ಎವರ್ ಗ್ರಾಂದೆ ಕುಸಿತದಿಂದಲಾದರೂ ಪಾಠ ಕಲಿಯೋಣವೇ?

ಹಣಕ್ಲಾಸು-277-ರಂಗಸ್ವಾಮಿ ಮೂಕನಹಳ್ಳಿ
ಚೀನಾದ ಎವರ್ಗ್ರಾಂದೆ ಸಂಸ್ಥೆ (ಸಂಗ್ರಹ ಚಿತ್ರ)
ಚೀನಾದ ಎವರ್ಗ್ರಾಂದೆ ಸಂಸ್ಥೆ (ಸಂಗ್ರಹ ಚಿತ್ರ)

ಜಗತ್ತು ಹಿಂದೆಂದಿಗಿಂತ ಇಂದು ಹೆಚ್ಚು ಅವಲಂಬಿತವಾಗಿದೆ. ಒಂದು ದೇಶದ ಆರ್ಥಿಕತೆ ಕುಸಿದರೆ ನಮಗೇನು? ಎನ್ನುವ ಪರಿಸ್ಥಿತಿ ಇಂದಿಲ್ಲ. ಅದರಲ್ಲೂ ಜಗತ್ತಿನ ಆರ್ಥಿಕತೆಯ ಇಂಜಿನ್ ಎಂದು ಹೆಸರಾಗಿರುವ ಅಮೇರಿಕಾ, ಚೀನಾ, ಜಪಾನ್, ಜರ್ಮನಿ, ಭಾರತ, ಇಂಗ್ಲೆಂಡ್ ಆರ್ಥಿಕತೆ ಕುಸಿದರೆ ಜಗತ್ತಿನ ಆರ್ಥಿಕತೆ ಕೂಡ ಕುಸಿದಂತೆ ಎನ್ನುವ ಮಟ್ಟಕ್ಕೆ ಇಂದು ಬಂದು ನಿಂತಿದೆ. 

ಅದರಲ್ಲೂ ಚೀನಾ ಮಾರುಕಟ್ಟೆ ಕುಸಿದರೆ ಅದು ವಿಶ್ವಕ್ಕೆ ಎಚ್ಚರಿಕೆಯ ಸಂದೇಶ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. 2007ರ ಸಮಯದಲ್ಲಿ ಅಮೇರಿಕಾ ದೇಶದ ಲೇಮನ್ ಬ್ರದರ್ ಕುಸಿತ ಕಂಡಾಗ ಜಗತ್ತು ಯಾವ ಮಟ್ಟಿಗೆ ತಲ್ಲಣಗೊಂಡಿತ್ತು ಎನ್ನುವುದು ಹಣಕಾಸಿನ ಆಗುಹೋಗುಗಳನ್ನ ಗಮನಿಸುವ ನಿಮಗೆಲ್ಲಾ ತಿಳಿದೇ ಇರುತ್ತದೆ. ಇದೀಗ ಚೀನಾ ದೇಶದ ಎರಡನೇ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ಎವರ್ ಗ್ರಾಂದೆ ಮುಂದಿನ ತಿಂಗಳ ತನ್ನ ಸಾಲದ ಮೇಲಿನ ಬಡ್ಡಿ ಹಣ 100 ಮಿಲಿಯನ್ ಡಾಲರ್ ಕಟ್ಟಲು ಆಗುವುದಿಲ್ಲ ಎಂದು ಹೇಳಿದ ಹಿನ್ನಲೆಯಲ್ಲಿ ಅಮೇರಿಕಾದಿಂದ ಹಿಡಿದು ಭಾರತದ ಷೇರು ಮಾರುಕಟ್ಟೆವರೆಗೆ ಅನೇಕ ದೇಶಗಳ ಮಾರುಕಟ್ಟೆ ಕುಸಿತ ಕಂಡಿತ್ತು. ಭಾರತ ಮತ್ತು ಅಮೇರಿಕಾ ದೇಶದ ಮಾರುಕಟ್ಟೆ ಕುಸಿದ ವೇಗದಲ್ಲೆ ಮತ್ತೆ ಮರಳಿ ಹಳಿಗೆ ಬಂದದ್ದು ವಿಶೇಷ.

ಚೀನಾದ ಲೇಮನ್ ಬ್ರದರ್ ಗಳೆಂದು ಹೆಸರಾದ ಎವರ್ ಗ್ರಾಂದೆ ಕುಸಿತ ಏಕೆ ಉಂಟಾಯಿತು? ಇದರ ಮುಂದಿನ ದಾರಿಯೇನು? ಎನ್ನುವುದನ್ನ ಇಂದಿನ ಲೇಖನದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ. ಅದಕ್ಕೂ ಮೊದಲು ಎವರ್ಗ್ರಾಂದೆ ಎನ್ನುವ ಸಂಸ್ಥೆ ಬಗ್ಗೆ ಕೂಡ ಸ್ವಲ್ಪ ತಿಳಿದುಕೊಳ್ಳೋಣ.

ಏನಿದು ಎವರ್ಗ್ರಾಂದೆ?

ಎವರ್ ಎಂದರೆ ಸದಾಕಾಲ ಗ್ರಾಂದೆ ಎಂದರೆ ದೊಡ್ಡದು, ಬಿಗ್ ಎನ್ನುವ ಅರ್ಥವನ್ನ ಕೊಡುತ್ತದೆ. ಈ ನಿಟ್ಟಿನಲ್ಲಿ ಸದಾದೊಡ್ಡ ಸಂಸ್ಥೆ ಎನ್ನುವ ಅರ್ಥವನ್ನ ಈ ಸಂಸ್ಥೆಯ ಹೆಸರು ನೀಡುತ್ತದೆ. ಎವರ್ ಎನ್ನುವುದು ಇಂಗ್ಲಿಷ್, ಗ್ರಾಂದೆ ಎನ್ನುವುದು ಸ್ಪ್ಯಾನಿಷ್ ಪದ. ಇರಲಿ,

ಎವರ್ಗ್ರಾಂದೆ ಚೀನಾದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಡೆವೆಲಪರ್ ಗಳಲ್ಲಿ ಒಂದು, ವಿಶ್ವದ 500 ಬೃಹತ್ ಸಂಸ್ಥೆಗಳ ಪಟ್ಟಿಯಲ್ಲಿ ಕೂಡ ತನ್ನ ಹೆಸರನ್ನ ದಾಖಲಿಸಿಕೊಂಡಿದೆ. ರೆವೆನ್ಯೂ ಅಷ್ಟರಮಟ್ಟಿಗೆ ಇಲ್ಲಿದೆ ಎಂದರ್ಥ. ಈ ಸಂಸ್ಥೆ ಹಾಂಗ್ ಕಾಂಗ್ ನಲ್ಲಿ ನೊಂದಾಯಿತವಾಗಿದ್ದು, ಚೀನಾದ ಶೇನ್ಜೇನ್ ನಗರದಲ್ಲಿ ತನ್ನ ಇರುವಿಕೆಯನ್ನ ಗುರುತಿಸಿಕೊಂಡಿದೆ. ಇದೆಷ್ಟು ದೊಡ್ಡ ಸಂಸ್ಥೆ ಎಂದರೆ ಸರಿ ಸುಮಾರು ಎರಡು ಲಕ್ಷ ಜನರನ್ನ ನೇರವಾಗಿ ಕೆಲಸಕ್ಕೆ ತೆಗೆದುಕೊಂಡಿದೆ. ಹೆಚ್ಚು ಕಡಿಮೆ ನಲವತ್ತು ಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗವನ್ನ ನೀಡಿದೆ.  ಚೀನಾದ 280 ನಗರದಲ್ಲಿ 1300 ಕ್ಕೂ ಹೆಚ್ಚಿನ ಪ್ರಾಜೆಕ್ಟ್ ಗಳನ್ನ ಈ ಸಂಸ್ಥೆ ಹೊಂದಿದೆ. ಒಂದು ಕಾಲದಲ್ಲಿ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಸರಾಗಿದ್ದ, ಇಂದಿಗೂ ಶ್ರೀಮಂತ ಮತ್ತು ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹುಯ್ ಕ ಯಾನ್ ಎನ್ನುವವರು ಇದರ ಸ್ಥಾಪಕರು.
 
ಎವರ್ಗ್ರಾಂದೆ ತನ್ನ ಹೌಸಿಂಗ್ ಪ್ರಾಜೆಕ್ಟ್ ಗಳಿಂದ ಚೀನಾದಲ್ಲಿ ಬಹಳ ಹೆಸರು ಮಾಡಿದ್ದರೂ, ಈ ಸಂಸ್ಥೆ ಎಲೆಕ್ಟ್ರಿಕ್ ವೆಹಿಕಲ್ಸ್, ಥೀಮ್ ಪಾರ್ಕ್ಸ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಫುಡ್ ಅಂಡ್ ಬಿವರೇಜಸ್, ನೀರು ಮಾರಾಟ, ಗ್ರಾಸರಿ, ಡೈರಿ ಪ್ರಾಡಕ್ಟ್ ಗಳಲ್ಲಿ ಕೂಡ ಹೂಡಿಕೆಯನ್ನ ಮಾಡಿದೆ. ಇಷ್ಟಕ್ಕೆ ಈ ಸಂಸ್ಥೆಯ ಕಥೆ ನಿಲ್ಲುವುದಿಲ್ಲ! 2010ರಲ್ಲಿ ಫುಟಬಾಲ್ ಟೀಮ್ ಒಂದನ್ನ ಕೊಂಡು ಕೊಂಡಿದೆ. 185 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ವ್ಯಯಿಸಿ ಜಗತ್ತಿನ ಅತಿ ದೊಡ್ಡ ಫುಟಬಾಲ್ ಶಾಲೆಯನ್ನ ಕೂಡ ತೆರೆದಿದೆ. ಇಷ್ಟೇ ಅಲ್ಲದೆ ಕಮಲದ ಆಕಾರದಲ್ಲಿ ಒಂದು ಲಕ್ಷ ಜನ ಕೂರ ಬಹುದಾದ ವಿಶ್ವದ ಅತಿ ದೊಡ್ಡ ಫುಟಬಾಲ್ ಸ್ಟೇಡಿಯಂ ಕೂಡ 2022 ರಲ್ಲಿ ಲೋಕಾರ್ಪಣೆ ಮಾಡಲು ಭರದಿಂದ ಸಿದ್ಧತೆಯನ್ನ ನಡೆಸಿತ್ತು. ಎಲ್ಲವೂ ಸರಿಯಾದರೆ ಈ ಪ್ರಾಜೆಕ್ಟ್ ಕೂಡ ಮುಗಿಯಲಿದೆ. ಇದಕ್ಕೆ ತಗಲಿರುವ ಅಂದಾಜು ವೆಚ್ಚ 1700 ಮಿಲಿಯನ್ ಅಮೆರಿಕನ್ ಡಾಲರ್ ಎನ್ನುವುದನ್ನ ನಾವು ಗಮನಿಸಬೇಕಿದೆ.

ಇದರ ಜೊತೆಗೆ ಕೃತಕ ಐಲ್ಯಾಂಡ್ ಸೃಷ್ಟಿಸುವುದು, ಅಲ್ಲಿ ಥೀಮ್ ಪಾರ್ಕ್ಗಳನ್ನ ಮಾಡಿ ಜನರಿಗೆ ವಿಶೇಷ ಅನುಭವ ನೀಡುವ ಟೂರಿಸಂ ಕ್ಷೇತ್ರಕ್ಕೂ ಇದು ಕಾಲಿಟ್ಟಿದೆ. ಈ ಆರ್ಥಿಕ ಬಿಕ್ಕಟ್ಟು ಎದುರಾಗದೆ ಇದ್ದಿದ್ದರೆ ಇದೆ ವರ್ಷ ಅಂದರೆ 2021ರ ಅಂತ್ಯಕ್ಕೆ ಇಂತಹ ಒಂದು ಐಲ್ಯಾಂಡ್ ಕೂಡ ಜಗತ್ತಿಗೆ ಲೋಕಾರ್ಪಣೆಯಾಗುತ್ತಿತ್ತು.

ಹೌದು ಇಷ್ಟೆಲ್ಲಾ ಕ್ಷೇತ್ರದಲ್ಲಿ ಕೈಯಾಡಿಸಿ ಗೆಲುವು ಕಾಣುತ್ತಿದ್ದ ಎವರ್ ಗ್ರಾಂದೆ ಎಡವಿದ್ದೆಲ್ಲಿ?

ಎವರ್ ಗ್ರಾಂದೆ ಕುಸಿತಕ್ಕೆ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹುದು.

  1. ಎವರ್ ಗ್ರಾಂದೆ ತನ್ನ ಹೆಸರಿಗೆ ತಕ್ಕಂತೆ ಅತಿ ದೊಡ್ಡ ಸಂಸ್ಥೆಯಾಗ ಬೇಕು ಎನ್ನುವ ತವಕದಲ್ಲಿ ಅತಿ ವೇಗದಲ್ಲಿ ಬೆಳವಣಿಗೆ ಕಂಡದ್ದು ಎಡವಲು ಸಿಕ್ಕ ಮೊದಲ ಕಲ್ಲು ಎಂದು ಹೇಳಬಹುದು.
  2. ವೇಗದಲ್ಲಿ ಬೆಳವಣಿಗೆ ಕಾಣಬೇಕು ಎನ್ನುವ ಹಂಬಲದಲ್ಲಿ ಡಿಮ್ಯಾಂಡ್ಗಿಂತ ಹೆಚ್ಚಿನ ಕಟ್ಟಡಗಳನ್ನ ಕಟ್ಟಿದ್ದು ಎರಡನೇ ಕಲ್ಲು, ಬಹಳಷ್ಟು ಮನೆಗಳು ಮಾರಾಟವಾಗದೆ ಉಳಿದದ್ದು ಕ್ಯಾಶ್ ಫ್ಲೋ ಏರುಪೇರು ಮಾಡಿದೆ.
  3. ವೇಗವಾಗಿ ಬೆಳವಣಿಗೆ ಕಾಣಬೇಕು ಎನ್ನುವ ತವಕದಲ್ಲಿ ತನ್ನ ಮೂಲ ಕ್ಷೇತ್ರವಾದ ರಿಯಲ್ ಎಸ್ಟೇಟ್ ಹೊರತುಪಡಿಸಿ ಬೇರೆ ಬೇರೆ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದು ಕೂಡ ಸಂಸ್ಥೆ ಕುಸಿಯಲು ಕಾರಣ.
  4. ಬೆಳವಣಿಗೆ ಎನ್ನುವುದು ಸ್ಥಿರವಾಗಿರಬೇಕು, ಆದರೆ ಎವರ್ ಗ್ರಾಂದೆ ಬೆಳವಣಿಗೆ ಎಲ್ಲವೂ ಒಂದಲ್ಲ ಹತ್ತಾರು ಮೂಲದಿಂದ ಪಡೆದ ಸಾಲದ ಹಣದಿಂದ ಆದದ್ದು, ಚೀನಾ ದೇಶದ ಅತಿ ಹೆಚ್ಚು ಸಾಲ ಉಳ್ಳ ಸಂಸ್ಥೆ ಎನ್ನುವ ಪಟ್ಟವನ್ನ ಕೂಡ ಇದು ಪಡೆದುಕೊಂಡಿದೆ. 300 ಬಿಲಿಯನ್ ಅಮೆರಿಕನ್ ಡಾಲರಿಗೂ ಮೀರಿದ ಸಾಲವನ್ನ ಈ ಸಂಸ್ಥೆ ಹೊಂದಿದೆ ಎಂದರೆ ಅದೆಷ್ಟು ದೊಡ್ಡದು ಎನ್ನುವುದರ ಅರಿವು ನಿಮ್ಮದಾಗಬಹುದು. ಸಂಸ್ಥೆಯನ್ನ ಲಾಭದಲ್ಲಿ ಕಟ್ಟಬೇಕು, ಆದರೆ ಎವರ್ ಗ್ರಾಂದೆ ಸಾಲದಲ್ಲಿ ಕಟ್ಟಲು ಹೋಗಿ ಎಡವಿದೆ.
  5. ಬಹತೇಕ ಚೀನಿ ಸಂಸ್ಥೆಗಳಂತೆ ಎವರ್ ಗ್ರಾಂದೆ ಕೂಡ ನಿಖರವಾದ ಮಾಹಿತಿಯನ್ನ, ಸರಿಯಾದ ಸಮಯದಲ್ಲಿ ತನ್ನ ಹೂಡಿಕೆದಾರರಿಗೆ ಮತ್ತು ಜನತೆಗೆ ನೀಡಿಲ್ಲ. ಮಿತಿ ಮೀರಿದ ಹಂತ ತಲುಪಿದಾಗ ಇದು ಜಗಜಾಹೀರಾತಾಗಿದೆ. ಸರಿಯಾದ ಸಮಯದಲ್ಲಿ ಮಾಹಿತಿಯನ್ನ ಪಬ್ಲಿಕ್ ಮಾಡಿದ್ದರೆ ಇವತ್ತಿನ ಕುಸಿತ ಉಂಟಾಗುತ್ತಿರಲಿಲ್ಲ. ಹೀಗೆ ಮಾಹಿತಿಯನ್ನ ತಿರುಚುವುದು, ಮುಚ್ಚಿಡುವುದು ಸಂಸ್ಥೆಗಳ ಕುಸಿತಕ್ಕೆ ಬಹುದೊಡ್ಡ ಕಾರಣ.       

ಕುಸಿತದ ಮೂಲ ಬೇಡಿಕೆಯಲ್ಲಿ ಕುಸಿತ ಉಂಟಾಗಿರುವುದು. ಎಲ್ಲಿಯ ತನಕ ಬೇಡಿಕೆಯನ್ನ ಕಾಯ್ದು ಕೊಳ್ಳಬಹುದು? ಎನ್ನುವ ಜ್ಞಾನವಿಲ್ಲದೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಎವರ್ ಗ್ರಾಂದೆ ಉದಾಹರೆಣೆ.

ಎವರ್ ಗ್ರಾಂದೆ ಮುಂದಿನ ದಾರಿಯೇನು?

ಎವರ್ ಗ್ರಾಂದೆ ತನ್ನ ಸಾಲದ ಮೇಲಿನ ಬಡ್ಡಿ ಹಣವನ್ನ ಸದ್ಯದ ಮಟ್ಟಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಂಡಿದ್ದೇನೆ ಎನ್ನುವ ಮಾತನ್ನ ಹೇಳಿದೆ. ಆದರೆ 100 ಮಿಲಿಯನ್ ಹಣದಲ್ಲಿ ಅದು ತೀರಾ ಕಡಿಮೆ ಹಣ, ಉಳಿದ 83.5 ಮಿಲಿಯನ್ ಅಮೆರಿಕನ್ ಡಾಲರ್ ಇದೆ. ಗುರುವಾರ ಅಂದರೆ 23/09/2021 ರಂದು ನೀಡಬೇಕಾಗಿದೆ. ಅದಕ್ಕೇನು ಮಾಡುತ್ತದೆ? ಎನ್ನುವುದಕ್ಕೆ ನಿಖರ ಉತ್ತರವಿಲ್ಲ. ಸೆಪ್ಟೆಂಬರ್ 14,2021 ರಂದು ತನ್ನ ಪರಿಸ್ಥಿತಿಯನ್ನ ನಿಭಾಯಿಸಲು 'ಫೈನಾನ್ಸಿಯಲ್ ಅಡ್ವೈಸರ್' ಗಳನ್ನ ನೇಮಿಸಿಕೊಳ್ಳಲಾಗಿದೆ ಎನ್ನುವ ಹೇಳಿಕೆಯನ್ನ ಕೂಡ ನೀಡಿದೆ. ಆದರೆ ಇದ್ಯಾವುದೂ ಮುಂದಿನ ಕಂತಿನ ಹಣವನ್ನ ಎಲ್ಲಿಂದ ತರುತ್ತೇವೆ ಎನ್ನುವುದಕ್ಕೆ ಉತ್ತರವಲ್ಲ. ಚೀನಾದ ಮಾರುಕಟ್ಟೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಎವರ್ ಗ್ರಾಂದೆ ಗೆ ಹಣ ಹುಟ್ಟುವುದು ಕಷ್ಟದ ಕೆಲಸ. ಹಾಂಗ್ ಕಾಂಗ್ ನಲ್ಲಿರುವ ತನ್ನ ಆಫೀಸ್ ಕಟ್ಟಡವನ್ನ ಮಾರಲು ಕೂಡ ಸಂಸ್ಥೆ ಪ್ರಯತ್ನವನ್ನ ಪಡುತ್ತಿದ್ದೆ. ಆದರೆ ಅದು ಅಷ್ಟು ವೇಗವಾಗಿ ಆಗುವ ಕೆಲಸವಲ್ಲ, ಹೀಗಾಗಿ ಹಣ ಪಾವತಿಗೆ ಇರುವ ಡೆಡ್ಲೈನ್ ಹೇಗೆ ನಿಭಾಯಿಸುತ್ತದೆ ಎನ್ನುವುದು ಸದ್ಯದ ಪ್ರಶ್ನೆ. ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ಎವರ್ ಗ್ರಾಂದೆ ಷೇರುಗಳು 80 ಪ್ರತಿಶತ ಕುಸಿತವನ್ನ ಕಂಡಿದೆ. ಹೂಡಿಕೆದಾರರು ಸಂಸ್ಥೆಯಲ್ಲಿ ನಂಬಿಕೆಯನ್ನ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಚೀನಾ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡಿದರೆ ಆಗ ಇಲ್ಲಿ ಒಂದಷ್ಟು ಬದಲಾವಣೆಯನ್ನ ಕಾಣಬಹುದು. ಆದರೆ ಚೀನಾ ಸರಕಾರ ಒಂದು ಖಾಸಗಿ ಸಂಸ್ಥೆಯನ್ನ ಅದೇಕೆ ಬೇಲ್ಔಟ್ ಮಾಡುತ್ತದೆ. ಅಲ್ಲದೆ ಇಲ್ಲಿ ಇನ್ನೊಂದು ವಿಷಯವನ್ನ ಕೂಡ ಗಮನಿಸಬೇಕು. ಇದು ಕೇವಲ ಎವರ್ ಗ್ರಾಂದೆ ಕಥೆಯಲ್ಲ!! ಇದು ಚೀನಾ ದೇಶದ ಯಶಸ್ಸಿನ ಹಿಂದಿನ ಬಹುತೇಕ ಸಂಸ್ಥೆಗಳ ಕಥೆ. ಚೀನಾದ ಮಹಾಗೋಡೆಯನ್ನ ಭೇದಿಸಿ ವಿಷಯ ಹೊರಕ್ಕೆ ಬರುತ್ತದೆ ಎಂದರೆ ಅದ್ಯಾವ ಮಟ್ಟದಲ್ಲಿ ಕುಸಿತ ಉಂಟಾಗಿರಬಹುದು ಎನ್ನುವುದನ್ನ ನಿಮ್ಮ ಊಹೆಗೆ ಬಿಡುತ್ತೇನೆ. ಹೀಗಾಗಿ ಚೀನಾ ಸರಕಾರ ಎವರ್ ಗ್ರಾಂದೆ ಯನ್ನ ಬೇಲ್ಔಟ್ ಮಾಡುವುದು ಸಂಶಯ. ಆದರೆ ಚೀನಾ ದೇಶ ತನ್ನ ಹುಳುಕನ್ನ ಮುಚ್ಚಿಟ್ಟುಕೊಳ್ಳಲು ಯಾವ ಮಟ್ಟಕ್ಕೂ ಇಳಿಯುತ್ತದೆ. ಹೀಗಾಗಿ ಮುಂದಿನ ದಿನಗಳನ್ನ ಕಾದು ನೋಡುವುದು ಉತ್ತಮ.

ಕೊನೆಮಾತು: ಬೆಳವಣಿಗೆ ಎನ್ನುವುದು ಸಸ್ಟೇನಬಲ್ ಆಗಿರಬೇಕು. ಅದು ಲಾಭದ ಭದ್ರ ಬುನಾದಿಯ ಮೇಲೆ ಆಗಿರಬೇಕು. ಬೆಳವಣಿಗೆ ನಿಧಾನವಾಗಿ ಆಗಿರಬೇಕು. ಆತುರದಿಂದ, ವಿವೇಚನೆಯಿಲ್ಲದೆ ಮಾಡಿದ ಕೆಲಸದಿಂದ ಎಂದಿಗೂ ಸುಸ್ಥಿರ ಬೆಳವಣಿಗೆ ಸಾಧ್ಯವಿಲ್ಲ. ಚೀನಾ ಮಾಡೆಲ್ ಅಭಿವೃದ್ಧಿಯಿಂದ ಕೊನೆಗೆ ನೋವು ಬಿಟ್ಟು ಮತ್ತೇನೂ ಸಿಗುವುದಿಲ್ಲ, ಕೆಲವು ಜನರ ಮಹತ್ವಾಕಾಂಕ್ಷೆಗೆ ಜಗತ್ತಿನ ಜನರು ಬೆಲೆಯನ್ನ ತೆರುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಇಂತಹ ಬೆಳವಣಿಗೆಯಿಂದ ಯಾರಿಗೂ ಪ್ರಯೋಜನವಿಲ್ಲ. ಹಿತಮಿತವಾದ ಬಳಕೆ, ಮತ್ತು ಸರಳವಾದ ಬದುಕು ಮಾತ್ರ ಇಂತಹ ಜಾಗತಿಕ ಕುಸಿತಗಳನ್ನ ತಡೆಯಬಲ್ಲದು. ಇವತ್ತಿನ ಅಬ್ಬರದಲ್ಲಿ ಈ ಮಾತು ಯಾರಿಗೂ ಪಥ್ಯವಲ್ಲ ಎನ್ನುವುದು ಸತ್ಯವಾದ ಮಾತು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com