ಊರ ತುಂಬಾ ಕೆಂಪು ಬಿಳಿ ಶೇಡಿ ಕೆಮ್ಮಣ್ಣಿನ ಅವತಾರ: ಮಲೆನಾಡಿನ ಹವ್ಯಕರಲ್ಲಿ ದೀಪಾವಳಿ ಆಚರಣೆ

ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೂ ಈ ಹಬ್ಬಗಳನ್ನು ಆಚರಿಸುವ ರೀತಿ ಕೂಡಾ ವಿಭಿನ್ನ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಖಕಿ: ಗೀತಾ ಜಿ. ಹೆಗಡೆ, ಕಲ್ಮನೆ

ಉತ್ತರಕನ್ನಡದ ಹವ್ಯಕರಿಗೆ ದೀಪಾವಳಿ ಬಹು ದೊಡ್ಡ ಹಬ್ಬ. ಈ ಹಬ್ಬ ವಿಶೇಷವಾಗಿ ಹಸುಗಳ ಹಬ್ಬ ಅಂದರೂ ತಪ್ಪಾಗಲಾರದು. ಅಮಾವಾಸ್ಯೆ ಎರಡು ದಿನ ಇರುವಾಗಲೆ ಹಬ್ಬ ಶುರುವಾಗುತ್ತದೆ. ಈ ಹಬ್ಬಕ್ಕೆ ಒಂದು ವಾರದಿಂದಲೆ ತಯಾರಿ ಶುರುವಾಗುತ್ತದೆ. ಮನೆಯೆಲ್ಲ ಶುಚಿಗೊಳಿಸಿ, ಅಂಗಳ ಮುಂಗಟ್ಟು ಒಪ್ಪ ಓರಣ ಮಾಡಿ ಬಣ್ಣ ಬಳಿದು ಅಂದಗೊಳಿಸುವ ಸಂಭ್ರಮ ಒಂದೆಡೆಯಾದರೆ ಹಸುಗಳನ್ನು ಕಟ್ಟುವ ಕೊಟ್ಟಿಗೆ ಕೂಡಾ ಶೃಂಗಾರಗೊಳ್ಳುತ್ತದೆ. ಈ ಹಬ್ಬಕ್ಕೆ ಶೇಡಿ ಮತ್ತು ಕೆಮ್ಮಣ್ಣು (ಇವೆರಡೂ ಮಣ್ಣು. ಅಲ್ಲಿಯ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ) ವಿಶೇಷ. 

ಭೂತಪ್ಪನ ಕಟ್ಟೆ ಪೂಜಾ ಶಾಸ್ತ್ರ

ಇದನ್ನು ನೀರಿನಲ್ಲಿ ನೆನೆಸಿ ಬಟ್ಟೆಯ ಜುಂಜಿನಲ್ಲಿ ಅದ್ದಿಕೊಂಡು ಕೊಟ್ಟೆಗೆಯಲ್ಲಿ ಹಸು ಕಟ್ಟುವ ಗೂಟ, ಕೊಟ್ಟಿಗೆಯ ಕಂಬ, ಹೊಸಿಲಿಗೆ ಕೆಮ್ಮಣ್ಣು ಬಳಿದು ಶೇಡಿಯಿಂದ ಚಿತ್ತಾರ ಬಿಡಿಸಿ ಶೃಂಗರಿಸಿ ಬಾವಿ ಕಟ್ಟೆ, ತುಳಸಿ ಕಟ್ಟೆ ಶುಚಿಗೊಳಿಸಿ ಇದೇ ರೀತಿ ಕೆಮ್ಮಣ್ಣು ಬಳಿದು ಶೇಡಿಯಿಂದ ಚಿತ್ತಾರ ಬಿಡಿಸುವ ಪದ್ಧತಿ ಇದೆ. ಅಂತೂ ಎಲ್ಲಿ ನೋಡಿದರಲ್ಲಿ ಕೆಂಪು ಬಿಳಿ ಶೇಡಿ ಕೆಮ್ಮಣ್ಣಿನ ಅವತಾರವೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಮನೆ, ಕೊಟ್ಟಿಗೆ, ಬಾವಿ ಕಟ್ಟೆ, ತುಳಸಿ ಕಟ್ಟೆ, ಬಚ್ಚಲು ಮನೆ,ಊರಿನ ಭೂತಪ್ಪನ ಕಟ್ಟೆ, ಗ್ರಾಮದ ಭೂತಪ್ಪನ ಕಟ್ಟೆ ಎಲ್ಲಾ ಕಡೆ ಪೂಜೆಯ ಶಾಸ್ತ್ರ ನಡೆಯುವುದರಿಂದ ಶುಚಿಗೊಳಿಸಿ ಒಪ್ಪ ಓರಣ ಮಾಡುವುದು ಹಬ್ಬದ ಪೂವ೯ ತಯಾರಿ.

ಇನ್ನೊಂದು ವಿಶೇಷ ಈ ಹಬ್ಬಕ್ಕೆ ಗೊಂಡೆ ಹೂವು (ಚೆಂಡು ಹೂವು) ಇರಲೇ ಬೇಕು. ಬಾಗಿಲು ಕೊಟ್ಟಿಗೆಗೆಲ್ಲ ಮಾವಿನ ಎಲೆ ತೋರಣ ಈ ಹೂವಿನ ಮಾಲೆ. ಪ್ರತೀ ದಿನ ಹಬ್ಬದ ದಿನಕ್ಕೆ ತಕ್ಕಂತೆ ಹೆಂಗಳೆಯರು ಹಾಡು ಹೇಳುವುದು ಆಯಾ ದಿನಗಳ ಪೂಜೆಯ ಕಥೆಗಳನ್ನು ಒಳಗೊಂಡಿರುತ್ತದೆ.ಮೊದಲು ಗಂಗೆ ತುಂಬುವ ಹಬ್ಬ ಗಂಗಾಷ್ಟಮಿ ಅಷ್ಟಮಿ ದಿನ.ನಂತರ ಬರುವ ತೃಯೋದಷಿ ದಿನ. ರಾತ್ರಿ ಶಿವನು ಗಂಗೆಯನ್ನು ವರಿಸಿ ಪಾವ೯ತಿಗೆ ಗೊತ್ತಾಗದಂತೆ ತನ್ನ ಶಿರದಲ್ಲಿ ಅಡಗಿಸಿಕೊಂಡ ಕಥೆಗೆ ಅನುಗುಣವಾಗಿ ಗಂಗೆಯನ್ನು ಆಹ್ವಾನಿಸುವ ಕ್ರಮ ಇದು.

ಡಾಬು ಅಡಿಕೆ ಶೃಂಗಾರ

ಆ ದಿನ ಅಡಿಗೆ ಮನೆ ಮತ್ತು ಬಚ್ಚಲು ಮನೆಯಲ್ಲಿ ಇರುವ ಹಂಡೆ ಇನ್ನಿತರ ನೀರು ತುಂಬುವ ಪರಿಕರಗಳನ್ನೆಲ್ಲ ತೊಳೆದು ಹೊಸದಾಗಿ ನೀರು ತುಂಬುತ್ತಾರೆ. ಹಂಡೆಗೆ ಶೇಡಿ ಕೆಮ್ಮಣ್ಣು ಚಿತ್ತಾರ ಬರೆದು ಶಿಂಡಲೆ ಕಾಯಿ ಬಳ್ಳಿ ( ಇದು ಅತ್ಯಂತ ಕಹಿ ಇರುವ ಸೌತೆ ಕಾಯಿ ಹೋಲುವ ಕಾಯಿ ಇರುವ ಬಳ್ಳಿ) ಸುತ್ತ ಕಟ್ಟುತ್ತಾರೆ. ದೇವರ ಮುಂದೆ ಒಂದು ಮಣೆಗೆ ಕೆಮ್ಮಣ್ಣು ಹಚ್ಚಿ. ಶೇಡಿಯಿಂದ ಚಿತ್ತಾರ ಬರೆದು ಒಂದು ಹಿತ್ತಾಳೆ ತಂಬಿಗೆಗೆ ಚಂಡು ಹೂವಿನ ದಂಡೆ ಕಟ್ಟಿ ಅದರ ಕೊರಳಿಗೆ ಸುತ್ತಿ ಒಂದು ಸೌತೆ ಕಾಯಿ ಹಾಗೂ ಮೊಗೇ ಕಾಯಿ(ಮಂಗಳೂರು ಸೌತೇಕಾಯಿ)ಗೆ. ಶೇಡಿಯಿಂದ ಬಲಿವೇಂದ್ರನ ಮುಖ ಹೋಲುವಂತೆ ಬರೆದು ಕಣ್ಣಿಗೆ ಹಣತೆಯ ದೀಪದಿಂದ ಮಾಡಿದ ಕಪ್ಪು ಚುಕ್ಕಿ ಇಟ್ಟು ಹೊಸ ಹಸು ಕಟ್ಟುವ ಡಾಬು ಅಡಿಕೆ ಶೃಂಗಾರ ಎಲ್ಲ ಜೋಡಿಸಿ ಮಾರನೇ ದಿನದ ಬಲಿವೇಂದ್ರನ ಆಹ್ವಾನಕ್ಕೆ ಅಣಿಗೊಳಿಸಲಾಗುತ್ತದೆ. ಮನೆಯಲ್ಲಿರುವ ಹಿತ್ತಾಳೆ ಬೆಳ್ಳಿ ದೀಪಗಳು ಶುಚಿಗೊಂಡು ಅಲ್ಲಿ ಕುಳಿತಿರುತ್ತವೆ. ಈ ಹಬ್ಬಕ್ಕೆ ವಿಳ್ಯೆದೆಲೆ ಮೇಲೆ ಗೋಟು(ಹಣ್ಣಾದ ಅಡಿಕೆ) ಅಡಿಕೆನೇ ಇಡಬೇಕು ಪೂಜೆಗೆ.

ಎರಡನೆ ದಿನ ನರಕ ಚತುದ೯ಶಿ ಬಲಿವೇಂದ್ರನ ಪೂಜೆ ದಿನ

ಈ ದಿನ ನರಕಾಸುರನ ವಧೆಯಾದ ದಿನ. ಮನೆಯ ಹೆಂಗಸರು ಸೂಯ೯ ಉದಯಕ್ಕೆ ಒಂದು ಗಂಟೆ ಮೊದಲೆ ಎದ್ದು ಎಣ್ಣೆ ಹಾಕಿಕೊಂಡು ಸ್ನಾನ ಮಾಡಿ ಮನೆಯೆಲ್ಲ ದೀಪ ಹಚ್ಚಿ ಮೊದಲು ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹೂ ಇಟ್ಟು ಎಣ್ಣೆ ಹಾಕಿ ಗಂಗೆ ಪೂಜೆ ಮಾಡಿ ನೀರು ಸೇದಿ ದೇವರ ಮನೆಗೆ ತರುತ್ತಾರೆ. ಅಲ್ಲಿ ಮೊದಲೆ ಅಣಿಗೊಳಿಸಿದ ತಂಬಿಗೆ ತುಂಬಾ ಅಕ್ಕಿ ಹಾಕಿ ಅದರ ಮೇಲೆ ತೆಂಗಿನ ಕಾಯಿ ದುಡ್ಡು ಅಡಿಕೆ ಶೃಂಗಾರ (ಅಡಿಕೆ ಹೂವು)ದಿಂದ ಅಲಂಕರಿಸಿ ಗಂಗೆ ತುಂಬಿದ ಇನ್ನೊಂದು ತಂಬಿಗೆಗೆ ಹೂ ಇಟ್ಟು ಚಿತ್ತಾರ ಬಿಡಿಸಿದ ಮಣೆಯ ಮೇಲೆ ವೀಳ್ಯೆದೆಲೆ ಗೋಟಡಿಕೆ ಎಲ್ಲವನ್ನೂ ಜೋಡಿಸಿಟ್ಟು ಎಣ್ಣೆ ಅರಿಶಿನ ಕುಂಕುಮ ದೇವರಿಗೂ ಅಪಿ೯ಸಿ ದೀಪ ಬೆಳಗುತ್ತಾರೆ. ತರಕಾರಿಯಲ್ಲಿ ಅರಳಿದ ಕಲ್ಪನೆಯ ಬಲಿವೇಂದ್ರ, ಬಣ್ಣ ಬಣ್ಣದ ಚೆಂಡು ಹೂವಿನಿಂದ ಅಲಂಕೃತಗೊಂಡ ಗಂಗೆ ನೋಡಲು ಚಂದ. ನಂತರದ ಸರದಿ ಮನೆಯ ಹೊಸಿಲು, ತುಳಸಿಕಟ್ಟೆ, ಕೊಟ್ಟಿಗೆಯ ಹಸುಗಳಿಗೆಲ್ಲ ಎಣ್ಣೆ ಅರಿಶನ ಕುಂಕುಮ ಹಚ್ಚುವ ಶಾಸ್ತ್ರ.

ಮಾವನ ಮನೆಗೆ ಅಳಿಯ ಬರಲೇ ಬೇಕು

ಮದುವೆಯಾದ ಮೊದಲನೆ ವಷ೯ ಮಾವನ ಮನೆಗೆ ಅಳಿಯ ಬರಲೇ ಬೇಕು. ಬಂದ ಅಳಿಯ ಮಗಳು ಮನೆ ಮಂದಿಯೆಲ್ಲರನ್ನೂ ದೇವರ ಮುಂದೆ ಕಂಬಳಿ ಹಾಸಿ ಕೂಡಿಸಿ ಎಣ್ಣೆ ಹಚ್ಚುವ ಶಾಸ್ತ್ರ, ಆರತಿ ಬೆಳಗಿ ಎಲ್ಲರಿಗೂ ತಂದ ಹೊಸ ಬಟ್ಟೆ ಕೊಟ್ಟು ಹಿರಿಯರಿಗೆ ನಮಸ್ಕಾರ ಮಾಡಿ ಒಬ್ಬರಿಗೊಬ್ಬರು ಶುಭಾಶಯ ಹೇಳುವ ಪದ್ಧತಿ ಇದೆ. 

ಹಳೆಯ ಹಾಡುಗಳು ಹೆಂಗಸರ ಬಾಯಲ್ಲಿ ಆದರೆ ಆರತಿ ತಟ್ಟೆಗೆ ಎಷ್ಟು ದುಡ್ಡು ಬಿತ್ತು ಅಂತ ಹೆಣ್ಣು ಮಕ್ಕಳ ಲೆಕ್ಕಾಚಾರ. ಬಲು ತಮಾಷೆ ಆ ಕ್ಷಣ. ನಂತರ ವಿಧ ವಿಧ ತಿಂಡಿಗಳ ನತ೯ನ ಬೆಳಗಿನ ಉಪಹಾರದಲ್ಲಿ. ಕೆಲವು ಹಳ್ಳಿಗಳಲ್ಲಿ, ಎಲ್ಲರೂ ಸೇರಿ ಅವರವರ ಮನೆ ತಿಂಡಿಗಳನ್ನು ಹಂಚಿ ತಿನ್ನುವ ಪದ್ಧತಿ ಕೂಡಾ ಇದೆ. ಈ ದಿನ ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ತಪ್ಪದೇ ಮಾಡಲೇ ಬೇಕು. ಕೊಬ್ಬರಿ ಎಣ್ಣೆ ಚಮ೯ದ ರೋಗ ನಿವಾರಿಸುತ್ತದೆ ಅನ್ನುವ ನಂಬಿಕೆ.

ಹಬೆಯಲ್ಲಿ ಬೇಯಿಸುವ ಸಿಹಿ ಖಾಧ್ಯ

ಇನ್ನು ಮಧ್ಯಾಹ್ನದ ಊಟಕ್ಕೆ ಕೆಂಪು ಕುಂಬಳಕಾಯಿ ಕಡುಬು. ರುಬ್ಬಿದ ಅಕ್ಕಿ ಹಿಟ್ಟು, ಕತ್ತರಿಸಿದ ಕುಂಬಳಕಾಯಿ ಹೋಳುಗಳು, ಬೆಲ್ಲ,,ಏಲಕ್ಕಿ ಎಲ್ಲವನ್ನೂ ಹದವಾಗಿ ಕಾಯಿಸಿ ಬಾಳೆ ಎಲೆ ಮೇಲೆ ಹಚ್ಚಿ ಮೇಲೆ ಹಸಿ ತೆಂಗಿನ ತುರಿ ಹರಡಿ ಮಡಚಿ ಹಬೆಯಲ್ಲಿ ಬೇಯಿಸುವ ಸ್ವಾಧಿಷ್ಟವಾದ ಸಿಹಿ ಖಾಧ್ಯ. ಮನೆಯ ಯಜಮಾನ ಬಲಿವೇಂದ್ರನ ಆಹ್ವಾನ ಮಾಡಿ ದೇವರಿಗೆ ಪೂಜೆ, ನೈವೇದ್ಯ, ಜಾಗಟೆಯ ನಾದದಲ್ಲಿ ಮಂಗಳಾರತಿ ಬೆಳಗಿ ಎಲ್ಲರೂ ಒಂದೆಡೆ ಕುಳಿತು ಊಟ ಮಾಡುವ ನೋಟ ಅತೀ ಸುಂದರ.

ಮೇಯಲು ಹೋದ ಹಸುಗಳು ಸಾಯಂಕಾಲ ವಾಪಸ್ಸು ಬರುವ ಹೊತ್ತಿಗೆ ಕೊಟ್ಟಿಗೆ ಬಾಗಿಲಲ್ಲಿ ವನಕೆ (ಅಕ್ಕಿ ಕುಟ್ಟುವ ಸಲಕರಣೆ) ಇಡುತ್ತಾರೆ. ಅದನ್ನು ದಾಟಿ ಬಂದ ಹಸುಗಳಿಗೆ ಹಾನ ಸುಳಿದು (ದೃಷ್ಟಿ ತೆಗೆದು) ಆರತಿ ಮಾಡಿ, ಮಾಡಿದ ಕಡುಬು ಪ್ರತೀ ಹಸುವಿನ ಬಾಯಿಗೆ ಇಟ್ಟಾಗ ಚಪ್ಪರಿಸಿಕೊಂಡು ತಿನ್ನುವುದು ಕಣ್ಣಾರೆ ನೋಡಬೇಕು. ಅಂಬಾ ಎಂದು ಇನ್ನೂ ಬೇಕೆನ್ನುವ ಸೌಂಜ್ನೆ ಹಸುಗಳ ಬಾಯಲ್ಲಿ. ಈ ಕಡುಬು ತಿನ್ನುವ ಉದ್ದೇಶ ದೇಹದ ನಂಜು ಹೊರಗೆ ಹೋಗಬೇಕೆನ್ನುವುದು.

Related Article

ಸುಧಾ ಮೂರ್ತಿಯವರ ಹೊಸ ಪುಸ್ತಕ, ಮಕ್ಕಳಿಗೆ ದೀಪಾವಳಿ ಉಡುಗೊರೆ

ದೀಪಾವಳಿ ಸಡಗರ: ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸಿ- ಕೇಂದ್ರ ಸರ್ಕಾರ

ದೀಪಾವಳಿಗೂ ಮುನ್ನ ಹೀನ ಕೃತ್ಯ - ಪಾಕ್ ನಲ್ಲಿ ಹಿಂದೂ ದೇವಾಲಯ ದರೋಡೆ!

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ

ದೀಪಾವಳಿಯ ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಾಲಯಗಳಲ್ಲಿ ಗೋಪೂಜೆ: ರಾಜ್ಯ ಸರ್ಕಾರದ ಆದೇಶ

ಕರಾವಳಿ ಭಾಗದಲ್ಲಿ ದೀಪಾವಳಿ ಆಚರಣೆಯತ್ತ ಒಂದು ನೋಟ..

ದೀಪಾವಳಿಯಲ್ಲಿ ಪಟಾಕಿ ನಿಷೇಧ ಹಿಂದೆ ಬೂಟಾಟಿಕೆ: ವೀರೇಂದ್ರ ಸೆಹ್ವಾಗ್

ದೀಪಾವಳಿಯಲ್ಲಿ ಸ್ಥಳೀಯತೆಗೆ ಒತ್ತು ಕೊಡಿ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ

ದೀಪಾವಳಿಯನ್ನು ಜಶ್-ಎ ರಿವಾಜ್ ನ್ನಾಗಿಸಿದ ಫ್ಯಾಬ್ ಇಂಡಿಯಾ ವಿರುದ್ಧ ತೇಜಸ್ವಿ ಸೂರ್ಯ ಆಕ್ಷೇಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com