ಅಂತರಿಕ್ಷಕ್ಕೆ ಏರಿದೆವು, ಆದರೆ ಅಂತಃಪುರ ಬಿಡುತ್ತಿಲ್ಲವಲ್ಲ... (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಸದ್ಯದ ಪರಿಸ್ಥಿತಿಯಲ್ಲಿ ರಾಜಕರಿಣಿಗಳಿಗೆ ಅವರ ರಾಜಕೀಯ ಬದುಕು ಅಂತಃಪುರದ ಸುತ್ತ ಸುತ್ತುತ್ತಿದೆ!!!. ಅಂದರೆ ರಾಣಿ ಮಹಲಿನತ್ತ ಸುತ್ತುತ್ತಿದೆ ಎಂಬುದೇ ಬೇಸರ...
ಪ್ರಧಾನಿ ಮೋದಿ- ಅಮಿತ್ ಶಾ
ಪ್ರಧಾನಿ ಮೋದಿ- ಅಮಿತ್ ಶಾ

ಅಂತಃಪುರ ಸಾಮಾನ್ಯವಾಗಿ ರಾಣಿಯರು ಇರುವ ಸ್ಥಳ ಎಂಬ ಉಲ್ಲೇಖ. ಆದರೆ ನಮ್ಮ ಅಂಕಣದ ಶೀರ್ಷಿಕೆಯಲ್ಲಿ ಅದು kitchen cabinet. ದರ್ಬಾರ್ ಹಾಲ್ ನಲ್ಲಿ ನಡೆಯುವ ಆಡಳಿತ ಚರ್ಚೆಗೂ, ಅಂತಃಪುರದಲ್ಲಿ ಆಗುವ ಅಸಲಿ ರಾಜಕೀಯ ಒಳನೋಟಕ್ಕೆ ಇರುವ ಪರದೆಯನ್ನು ಕಳಚುವ ಒಂದು ಪ್ರಯತ್ನ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜಕರಿಣಿಗಳಿಗೆ ಅವರ ರಾಜಕೀಯ ಬದುಕು ಅಂತಃಪುರದ ಸುತ್ತ ಸುತ್ತುತ್ತಿದೆ!!!. ಅಂದರೆ ರಾಣಿ ಮಹಲಿನತ್ತ ಸುತ್ತುತ್ತಿದೆ ಎಂಬುದೇ ಬೇಸರ...

ಕರ್ನಾಟಕದ ನಾಯಕರು ಒಬ್ಬೊಬ್ಬರಾಗಿ ಕೋರ್ಟ್ ನಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂಬ ತಡೆ ಆಜ್ಞೆ ತಂದಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಈಗ ಸದ್ಯದ ನಾಯಕರ ಮಂಥನ "ಮುಂದಿನ ಚುನಾವಣೆ ಸಿ.ಡಿ ಆಧಾರದ ಮೇಲೆ ನಡೆದರೆ ಏನು ಮಾಡುವುದು? ಎಂಬುದಾಗಿದೆ. ಕರ್ನಾಟಕದ 224 ಕ್ಷೇತ್ರದಲ್ಲಿ ಶೇ.20ಕ್ಕೂ ಹೆಚ್ಚು ಅಭ್ಯರ್ಥಿಗಳ, ಆಕಾಂಕ್ಷಿಗಳ, ಸ್ಪರ್ಧಿಗಳ ಸಿ.ಡಿ ಹೊರ ಬರುವ ಸಾಧ್ಯತೆ ಇದೆ.

ಹೀಗೆ ಮುಂದುವರೆದರೆ ನಮ್ಮ ಭವಿಷ್ಯದ ಗತಿ ಏನು? ಎಂಬುದರ ಬಗ್ಗೆ ರಾಜಕೀಯ ನಾಯಕರಿಗೆ ಭಯ ಹುಟ್ಟಲು ಆರಂಭವಾಗಿದೆ. 

ಇದರ ಜೊತೆ ತಮ್ಮ ಬಳಿ 20ಕ್ಕೂ ಹೆಚ್ಚು ಸಿ.ಡಿ ಇದೆ ಎಂದು ವಾರಕೊಮ್ಮೆ ದೆಹಲಿಗೆ ಹೋಗುವ ನಾಯಕರ ದಂಡು ಹೆಚ್ಚಾಗಿದೆ. ಇದೆಲ್ಲವನ್ನೂ ಅತೀ ಸೂಕ್ಷ್ಮದಿಂದ ಗಮನಿಸುತ್ತಿರುವ ದೆಹಲಿ ನಾಯಕರು ಮಂಕಾಗಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಿ.ಡಿ ಯಿಂದ ಕರ್ನಾಟಕದ ಕೆಲ ನಾಯಕರನ್ನು ಹೊರ ಇಡಲು ಸಾಧ್ಯ ಇಲ್ಲ ಎಂಬುದು ಹೈ ಕಮಾಂಡ್ ಅನ್ನು ಮಂಕಾಗಿಸಿದೆ.

ಒಟ್ಟಿನಲ್ಲಿ ಚುನಾವಣೆ ಭಾಷಣದಲ್ಲಿ ಅಂತರಿಕ್ಷಕ್ಕೆ ಕರೆದುಕೊಂಡು ಹೋದರೆ ಏನೆಂತೆ, ಅಸಲಿ ರಾಜಕೀಯದಲ್ಲಿ ಸಿ.ಡಿಯಿಂದ ಹೊರಬರಲು ಸಾಧ್ಯ ಆಗುತ್ತಿಲ್ಲ!!!

ವಿದ್ಯುತ್ ನೀರು ಕೊಟ್ಟರೆ, ಆಪ್ ಗೆ ಬಂಪರ್ರೆ...

ಸದ್ಯಕ್ಕೆ ಚುನಾವಣೆ ನಿಭಾಯಿಸುವುದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿಬೇಕು. ಆದರೆ ಬಿಜೆಪಿಯನ್ನು ಮೀರಿಸಲು ತಳಮಟ್ಟದಲ್ಲಿ ಸಣ್ಣ ಹೆಜ್ಜೆ ಇಡುತ್ತಾ ವಿಸ್ತರಿಸುತ್ತಿರುವುದು ಆಮ್ ಆದ್ಮಿ ಪಾರ್ಟಿ.

ದೆಹಲಿ, ಪಂಜಾಬ್ ನಂತರ ಪಕ್ಷ ಅತಿ ಹೆಚ್ಚು ಪ್ರಚಲಿತದಲ್ಲಿ ಇರುವುದು ಗೋವಾದಲ್ಲಿ. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಚುನಾವಣೆ ಎದುರಿಸುವ ಗೋವಾಕ್ಕೆ ಈ ಬಾರಿ ಆಪ್ ತ್ವರಿತ ಗತಿಯಲ್ಲಿ ಲಗ್ಗೆ ಇಡುತ್ತಿದೆ. ಮನೋಹರ್ ಪರಿಕ್ಕರ್ ನಿಧನದ ನಂತರ ಹೊಸ ಮುಖ್ಯಮಂತ್ರಿ ನೇಮಕದ ನಂತರವೂ ಅವರು ಬಿಟ್ಟು ಹೋಗಿರುವ ಜಾಗವನ್ನು ಸದ್ಯಕ್ಕೆ ಗೋವಾ ಬಿಜೆಪಿಯ ಯಾವ ನಾಯಕರು ತುಂಬಿಲ್ಲ. ಇನ್ನು ಈ ಸಂದರ್ಭವನ್ನು ಸದುಪಯೋಗ ಮಾಡಿಕೊಳ್ಳುತ್ತಿರುವ ಆಪ್ ದೆಹಲಿ ಮಾದರಿ ವಿದ್ಯುತ್ ಮತ್ತು ನೀರನ್ನು ಉಚಿತ ನೀಡಲು ವಚನ ನೀಡಿದ್ದಾರೆ. ಎಲ್ಲೆಲ್ಲೂ ನೀರೆ ಕಾಣುವ ಗೋವಾದಲ್ಲಿ ಕುಡಿವ ನೀರಿನ ಅಭಾವ ಈ ಬಾರಿ ಆಪ್ ಗೆ ಗೋವಾದಲ್ಲಿ ಒಂದಿಷ್ಟು ನೆಲೆಯೂರುವಂತೆ ಮಾಡಬಹುದು.

ಆರಕ್ಕೆ ಏರಲು ಆಗುವುದಿಲ್ಲ ಆದರೆ ಮೂರಕ್ಕಂತೂ ಖಂಡಿತ ಇಳಿಯುತ್ತೇವೆ

ಇಡೀ ದೇಶದಲ್ಲಿ ಅತೀ ವೇಗವಾಗಿ ನಡೆಯುತ್ತಿರುವ ಕಾಮಗಾರಿ ಎಂದರೆ ಅದು ಸೆಂಟ್ರಲ್ ವಿಸ್ತಾ ಅಥವಾ ಹೊಸ ಸಂಸತ್ ಭವನದ ಕಟ್ಟಡ ಕಾಮಗಾರಿ. ಹೊಸ ಸಂಸತ್ ಭವನದಲ್ಲಿ ಸಾವಿರ ಸಂಸದರು ಕುಳಿತು ಕೊಳ್ಳುವ ಖುರ್ಚಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸದ್ಯಕ್ಕೆ ಇರುವುದು 545 ಸಂಸದರು, ಏಕೆ ಅಷ್ಟು ಖುರ್ಚಿ ಎಂದು ಯೋಚಿಸಿದರೆ ಇಲ್ಲಿದೆ ಉತ್ತರ. 

1976 ರಲ್ಲಿ 50 ಕೋಟಿ ಜನಸಂಖ್ಯೆಗೆ 545 ಸಂಸದರನ್ನು ಆರ್ಟಿಕಲ್ 81ಕ್ಕೆ ಸಂವಿಧಾನದ 42 ನೇ ತಿದ್ದುಪಡಿ ತಂದು 1971 ರ ಜನಗಣತಿಯ ಆಧಾರದ ಮೇಲೆ ರಚಿಸಲಾಯಿತು. 

ಇನ್ನು ಕಲಂ 81 (3) ರ ಪ್ರಕಾರ 2026 ರ ವರೆಗೆ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರಬಾರದು. 2026 ರ ನಂತರ ಬದಲಾವಣೆ ಮತ್ತು ಸೇರ್ಪಡೆ ಮಾಡಬೇಕಾಗುತ್ತದೆ. ಆದರೆ ದೇಶದ ಜನಸಂಖ್ಯೆ 130 ಕೋಟಿ! ಕನಿಷ್ಠ ಈಗ 800ಕ್ಕೆ ಆದರೂ ಸಂಸದರು ತಲುಪಬೇಕು ಎಂಬುದು ಪ್ರಣಬ್ ಮುಖರ್ಜಿ ಬಹಳ ಹಿಂದೆ ಹೇಳಿದ್ದರು.

ಸಂಸತ್ ಭವನ ದೊಡ್ಡದಾಗಿ ಸಂಸದರೂ ಹೆಚ್ಚಾದರೆ ಖುಷಿಯೇ, ಆದರೆ 2021ರ ಜನಗಣತಿ ಆಧಾರದ ಮೇಲೆ ಸಂಸದರ ಸಂಖ್ಯೆ ರಾಜ್ಯವಾರು ವಿಭಜನೆ ಆಗುವುದರಲ್ಲಿ ಸದ್ಯಕ್ಕೆ ಸಮಸ್ಯೆ ಇದೆ. 

ಕಳೆದ 3-4 ದಶಕಗಳಲ್ಲಿ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ವನ್ನು ಬಹಳ ಶಿಸ್ತಿನಿಂದ ಪಾಲಿಸಿದ್ದೇವೆ, ಆದರೆ ಜನಸಂಖ್ಯೆ ತಡೆಗಟ್ಟುವಲ್ಲಿ ಉತ್ತರ ಭಾರತದ್ದು ಶೂನ್ಯ ಸಂಪಾದನೆ. ಅದರ ಆಧಾರದ ಮೇಲೆ ಕೇವಲ ಉತ್ತರ ಪ್ರದೇಶ 80 ರಿಂದ 193 ಸಂಸದೀಯ ಕ್ಷೇತ್ರಗಳಿಗೆ ತಲುಪಿದರೆ ಇಡೀ ದಕ್ಷಿಣ ಭಾರತ ಸೇರಿಸಿ 150 ಕ್ಷೇತ್ರಗಳು ಹೆಚ್ಚಳವಾಗುವುದೂ ಕಷ್ಟವೇ.

ಇನ್ನು ಉತ್ತರ ಭಾರತದಲ್ಲಿ ಇರುವ ಸಂಸತ್ತಿನಲ್ಲಿ, ಉತ್ತರ ಭಾರತದ ಅಧಿಕ ಪ್ರಾತಿನಿಧ್ಯದ ನಡುವೆ "ಉತ್ತರ" ಹುಡುಕುವುದು ಬಲು ಕಷ್ಟ!!

ತಾಲಿಬಾನ್ ಅಲ್ಲ ಅಲ್ಲ
ಬೈಡನ್ ಒಪ್ಪೋದಿಲ್ಲ
ಚೀನಾ ಬಿಟ್ಟು ಕೊಡೋದಿಲ್ಲ

ಸದ್ಯಕ್ಕೆ ವಿಶ್ವದ ಗಮನ ಸೆಳೆದಿರುವ ಹೃದಯವಿದ್ರಾವಕ ಕಥೆ ಅಫ್ಘಾನಿಸ್ಥಾನದ್ದು. ಭೌಗೋಳಿಕವಾಗಿ ಜೊತೆಗೂಡಿದರೂ, ಆಡಳಿತ ವೈಖರಿಯ ವ್ಯತ್ಯಾಸದಿಂದ ನಮ್ಮ ದೇಶ ವಿಶ್ವದಲ್ಲಿ ಮಾನವತವಾದದಿಂದ ಹೆಸರು ಮಾಡಿದರೆ, ಅಫ್ಘಾನಿಸ್ಥಾನ ಮಾನವನನ್ನು ಅಂತ್ಯಗೊಳಿಸುವ ಸಂಚಿಗೆ ಹೆಸರುವಾಸಿಯಾಗಿದೆ. ಅಕ್ಕ ಪಕ್ಕದಲ್ಲಿ ಇದ್ದರೂ ಸದ್ಯಕ್ಕೆ ಮೌನವನ್ನೇ ಉತ್ತರವಾಗಿಸುವ ಪರಿಸ್ಥಿತಿ ನಮಗೂ ಆವರಿಸಿದೆ.

ಆದರೆ ಇತ್ತ ಚೀನಾ ನಾವು ನೇರವಾಗಿ ತಾಲಿಬಾನ್ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳುವ ಮೂಲಕ ಭಾರತಕ್ಕೆ ದೊಡ್ಡ ಗಂಡಾಂತರ ತಂದಿದೆ. ಇತ್ತ ಪಾಕ್ ಅತ್ತ ಟಿಬೆಟ್ ಮಧ್ಯ ಅಫ್ಘಾನ್ ಎಲ್ಲರನ್ನು ತಮ್ಮ ವಶಕ್ಕೆ ಪಡೆದು ಭಾರತದ ಮೇಲೆ ಹಗೆ ಸಾಧಿಸಲು ಚೀನಾ ಸಜ್ಜಾದರೆ, ಪರೋಕ್ಷವಾಗಿ ತಾಲಿಬಾನ್ ಗೆ ಬೆಂಬಲ ನೀಡಿ ಈಗ ನೀನು ಮುನಿದರೆ ನಾನು ಮಣಿಯುವೆ, ನೀನು ಮಣಿದರೆ ನಾನು ಬಡಿದೆಬ್ಬಿಸುವೆ ಎಂಬ ರಾಜತಂತ್ರವನ್ನು ಕೈಗೊಂಡಿದೆ.

ಇನ್ನು ಸದ್ಯಕ್ಕೆ 50 ಸವಿರಕ್ಕೂ ಅಧಿಕ ಭಾರತೀಯರನ್ನು ಅಫ್ಘಾನಿಸ್ತಾನದಲ್ಲಿ ಬಿಡಲು ಆಗುವುದಿಲ್ಲ, ಹಾಗೆಂದು ಏಕಾ-ಏಕಿ ಕರೆತರಲು ಸಾಧ್ಯವಿಲ್ಲ. ಸದ್ಯ ಭಾರತ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತ ಮತ್ತೆ ಅದನ್ನು ಸದುಪಯೋಗಗೊಳಿಸುವ ಮಾರ್ಗ ಇದೆಯೇ ಎಂಬ ಅಳಲನ್ನು ಅಲ್ಲಿನ ಭಾರತೀಯರು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ದ್ರುಪದನ ಕೆಡೆವಲು ಕೌರವ ಪಾಂಡವರನ್ನು ಒಟ್ಟಿಗೆ ಸೇರಿಸ ಬಲ್ಲ ದ್ರೋಣನ ಅವಶ್ಯಕತೆ ಸದ್ಯಕ್ಕೆ ಇದೆ...

-ಸ್ವಾತಿ ಚಂದ್ರಶೇಖರ್
swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com