲಿ ಆಗುವ ಸಣ್ಣ ಪುಟ್ಟ ಘಟನೆಗಳ ಮೇಲೆ ಕಣ್ಣಿಡುವ ಚೀನಾ ಸರಕಾರ ತನ್ನ ದೇಶದೊಳಗೆ ಆದ ಇಂತಹ ಅವ್ಯವಹಾರ ಗುರುತಿಸಲು ವಿಫಲವಾಯಿತೆ?

ಗಮನಿಸಿ ಕ್ರೋನಿಯಿಸಂ, ಅಂದರೆ ಮಿತ್ರರು ಮತ್ತು ಅಸೋಸಿಯೇಟ್ಸ್ ನಡುವೆ ಮಾಡುವ ತಾರತಮ್ಯ. ಕಿಂಗ್ಸ್ ಗೋಲ್ಡ್ ಸಂಸ್ಥೆ ಚೀನಾದ ಸೈನ್ಯದಲ್ಲಿರುವ ಅತ್ಯಂತ ಉನ್ನತ ಪದಾಧಿಕಾರಿಗಳ ಕೃಪಾಪೋಷಿತ ಸಂಸ್ಥೆ. ಬೇರೆ ಖಾಸಗಿ ಸಂಸ್ಥೆಗಳಿಗೆ ಸುಲಭವಾಗಿ ಸಿಗದ ಸವಲತ್ತು ಕಿಂಗ್ಸ್ ಗೋಲ್ಡ್ ಗೆ ಸಿಕ್ಕಿದೆ.

ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ಮತ್ತು ಬಲಿಷ್ಠ ಸದಸ್ಯರ ಅನುಮತಿಯಿಲ್ಲದೆ ಹುಲ್ಲುಕಡ್ಡಿ ಕೂಡ ಅಲುಗಾಡಲು ಸಾಧ್ಯವಿಲ್ಲ. ಇವರು ಇಂತಹ ವಿಷಯಗಳನ್ನ ಅತ್ಯಂತ ನಿಪುಣತೆಯಿಂದ ಮಾಡಿ ಮುಗಿಸುತ್ತಾರೆ. ಮುಖವಾಹಿನಿ ಬ್ಯಾಂಕಿಗೆ ನಿಜಕ್ಕೂ ಏನಾಗುತ್ತಿದೆ ಎನ್ನುವುದರ ಕಿಂಚಿತ್ತೂ ಅರಿವಿರುವುದಿಲ್ಲ. ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರವಾಗಿ ಬರೆದು ಪ್ಲಾನ್ ತಯಾರಿಸಲಾಗುತ್ತದೆ. ಅದನ್ನ ಕಾರ್ಯರೂಪಕ್ಕೆ ತರಲು ಇನ್ನೊಂದು ಗುಂಪು ತಯಾರಾಗಿರುತ್ತದೆ. ಎಲ್ಲರಿಗೂ ಪೂರ್ಣ ಮಾಹಿತಿ ತಿಳಿಯುವುದೇ ಇಲ್ಲ. ಅವರು ಮಾಡಬೇಕಾದ ಕಾರ್ಯದ ರೂಪುರೇಷೆ ಮಾತ್ರ ಅವರಿಗೆ ನೀಡಲಾಗುತ್ತದೆ.

ಚೀನಾದ ಕಮ್ಯುನಿಸ್ಟ್ ಸರಕಾರ ಜಗತ್ತಿನ ದೊಡ್ಡಣ್ಣನಾಗಲು ಮಾಡಿದ ಎಲ್ಲಾ ಮಾಸ್ಟರ್ ಪ್ಲಾನ್ಗಳು ಕೂಡ ಹೀಗೆ ನಡೆದು ಬಂದದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಹಲವಾರು ಪ್ಲಾನ್ ಗಳನ್ನ ತಮ್ಮಿಚ್ಛೆಗೆ ತಕ್ಕಂತೆ ಕಾರ್ಯರೂಪಕ್ಕೆ ತಂದ ಚೀನಾ ತನ್ನ ದೇಶದಲ್ಲಿ ಪ್ಲಾನ್ ಒಂದನ್ನ ಸರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆ. ಅದಕ್ಕೆ ಕಾರಣ ಅಲ್ಲಿನ ಜನ ಹೊಸ ಮನೆಗಳನ್ನ ಕೊಳ್ಳದೆ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದು. ನಿಜವಾಗಿ ಅವರಿಗೂ ಬೇಡವಾಗಿತ್ತು. ಆದರೆ ಸರಕಾರ ಅವರು ಕೊಳ್ಳದಿದ್ದರೇನಂತೆ ನಾನು ಮಾರುತ್ತೇನೆ ಎನ್ನುವ ಹುಚ್ಚು ಹುಮ್ಮಸ್ಸಿನಿಂದ ಎಡವಿದೆ.

ಇದನ್ನ ಚೀನಾ ಸರಕಾರ ಮನಸ್ಸು ಮಾಡಿದ್ದರೆ ಮುಚ್ಚಿ ಹಾಕಬಹುದಿತ್ತು? ಆದರೆ ತನ್ನ ಹುಳುಕನ್ನ ಜಗಜ್ಜಾಹೀರು ಮಾಡುವ ಉದ್ದೇಶವೇನಿರಬಹುದು?

ಗಮನಿಸಿ ಚಿನ್ನವನ್ನ ತನ್ನ ಅಧೀನಕ್ಕೆ ತೆಗೆದುಕೊಂಡು ಮಾರಲು ಹೋದ ಬ್ಯಾಂಕು ಚೀನಾ ದೇಶಕ್ಕೆ ಸೇರಿದ್ದು ಅದು ಬೇರಾವುದೋ ಅಂತಾರಾಷ್ಟ್ರೀಯ ಬ್ಯಾಂಕ್ ಅಲ್ಲ. ಚೀನಾ ಸರಕಾರ ಮನಸ್ಸು ಮಾಡಿದ್ದರೆ,  1. ಕಿಂಗ್ಸ್ ಗೋಲ್ಡ್ ಚಿನ್ನವನ್ನ ನಕಲಿ ಎಂದು ಹೇಳಲು ಬಿಡದಂತೆ ತಡೆಯಬಹುದಾಗಿತ್ತು.  2. ರಾತ್ರಿ ಕಳೆದು ಬೆಳಕಾಗುವುದರಲ್ಲಿ ನಕಲಿ ಚಿನ್ನದ ಜಾಗದಲ್ಲಿ ಅಸಲಿ ಚಿನ್ನವನ್ನ ಇಡಬಹುದಿತ್ತು.  ಆದರೆ ಚೀನಾ ಸರಕಾರ ಹಾಗೆ ಮಾಡದೆ ಈ ವಿಷಯವನ್ನ ಜಗತ್ತಿನ ಮುಂದೆ ಇಟ್ಟಿದೆ. ಇದಕ್ಕೆ ಪ್ರಮುಖವಾಗಿ ಕಾರಣಗಳು ಹೀಗಿವೆ.

  1. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ನೀಡಿರುವ ಸಾಲವನ್ನ ಮನ್ನಾ ಮಾಡುವಂತೆ ಬಹಳಷ್ಟು ದೇಶಗಳು ಹಿಂದೆ ಬಿದ್ದಿವೆ. ಇನ್ನಷ್ಟು ದೇಶಗಳು ನಮ್ಮಿಂದ ಸಾಲ ವಾಪಸ್ಸು ಕೊಡಲು ಸಾಧ್ಯವಿಲ್ಲ. ನಾವು ಪುನರ್ಜಿವನ ನಡೆಸಲು ಮತ್ತಷ್ಟು ಹೊಸ ಸಾಲ ನೀಡು ಎಂದು ದುಂಬಾಲು ಬಿದ್ದಿವೆ. ಅಂತಹ ರಾಷ್ಟ್ರಗಳಿಗೆ ನನ್ನ ಬಳಿಯೂ ದುಡ್ಡಿಲ್ಲ ಎನ್ನುವ ಸಂದೇಶ ನೀಡುವುದು.
  2. ಲೇಮನ್ ಬ್ರದರ್ ರೀತಿಯಲ್ಲಿ ತನ್ನ ಬ್ಯಾಂಕಿಂಗ್ ವ್ಯವಸ್ಥೆಯನ್ನ ಕುಸಿಯುವಂತೆ ಮಾಡಬಲ್ಲೆ ಎಂದು ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸಂದೇಶ ನೀಡುವುದು. ಗಮನಿಸಿ ಕೇವಲ ಒಂದು ಕಿಂಗ್ಸ್ ಗೋಲ್ಡ್ ಕುಸಿತ ಚೀನಾದ ಒಟ್ಟು ಚಿನ್ನದ ನಾಲ್ಕು ಪ್ರತಿಶತ ನಕಲಿ ಎಂದಾದರೆ ಉಳಿದವುಗಳ ಗತಿಯೇನು? ಒಮ್ಮೆ ಚೀನಾದ ಬ್ಯಾಂಕಿಂಗ್ ವ್ಯವಸ್ಥೆ ಪೂರ್ಣ ಕುಸಿದರೆ ಅದು ವಿಶ್ವದ ಎಲ್ಲಾ ದೇಶಗಳನ್ನೂ ಮತ್ತೊಮ್ಮೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಚೀನಾದ ಪುಟ್ಟ ಬ್ಲಾಕ್ ಮೇಲ್ ತಂತ್ರ ಎಂದು ಕೂಡ ಹೇಳಬಹುದು.
  3. ಜಗತ್ತಿನ ಹೆಚ್ಚು ಹೆಚ್ಚು ದೇಶಗಳು ಚೀನಾದ ವಿರುದ್ಧ ಒಂದಾಗುತ್ತಿರುವುದು ಚೀನಾಗೆ ನುಂಗಲಾಗದ ತುತ್ತಾಗಿದೆ. ಕಳೆದ ವಾರವಷ್ಟೇ ಅಮೇರಿಕಾ-ಭಾರತ-ಆಸ್ಟ್ರೇಲಿಯಾ ದೇಶಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ಕೂಡ ಮಾಡಿವೆ. ಜಗತ್ತಿನ ಮಾಧ್ಯಮದ ದೃಷ್ಟಿಯನ್ನ ಅತ್ತಲಿಂದ ಬದಲಿಸಿ ಬೇರೆಡೆಗೆ ಸೆಳೆಯುವ ಉದ್ದೇಶ ಕೂಡ ಇದ್ದಿರಬಹುದು. 
  4. ತನ್ನ ಇನ್ಶೂರೆನ್ಸ್ ಕಂಪನಿಗಳ ಹಣವನ್ನ ಕಬಳಿಸುವ ಉದ್ದೇಶ ಕೂಡ ಇರಬಹುದು. ನೆನಪಿರಲಿ ಅಪರೋಕ್ಷವಾಗಿ ಇದು ಜನರ ದುಡ್ಡು.

ಮುಂದೇನು?: ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದ್ದಿರುವ ಈ ಧೋಳು ನಿಧಾನವಾಗಿ ನೆಲಕ್ಕೆ ಇಳಿಯಬೇಕಿದೆ. ಇದಕ್ಕೆ ಕನಿಷ್ಟ ಒಂದೆರೆಡು ವರ್ಷಗಳು ಬೇಕಾಗುತ್ತವೆ. ಇದು ಇಲ್ಲಿಯವರೆಗೆ ಆಗಿರುವ ಡ್ಯಾಮೇಜ್ ಅಂದಾಜಿಸಿ ಊಹಿಸಿದ ಸಮಯ. ನಾಳೆ ಚೀನಾ ಮತ್ತೆ ಹೊಸ ಬಾಣವನ್ನ ತನ್ನ ಬತ್ತಳಿಕೆಯಿಂದ ತೆಗೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇಲ್ಲ. ಹೀಗಾಗಿ ಮುಂಬರುವ ಒಂದೆರೆಡು ವರ್ಷ ಅನಿಶ್ಚಿತತೆ ಎನ್ನುವುದೊಂದೆ ನಿಶ್ಚಿತ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com