ನಿಮಗೆ ತಿಳಿದಿರಬೇಕಾದ ಹೊಸ ಮಾದರಿ ಬಾಡಿಗೆ ನೀತಿ ಇಲ್ಲಿದೆ!

ಹಣಕ್ಲಾಸು-265

-ರಂಗಸ್ವಾಮಿ ಮೂಕನಹಳ್ಳಿ 

Published: 24th June 2021 12:33 AM  |   Last Updated: 24th June 2021 12:33 AM   |  A+A-


Rental agreement (image shown is for representation purpose only)

(ಸಾಂಕೇತಿಕ ಚಿತ್ರ)

Online Desk

ಜೂನ್ 2, 2021 ರಂದು ಹೊಸ ಮಾಡೆಲ್ ಟೆನೆನ್ಸಿ ಆಕ್ಟ್ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆ ಮತ್ತು ಶೀಘ್ರದಲ್ಲಿ ಜಾರಿಗೆ ಬರಲಿದೆ. ಅಂದರೆ ಹೊಸದಾಗಿ ಬಾಡಿಗೆ ಕಾನೂನನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಮತ್ತು ಅದಕ್ಕೆ ಬೇಕಾದ ಒಪ್ಪಿಗೆಯನ್ನ ಕೂಡ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಡೆದುಕೊಂಡಿದೆ. 

ಗಮನಿಸಿ ನೋಡಿ ಇವೆಲ್ಲವೂ ರಾಜ್ಯಕ್ಕೆ ಸೇರಿದ ವಿಷಯ, ಆದರೂ ಕೇಂದ್ರ ಸರಕಾರ ಇದರಲ್ಲೂ ಹಸ್ತಕ್ಷೇಪ ಮಾಡಿದೆ. ಎಲ್ಲಾ ರಾಜ್ಯ ಸರಕಾರಗಳು ಇವನ್ನ ಅನುಸರಿಸಬೇಕು ಎನ್ನುವ ಫರ್ಮಾನು ಕೂಡ ಹೊರಡಿಸಿದೆ. ಕೇಂದ್ರ ಸರಕಾರ ಇಲ್ಲಿಯವರೆಗೆ ತಂದಿರುವ ಹಲವಾರು ಬದಲಾವಣೆಗಳಲ್ಲಿ ದೇಶದ ಜನತೆ ಇಬ್ಭಾಗವಾಗಿ ನಿಂತದ್ದು ಗೊತ್ತಿರುವ ವಿಷಯ. ಇದೀಗ ಈ ಹೊಸ ಕಾನೂನನ್ನ ರಾಜ್ಯ ಸರಕಾರಗಳು ಜಾರಿಗೆ ತಂದಿದ್ದೆ ಆದರೆ ಮತ್ತೆ ದೇಶ ಇಬ್ಭಾಗವಾಗುತ್ತದೆ. ರಾಜ್ಯ ಸರಕಾರಗಳು ಒಂದಷ್ಟು ಬದಲಾವಣೆಯನ್ನ ತಂದು ಅವುಗಳನ್ನ ಜಾರಿಗೆ ತರಬೇಕಾಗುತ್ತದೆ, ಕೇಂದ್ರ ಸರಕಾರದ ಆದೇಶವನ್ನ ಉಲ್ಲಂಘಿಸಲು ಆಗುವುದಿಲ್ಲ.

ಹೊಸ ಟೆನೆನ್ಸಿ ಆಕ್ಟ್ ನಲ್ಲಿ ಏನಿದೆ?

2011 ರ ಜನಗಣತಿಯಲ್ಲಿ ಒಂದು ಕೋಟಿ ಹತ್ತು ಲಕ್ಷ ಮನೆಗಳು ಖಾಲಿ ಅಥವಾ ಬೀಗ ಹಾಕಲ್ಪಟ್ಟಿವೆ ಎನ್ನುವುದನ್ನ ಕೇಂದ್ರ ಸರಕಾರ ಗಮನಿಸಿದೆ. ಅಲ್ಲದೆ 2021ರಲ್ಲಿ ಈ ಸಂಖ್ಯೆ ದುಪ್ಪಟಾಗಿರುವ ಸಾಧ್ಯತೆಯನ್ನ ಕೂಡ ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ರೀತಿ ಖಾಲಿ ಇರುವ ಮನೆಗಳು ಬಾಡಿಗೆಗೆ ಕೊಟ್ಟಿರುವ ಸಾಧ್ಯತೆ ಬಹಳವಿದೆ. ಬಾಡಿಗೆ ಆದಾಯವನ್ನ ಸರಕಾರದ ತೆರಿಗೆಯಿಂದ ವಂಚಿಸಲು ಈ ರೀತಿ ಖಾಲಿ ಇದೆ ಎಂದಿರುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ ಇಂತಹ ಲೆಕ್ಕವಿಲ್ಲದ ಬಾಡಿಗೆದಾರರನ್ನ ಕೂಡ ಸರಕಾರದ ಲೆಕ್ಕದಲ್ಲಿ ತರುವುದು ಪ್ರಮುಖ ಉದ್ದೇಶ. ಹೊಸ ನೀತಿ ಹೇಗೆ ಕಾರ್ಯ ನಿರ್ವಹಿಸುತ್ತದೆ ನೋಡೋಣ ಬನ್ನಿ.

ಎಲ್ಲಕ್ಕೂ ಮೊದಲಿಗೆ ಬಾಡಿಗೆ ಕರಾರು ಪತ್ರವನ್ನ ನೋಂದಾವಣಿ ಮಾಡಿಕೊಳ್ಳಬೇಕು, ರೆಂಟ್ ಅಥಾರಿಟಿ ಎನ್ನುವ ವೆಬ್ಸೈಟ್ ನಲ್ಲಿ ನಿಗದಿತ ಎಲ್ಲಾ ಕಾಗದ ಪತ್ರಗಳನ್ನ ಅಪ್ಲೋಡ್ ಮಾಡಿ ಬಾಡಿಗೆ ಪತ್ರವನ್ನ ನೊಂದಾಯಿಸಿಕೊಳ್ಳಬೇಕು. ಮಾಲೀಕ ಮತ್ತು ಬಾಡಿಗೆದಾರ ಇಬ್ಬರಿಗೂ ಒಂದು ಕರಾರು ಪತ್ರವನ್ನ ನೀಡಲಾಗುತ್ತದೆ. ಇದಕ್ಕೆ ಸಂಬಂಧಿತ ನೋಂದಾವಣಿ ಸಂಖ್ಯೆಯನ್ನ ಕೂಡ ಕೊಡಲಾಗುತ್ತದೆ. ಇದಕ್ಕೆ ಪೂರಕವಾದ ಎಲ್ಲಾ ಪತ್ರಗಳ ಒಂದು ನಕಲು ರೆಂಟ್ ಆಥಾರಿಟಿ ಕೂಡ ಇಟ್ಟು ಕೊಂಡಿರುತ್ತದೆ.

ಎರಡನೆಯದಾಗಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳು ಬಾಡಿಗೆ ಸಂಬಂಧಿಸಿದ ಅಹವಾಲುಗಳನ್ನ ಸ್ವೀಕರಿಸಲು ಇರಲಿದ್ದಾರೆ, ಹಾಗೆಯೇ ರೆಂಟ್ ಕೋರ್ಟ್ಸ್ ಕೂಡ ತಲೆಯೆತ್ತಲಿವೆ, ಅಂದರೆ ಬಾಡಿಗೆಗೆ ಸಂಬಂಧಪಟ್ಟ ಯಾವುದೇ ಫಿರ್ಯಾದುಗಳಿದ್ದರೆ ಅದನ್ನ ಇದಕ್ಕೆಂದೆ ಇರುವ ಕೋರ್ಟುಗಳಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಹೀಗಾಗಿ ಕೇಸುಗಳ ವಿಲೇವಾರಿ ವೇಗವಾಗಿ ಮಾಡಬಹುದು.

ಮೂರನೆಯದಾಗಿ ಮನೆಯನ್ನ ಬಾಡಿಗೆ ಕೊಡುವ ಮಾಲೀಕ , ಬಾಡಿಗೆದಾರನಿಂದ ಕೇವಲ ಎರಡು ತಿಂಗಳ ಬಾಡಿಗೆಯನ್ನ ಮುಂಗಡ ಹಣವನ್ನಾಗಿ ಪಡೆಯಬಹುದು, ಕಮರ್ಷಿಯಲ್ ಕಟ್ಟಡಗಳ ವಿಷಯದಲ್ಲಿ ಆರು ತಿಂಗಳ ಬಾಡಿಗೆಯನ್ನ ಮುಂಡಗವಾಗಿ ಪಡೆಯುವ ಅವಕಾಶವಿದೆ.

ನಾಲ್ಕನೆಯದಾಗಿ, ಬಾಡಿಗೆದಾರ ಎರಡು ತಿಂಗಳು ಬಾಡಿಗೆ ಹಣವನ್ನ ನೀಡದಿದ್ದರೆ ಅವನನ್ನ ಮನೆಯಿಂದ ಹೊರಹಾಕಲು ರೆಂಟ್ ಕೋರ್ಟ್ ಗೆ ದೂರನ್ನ ನೀಡಬಹುದು. ಬಾಡಿಗೆದಾರ ತಕ್ಷಣ ಮನೆಯನ್ನ ಖಾಲಿ ಮಾಡಿದರೆ ಎರಡು ತಿಂಗಳ ಬಾಡಿಗೆ ಮತ್ತು ಬಡ್ಡಿಯನ್ನ ಸಹ ನೀಡಬೇಕಾಗುತ್ತದೆ. ಎರಡು ತಿಂಗಳ ನಂತರವೂ ಖಾಲಿ ಮಾಡದೆ ಕೋರ್ಟಿನ ಆದೇಶವನ್ನ ಕಾಯುತ್ತ ಕುಳಿತರೆ ಬಾಡಿಗೆಯ ದುಪಟ್ಟು ಹಣವನ್ನ ನೀಡಬೇಕಾಗುತ್ತದೆ. ಉದಾಹರಣೆಗೆ ಬಾಡಿಗೆದಾರ ಎರಡು ತಿಂಗಳ ಬಾಡಿಗೆ ನೀಡಲಿಲ್ಲ ಮತ್ತು ಕೋರ್ಟಿನ ಆದೇಶ ಬರುವವರೆಗೂ ಕಾಯುತ್ತ ಕುಳಿತ್ತಿದ್ದಾನೆ ಎಂದುಕೊಳ್ಳಿ. ಕೋರ್ಟಿನ ಆದೇಶ ಬರಲು ಮತ್ತರೆಡು ತಿಂಗಳಾಯ್ತು ಎಂದುಕೊಳ್ಳಿ,  ಅಂತಹ ಸಂದರ್ಭದಲ್ಲಿ ಮೊದಲ ಎರಡು ತಿಂಗಳ ಬಾಡಿಗೆ ಮತ್ತು ಬಡ್ಡಿ ನೀಡಬೇಕು, ಮೂರನೇ ಮತ್ತು ನಾಲ್ಕನೇ ತಿಂಗಳು ಬಾಡಿಗೆಯ ದುಪ್ಪಟ್ಟು ನೀಡಬೇಕಾಗುತ್ತದೆ. ಅಂದರೆ ಬಾಡಿಗೆ ಹತ್ತು ಸಾವಿರವಿದ್ದರೆ, ಮೂರನೇ ಮತ್ತು ನಾಲ್ಕನೇ ತಿಂಗಳು ತಲಾ ಇಪ್ಪತ್ತು ಸಾವಿರ ನೀಡಬೇಕಾಗುತ್ತದೆ. ಕೆಲವೊಮ್ಮೆ ಕೋರ್ಟಿನ ಆದೇಶ ಬರುವುದು ಇನ್ನು ತಡವಾದರೆ ಮುಂದಿನ ಆರು ತಿಂಗಳ ವರೆಗೆ ನಾಲ್ಕು ಪಟ್ಟು ಹೆಚ್ಚು ಬಾಡಿಗೆಯನ್ನ ನೀಡಬೇಕಾಗುತ್ತದೆ. ಅಂದರೆ ಮಾಸಿಕ ಹತ್ತು ಸಾವಿರದ ಬಾಡಿದೆ ನಲವತ್ತು ಸಾವಿರವಾಯ್ತು. ಆರು ತಿಂಗಳ ನಂತರವೂ ಕೇಸು ವಿಚಾರಣೆ ಮುಗಿಯದಿದ್ದರೆ ಕೋರ್ಟು ತನಗೆ ಇಷ್ಟ ಬಂದ ಮೊತ್ತವನ್ನ ಅಂದರೆ ನಾಲ್ಕು ಪಟ್ಟಿಗಿಂತ ಹೆಚ್ಚಿನ ಹಣವನ್ನ ಬಾಡಿಗೆ ಎಂದು ತೀರ್ಮಾನಿಸಬಹುದು.

ಐದನೆಯದಾಗಿ ಮಾಲೀಕ ಅಥವಾ ಬಾಡಿಗೆದಾರ ಮನೆಯನ್ನ ಖಾಲಿ ಮಾಡಲು ಮೂರು ತಿಂಗಳ ನೋಟಿಸ್ ನೀಡಬೇಕಾಗುತ್ತದೆ. ಅಲ್ಲದೆ ಬಾಡಿಗೆ ಸಮಯವನ್ನ ಅಂದರೆ ಎಷ್ಟು ವರ್ಷಕ್ಕೆ ನೊಂದಾವಣಿ ಮಾಡಿಸಬೇಕು ಎನ್ನುವುದನ್ನ ಅವರುಗಳ ನಡುವೆ ತೀರ್ಮಾನಿಸಿಕೊಳ್ಳಬೇಕು, ಬಾಡಿಗೆ ಮೊತ್ತವನ್ನ ಕೂಡ ಅವರುಗಳೇ ನಿರ್ಧರಿಸಬೇಕು. ವರ್ಷದ ನಂತರ ಬಾಡಿಗೆ ಹೆಚ್ಚು ಮಾಡುವ ಒಪ್ಪಂದ ಕೂಡ ನಿಬಂಧನೆಯಲ್ಲಿ ಬರೆದಿರಬೇಕಾಗಿರುತ್ತದೆ. ಪ್ರತಿ ತಿಂಗಳು ತಾನು ಪಡೆದ ಬಾಡಿಗೆಗೆ ಮಾಲೀಕ ರಸೀದಿ ನೀಡಬೇಕಾಗುತ್ತದೆ. ಬ್ಯಾಂಕ್ ವರ್ಗಾವಣೆಯಾಗಿದ್ದ ಪಕ್ಷದಲ್ಲಿ ಇದರ ಅವಶ್ಯಕತೆಯಿಲ್ಲ. ನಿಗದಿತ ಅವಧಿಗೆ ಮುಂಚೆ ಇದನ್ನ ನವೀಕರಿಸಿಕೊಳ್ಳಬೇಕು. ಬಾಡಿಗೆದಾರ ತಾನು ಬಾಡಿಗೆಗೆ ಪಡೆದ ಮನೆಯನ್ನ ಇನ್ನೊಬ್ಬರಿಗೆ ಬಾಡಿಗೆ ಕೊಡುವಂತಿಲ್ಲ, ಹಾಗೊಮ್ಮೆ ಕೊಡುವುದಾದರೆ ಅದಕ್ಕೆ ಮಾಲೀಕನ ಒಪ್ಪಿಗೆಯಿರಬೇಕು ಮತ್ತು ಅದು ರೆಂಟ್ ಅಗ್ರಿಮೆಂಟ್ ನಲ್ಲಿ ನಮೂದಿಸರಬೇಕಾಗುತ್ತದೆ.

ಆರನೆಯದಾಗಿ ಬಾಡಿಗೆದಾರ ಮನೆಯನ್ನ ಬಿಟ್ಟು ಹೋಗುವ ಸಮಯದಲ್ಲಿ ಮಾಲೀಕ ಖರ್ಚುಗಳನ್ನ ಹಿಡಿದುಕೊಂಡು ಉಳಿದ ಹಣವನ್ನ ನೀಡಬೇಕಾಗುತ್ತದೆ. ಕೆಲವೊಮ್ಮೆ ಎರಡು ತಿಂಗಳ ಮುಂಗಡ ಹಣಕ್ಕಿಂತ ಹೆಚ್ಚಿನ ಖರ್ಚು ಆಗಿದ್ದಲ್ಲಿ ಅದನ್ನ ರೆಂಟ್ ಕೋರ್ಟ್ ನಲ್ಲಿ ಕಾರಣ ಸಮೇತ ನೀಡಿ ಬಾಡಿಗೆದಾರನಿಂದ ವಾಪಸ್ಸು ಪಡೆಯಬಹದು. ಬಾಡಿಗೆ ಕಟ್ಟಡದ ಸಾಮಾನ್ಯ ಜಾಗ ಅಂದರೆ ಎಲ್ಲಾ ಬಾಡಿಗೆದಾರರು ಉಪಯೋಗಿಸುವ ಜಾಗವನ್ನ ಸರಿಯಾಗಿ ಇಟ್ಟು ಕೊಳ್ಳುವುದು ಮನೆಯ ಮಾಲೀಕನ ಜವಾಬ್ದಾರಿ, ಉಳಿದಂತೆ ಮನೆಯ ಒಳಗಡೆ  ಬಾಡಿಗೆಗೆ ಬಂದಾಗ ಹೇಗಿತ್ತು ಅದೇ ಸ್ಥಿತಿಯನ್ನ ಕಾಯ್ದು ಕೊಳ್ಳುವುದು ಬಾಡಿಗೆದಾರನ ಜವಾಬ್ದಾರಿ. ಮನೆಯ ಒಳಗಡೆ ಬರುವ ಸಣ್ಣ ಪುಟ್ಟ ರಿಪೇರಿಗಳು ಕೂಡ ಅವನಿಗೆ ಸೇರಿದ್ದು. ಕಟ್ಟಡದಲ್ಲಿ ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ಉಂಟಾದರೆ ಆಗ ಅದನ್ನ ಸರಿ ಮಾಡಿಸುವುದು ಮಾಲೀಕನ ಕೆಲಸ.

ಏಳನೆಯದಾಗಿ, ಮನೆಯ ಮಾಲೀಕ ಮನೆಯನ್ನ ಮಾರಲು ಬಯಸಿದಾಗ, ಅಥವಾ ಕಟ್ಟಡದ ರಿಪೇರಿ ಇತ್ಯಾದಿ ಕಾರಣಗಳಿಗೆ ಬಾಡಿಗೆದಾರರನ್ನ ಬದಲಾಯಿಸಲು ಬಯಸಿದಲ್ಲಿ ಇದನ್ನ 15 ದಿನದ ನೋಟಿಸ್ ಮೂಲಕ ಮಾಡಿಕೊಳ್ಳಬಹುದು.

ಎಂಟನೆಯದಾಗಿ, ಮನೆಯ ಮಾಲೀಕನ ಮರಣವಾದರೆ, ಆತನ ಮಕ್ಕಳು ಇರುವ ಬಾಡಿಗೆದಾರನನ್ನ ಬಿಡಿಸಲು ಬಯಸಿದರೆ ಆಗ ಕೂಡ 15 ದಿನದಲ್ಲಿ ಬಾಡಿಗೆದಾರ ಮನೆಯನ್ನ ಖಾಲಿ ಮಾಡಬೇಕಾಗುತ್ತದೆ.

ಒಂಭತ್ತನೇಯದಾಗಿ, ಬಾಡಿಗೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಮಾಲೀಕ ಬಾಡಿಗೆದಾರನಿಗೆ ಮೂಲಭೂತ ಅವಶ್ಯಕತೆಯಾದ ನೀರು, ವಿದ್ಯುತ್, ಪಾರ್ಕಿಂಗ್, ಲಿಫ್ಟ್, ಜಿಮ್ ಇತ್ಯಾದಿ ಸೌಲಭ್ಯವನ್ನ ಕಡಿತಗೊಳಿಸುವಂತಿಲ್ಲ, ಹಾಗೊಮ್ಮೆ ಕಡಿತಗೊಳಿಸಿದರೆ ಮಾಲೀಕ ಎರಡು ತಿಂಗಳ ಬಾಡಿಗೆಯನ್ನ ಪರಿಹಾರವಾಗಿ ನೀಡಬೇಕಾಗುತ್ತದೆ.

ಹತ್ತನೆಯದಾಗಿ ಬಾಡಿಗೆದಾರ ಮನೆಯನ್ನ ಖಾಲಿ ಮಾಡಿದಾಗ ಖರ್ಚು ಕಳೆದು ಉಳಿದ ಹಣವನ್ನ ವಾಪಾಸ್ಸು ಮಾಡಬೇಕು. ಹಾಗೊಮ್ಮೆ ವಾಪಸ್ಸು ಮಾಡದೆ ಹೋದರೆ ಕೋರ್ಟ್ ಆದೇಶದಂತೆ ಬಡ್ಡಿ ಸಮೇತ ಹಣವನ್ನ ವಾಪಸ್ಸು ಮಾಡಬೇಕಾಗುತ್ತದೆ. ಬಾಡಿಗೆದಾರನ ಮನೆಯನ್ನ ಹೊಕ್ಕು ಪರಿಶೀಲನೆ ನಡೆಸಲು 24 ಗಂಟೆಗಳ ಮೊದಲು ನೋಟೀಸ್ ನೀಡಬೇಕಾಗುತ್ತದೆ. ಸೂರ್ಯ ಹುಟ್ಟುವ ಮುಂಚೆ ಮತ್ತು ಸೂರ್ಯ ಮುಳುಗಿದ ನಂತರ ಮನೆಯನ್ನ ಪ್ರವೇಶಿಸುವಂತಿಲ್ಲ. ಬಾಡಿಗೆ ಹಣದಲ್ಲಿ ಜಗಳವಾದಲ್ಲಿ ಮತ್ತು ಮಾಲೀಕ ಹಣವನ್ನ ತೆಗೆದುಕೊಳ್ಳಲು ಒಪ್ಪದ ಸಮಯದಲ್ಲಿ ಬಾಡಿಗೆದಾರ ಹಣವನ್ನ ರೆಂಟ್ ಅಥಾರಿಟಿಯಲ್ಲಿ ಡೆಪಾಸಿಟ್ ಮಾಡಬಹುದು.

ಪ್ರಾಪರ್ಟಿ ಮ್ಯಾನೇಜರ್ ಹುದ್ದೆಗಳ ಉಗಮ:

ಗಮನಿಸಿ ಇಲ್ಲಿಯವರೆಗೆ ಭಾರತದಲ್ಲಿ ಇಂತಹ ಒಂದು ಹುದ್ದೆಗೆ ಅಥವಾ ಪ್ರೊಫೆಶನ್ ಗೆ ಬೆಲೆ ಇರಲಿಲ್ಲ. ಈ ಕಾನೂನು ಜಾರಿಗೆ ಬಂದರೆ ಪ್ರಾಪರ್ಟಿ ಮ್ಯಾನೇಜರ್ ಎನ್ನುವ ಹೊಸ ವೃತ್ತಿಪರರ ಹೊಸ ಸಮೂಹ ಹುಟ್ಟಿಕೊಳ್ಳಲಿದೆ. ಬಾಡಿಗೆದಾರ ಮತ್ತು ಮಾಲೀಕರ ನಡುವೆ ಇವರು ಬ್ರಿಡ್ಜ್ ನಂತೆ ಕಾರ್ಯನಿರ್ವಹಿಸಲು ಶುರು ಮಾಡುತ್ತಾರೆ. ಹೀಗಾಗಿ ಹೊಸ ಒಂದು ಸರ್ವಿಸ್ ಸೆಕ್ಟರ್ ಉಗಮವಾಗುತ್ತದೆ. ದೂರದ ದೇಶದಲ್ಲಿ ಕುಳಿತು ಇಲ್ಲಿನ ಬಾಡಿಗೆದಾರರ ಜೊತೆಗೆ ಸೆಣಸಲು ಆಗದ ಎನ್ನಾರೈ ಗಳಿಗೆ, ವಯಸ್ಸಾದ ಜನರಿಗೆ ಇದೊಂದು ವರದಾನವಾಗಲಿದೆ. ನಮ್ಮ ಆಸ್ತಿಯನ್ನ ನಾವು ನೋಡಿಕೊಳ್ಳುತ್ತಿದ್ದೆವು, ಇನ್ನು ಮುಂದೆ ನಮ್ಮ ಆಸ್ತಿಯನ್ನ ಬೇರೆ ಯಾರೂ ಒಂದಷ್ಟು ಸರ್ವಿಸ್ ಚಾರ್ಜ್ ಪಡೆದು ನೋಡಿಕೊಳ್ಳುತ್ತಾರೆ. ಇಂತಹ ಕಾನೂನು ಈಗಾಗಲೇ ಯೂರೋಪಿನಲ್ಲಿ ಜಾರಿಯಲ್ಲಿದೆ. ಹಣವುಳ್ಳವರು ಮನೆಯ ಮೇಲೆ ಹೂಡಿಕೆ ಮಾಡುತ್ತಾರೆ. ಇಂತಹ ವೃತ್ತಿಪರರು ಬಾಡಿಗೆ ವಸೂಲಿಯಿಂದ ಹಿಡಿದು ಸಖಲ ಕೆಲಸವನ್ನೂ ಮಾಡುತ್ತಾರೆ. ಯೂರೋಪಿನಲ್ಲಿ ಮನೆ ಖಾಲಿ ಇದೆಯೋ, ಅಥವಾ ಬಾಡಿಗೆದಾರ ಇದ್ದನೋ ಅದರ ತಲೆನೋವು ಕೂಡ ಮಾಲೀಕನಿಗಿಲ್ಲ, ಆತನಿಗೆ ನಿಗದಿತ, ಒಪ್ಪಿತ ಬಾಡಿಗೆಯನ್ನ ತಲುಪಿಸಲಾಗುತ್ತದೆ. ಹೆಚ್ಚಿನ ಬಾಡಿಗೆ ಹಣವನ್ನ ಸೆರ್ವಿಸ್ ಏಜೆಂಟ್ಗಳು ಪಡೆದುಕೊಳ್ಳುತ್ತಾರೆ. ಖಾಲಿಯಾದ ಸಮಯದಲ್ಲಿ ಕೈಯಿಂದ ಹಾಕಿ ನೀಡುತ್ತಾರೆ.

ಕೊನೆ ಮಾತು: ಭಾರತ ಅತ್ಯಂತ ದೊಡ್ಡ ದೇಶ, ನಮಗೆ ನಮ್ಮದೇ ಆದ ಇತಿಹಾಸವಿದೆ, ಪರಂಪರೆಯಿದೆ, ಈ ನೆಲದ ಭಾವನೆಗಳಿಗೆ ತಲೆಬಾಗಿ ಕಾನೂನು ರೂಪಿಸಬೇಕಾಗುತ್ತದೆ. ರೆಂಟ್ ಆಕ್ಟ್ ವಿದೇಶದಲ್ಲಿ ಜಾರಿಯಿರುವ ಕಾನೂನು. ಇದನ್ನ ಜಾರಿಗೆ ಯಥಾವತ್ತಾಗಿ ನಮ್ಮ ನೆಲಕ್ಕೆ ತರಲಾಗುವುದಿಲ್ಲ. ಎರಡು ತಿಂಗಳ ಮುಂಗಡ ಹಣ ಇಂದಿನ ಸಮಯದಲ್ಲಿ ತೀರಾ ಕಡಿಮೆ. ಬಾಡಿಗೆದಾರನ ಮನೆಯೊಳಗೇ ಹೋಗಲು ನೋಟೀಸ್ ನೀಡುವುದು ಎಷ್ಟರ ಮಟ್ಟಿಗೆ ನಮ್ಮಲ್ಲಿ ನಡೆಯಬಹುದು ಎನ್ನುವ ಗುಮಾನಿ ಇದ್ದೆ ಇದೆ. ಜೊತೆಗೆ ಬಾಡಿಗೆ ಕೊಡಲು ಬಂದವರ ಮನೆಯೊಳಗೇ ಕರೆದು ಕುಂಕುಮ ನೀಡುವ ಸಂಪ್ರದಾಯ ನಮ್ಮದು, ಬಾಡಿಗೆ ಪಡೆಯಲು ಹೋದರೂ ಸಾಕು, ಬಾಡಿಗೆದಾರ ಮನೆಯೊಳಗೇ ಆಹ್ವಾನಿಸಿ ಕಾಫಿ, ಟೀ ನೀಡಿ ಉಪಚರಿಸುವ ಸಂಪ್ರದಾಯ ಇನ್ನೂ ನಮ್ಮಲ್ಲಿದೆ. ಇದರ ಜೊತೆಗೆ ಎಲ್ಲಕ್ಕೂ ಕೋರ್ಟು ಕಛೇರಿ ಎಂದು ಓಡಾಡಲು ಸಮಯವನ್ನ ಎಲ್ಲಿಂದ ತರುವುದು? ನೂರರಲ್ಲಿ 10 ರಿಂದ 15 ಪ್ರತಿಶತ ಮಾತ್ರ ಕಿಡಿಗೇಡಿ ಬಾಡಿಗೆದಾರರು ಇದ್ದಾರೆ ಉಳಿದಂತೆ ಬಹುತೇಕರು ಹೇಳಿದ ಸಮಯದಲ್ಲಿ ಬಾಡಿಗೆ ನೀಡುತ್ತಾರೆ. ಹೊಸ ಕಾನೂನಿಂದ ಏನು ಸಾಧನೆಯಾಗುತ್ತದೆ ಎನ್ನುವುದು ಯಕ್ಷ ಪ್ರಶ್ನೆ. ಬಾಡಿಗೆ ಹಣವನ್ನ ಟ್ಯಾಕ್ಸ್ ಬ್ರಾಕೆಟ್ ಗೆ ತಂದರೂ ಅಲ್ಲಿಂದ ಬರುವ ಆದಾಯಕ್ಕಿಂತ ಹೆಚ್ಚಿನ ಹಣ ರೆಂಟ್ ಕೋರ್ಟು, ಅಧಿಕಾರಿಗಳ ವೇತನ ಇತ್ಯಾದಿಗಳಿಗೆ ವ್ಯಯವಾಗುತ್ತದೆ. ಇದರ ಜೊತೆಗೆ ಇನ್ನೊಂದು ಪದರದ ಅವ್ಯವಹಾರಕ್ಕೆ ಕೂಡ ಇದು ಜಾಗ ಮಾಡಿಕೊಡುತ್ತದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp