ಕಾಸು, ಮೋಕ್ಷ ಎರಡಕ್ಕೂ ದಾರಿ ಮಾಡಿಕೊಟ್ಟಿದೆ ಕಾಶಿ ಕಾರಿಡಾರ್!

ಹಣಕ್ಲಾಸು-287-ರಂಗಸ್ವಾಮಿ ಮೂಕನಹಳ್ಳಿ
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಭಾಷಣ
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಭಾಷಣ

ಈ ವಾರ ಭಾರತದಲ್ಲಿ ಕಾಶಿ ಕಾರಿಡಾರ್ ಬಹಳ ಸದ್ದು ಮಾಡುತ್ತಿದೆ. ಈ ಕಾಶಿ ಕಾರಿಡಾರ್ ಗೆ ಮಾಡಿರುವ ಒಟ್ಟು ಖರ್ಚು 13,450ಕೋಟಿ ರೂಪಾಯಿಗಳು ಎನ್ನುತ್ತದೆ ಅಂಕಿ-ಅಂಶ. ಇಷ್ಟೊಂದು ದೊಡ್ಡ ಮಟ್ಟದ ಹಣವನ್ನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿರುವುದು ಬಹಳಷ್ಟು ಜನರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. 

ಜನರಿಗೆ ಬೇಕಿರುವುದು ಮೋಕ್ಷವಲ್ಲ, ಕೆಲಸ ಎನ್ನುವ ಕೂಗನ್ನ ಸಮಾಜದ ಒಂದು ವರ್ಗ ಶುರು ಮಾಡಿದೆ. 352 ವರ್ಷಗಳ ಹಿಂದೆ ಮೊಗಲರ ದಾಳಿಯಿಂದ ಝರ್ಜರಿತವಾಗಿದ್ದ ಕಾಶಿ ವಿಶ್ವನಾಥ ಮಂದಿರಕ್ಕೆ ಈ ಮಟ್ಟದ ಖರ್ಚು ಮಾಡಿರುವುದು ಕೆಲವರ ಹುಬ್ಬೇರುವಂತೆ ಮಾಡಿದೆ. ಇಷ್ಟು ದೊಡ್ಡ ಮಟ್ಟದ ಹಣ ಮೋಕ್ಷಕ್ಕೆ ಮಾತ್ರ ಖರ್ಚು ಮಾಡಿಲ್ಲ ಎನ್ನುವುದನ್ನ ಪ್ರಶ್ನಿಸುವರು ಗಮನಿಸಬೇಕು. 

ಈ ಕಾರಿಡಾರ್ ನಿರ್ಮಾಣದಲ್ಲಿ ಕೂಡ ಬಹಳಷ್ಟು ಕೆಲಸಗಳು ಸೃಷ್ಟಿಯಾಗಿದೆ. ಇದು ಮುಗಿದು ಲೋಕಾರ್ಪಣೆ ಆದ ಮೇಲೆ ಕೂಡ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ. ಜಗತ್ತಿನ ದೊಡ್ಡ ವೃತ್ತಿಪರರ ನೆಟ್ ವರ್ಕ್ ಹೊಂದಿರುವ ಸಂಸ್ಥೆಯಾದ ಅರ್ನೆಸ್ಟ್ ಅಂಡ್ ಯಂಗ್, ಕಾಶಿ ವಿಶ್ವನಾಥ ಸ್ಪೆಷಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್ ಎದುರು ಮುಂದಿನ ಭಾನುವಾರ ಒಂದು ಪ್ರೆಸೆಂಟೇಷನ್ ನೀಡಲಿದೆ. ಇದರಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಬರುವ ಆದಾಯದ ಲೆಕ್ಕಾಚಾರ ಮಾಡಿ ಕೊಡಲಿದ್ದಾರೆ. ಜೊತೆಗೆ ಬರುವ ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಕ್ರೌಡ್ ಮ್ಯಾನೇಜ್ಮೆಂಟ್ ಮಾಡಲು ಕೂಡ ಹೊಸ ಐಟಿ ಸೊಲ್ಯೂಷನ್ ನೀಡಲಿದೆ. ಒಂದು ಅಂದಾಜಿನ ಪ್ರಕಾರ ಹೀಗೆ ಬರುವ ಯಾತ್ರಾರ್ಥಿಗಳ ಯೋಗಕ್ಷೇಮಕ್ಕೆ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ ಗೆ ತಿಂಗಳಿಗೆ 27 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ.

ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಈ ಮಂದಿರಕ್ಕೆ ಸಿಕ್ಕಿರುವ ಪ್ರಚಾರ ಮತ್ತು ಇದರ ಅಭಿವೃದ್ಧಿ ಇಲ್ಲಿಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನ ಕರೆದುತರುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇವಸ್ಥಾನದ ಸುತ್ತಮುತ್ತ 23 ಬಹುದೊಡ್ಡ ಕಟ್ಟಡಗಳ ನಿರ್ಮಾಣ ಕೂಡ ಆಗಿದೆ, ಇಲ್ಲಿ ಆಸ್ಪತ್ರೆಯಿಂದ ಹಿಡಿದು, ಶಾಪಿಂಗ್ ಕಾಂಪ್ಲೆಕ್ಸ್ ವರೆಗೆ ಎಲ್ಲಾ ತರಹದ ವಾಣಿಜ್ಯ ವಹಿವಾಟಿಗೂ ಅವಕಾಶವಿರುತ್ತದೆ. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳ ಸಾವಿರಾರು ಕೋಟಿ ರೂಪಾಯಿ ಆದಾಯ ತಂದುಕೊಟ್ಟ ಕಾರ್ಯಕ್ರಮವಾಗಿತ್ತು. ಉತ್ತರ ಪ್ರದೇಶದ ಸರಕಾರಕ್ಕೆ ಈ ವಿಷಯ ತಿಳಿದಿದೆ. ಇಲ್ಲಿಗೆ ಹೂಡಿರುವ ಹಣವನ್ನ ವರ್ಷ ಅಥವಾ ಎರಡು ವರ್ಷದಲ್ಲಿ ವಾಪಸ್ ಪಡೆಯುವ ಭರವಸೆ ಅವರಿಗಿದೆ. ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆಯನ್ನ ಸಲಹೆಗಾರರನ್ನಾಗಿ ನೇಮಿಸಕೊಂಡಿರುವ ಉದ್ದೇಶ ಕೂಡ ಇದೆ. ಮೊದಲ ದಿನದಿಂದ ವೃತಿಪರತೆ ಕಾಯ್ದುಕೊಳ್ಳುವುದು, ಕೆ.ವಿ ಟ್ರಸ್ಟ್ ಉನ್ನತಮಟ್ಟದಲ್ಲಿ ಬೆಳವಣಿಗೆ ಕಾಣುವಂತೆ ಮಾಡುವುದು. 

ಈ ಕಾರಿಡಾರ್ ವರ್ಷಕ್ಕೆ ಎಷ್ಟು ಆದಾಯ ತಂದುಕೊಡಬಹುದು ಎನ್ನುವುದು ಇನ್ನೂ ಪೂರ್ಣಪ್ರಮಾಣವಾಗಿ ಮಂಡಿಸಿಲ್ಲ, ಆದರೆ ಇದು ಜಗತ್ತಿನ ಎಲ್ಲೆಡೆಯಿಂದ ಜನರನ್ನ ಸೆಳೆಯುವುದು ಮಾತ್ರ ಖಚಿತ.

ಉತ್ತರ ಪ್ರದೇಶ ಸರಕಾರ ಇದರಿಂದ ಎರಡು ಕೆಲಸಗಳನ್ನ ಒಂದೇ ಏಟಿಗೆ ಸಾಧಿಸಿಕೊಂಡಿದೆ. ಮೊದಲೆನೆಯದಾಗಿ ಸಮಸ್ತ ಹಿಂದೂ ಜನರ ಮನಸ್ಸನ್ನ ಗೆದ್ದಿರುವುದು, ಇದರಿಂದ ಅವರಿಗೆ ರಾಜಕೀಯವಾಗಿ ಲಾಭವಾಗಲೂಬಹುದು, ಇದಕ್ಕಿಂತ ಮುಖ್ಯವಾಗಿ ಕಾಶಿಯ ಮುಖವನ್ನ ಬದಲಾಯಿಸಿರುವುದು ತನ್ಮೂಲಕ ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನ ಆಕರ್ಷಿಸುವುದು ಮತ್ತು ಶಾಶ್ವತವಾಗಿ ಆದಾಯವನ್ನ ಸರಕಾರಕ್ಕೆ ಬರುವಂತೆ ಮಾಡಿಕೊಳ್ಳುವುದು.

ಇದನ್ನ ಚುನಾವಣೆಗೆ ಮಾಡಿರುವ ಕರಾಮತ್ತು ಎನ್ನಿ, ಹಿಂದುಗಳನ್ನ ಒಗ್ಗೊಡಿಸುವ ಕಾರ್ಯತಂತ್ರ ಎಂದಾದರೂ ಕರೆಯಿರಿ ಆದರೆ ಇದರ ಹಿಂದಿನ ವಾಣಿಜ್ಯ ಲೆಕ್ಕಾಚಾರ ಮಾತ್ರ ದಿಟ. ಇದರಿಂದ ಕಾಶಿ ಒಂದೇ ಅಲ್ಲದೆ ಸುತ್ತಮುತ್ತಲ ನಗರಗಳ ಆರ್ಥಿಕತೆ ಕೂಡ ಬಹಳ ಸುಧಾರಿಸುತ್ತದೆ.

ಓಮಿಕ್ರಾನ್ ಎನ್ನುವ ವೈರಸ್ಸಿನ ಆರ್ಭಟ ನಿಜವಾಗಿಯೂ ಹೆಚ್ಚಾಗಿದೆಯೋ ಇಲ್ಲವೋ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ವಿಜ್ಞಾನಿಗಳು ಮತ್ತು ವೈರಾಲಜಿಸ್ಟ್ ಗಳು ಇದರಿಂದ ಆಗುವ ತೊಂದರೆ ಮತ್ತು ಇದು ಎಷ್ಟು ಘಾತಕ ಎನ್ನುವುದನ್ನ ತಿಳಿದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಸ್ವಲ್ಪ ನಿಧಾನಿಸಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನೀಡುತ್ತೇವೆ ಎನ್ನುವ ಮಾತುಗಳನ್ನ ಕೂಡ ಅವರು ಆಡಿದ್ದಾರೆ. ಆದರೆ ಮೀಡಿಯಾ ಹೌಸೆಗಳು ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಇದರ ಬಗ್ಗೆ ಹೆಚ್ಚು ಮಸಾಲೆ ಬೆರೆಸಿ ವರ್ಣರಂಜಿತವಾಗಿ ಬಿತ್ತರಿಸಲು ಶುರು ಮಾಡಿದ್ದಾರೆ. ಇದರಿಂದ ಜಗತ್ತಿನಾದ್ಯಂತ ಜನರ ಮನಸ್ಸಿನಲ್ಲಿ ಒಂದು ರೀತಿಯ ಭಯ ಮತ್ತೆ ಆವರಿಸಿದೆ. ಇದರಿಂದ ಈಗಾಗಲೇ ಬಹಳಷ್ಟು ವಲಯಗಳು ಮತ್ತೆ ಕುಸಿತವನ್ನ ಕಾಣಲು ಶುರು ಮಾಡಿವೆ. ಒಮಿಕ್ರಾನ್ 2022 ರಲ್ಲಿ ಕೆಳಗಿನ ಬದಲಾವಣೆಗಳಿಗೆ ಕಾರಣವಾಗಲಿದೆ.

ಟೂರಿಸಂ ವಲಯದಲ್ಲಿ ಕುಸಿತ: ವರ್ಷಾಯಂತ್ಯಕ್ಕೆ ಹೊಸ ದೇಶ, ಹೊಸ ಜಾಗಗಳಿಗೆ ಹೋಗಲು ಸಿದ್ಧವಾಗಿದ್ದ ಮತ್ತು ಆಗಲೇ ಕಾದಿರಿಸಿದ್ದ ಹೋಟೆಲ್ ಮತ್ತು ವಿಮಾನ, ಬಸ್, ಟ್ರೈನ್ ರಿಸರ್ವೇಶನ್ ಗಳು ರದ್ದಾಗುತ್ತಿವೆ. ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಮತ್ತೆ ಹೊಸ ನಿಬಂಧನೆಗಳು ಬಂದಿರುವುದು ಇದಕ್ಕೆ ಮುಖ್ಯ ಕಾರಣ. ವಾರಕ್ಕೂ ಅಥವಾ ಹದಿನೈದು ದಿನಕ್ಕೋ ಬೇರೆ ದೇಶದಿಂದ ಬಂದವರು ಅಥವಾ ಬೇರೆ ದೇಶಕ್ಕೆ ಹೋದವರಿಗೆ ಹದಿನೈದು ದಿನ ಗೃಹ ಬಂಧನದಲ್ಲಿರಿ ಎಂದರೆ ಅಲ್ಲಿಗೆ ಅವರ ಪ್ರವಾಸದ ಉದ್ದೇಶವೇ ಇಲ್ಲವಾಗುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಈ ವಲಯದಲ್ಲಿ ಮತ್ತೆ ಕುಸಿತ ಶುರುವಾಗಿದೆ. ಇದಕ್ಕೆ ಸಂಬಂದಿಸಿದ ರೈಲು, ವಿಮಾನ ಸಂಸ್ಥೆಗಳು ಕೂಡ 2021ರಲ್ಲಿ ಅನುಭವಿಸಿದ ನಷ್ಟವನ್ನ 2002ರಲ್ಲಿ ಕೂಡ ಅನುಭವಿಸಲು ಸಿದ್ಧರಾಗಬೇಕಾದ ಅವಶ್ಯಕತೆ ಹೆಚ್ಚಾಗಿದೆ.

ವರ್ಕ್ ಫ್ರಮ್ ಹೋಂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ: ದೊಡ್ಡ ಮತ್ತು ಬಹು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು 2022 ರಲ್ಲಿ ಕೂಡ ತಮ್ಮ ಕೆಲಸಗಾರರನ್ನ ಮರಳಿ ಸಂಸ್ಥೆಗೆ ಕರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. 2022 ರಲ್ಲಿ ಕೂಡ ವರ್ಕ್ ಫ್ರಮ್ ಹೋಂ ಎನ್ನುವುದು ಮುಂದುವರಿಯಲಿದೆ. ಇದರ ಬಗ್ಗೆ ಕೂಡ ಎಲ್ಲಾ ವಿಷಯದಂತೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಸಂಸ್ಥೆಗಳ ಸುತ್ತಮುತ್ತ ಅವಲಂಬಿತ ಟ್ರಾನ್ಸ್ಪೋರ್ಟ್ ಬಿಸಿನೆಸ್, ಕಾರ್ಪೊರೇಟ್ ಕೇಟರಿಂಗ್ ಎನ್ನುವ ಮಹಾನ್ ಉದ್ಯಮ ಇತ್ಯಾದಿ ಸೇವೆ ನೀಡುವ ವಲಯಗಳು ಕೂಡ ಕುಸಿತವನ್ನ ಕಾಣಲಿವೆ. 2020 ರ ಮಾರ್ಚ್ ನಿಂದ ಶುರುವಾದ ಕುಸಿತಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲದೆ ಇರುವುದು ಈ ಉದ್ಯಮದಲ್ಲಿದ್ದ ಜನ ಬೇರೆ ವಲಯಗಳನ್ನ ನೋಡಿಕೊಳ್ಳುವ ಅನಿವಾರ್ಯತೆಯನ್ನ ಸೃಷ್ಟಿಸಿದೆ. ಜನ ಮನೆಯಿಂದ ಹೊರ ಬರುವ ರೀತಿ ನೀತಿಗಳನ್ನ ಬದಲಿಸಿರುವ ಈ ವೈರಸ್ ಇನ್ನಷ್ಟು ವ್ಯಾಪಾರ ವಹಿವಾಟು ಕುಸಿತಕ್ಕೂ ಕಾರಣವಾಗಬಲ್ಲದು.

ಹೊಸ ಕಾನೂನು ಮಂಡಿಸಲು ಕಾರಣವಾಯ್ತು ಈ ವೈರಸ್: ಕೊರೋನ ನಂತರ ಎಲ್ಲರನ್ನೂ ಮನೆಯಿಂದ ಕೆಲಸ ಮಾಡಿಸಲು ಶುರುವೇನು ಮಾಡಿದರು. ಆದರೆ ಸಂಸ್ಥೆಯಲ್ಲಿ ಇರುತ್ತಿದ್ದ ವೇಳೆಯ ನಿಬಂಧನೆ ಇಲ್ಲಿ ನಿಧಾನವಾಗಿ ಕಳಚುತ್ತ ಹೋಯಿತು. 8 ತಾಸಿನ ಕೆಲಸ ಹತ್ತು, ಹನ್ನೆರೆಡರವರೆಗೆ ವಿಸ್ತಾರವಾಗುತ್ತ ಹೋಯಿತು. ಕೋವಿಡ್ ಸಮಯದಲ್ಲಿ ನಮ್ಮ ಬಳಿ ಕೆಲಸವಿರುವದೇ ಪುಣ್ಯ ಎನ್ನುವಂತೆ ಕೆಲಸಗಾರರು ಕೂಡ ಸಂಸ್ಥೆ ಹೇಳಿದ ಯಾವುದೇ ನಿಬಂಧನೆಗೆ ಚಕಾರ ಎತ್ತದೆ ದುಡಿಯಲು ಶುರು ಮಾಡಿದರು. ಹೀಗಾಗಿ ವರ್ಕ್ ಲೈಫ್ ಬ್ಯಾಲೆನ್ಸ್ ನಲ್ಲಿ ಭಾರಿ ಪ್ರಮಾಣದ ಏರಿಳಿತ ಉಂಟಾಯಿತು. ತೀರಾ ಇತ್ತೀಚಿಗೆ ಅಂದರೆ 12 ನೇ ಡಿಸೆಂಬರ್ 2021 ರಂದು ಪೋರ್ಚುಗಲ್ ಪಾರ್ಲಿಮೆಂಟಿನಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಒಂದು ಹೊಸ ಮಸೂದೆಯನ್ನ ಪಾಸು ಮಾಡಲಾಯಿತು. ಇದರ ಪ್ರಕಾರ ಕೆಲಸದ ಅವಧಿ 8 ತಾಸಿನ ನಂತರ ಯಾವುದೇ ಕೆಲಸಗಾರನಿಗೆ ಕರೆ ಮಾಡುವುದು ಅಥವಾ ವಾಟ್ಸ್ಅಪ್ , ಇನ್ನಿತರೇ ಮೂಲದಿಂದ ಸಂದೇಶ ಕಳಿಸುವುದು ಮಾಡುವಂತಿಲ್ಲ. ಹೀಗೊಮ್ಮೆ ಕರೆ ಅಥವಾ ಸಂದೇಶ ಕಳಿಸಿದರೆ ಅದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಮತ್ತು ಅಂತಹ ಎಂಪ್ಲಾಯರ್ ಗೆ ಜುಲ್ಮಾನೆಯನ್ನ ಸಹ ವಿಧಿಸಲಾಗುತ್ತದೆ. ಕಾನೂನು ಏನೋ ಜಾರಿಗೆ ಬಂದಿದೆ ಆದರೆ ಅದು ಎಷ್ಟರ ಮಟ್ಟಿಗೆ ಲಾಗೊ ಆಗುತ್ತದೆ ಎನ್ನುವುದನ್ನ ಕಾದು ನೋಡಬೇಕು ಎನ್ನುವ ಮಾತನ್ನ ಕೆಲಸಗಾರರು ಆಡುತ್ತಿದ್ದಾರೆ. ತಮ್ಮ ಹಣಬಲ ಮತ್ತು ವರ್ಚಸ್ಸು ಬಳಸಿ ಬಡ ಕಾರ್ಮಿಕರ ಮೇಲೆ ಇಲ್ಲದ ದಬಾವತ್ತು ಹಾಕುವುದು ಕೂಡ ವಿಶ್ವ ಮಾನ್ಯತೆಯನ್ನ ಪಡೆದಿದೆ. ಪೋರ್ಚುಗಲ್ ದೇಶದಲ್ಲಿ ಬಂದ ಇಂತಹ ಕಾನೂನು 2022ರಲ್ಲಿ ಇನ್ನೊಂದಷ್ಟು ದೇಶಗಳಲ್ಲಿ ಕೂಡ ಜಾರಿಗೆ ಬರುವ ಸಾಧ್ಯತೆಯನ್ನ ಕೂಡ ಅಲ್ಲಗೆಳೆಯಲು ಸಾಧ್ಯವಿಲ್ಲ.

ಮನೋದೈಹಿಕ ಬೆಳವಣಿಗೆಗೆ ಮಾರಕ : ಶಾಲೆ ಸದ್ಯದ ಮಟ್ಟಿಗೆ ತೆರೆದಿವೆ. ಈ ಹೊಸ ವೈರಸ್ ಇದೆ ರೀತಿ ಸದ್ದು ಮಾಡುತ್ತಿದ್ದರೆ ಮತ್ತು ಯಾವುದಾದರೂ ಶಾಲೆಯ ನಾಲ್ಕಾರು ಮಕ್ಕಳಿಗೆ ಇದರಿಂದ ತೊಂದರೆಯಾದರೆ ಸಾಕು , ದೇಶದಾದ್ಯಂತ ಶಾಲೆಗಳನ್ನ ಬಂದ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಆಕಸ್ಮಿಕವಾಗಿ ಈ ರೀತಿಯಾದರೆ ಕಳೆದ ಎರಡು ವರ್ಷದಿಂದ ಮನೆಯಲ್ಲಿ ಕಲಿತ ಮಕ್ಕಳು ಮತ್ತೊಮ್ಮೆ ಘಾಸಿಗೆ ಒಳಗಾಗುವ ಸಾಧ್ಯತೆಗಳಿವೆ. ಇದು ಮನಸ್ಸು ಮತ್ತು ದೇಹ ಎರಡರ ಮೇಲೂ ಪರಿಣಾಮ ಬೀರಲಿದೆ. ಮಕ್ಕಳ ಸಮತೋಲಿತ ಬೆಳವಣಿಗಗೆ ಅವರು ಇತರ ಮಕ್ಕಳೊಂದಿಗೆ ಬೆರೆತು ಕಲಿಯುವುದು ಅತ್ಯಂತ ಅವಶ್ಯಕತ. ಇದರ ಜೊತೆ ಜೊತೆಗೆ ಮತ್ತೆ ದೊಡ್ಡ ಶಿಕ್ಷಕ ವರ್ಗದ ಆದಾಯಕ್ಕೂ ಕತ್ತರಿ ಬೀಳುವುದನ್ನ ತಪ್ಪಿಸಲಾಗದು.

ಆಟೋಮೊಬೈಲ್ ನಲ್ಲಿ ಆಗಬಹುದಾದ ಕ್ರಾಂತಿಗೆ ಬ್ರೇಕ್ ಬೀಳಬಹುದು: ಗಮನಿಸಿ ತೀರಾ ಇತ್ತೀಚಿಗೆ ಅಂದರೆ ಕಳೆದ ವಾರ ಜಪಾನ್ ದೈತ್ಯ ಕಾರ್ ಮೇಕರ್ ಟೊಯೋಟಾ ಹೊಸದಾಗಿ 35 ಬಿಲಿಯನ್ ಅಮೇರಿಕನ್ ಡಾಲರ್ ಹಣವನ್ನ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಎಂದು ಹೂಡಿಕೆಯನ್ನ ಮಾಡುವುದಾಗಿ ಹೇಳಿದೆ . 2022 ರಿಂದ 2030, ಅಂದರೆ 8 ವರ್ಷದಲ್ಲಿ ಇಷ್ಟೂ ಹಣವನ್ನ ಅದು ಹೂಡಿಕೆ ಮಾಡಲಿದೆ. ಈ ಮೂಲಕ ಟೆಸ್ಲಾ , ಜನರಲ್ ಮೋಟರ್ಸ್ ಇತ್ಯಾದಿ ಸಂಸ್ಥೆಗಳಿಗೆ ಒಳ್ಳೆಯ ಪೈಪೋಟಿ ನೀಡಲು ಟೊಯೋಟಾ ಸಿದ್ಧವಾಗಿದೆ. ಇದು ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದ ಬಿಸಿ ಬಿಸಿ ಸುದ್ದಿ. ಹೀಗಾಗಿ ಹೂಡಿಕೆದಾರರು ಎಲೆಕ್ಟ್ರಿಕ್ ಕಾರುಗಳ ತಯಾರಿಕಾ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲು ಮುಗಿ ಬೀಳುವುದು ಗ್ಯಾರಂಟಿ. ಆದರೆ ಅದಕ್ಕೂ ಮುನ್ನ ಈ ಹೊಸ ವೈರಸ್ ನ ನಡವಳಿಕೆ ಮೇಲೂ ಒಂದಷ್ಟು ಗಮನವಿರಲಿ. ಏಕೆಂದರೆ ಎಲ್ಲವೂ ವ್ಯವಸ್ಥಿತವಾಗಿದ್ದರೆ ಮಾತ್ರ ಜನ ಕಾರುಗಳ ಮೇಲೆ ಖರ್ಚು ಮಾಡುತ್ತಾರೆ.

ಕೊನೆಮಾತು: ಜಗತ್ತು ಇಂದು ಎಂದಿಗಿಂತಲೂ ಹೆಚ್ಚು ಅಸ್ಥಿರತೆಯನ್ನ ಅನುಭವಿಸುತ್ತಿದೆ. ಅಮೇರಿಕಾ ದೇಶದಲ್ಲಿ ಈ ಹೊಸ ವೈರಸ್ ಕಾಟದಿಂದ ಮತ್ತಿತರ ಕಾರಣಗಳಿಂದ ಹಣದುಬ್ಬರ ಅತ್ಯಂತ ಹೆಚ್ಚಾಗಿದೆ. ಯೂರೋಪು ಕೂಡ ಈ ವೈರಸ್ ನಿಂದ ಬಳಲುತ್ತಿದೆ. ಆರ್ಥಿಕವಾಗಿ ಚೇತರಿಕೆ ಎನ್ನುವುದು ಮರೀಚಿಕೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಜನರ ಜೀವನ ಮಟ್ಟ ಕುಸಿತ ಕಂಡಿದೆ. ಆರ್ಥಿಕವಾಗಿ ಜರ್ಜರಿತವಾಗಿರುವ ಸಮಾಜದ ಒಂದು ವರ್ಗ ಇದೆಲ್ಲ ಮುಗಿದರೆ ಸಾಕು , ನಿತ್ಯ ಬದುಕಿದರೆ ಸಾಕು ಎನ್ನುವ ಹಂತವನ್ನ ತಲುಪಿದ್ದಾರೆ. ಭಾರತದಲ್ಲಿ ಕೂಡ ಸಮಸ್ಯೆಗಳು ಸಾವಿರವಿದೆ. ಇವೆಲ್ಲವುಗಳ ಮಧ್ಯೆ ಭಾರತವನ್ನ ಆರ್ಥಿಕವಾಗಿ ಪುನಸ್ಚೇತನ ಗೊಳಿಸುವಲ್ಲಿ ಕಾಶಿ ಕಾರಿಡಾರ್ ಖಂಡಿತ ಸಹಾಯ ಮಾಡಲಿದೆ. ಆರ್ಥಿಕವಾಗಿ ಇಡೀ ದೇಶದ ವ್ಯವಸ್ಥೆಯನ್ನ ಇದು ಬದಲು ಮಾಡದಿದ್ದರೂ ಮಾನಸಿಕವಾಗಿ ಬೇಕಾದ ಒಂದು ಸ್ಥೈರ್ಯವನ್ನ ಇದು ನೀಡಲಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com