ಬಿಡದೇ ಕಾಡುವ ಬೆನ್ನು ನೋವಿಗೆ ಆಯುರ್ವೆದ ಚಿಕಿತ್ಸೆ (ಕುಶಲವೇ ಕ್ಷೇಮವೇ)

ಬೆನ್ನು ನೋವು ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಸಮಸ್ಯೆ. ಬೆನ್ನು ನೋವು ಎಂದರೆ ಕೆಳ ಬೆನ್ನು ಅಥವಾ ಸೊಂಟದ ಭಾಗದ ನೋವು.
ಬೆನ್ನು ನೋವು
ಬೆನ್ನು ನೋವು

ಬೆನ್ನು ನೋವು ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಸಮಸ್ಯೆ. ಬೆನ್ನು ನೋವು ಎಂದರೆ ಕೆಳ ಬೆನ್ನು ಅಥವಾ ಸೊಂಟದ ಭಾಗದ ನೋವು. ಪ್ರತಿಯೊಬ್ಬರಿಗೂ ಒಂದು ಸಲವಾದರೂ ಬೆನ್ನು ನೋವು ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಅನೇಕ ಜನರಲ್ಲಿ ಕಂಡುಬರುತ್ತಿದೆ. ದೇಹದಲ್ಲಿ ಹೆಚ್ಚುತ್ತಿರುವ ಬೊಜ್ಜು ಮತ್ತು ವ್ಯಾಯಾಮ ಮಾಡದೇ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು ಇದಕ್ಕೆ ಕಾರಣ. ಈ ಕಾರಣಗಳಿಂದ ಬೆನ್ನು ಹುರಿಯ ಸಹಜ ರಚನೆಯಲ್ಲಿ ವ್ಯತ್ಯಾಸ ಕಂಡುಬಂದು ಬೆನ್ನು ನೋವು ಉಂಟಾಗುವ ಸಾಧ್ಯತೆ ಹೆಚ್ಚು.

ಸಾಮಾನ್ಯವಾಗಿ ಬೊಜ್ಜಿದ್ದವರಲ್ಲಿ, ನಿಷ್ಕ್ರಿಯರಾಗಿದ್ದಾಗ ಒತ್ತಡ ಅಥವಾ ಆತ್ರ್ರೈಟಿಸ್ (ಸಂಧಿವಾತ) ಇದ್ದಾಗ ಕೆಳ ಬೆನ್ನು ನೋವು ಬರುತ್ತದೆ. ಬೆನ್ನು ನೋವು ಒಂದು ದಿನ, ಕೆಲವು ದಿನಗಳು ಅಥವಾ ಕೆಲವು ವಾರಗಳಲ್ಲಿ ನೋವು ಗುಣವಾಗುತ್ತದೆ. ಇಲ್ಲದಿದ್ದರೆ ವೈದ್ಯರ ಸಲಹೆ ಮತ್ತು ಕೆಲ ಪರೀಕ್ಷೆಗಳ ಅಗತ್ಯ ಇರುತ್ತದೆ. 

ಬೆನ್ನಿನ ರಚನೆ ಹೇಗಿದೆ?
ನಮ್ಮ ಬೆನ್ನು ಮೂಳೆಯಲ್ಲಿ 30ಕ್ಕೂ ಹೆಚ್ಚು ಮೂಳೆಗಳು ಒಂದರ ಮೇಲೊಂದು ಕುಳಿತು ನಮ್ಮ ದೇಹದ ಭಾರವನ್ನು ಹೊರಲು ಸಹಾಯ ಮಾಡುತ್ತಿವೆ. ಅವುಗಳ ಮಧ್ಯೆ ಡಿಸ್ಕ್ ಎಂಬ ಮೆತ್ತನೆಯ ವಸ್ತು ಇರುತ್ತದೆ. ಇದು ಬೆನ್ನು ಬಗ್ಗಿ ಏಳುವಾಗ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಇದರ ಮಧ್ಯಭಾಗದಲ್ಲಿ ಮೆದುಳಿನಿಂದ ಹೊರಟ ದೇಹದ ನರಮಂಡಲದ ಅತಿ ಮುಖ್ಯ ಅಂಗವಾದ ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಇರುತ್ತದೆ. ನೋವು ಕಡಿಮೆಯಾಗದಿದ್ದರೆ ಇದಕ್ಕೇನಾದರೂ ತೊಂದರೆ ಅಥವಾ ಒತ್ತಡ ಬೀಳುತ್ತಿದೆಯೇ ಎಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. 

ನಮಗೆ ವಯಸ್ಸಾದಂತೆ ಮೂಳೆಗಳು ಸವೆಯತೊಡಗುತ್ತವೆ. ಹಾಗೆಯೇ ಮೂಳೆಗಳನ್ನು ಬಿಗಿಯಾಗಿ ಹಿಡಿದಿಡುವ ಮಾಂಸಪೇಶಿಗಳು ದುರ್ಬಲಗೊಳ್ಳುತ್ತವೆ. ಜೊತೆಗೆ ಡಿಸ್ಕ್‍ ನಲ್ಲಿರುವ ನೀರಿನಂಶ ಕಮ್ಮಿಯಾಗುತ್ತದೆ ಹಾಗೂ ಅದರ ಆಕಾರ ಚಿಕ್ಕದಾಗಬಹುದು. ಅದರ ಹತ್ತಿಯಂತಹ ಗುಣ ಕಡಿಮೆಯಾಗುತ್ತದೆ. ಹೆಚ್ಚಾಗಿ ಮುಂದೆ ಬಗ್ಗಿ ಏನಾದರೂ ಭಾರ ಎತ್ತಿದರೆ ಅಥವಾ ದೂರವಿರುವ ವಸ್ತುವನ್ನು ಬಾಗಿ ಎಳೆದು ತೆಗೆಯುವಾಗ ಬೆನ್ನ ಮೇಲೆ ಒತ್ತಡ ಹೆಚ್ಚಾಗಿ ಮಾಂಸಪೇಶಿಗಳಲ್ಲಿ ಬಿಗಿತ ಬರುತ್ತದೆ. ಇದಲ್ಲದೇ ಗರ್ಭಾವಸ್ಥೆ, ಧೂಮಪಾನ, ಮುಟ್ಟು ನಿಲ್ಲುವ ಸಮಯದಲ್ಲಾಗುವ ಮೂಳೆ ಸವಕಲು, ಮಾನಸಿಕ ಒತ್ತಡ, ಬೆನ್ನನ್ನು ವಕ್ರವಾಗಿ ಇಟ್ಟುಕೊಳ್ಳುವುದು ಇತ್ಯಾದಿಗಳಿಂದ ತೊಂದರೆ ಹೆಚ್ಚುತ್ತದೆ.

ಬೆನ್ನು ನೋವು ನಿವಾರಣೆಗೆ ವಿಶ್ರಾಂತಿ ಮತ್ತು ವ್ಯಾಯಾಮ ಅತಿಮುಖ್ಯ

ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಶೇಕಡಾ 95ರಷ್ಟು ಸಂದರ್ಭಗಳಲ್ಲಿ ಸರಿ ಹೋಗುತ್ತದೆ. ವಿಶ್ರಾಂತಿ ಎಂದರೆ ಕುಳಿತು ಟಿವಿ, ಸಿನೆಮಾಗಳನ್ನು ನೋಡುವುದಲ್ಲ. ಮುಖ್ಯವಾಗಿ ಮುಂದೆ ಬಗ್ಗಿ ಭಾರ ಎತ್ತಬಾರದು. ದಿನದ ಹೆಚ್ಚಿನ ಭಾಗ ಅಂಗಾತ ಮಲಗಿರಬೇಕು.  

ಬೆನ್ನು ನೋವಿನ ನಿವಾರಣೆಯಲ್ಲಿ ಅತಿ ಮುಖ್ಯವಾದ ಪಾತ್ರ ವ್ಯಾಯಾಮದ್ದು. ಬೆನ್ನು ನೋವು ಗುಣವಾದ ಮೇಲೆ ಅನೇಕ ಜನರು ಸ್ವಲ್ಪ ದಿವಸದಲ್ಲೇ ವ್ಯಾಯಾಮವನ್ನು ಮರೆತುಬಿಡುತ್ತಾರೆ. ಇದರಿಂದ ಪುನಃ ಪುನಃ ಬಳಲುವ ಸಾಧ್ಯತೆ ಹೆಚ್ಚು. ಹಾಗಾಗಿ ವ್ಯಾಯಾಮ ಮಾಡುವುದನ್ನು ಸುತಾರಾಂ ಬಿಡಬಾರದು.  

ನೀವು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಬಹಳ ಹೊತ್ತು ಕುಳಿತೇ ಇರಬೇಡಿ. ಏಕೆಂದರೆ ತುಂಬಾ ಹೊತ್ತು ಕುಳಿತುಕೊಳ್ಳುವುದರಿಂದ ಸೊಂಟದ ಮೇಲೆ ಒತ್ತಡ ಬೀಳುತ್ತವೆ. ಹೀಗಾಗಿ ಕೆಲಸದ ನಡುವೆ ಕೆಲವು ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಿ. 30 ನಿಮಿಷಗಳಿಗೊಮ್ಮೆ ನಡೆದಾಡುವುದು ಉತ್ತಮ.

ಪ್ರತಿದಿನ ಕನಿಷ್ಠ ಎಂದರೂ 30 ನಿಮಿಷಗಳ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಮೂಳೆಗಳು ಆರೋಗ್ಯಕರವಾಗಿರುತ್ತದೆ. ಇದು ದೇಹದ ನೋವಿನ ಸಮಸ್ಯೆಯನ್ನೂ ದೂರ ಮಾಡುತ್ತದೆ.

ಚೆನ್ನಾಗಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ. ಕಡಿಮೆ ನೀರು ಕುಡಿಯುವುದರಿಂದ ನಿಮಗೆ ತಲೆ ನೋವು ಮತ್ತು ಬೆನ್ನು ನೋವು ಉಂಟು ಮಾಡುತ್ತದೆ. ಹಾಗಾಗಿ ಒಂದು ದಿನದಲ್ಲಿ ಕನಿಷ್ಠ 3 ರಿಂದ 5 ಲೀಟರ್ ವರೆಗೆ ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ಕೆಲಸ ಮಾಡುವ ಶಕ್ತಿ ಕೂಡ ಹೆಚ್ಚಾಗುತ್ತದೆ. ಹೀಗಾಗಿ ದಿನದಲ್ಲಿ ಸಾಧ್ಯವಾದಷ್ಟು ಹೆಚ್ಚಿಗೆ ನೀರು ಕುಡಿಯಿರಿ. 

ಬೆನ್ನು ನೋವಿಗೆ ಆಯುರ್ವೇದ ಚಿಕಿತ್ಸೆ

ಬೆನ್ನು ನೋವಿನ ಶಮನಕ್ಕೆ ಆಯುರ್ವೇದದಲ್ಲಿ ಕಟಿ ಬಸ್ತಿ ಎಂಬ ಚಿಕಿತ್ಸೆ ಇದೆ. ಇದರಲ್ಲಿ ನೋವಿರುವ ಭಾಗದಲ್ಲಿ ಉದ್ದಿನ ಹಿಟ್ಟನ್ನು ಕಟ್ಟೆ ಕಟ್ಟಿ ಅದರೊಳಗೆ ಔಷಧೀಯ ತೈಲಗಳನ್ನು ಬಿಸಿ ಮಾಡಿ ಹಾಕುತ್ತಾರೆ. ನಂತರ ಅಲ್ಲಿ ಮಸಾಜು ಮಾಡಿ ಔಷಧೀಯ ಸೊಪ್ಪುಗಳಿಂದ ಶಾಖ ಕೊಡುತ್ತಾರೆ (ಪತ್ರಪಿಂಡಸ್ವೇದ). ಈ ಚಿಕಿತ್ಸೆಯನ್ನು ಏಳು, 14 ಅಥವಾ 21 ದಿನಗಳ ತನಕ ಮಾಡಿಸಿಕೊಳ್ಳಬೇಕು. ಯಾವ ಕಾರಣದಿಂದ ಬೆನ್ನು ನೋವು ಬಂದಿದೆ ಎಂದು ತಿಳಿದುಕೊಂಡು ಮಾಡುವ ಚಿಕಿತ್ಸೆ ಇದಾಗಿದೆ. 

ಆಹಾರದಲ್ಲಿ ಹುರುಳಿಕಟ್ಟು ಮತ್ತು ಹೆಸರುಬೇಳೆ ಕಟ್ಟು ಸೇವನೆ ಮಾಡಬೇಕು. ಇದು ನೋವುನಿವಾರಕವಾಗಿ ಕೆಲಸ ಮಾಡುತ್ತದೆ. ಹುರುಳಿಕಾಳನ್ನು ಬೇಯಿಸಿ ಅದರ ಕಟ್ಟಿಗೆ ಜೀರಿಗೆಪುಡಿ ಮತ್ತು ಉಪ್ಪನ್ನು ಹಾಕಿ ಕುಡಿಯಬೇಕು. ಶುಂಠಿ, ಮೆಣಸು ಮತ್ತು ಬೆಳ್ಳುಳ್ಳಿಯನ್ನು ದೈನಂದಿನ ಆಹಾರದಲ್ಲಿ ಬಳಸಬೇಕು. 

ರಾತ್ರಿ ಮಲಗುವ ಮುಂಚೆ ಮತ್ತು ಬೆಳಗ್ಗೆ ಎದ್ದ ನಂತರ ಒಂದು ಲೋಟ ಬಿಸಿ ನೀರನ್ನು ಸೇವಿಸಬೇಕು. ಮಲಗುವಾಗ ಹಾಸಿಗೆಗೆ ತುಂಬ ಎತ್ತರದಲ್ಲಿ ದಿಂಬನ್ನು ಇಟ್ಟುಕೊಳ್ಳಬಾರದು. ಮಲಗುವ ಮುಂಚೆ ಶವಾಸನ ಮಾಡಿ ವಿಶ್ರಾಂತಿ ತೆಗೆದುಕೊಂಡು ಮಲಗಬೇಕು. ಚಳಿಗಾಲ ಮತ್ತು ಮಳೆಗಾಲದಲ್ಲಿ ಬೆಚ್ಚಗಿರುವ ಹಾಗೆ ಬಟ್ಟೆಯನ್ನು ಹಾಕಿಕೊಂಡು ಹೊರಗೆ ಓಡಾಡಬೇಕು. 

ಎಸಿಯಲ್ಲಿ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆ ಹತ್ತು ನಿಮಿಷವಾದರೂ ಹೊರಗೆ ಬಂದು ಮತ್ತೆ ಹೋಗಿ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಕುಳಿತುಕೊಂಡೇ ಕೆಲಸ ಮಾಡುವವರಾದರೆ ಬೆನ್ನಿಗೆ ಸಪೋರ್ಟ್ ಇರುವ ರೀತಿಯ ಕುರ್ಚಿಯನ್ನು ಬಳಸುವುದು ಉತ್ತಮ. ಯಾವುದೋ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಡೆದಾಡುವುದು ಮತ್ತು ಮಲಗುವುದು ಸರಿಯಲ್ಲ. 

ಆಯುರ್ವೇದ ವೈದ್ಯರು ಗುಗ್ಗುಲು ಇರುವ ಔಷಧಿಗಳು ಮತ್ತು ಕಷಾಯಗಳ ಸೇವನೆಯ ಸಲಹೆ ನೀಡಬಹುದು. ಮುಖ್ಯವಾಗಿ ಬೆನ್ನು ನೋವು ಇರುವವರು ಮಲಬದ್ಧತೆ ಆಗದಂತೆ ಎಚ್ಚರ ವಹಿಸಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com