ರಾಜ್ಯದಲ್ಲಿ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ…? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ರಾಜ್ಯ ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಮುನ್ನವೆ ಚುನಾವಣೆ ನಡೆಯಲಿದೆಯೆ? ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೇಳಿ ಬಂದಿರುವ ಪ್ರಶ್ನೆ ಇದು.
ಸಿಎಂ ಬಸವರಾಜ ಬೊಮ್ಮಾಯಿ-ಪ್ರಧಾನಿ ನರೇಂದ್ರ ಮೋದಿ
ಸಿಎಂ ಬಸವರಾಜ ಬೊಮ್ಮಾಯಿ-ಪ್ರಧಾನಿ ನರೇಂದ್ರ ಮೋದಿ
Updated on

ರಾಜ್ಯ ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಮುನ್ನವೆ ಚುನಾವಣೆ ನಡೆಯಲಿದೆಯೆ? ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೇಳಿ ಬಂದಿರುವ ಪ್ರಶ್ನೆ ಇದು. ಬರುವ ಮೇ ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಅದಕ್ಕೂ ಮೊದಲೇ ಚುನಾವಣೆಗೆ ಮುಂದಾದರೆ ಹೇಗೆ ? ಎಂಬ ಚರ್ಚೆ ಬಿಜೆಪಿಯಲ್ಲಿ ನಡೆದಿದೆ. ಗುಜರಾತ್ ಫಲಿತಾಂಶ ಪಕ್ಷದಲ್ಲಿ ಹೊಸ ಕಂಪನಕ್ಕೂ ಕಾರಣವಾಗಿದೆ. ಕರ್ನಾಟಕದಲ್ಲೂ ಈ ಬಾರಿ ಶೇಕಡಾ 25 ಕ್ಕೂ ಹೆಚ್ಚು ಹೊಸ ಮುಖಗಳಿಗೆ ಪಕ್ಷದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ತಂತ್ರ ಅನುಸರಿಸಲು ಬಿಜೆಪಿ ವರಷ್ಠರು ಮುಂದಾಗಿರುವುದು ಇದಕ್ಕೆ ಕಾರಣ. ಪಕ್ಷದ ಕೆಲವು ಹಿರಿಯರು ಹಾಗು ಆಯ್ದ ಶಾಸಕರು ಈ ಬಾರಿ ಅಭ್ಯರ್ಥಿಗಳಾಗುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂಬ ಸಂದೇಶ ರವಾನೆ ಆಗಿರುವುದು ತಳಮಳಕ್ಕೆ ಕಾರಣವಾಗಿದೆ.   

ಪ್ರಧಾನಿ ಮೋದಿ ತವರು ಗುಜರಾತ್ ನಲ್ಲಿ ಬಿಜೆಪಿ ದಿಗ್ವಿಜಯ ಆಶ್ಚರ್ಯವೇನಲ್ಲ. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿರುವುದು ಮಹತ್ವದ ಬೆಳವಣಿಗೆ. 

ಕರ್ನಾಟಕದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆದರೆ ಆಗುವ ರಾಜಕೀಯ ಲಾಭದ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿಯ ಮಾತೃ ಸಂಸ್ಥೆ ಆರ್.ಎಸ್.ಎಸ್. ಕೂಡಾ ಈ ಸಂಗತಿಯ ಬಗ್ಗೆ ಗಂಭೀರ ಪರಿಗಣನೆಗೆ ಸೂಚನೆ ನೀಡಿದೆ. ಆದರೆ ಇನ್ನುಳಿದಿರುವ ಐದು ತಿಂಗಳಲ್ಲಿ ರಾಜಕೀಯ ಸ್ಥಿತಿಗತಿಗಳಲ್ಲಿ ಮಹತ್ವದ ಬದಲಾವಣೆ ಏನೂ ಆಗುವುದಿಲ್ಲ ನಿಗದಿತ ವೇಳಾ ಪಟ್ಟಿಯಂತೆಯೇ ಚುನಾವಣೆ ನಡೆಯಲಿ ಎಂಬ ಅಭಿಪ್ರಾಯವೂ  ಪಕ್ಷದ ಇತರ ಹಿರಿಯರಿಂದ ವ್ಯಕ್ತವಾಗಿದೆ. ತತ್ ಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಪಕ್ಷದ ನಾಯಕತ್ವ ಇಲ್ಲ.

ಬಿಜೆಪಿಯೇ ನಡೆಸಿರುವ ಎರಡು ಆಂತರಿಕ ಸಮೀಕ್ಷೆಗಳಲ್ಲಿ  ಸರ್ಕಾರದ ಪರ ಜನರಿಂದ ಅಂತಹ ಒಲವು ವ್ಯಕ್ತವಾಗಿಲ್ಲ. ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ, ಗುಂಪುಗಾರಿಕೆ ಪಕ್ಷದ ವರ್ಚಸ್ಸನ್ನು ಕುಂದಿಸಿದೆ. ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ. ಹೀಗಾಗಿ ಯಾವುದೇ ಹೊಸ ಪ್ರಯೋಗಕ್ಕೆ ಮುಂದಾಗುವ ಮುನ್ನ ಎಚ್ಚರದ ಹೆಜ್ಜೆ ಇಡುವ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದಿದ್ದು,ಬೆಳಗಾವಿ ಅಧಿವೇಶನ ಮುಗಿದ ನಂತರ ಇದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ. 

ಫೆಬ್ರವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮಂಡಿಸಲಿರುವ ಬಜೆಟ್ ನಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದಷ್ಟು ಹೊಸ ಜನಾಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಲಿದ್ದು,ಚುನಾವನೆ ಗೆಲ್ಲಲು ಮೋದಿ ವರ್ಚಸ್ಸನ್ನೂ ಬಿಜೆಪಿ ನಂಬಿಕೊಂಡಿದೆ. 

ಆದರೆ  ಇಲ್ಲಿನ ರಾಜಕೀಯ ಸ್ಥಿತಿ ಗುಜರಾತ್ ಗಿಂತ ವಿಭಿನ್ನ. ಇಲ್ಲಿ ಪಕ್ಷಕ್ಕಿಂತ ವಿಧಾನಸಭೆ ಚುನಾವಣೆಯಲ್ಲಿ ಜಾತಿ, ವ್ಯಕ್ತಿ ಮತ್ತಿತರೆ ಅಂಶಗಳೇ ಪ್ರಧಾನವಾಗುತ್ತವೆ. ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಪಕ್ಷಕ್ಕೆ ಹೊಸ ಇಮೇಜ್ ನೀಡಿ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದಾರೆ. ತನ್ನ ಸಾಂಪ್ರದಾಯಿಕ ಮತಗಳ ಜತೆಗೇ ಹೊಸ ಯುವ ಮತದಾರರನ್ನು ಸೆಳೆಯಲು ಕಾರ್ಯ ಯೋಜನೆ ರೂಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವವೂ ಕಾಂಗ್ರೆಸ್ ಗೆ ನೆರವಾಗಲಿದೆ. ಬಹು ಮುಖ್ಯವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಲ್ಲಿಯವರೇ ಆಗಿರುವುದು. ತಮ್ಮ ಐದು ದಶಕಗಳ ರಾಜಕಾರಣದಲ್ಲಿ ಎಂದೂ ನಿರ್ದಿಷ್ಟ ವರ್ಗಗಳ ಸೀಮಿತ ನಾಯಕರಾಗಿ ಅವರು ಗುರುತಿಸಿಕೊಂಡಿಲ್ಲ. ಅವರೊಬ್ಬ ಸಮಚಿತ್ತದ ಗಂಭೀರ ನಾಯಕ. ಪಕ್ಷದೊಳಗೂ ಅವರು ದೊಡ್ಡ ಶಕ್ತಿ. ಈ ಮೂವರು ನಾಯಕರ ಪ್ರಭಾವ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆಲಾಭ ತಂದುಕೊಡಲಿದೆ. ಈ ಬಾರಿಯ ಚುನಾವಣೆ ಖರ್ಗೆಯವರ ನಾಯಕತ್ವದ ಅಗ್ನಿ ಪರೀಕ್ಷೆಯೂ ಹೌದು. 

ಇನ್ನು ಜಾತ್ಯತೀತ ಜನತಾದಳ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆ ಪಕ್ಷವೂ ಆಂತರಿಕ ಕಿತ್ತಾಟದಿಂದ ಹೊರತಾಗಿಲ್ಲ. ಆ ಪಕ್ಷಕ್ಕೆ ಮಾಜಿ ಪ್ರಧಾನಿ ದೇವೇಗೌಡರ ವರ್ಚಸ್ಸೇ ಆಸರೆ. 90ರ ಇಳಿ ವಯಸ್ಸಿನಲ್ಲೂ ಅವರು ಪಕ್ಷದ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಪಕ್ಷಕ್ಕೆ ಹೊಸ ಚೈತನ್ಯ ತುಂಬಿದೆ. ಆದರೆ ಈ ಜನಪ್ರಿಯತೆ ವಿಧಾನಸಭೆಯಲ್ಲಿ ಸಂಖ್ಯಾ ಬಲವಾಗಿ ಹೊರ ಹೊಮ್ಮುವ ಸಾಧ್ಯತೆ ಇಲ್ಲ.  

ಬಿಜೆಪಿಯಲ್ಲಿ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ನಿಧಾನವಾಗಿ ಮೂಲೆಗೊತ್ತುವ ಪ್ರಕ್ರಿಯೆ ಶುರುವಾಗಿದೆ. ಇದರಿಂದ ಅವರು ಕೆರಳಿದ್ದಾರೆ. ಹೈಕಮಾಂಡ್ ಅವರ ವಿಚಾರದಲ್ಲಿ ಮಗುವನ್ನೂ ಚಿವುಟಿ ತೊಟ್ಟಿಲನ್ನೂ ತೂಗುವ ನೀತಿ ಅನುಸರಿಸುತ್ತಿದೆ. ಯಡಿಯೂರಪ್ಪ ಹೊರತಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಯೋಚಿಸಲೂ ಸಾಧ್ಯವಿಲ್ಲ ಎಂಬುದನ್ನು ಅವರ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ. ಅವರ  ಬೆಂಬಲದಿಂದಲೇ ಮುಖ್ಯಮಂತ್ರಿ ಪಟ್ಟಕ್ಕೇರಿದ ಬಸವರಾಜ ಬೊಮ್ಮಾಯಿ ಕೂಡಾ ಈಗ ನಿಧಾನವಾಗಿ ಬಿಎಸ್ ವೈ ಪ್ರಭಾವಳಿಯಿಂದ ದೂರ ಸರಿದು ವರಿಷ್ಠರಿಗೆ ಹತ್ತಿರವಾಗಿದ್ದಾರೆ.

ಯಡಿಯೂರಪ್ಪ ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸಿದರೆ ಎಂಬ ಆತಂಕವೂ ಪಕ್ಷವನ್ನು ಕಾಡುತ್ತಿದೆ. ಮೂರು ದಿನಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜತೆ ಅವರು ಕಾಣಿಸಿಕೊಳ್ಳಲಿಲ್ಲ. ಬೆಂಗಳೂರಿನಲ್ಲೇ ಉಳಿದು ಕಾರ್ಯಕ್ರಮದಿಂದ ದೂರ ಸರಿದರು. 

ಬಿಜೆಪಿಗೆ ವಲಸೆ ಬಂದು ಮಂತ್ರಿಗಳಾದ ಹೆಚ್ಚು ಮಂದಿಗೆ ಚುನಾವಣೆಯಲ್ಲಿ ತಮಗೆ ಪಕ್ಷ ಟಿಕೆಟ್ ನೀಡದಿದ್ದರೆ ಮುಂದೇನು ?ಎಂಬ ಅಭದ್ರತೆ ಕಾಡುತ್ತಿದೆ. ಕೆಲವರಿಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಚಿಂತೆಯೂ ಇದೆ. ನಾಲ್ಕೈದು ಮಂದಿ ಕಾಂಗ್ರೆಸ್ ನಾಯಕತ್ವದ ಜತೆಗೂ ಸಮಾಲೋಚನೆ ನಡೆಸಿದ್ದಾರೆ. 
                                              
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ  ಮಾಸಾಂತ್ಯದಲ್ಲಿ ತನ್ನ ವರದಿ ನೀಡಲಿದೆ. ಒಂದು ಮೂಲದ ಪ್ರಕಾರ ರಾಜಕೀಯವಾಗಿ ಪ್ರಬಲವಾಗಿರುವ ಜನಾಂಗಗಳಿಗೆ ಅನುಕೂಲವಾಗುವ ಅಂಶ ವರದಿಯಲ್ಲಿರಲಿದೆ ಎಂದೂ ಹೇಳಲಾಗುತ್ತಿದೆ, ಪಂಚಮಸಾಲಿ ಲಿಂಗಾಯಿತರು, ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳ ಮೀಸಲಾತಿ ಬೇಡಿಕೆಯ ಕುರಿತು ಆಯೋಗ ನೀಡುವ ವರದಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಸರ್ಕಾರದ ಹಗರಣಗಳು ದಿನಕ್ಕೊಂದರಂತೆ ಬಯಲಾಗುತ್ತಿರುವ ಸನ್ನಿವೇಶದಲ್ಲಿ ಆಡಳಿತ ವಿರೋಧಿ ಅಲೆಯ ಜತೆಗೇ ಆಂತರಿಕ ಭಿನ್ನಮತ, ಅತೃಪ್ತಿಯನ್ನು ಸಂಬಾಳಿಸಿ ಗೆಲ್ಲುವುದೇ ಸದ್ಯಕ್ಕೆ ಬಿಜೆಪಿ ಮುಂದಿರುವ ಸವಾಲು. ಮೋದಿ ಜನಪ್ರಿಯತೆ ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭ ತರುವ ಸಾಧ್ಯತೆಗಳು ಇಲ್ಲ. ಜೆಡಿಎಸ್ ಪಕ್ಷ ಮಾತ್ರ ಶತಾಯ ಗತಾಯ ಮತ್ತೆ ಅಧಿಕಾರದ ಗದ್ದುಗೆ ಏರುವ ಲಕ್ಕಾಚಾರದಲ್ಲಿದೆ. ಇದು ಕೈಗೂಡಿದರೂ ಆಶ್ಚರ್ಯ ಪಡಬೇಕಿಲ್ಲ.   
 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com