ಬಿಜೆಪಿಗಿಂತ ಬೊಮ್ಮಾಯಿಗೆ ಮುಖ್ಯವಾದ ಬೈ ಎಲೆಕ್ಷನ್‌ (ನೇರ ನೋಟ)

ಕೂಡ್ಲಿ ಗುರುರಾಜಕರ್ನಾಟಕದ ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆ ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ. ಆಳುವ ಪಕ್ಷ ಬಿಜೆಪಿಗಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ತೂಕ ಹೆಚ್ಚು ಪ್ರತಿಷ್ಠೆ.
ಸಿಂದಗಿಯಲ್ಲಿ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ
ಸಿಂದಗಿಯಲ್ಲಿ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ

ವಿಧಾನಸಭೆಗೆ ಯಾವುದೇ ಉಪ ಚುನಾವಣೆ  ಇರಲಿ, ಅದು ಆಳುವ ಪಕ್ಷಕ್ಕೆ ಪ್ರತಿಷ್ಠೆಯೇ. ಏಕೆಂದರೆ,  ಆಡಳಿತದ ಸೂತ್ರ ಹಿಡಿದಿರುವ ಪಕ್ಷಕ್ಕೆ ತಮ್ಮ ಸರಕಾರದ ಬಗ್ಗೆ ಜನರ  ಅಭಿಪ್ರಾಯ ಸಕಾರಾತ್ಮಕವಾಗಿ ಇದೆ ಎಂದು ಬಿಂಬಿಸಿಕೊಳ್ಳಲು ಅದೊಂದು ಅವಕಾಶ. ಅದಲ್ಲದೇ, ಆಳುವ ಪಕ್ಷಕ್ಕೆ ಚುನಾವಣಾ ಅಖಾಡದಲ್ಲಿ ಶಕ್ತಿ ಪ್ರದರ್ಶನಕ್ಕೆ  ಎದುರಾಳಿಗಳಿಗಿಂತ ಹೆಚ್ಚು ಅವಕಾಶ ದಕ್ಕಿರುತ್ತದೆ. ಇದಕ್ಕೆ ಕಾರಣ ಅಧಿಕಾರ ಸ್ಥಾನದ ಬಲ. 

ಕರ್ನಾಟಕದ ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆ ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ. ಆಳುವ ಪಕ್ಷ ಬಿಜೆಪಿಗಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ತೂಕ ಹೆಚ್ಚು ಪ್ರತಿಷ್ಠೆ. ಏಕೆಂದರೆ, ಬೊಮ್ಮಾಯಿ ಈ ಉಪ ಚುನಾವಣೆ ಗೆಲ್ಲುವ ಮೂಲಕ ಪಕ್ಷದಲ್ಲಿರುವ ಕೆಲವು ಹಿರಿಯ ನಾಯಕರ ಭಿನ್ನಧ್ವನಿ ಕೂಗಾಗದಂತೆ ನೋಡಿಕೊಳ್ಳಬೇಕಿದೆ. ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರು ಕೆಳಗಿಳಿದ ನಂತರವೂ ತಮ್ಮ ನಾಯಕತ್ವದಲ್ಲಿ ಚುನಾವಣೆಯನ್ನು ಗೆದ್ದು ತೋರಿಸುವೆ ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸಬೇಕಿದೆ. ಮುಂದಿನ ಅಸೆಂಬ್ಲಿ ಚುನಾವಣೆ ತಮ್ಮ ನಾಯಕತ್ವದಲ್ಲೇ ಎಂದು ಹೈಕಮಾಂಡ್‌ ಘೋಷಿಸಿರುವುದರಿಂದ ಇದಕ್ಕೆ ಪೂರ್ವಭಾವಿಯಾಗಿ ಈ ಉಪ ಚುನಾವಣೆ ಗೆದ್ದು ಹೈಕಮಾಂಡ್‌ ನಿರ್ಧಾರ ಸರಿಯಾಗಿಯೇ ಇದೆ ಎಂದು ಸಾಬೀತುಪಡಿಸಬೇಕಿದೆ. ಈ ಎಲ್ಲ ಕಾರಣಗಳಿಂದ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಜೀವನದಲ್ಲಿ ಈ ಉಪ ಚುನಾವಣೆಗೆ ವಿಶೇಷ ಮಹತ್ವವಿದೆ.

ಉಪ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಮಾಜಿ ಸಿ.ಎಂ. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಮತ್ತೆ  ಚರ್ಚೆ ಆಗುತ್ತದೆ. ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಪಕ್ಷದಲ್ಲಿ ಬಲವಾಗಬಹುದು. 

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಯಡಿಯೂರಪ್ಪ ನಾಯಕತ್ವ ಮತ್ತಷ್ಟು  ಮಸುಕಾಗುತ್ತದೆ.

ರಾಜ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿದೆ.  ಅದರಲ್ಲೂ ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರ ನೆಲೆ. ಈ ಕಿತ್ತೂರು ಕರ್ನಾಟಕದ ವ್ಯಾಪ್ತಿಯಲ್ಲೇ ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿರುವುದು. ಅದರಲ್ಲೂ ಹಾನಗಲ್‌ ಕ್ಷೇತ್ರವು ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ  ಶಿಗ್ಗಾಂವಿ  ವಿಧಾನಸಭಾ ಕ್ಷೇತ್ರವಿರುವ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇದೆ. ಅಷ್ಟಕ್ಕೂ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇಲ್ಲಿ ಗೆದ್ದಿರುವುದು ಬಿಜೆಪಿಯೇ. ಹೀಗಾಗಿ, ಈ ಎಲ್ಲ ಕಾರಣಗಳಿಂದ  ಹಾನಗಲ್‌ ಹಾಗೂ ಸಿಂದಗಿ ಗೆಲುವು ಬಿಜೆಪಿಗೆ ಅದರಲ್ಲೂ ಮುಖ್ಯವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಮುಖ್ಯ. ಅದಕ್ಕಾಗಿಯೇ ಈ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡರು. ತಮ್ಮ ಸಂಪುಟದ ಅನೇಕ ಸಚಿವರನ್ನು ಪ್ರಚಾರದ ಅಖಾಡಕ್ಕೆ ಇಳಿಸಿದರು.

ಇನ್ನು ಈ ಉಪ ಚುನಾವಣೆಯಲ್ಲಿ ಸೋತರೆ ಬಿಜೆಪಿಗಿಂತ ಹೆಚ್ಚು ನಷ್ಟ ಬಸವರಾಜ ಬೊಮ್ಮಾಯಿ ಅವರಿಗೆ. ಏಕೆಂದರೆ, ಬಿಜೆಪಿಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತವಿದೆ. ಎರಡೂ ಕ್ಷೇತ್ರಗಳಲ್ಲಿ ಸೋತರೂ ಸರಕಾರಕ್ಕೇನೂ ಅಪಾಯವಿಲ್ಲ. ಆದರೆ, ಸೋತರೆ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಇದು ಖಂಡಿತಾ ಹಿನ್ನಡೆ. ಮಾಜಿ ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸದಿದ್ದರೆ ಬಿಜೆಪಿಗೆ ಕಷ್ಟವಾಗಬಹುದು ಎಂಬ ಸಂದೇಶವೂ ಇದರಲ್ಲಿ ಅಡಕವಾಗಿದೆ.

ಸಾಮಾನ್ಯವಾಗಿ ಉಪ ಚುನಾವಣೆಗಳ ಫಲಿತಾಂಶವು ಆಡಳಿತಾರೂಢ ಪಕ್ಷದ ಪರವಾಗಿಯೇ ವ್ಯಕ್ತವಾಗುತ್ತದೆ. ಹಾಗಂತ ಆಡಳಿತ ಪಕ್ಷ ಸೋತ ಉದಾಹರಣೆಗಳಿಗೂ ಲೆಕ್ಕವಿಲ್ಲ.

ಎಚ್‌.ಡಿ.ದೇವೇಗೌಡ ಅವರು ಪ್ರಧಾನಮಂತ್ರಿಯಾದ ನಂತರ ಅವರು ತೆರವು ಮಾಡಿದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಆಗ ಆಡಳಿತಾರೂಢ ಪಕ್ಷ ಜನತಾದಳದಿಂದ ಕಣಕ್ಕಿಳಿದ ನಟ ಅಂಬರೀಶ್‌ ಇಲ್ಲಿ ಸೋತರು. ಕಾಂಗ್ರೆಸ್ಸಿನ ಸಿ.ಎಂ. ಲಿಂಗಪ್ಪ ಗೆದ್ದರು.

ಡಿ.ವಿ.ಸದಾನಂದಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾದಾಗ ಅವರು ತೆರವು ಮಾಡಿದ ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಿದರ್ಶನವಿದೆ.

ಇನ್ನು ಪ್ರತಿಪಕ್ಷ ಕಾಂಗ್ರೆಸ್ಸಿಗೂ ಈ ಉಪ ಚುನಾವಣೆ ಬಹಳ ಮುಖ್ಯ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜಂಟಿ ಸಾರಥ್ಯದಲ್ಲಿ ಕಾಂಗ್ರೆಸ್‌ ಬಲವಾದ ಪ್ರತಿರೋಧ ಒಡ್ಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಳೆದ ಬಾರಿ ಗೆದ್ದಿರಲಿಲ್ಲ. ಹೀಗಾಗಿ, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತರೂ ಈ ಕ್ಷೇತ್ರಗಳು ತಮ್ಮದಾಗಿರಲಿಲ್ಲ ಎಂದು ಕಾಂಗ್ರೆಸ್‌ ಜಾರಿಕೊಳ್ಳಬಹುದು. ಆದರೆ, ಈ ಕ್ಷೇತ್ರಗಳಲ್ಲಿ ಗೆದ್ದರೆ  ಕಾಂಗ್ರೆಸ್ಸಿನ ಮುಂದಿನ ಹೋರಾಟಕ್ಕೆ ಈ ಗೆಲುವು ಸಾಥ್‌ ಕೊಡುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಗೆಲುವು ಕಾಂಗ್ರೆಸ್ಸಿಗೆ ಇಲ್ಲಿ ಅಷ್ಟು ಸುಲಭದ ತುತ್ತಲ್ಲ.

ಹಾನಗಲ್‌ ಹಾಗೂ ಸಿಂದಗಿಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.  ಬಿಜೆಪಿಗೆ ಅನುಕೂಲ ಕಲ್ಪಿಸಲು ಜೆಡಿಎಸ್‌ ಈ ತಂತ್ರ ರೂಪಿಸಿದೆ ಎಂದು ಕಾಂಗ್ರೆಸ್‌ ಟೀಕಿಸಿದ್ದರೂ ಪ್ರತಿಯಾಗಿ ಜೆಡಿಎಸ್‌ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಜೆಡಿಎಸ್‌ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಯಶಸ್ವಿಯಾಗುತ್ತದೆಯೇ? ಇಲ್ಲವೇ ಅಲ್ಪಸಂಖ್ಯಾತರು ಕಾಂಗ್ರೆಸ್‌ ಹಿಂದೆ ಗಟ್ಟಿಯಾಗಿ ನಿಲ್ಲುತ್ತಾರೆಯೇ? ಉಪ ಚುನಾವಣೆ ಫಲಿತಾಂಶ ಈ ಪ್ರಶ್ನೆಗೆ ಉತ್ತರ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com