ಆರೋಗ್ಯಕ್ಕಾಗಿ ಸಿರಿಧಾನ್ಯಗಳು (ಕುಶಲವೇ ಕ್ಷೇಮವೇ)
ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಹಾರ ಬೇಕೇ ಬೇಕು. ಆಹಾರವಿಲ್ಲದೇ ನಮ್ಮ ಬದುಕಿಲ್ಲ. ಆದ್ದರಿಂದ ಆಹಾರ ಬದುಕಿನ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ. ಆಹಾರದಿಂದಲೇ ಆರೋಗ್ಯ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ಅರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ಹಾಗೆಯೇ ಇರುತ್ತೇವೆ ಎಂಬ ಮಾತು ಜನಜನಿತವಾಗಿದೆ.
ಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರಗಳು. ಹತ್ತಾರು ಸಾವಿರ ವರ್ಷಗಳ ಹಿಂದೆಯೇ ಧಾನ್ಯಗಳನ್ನು ಮಾನವರು ಬೆಳೆಯುತ್ತಿದ್ದರು. ನಮ್ಮ ಪ್ರಾಚೀನ ಕವಿಗಳು ಅಂದಿನ ಕಾಲದ ಆಹಾರಕ್ರಮದ ಬಗ್ಗೆ ಬರೆದಿದ್ದಾರೆ.
ನವಣೆಯನುತಿಂಬುವನು
ಹವಣಾಗಿಇರುತಿಹನು ಬವಣಿಗಳಿಗವನು ಒಳಬೀಳನೀ ಮಾತು
ಠವಣೆಲ್ಲೆಂದ ಸರ್ವಜ್ಞ|
ರಾಗಿಯನ್ನು ಉಂಬುವ ನಿರೋಗಿಎಂದೆನಿಸುವನು
ರಾಗಿಯು ಭೋಗಿಗಳಿಗಲ್ಲ ಬಡವರಿಂ
ಗಾಗಿ ಬೆಳೆದಿಹುದು ಸರ್ವಜ್ಞ|
ಧಾನ್ಯ, ಕಿರುಧಾನ್ಯ, ಸಿರಿಧಾನ್ಯ
ಕವಿ ಸರ್ವಜ್ಞನ ಈ ವಚನಗಳಲ್ಲಿ ಧಾನ್ಯ ಎದ್ದುಕಾಣುವುದು. ಆಹಾರ ಪದಾರ್ಥಗಳಲ್ಲಿ ಧಾನ್ಯಗಳೇ ಅತ್ಯಂತ ಹಳೆಯ ಆಹಾರ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಇವು ಕೆಲವು ಧಾನ್ಯಗಳು. ಈ ಧಾನ್ಯಗಳ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳನ್ನು ಕಿರುಧಾನ್ಯಗಳು ಎನ್ನುತ್ತಾರೆ. ಅಕ್ಕಿ, ಗೋಧಿ ಮತ್ತು ಜೋಳದ ಹೊರತಾಗಿ ದೊರೆಯುವ ಧಾನ್ಯಗಳೇ ಕಿರುಧಾನ್ಯಗಳು. ಇವುಗಳು ದುಂಡಗೆ ಹಲವು ಬಣ್ಣಗಳಲ್ಲಿವೆ. ಈ ಒಂದೊಂದು ಕಿರುಧಾನ್ಯಕ್ಕೂ ಅದರದ್ದೇ ಆದ ಸ್ವಂತ ರುಚಿಯಿದೆ. ಕೆಲವು ಕಿರುಧಾನ್ಯಗಳು ಸ್ವಲ್ಪ ಸಿಹಿಯಾಗಿದ್ದರೆ ಕೆಲವು ಸ್ವಲ್ಪ ಸಪ್ಪೆಯಾಗಿವೆ. ಇತ್ತೀಚೆಗೆ ಕಿರುಧಾನ್ಯಗಳಿಗೇ ಸಿರಿಧಾನ್ಯಗಳು ಎಂಬ ಹೆಸರೂ ಬಂದಿದೆ. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಒಟ್ಟಾರೆ ಸಿರಿಧಾನ್ಯಗಳೆಂದರೆ ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು.
ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇದೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚು. ಇನ್ನು ಕೆಲವು ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿರುತ್ತವೆ. ಇಂತಹ ಪ್ರತಿ ಸಿರಿಧಾನ್ಯದ ಸೇವನೆ ಆರೋಗ್ಯಕ್ಕೆ ಉತ್ತಮ .ಇತ್ತೀಚಿನ ಕೆಲವು ಸಂಶೋಧನೆಗಳು ಕೂಡಾ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ.
ಸಿರಿಧಾನ್ಯಗಳ ಕೃಷಿ
ಇಂದು ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ಅಗ್ರಸ್ಥಾನದಲ್ಲಿದೆ. ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈಗೆಲ್ಲಾ ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹಿಂದೆಲ್ಲಾ ಒಂದೇ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಆಗೆಲ್ಲಾ ಅಕ್ಕಿ, ಗೋಧಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದಿತ್ತು.
ಇದನ್ನೂ ಓದಿ: ರಕ್ತಹೀನತೆ ಅಥವಾ ಅನೀಮಿಯಾ ಬಗ್ಗೆ ತಿಳಿದುಕೊಳ್ಳಿ
ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ. ಈ ಧಾನ್ಯಗಳನ್ನು ಬೆಳೆಯಲು ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇದರಿಂದ ಹಣ ಉಳಿದಿದೆ ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆಯ ಪ್ರಶ್ನೆಯೇ ಇಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟಪರಿಣಾಮ ಬೀರುವುದಿಲ್ಲ. ಜೊತೆಗೆ ಜನರಿಗೆ ಆಹಾರ ಮತ್ತು ಪಶುಗಳ ಮೇವಿನ ಬೆಳೆಯಾಗಿರುವ ಈ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇಲ್ಲ. ಮಳೆಯಾಧಾರಿತವಾಗಿ ಹಾಗೂ ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಈ ಧಾನ್ಯಗಳು ನಿಜಕ್ಕೂ ಸಿರಿಧಾನ್ಯಗಳೇ ಆಗಿವೆ.
ಸಿರಿಧಾನ್ಯಗಳಲ್ಲಿ ಪೌಶ್ಟಿಕಾಂಶ
ಈಗ ಅಕ್ಕಿ ಎಂದರೆ ಕೇವಲ ಬತ್ತದ ಅಕ್ಕಿ. ಆದರೆ ಹಿಂದೆ ನವಣಕ್ಕಿ, ಹಾರಕದಕ್ಕಿ, ಸಾಮಕ್ಕಿ, ನೆಲ್ಲಕ್ಕಿ ಹೀಗೆ ಹಲವಾರು ಬಗೆಯ ಅಕ್ಕಿಗಳಿರುತ್ತಿದ್ದವು. ಈ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಅಡಿಗೆಯ ರುಚಿ ಕೂಡ ಹೆಚ್ಚು, ಜೊತೆಗೆ ಇವುಗಳಲ್ಲಿ ಪೌಶ್ಟಿಕಾಂಶಗಳೂ ಹೆಚ್ಚು. ಆದ್ದರಿಂದಲೇ ಈ ಧಾನ್ಯಗಳಿಂದ ತಯಾರಿಸಿದ ಪಾಯಸ, ರೊಟ್ಟಿ, ಮುದ್ದೆ, ಉಂಡೆ ಮುಂತಾದ ಖಾದ್ಯಗಳನ್ನು ಸೇವಿಸಿದರೆ ಬಹಳ ಹೊತ್ತು ಹಸಿವಾಗುತ್ತಿರಲಿಲ್ಲ ಎಂದು ಇಂದಿಗೂ ಅನೇಕ ಹಿರಿಯರು ಹೇಳುತ್ತಾರೆ. ಈ ಸಿರಿಧಾನ್ಯಗಳನ್ನೇ ಸೇವಿಸಿ ಅವರು ಬಹುಕಾಲ ಯಾವುದೇ ರೋಗರುಜಿನಗಳಿಲ್ಲದೇ ಬದುಕುತ್ತಿದ್ದರು ಎಂದು ಹೇಳಲಾಗಿದೆ. ಆದ್ದರಿಂದಲೇ ಇಂದು ಎಷ್ಟೇ ಔಷಧಿ ಸೇವಿಸಿದರೂ ಆರೋಗ್ಯ ಸುಧಾರಿಸದೇ ಇರುವ ಜನಸಮೂಹ ಆರೋಗ್ಯವಂತರಾಗಿ ಬದುಕಬೇಕು ಎಂಬ ಕಾಳಜಿಯಿಂದ ಸಿರಿಧಾನ್ಯಗಳ ಕಡೆ ಮುಖ ಮಾಡಿದೆ. ತಾವು ಬಹಳ ವರ್ಷಗಳಿಂದ ಬಳಸುತ್ತಿದ್ದ, ಗೋಧಿ, ಬಿಳಿ ಅಕ್ಕಿಗೆ ಗೇಟ್‍ಪಾಸ್ ನೀಡಲು ಎಲ್ಲ ವಯಸ್ಸಿನವರೂ ಸಿದ್ಧರಾಗಿದ್ದಾರೆ.
ಸಿರಿಧಾನ್ಯಗಳ ಬಳಕೆ ಮತ್ತು ಪ್ರಾಮುಖ್ಯತೆ
ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಾಗಿರುವುದರಿಂದ ಹಲವರಿಗೂ ಸಿರಿಧಾನ್ಯಗಳು ಅಚ್ಚುಮೆಚ್ಚಾಗಿವೆ. ಕೆಲವು ಹೋಟೆಲುಗಳೂ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸುತ್ತಿವೆ. ಹಿಂದೆ ಇದ್ದ ಸಿರಿಧಾನ್ಯಗಳು ಬಡವರು ಮತ್ತು ಹಳ್ಳಿ ಜನರಿಗೆ ಮಾತ್ರ ಎಂಬ ಮಾತು ಇಂದು ಬದಲಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯಗಳನ್ನು ಸ್ವಾಗತಿಸಿದ್ದಾರೆ. ನಗರಗಳು, ಪಟ್ಟಣಗಳು ಮತು ಮಹಾನಗರಗಳ ಸಾವಯವ ಕೃಷಿಯ (ಆರ್ಗಾನಿಕ್ ಫಾರ್ಮಿಂಗ್) ಅಂಗಡಿಗಳಲ್ಲಿ ಹಲವು ಬಗೆ ಸಿರಿಧಾನ್ಯಗಳು ಸಿಗುತ್ತಿವೆ.
ಇದನ್ನೂ ಓದಿ: ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು
ಅನ್ನ, ರಾಗಿ, ಗೋಧಿ ಅಷ್ಟೂ ತಿಂದು ಗೊತ್ತಿರುವ ಜನರಿಗೆ ಈಗ ಸಿರಿ ಧಾನ್ಯಗಳನ್ನು ಸವಿಯುವ ಸಂಕ್ರಮಣ ಕಾಲ. ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು ಹೆಸರೇ ಗೊತ್ತಿಲ್ಲದ ಜನ ಈಗ ಮುಗಿಬಿದ್ದು ಸಿರಿಧಾನ್ಯಗಳ ಖರೀದಿಯಲ್ಲಿ ತೊಡಗಿದ್ದಾರೆ. ಇಂದು ಅನೇಕ ನಗರಗಳಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳಗಳಲ್ಲಿ ಜನವೋಜನ. ಸಿರಿಧಾನ್ಯ ಅಡುಗೆ ರೆಸಿಪಿ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಸಿರಿಧಾನ್ಯಗಳು ಮಾಲ್‍ಗಳಿಗೂ ಲಗ್ಗೆ ಇಟ್ಟಿವೆ. ಧಾನ್ಯ ಮಾತ್ರವಲ್ಲ, ಹಿಟ್ಟು, ರವೆಗಳೂ ಸಿಗುತ್ತಿವೆ. ಇನ್ನು ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕಲು ತಿಂಡಿಗಳೂ ಸಿರಿಧಾನ್ಯಗಳಲ್ಲಿ ಇಂದು ದೊರಕುತ್ತಿವೆ.
ಸಿರಿಧಾನ್ಯಗಳಲ್ಲಿ ನಾರು ಮತ್ತು ಕಬ್ಬಿಣದ ಅಂಶಗಳು, ಕಾರ್ಬೋಹೈಡ್ರೇಟ್‍ಗಳು ಮತ್ತು ಕೊಬ್ಬಿನಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. ಜೊತೆಗೆ ಇವುಗಳಲ್ಲಿ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ಗಳು ಮತ್ತು ರೋಗ ನಿರೋಧಕ ಶಕ್ತಿ ಇರುವುದರಿಂದ ಪೌಷ್ಟಿಕತೆಯ ಕಣಜಗಳೇ ಆಗಿವೆ. ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್, ನಾರಿನಂಶ ಹಾಗೂ ಖನಿಜಗಳು ಸಿರಿಧಾನ್ಯಗಳಲ್ಲಿವೆ. ಸಾಮೆ ಮತ್ತು ನವಣೆಗಳು ಪೋಷಕಾಂಶಗಳ ಸಿರಿಗಳೇ ಆಗಿವೆ. ಅದೇ ಅಕ್ಕಿ, ರಾಗಿ ಮತ್ತು ಗೋಧಿ ತಿನ್ನುವುದರ ಬದಲಿಗೆ ವಿವಿಧ ಪೋಷಕಾಂಶಗಳ ಗಣಿಗಳೇ ಆಗಿರುವ ಸಿರಿಧಾನ್ಯಗಳ ಸೇವನೆ ಇಂದು ಆರೋಗ್ಯಕ್ಕಾಗಿ ಅಗತ್ಯವಾಗಿದೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com