ಬದಿಗೆ ಸರಿಯುತ್ತಿದ್ದಾರೆಯೇ ಯಡಿಯೂರಪ್ಪ? (ನೇರ ನೋಟ)

-ಕೂಡ್ಲಿ ಗುರುರಾಜಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿರುವ "ಈ ಮಾತು..." ರಾಜ್ಯ ರಾಜಕಾರಣದ ವಿಚಾರದಲ್ಲಿ  ಗಮನಾರ್ಹವಾದುದು...
ಬಸವರಾಜ ಬೊಮ್ಮಾಯಿ-ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ-ಯಡಿಯೂರಪ್ಪ (ಸಂಗ್ರಹ ಚಿತ್ರ)

"ನನ್ನನ್ನು ಹಲವರು ಅನುಮಾನದಿಂದ ನೋಡುತ್ತಿದ್ದಾರೆ. ಅನೇಕ ಮಂದಿ ಟೀಕೆಗಳನ್ನೂ ಮಾಡುತ್ತಿದ್ದಾರೆ. ಅನುಮಾನ, ಟೀಕೆಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಳ್ಳುತ್ತೇನೆ...".

ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿರುವ ಈ ಮಾತು ರಾಜ್ಯ ರಾಜಕಾರಣದ ವಿಚಾರದಲ್ಲಿ  ಗಮನಾರ್ಹವಾದುದು.

ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿರುವ ಬೊಮ್ಮಾಯಿ ಅವರ ಆಡಳಿತವನ್ನು ರಾಜ್ಯದ ಜನತೆ ಕುತೂಹಲದಿಂದ ಗಮನಿಸುತ್ತಿದ್ದಾರೆ. ಅನೇಕರು ಹೀಗೆ ಗಮನಿಸುತ್ತಲೇ ಅನುಮಾನದ ದೃಷ್ಟಿಯನ್ನೂ ನೆಟ್ಟಿದ್ದಾರೆ. ಪ್ರತಿಪಕ್ಷಗಳ ನಾಯಕರು ಟೀಕೆಗಳ ಬಾಣ ಬಿಡಲು ಆರಂಭಿಸಿದ್ದಾರೆ. 

ಬೊಮ್ಮಾಯಿ ಅವರನ್ನು ಎಲ್ಲರಿಗಿಂತ ಹೆಚ್ಚು ಗಮನಿಸುತ್ತಿರುವವರು ಮಾಜಿ ಸಿಎಂ ಯಡಿಯೂರಪ್ಪನವರೇ. ಏಕೆ ಗೊತ್ತಾ? ತಾವೇ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿರುವ ಬೊಮ್ಮಾಯಿ ಅವರು ಆಡಳಿತವನ್ನು ಹೇಗೆ ನಿರ್ವಹಿಸುತ್ತಾರೆ? ತಮ್ಮ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ? ಎಂದು ಯಡಿಯೂರಪ್ಪ ಗಮನಿಸುವುದು ಸ್ವಾಭಾವಿಕವಾದುದು. 

ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರು ಬೊಮ್ಮಾಯಿ ಅವರ ನಡೆಯನ್ನು ಸೂಕ್ಷ್ಮವಾಗಿಅವಲೋಕಿಸುತ್ತಿರುವುದೂ ಉಂಟು. ಇದು ಎಲ್ಲರಿಗಿಂತ ಹೆಚ್ಚಾಗಿ ಬೊಮ್ಮಾಯಿ ಅವರಿಗೇ ಗೊತ್ತಿದೆ. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಹಿಂಬಾಲಿಸದೇ ಬಿಜೆಪಿಯಲ್ಲೇ ಉಳಿದಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಬಲಾಢ್ಯ ಹೈಕಮಾಂಡ್

ಯಡಿಯೂರಪ್ಪ ಅವರು ತಮ್ಮ ವಿಶ್ವಾಸ ಕಳೆದುಕೊಂಡ ಡಿ.ವಿ.ಸದಾನಂದಗೌಡರ ವಿಚಾರದಲ್ಲಿ ಹೇಗೆ ನಡೆದುಕೊಂಡರು ಎಂಬ ನಿದರ್ಶನವು ನಮ್ಮ ಮುಂದಿದೆ.  ಯಡಿಯೂರಪ್ಪ ಅವರು ಈ ಹಿಂದೆ ಭ್ರಷ್ಟಾಚಾರದ ಆರೋಪ ಹೊತ್ತು 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತಮ್ಮ ಉತ್ತರಾಧಿಕಾರಿಯನ್ನಾಗಿ ಸದಾನಂದಗೌಡರಿಗೆ ಅವಕಾಶ ಕಲ್ಪಿಸಿದ್ದರು. ಆದರೆ,  ಒಂದು ವರ್ಷ ಕಳೆಯುವುದಕ್ಕೂ ಮುನ್ನವೇ ಸದಾನಂದಗೌಡರನ್ನು ಕೆಳಗಿಳಿಸಿ ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದರು. 

ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಹೈಕಮಾಂಡ್ ಬಲಿಷ್ಠವಾಗಿದೆ. ಹೈಕಮಾಂಡ್ ಬೊಮ್ಮಾಯಿ ಹಿಂದೆ ಪ್ರಬಲವಾಗಿ ನಿಂತಿದೆ. ಹೀಗಾಗಿ, ಯಡಿಯೂರಪ್ಪ ಈ ಹಿಂದಿನಂತೆ  ತಮ್ಮ ಇಚ್ಛೆಗೆ ಅನುಗುಣವಾಗಿ ರಾಜಕೀಯ ದಾಳ ಉರುಳಿಸಿ ಸೈ ಎನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಹೊತ್ತಲ್ಲೇ ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್‌ ಸಿಂಗ್ ಅವರು ನೀಡಿದ ಒಂದು ಹೇಳಿಕೆ ಬಹಳ ಮುಖ್ಯ ಎನಿಸುತ್ತದೆ. 

ಚರ್ಚೆ ಹುಟ್ಟು ಹಾಕಿದ  ಅರುಣ್‌ ಸಿಂಗ್ ಹೇಳಿಕೆ

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಸಾಮೂಹಿಕ ನಾಯಕತ್ವವೂ ಇರಲಿದೆ. ಬೊಮ್ಮಾಯಿ ನಾಯಕತ್ವ, ಯಡಿಯೂರಪ್ಪ ಮಾರ್ಗದರ್ಶನ ಇರುತ್ತದೆ." ಎಂಬ ಅರುಣ್‌ ಸಿಂಗ್ ಅವರ  ಸ್ಪಷ್ಟ ನುಡಿ ಬಿಜೆಪಿಯಲ್ಲಿ ಆಂತರಿಕವಾಗಿ ಚರ್ಚೆ ಹುಟ್ಟು ಹಾಕಿದೆ.  ಮುಂದಿನ ಚುನಾವಣೆಯ ನಾಯಕತ್ವದ ಬಗ್ಗೆ ಇಷ್ಟು ಬೇಗ ಹೇಳುವ ಅಗತ್ಯ ಏನಿತ್ತು ಎಂಬುದು ಯಡಿಯೂರಪ್ಪ ಬೆಂಬಲಿಗರ ಪ್ರಶ್ನೆ. ಜೊತೆಯಲ್ಲಿ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಹೈಕಮಾಂಡ್ ಇರಿಸಿರುವ ವಿಶ್ವಾಸವನ್ನು ಇದು ಪ್ರದರ್ಶಿಸುತ್ತದೆ.

ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ನೆರಳಿನಿಂದ ಹೊರ ಬಂದು ಆಳ್ವಿಕೆ ನಡೆಸಬೇಕೆಂಬುದು ಹೈಕಮಾಂಡ್ ಇಚ್ಛೆ. ಬೊಮ್ಮಾಯಿ ಅವರಿಗೂ ತಮಗೆ ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆತರಬೇಕೆಂಬ ಬಯಕೆ. 

ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಇಲಾಖಾವಾರು ಪ್ರಗತಿ ಪರಿಶೀಲನೆಯನ್ನು ಕೈಗೆತ್ತಿಕೊಂಡಿದ್ದಾರೆ. ಗಡಿ ಜಿಲ್ಲೆಗಳಿಗೆ ತೆರಳಿ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಉತ್ತಮ ಆಡಳಿತದ ಮೂಲಕವೇ ಮರಳಿ ಅಧಿಕಾರ ಪಡೆಯುವ  ಲೆಕ್ಕಾಚಾರ ಅವರದು. ಈ ನಿಟ್ಟಿನಲ್ಲಿಯೇ ಬೊಮ್ಮಾಯಿ ಅವರು ನಿಧಾನವಾಗಿ ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದನ್ನು ಗಮನಿಸಬಹುದು.

ಬಸವರಾಜ ಬೊಮ್ಮಾಯಿ ಸಮಚಿತ್ತದ ರಾಜಕಾರಣಿ. ಅವರ ಆಡಳಿತದಲ್ಲಿ ಜನತಾ ಪರಿವಾರದ ಛಾಯೆ ಕಂಡು ಬರುತ್ತಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಬೊಮ್ಮಾಯಿ ಈ ಸ್ಥಾನದ ಬಲ ಹಾಗೂ ಜನಪರ ನಡೆಯಿಂದ  ಮಾಸ್ ಲೀಡರ್ ಆಗಿ ಹೊರಹೊಮ್ಮಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆಕ್ರಮಣಶೀಲ ಗುಣವಿಲ್ಲ

ಬಸವರಾಜ ಬೊಮ್ಮಾಯಿ ರಾಜಕೀಯವಾಗಿ ಶಕ್ತಿಯುತರಾದಷ್ಟು ಯಡಿಯೂರಪ್ಪ ದುರ್ಬಲರಾಗುತ್ತಾರೆ. ಏಕೆಂದರೆ, ಬಿಜೆಪಿಯಲ್ಲಿ ಹಾಗೂ ವೀರಶೈವ-ಲಿಂಗಾಯತ ಸಮಾಜದಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನನ್ನು ಬಸವರಾಜ ಬೊಮ್ಮಾಯಿ ಅವರಲ್ಲಿ ಕಾಣಲು ಹೈಕಮಾಂಡ್ ಹೊರಟಿದೆ.

ಬಸವರಾಜ ಬೊಮ್ಮಾಯಿ ಪ್ರಬುದ್ಧ ರಾಜಕಾರಣಿ. ರಾಜಕಾರಣದಲ್ಲಿ ಚಾಣಾಕ್ಷ್ಯ ತಂತ್ರಗಳನ್ನೂ ಹೆಣೆಯಬಲ್ಲರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣವೂ ಇದೆ. ಪ್ರಬಲ ವೀರಶೈವ-ಲಿಂಗಾಯತ ಸಮಾಜಕ್ಕೆ ಸೇರಿದ್ದಾರೆ. ಆದರೆ, ಅವರಲ್ಲಿ ಮಾಸ್ ಲೀಡರ್ ಆಗಲು ಬೇಕಿರುವ ಆಕ್ರಮಣಶೀಲ ಗುಣವಿಲ್ಲ. ಮೈದಾನದ ರಾಜಕಾರಣದಲ್ಲಿ  ಅವರು ಸ್ವಲ್ಪ ಅಗ್ರೇಸ್ಸಿವ್ ಆಗಿ ಹೊರಟರೆ ಮಾಸ್ ಲೀಡರ್ ಆಗಿ ಹೊರಹೊಮ್ಮುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಅಗ್ನಿ ಪರೀಕ್ಷೆಯಾದ ಪಾಲಿಕೆ ಚುನಾವಣೆ

ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗಳ ಚುನಾವಣೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಡಿಸೆಂಬರ್‌ನಲ್ಲಿ ಎದುರಾಗಲಿದೆ. ಇದು ಬಸವರಾಜ ಬೊಮ್ಮಾಯಿ ಅವರಿಗೆ ಅಗ್ನಿಪರೀಕ್ಷೆ. ಅದರಲ್ಲೂ ಮೂಲತಃ ಹುಬ್ಬಳ್ಳಿಯವರೇ ಆದ ಬೊಮ್ಮಾಯಿ ಅವರಿಗೆ ಅಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಸ್ಥಳೀಯವಾಗಿ ಅವರ ನಾಯಕತ್ವಕ್ಕೂ ಸವಾಲು ಒಡ್ಡಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕೆಂದರೆ ಈ ಚುನಾವಣೆಗಳಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವ ಇಲ್ಲ. ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸ್ಥಳೀಯ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜಕೀಯವಾಗಿ ಬಲಾಢ್ಯರು. ಶೆಟ್ಟರ್ ಅವರು ಬೊಮ್ಮಾಯಿ ಸಂಪುಟದಲ್ಲಿಲ್ಲ. ಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಧಾರವಾಡದ ಶಾಸಕ ಅರವಿಂದ ಬೆಲ್ಲದ್ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಶೆಟ್ಟರ್, ಬೆಲ್ಲದ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯವಾಗಿದೆ.

ಈ ನಡುವೆಯೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ  ಎಂಬ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. 

ಆದರೆ, ಬಿಜೆಪಿಯ ಕೆಲವು ಶಾಸಕರಲ್ಲಿ  ಅವಧಿಗೆ ಮುನ್ನ ಅಸೆಂಬ್ಲಿ ಚುನಾವಣೆ ಎದುರಾಗಲಿದೆಯೇ ಎಂಬ ಆತಂಕವಂತೂ ಇದ್ದೇ ಇದೆ. ಬಸವರಾಜ ಬೊಮ್ಮಾಯಿ ನಾಯಕತ್ವ ಗಟ್ಟಿಯಾದಷ್ಟೂ ಈ ಆತಂಕ ದೂರವಾಗುತ್ತದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com