ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು (ಕುಶಲವೇ ಕ್ಷೇಮವೇ)
ಆದಿಕವಿ ಪಂಪನಿಂದ ಆಧುನಿಕ ಕವಿಗಳವರೆಗೆ ವರ್ಷಧಾರೆಯ ಕುರಿತು ವರ್ಣಿಸಿದ ಕವಿಗಳೇ ಇಲ್ಲ. ತಾನ್‍ಸೇನ್ ಮೇಘ್ ಮಲ್ಹಾರ್ ನುಡಿಸಿ, ಮಳೆ ಸುರಿಸಿದ್ದನೆಂಬುದನ್ನು ತಿಳಿಸಿದ್ದೇವೆ. ಪ್ರತಿ ಜೀವಿಗೂ ಜೀವ ತುಂಬುವ ಮಳೆಗಾಲದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ.
Published: 18th June 2022 12:31 PM | Last Updated: 18th June 2022 03:34 PM | A+A A-

ಸಂಗ್ರಹ ಚಿತ್ರ
ಆದಿಕವಿ ಪಂಪನಿಂದ ಆಧುನಿಕ ಕವಿಗಳವರೆಗೆ ವರ್ಷಧಾರೆಯ ಕುರಿತು ವರ್ಣಿಸಿದ ಕವಿಗಳೇ ಇಲ್ಲ. ತಾನ್‍ಸೇನ್ ಮೇಘ್ ಮಲ್ಹಾರ್ ನುಡಿಸಿ, ಮಳೆ ಸುರಿಸಿದ್ದನೆಂಬುದನ್ನು ತಿಳಿಸಿದ್ದೇವೆ. ಪ್ರತಿ ಜೀವಿಗೂ ಜೀವ ತುಂಬುವ ಮಳೆಗಾಲದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ.
ಈಗ ಕೊರೋನಾದ ಆತಂಕದಲ್ಲೇ ಎಲ್ಲರ ಬದುಕು ಸಾಗಿದೆ. ಇಂತಹ ಸಮಯದಲ್ಲಿ ಮಳೆಗಾಲದ ಆಗಮನವಾಗಿದೆ. ಪ್ರತಿ ಬಾರಿಗಿಂತ ಹೆಚ್ಚಿನ ಕಾಳಜಿಯನ್ನು ಕೊರೊನಾದೊಂದಿಗಿನ ಮಳೆಗಾಲದಲ್ಲಿ ವಹಿಸಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ.
ಯೋಜಿತ ಆಹಾರ ಸೇವನೆ ಅತ್ಯಗತ್ಯ:
ಬೇಸಿಗೆ ನಂತರ ಮಳೆಗಾಲದ ಆಗಮನವಾಗುವುದರಿಂದ ಕಾಯ್ದ ಭೂಮಿಯ ಮೇಲೆ ಮಳೆ ಸುರಿದು ತಂಪಾಗುತ್ತದೆ. ಬೇಸಿಗೆಯ ಬೇಗೆಗೆ ನಾವು ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವೆಯು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ತಂಪಾಗಿರುವ ಮಳೆಯ ನೀರನ್ನು ಕುಡಿಯುವದರಿಂದ ಹಸಿವೆ ಮತ್ತಷ್ಟು ಕುಂದುತ್ತದೆ. ಹೀಗೆ ಇಂಗಿದ ಹಸಿವೆ ಸರಿಪಡಿಸಿಕೊಳ್ಳಲು ನಾವು ಷಡ್ರಸಗಳನ್ನು ಅಂದರೆ ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಒಗರು ರುಚಿಯನ್ನು ಹೊಂದಿರುವ ಆಹಾರ ಸೇವಿಸಬೇಕು. ಇವುಗಳಲ್ಲಿ ಹುಳಿ, ಸಿಹಿ ಮತ್ತು ಉಪ್ಪು ರುಚಿಯ ಆಹಾರಗಳನ್ನು ಹೆಚ್ಚಾಗಿ ಬಳಸಬೇಕು. ಹುಣಸೆಹಣ್ಣು, ಟೊಮೊಟೊ, ನಿಂಬೆಹಣ್ಣನ್ನು ಆಹಾರದಲ್ಲಿ ಬಳಸಬೇಕು. ಈ ಕಾಲದಲ್ಲಿ ಮಿತ ಆಹಾರ ಸೇವನೆ ಮಾಡಬೇಕು. ಏಕೆಂದರೆ ಈ ಕಾಲದಲ್ಲಿ ಜೀರ್ಣಶಕ್ತಿಯು ಕುಂದುವುದರಿಂದ ಹೊಟ್ಟೆ ತುಂಬ ಉಂಡರೆ ಆಜೀರ್ಣ ಮುಂತಾದ ಕಾಯಿಲೆಗಳು ತಲೆದೋರಬಹುದು. ಹೊಸ ಅಕ್ಕಿಯ ಬದಲಾಗಿ ಹಳೆಯ ಅಕ್ಕಿಯನ್ನು ಬಳಸಿದರೆ ಸುಲಭವಾಗಿ ಜೀರ್ಣವಾಗುತ್ತದೆ.
ತರಕಾರಿ ಸಾಂಬಾರುಗಳ ಬದಲಿಗೆ ತೊಗರಿಬೇಳೆ ಕಟ್ಟು, ಹುರಳಿಯ ಕಟ್ಟಿನಿಂದ ತಯಾರಿಸಿದ ಸಾರು ಊಟಕ್ಕೆ ಬಳಸಿದರೆ ಜೀರ್ಣಶಕ್ತಿಗೆ ಒಳ್ಳೆಯದು. ಬ್ರೆಡ್, ಚಪಾತಿಗಳ ಜೊತೆಗೆ ಜೇನುತುಪ್ಪ ಸವರಿ ಬಳಸಬಹುದು. ಮಳೆಗಾಲದಲ್ಲಿ ಮೊಸರು ಬಳಸಬಾರದು. ಗಟ್ಟಿ ಮೊಸರು ಜೀರ್ಣಿಸಲು ಜಡ. ಅದು ಕಫವನ್ನು ಕೆರಳಿಸಿ ನೆಗಡಿ, ಕೆಮ್ಮು ಮತ್ತು ಉಬ್ಬಸವನ್ನು ಹೆಚ್ಚಿಸುತ್ತದೆ. ಮೊಸರನ್ನು ಸದಾ ಬಳಸುವವರು ಈ ಕಾಲದಲ್ಲಿ ಮೊಸರನ್ನು ಕಡೆದು ಸ್ವಲ್ಪ ಕರಿಮೆಣಸಿನ ಪುಡಿ ಉಪ್ಪು ಬೆರೆಸಿ ಮಿತಪ್ರಮಾಣದಲ್ಲಿ ಉಪಯೋಗಿಸಬಹುದು.
ಇದನ್ನೂ ಓದಿ: ಲಿವರ್ ಸಿರೋಸಿಸ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು...
ನೆಲ್ಲಿಕಾಯಿಯ ಬಳಕೆಯಿಂದ ರುಚಿ ಹೆಚ್ಚುವುದಲ್ಲದೇ ವಾಕರಿಕೆ, ಮಲಬದ್ಧತೆ, ಹೊಟ್ಟೆ ಉಬ್ಬರ ನಿವಾರಣೆಯಾಗುವುದು. ನೆಲ್ಲಿಕಾಯಿಯು ನಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫಗಳು ಕೆರಳಿದರೆ ಅವನ್ನು ಶಮನಗೊಳಿಸಿ ದೇಹದ ಎಲ್ಲಾ ಧಾತುಗಳಿಗೂ ಶಕ್ತಿ ನೀಡುತ್ತದೆ. ನೆಲ್ಲಿಕಾಯಿಯು ಮಳೆಗಾದಲ್ಲಿ ಸಿಗುವುದಿಲ್ಲವಾದರೂ ಇದರ ಉಪ್ಪಿನಕಾಯಿಯನ್ನು ಮಿತವಾಗಿ ಬಳಸಬಹುದು. ಈ ಕಾಲದಲ್ಲಿ ಸಂಡಿಗೆ, ಹಪ್ಪಳ ಬಳಸಬೇಕು. ಚಟ್ನಿಪುಡಿ, ಉಪ್ಪಿನಕಾಯಿ ಬಳಸಬೇಕು. ಮಳೆಗಾಲದಲ್ಲಿ ತಂಗಳು ಆಹಾರ ಪದಾರ್ಥ, ಫ್ರಿಡ್ಜ್‍ನಲ್ಲಿಟ್ಟ ಆಹಾರ ಪದಾರ್ಥ, ತಣ್ಣನೆಯ ನೀರು, ಐಸ್‍ಕ್ರೀಂ, ಶರಬತ್, ತಂಪುಪಾನಿಯಗಳ ಸೇವನೆ ಬೇಡ. ಅನ್ನ, ಸಾರು, ಮುದ್ದೆ, ರೊಟ್ಟಿ ಚಪಾತಿಳನ್ನು ಬಿಸಿಬಿಸಿಯಾಗಿರುವಾಗಲೇ ತಿನ್ನಬೇಕು.
ಗೋಧಿ ಚಿತ್ರಾನ್ನ
ಗೋಧಿಯನ್ನು ಒಡಕಲಾಗಿ ಕುಟ್ಟಿ ತರಿ ಮಾಡಿಕೊಳ್ಳಬೇಕು. ಒಂದು ಭಾಗ ಗೋಧಿ ತರಿಗೆ ಐದರಷ್ಟು ನೀರು ಹಾಕಿ ಉರಿಯ ಮೇಲೆ ಬೇಯಿಸಿಕೊಳ್ಳಬೇಕು. ಗಂಜಿನೀರನ್ನು ಬಸಿದುಕೊಂಡು ಅದನ್ನು ಸಾರು ತಯಾರಿಸಲು ಬಳಸಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ ಒಗ್ಗರಣೆ ಹಾಕಿ ಅದಕ್ಕೆ ಕಾಳು ಮೆಣಸು ಒಣಮೆಣಸಿನಕಾಯಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದ ಗೋಧಿ ತರಿ ಹಾಕಿ ಚೆನ್ನಾಗಿ ಬೆರಸಬೇಕು. ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಬೇಕು. ಗೋಧಿ ಚಿತ್ರಾನ್ನ ಉಬ್ಬಸ ರೋಗಿಗಳಿಗೆ ಮತ್ತು ಬಹುಮೂತ್ರ ಪ್ರವೃತ್ತಿ ಇರುವವರಿಗೆ ತುಂಬಾ ಉತ್ತಮವಾದುದ್ದು.
ಉಸುಲಿ (ಗುಗ್ಗರಿ)
ಹೆಸರು ಕಾಳು ಅಥವಾ ಮಡಕೆ ಕಾಳು ನೆನೆಯಿಸಿ, ಬೇಯಿಸಿ, ಸಾಸಿವೆ, ಒಣಮೆಣಸಿಕಾಯಿ ಒಗ್ಗರಣೆ ಹಾಕಿ ಉಸುಲಿ ತಯಾರಿಸಬೇಕು. ಒಣಕೊಬ್ಬರಿ ತುರಿಯನ್ನು ಮೇಲೆ ಹಾಕಬೇಕು.
ಅಂಗಾರ ಕರ್ಕಟಿ (ಕೆಂಡದ ರೊಟ್ಟಿ)
ಒಂದು ಭಾಗ ಗೋಧಿ ಹಿಟ್ಟಿಗೆ 1/8 ಭಾಗ ಕಡಲೆ ಹಿಟ್ಟು ಬೆರೆಸಿ, ಹೋಮ, ಇಂಗು, ಉಪ್ಪು, ತುಪ್ಪ ಹಾಕಿ ನೀರಿನಲ್ಲಿ ಹಿಟ್ಟನ್ನು ಚೆನ್ನಾಗಿ ಕಲಸಬೇಕು. ನಂತರ ದುಂಡನೆಯ ಉಂಡೆ ಮಾಡಿ ಲಟ್ಟಸಿ, ಕೆಂಡದಲ್ಲಿ ಕೆಂಪಗೆ ಸುಡಬೇಕು. ಮಳೆ ಬೀಳುವಾಗ ಇದನ್ನು ತಿಂದಲ್ಲಿ ತುಂಬಾ ಹಿತಕರ. ಇದು ಬಲವನ್ನು ಹೆಚ್ಚಿಸುವುದಲ್ಲದೇ ಜೀರ್ಣಕ್ಕೆ ಸುಲಭ ಮತ್ತು ಕಫ ಹೆಚ್ಚಾಗಿರುವ ಕೆಮ್ಮು, ನೆಗಡಿ, ಉಬ್ಬಸ ರೋಗಿಗಳಿಗೆ ವಾತರೋಗಗಳಿಂದ ಬಳಲುವವರಿಗೆ ಹೃದ್ರೋಗಿಗಳಿಗೆ ತುಂಬಾ ಉತ್ತಮವಾದುದು.
ಕಷಾಯದ ಪುಡಿ
ಧನಿಯ 100 ಗ್ರಾಂ, ಸುಗಂಧಿ ಬೇರು 50 ಗ್ರಾಂ, ಜೀರಿಗೆ 50 ಗ್ರಾಂ, ಕಾಳುಮೆಣಸು 50 ಗ್ರಾಂ, ಜೇಷ್ಠ ಮಧು, ಹಿಪ್ಪಲಿ 50 ಗ್ರಾಂ, ದಾಲ್ಚಿನ್ನಿ 25 ಗ್ರಾಂ, ಒಣಶುಂಠಿ, ಏಲಕ್ಕಿ, ಜಾಪತ್ರೆ, ಜಾಯಿಕಾಯಿ 10 ಗ್ರಾಂ ಎಲ್ಲವನ್ನು ಸೇರಿಸಿ ನುಣ್ಣಗಿನ ಪುಡಿ ಮಾಡಿಟ್ಟುಕೊಳ್ಳಬೇಕು.
ಬೇಕೆನಿಸಿದಾಗ ಕಷಾಯ ತಯಾರಿಸಿ ಕುಡಿಯಬಹುದು. ಒಂದು ಲೋಟ ನೀರಿಗೆ ಅರ್ಧ ಚಮಚೆ ಪುಡಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಬೇಕು. 3-4 ನಿಮಿಷಗಳ ಕುದಿದ ನಂತರ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಇಳಿಸಿ, ಬೇಕೆನಿಸಿದ್ದಲ್ಲಿ ಹಾಲು ಬೆರೆಸಬಹುದು.
ಇದನ್ನೂ ಓದಿ: ಸೌಂದರ್ಯ ಶಸ್ತ್ರಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ: ಎಷ್ಟು ಸಹಕಾರಿ ಅಥವಾ ಎಷ್ಟು ಅಪಾಯಕಾರಿ?
ಕುಡಿಯುವ ನೀರು
ಜೀವಿಗಳಿಗೆ ನೀರು ಜೀವನಾಧಾರ ಆದ್ದರಿಂದಲೇ ಇಂತಹ ಸ್ಥಿತಿಯಲ್ಲಿಯು ನೀರು ಸೇವಿಸದೆ ಇರಬಾರದು. ಮಳೆಗಾಲದಲ್ಲಿ ನೀರನ್ನು ಕುರಿತು ಎಚ್ಚರವಹಿಸಬೇಕಾದದ್ದು ಬಹಳ ಮುಖ್ಯ. ಕಲುಷಿತ ನೀರಿನಿಂದ ವಾಂತಿ, ಭೇದಿ, ಕೆಮ್ಮು, ನೆಗಡಿ, ಗಂಟಲು ನೋವು ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಟೈಫಾಯ್ಡ್ ವರೆಗೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಕುದಿಸಿ ಆರಿಸಿದ ನೀರು ಕುಡಿಯುವುದು ಸೂಕ್ತ. ನೀರನ್ನು ಕನಿಷ್ಠ 10 ನಿಮಿಷ ಕುದಿಸಿ ಅದೇ ಪಾತ್ರೆಯಲ್ಲಿ ಆರಿಸಿ ಕುಡಿದರೆ ಬ್ಯಾಕ್ಟೀರಿಯಾ ಸೋಂಕುಗಳು ಉಂಟಾಗಲವಾರವು. ಅದಲ್ಲದೇ ನೀರನ್ನು ಕುದಿಸುವಾಗ ಒಂದು ಚಿಕ್ಕ ಶುಂಠಿ ತುಂಡು ಹಾಕಿ ಕುದಿಸಿದ್ದಲ್ಲಿ ಇನ್ನು ಉತ್ತಮ. ಶುಂಠಿ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಕಫ ಉಂಟಾಗುವುದಿಲ್ಲ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಆಹಾರ ಜೀರ್ಣಿಸಲು ಸಹಕಾರಿಯಾಗುತ್ತದೆ. ಜೇನುತುಪ್ಪ ಬೆರೆಸಿದ ನೀರು ಕುಡಿಯುವುದು ಒಳ್ಳೆಯದು. ಜೇನುತುಪ್ಪ ಸೇವನೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಕುಡಿಯಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com