ದೀಪಾವಳಿ ಮತ್ತು ಆರೋಗ್ಯ (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿ
ದೀಪಾವಳಿ ಹಬ್ಬ ಬರುವುದು ಶರದೃತುವಿನಲ್ಲಿ. ಮಳೆ ಕಡಿಮೆಯಾಗಿ, ಮೋಡಗಳೆಲ್ಲ ತುಂಡರಿಸಿ, ತಿಳಿಮುಗಿಲಾಗಿ ಮಾರ್ಪಟ್ಟಿರುತ್ತದೆ. ನೆಲವು ಹಸಿರಾಗಿ, ಗಾಳಿ, ಮಳೆ, ಬಿಸಿಲು ಹಿತಮಿತವಾಗಿ ಹರವಿಕೊಂಡಿರುತ್ತದೆ. ಇಂಥ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಆಶ್ಚಯುಜ- ಕಾರ್ತೀಕ ಮಾಸಗಳೇ ಶರತ್ ಋತು.
Published: 06th November 2021 08:00 AM | Last Updated: 04th November 2021 06:56 PM | A+A A-

ದೀಪಾವಳಿ
ದೀಪಾವಳಿ ಹಬ್ಬ ಬರುವುದು ಶರದೃತುವಿನಲ್ಲಿ. ಈ ಸಮಯದಲ್ಲಿ ನಮ್ಮ ಆರೋಗ್ಯದ ರಕ್ಷಣೆ ಹಾಗೂ ಸಂವರ್ಧನೆಗೆ ನೆರವಾಗುವ ರೀತಿಯಲ್ಲಿರಬೇಕು. ನಮ್ಮ ಆಹಾರ-ವಿಹಾರ. ಆಯುರ್ವೇದ ಈ ಅಂಶವನ್ನು ಶಾಸ್ತ್ರೀಯವಾಗಿ ನಿಗದಿಪಡಿಸಿದೆ.
ಮಳೆ ಕಡಿಮೆಯಾಗಿ, ಮೋಡಗಳೆಲ್ಲ ತುಂಡರಿಸಿ, ತಿಳಿಮುಗಿಲಾಗಿ ಮಾರ್ಪಟ್ಟಿರುತ್ತದೆ. ನೆಲವು ಹಸಿರಾಗಿ, ಗಾಳಿ, ಮಳೆ, ಬಿಸಿಲು ಹಿತಮಿತವಾಗಿ ಹರವಿಕೊಂಡಿರುತ್ತದೆ. ಇಂಥ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಆಶ್ಚಯುಜ- ಕಾರ್ತೀಕ ಮಾಸಗಳೇ ಶರತ್ ಋತು. ಈ ಋತುವಿನ ಮಧ್ಯಭಾಗದಲ್ಲಿ ಬರುವ ದೀಪಾವಳಿ ಹಬ್ಬ ಮನೆಮನೆಯ, ಮನೆ-ಮನದ ಕತ್ತಲೆಯನ್ನು ಹೋಗಲಾಡಿಸುವಂಥದು. ಈ ಸಮಯದಲ್ಲಿ ನಮ್ಮ ಆರೋಗ್ಯದ ಪಾಲನೆಗಾಗಿ ಅನುಸರಿಸಬೇಕಾದ ಆಹಾರ-ವಿಹಾರ ಕುರಿತ ಕ್ರಮ-ನಿಯಮಗಳನ್ನು ಆಯುವೇದ ಶಾಸ್ತ್ರ ವ್ಯವಸ್ಥಿತವಾಗಿ ತಿಳಿಹೇಳಿದೆ.
ಆಹಾರ
ವರ್ಷ ಋತುವಿನಲ್ಲಿ ಶರೀರವು ತಣ್ಣಗಿದ್ದು, ವಾತಾವರಣದ ಶೀತವು ಅಭ್ಯಾಸವಾಗಿರುತ್ತದೆ. ಇದು ಮುಗಿದ ಮೇಲೆ ಹಠಾತ್ತಾಗಿ ಶರದೃತುವಿನಲ್ಲಿ ಬಿಸಿಲು ಬರುವುದರಿಂದ ಮಳೆಗಾಲದಲ್ಲಿ ಸಂಗ್ರಹವಾಗಿದ್ದ ಪಿತ್ತವು ಪ್ರಕೋಪಗೊಳ್ಳುತ್ತದೆ. ಈ ಕಾಲದಲ್ಲಿ ಶಕ್ತಿ ಮಧ್ಯಮವಾಗಿರುತ್ತದೆ. ಪಿತ್ತ ದೋಷವನ್ನು ಶಮನಗೊಳಿಸುವವಂಥ ಸಿಹಿ, ಕಹಿ, ಒಗರು ರುಚಿಗಳುಳ್ಳ ಆಹಾರ ಸೇವನೆ ಈ ಸಮಯಕ್ಕೆ ಸೂಕ್ತವಾಗಿದೆ. ಜೀರ್ಣಕ್ಕೆ ಸುಲಭವಾದ ಪ್ರಮಾಣದಲ್ಲಿ ಹಸಿವಾದಾಗ ಮಾತ್ರ ಊಟ ಮಾಡಬೇಕು. ಹಳೆಯ ಅಕ್ಕಿ, ಗೋಧಿ, ರಾಗಿಗಳಿಂದ ತಯಾರಿಸಿದ ಪದಾರ್ಥಗಳು, ಹೆಸರುಬೇಳೆ, ತೊಗರಿಬೇಳೆಯ ಸಾರು, ತೊವ್ವೆ ಒಳ್ಳೆಯದು. ಊಟದಲ್ಲಿ ತುಪ್ಪ ಬಳಸಬೇಕು. ಹೆಸರುಬೇಳೆ, ತುಪ್ಪ, ಬೆಲ್ಲಗಳಿಂದ ತಯಾರಿಸಿದ ಪಾಯಸ, ಹಲ್ವಗಳು ಹಿತಕರ, ಸಿಹಿ ಹೆಚ್ಚಾಗಿ ದೇಹಕ್ಕೆ ಸೇರಲಿ ಎಂಬ ಉದ್ದೇಶದಿಂದಲೇ ಬಹುಶಃ ಈ ಸಮಯದಲ್ಲಿ ಸಿಹಿ ತಿನ್ನುವ, ಪರಸ್ಪರ ಸಿಹಿ ಹಂಚುವ ಸಂಪ್ರಾಯದ ಬೆಳೆದು ಬಂದಿರಬೇಕು ಎನಿಸುತ್ತದೆ.
ತರಕಾರಿಗಳು
ಈ ಋತುವಿನಲ್ಲಿ ಹೀರೆಕಾಯಿ, ಪಡವಲಕಾಯಿ, ಹಾಗಲಕಾಯಿ, ನುಗ್ಗೇಸೊಪ್ಪು ಹಿತಕರ.
ಹಣ್ಣುಗಳು
ದ್ರಾಕ್ಷಿ, ಬಾಳೆ, ಖರ್ಜೂರ, ದಾಳಿಂಬೆಗಳನ್ನು ಹೆಚ್ಚು ಬಳಸುವುದು ಸೂಕ್ತ.
ಸಂಬಾರ ಪದಾರ್ಥಗಳು
ಜೀರಿಗೆ, ಧನಿಯಾ, ಅರಿಸಿನ ಇವುಗಳನ್ನು ಹೆಚ್ಚು ಬಳಸಿದರೆ ಚೆನ್ನ.
ದಾಳಿಂಬೆಯ ಸಾರು
ಹುಳಿ, ಒಗರು, ಸಿಹಿ ರುಚಿಯುಳ್ಳ ದಾಳಿಂಬೆಯ ಸೇವನೆ ಆರೋಗ್ಯಕರ. ವಾರದಲ್ಲಿ ಒಂದೆರಡು ದಿನ ದಾಳಿಂಬೆ ಸಾರನ್ನು ತಯಾರಿಸಿ ಸೇವನೆ ಮಾಡಬೇಕು. ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿ, ಇದಕ್ಕೆ ಜೀರಿಗೆ, ಶುಂಠಿ, ಹಿಪ್ಪಲಿ, ಕೊತ್ತಂಬರಿಬೀಜ (ಧನಿಯಾ) ಬೆರೆಸಬೇಕು. ದಾಳಿಂಬೆ ರಸ, ರುಚಿಗೆ ತಕ್ಕಷ್ಟು ಸೈಂಧವ ಲವಣ ಹಾಕಬೇಕು. ಬೇಕೆನಿಸಿದರೆ ಸ್ವಲ್ಪ ಬೆಲ್ಲ ಹಾಕಬಹುದು. ಕರಿಬೇವು, ಇಂಗಿನ ಒಗ್ಗರಣೆ ಕೊಟ್ಟು ಕೊತ್ತಂಬರಿ ಸೊಪ್ಪು ಸೇರಿಸಬೇಕು.
ಇದನ್ನೂ ಓದಿ: ಉಪವಾಸ ಒಳ್ಳೆಯದೇ? ಅದರಿಂದಾಗುವ ಪ್ರಯೋಜನಗಳು
ದಾಳಿಂಬೆಯ ಸಾರು ಪಿತ್ತವ್ಯಾಧಿ ಬಾಧಿತರಿಗೆ, ಅಂದರೆ ಜ್ವರ, ಆಮ್ಲಪಿತ್ತ (ಆ್ಯಸಿಡಿಟಿ), ಪಿತ್ತದ ಗಂದೆಗಳಿಂದ ಬಳಲುವವರಿಗೆ ಅತ್ಯಂತ ಉಪಯುಕ್ತ.
ಪಾನೀಯ
ಶ್ರೀಗಂಧ, ಏಲಕ್ಕಿ, ಲಾವಂಚ, ಪಚ್ಚಕರ್ಪೂರ ಹಾಕಿದ ನೀರನ್ನು ಕುಡಿಯಬೇಕು. ಕಾದಾರಿದ ನೀರು ದೇಹಕ್ಕೆ ಹಿತ.
ಕಷಾಯ
ಶುಂಠಿ, ಕಾಳುಮೆಣಸು, ಹಿಪ್ಪಲಿ, ಜೇಷ್ಠಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಈ ಅಳತೆಯ ನಾಲ್ಕು ಭಾಗದಷ್ಟು ನೀರು ಹಾಕಿ ಕುದಿಸಿ, ಕಾಲುಭಾಗಕ್ಕೆ ಇಳಿಸಿ, ಹಾಲು, ಬೆಲ್ಲ ಬೆರೆಸಿ ಕುಡಿದರೆ ಪಿತ್ತ ಶಮನವಾಗುತ್ತದೆ.
ಬೆಟ್ಟದ ನೆಲ್ಲಿಕಾಯಿ
ಇದು ಪಿತ್ತ, ರಕ್ತದೋಷಗಳನ್ನು ನಿವಾರಿಸುತ್ತದೆ. ಇದರಲ್ಲಿ ಉಪ್ಪು(ಲವಣ) ಹೊರತುಪಡಿಸಿ ಐದು ರಸಗಳಿವೆ. ತ್ರಿದೋಷಹರ ಗುಣವುಳ್ಳ ನೆಲ್ಲಿಕಾಯಿಯಿಂದ ತಯಾರಿಸಿದ ತಂಬುಳಿ, ಚಟ್ನಿ, ಉಪ್ಪಿನಕಾಯಿ, ಮುರಬ್ಬ ಸೇವನೆ ಮಾಡಬೇಕು.
ಇದನ್ನೂ ಓದಿ: ದೀಪಾವಳಿ ಎಂದರೆ ದೀಪಗಳ ಸಾಲು, ತೈಲಾಭ್ಯಂಜನ, ಭಾವ ಬಿದಿಗೆ
ನೆಲ್ಲಿಕಾಯಿ ಸಾರು
ತೊಗರಿಬೇಳೆ ಅಥವಾ ಹೆಸರುಬೇಳೆ ಬೇಯಿಸಿ ಕಟ್ಟು ತೆಗೆದು, ಅದಕ್ಕೆ ಜೀರಿಗೆ, ಶುಂಠಿ, ಧನಿಯಾ, ಹಿಪ್ಪಲಿಪುಡಿ ಬೆರೆಸಿ ನೆಲ್ಲಿಕಾಯಿ ರಸ ಇವುಗಳನ್ನು ಹಾಕಿ ಕುದಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿಸಿದರೆ ಸಾರು ತಯಾರು. ಈ ಸಾರಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ತಂಬುಳಿ
ಹಸಿ ನೆಲ್ಲಿಕಾಯಿ ಹೆಚ್ಚಿಕೊಂಡು ಎಣ್ಣೆಯಲ್ಲಿ ಬಾಡಿಸಿ, ಜೀರಿಗೆ ಹುರಿದು, ತೆಂಗಿನತುರಿ, ಕಾಳುಮೆಣಸಿನಪುಡಿ ಬೆರೆಸಿ ರುಬ್ಬಿ, ಮಜ್ಜಿಗೆ ಬೆರೆಸಬೇಕು.
ನೆಲ್ಲಿಕಾಯಿ ಅಡಿಕೆ
ನೆಲ್ಲಿಕಾಯಿಯನ್ನು (ಬೀಜ ತೆಗೆದು) ಸಣ್ಣಗೆ ಹೆಚ್ಚಿ ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ನೆನೆಸಿಟ್ಟು ಬಿಸಿಲಿನಲ್ಲಿ ಒಣಗಿಸಿ, ಚೆನ್ನಾಗಿ ಒಣಗಿದ ಅನಂತರ ಗಾಳಿಯಾಡದ ಡಬ್ಬದಲ್ಲಿಡಿ. ಇದನ್ನು ಊಟದ ಅನಂತರ ಬಾಯಿಗೆ ಹಾಕಿ ಚಪ್ಪರಿಸಿದರೆ ಬಾಯಿ ರುಚಿ ಹೆಚ್ಚುತ್ತದೆ. ಆಹಾರ ಜೀರ್ಣವಾಗುತ್ತದೆ. ಇದರಲ್ಲಿ ‘ಸಿ’ ಜೀವಸತ್ತ್ವ ಅಧಿಕವಾಗಿರುವುದರಿಂದ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.
ಯಾವ ಆಹಾರ ಬೇಡ?
ಹೊಸ ಅಕ್ಕಿ, ರಾಗಿ, ಗೋಧಿ, ಉದ್ದು, ಮೊಸರು ಸೇವನೆ ಬೇಡ.
ಇದನ್ನೂ ಓದಿ: ಊರ ತುಂಬಾ ಕೆಂಪು ಬಿಳಿ ಶೇಡಿ ಕೆಮ್ಮಣ್ಣಿನ ಅವತಾರ: ಮಲೆನಾಡಿನ ಹವ್ಯಕರಲ್ಲಿ ದೀಪಾವಳಿ ಆಚರಣೆ
ಹಂಸೋದಕ
ಕೆರೆ, ಕೊಳ, ನದಿಗಳ ನೀರು ಹಗಲಿನಲ್ಲಿ ಸೂರ್ಯನ ಕಿರಣಗಳಿಂದ ಕಾದು ರಾತ್ರಿ ಚಂದ್ರನ ಕಿರಣಗಳಿಂದ ತಂಪಾಗಿ ಅಗಸ್ತ್ಯ ನಕ್ಷತ್ತೋದಯದಿಂದ ವಿಷಹರವಾಗಿರುವ, ಸ್ವಚ್ಛ ನಿರ್ಮಲ ನೀರು ಸ್ನಾನಕ್ಕೆ ಹಾಗೂ ಕುಡಿಯುವುದಕ್ಕೆ ಶ್ರೇಷ್ಠ.
ಆಚರಣೆ
ಶ್ರೀಗಂಧ ಲೇಪನ, ಮುತ್ತಿನ ಸರ, ಬಿಳಿಯ ಹಾಗೂ ತಿಳಿಯ ಬಣ್ಣದ ವಸ್ತ್ರಗಳನ್ನು ಧರಿಸುವುದು ಉತ್ತಮ.
ಬೆಳದಿಂಗಳ ಭೋಜನ
ಶರದೃತುವಿನಲ್ಲಿ ಬೆಳದಿಂಗಳು ತುಂಬ ಆಹ್ಲಾದಕರವಾಗಿರುವುದರಿಂದ ಆತ್ಮೀಯರೆಲ್ಲರೂ ಸೇರಿ ಬೆಳದಿಂಗಳ ಭೋಜನ ಸವಿಯುವುದು ಒಳ್ಳೆಯದು. ಇದರಿಂದ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ಉತ್ತಮಗೊಳ್ಳುತ್ತದೆ.
ಡಾ. ವಸುಂಧರಾ ಭೂಪತಿ
bhupathivasundhara@gmail.com