ರಾಜಕೀಯದ ಚದುರಂಗದಲ್ಲಿ ಚೆಕ್ ಮೇಟ್ ನಂತರವೂ ಆಟ ಮುಂದುವರೆಯುತ್ತೆ! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಚದುರಂಗದಲ್ಲಿ ರಾಜನನ್ನು ಸುತ್ತುವರೆದರೆ ಮುಗಿಯಿತು, ರಾಜ್ಯ ಗೆದ್ದ ಹಾಗೆಯೇ, ಆದರೆ ರಾಜಕೀಯದಲ್ಲಿ ಸುತ್ತುವರೆದ ಶತ್ರುಗಳಲ್ಲಿ ಒಬ್ಬರು ರಾಜನ ಜೊತೆ ಒಪ್ಪಂದ ಮಾಡಿಕೊಂಡರೂ ಮುಗಿಯುತು, ಅಲ್ಲಿಗೆ ಹೊಸ ಆಟ ಶುರು.  ಕರ್ನಾಟಕದ ರಾಜಕೀಯವೂ...
ಪ್ರಧಾನಿ ಮೋದಿ-ಯಡಿಯೂರಪ್ಪ
ಪ್ರಧಾನಿ ಮೋದಿ-ಯಡಿಯೂರಪ್ಪ

ಚದುರಂಗದಲ್ಲಿ ರಾಜನನ್ನು ಸುತ್ತುವರೆದರೆ ಮುಗಿಯಿತು, ರಾಜ್ಯ ಗೆದ್ದ ಹಾಗೆಯೇ, ಆದರೆ ರಾಜಕೀಯದಲ್ಲಿ ಸುತ್ತುವರೆದ ಶತ್ರುಗಳಲ್ಲಿ ಒಬ್ಬರು ರಾಜನ ಜೊತೆ ಒಪ್ಪಂದ ಮಾಡಿಕೊಂಡರೂ ಮುಗಿಯುತು, ಅಲ್ಲಿಗೆ ಹೊಸ ಆಟ ಶುರು. ಸದ್ಯಕ್ಕೆ ಕರ್ನಾಟಕದ ರಾಜಕೀಯವೂ ಹಾಗೆ ಆಗಿದೆ.

ಕಾಂಗ್ರೆಸ್ ಬಿಟ್, ಬಿಜೆಪಿ ಬಿಟ್ ಮತ್ತಿನ್ಯಾವುದು? ಆನಂದ್ ಸಿಂಗ್!

ಬಂದ ವಲಸಿಗರಲ್ಲಿ ರಾಜನನ್ನು ಮಟ್ಟ ಹಾಕುತ್ತೇನೆ ಎಂದು ಹೋದವರಿಗೆ ಸಾಮಾನ್ಯ ಖಾತೆ, ಒಪ್ಪಂದ ಮಾಡಿಕೊಂಡವರಿಗೆ ಭರ್ಜರಿ ಖಾತೆ, "ಬಿಎಸ್ ವೈ ಅವರನ್ನು ನಾವೇ ಇಳಿಸಿದ್ದು" ಎಂದು ದೆಹಲಿಗೆ ಓಡಾಡಿದ ಬಾಂಬೆ ಟೀಂ ನ ಸದಸ್ಯರಲ್ಲಿ ಕೆಲವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದು ಮತ್ತೆ ಕೆಲವರಿಗೆ ಹಿಂಬಡ್ತಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಇದರ ಮುಂದುವರೆದ ಭಾಗವೇ ಆನಂದ್ ಸಿಂಗ್ ಮತ್ತು ಕೆಲವು ಒಕ್ಕಲಿಗ ಸಚಿವರ ಅಸಮಾಧಾನ.

ಈ ಹಿಂದಿನ ಬಿಎಸ್ ವೈ ಸಚಿವ ಸಂಪುಟದಲ್ಲಿ ಇದೇ ವಲಸಿಗ ಟೀಂ ಯಡಿಯೂರಪ್ಪ ಅವರಿಗೆ ರಾಜೀನಾಮೆಯ "ಚೆಕ್ ನೀಡಿ, ಕೆಲವು ಖಾತೆಗಳಿಗೆ ಪಟ್ಟು ಹಿಡಿದು ಬಂಧಿ ಮಾಡಿದ್ದರು. ಈಗ ಬೊಮ್ಮಾಯಿ ಅವರ ಸಂಪುಟಕ್ಕೂ ಅದೇ ತಂತ್ರ ಮರುಕಳಿಸುವ ಸಂಭವವಿದೆ. ಆದರೆ ಇತ್ತ ದೆಹಲಿಗೂ ಹೋಗಿ, ಅತ್ತ ಮಾಜಿ ಮತ್ತು ಹಾಲಿ ಸಿಎಂ ಹಿಂದೆ-ಹಿಂದೆ ಸುತ್ತಿದ ಬಾಂಬೆ ಟೀಂ ನ ಕೆಲ ನಾಯಕರಿಗೆ ಅದೇ ಖಾತೆ ಉಳಿಸಿಕೊಳ್ಳುವ ಜೊತೆಗೆ ಒಂದಿಷ್ಟು ಬಡ್ತಿಯೂ ಸಿಕ್ಕಿದೆ. ಅದಕ್ಕೇ ರಾಜಕೀಯ ಚದುರಂಗ ಅಸಲಿ ಚದುರಂಗವನ್ನು ಮೀರಿಸುತ್ತದೆ.

ಪಿಕ್ಚರ್ ಅಭಿ ಬಾಕಿ ಹೈ, ಇದು ಮಧ್ಯಂತರ ವಿರಾಮ ಅಷ್ಟೇ!! 

ಇನ್ನು ಸದ್ಯಕ್ಕೆ ವಿಜಯೇಂದ್ರಗೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಸಾಕಷ್ಟು ಮೂಲ ಬಿಜೆಪಿಗರಲ್ಲಿ ಹರ್ಷ ತಂದಿದೆ. ಸಿಎಂ ಬೊಮ್ಮಾಯಿ ಮೂಲ ಬಿಜೆಪಿಯವರಲ್ಲ ಎಂಬುದು ಬೇಸರವಾದರೂ, ಬಿಜೆಪಿಯ ಸಿದ್ಧಾಂತದ ಪ್ರಕಾರ ಪರಿವಾರ ರಾಜಕೀಯಕ್ಕೆ ಮಣೆ ಹಾಕಲಿಲ್ಲ ಎಂಬ ತೃಪ್ತಿ ಬಿಜೆಪಿ ವಲಯದಲ್ಲಿ ಇದ್ದೇ ಇದೆ.

ಆದರೆ ಟ್ವಿಸ್ಟ್ ಇರುವುದು ಇಲ್ಲೇ. ಸಿಎಂ ಆಯ್ಕೆಯಿಂದ ಸಚಿವರನ್ನು ನೇಮಕ ಮಾಡುವಲ್ಲಿ, ಅದಕ್ಕಿಂತ ಹೆಚ್ಚು ಯಾರನ್ನು ಸಂಪುಟದಿಂದ ಹೊರ ತೆಗೆಯಬೇಕು ಎಂದು ಪಟ್ಟು ಹಿಡಿದ ಮಾಜಿ ಸಿಎಂಗೆ "ತಮ್ಮ ಪುತ್ರನನ್ನು ಹೇಗೆ ಗದ್ದುಗೆ ಮೇಲೆ ಕೂಡಿಸಬೇಕು ಎಂಬುದು ಗೊತ್ತಿಲ್ಲ ಎಂದು ತಿಳಿಯಬೇಡಿ", ಸಿನೆಮಾದ ಕ್ಲೈಮಾಕ್ಸ್ ಸ್ಕ್ರಿಪ್ಟ್ ಹೀಗಿದೆ- ಇನ್ನೇನು ಕೆಲವೇ ತಿಂಗಳಲ್ಲಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಒಪ್ಪಿಗೆ ನೀಡಿದೆಯಂತೆ. ಇನ್ನು ಪಟ್ಟಾಭಿಷೇಕ ಒಂದೇ ಬಾಕಿ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಅವರ ಪಾತ್ರ ಮಹತ್ವವಾಗಿ ಇರುಬಹುದು ಎಂಬುದು ಪ್ರಸ್ತುತ ಚಿಂತನೆ.

ಮಂತ್ರಿ ಸ್ಥಾನಕ್ಕೆ ಸೆಣೆಸಾಡಿದರು, ಅದರೆ ಈಗ ನೇರ ಅಂತಃಪುರ ಹೊಕ್ಕಿದರು!

ಇತ್ತ ಕೆಲ ಲಿಂಗಾಯತ ನಾಯಕರನ್ನು ಮೊದಲ ಹಂತದಲ್ಲಿ ಬೆಳಸಲು ಪ್ರಯತ್ನ ಮಾಡಿದ ಬಿಜೆಪಿ ಹೈ ಕಮಾಂಡ್ ಹಳೆ ನಾಯಕರನ್ನು ಬಿಟ್ಟು ಈಗ ಹೊಸ ನಾಯಕರ ಸಾಮರ್ಥ್ಯ ಅಳೆಯಲು ಹೊರಟಿದೆ.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ, ಸಿಎಂಗೆ ಆಪ್ತರಾಗಿರುವ, ಮತ್ತು ಲಿಂಗಾಯತ ಸ್ವಾಮಿಜಿಗಳನ್ನು ತಮ್ಮ ಜೊತೆ ಇಟ್ಟುಕೊಳ್ಳಬಲ್ಲ ಸಿ.ಸಿ ಪಾಟೀಲ್ ಈಗ ಹೈ ಕಮಾಂಡ್ ನ ಶಿಸ್ತಿನ ಸಿಪಾಯಿ. ಕಳೆದ ವಾರ ಮಂತ್ರಿಯಾಗುತ್ತೇನೋ ಇಲ್ಲವೋ ಎಂದು ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಇವರಿಗೆ ಅದೃಷ್ಟವೇ ಸರಿ, ಸದ್ಯಕ್ಕೆ ಒಳ್ಳೆ ಖಾತೆ ನೀಡಿ ಲಿಂಗಾಯತರನ್ನು ಜೊತೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ದು ಅಷ್ಟೇ ಅಲ್ಲದೇ, ದೆಹಲಿಗೆ ಕರೆಸಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದಾರೆ. ಇನ್ನು ಸದ್ಯಕ್ಕೆ ಜೋಶಿ ಅವರ ಸಾಥ್ ಯಾವ ರಾಜ್ಯ ನಾಯಕರಿಗೆ ದೊರೆತರೂ, ಅವರು ಇನ್ನು ಎರಡು ವರ್ಷದಲ್ಲಿ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸುವರು ಎಂಬುದು ಪ್ರತಿ ಹಂತದಲ್ಲೂ ಸಾಬೀತಾಗುತ್ತಿದೆ.

ಬಹುಶಃ 25 ರ ನಂಟು ಆಂಧ್ರಕ್ಕೆ ಬಿಡಿಸಲಾಗದ ಒಗಟು

ಆಂಧ್ರಪ್ರದೇಶಕ್ಕೂ 25 ಕ್ಕೂ ಬಿಡಿಸಲಾಗದ ನಂಟು!. ಒಂದು ವರ್ಷದಿಂದ ಆಂಧ್ರದ ಸಿಎಂ ಮತ್ತು ನ್ಯಾಯಾಲಯದ ಮಧ್ಯೆ ಇರುವ ಜಟಾಪಟಿ ಎಲ್ಲರಿಗೂ ತಿಳಿದೇ ಇದೆ. ಸದ್ಯದ ಒಂದು ವರ್ಷದ ಶೀತಲ ಸಮರಕ್ಕೆ ಇದೇ ಆಗಸ್ಟ್ 25 ರಂದು ತೆರೆ ಬೀಳಬಹುದು ಎಂಬುದು ದೆಹಲಿಯಲ್ಲಿ ಬಹಳ ಸ್ಪಷ್ಟವಾಗಿ ಕೇಳಿ ಬರುತ್ತಿರುವ ಪಿಸು ಮಾತು. 2008 ರ ಭ್ರಷ್ಟಾಚಾರದ ಆರೋಪದ ಅಡಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿರುವ ಜಾಮೀನು ರದ್ದಾಗಬಹುದು ಎಂಬ ಸದ್ದು ದಟ್ಟವಾಗಿ ಕೇಳಿ ಬರುತ್ತಿದೆ. ಹಾಗಾದಲ್ಲಿ ಮತ್ತೆ ಜೈಲು ವಾಸ ಅನುಭವಿಸಬೇಕಾದ ಆಂಧ್ರ ಸಿಎಂ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಈಗಾಗಲೇ ತಯಾರು ಮಾಡಿದ್ದಾರೆ! ಸದ್ಯಕ್ಕೆ ಪತ್ನಿ ಮತ್ತು ಸಹೋದರಿ ಮಧ್ಯೆ ಇದ್ದ ಗೊಂದಲವನ್ನು ಬಗೆಹರಿಸಿ, ಸಹೋದರಿಯನ್ನು ತೆಲಂಗಾಣದಲ್ಲಿ ವೈಎಸ್ಆರ್ ಟಿಪಿ ಕಟ್ಟಲು ಮತ್ತು ಪತ್ನಿಯನ್ನು ಆಂಧ್ರದ ಮುಂದಿನ ಮುಖ್ಯಮಂತ್ರಿ ಮಾಡಲು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ 25ರ ಒಗಟು ಉತ್ತರವಾಗುವುದೋ ಅಥಾವ ಪ್ರಶ್ನೆಗಳನ್ನು ಹುಟ್ಟು ಹಾಕುವುದೋ ನೋಡಬೇಕು.

ಅರೇ ದೀದಿ, ದಿಲ್ಲಿ ಬಹುತ್ ದೂರ್ ಹೈ...

ಸಮಾನ್ಯವಾಗಿ ಕಳೆದ 6 ತಿಂಗಳಿಂದ ದೀದಿಯ ಹೆಸರಲ್ಲಿ ಬಿಜೆಪಿ ಎಷ್ಟೇ ಗೇಲಿ ಮಾಡಿದರು, "ದೆಹಲಿಯನ್ನೂ, ಬಂಗಾಳವನ್ನೂ ಗೆಲ್ಲುತ್ತೇನೆ". "ದೆಹಲಿಗೆ ಮುತ್ತಿಗೆ ಹಾಕುತ್ತೇನೆ" ಎನ್ನುವ ಆತ್ಮವಿಶ್ವಾಸವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದಿಗೂ ಕಳೆದುಕೊಳ್ಳಲಿಲ್ಲ. ಕಳೆದ ವಾರ ದೆಹಲಿಗೆ ಪ್ರಯಾಣ ಬೆಳೆಸಿ ಮರಳಬೇಕಾದಾಗ ದೆಹಲಿ ಬಲು ದೂರ ಎಂದು ದೀದಿಗೆ ಅನಿಸಿದ್ದಿರಬೇಕು. ಬಂಗಾಳದ ಗೆಲುವಿನ ನಂತರ ಮೋದಿ-ಶಾ'ರನ್ನು ಗದ್ದುಗೆಯಿಂದ ಕೆಳಗಿಳಿಸಲು ದೀದಿಗೆ ಮಾತ್ರ ಸಾಧ್ಯ ಎಂದು ಪ್ರಾದೇಶಿಕ ಪಕ್ಷಗಳು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿ ದೆಹಲಿಗೆ ಕರೆಸಿದ್ದರು. ಆದರೆ "how dare you are?" ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸಿದರು.

ದೆಹಲಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದಾಗ ಅವರ ಅಂತಃಪುರದಿಂದ ಕೇಳಿ ಬಂದ ಮಾತು ಇದಂತೆ... "ಬಂಗಾಳ ದಾಟಿ ಒಂದು ಕಿಲೋಮೀಟರ್ ವಿಸ್ತರಿಸಲು ಆಗದ ಟಿಎಂಸಿಗೂ ಮತ್ತು ಆ ನಾಯಕಿಗೂ ನಾವು ಬೆಂಬಲ ನೀಡುವುದಿಲ್ಲ" ಎಂದು ಮರಳಿ ಬಂಗಾಳಕ್ಕೆ ವಾಪಸ್ ಆಗುವಂತೆ ಹೇಳಿದರಂತೆ.

ಇನ್ನು ಅಭಿಷೇಕ್ ಬ್ಯಾನರ್ಜಿಗೆ ಬಂಗಾಳ ನೀಡಿ ರಾಷ್ಟ್ರ ರಾಜಧಾನಿಗೆ ಲಗ್ಗೆ ಇಡಬೇಕು ಅಂದುಕೊಂಡಿದ್ದ ದೀದಿ, ದೆಹಲಿ ದಾರಿಗೆ ಸುಂಕವಿಲ್ಲ ಎಂದು ಹೊರಟರು.

ಸ್ವಯಂ ಪ್ರತಿಷ್ಠೆಯಲ್ಲಿ ಹತ್ತು ಕಳೆಯಿತು ಇನ್ನು 24 ಆದರೂ ಕೂಡಿಸಬೇಕು

ಹೀಗೆ ಹೇಳಿದ್ದು ಕಪಿಲ್ ಸಿಬಲ್ ಅಂಗಳದಲ್ಲಿ ಸೇರಿದ್ದ ಎಲ್ಲ ವಿಪಕ್ಷ ನಾಯಕರು. ಆಶ್ಚರ್ಯ ಎಂದರೆ, ಪತ್ರದ ಮೇಲೆ ಪತ್ರ ಬರೆದು ಸಂಸತ್ತಿನಲ್ಲಿ ವಿಪಕ್ಷ ನಾಯಕರ ಸಭೆಗೆ ಹಾಜರಾಗಿ ಎಂದು ಎಷ್ಟೇ ಕೈ ನೋಯಿಸಿಕೊಂಡರೂ ಕಾಂಗ್ರೆಸ್ ನ ಯುವರಾಜ ಕರೆಯುವ ಸಭೆಗೆ ಹಾಜರಾಗದ ಎಲ್ಲ ವಿಪಕ್ಷ ನಾಯಕರು, ಕಪಿಲ್ ಸಿಬಲ್ ಜನುಮ ದಿನದ ನೆಪವೊಡ್ಡಿ ಭಾರತದ ಆಡಳಿತ ಪಕ್ಷವನ್ನು ಎದುರಿಸಲು ಸಮರ್ಥ ವಿಪಕ್ಷಕ್ಕೆ ಮರು ಜನ್ಮ ನೀಡುವ ಬಗ್ಗೆ ಚರ್ಚಿಸಿದರು. ಇನ್ನು ಔತಣಕೂಟದ ನೆಪದಲ್ಲಿ ಸೇರಿದ್ದ ಶಿವಸೇನೆ ಆದಿಯಾಗಿ ಎಲ್ಲ ವಿಪಕ್ಷ ನಾಯಕರ ಅಭಿಪ್ರಾಯ ಒಂದೇ ಆಗಿತ್ತು "ಬಿಜೆಪಿಗೆ ಎದುರಾಗಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಆದರೆ ಅದು ಗಾಂಧಿ ಕುಟುಂಬದ ನಾಯಕತ್ವದ ಕಾಂಗ್ರೆಸ್ ಆಗಿರಬಾರದು" ಎಂಬುದಾಗಿತ್ತು.

ಗಾಂಧಿ ಪರಿವಾರ ಬಿಟ್ಟು ಬೇರೆ ನಾಯಕರು ಮುಂಚೂಣಿಯಲ್ಲಿ ಪಕ್ಷದ ಸಾರಥ್ಯ ವಹಿಸಿಕೊಳ್ಳಲು ಸಾಧ್ಯ. ಆದರೆ ಮೂಲ ಕಾಂಗ್ರೆಸ್ಸಿಗರು ಇದನ್ನು ಒಪ್ಪುವುದೂ ಇಲ್ಲ But ಈ ಬಾರಿ ಪ್ರದೇಶಿಕ ಪಕ್ಷಗಳು ಬಿಡುವಂತೆಯೂ ಇಲ್ಲ. ಪ್ರಯತ್ನಿಸಿದರೆ  ಪಿಡಿಪಿ-ಬಿಜೆಪಿ, ಕಾಂಗ್ರೆಸ್-ಶಿವಸೇನೆ ನಡುವೆ ಮೈತ್ರಿಯೇ ಸಂಭವಿಸಬಹುದಂತೆ ಇನ್ನು 2024 ಕ್ಕೆ ಒಂದು ಸಮರ್ಥ ವಿಪಕ್ಷ ಸಿಗಲಾರದೇ?

-ಸ್ವಾತಿ ಚಂದ್ರಶೇಖರ್
swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com