ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ! (ಹಣಕ್ಲಾಸು)

ಹಣಕ್ಲಾಸು-315-ರಂಗಸ್ವಾಮಿ ಮೂಕನಹಳ್ಳಿ
ಷೇರು ಕುಸಿತ (ಸಾಂಕೇತಿಕ ಚಿತ್ರ)
ಷೇರು ಕುಸಿತ (ಸಾಂಕೇತಿಕ ಚಿತ್ರ)

ಸಾಮಾನ್ಯ ಹೂಡಿಕೆದಾರನಿಂದ, ಕಸುಬುದಾರ ಹೂಡಿಕೆದಾರನವರೆಗೆ ಎಲ್ಲರಿಗೂ ನಿದ್ರೆಯಿಲ್ಲದ ರಾತ್ರಿಗಳು ಹೆಚ್ಚಾಗಿವೆ. ಇನ್ನೇನು ಭಾರತೀಯ ಸ್ಟಾಕ್ ಮಾರ್ಕೆಟ್ನ ನಿಫ್ಟಿ 20 ಸಾವಿರ ತಲುಪಿತು ಎಂದು ಖುಷಿ ಪಡುವ ವೇಳೆಯಲ್ಲಿ 18,500 ರ ಆಸುಪಾಸಿನಿಂದ ಕಾಣಲು ಶುರುವಾದ ಕುಸಿತ 15183ಕ್ಕೆ ಇಳಿದಿತ್ತು. ಇದೀಗ ಮತ್ತೆ ಒಂದೈದು ಪ್ರತಿಶತ ಚೇತರಿಕೆ ಕಂಡರೂ ಮಾರುಕಟ್ಟೆಯಲ್ಲಿ ಮೌಲ್ಯ ಕುಸಿತವಾಗಿರುವುದು ಸರ್ವ ವೇದ್ಯ.

ಕತ್ತಲಿನ ನಂತರ ಬೆಳಕು ಬರುತ್ತದೆ ಅದು ಪ್ರಕೃತಿ ಸಹಜವಲ್ಲವೇ? ಅಂತೆಯೇ ಪ್ರತಿ ಕುಸಿತವೂ ಇನ್ನೊಂದು ದೊಡ್ಡ ಮಟ್ಟದ ಏರಿಕೆಗೆ ವೇದಿಕೆಯಾಗುತ್ತದೆ ಎನ್ನುವ ಮಾತು ಕೂಡ ಸುಳ್ಳಲ್ಲ. ಮಾರುಕಟ್ಟೆಯ ಮೂಲಭೂತ ಮಂತ್ರ "ಬೆಲೆ ಇಳಿಕೆಯಾದಾಗ ಖರೀದಿಸಬೇಕು ಮತ್ತು ಹೆಚ್ಚಾದಾಗ ಅದರ ಲಾಭ ಪಡೆದು ಹಣವನ್ನಾಗಿ ಮಾರ್ಪಡಿಸಿಕೊಳ್ಳಬೇಕು". ಆದರೆ ಮನುಷ್ಯನ ಮನಸ್ಸು ಇದಕ್ಕೆ ಪೂರ್ಣವಾಗಿ ತದ್ವಿರುದ್ಧ ಕೆಲಸಮಾಡುತ್ತದೆ. ಮಾರುಕಟ್ಟೆ ಏರುಗತಿಯಲ್ಲಿದ್ದಾಗ ಜನರಲ್ಲೂ , ಹೂಡಿಕೆದಾರರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಆಗ ಎಲ್ಲರೂ ಹೂಡಿಕೆ ಮಾಡಲು, ಕೊಂಡುಕೊಳ್ಳಲು ಆಸಕ್ತಿಯನ್ನ ತೋರಿಸುತ್ತಾರೆ. ಮಾರುಕಟ್ಟೆ ಕುಸಿದ ಸಮಯದಲ್ಲಿ ಕೊಳ್ಳಬೇಕು ಆದರೆ ವಿಶ್ವಾಸ ತೀರಾ ರಾಕ್ ಬಾಟಮ್ ತಲುಪಿರುತ್ತದೆ, ಹೀಗಾಗಿ ಎಲ್ಲರೂ ಮಾರಲು ಹವಣಿಸುತ್ತಾರೆ. ಹೀಗಾಗಿ ಗೋಲ್ಡನ್ ರೂಲ್ ಪಾಲಿಸುವವರು ಬೆರಳೆಣಿಕೆಯಷ್ಟು ಜನರು ಮಾತ್ರ! 

ಇವತ್ತಿನ ಲೇಖನದಲ್ಲಿ ಕುಸಿತ ಕಾಣುತ್ತಿರುವ ಸಮಯದಲ್ಲಿ ನಾವೇಕೆ ನಮ್ಮ ಹೂಡಿಕೆಯನ್ನ ಹಿಂಪಡೆಯಬಾರದು ಅಥವಾ ಏಕೆ ನಾವು ಕೊಂಡ ಷೇರುಗಳನ್ನ ಮಾರಬಾರದು ಎನ್ನುವುದಕ್ಕೆ ಒಂದಷ್ಟು ಕಾರಣಗಳನ್ನ ನೀಡುವೆ. ಬುದ್ಧಿವಂತ ಓದುಗರು ಇದನ್ನ ಪರಾಮರ್ಶೆಗೆ ಒಳಪಡಿಸಿ ಅವರ ಪರಿಸ್ಥಿತಿಗೆ ಹೊಂದುತ್ತದೆ ಎನ್ನುವುದಾದರೆ ಅಳವಡಿಸಿಕೊಳ್ಳಬಹುದು. ಸನ್ನಿವೇಶಗಳು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಹೀಗಾಗಿ ಪರಿಹಾರಗಳು ಕೂಡ ಬೇರೆಯಾಗುತ್ತದೆ ಎನ್ನುವುದನ್ನ ಗಮನದಲ್ಲಿರಿಸಿ ಕೊಳ್ಳಬೇಕಾಗುತ್ತದೆ.

ನಾವೇಕೆ ಕುಸಿತದ ಸಮಯದಲ್ಲಿ ಹೂಡಿಕೆಯನ್ನ ಹಿಂಪಡೆಯಬಾರದು? ಇಲ್ಲಿದೆ ಕಾರಣಗಳು.

  1. ಎಲ್ಲಕ್ಕೂ ಮೊದಲಿಗೆ ನಿಮಗೆ ನಿಮ್ಮ ಹೂಡಿಕೆಯನ್ನ ಹಿಂಪಡೆಯಬೇಕು ಅಥವಾ ಮಾರಬೇಕು ಎನ್ನುವ ಚಿಂತೆ ಬಂದಿದೆ ಎಂದರೆ ನಿಮ್ಮ ಹೂಡಿಕೆ ಕನಿಷ್ಠ 20 ರಿಂದ 30 ಪ್ರತಿಶತ ಕುಸಿತ ಕಂಡಿರುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಇದು ಇನ್ನೆಷ್ಟು ಕುಸಿತ ಕಾಣಬಹುದು? ಎನ್ನುವ ಒಂದು ಅಂದಾಜು ನಾವೇ ಮಾಡಬೇಕಾಗುತ್ತದೆ. ಯಾವ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದೇವೆ, ಯಾವ ವಲಯದಲ್ಲಿ ಅದು ಬರುತ್ತದೆ. ಆ ವಲಯದ ಭವಿಷ್ಯ ಹೇಗಿದೆ ಎನ್ನುವುದನ್ನ ನಾವು ಕಂಡುಕೊಳ್ಳಬೇಕಾಗುತ್ತದೆ. ಗಮನಿಸಿ ನೋಡಿ ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚೆಂದರೆ ಇನ್ನು 7 ರಿಂದ 10 ಪ್ರತಿಶತ ಕುಸಿತ ಕಾಣಬಹುದು. ಇದನ್ನ ಹಲವು ಬಾರಿ ಕುಸಿತ ಎಂದು ಕರೆಯಲು ಕೂಡ ಆಗದು. ಏಕೆಂದರೆ ನಾವು ಮಾರುಕಟ್ಟೆ ಉನ್ನತ ಮಟ್ಟದಲ್ಲಿದ್ದಾಗ ಇದ್ದ ಬೆಲೆಯ ಜೊತೆಗೆ ಇಂದಿನ ಬೆಲೆಯನ್ನ ಹೋಲಿಕೆ ಮಾಡಿ ಇಷ್ಟು ಕುಸಿತವಾಗಿದೆ ಎಂದು ಹೇಳುತ್ತೇವೆ. ಆದರೆ ಮಾರುಕಟ್ಟೆ ತನ್ನ ಪೀಕ್ ನಲ್ಲಿ ಎಷ್ಟು ವೇಳೆಯಿತ್ತು ಎನ್ನುವ ಅಂಶವನ್ನ ಗಮನಿಸುವುದಿಲ್ಲ. ಹೀಗಾಗಿ ಹೆಚ್ಚಿನ ಬಾರಿ ಕುಸಿತ ಎನ್ನುವುದಕ್ಕಿಂತ ಕರೆಕ್ಷನ್ ಎನ್ನುವ ಪದದ ಬಳಕೆ ಹೆಚ್ಚು ಸೂಕ್ತವಾಗುತ್ತದೆ. ಗಮನಿಸಿ, ನೀವು ಕೊಂಡ ಬೆಲೆಗಿಂತ ಎಷ್ಟು ಕುಸಿತವಾಗಿದೆ ಎನ್ನುವುದನ್ನ ಲೆಕ್ಕ ಹಾಕಿ, ಮಾರುಕಟ್ಟೆಯಲ್ಲಿ ಅದರ ಮೌಲ್ಯ ಅದೆಷ್ಟು ಹೆಚ್ಚಿತ್ತು ಎನ್ನುವುದು ಎಲ್ಲರಿಗೂ ಅನ್ವಯಿಸುವ ಮಾನದಂಡವಲ್ಲ. ಹಾಗೊಮ್ಮೆ ಎಲ್ಲವೂ ನಿಮ್ಮ ವಿರುದ್ಧವೇ ಇದ್ದರೂ ಕೂಡ ಇನ್ನೆಷ್ಟು ಕುಸಿತ ಕಂಡೀತು? ಮೊದಲೇ ಹೇಳಿದಂತೆ 7 ರಿಂದ 10 ಪ್ರತಿಶತ. ಹಣದ ಅವಶ್ಯಕೆತೆ ಇಲ್ಲದಿದ್ದರೆ ಮಾರದೆ ಉಳಿಸಿಕೊಳ್ಳುವುದು ಒಳ್ಳೆಯದು. ಬೆಲೆಯೇರಿಕೆಯ ಕಾರಣ ಹಣ ಮೌಲ್ಯ ಕಳೆದುಕೊಳ್ಳುತ್ತಿದೆ. ನಷ್ಟದಲ್ಲಿ ಮಾರಿ ಬಂದ ಹಣವನ್ನ ಮತ್ತೆ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಅದು ನಿತ್ಯ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಮಾರುವುದರಿಂದ ಹೆಚ್ಚಿನ ಅಪಾಯ, ಹುಷಾರು.
  2. ಮರು ಹೂಡಿಕೆಯ ಖರ್ಚು, ಎಲ್ಲಿ ಹೂಡಿಕೆ ಮಾಡಬೇಕೆನ್ನುವ ರಿಸರ್ಚ್, ಇವುಗಳು ಮಾರುವ ಮುನ್ನ ನೆನಪಿನಲ್ಲಿರಲಿ: ಮೊದಲ ಅಂಶದಲ್ಲಿ ತಿಳಿಸಿದಂತೆ ಮಾರದೆ ಉಳಿಸಿಕೊಳ್ಳುವುದು ಉತ್ತಮ, ಹಾಗೊಮ್ಮೆ ಮಾರಿದರೆ ಆ ಹಣವನ್ನ ಮತ್ತೆ ಎಲ್ಲಾದರೂ ಹೂಡಿಕೆ ಮಾಡಲೇಬೇಕು. ಬೇರೆ ದಾರಿಯಿಲ್ಲ. ಹೂಡಿಕೆ ಸುಮ್ಮನೆ ಬರುವುದಿಲ್ಲ, ಅದರಲ್ಲೂ ಖರ್ಚಿದೆ. ಷೇರು ಕೊಳ್ಳುವುದರಿಂದ, ಬಂಗಾರ, ನೆಲ ಹೀಗೆ ಏನೇ ಕೊಳ್ಳಲು ಹೋದರೂ ಅಲ್ಲೆಲ್ಲ ಮೂಲ ವಸ್ತುವಿನ ಜೊತೆಗೆ ಅದನ್ನ ನಮ್ಮದಾಗಿಸಿಕೊಳ್ಳಲು ಖರ್ಚು ಇರುತ್ತದೆ. ಅದು ಕಸುಬುದಾರರ ಶುಲ್ಕವಿರಬಹುದು, ಏಜೆಂಟರ ಕಮಿಷನ್., ಹೀಗೆ ಹಲವು ರೀತಿಯ ಖರ್ಚು ಇರುತ್ತದೆ. ಅಲ್ಲದೆ ಇದಕ್ಕಿಂತ ಮುಖ್ಯವಾಗಿ ಎಲ್ಲಿ ಹೂಡಿಕೆ ಮಾಡಬೇಕು? ಯಾವ ಇನ್ಸ್ಟ್ರುಮೆಂಟ್ ಮೇಲೆ ಹೂಡಿಕೆ ಮಾಡಬೇಕು?ಎನ್ನುವುದು ಅತಿ ದೊಡ್ಡ ಪ್ರಶ್ನೆ. ಉತ್ತಮ ಹೂಡಿಕೆ ಆಯ್ಕೆ ಸಿಕ್ಕುವುದು ಸುಲಭದ ಮಾತಲ್ಲ. ಹೀಗಾಗಿ ಮತ್ತೆ ಅದೇ ವಾಕ್ಯವನ್ನ ಪುನರುಚ್ಛರಿಸುತ್ತೇನೆ, ಅವಶ್ಯಕತೆ ಇಲ್ಲವೆಂದರೆ ದುರಿತ ಕಾಲದಲ್ಲಿ ಹೂಡಿಕೆ ಹಿಂತೆಗೆಯುವುದಕ್ಕಿಂತ ಎಲ್ಲಿದೆಯೋ ಅಲ್ಲೇ ಉಳಿಸಿಕೊಳ್ಳುವುದು ಉತ್ತಮ ಆಯ್ಕೆ.
  3. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದೆ ಇರುತ್ತದೆ: ನೀವು ಎಲ್ಲಿ ಹೂಡಿಕೆ ಮಾಡಿದ್ದೀರಿ ಅದು ಕುಸಿತ ಕಂಡಿದೆ ಹೀಗಾಗಿ ನೀವು ಹೂಡಿಕೆಯನ್ನ ಬದಲಿಸಲು ಬಯಸಿರುತ್ತೀರಿ, ಆದರೆ ಇಲ್ಲಿ ಒಂದಂಶವನ್ನ ಗಮನಿಸಬೇಕು. ಈ ರೀತಿಯ ಕುಸಿತ ನೀವು ಹೂಡಿಕೆ ಮಾಡಿದ ಸಂಸ್ಥೆಯಲ್ಲಿ ಮಾತ್ರ ಆಗಿದೆಯೇ? ಅಥವಾ ಅದು ವಲಯ ಪೂರ್ತಿ ಆಕ್ರಮಿಸಿ ಕೊಂಡಿದೆಯೇ? ನೀವು ಹೂಡಿಕೆ ಮಾಡಿದ ವಲಯವನ್ನ ಬಿಟ್ಟು ಬೇರೆ ವಲಯಗಳು ಹೇಗೆ ಕೆಲಸ ಮಾಡುತ್ತಿವೆ ಎನ್ನುವುದನ್ನ ಕೂಡ ಗಮನಿಸಬೇಕು. ಮಾರಾಟ ಮಾಡುವ ಮನಸ್ಸು ಮಾಡಿದ್ದೇವೆ ಎಂದರೆ ಕುಸಿತ ದೊಡ್ಡ ಮಟ್ಟದಲ್ಲಿ ಆಗಿರುತ್ತದೆ ಎಂದರ್ಥ. ಹೀಗಾದಾಗ ಇದು ಸಾಮಾನ್ಯ ಪರಿಸ್ಥಿತಿಯಂತೂ ಆಗಿರಲಿಕ್ಕೆ ಸಾಧ್ಯವಿಲ್ಲ. ಸಾಮಾನ್ಯ ಸ್ಥಿತಿಯಲ್ಲಿ ಈ ಮಟ್ಟದ ಕುಸಿತವಾಗಿದ್ದರೆ , ಹೆಚ್ಚಿನ ನಷ್ಟವನ್ನ ತಪ್ಪಿಸಿಕೊಳ್ಳಲು ಮಾರುವುದು ಉತ್ತಮ ಮಾರ್ಗ. ಆದರೆ ಭಾರತದ ಇಂದಿನ ಸ್ಥಿತಿಯೇನಿದೆ ಇದರಲ್ಲಿ 90 ಪ್ರತಿಶತ ಸನ್ನಿವೇಶಗಳು ಭಾರತೀಯರ ಕೈ ಮೀರಿದ್ದು , ಜಾಗತಿಕ ಕಾರಣಗಳು ಮಾರುಕಟ್ಟೆಯ ಕುಸಿತಕ್ಕೆ ಬಹಳಷ್ಟು ದೇಣಿಗೆ ನೀಡಿವೆ. ಮುಂದಿನ ಆರು ತಿಂಗಳಲ್ಲಿ ಮಾರುಕಟ್ಟೆ ವಾಪಸ್ಸು ಮರಳಿ ಪುಟಿದೇಳುವ ಸಾಧ್ಯತೆಗಳನ್ನ ನಾವು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಮುಂದಿನ ಆರರಿಂದ ಎಂಟು ತಿಂಗಳು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದೆ ಇರುತ್ತದೆ. ಆತುರದಲ್ಲಿ ಮಾರಿ ಅದನ್ನ ಮತ್ತೆಲ್ಲಿ ಹೂಡಿಕೆ ಮಾಡುವಿರಿ? ನೀವು ಹೊಸದಾಗಿ ಹೂಡಿಕೆ ಮಾಡಿದ ಸಂಸ್ಥೆ ಕೂಡ ಕುಸಿತ ಕಾಣುವುದಿಲ್ಲ ಎನ್ನುವುದನ್ನ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ವಸ್ತು ಪರಿಸ್ಥಿತಿ ಹೀಗಿರುವಾಗ ಭಾರತದ ಮಟ್ಟಿಗೆ ಹೂಡಿಕೆಯನ್ನ ಮಾರುವುದು, ಬದಲಿಸುವುದು ಮಾಡದೆ ಇರುವುದು ಹೆಚ್ಚು ಲಾಭದಾಯಕ .
  4. ಹಣದುಬ್ಬರ ಸಹಿತ ಅನೇಕ ಕಾರಣಗಳು ಜಾಗತಿಕ: ಜಾಗತಿಕ ಸಮಸ್ಯೆಗೆಳು ಭಾರತವನ್ನ ಕುಸಿತಕ್ಕೆ ತಳ್ಳಿವೆ. ಆದರೆ ನೆನಪಿರಲಿ ಈ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಕುಸಿತ ಕಂಡ ವೇಗದಲ್ಲೇ ಮತ್ತೆ ಭಾರತೀಯ ಮಾರುಕಟ್ಟೆ ಪುಟಿದೇಳುತ್ತದೆ. ಇವತ್ತಿನ ದಿನದಲ್ಲಿ ದೀರ್ಘಾವಧಿ ಎನ್ನುವ ಪದ ಅರ್ಥವನ್ನ ಕಳೆದುಕೊಂಡಿದೆ. ಎರಡು ವರ್ಷ ಎನ್ನುವುದು ದೀರ್ಘಾವಧಿ ಎನ್ನುವ ಮಟ್ಟಕ್ಕೆ ಮಾರುಕಟ್ಟೆ ಬದಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳನ್ನ ಗಣನೆಗೆ ತೆಗೆದುಕೊಂಡು ನೋಡಿದರೆ ಭಾರತ ಇಂತಹ ಸಂಕಷ್ಟಗಳನ್ನ ಎದುರಿಸಲು ಮತ್ತು ಅದರಿಂದ ಹೊರಬರಲು ಹೆಚ್ಚು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ಸಹ ಸದ್ಯದ ಮಟ್ಟಿಗೆ ಹೂಡಿಕೆಯನ್ನ ಹೆಚ್ಚು ಅಲುಗಾಡಿಸದೆ ಇರುವುದು ಉತ್ತಮ ನಿರ್ಧಾರವಾಗುತ್ತದೆ.

ಮೊದಲೇ ಹೇಳಿದಂತೆ ದೀರ್ಘಾವಧಿ ಎನ್ನುವ ಪದ ಅರ್ಥ ಕಳೆದುಕೊಂಡಿದೆ , ಹೀಗಾಗಿ ಮುಂದಿನ ಎರಡು ವರ್ಷ ಭಾರತದ ಮಟ್ಟಿಗೆ ಬ್ಯಾಂಕಿಂಗ್, ಆಟೋಮೊಬೈಲ್, ಇನ್ಫ್ರಾ, ಸಿಮೆಂಟ್ ಮತ್ತು ಕ್ಯಾಪಿಟಲ್ ಗೂಡ್ಸ್ ಗಳು ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆಯನ್ನ ಪಡೆಯಲಿವೆ. ನಿಮ್ಮ ಹೂಡಿಕೆ ಈ ಕ್ಷೇತ್ರದಲ್ಲಿ ಇದ್ದು ಇವತ್ತಿನ ದಿನದಲ್ಲಿ ಕುಸಿತ ಕಂಡಿದ್ದರೆ ಹೆಚ್ಚು ಯೋಚಿಸುವುದು ಬೇಡ. ಈ ವಲಯಗಳು ಹೆಚ್ಚಿನ ಲಾಭವನ್ನ ಖಂಡಿತ ತಂದು ಕೊಡುತ್ತವೆ. ಅಂತರರಾಷ್ತ್ರೀಯ ಮಟ್ಟದಲ್ಲಿ ರೂಪಾಯಿ ಡಾಲರ್ ಎದುರು ಸತತ ಕುಸಿತವನ್ನ ಕಾಣುತ್ತಿದೆ. ಇದು ಐಟಿ ಕ್ಷೇತ್ರಕ್ಕೆ ಮತ್ತು ಫಾರ್ಮ ಕ್ಷೇತ್ರಕ್ಕೆ ವರದಾನವಾಗಲಿದೆ.

ಕೊನೆಮಾತು: 2022ರಲ್ಲಿ ಹೆಚ್ಚು ಹಣ, ಶ್ರೀಮಂತಿಕೆ ಸೃಷ್ಟಿ ಮಾಡುವುದು ಕಷ್ಟಸಾಧ್ಯ. ಇದನ್ನ ಎಲ್ಲಾ ಹೂಡಿಕೆದಾರರು ಬೇಗ ಅರಿತು ಕೊಂಡರೆ ಅಷ್ಟರ ಮಟ್ಟಿಗೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಸತತವಾಗಿ ಎರಡು ವರ್ಷ ಕೋವಿಡ್ ಕಾರಣದಿಂದ ತಣ್ಣಗಾಗಿದ್ದ ಇಂಜಿನ್ ಒಮ್ಮೆಲೇ ಬಿಸಿಯಾಗುವುದಿಲ್ಲ. ಮರು ಹೊಂದಾವಣಿಕೆ ಪ್ರಕ್ರಿಯೆ ಇದೆಯಲ್ಲ ಅದು ಬಹಳ ಸುಲಭವಲ್ಲ. ಈಗಾಗಲೇ ನಾವು ವರ್ಷದ ಮೊದಲ ಆರು ತಿಂಗಳನ್ನ ಕಳೆದಿದ್ದೇವೆ. ಮುಂದಿನ ಆರು ತಿಂಗಳು ಕೂಡ ಹೆಚ್ಚಿನ ಉತ್ಪತ್ತಿಯನ್ನ ನಾವು ಕಾಣಲು ಸಾಧ್ಯವಿಲ್ಲ. ಮಾರುಕಟ್ಟೆಯಿಂದ ಎಫ್ ಐ ಐ ಗಳ ಹಣ ಬಹಳಷ್ಟು ಹರಿದು ಹೋಗಿದ್ದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಮಾರುಕಟ್ಟೆ ಬಡವಾಗಲು ಇದೂ ಪ್ರಮುಖ ಕಾರಣ. ಜೊತೆಗೆ ಅಮೇರಿಕಾ ಹೊಸ ಆರ್ಥಿಕ ಕುಸಿತಕ್ಕೆ ಸಜ್ಜಾಗುತ್ತಿದೆ. ಚೀನಾ ಬಹಳಷ್ಟು ಆಂತರಿಕ ಸಮಸ್ಯೆಗಳಿಂದ ಇನ್ನೂ ಹೊರಬಂದಿಲ್ಲ. ಇವೆಲ್ಲಾ  ಸಮಸ್ಯೆಗಳ ನಡುವೆ ಜಾಗತಿಕ ರಾಜಕೀಯ ಅಸ್ಥಿರತೆ ಸೇರಿಕೊಂಡು 2022 ರಲ್ಲಿ ಹೆಚ್ಚಿನ ನಿರೀಕ್ಷೆಯನ್ನ ಇಟ್ಟುಕೊಳ್ಳದಂತೆ ಮಾಡಿದೆ. ಆದರೆ ಗಮನಿಸಿ, ಪ್ರತಿ ಕುಸಿತವೂ ಇನ್ನೊಂದು ಮಹಾನ್ ಜಿಗಿತಕ್ಕೆ ಆರಂಭವಾಗುತ್ತದೆ.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com