ಉಗುರುಗಳ ಆರೋಗ್ಯ, ರಕ್ಷಣೆಗಾಗಿ 'ಸಪ್ತ ಸೂತ್ರ'ಗಳು... (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಉತ್ತಮ ಆರೋಗ್ಯದ ಸಂಕೇತ ಉಗುರು. ಉಗುರುಗಳಲ್ಲಿ ಕಾಣುವ ಉಬ್ಬು ತಗ್ಗುಗಳು, ಅಲ್ಲಿ ಮೂಡುವ ಬಣ್ಣ ಗೆರೆಗಳೆಲ್ಲ ಶರೀರದ ಆರೋಗ್ಯಕರ ಲಕ್ಷಣಗಳು. ಉಗುರುಗಳ ವಿಶ್ಲೇಷಣೆ ಮಾಡಿ ಆರೋಗ್ಯದ ಮಟ್ಟವನ್ನು ಗುರುತಿಸಬಹುದು.
ಆರೋಗ್ಯಕರ ಉಗುರುಗಳು (ಸಾಂಕೇತಿಕ ಚಿತ್ರ)
ಆರೋಗ್ಯಕರ ಉಗುರುಗಳು (ಸಾಂಕೇತಿಕ ಚಿತ್ರ)

ಉಗುರುಗಳು ಕೂದಲುಗಳಂತೆ ಜೀವವಿಲ್ಲದ ವಸ್ತುಗಳು. ಈ ಉಗುರುಗಳು ನಮ್ಮ ಚರ್ಮವನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಾಹಿಸುತ್ತವೆ. ಉಗುರುಗಳನ್ನು ರಕ್ಷಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬೇಕು.
ಉಗುರು ಕತ್ತರಿಸುವಾಗ ಈ ತಪ್ಪುಗಳನ್ನು ಮಾಡುವುದು ಬೇಡ

ಉಗುರುಗಳನ್ನು ಕತ್ತರಿಸಲು ಬ್ಲೇಡನ್ನಾಗಲೀ, ಕತ್ತರಿಯನ್ನಾಗಲೀ, ಅಥವಾ ತುಂಬ ಹಳೆಯ, ಸರಿಯಾಗಿ ಕೆಲಸ ಮಾಡದ ನೇಲ್ ಕಟ್ಟರ್‍ನನ್ನಾಗಲೀ ಉಪಯೋಗಿಸಬೇಡಿ. ಬ್ಲೇಡಿನಿಂದ ಕತ್ತರಿಸಲು ಪ್ರಯತ್ನಿಸುವಾಗ ಉಗುರುಗಳು ಸರಿಯಾದ, ಅಂದವಾಗಿ ಕಾಣುವ ಆಕಾರ ಇರುವಂತೆ ಕತ್ತರಿಸುವುದು ಕಷ್ಟವಾಗುತ್ತದೆ. ಅಲ್ಲದೆ ಅನೇಕ ವೇಳೆ ಉಗುರಿನ ಬುಡದವರೆಗೂ ಕತ್ತರಿಸಿ ಕೆಲವು ಸಾರಿ ರಕ್ತಸ್ರಾವವೂ ಆಗುವ ಸಾಧ್ಯತೆಗಳಿರುತ್ತವೆ. ಸೋಂಕು ಉಂಟಾಗುವ ಸಂದರ್ಭಗಳೂ ಉಂಟು.

ಒಳ್ಳೆಯ ಗುಣಮಟ್ಟದ ನೇಲ್‍ಕಟ್ಟರ್ ಅನ್ನು ಉಪಯೋಗಿಸಿ. ಇಲ್ಲವೇ ಅದಕ್ಕಾಗಿಯೇ ಇರುವ ಸ್ವಲ್ಪ ಬಾಗಿದ ಕತ್ತರಿಯನ್ನು ಬಳಸಿ.
ಬೇರೇನೋ ಕೆಲಸ ಮಾಡುತ್ತಾ ಇರುವಾಗ, ಓದುತ್ತಿರುವಾಗ, ಟಿ.ವಿ. ನೋಡುತ್ತ ಇರುವಾಗ ಉಗುರು ಕತ್ತರಿಸಬೇಡಿ.
ಉಗುರು ಕತ್ತರಿಸುವಾಗ ಚರ್ಮದಿಂದ ಒಂದು ಮಿಲಿಮೀಟರ್ ದೂರ ಬಿಟ್ಟು ಕತ್ತರಿಸಿ. ಉಗುರುಗಳು ಉದ್ದವಾಗಿದ್ದರೆ ಮುರಿಯುವ ಸಾಧ್ಯತೆ ಇರುತ್ತದೆ. ತುಂಬಾ ಚಿಕ್ಕದಾದರೆ ಉಗುರಿನ ಕೆಳಗಿನ ಚರ್ಮ ಕಾಣುತ್ತಿದ್ದರೆ ತೊಂದರೆಯಾಗುತ್ತದೆ. 
ಬೆಂಕಿಗೆ ಬಿಸಿಲಿಗೆ ಉಗುರುಗಳು ತುಂಬಾ ಒಡ್ಡಲ್ಪಟ್ಟರೆ ಮುರಿದು ಹೋಗುವಂತೆ (brittle) ಆಗುತ್ತದೆ.

ಒಳ್ಳೆಯ ಉಗುರು ಉತ್ತಮ ಆರೋಗ್ಯದ ಸಂಕೇತ:

ಉತ್ತಮ ಆರೋಗ್ಯದ ಸಂಕೇತ ಉಗುರು. ಉಗುರುಗಳಲ್ಲಿ ಕಾಣುವ ಉಬ್ಬು ತಗ್ಗುಗಳು, ಅಲ್ಲಿ ಮೂಡುವ ಬಣ್ಣ ಗೆರೆಗಳೆಲ್ಲ ಶರೀರದ ಆರೋಗ್ಯಕರ ಲಕ್ಷಣಗಳು. ಉಗುರುಗಳ ವಿಶ್ಲೇಷಣೆ ಮಾಡಿ ಆರೋಗ್ಯದ ಮಟ್ಟವನ್ನು ಗುರುತಿಸಬಹುದು.
ನಿಮ್ಮ ದೇಹದ ಪ್ರತಿಯೊಂದು ಭಾಗವೂ ನೀವೆಷ್ಟು ಆರೋಗ್ಯವಂತರಾಗಿರುವಿರಿ ಎಂಬುದನ್ನು ತೋರಿಸುತ್ತದೆ. ನಿಮ್ಮ ಕೈಬೆರಳುಗಳ ತುದಿಯಲ್ಲಿರುವ ಉಗುರುಗಳನ್ನೊಮ್ಮೆ ನೋಡಿಕೊಳ್ಳಿ. ಅನೇಕರಿಗೆ ಅನೇಕ ರೀತಿಯ ಉಗುರುಗಳು ಇರುತ್ತವೆ. ಉಗುರಿನ ಬಣ್ಣ ಅಲ್ಲಲ್ಲಿ ಬಿಳಿ ಮಚ್ಚೆಗಳು. ಕೆಲವು ಕಡೆ ಗುಲಾಬಿ ಬಣ್ಣದೋಪಾದಿ. ಕೆಲವು ಕಡೆ ಉಗುರು ಹಳ್ಳ ಬಿದ್ದಿರುತ್ತದೆ. ಅಥವಾ ಊದಿಕೊಂಡಿರುತ್ತದೆ ಇತ್ಯಾದಿ. 

‘ನಮ್ಮ ಕಣ್ಣುಗಳು ಯಾವ ರೀತಿ ಈ ಪ್ರಪಂಚವನ್ನು ಕಾಣಲು ಕಿಟಕಿಗಳಾಗಿರುವವೋ, ಗುರುಗಳೂ ಅದೇ ರೀತಿ ವ್ಯಕ್ತಿಯೊಬ್ಬನ ಉಗುರಿನಲ್ಲಿ ನೀಲಿ ಬಣ್ಣ ಮಡುಗಟ್ಟಿದಂತೆ ಇದ್ದಾಗ ಆತನ ಶ್ವಾಸಕೋಶವನ್ನು ಪರೀಕ್ಷೆ ಮಾಡಲು ವೈದ್ಯರೊಬ್ಬರು ಸಲಹೆ ಮಾಡುತ್ತಾರೆ. ಪರೀಕ್ಷೆ ಮಾಡಿದಾಗ ಆ ರೋಗಿಯ ಶ್ವಾಸಕೋಶದಲ್ಲಿ ದ್ರವ ತುಂಬಿಕೊಂಡಿದ್ದುದು, ಆತನಿಗೆ ಸಾಕಷ್ಟು ಆಮ್ಲಜನಕ ದೊರೆಯುತ್ತಿರಲಿಲ್ಲವೆಂಬುದು ದೃಢಪಟ್ಟಿತು.

ಹೈಪಟೈಟಿಸ್, ಹೃದಯರೋಗಗಳನ್ನು ಸಹಾ ಉಗುರು ಪರೀಕ್ಷೆ ಮಾಡಿಯೇ ತಿಳಿಯಬಹುದು. ಉಗುರಿನ ವ್ಯತ್ಯಯಗಳು ಅನೇಕ ಶಿಲೀಂಧ್ರ ಸೋಕುಗಳಿಂದ ಅಥವಾ ಅನೀಮಿಯಾ (ರಕ್ತಹೀನತೆ) ಉಂಟಾಗಿರುವುದನ್ನು ಬಹಿರಂಗಪಡಿಸುತ್ತವೆ. ಬಳೀ ಬಣ್ಣವುಳ್ಳ, ಕಳಾಹೀನವಾದ ಉಗುರಿನ ಬುಡವನ್ನು ನೋಡಿದಾಗ ನೋಡಿದಾಗ ಆ ವ್ಯಕ್ತಿಯಲ್ಲಿ ಕೆಂಪು ರಕ್ತಕಣಗಳ ಕೊರತೆಯನ್ನು ಊಹಿಸಬಹುದು. ಇದೇ ರೀತಿ ಉಗುರು ತೆಳುವಾಗಿ, ವಕ್ರವಾಗಿ ಬದುಗಳಲ್ಲಿ ಉಬ್ಬಿದ್ದರೆ ಅಂಥವರಿಗೆ ಕಬ್ಬಿಣಾಂಶದ ಕೊರತೆ ಇರುವ ಸೂಚನೆ. ಹೃದಯ ರೋಗಗಳಿಂದಾಗಿ ಉಗುರಿನ ಬುಡ ಕೆಂಪಾಗಿರಬಹುದು. ಆಗಾಗ ಉಗುರು ಕಚ್ಚುತ್ತಿರುವವರಿಗೆ ಗೀಳುರೋಗ (obsessive compulsive disorder) ಆಗಿರಬಹುದು. 

ಆರೋಗ್ಯವಂತರ ಉಗುರುಗಳು ನೋಡಲು ಸುಂದರವಾಗಿರುತ್ತವೆ. ಉಗುರಿಗೆ ಪೆಟ್ಟು ಬಿದ್ದಿದ್ದರೆ, ಅಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಮತ್ತು ಸೋಂಕು ತಲುಲಿದ್ದರೆ, ವಿಶೇಷವಾಗಿ ಗಮನಿಸಿ ಚಿಕಿತ್ಸೆ ಪಡೆಯಬೇಕು. ಉಗುರಿನಲ್ಲಿ ಊತ, ನೋವು ಕಾಣಿಸಿಕೊಂಡರೆ ಚರ್ಮವೈದ್ಯರ ಸಹಾಯ ಪಡೆಯಬೇಕು. ಉಗುರಿನಲ್ಲಿ ರಂಧ್ರವಾಗಿದ್ದರೆ ಉಗುರಿನ ಕೆಳಗೆ ದಟ್ಟ ಕಂದು ಬಣ್ಣದ ಗೆರೆಗಳು ಅಥವಾ ಬಹಳ ಕಾಲ ಉಗುರಿನ ಬುಡದಲ್ಲಿ ಉಳಿಯುವ ವಾಟ್ರ್ಸ(ನೆರುಲಿ) ಗಳಿದ್ದಾಗ ವಿಶೇಷ ತಜ್ಞರ ಸಲಹೆ ಅಗತ್ಯ. ಚರ್ಮದ ಕ್ಯಾನ್ಸರ್ ಕಾಯಿಲೆಯನ್ನು ತೋರ್ಪಡಿಸುವ ಲಕ್ಷಣಗಳು ಉಗುರಿನಲ್ಲಿ ಕಾಣಿಸಿಕೊಳ್ಳುತ್ತವೆ. 

ಉಗುರುಗಳ ರಕ್ಷಣೆ

  1. ಉಗುರುಗಳನ್ನು ಸ್ವಚ್ಛವಾಗಿ ಮತ್ತು ಒಣಗಿದಂತೆ ಇರಿಸಿ.
  2. ಉಗುರು ಕಚ್ಚುವ ದುರಭ್ಯಾಸ ಬೇಡ
  3. ಉಗುರು ಬಿರುಕು ಬಿಡದಂತೆ ಮಾಯಿಶ್ಚರೈಸರ್ ಹಚ್ಚಿ.
  4. ಉಗುರುಗಳನ್ನು ನಾಜೂಕಾಗಿ ಕತ್ತರಿಸಿ
  5. ಕಾಲುಬೆರಳುಗಳ ಉಗುರುಗಳನ್ನು ಅದಷ್ಟು ಹಿಂದಕ್ಕೆ ಕತ್ತರಿಸುತ್ತಾ ಹೋಗಬೇಡಿ. 
  6. ಸಮತೋಲನವಾದ ಪುಷ್ಟಿಕರ ಆಹಾರ ಸೇವನೆ ಮಾಡಿ.
  7. ನೀವು ವ್ಯೆದ್ಯರ ಬಳಿ ಹೋದಾಗ, ನಿಮ್ಮ ಉಗುರನ್ನು ಒಮ್ಮೆ ಪರೀಕ್ಷಿಸುವಂತೆ ಹೇಳಿ. ಏಕೆಂದರೆ ಉಗುರು ನಿಮ್ಮ ದೇಹದ ಕಿಟಕಿಯಂತೆ ಕೆಲಸ ಮಾಡುತ್ತದೆ. ಹಳದಿ ಬಣ್ಣಯುಕ್ತ ಉಗುರು (ಸಕ್ಕರೆ ಕಾಯಿಲೆಯನ್ನು) ಅರ್ಧ ಬಿಳಿ, ಅರ್ಧ ಕೆಂಪು ಇರುವ ಉಗುರುಗಳು ಕಿಡ್ನಿ ಸಮಸ್ಯೆಯನ್ನು ತೋರಿಸುತ್ತವೆ.

ಡಾ. ವಸುಂಧರಾ ಭೂಪತಿ
bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com