ತಪ್ಪು ಹೆಜ್ಜೆಗಳ ಸುಳಿಯಲ್ಲಿ ಜೆಡಿಎಸ್! (ನೇರ ನೋಟ)

ಕೂಡ್ಲಿ ಗುರುರಾಜಪದೇಪದೇ ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿರುವ ಪಕ್ಷ ಅದು. ನಿರ್ಣಾಯಕ ಸಮಯದಲ್ಲಿ ತನ್ನ ಮತದಾರರ ಆಶಯಕ್ಕೆ ವಿರುದ್ಧವಾಗಿ ಹೆಜ್ಜೆ ಇಟ್ಟು ನಂತರ ಪರಿತಪಿಸುವ ಪಕ್ಷವದು.
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಪದೇಪದೇ ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿರುವ ಪಕ್ಷ ಅದು. ನಿರ್ಣಾಯಕ ಸಮಯದಲ್ಲಿ ತನ್ನ ಮತದಾರರ ಆಶಯಕ್ಕೆ ವಿರುದ್ಧವಾಗಿ ಹೆಜ್ಜೆ ಇಟ್ಟು ನಂತರ ಪರಿತಪಿಸುವ ಪಕ್ಷವದು. ಎಷ್ಟೋ ಬಾರಿ ಅದು ಸ್ವಯಂಕೃತ ಅಪರಾಧ. ಆ ಪಕ್ಷ  ಕರ್ನಾಟಕದ ಜಾತ್ಯತೀತ ಜನತಾದಳ ಅರ್ಥಾತ್ ಜೆಡಿಎಸ್.

ರಾಷ್ಟ್ರದಲ್ಲಿ ಜನತಾ ಪರಿವಾರದ  ದಳಗಳು ಉದುರಿ ಅಲ್ಲೊಂದು ಇಲ್ಲೊಂದು ಇನ್ನೂ ಹಸಿರಾಗಿ ನಿಂತಿವೆ. ಆಯಾ ರಾಜ್ಯಗಳಲ್ಲಿ ಆಳ್ವಿಕೆಯನ್ನೂ ನಡೆಸಿವೆ. ಬಿಹಾರ ಮತ್ತು ಒರಿಸ್ಸಾದಲ್ಲಿ ಅಧಿಕಾರ ಸೂತ್ರವನ್ನೂ ಹಿಡಿದಿವೆ. ಬಿಹಾರದಲ್ಲಿ ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಒರಿಸ್ಸಾದಲ್ಲಿ ಬಿಜು ಜನತಾದಳ ಇದ್ದರೆ ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷಗಳೊಂದಿಗೆ ಅಧಿಕಾರದ ಚೌಕಾಶಿ ರಾಜಕಾರಣದಲ್ಲಿ ತನ್ನ ದಾಳ ಉರುಳಿಸುತ್ತಾ ಬಂದು ಪ್ರಾದೇಶಿಕ ಪಕ್ಷದ ಉಳಿವಿನ ಮಂತ್ರ ಜಪಿಸುತ್ತಿದೆ.

ಗೌಡರು ಕಟ್ಟಿದ ಪ್ರಾದೇಶಿಕ ಪಕ್ಷ
ಕರ್ನಾಟಕದಲ್ಲಿ ಆಗಿನ್ನೂ ಬಿಜೆಪಿ ಪ್ರಬಲವಾಗಿರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಕಾಂಗ್ರೆಸ್‌ಗೆ ಸಡ್ಡು ಹೊಡೆದು ಪಕ್ಷ ಕಟ್ಟಿ ಅಧಿಕಾರಕ್ಕೆ ಏರಿದ್ದು ಜನತಾ ಪಕ್ಷ, ಜನತಾ ದಳ. ಆದರೆ, ಅಧಿಕಾರಕ್ಕೆ ಏರಿದ ನಂತರ ಜನತಾ ಪರಿವಾರದ ನಾಯಕರಿಗೆ ಪರಸ್ಪರ ಜಗಳ ಎಂಬುದು ಒಂದು ಅಂಟುಜಾಡ್ಯವಿದ್ದಂತೆ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಚ್.ಡಿ. ದೇವೇಗೌಡರ ನಡುವಿನ ಸುದೀರ್ಘ ರಾಜಕೀಯ ಕದನ ಜನತಾ ಪರಿವಾರದ ಅವನತಿಗೆ ಮುನ್ನುಡಿ ಬರೆಯಿತು. ಜನತಾ ಪರಿವಾರದ ಯಾದವಿ ಕಲಹಕ್ಕೆ ರಾಷ್ಟ್ರ ರಾಜಕಾರಣದಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿಯೇ ಬಲಿಯಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಹೆಗಡೆ ಅವರ ನಿಧನದ ನಂತರ ಕರ್ನಾಟಕದಲ್ಲಿ ಜೆಡಿಯು ರಾಜಕೀಯವಾಗಿಯೇ ನೆಲಕಚ್ಚಿತು. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವರ್ಚಸ್ಸು, ಚಾಣಾಕ್ಷ್ಯತನ, ಸತತ ಪರಿಶ್ರಮದಿಂದ ಜೆಡಿಎಸ್ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರ ಹೊಮ್ಮಿತು. ಆದರೆ, ಈ ಪ್ರಾಬಲ್ಯವನ್ನು ವಿಸ್ತರಿಸುವುದಿರಲಿ, ಉಳಿಸಿಕೊಳ್ಳುವಲ್ಲಿಯೂ ಆ ಪಕ್ಷ  ಸೋಲುತ್ತಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳೇ ಆಳ್ವಿಕೆ ನಡೆಸುತ್ತಿದೆ. ಜೆಡಿಎಸ್‌ಗೂ ಅಷ್ಟೇ. ತಳಮಟ್ಟದಲ್ಲಿ ಬದ್ಥತೆಯ ಕಾರ್ಯಕರ್ತರಿದ್ದಾರೆ. ಪ್ರತಿಫಲವನ್ನು ನಿರೀಕ್ಷಿಸದೇ ದುಡಿಯುವ ಸೇನಾನಿಗಳೇ ಇದ್ದಾರೆ. ಹಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಅವರ ಪುತ್ರ ಕುಮಾರಸ್ವಾಮಿ ಅವರ ನಾಯಕತ್ವವನ್ನು ಹಿಂಬಾಲಿಸುವವರ  ದೊಡ್ಡ ಪಡೆಯೇ ಇದೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದಲ್ಲಿ ಇವತ್ತಿಗೂ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರೇ ನಾಯಕರು. ಆದರೆ, ಅವರ ಈ ನಾಯಕತ್ವ ಗಟ್ಟಿಯಾಗಿ ಮುಂದುವರಿಯಬೇಕಾದರೆ ಸ್ಥಳೀಯ ಮಟ್ಟದಲ್ಲಿರುವ ಒಕ್ಕಲಿಗ ಸಮಾಜದ ಪ್ರಬಲ ನಾಯಕರ ವಿಶ್ವಾಸವನ್ನು ಹಿಡಿದಿಟ್ಟುಕೊಳ್ಳಬೇಕು. ಜೆಡಿಎಸ್ ವರಿಷ್ಠರು ಇಲ್ಲಿ ಸೋಲುತ್ತಿದ್ದಾರೆ.
 
ಅಂತಃಕರಣದ ರಾಜಕಾರಣಿ, ಆದರೆ...
ಮಾಜಿ ಸಿಎಂ ಕುಮಾರಸ್ವಾಮಿ ಅಂತಃಕರಣದ ರಾಜಕಾರಣಿ. ಬಡವರ ಸಂಕಷ್ಟಕ್ಕೆ ಕರಗಿ ಕಣ್ಣೀರಾಗುವ ಹೆಂಗರಳು ಅವರದು. ಜನಸಮೂಹವನ್ನು ಆಕರ್ಷಿಸಬಲ್ಲರು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದ ಮತದಾರರಲ್ಲಿ ಅವರ ವರ್ಚಸ್ಸು ಸ್ವಲ್ಪ ಮಸುಕಾಗಿದ್ದರೂ ಕಳೆಗುಂದಿಲ್ಲ. ಆದರೆ, ಈ ಮತದಾರರ ಆಶಯಕ್ಕೆ ಪೂರಕವಾಗಿ ರಾಜಕೀಯವಾಗಿ ಹೆಜ್ಜೆ ಇಡಲು ಕುಮಾರಸ್ವಾಮಿ ಅವರಿಗೆ ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಇದಕ್ಕಾಗಿ ಅವರು ಬೆಲೆ ತೆರುತ್ತಿದ್ದಾರೆ.

ತಮ್ಮ ಬೆಂಬಲಿಗ ಶಾಸಕರ ಮಧ್ಯೆ ಪರಸ್ಪರ ಮುಸುಕಿನ ಗುದ್ದಾಟವಿದ್ದಾಗ ನಾಯಕ ಸ್ಥಾನದಲ್ಲಿರುವ ಕುಮಾರಸ್ವಾಮಿ ಇದನ್ನು ಸರಿಪಡಿಸಬೇಕು ಇಲ್ಲವೇ ಬ್ಯಾಲೆನ್ಸ್ ಮಾಡಬೇಕೇ ವಿನಾ ಒಬ್ಬರ ಪರ ಗಟ್ಟಿಯಾಗಿ ನಿಂತು ಬಿಡುತ್ತಾರೆ. ಆಗ ಮತ್ತೊಬ್ಬರು ಇವರಿಂದ ದೂರ ಸರಿಯುತ್ತಾರೆ. ಹೀಗೆ ದೂರ ಸರಿದವರನ್ನು ಬ್ರದರ್ ಎಂದು ಮತ್ತೆ ಅಪ್ಪಿಕೊಳ್ಳಲು ಹೊರಡುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ದೊಡ್ಡ ಗೌಡರ ಮಧ್ಯೆಪ್ರವೇಶವೂ ಫಲ ಕೊಡುವುದಿಲ್ಲ. ಇದಕ್ಕೆ ಉದಾಹರಣೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಜೆಡಿಎಸ್ ಗೆ ಗುಡ್ ಬೈ ಹೇಳಿದ ಪ್ರಕರಣ. ಜಿ ಟಿ ದೇವೇಗೌಡರು ಕಾಂಗ್ರೆಸ್ ಕೈ ಕುಲುಕಲು ಸಿದ್ದರಾಗಿದ್ದಾರೆ. ಈ ವಿದ್ಯಮಾನ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದರೆ, ಜೆಡಿಎಸ್‌ಗೆ ಹಿನ್ನಡೆ ತಂದಿದೆ.

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಪಂದ್ಯದಲ್ಲಿ ಜೆಡಿಎಸ್‌ನದು ಆಗಾಗ್ಗೆ ನಿರ್ಣಾಯಕ ಆಟ. ಅದು 2004 ಹಾಗೂ 2018ರ ಅಸೆಂಬ್ಲಿ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಜೆಡಿಎಸ್‌ನ ಈ ನಿರ್ಣಾಯಕ ಪಾತ್ರವನ್ನು ಜನತೆ ಕಂಡಿದ್ದಾರೆ.

ರಾಜ್ಯದಲ್ಲಿ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿತು. ಆ ಸರಕಾರದಲ್ಲಿ ಕುಮಾರಸ್ವಾಮಿ ಭಾಗಿಯಾಗಲಿಲ್ಲ. ವಿಧಾನಸಭೆಯಲ್ಲಿ ಕೊನೆಯ ಸಾಲಿನಲ್ಲಿ ಅವರು ಕುಳಿತಿರುತ್ತಿದ್ದರು. ಆದರೆ, ಅವರು 2006ರಲ್ಲಿ ತಮ್ಮದೇ ಪಕ್ಷ ಪಾಲುದಾರನಾಗಿದ್ದ ಈ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿ ಜೊತೆ ಸೇರಿ ತಾವೇ ಮುಖ್ಯಮಂತ್ರಿಯಾದರು. ಬಿಜೆಪಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರದ ರುಚಿಯನ್ನು ತೋರಿಸಿದರು.

ಆಗ ಕುಮಾರಸ್ವಾಮಿ, ಜಾತ್ಯತೀತ ಪದದ ಅರ್ಥವನ್ನು ನಿಘಂಟುವಿನಲ್ಲಿ ಹುಡುಕುತ್ತಿದ್ದೇನೆ ಎಂದಿದ್ದರು. ಆದರೆ, 2018ರಲ್ಲಿ ಮತ್ತೆ ಮುಖ್ಯಮಂತ್ರಿಯಾದಾಗ ಕೋಮುವಾದಿ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಜೊತೆ ಸೇರಿರುವುದಾಗಿ ಹೇಳಿದ್ದರು. ಹೀಗೆ ಜೆಡಿಎಸ್ ರಾಜಕೀಯ ದಾಳವನ್ನು ಉರುಳಿಸುತ್ತಲೇ ಬಂದಿದೆ.
 
ಬಿಜೆಪಿ ಜೊತೆ ಕೈಜೋಡಿಸಿದ್ದರೆ...
ಜೆಡಿಎಸ್ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆಯಾದಾಗ ಬಿಜೆಪಿ ಜೊತೆ ಸರಕಾರ ರಚಿಸಿದ್ದರೆ ರಾಜ್ಯ ರಾಜಕೀಯ ಪರಿಸ್ಥಿತಿಯೇ ಇವತ್ತು ಭಿನ್ನವಾಗಿರುತ್ತಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಹೀನಾಯ ಪರಿಸ್ಥಿತಿ ತಲುಪುತ್ತಿರಲಿಲ್ಲ. ಏಕೆಂದರೆ, ಮೈದಾನದ ರಾಜಕಾರಣದಲ್ಲಿ ತಳಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಂದಿಕೊಳ್ಳುವಷ್ಟು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಹೊಂದಿಕೊಳ್ಳುವುದಿಲ್ಲ. ಕಾರಣ, ಜೆಡಿಎಸ್ ಕಾರ್ಯಕರ್ತರದ್ದು ಮೂಲತಃ ಕಾಂಗ್ರೆಸ್ ವಿರೋಧಿ ಭಾವನೆಯೇ. ಅಲ್ಲದೇ, ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಷ್ಟಾಗಿ ಬಲಿಷ್ಠವಾಗಿಲ್ಲ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com