ಜೆಡಿಎಸ್ ತಂತ್ರ ಯಾರಿಗೆ ವರ? (ನೇರ ನೋಟ)

ಕೂಡ್ಲಿ ಗುರುರಾಜಕುಮಾರಸ್ವಾಮಿ ಅವರು ಅಲ್ಪಸಂಖ್ಯಾತ ಮುಸ್ಲಿಮರನ್ನು ಓಲೈಸಲು ಹೋಗಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿಮತಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆಯೇ?
ಬೊಮ್ಮಾಯಿ-ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಂಕೇತಿಕ ಚಿತ್ರ
ಬೊಮ್ಮಾಯಿ-ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಂಕೇತಿಕ ಚಿತ್ರ

ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ನೀಡಿರುವ ಆ ಸಂದೇಶ ರಾಜಕೀಯವಾಗಿ ನಿಜಕ್ಕೂ ಮಹತ್ವವಾದುದು. ಆದರೆ, ಅವರ ಈ ಸಂದೇಶ ರಾಜಕೀಯವಾಗಿ ಅವರ ಪಕ್ಷಕ್ಕೆ ಎಷ್ಟರಮಟ್ಟಿಗೆ ಅನುಕೂಲವಾಗುತ್ತದೆ ಎಂಬುದನ್ನು ಮತಗಳನ್ನು ಎಣಿಸಿದಾಗಲೇ ಗೊತ್ತಾಗಬೇಕು.

ಕುಮಾರಸ್ವಾಮಿ ಆಡಿದ ಆ ಮಾತು ಹೀಗಿತ್ತು-ಬಿಜೆಪಿಯನ್ನು ಸೋಲಿಸಲು ಎಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆಯೋ ಅಂತಹ ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಕಾಂಗ್ರೆಸ್  ಬೆಂಬಲಿಸಬೇಕು, ಎಲ್ಲಿ ಜೆಡಿಎಸ್ ಶಕ್ತಿಯುತವಾಗಿದೆಯೋ ಅಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಜೆಡಿಎಸ್ ಬೆಂಬಲಿಸಬೇಕು ಎಂಬುದೇ ಕುಮಾರಸ್ವಾಮಿ ಅವರ ಆ ರಾಜಕೀಯ ಸಂದೇಶ. ಅವರು ತಮ್ಮ ಪಕ್ಷದ ಕಾರ್ಯಕರ್ತರ ಕಾರ್ಯಾಗಾರದಲ್ಲೇ ಇಂತಹ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದ್ದಾರೆ. 

ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಈ ತಂತ್ರ ಎಷ್ಟರಮಟ್ಟಿಗೆ ಕೈ ಹಿಡಿಯುತ್ತದೆಯೋ ಗೊತ್ತಿಲ್ಲ. ಆದರೆ, ಅವರು ಅಲ್ಪಸಂಖ್ಯಾತ ಮುಸ್ಲಿಮರನ್ನು ಓಲೈಸಲು ಹೋಗಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿಮತಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆಯೇ? ಇಲ್ಲವೇ, ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಕಾಂಗ್ರೆಸ್-ಜೆಡಿಎಸ್ ಮಧ್ಯೆ ವಿಭಜನೆಯಾಗಿ ಬಿಜೆಪಿಗೆ ಇದು ಅನುಕೂಲವಾಗುವುದಿಲ್ಲವೇ ಕುಮಾರಸ್ವಾಮಿ ಸಿಂಧಗಿ ಹಾಗೂ ಹಾನಗಲ್ ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ನೀಡಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರ ಮತಗಳನ್ನು ಬಿಜೆಪಿ ವಿರುದ್ಧವಾಗಿ ಕಾಂಗ್ರೆಸ್ ಅಥವಾ ಜೆಡಿಎಸ್ ಕಡೆಗೆ ಕ್ರೂಢೀಕರಿಸುವ ಮಾತುಗಳನ್ನು ಆಡುವ ಕುಮಾರಸ್ವಾಮಿ ಈ ಎರಡು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿರುವುದು ಆ ಸಮಾಜದ ಮತಗಳು ಕಾಂಗ್ರೆಸ್-ಜೆಡಿಎಸ್ ಮಧ್ಯೆ ವಿಭಜನೆಗೆ ದಾರಿ ಮಾಡುವುದಿಲ್ಲವೇ?

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಇಲ್ಲಿ ಉಪ ಚುನಾವಣೆಗಳು ನಡೆದಾಗ ಜೆಡಿಎಸ್ ಮುಸ್ಲಿಮರನ್ನು ಕಣಕ್ಕಿಳಿಸಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಕ್ತಿಯುತವಾಗಿಲ್ಲ. ಅಲ್ಲಿನ ಎರಡು ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಅಂದರೆ, ಎಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತುರುಸಿನ ಸ್ಪರ್ಧೆ ಇದೆಯೋ ಅಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಹಾಗಿದ್ದರೆ, ಜೆಡಿಎಸ್‌ನ ಈ ತಂತ್ರ ಯಾರಿಗೆ ವರ?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ, ಜೆಡಿಎಸ್ ಬಲಶಾಲಿಯಾಗಿರುವ ಹಳೇ ಮೈಸೂರು ಭಾಗದ ಹೆಚ್ಚಿನ ಸ್ಥಾನಗಳಲ್ಲಿ ಮುಸ್ಲಿಮರನ್ನು ಕಣಕ್ಕೆ ಇಳಿಸಲಾಗುತ್ತದೆಯೇ? ಅಥವಾ ಬಿಜೆಪಿ-ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಇರುವ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಲ್ಲಿ ಮುಸ್ಲಿಮರನ್ನು ಜೆಡಿಎಸ್ ಕಣಕ್ಕೆ ಇಳಿಸಲಿದೆಯೇ?

ಕುಮಾರಸ್ವಾಮಿ ಅವರ ಟಾರ್ಗೆಟ್ ಬಿಜೆಪಿ ಅಥವಾ ಕಾಂಗ್ರೆಸ್?  ಹಾನಗಲ್, ಸಿಂಧಗಿಯಲ್ಲಿ ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ನೀಡಿರುವುದನ್ನು ನೋಡಿದರೆ ಜೆಡಿಎಸ್ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರದು.

ಜೆಡಿಎಸ್‌ಗೆ ಹಳೇಮೈಸೂರು ಭಾಗದಲ್ಲಿ ತಳಮಟ್ಟದಲ್ಲಿ ಬದ್ಧತೆಯ ಕಾರ್ಯಕರ್ತರಿದ್ದಾರೆ. ಜೆಡಿಎಸ್‌ನಿಂದ ಶಾಸಕರಾದವರು, ಮಂತ್ರಿಗಳಾದವರು ಪಕ್ಷ ತೊರೆದಾಗಲೂ ಆ ಕ್ಷೇತ್ರಗಳಲ್ಲಿ ಮತ್ತೆ ಜೆಡಿಎಸ್ ಗೆದ್ದ ಉದಾಹರಣೆಗಳು ಹಲವು. ಇದಕ್ಕೆ ಕಾರಣ ಆ ಪಕ್ಷಕ್ಕಿರುವ ಸಾಂಪ್ರದಾಯಕ ಮತಗಳು, ನಿಷ್ಠಾವಂತ ಕಾರ್ಯಕರ್ತರು.

ಜೆಡಿಎಸ್ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಬೇಕಿದ್ದರೆ ಆ ಪ್ರಯತ್ನ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಆಗಬೇಕಿದೆ. ಬಿಜೆಪಿ ಹೆಚ್ಚು ಪ್ರಾಬಲ್ಯವಿರುವ ಉತ್ತರ ಕರ್ನಾಟಕದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಸಂಗತಿ ಜೆಡಿಎಸ್‌ಗೂ ಗೊತ್ತಿದೆ. 

ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಉತ್ತರಕರ್ನಾಟಕದ ಭಾಗದಲ್ಲಿ ಅವರ ಜನಪ್ರಿಯತೆಹೆಚ್ಚಿತ್ತು. ಆದರೆ, ಯಾವಾಗ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲವೋ ಆಗಿನಿಂದ ಕುಮಾರಸ್ವಾಮಿ ಅವರ ಜನಪ್ರಿಯತೆ ಇಳಿಮುಖವಾಯಿತು. 

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅದರಲ್ಲೂ ಬಿಜೆಪಿ ಜೊತೆ ಸೇರಿ ಆಡಳಿತ ನಡೆಸಿದ 20 ತಿಂಗಳಲ್ಲಿ  ಜನಪರವಾಗಿ ಅನೇಕ ಕಾರ್ಯಗಳನ್ನು ಜಾರಿಗೊಳಿಸಿದರು. ಆದರೆ, ಜೆಡಿಎಸ್‌ಗೆ ಒಂದು ಸ್ಪಷ್ಟ ರಾಜಕೀಯ ನಿಲುವಿಲ್ಲ. ಹೀಗಾಗಿ, ರಾಜ್ಯದಲ್ಲಿ ತನ್ನ ನೆಲೆಯನ್ನು ಉಳಿಸಿ, ಬೆಳೆಸಿಕೊಳ್ಳುವುದು ಜೆಡಿಎಸ್‌ಗೆ ಸವಾಲಾಗಿದೆ.

ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿ 2006ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸೆಕ್ಯೂಲರಿಸಂ ಪದದ ಅರ್ಥವನ್ನು ಡಿಕ್ಷ್ನರಿಯಲ್ಲಿ ಇನ್ನೂ ಹುಡುಕುತ್ತಿದ್ದೇನೆ ಎಂದಿದ್ದರು. ಹಾಗೇ ಹೇಳಿ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿದ್ದರು. ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ವಾಗ್ಬಾಣ ಬಿಡುತ್ತಿದ್ದಾರೆ. ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜೊತೆಗೂಡಿ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಬೆಂಬಲಿಸಿದ್ದರಿಂದ 2018ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದರು. ಈಗ ಕಾಂಗ್ರೆಸ್, ಬಿಜೆಪಿ ಎರಡನ್ನೂ ವಿರೋಧಿಸುತ್ತಾ ಪ್ರಾದೇಶಿಕ ಅಸ್ಮಿತೆಯನ್ನು ಮುಂದಿಟ್ಟು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆದರೆ, ಬಿಜೆಪಿಯ  ದೃಷ್ಟಿಯಲ್ಲಿ ಕಾಂಗ್ರೆಸ್‌ನ ಬಿ ಟೀಂ ಎಂದೂ, ಕಾಂಗ್ರೆಸ್ ದೃಷ್ಟಿಯಲ್ಲಿ ಬಿಜೆಪಿಯ ಬಿ ಟೀಂ ಎಂಬ ಆರೋಪ ತಪ್ಪಿದ್ದಲ್ಲ.

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ  ಒಂದೂವರೆ ವರ್ಷ ಇರುವಾಗಲೇ ಅಖಾಡ ಸಿದ್ದವಾಗಲು ಹೊರಟಿದೆ. ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಉಪ ಚುನಾವಣೆ  ಇದಕ್ಕೆ ಮತ್ತಷ್ಟು ರಂಗು ತುಂಬಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com