ಮುಖ್ಯಮಂತ್ರಿಗಳೇ.. ನಿಮಗಿದೋ ನೀವು ಓದಲೇಬೇಕಾದ ದೆಹಲಿಯ ಸಂದೇಶ (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಬಿಜೆಪಿಯ ನ.1 ನ.2 ಎಂದೇ ಖ್ಯಾತರಾದವರ ಮೇಜಿನಮೇಲೆ  ಸಿಎಂ ಬದಲಾವಣೆ ವಿಚಾರ ಬಂದಿದೆ. ಒಂದು ರೀತಿಯಲ್ಲಿ ಈ ವಿಚಾರ ಕಬ್ಬಿಣದ ಕಡಲೆಯೇ ಎನ್ನಬಹುದು. ಬದಲಾವಣೆ ಮಾಡಿದರೆ ಪಕ್ಷಕ್ಕೆ ಮುಜುಗರ... 
ಸಿಎಂ ಬೊಮ್ಮಾಯಿ- ಮೋದಿ
ಸಿಎಂ ಬೊಮ್ಮಾಯಿ- ಮೋದಿ

ಅನಾದಿ ಕಾಲದಿಂದಲೂ, ದೆಹಲಿ ಐತಿಹಾಸಿಕವಾಗಿ, ಭೌಗೋಳಿಕವಾಗಿ, ರಾಜಕೀಯವಾಗಿ ತನ್ನ ಮಹತ್ವವನ್ನ ಕಾಯ್ದಿರಿಸಿಕೊಂಡು ಬಂದಿದೆ. ಇನ್ನು ಕಳೆದ 50 ವರ್ಷದಿಂದ ರಾಜಕೀಯವನ್ನು ಗಮನಿಸುವವರಿಗೆ ದೆಹಲಿ ಏನು ಎಂಬ ಅರಿವಿದೆ. ಅದಕ್ಕೆ ಅಲ್ಲವೇ ರಾಜಕಾರಣಿಗಳು ದೆಹಲಿಗೆ ದಂಡವತ್ತ ಪ್ರಣಾಮವನ್ನ ಕನಿಷ್ಠ ತಿಂಗಳಿಗೆ ಒಮ್ಮೆ ಆದರೂ ಖುದ್ದಾಗಿ ಬಂದು ಹಾಕುವುದು.

ಇನ್ನು ರಾಜಕೀಯ ಬದಲಾವಣೆಗಳು ಎನ್ನುವ ವಿಷಯ ಬಂದರೆ ಸಾಕು, ಯಾವುದೇ ಪಕ್ಷಕ್ಕೆ ಆದರೂ ಇಡೀ ಪ್ರಕ್ರಿಯೆ ಆರಂಭವಾಗಿ ಅಂತ್ಯವಾಗುವುದು ದೆಹಲಿಯಲ್ಲೇ. ಅದರ ಅತೀ ನಿಕಟಪೂರ್ವ ತಾಜಾ ಉದಾಹರಣೆ ಅಂದರೆ ಅದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬದಲಾವಣೆಯೇ. ಬಿಎಸ್ವೈ ಬದಲಾವಣೆ ದೆಹಲಿಯಿಂದ ಆರಂಭವಾಗಿ ಎಲ್ಲಾ ರಾಜಕೀಯ ವಿಧಿವತ್ತುಗಳು ದೆಹಲಿಯಲ್ಲೇ ಹೇಗೆ ಅಂತ್ಯವಾಯಿತು ಎಂಬುದನ್ನು ನಾವು kannadaprabha.com ನ ಈ ಹಿಂದಿನ ಅಂಕಣಗಳಲ್ಲಿ ವಿವರಿಸಿದ್ದೇವೆ. ಈಗ ಅಂತಹ ಮತ್ತೊಂದು ರಾಜಕೀಯ ಬದಲಾವಣೆ ಆಗುವುದು ಎನ್ನುವ ರಾಜ್ಯದ ಸುದ್ದಿಗೆ ದೆಹಲಿಯಿಂದಲೇ ತೆರೆಬಿದ್ದಿದೆ. 

ಸಿಎಂ ಮಂಡಿ ನೋವಿನಿಂದ ಬಳಲುತ್ತಿದ್ದಾರೆ ಎಂದು ಈ ಹಿಂದೆಯೇ ನಮ್ಮ ಅಂಕಣದಲ್ಲಿ ಹೇಳಿದ್ದೆವು. ಇನ್ನು ಅದೇ ಮಂಡಿ ನೋವಿನ ಕಾರಣ ಹೇಳಿ ಶಸ್ತ್ರ ಚಿಕೆತ್ಸೆ ಪಡೆಯಲು ಮೂರು ತಿಂಗಳು ವಿದೇಶ ಪ್ರವಾಸ ಇಟ್ಟುಕೊಳ್ಳಿ, ಅದೇ ಸಂಧರ್ಭದಲ್ಲಿ ಹೊಸ ಮುಖ್ಯಮಂತ್ರಿಯನ್ನು ಘೋಷಿಸುವೆವು ಮತ್ತು ಜನವರಿ ಹತ್ತಕ್ಕೆ ಮುಖ್ಯಮಂತ್ರಿಗಳು ಬದಲಾಗಿಬಿಡುವರು ಎಂಬ ಸುದ್ದಿ ಕರ್ನಾಟಕದಲ್ಲಿ ವಿದ್ಯುತ್ ವೇಗದಲ್ಲಿ ಹರಡುತ್ತಿದೆ. ಈ ಸುದ್ದಿ ನಿಜವಿರಬಹುದೇ ಎಂದು ಒಮ್ಮೆ ಮುಖ್ಯಮಂತ್ರಿಗಳಾದಿಯಾಗಿ ಅವರ ಆಪ್ತ ಮಂತ್ರಿಗಳು ವಿಚಲಿತರಾಗಿದ್ದೂ ಉಂಟು.
 
ಕ್ರಿಪ್ಟೋ ಕರೆನ್ಸಿ ಹಗರಣದಲ್ಲಿ 800 ಕೋಟಿ ಹಣವನ್ನ ಪಡೆದು ಮುಖ್ಯಮಂತ್ರಿಗಳ ಮಗ ವಿದೇಶಕ್ಕೆ ರವಾನಿಸಿದ್ದಾರೆ ಎಂಬ ಸುದ್ದಿ ಕಳೆದ ಎರಡು ತಿಂಗಳಿಂದ ಕೇಳಿ ಬರುತ್ತಿದೆ. ಅದರ ಸತ್ಯಾಸತ್ಯತೆಗಳಿಗೆ ಮತ್ತೆ ಬರೋಣ. 

ಇಲ್ಲಿ ತತ್ಕ್ಷಣದ ವಿಚಾರ ಮುಖ್ಯಮಂತ್ರಿ ಬದಲಾಗುವರೆ ಇಲ್ಲವೇ ಎಂಬುದನ್ನು ನೋಡೋಣ...

ಸಂಸತ್ತಿನ ಸಮಯದಲ್ಲಿ ದೊಡ್ಡ ನಾಯಕರನ್ನು ಭೇಟಿ ಮಾಡುವುದು ಕೊಂಚ ಸುಲಭ, ಅದು ಸಂಸತ್ತಿನಲ್ಲಿ ಗುಪ್ತ ಚರ್ಚೆಗಳು ಸರ್ವೇ ಸಾಮಾನ್ಯ, ಆದರೆ ಗುಪ್ತ ಚರ್ಚೆಗಳು ಎಂದೂ ಗುಪ್ತವಾಗಿ ಇರದು ಎಂಬುದು ಮತ್ತೊಂದು ಕಡೆಯಾದರೆ. ಸದ್ಯ ಉತ್ತರ ಪ್ರದೇಶ, ಉತ್ತರಾಖಂಡ ಚುನಾವಣೆಗಳ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿಗಳ ಬದಲಾವಣೆಯೇ ಈಗ ಎಲ್ಲರ ಕಿವಿ ಅರಳಿಸಿರುವ ವಿಷಯ. ಹಾಗೆಯೇ ಬಿಜೆಪಿಯ ನ.1 ನ.2 ಎಂದೇ ಖ್ಯಾತರಾದವರ ಮೇಜಿನಮೇಲೆ ಮುಖ್ಯಮಂತ್ರಿ ವಿಚಾರ  ಬಂದಿದೆ. ಒಂದು ರೀತಿಯಲ್ಲಿ ಈ ವಿಚಾರ ಕಬ್ಬಿಣದ ಕಡಲೆಯೇ ಎನ್ನಬಹುದು. ಬದಲಾವಣೆ ಮಾಡಿದರೆ ಪಕ್ಷಕ್ಕೆ ಮುಜುಗರ, ಅಷ್ಟೇ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಯನ್ನ ಕಾಂಗ್ರೆಸ್ ಕೈಯಲ್ಲಿ ಇಟ್ಟಂತೆಯೇ. ಬದಲಾಗದೆ ಇದ್ದರೆ, ಇನ್ನೇನು ಹೊರ ಬರುವುದೋ ಎಂಬ ಆತಂಕ. ಇದೆಲ್ಲದರ ಮಧ್ಯೆ ಹೈ ಕಮಾಂಡ್ ನಿರ್ಧಾರ ಹೀಗಿದೆ...

"ಮುಖ್ಯಮಂತ್ರಿ ಬದಲಾವಣೆ ಪ್ರಶಯೇ ಇಲ್ಲ, ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಅವರು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯ ಆಸ್ತಿಯಾಗುವರು". ಎನ್ನುವುದು ದೆಹಲಿ ನಾಯಕರ ಸ್ಪಷ್ಟ ನಿಲುವು.

ಹಾಗಾಗಿ ಸದ್ಯ ಮುಖ್ಯಮಂತ್ರಿಗಳು ಮಂಡಿ ನೋವಿನ ಜೊತೆಗೆ ಮಂಡೆ ನೋವು ಕಡಿಮೆ ಮಾಡಿಕೊಳ್ಳುವಲ್ಲಿಯೂ ಗಮನ ಹರಿಸಬಹುದು!!

ಪ್ರಧಾನಿಯಿಂದ ತಿಂಡಿ ಕೂಟ, ಕರ್ನಾಟಕದ ಕೆಲ ಸಂಸದರಿಗೆ ಹಿಂದಿ ಪಾಠ.

ದಕ್ಷಿಣ ಭಾರತದ ಸಂಸದರಿಗೆ ಪ್ರಧಾನಿ ಔತಣ ಕೂಟವನ್ನ ಏರ್ಪಡಿಸಿದ್ದರು, ಅದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇರುವ ಕರ್ನಾಟಕದ ಸಂಸದರದ್ದೇ ಮೇಲುಗೈ. ಇನ್ನು ಪ್ರಧಾನಿಗಳು ಎಲ್ಲ ಅನೌಪಚಾರಿಕ ಭೇಟಿಯಲ್ಲಿ ಅತಿಥಿಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಹಾಗೆ ನಿನ್ನೆ ನಡೆದ ತಿಂಡಿ ಕೂಟದಲ್ಲಿ ಪ್ರಧಾನಿ ಸಂಸದರಲ್ಲಿ ನೀವು ಸರಕಾರದಿಂದ ಬರುವ ಸವಲತ್ತುಗಳನ್ನು ಬಿಟ್ಟು ವಿಶೇಷವಾಗಿ ಏನು ಮಾಡಿದ್ದೀರಿ ಎಂದಾಗ, ಹಿರಿಯ ಸಂಸದರಿಗೆ ಮೊದಲ ಆದ್ಯತೆ ನೀಡಲೆಂದು ದಾವಣಗೆರೆ ಸಂಸದರಲ್ಲಿ ಕೇಳಿದರೆ, ನಮಗೆ ಈ ಯೋಜನೆಯಲ್ಲಿ ದುಡ್ಡು ಬಂದಿಲ್ಲ, ಆ ಯೋಜನೆಯಲ್ಲಿ ದುಡ್ಡು ಬಂದಿಲ್ಲ ಎಂದು ಹೇಳಲು ಆರಂಭಿಸಿದರಂತೆ. ಸಿದ್ದೇಶ್ವರ ಅವರ ಪ್ರಸ್ತಾವನೆ ಕೇಳಿ ಮೋದಿಯವರು "ನಿಮಗೆ ಹಿಂದಿ ಅರ್ಥವಾಗಿಲ್ಲ ಎಂದು ಕೊಳ್ಳುವೆ,  ಹಿಂದಿಯಲ್ಲಿ ನಾನು ಹೇಳಿದ್ದನ್ನು ಕನ್ನಡದಲ್ಲಿ ವಿವರಿಸಿ ಜೋಶಿ", ಎಂದರಂತೆ. ಏನೇ ಆದರೂ ರಾಜಕೀಯದಲ್ಲಿ ಚಾಕಚಕ್ಯತೆ ಎಷ್ಟಿದೆ ಎಂದು ತೋರಬೇಕಾದರೆ ಹಿಂದಿ ಬರಬೇಕು ನೋಡಿ.

ಸರಳತೆಯೋ, ಅನಿವಾರ್ಯತೆಯೋ- ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಓಡಾಡುವುದು ಕ್ಯಾಬ್ನಲ್ಲಿ

ದೆಹಲಿಯಲ್ಲಿ ಸಂಸದರಾದ ನಂತರ ಕ್ಯಾಬ್ನಲ್ಲಿ ಓಡಾಡುವ ಪೈಕಿ ಎರಡನೇ ಸಂಸದರು ಎಂದರೆ ಅದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ. ಮೊದಲು ಈ ಟ್ರೆಂಡ್ ಶುರುವಾಗಿದ್ದು ಮಾಜಿ ಸಂಸದೆ ರಮ್ಯರಿಂದ. ರಮ್ಯಾ ಎಂದೂ ಸ್ವಂತ ಕಾರರನ್ನು ದೆಹಲಿಯಲ್ಲಿ ಹೊಂದಿಲ್ಲ, ಹಾಗೆ ಓಲಾ ಉಬರ್ ಕ್ಯಾಬ್ ನಲ್ಲಿ ಓಡಾಡುತ್ತಿದ್ದ ರಮ್ಯಾರ ನಡುವಳಿಕೆ ಸಾಕಷ್ಟು ಜನರ ಕಣ್ಣರಳಿಸಿತ್ತು. ಹಾಗೆ ಈ ಮುಂಚೆ ಸಚಿವೆ ಆಗುವ ಮುನ್ನ ಶೋಭಾ ಕರಂದ್ಲಾಜೆ ಅವರ ಮನೆಯಲ್ಲಿ ನಿತ್ಯ ಕೈಕರ್ಯಕ್ಕೆ ಓರ್ವ ಸಹಾಯಕರು ಇಲ್ಲದೆ ಇರುವುದು ಮತ್ತು ತಾವೇ ಎಲ್ಲ ಕೆಲಸ ಮಾಡುವುದು ಅಚ್ಚರಿ ಮೂಡಿಸಿತ್ತು. ಈಗ ಸಂಸದ ತೇಜಸ್ವಿ ಸೂರ್ಯ ದೆಹಲಿ ಯಲ್ಲಿ ಕ್ಯಾಬ್ ಅಲ್ಲಿ ಓಡಾಡುವುದು ಯುವ ಮೋರ್ಚಾ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದಿದೆ. ಅವರ ಸರಳತೆ ಬಗ್ಗೆ ಹರ್ಷವು ವ್ಯಕ್ತವಾಗಿದೆ. 

ಅದರ ಜೊತೆಗೆ ಸಹಾಯಕರು ಚಾಲಕರಿಂದಲೇ, ಗುಸು ಗುಸು ಪಿಸು ಪಿಸು ಹೊರಗೆ ಹೋಗುವುಸು ಹಾಗಾಗಿ ಬಹಳಷ್ಟು ಪ್ರಭಾವಿಗಳು ಕಡಿಮೆ ಸಹಾಯಕರನ್ನು ಜೊತೆಗೆ ಇಟ್ಟುಕೊಳ್ಳುವರು ಎಂಬುದೂ ಸುಳ್ಳಲ್ಲ, ಇರಲಿ ಒಟ್ಟಿನಲ್ಲಿ ಒಂದಿಷ್ಟು ದೆಹಲಿಯ ವಾಯು ಮಾಲಿನ್ಯ ಕ್ಕೆ ಕೊಡುಗೆ ಸೇರುವುದು ತಪ್ಪಿದಂತೆ ಆಯಿತು!!

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com