ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು- ಹೆಚ್ ಡಿ ದೇವೇಗೌಡ-ಧರ್ಮೇಂದ್ರ ಪ್ರಧಾನ್ ಭೇಟಿ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು- ಹೆಚ್ ಡಿ ದೇವೇಗೌಡ-ಧರ್ಮೇಂದ್ರ ಪ್ರಧಾನ್ ಭೇಟಿ

ಚುನಾವಣಾ ಚದುರಂಗ: ಚುನಾವಣೆಗೆ ಇರುವ ಆದ್ಯತೆ ಆಡಳಿತಕ್ಕೂ ಇದ್ದಿದ್ದರೆ..? (ಅಂತಃಪುರದ ಸುದ್ದಿಗಳು)

ಒಂದು ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಹೇಗೆ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರಬೇಕು ಎಂಬ ಇತಿಹಾಸವನ್ನ ಕರ್ನಾಟಕ ರಾಜಕೀಯದಲ್ಲಿ ಸೃಷ್ಟಿಸಿರುವುದು ಜೆಡಿಎಸ್. 

ಒಂದು ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಹೇಗೆ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರಬೇಕು ಎಂಬ ಇತಿಹಾಸವನ್ನ ಕರ್ನಾಟಕ ರಾಜಕೀಯದಲ್ಲಿ ಸೃಷ್ಟಿಸಿರುವುದು ಜೆಡಿಎಸ್. ಎಷ್ಟೇ ಬಾರಿ “ಇದು ಕೊನೆ ಚುನಾವಣೆ” ಎಂದು ಜೆಡಿಎಸ್ ನಾಯಕರು ಹೇಳುತ್ತಾ, ಪಕ್ಷವನ್ನ ಮತಗಳನ್ನ ಒಗ್ಗೂಡಿಸಲು ಪ್ರಯತ್ನಿಸಿದರೂ ಮತ್ತೆ ಇಡೀ ಪಕ್ಷವನ್ನ ಬಲವರ್ಧನೆ ಮಾಡಲು ಮಾಜಿ ಪ್ರಧಾನಿಗಳೇ ಬರಬೇಕು. ಕರ್ನಾಟಕದಲ್ಲಿ ಐವತ್ತರ ಗಡಿ ದಾಟದಿದ್ದರೂ, ಕಿಂಗ್ ಮೇಕರ್ ಅಗವುದು ಹೇಗೆ ಎಂಬುದಕ್ಕೆ ಜೆಡಿಎಸ್ ಸ್ಪಷ್ಟ ನಿದರ್ಶನ.

ಹೇಗೆ ಮೈತ್ರಿಯ ಬಾಗಿಲನ್ನು ದೇವೇಗೌಡರು ಸದಾ ತೆರೆದಿಡುತ್ತಾರೋ, ಹಾಗೆ ಸಂಧಾನದ ಬಾಗಿಲನ್ನು ವಿಶೇಷವಾಗಿ ಬಿಜೆಪಿ ತಯಾರಿಸಿ ಸಿದ್ಧಪಡಿಸಿದೆ. ಕಳೆದ 2 ತಿಂಗಳಿಂದ ಪ್ರಧಾನಿ ಆದಿಯಾಗಿ, ಎಲ್ಲಾ ಕೇಂದ್ರ ಮಂತ್ರಿಗಳೂ ದೇವೇಗೌಡರನ್ನು ಭೇಟಿ ಮಾಡಿದರು. ಕೆಲವರು ಸ್ವಯಂ ಪ್ರೇರಿತರಾಗಿ, ಇನ್ನಷ್ಟು ಜನ ಎಚ್ ಡಿ ಡಿ ಅವರ ಸಮಯ ಕೋರಿರುವ ಆಧಾರದ ಮೇಲೆ ಭೇಟಿ ಮಾಡಿದರು. ಇನ್ನು ಗಡ್ಕರಿ, ಧರ್ಮೇಂದ್ರ ಪ್ರಧಾನ್ ಕೇವಲ ಆಡಳಿತಾತ್ಮಕ ವಿಚಾರಕ್ಕೆ ಭೇಟಿ ಮಾಡಿರುತ್ತಾರೆ ಎನ್ನಲಾಗುತ್ತಾ?. ಒಟ್ಟಿನಲ್ಲಿ ಚುನಾವಣೆ ಬರುವುದಕ್ಕೂ ಈ ಬೆಳವಣಿಗೆ ನಡೆಯುವುದಕ್ಕೂ ಕೇವಲ ಕಾಕತಾಳೀಯ ಎನ್ನಲು ಸಾಧ್ಯ ಇಲ್ಲ ಅಲ್ವಾ...?

ದೀದಿ ಮುಂದಿನ ನಡೆಯನ್ನು ಸೂಚಿಸಲು ದೆಹಲಿಗೆ ಬಂದರು,

ಕೆಸಿಆರ್, ಟಿ ಆರ್ ಎಸ್ ಕಛೇರಿಯನ್ನೇ ದೆಹಲಿಯಲ್ಲಿ ತೆರೆದರು.

ತೃತೀಯ ರಂಗ ಇನ್ನೇನು ಆಗೇ ಹೋಯಿತು, ಅದರಲ್ಲಿ ರಂಗಕ್ಕೆ ಕಾಣುವ ಸಮರ್ಥರೊಬ್ಬರು ಪ್ರಧಾನಿ ಆಗೆ ಬಿಡುತ್ತಾರೆ ಎಂಬ ಗುಮಾನಿ ಚರ್ಚೆಗೆ ಬರುತ್ತಲೇ ಇದೆ. ಆದರೆ ಅದು ಸತ್ಯವಾಗಿ ಭೂಮಿಯನ್ನು ಎಂದೂ ಅಪ್ಪಳಿಸಲೆ ಇಲ್ಲ, ಆದರೆ ಈ ಬಾರಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವಾಗ ದೆಹಲಿಗೆ ಹೋದರೊ ಮತ್ತೆ ಚರ್ಚೆ ರೆಕ್ಕೆ ಪಡೆದು ಹಾರುತ್ತಿದೆ. ಈ ಬಾರಿ ಇದಕ್ಕೆ ಹೊಸ ಆಯಾಮ ಸಿಕ್ಕಿರೋದು ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್  ದೆಹಲಿಯಲ್ಲಿ ಟಿ ಆರ್ ಎಸ್ ಕಛೇರಿ ತೆರೆಯುತ್ತಿರುವುದರ ಕುರಿತು. ಹಾಗಾದ್ರೆ ಇನ್ನೇನು ತೃತೀಯ ರಂಗ ಬಂದೆ ಬಿಡ್ತು ಅನ್ನುವ ಯೋಚನೆ ನಿಮ್ಮದು. ಬಟ್ ಕಹಾನಿ ಮೇ ಟ್ವಿಸ್ಟ್ ಹೈ.

ಟಿ ಆರ್ ಎಸ್ ದೆಹಲಿಯಲ್ಲಿ ಕಛೇರಿ ಆರಂಭಿಸಿ ನಾವು ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತ ಎಂದು ಹೇಳುತ್ತಿರುವುದು ತೃತೀಯ ರಂಗ ಸೇರಲು ಅಲ್ಲ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಿ ಬಿಜೆಪಿ ಪರೋಕ್ಷವಾಗಿ ಬೆಂಬಲಿಸಲು!!. ಆಶ್ಚರ್ಯ ಎಂದರೆ ತೃತೀಯ ರಂಗದ ದಕ್ಷಿಣದ ಮೊದಲ ರೂವಾರಿ ಹೀಗೆ ಬದಲಾಗಿದ್ದು.

17 ಸಂಸದರನ್ನು ಹೊಂದಿರುವ ಟಿ ಆರ್ ಎಸ್ ನಮಗೇನು ಹೇಳಿಕೊಡುವುದು ಎಂಬ ದೀದಿ ಮಾತು ಇಡೀ ರಾಜಕೀಯ ಚೌಕಟ್ಟನ್ನೇ ತಿದ್ದುವಂತೆಮಾಡಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬರಲು ಬಿಡಬಾರದು ಕೇಂದ್ರದಲ್ಲಿ ದೀದಿ ಬೆಳೆಯಲು ಬಿಡಬಾರದು ಎಂದು ಬಿಜೆಪಿ ಟಿ.ಆರ್.ಎಸ್ ನ ಹೊಸ ರಣ ನೀತಿ ಸ್ವಾರಸ್ಯಕರವಾಗಿ ಕಾಣುತ್ತಿದೆ. ಅದು ಗ್ರೌಂಡ್ ನಲ್ಲಿ ಹೇಗೆ ಸ್ವೀಕರವಾಗುತ್ತೆ ಎಂದು ಕಾದು ನೋಡಬೇಕು.

ಗೋವಾ ಆಗಲಿ ಯುಪಿ ಆಗಲೀ ಸದ್ಯಕ್ಕೆ ಚುನಾವಣಾ ರಾಜ್ಯಗಳಲ್ಲಿ ಬಿಜೆಪಿಗೆ ಕನ್ನಡಿಗರೇ ಕಣ್ಮಣಿಗಳು.

ಒಂದು ಸಂಘಟನೆ ಇವತ್ತಿನ ದಿನಗಳಲ್ಲಿ ಚುನಾವಣೆ ತಯಾರಿಯನ್ನು ಹೇಗೆ ನಡೆಸಬೇಕು ಎಂಬುದರ ಸ್ಪಷ್ಟತೆಗೆ ಉದಾಹರಣೆ ಆಪ್ ಮತ್ತು ಬಿಜೆಪಿ. ಇದೇ ವರ್ಷ ನವೆಂಬರ್ ನಲ್ಲಿ ಗೋವಾ, ಮುಂದಿನ ವರ್ಷ ಮಾರ್ಚ್ ನಲ್ಲಿ ಯು.ಪಿ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ತಯಾರಿ ನಡೆಸಿರುವ ಬಿಜೆಪಿ ಆರ್ ಎಸ್ ಎಸ್ ಎರಡೂ ಕಡೆ ಸಂಘಟಾತ್ಮಕವಾಗಿ ಕನ್ನಡಿಗರನ್ನ ತೊಡಗಿಸಿಕೊಂಡಿದೆ. ಇತ್ತ ಸಿ.ಟಿ ರವಿ ಗೋವಾ ನಿರ್ವಹಿಸಿದರೆ ಅತ್ತ ಆರ್ ಎಸ್ ಎಸ್  ನ ಸರಕಾರ್ಯವ ದತ್ತಾತ್ರೇಯ ಹೊಸಬಾಳೆಯವರು ಯು.ಪಿ. ಚುನಾವಣೆಯಲ್ಲಿ ಸಂಘಟನೆ ದೃಷ್ಟಿಯಿಂದ ಹೆಚ್ಚಿನ ಪಾತ್ರ ವಹಿಸಲಿದ್ದಾರೆ.

ಮುಂದೆ ಲೋಕಸಭೆ ಚುನಾವಣೆಗೆ ಆರ್ ಎಸ್ ಎಸ್ ನ ಉತ್ತರದಲ್ಲಿ ಸಂಘಟಿಸಲು ಕನ್ನಡಿಗರಲ್ಲಿ ದತ್ತಾತ್ರೇಯ ಹೊಸಬಾಳೆ, ದಕ್ಷಿಣದಲ್ಲಿ ಬಿಜಿಪಿ ಸಂಘಟಿಸಲು  ಸಿ.ಟಿ ರವಿ ತೊಡಗಿಸಿಕೊಳ್ಳಲಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಬಿ.ಎಲ್ ಸಂತೋಷ್ ಮಾರ್ಗದರ್ಶನದಲ್ಲಿ ಸಿ.ಟಿ ರವಿ ಮಹತ್ವದ ಜವಾಬ್ದಾರಿಯನ್ನ ನಿರ್ವಹಿಸುವಲ್ಲಿ ಸಂದೇಹವೇ ಇಲ್ಲ..!!

ಪ್ರಥಮ ಪ್ರಜೆಯಾಗಲು ಪ್ರಥಮ ಹೆಜ್ಜೆ ಇಟ್ಟಾಯಿತು

ಮುಂದಿನ ವರ್ಷ ನಡೆಯುವ ಭಾರತ ದೇಶದ ರಾಷ್ಟ್ರಪತಿಯ ಚುನಾವಣೆಗೆ ಈಗಾಗಲೇ ಯಾರಿಗೂ ತಿಳಿಯದ ಹಾಗೆ ತಯಾರಿ ನಡೆಸುತ್ತಿದ್ದಾರೆ ಉಪ ರಾಷ್ಟ್ರಪತಿ ಆದ ವೆಂಕಯ್ಯ ನಾಯ್ಡು.

ತಮ್ಮ ಮನೆಗೆ ಬಂದ ಆಪ್ತರಿಗೆ, ವೆಂಕಯ್ಯ ನಾಯ್ಡು  ದೇಶದ ಮೊದಲ ಉಪರಾಷ್ಟ್ರಪತಿಯಾದ ಸರ್ವೆಪಲ್ಲಿ ರಾಧಾಕೃಷ್ಣನ್ ರಿಂದ ನಿಕಟಪೂರ್ವ ಹಮೀದ್ ಅನ್ಸಾರಿವರೆಗೂ ಎಲ್ಲರ ಚಿತ್ರಪಟ ತೋರಿಸುತ್ತಿದ್ದರಂತೆ. ಅದರಲ್ಲೇನು ವಿಶೇಷ ಅಂದುಕೊಂಡ್ರಾ?

ಸರದಿಯಲ್ಲಿ ಮೊದಲ ಮೂರು ಉಪರಾಷ್ಟ್ರಪತಿಗಳು, ರಾಷ್ಟ್ರಪತಿ ಆದವರು. ನಂತರ ಬರುವ ಮೂವರು ಉಪರಾಷ್ಟ್ರಪತಿಗಳು  ರಾಷ್ಟ್ರಪತಿ ಆಗಲಿಲ್ಲ. "ಇದು ಹಿಂದಿನಿಂದ ನಡೆದು ಬಂದ ಒಂದು pattern".  ನಿಕಟಪೂರ್ವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಬೈರೋನ್ ಸಿಂಗ್ ಶೇಖಾವತ್, ಕೃಷ್ಣ ಕಾಂತ್ ರಾಷ್ಟ್ರಪತಿ ಆಗಲಿಲ್ಲ ಆದರೆ ಅವರಿಗೂ ಮುನ್ನ ಉಪರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ್ದ ಕೆ.ಆರ್ ನಾರಾಯಣ್, ಶಂಕರ್ ದಯಾಳ್ ಶರ್ಮಾ, ರಾಮಸ್ವಾಮಿ ವೆಂಕಟರಾಮನ್ ಸರದಿಯಲ್ಲಿ ಮೂವರು ರಾಷ್ಟ್ರಪತಿ ಆದರು. ಹೀಗೆ ಕಳೆದ 69 ವರ್ಷಗಳಿಂದ ನಡೆದು ಬಂದ cycle ಬಗ್ಗೆ ವಿವರಿಸುತ್ತಾ ಮುಂದಿನ ರಾಷ್ಟ್ರಪತಿ ನಾನೇ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಅದೂ ನೆನ್ನೆ ಮೊನ್ನೆಯಿಂದಲ್ಲ, ಕಳೆದ 3 ವರ್ಷದಿಂದ ರವಾನಿಸುತ್ತಲೇ ಇದ್ದಾರೆ.

ಕೇವಲ ಇಷ್ಟು ಹೇಳಿ ಸುಮ್ಮನೆ ಆಗದ ವೆಂಕಯ್ಯ ನಾಯ್ಡು ದೇಶದ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಒಂದು ವಾರ ಪ್ರವಾಸ ಹಮ್ಮಿಕೊಳ್ಳುತ್ತಿದ್ದಾರೆ. ಈ ಹಿಂದೆ ರಾಷ್ಟ್ರಪತಿ ಚುನಾವಣೆಗೂ ಮುನ್ನ ಪ್ರಣಬ್ ಮುಖರ್ಜೀ ಅವರು ಮಾಡಿದ್ದು ಇದನ್ನೇ. ಯಾವಾಗ ಪ್ರಧಾನಿ ಹುದ್ದೆ ಕೈತಪ್ಪಿ ಹೋಯಿತೋ, 3ನೇ ಪ್ರಜೆ ಆಗದೇ ಇದ್ದರೆ ಏನಂತೆ, ಮೊದಲನೇ ಪ್ರಜೆ ಆಗಲು ಹೀಗೆ campaign ಮಾಡಿದ್ದರು. ರಾಷ್ಟ್ರಪತಿಗಳ ಚುನಾವಣೆಯಲ್ಲಿ ಶಾಸಕರು ಸಂಸದರಿಗೆ ಮತ ಹಾಕುವ ಹಕ್ಕು ಇರುವ ಕಾರಣ, ಪ್ರಣಬ್ ದಾ ಕಾಂಗ್ರೆಸ್ ಮತ್ತು ಕಾಂಗ್ರೇಸ್ಸೇತರ ಆಡಳಿತ ಇರುವ ರಾಜ್ಯಗಳ ಮನವೊಲಿಸಿಕೊಂಡರು.  ಕೊನೆಗೆ ಸೋನಿಯಾ ಗಾಂಧಿಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಪ್ರಣಬ್ ಮುಖರ್ಜಿ ಆಯ್ಕೆ ಮಾಡಬೇಕಾಯಿತು. ನಂತರ ಗೆದ್ದು ರಾಷ್ಟ್ರಪತಿಗಳೂ ಆದರೂ. ಅದೇ ತಂತ್ರವನ್ನು ವೆಂಕಯ್ಯ ನಾಯ್ಡು ಬಳಸುತ್ತಿದ್ದಾರೆ. ಆದರೆ ಇದು ಮೋದಿ-ಅಮಿತ್ ಶಾ ಇರುವ ಕಾಲಘಟ್ಟದಲ್ಲಿ ನಡೆಯುತ್ತಾ? ನೋಡಬೇಕಿದೆ...

ಸ್ವಾತಿ ಚಂದ್ರಶೇಖರ್

swathichandrashekar92@gmail.com

Related Stories

No stories found.

Advertisement

X
Kannada Prabha
www.kannadaprabha.com