ಪ್ರಕೃತಿ ಚಿಕಿತ್ಸೆ ಎಂದರೇನು?; ನ್ಯಾಚುರೋಪಥಿಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ತಿಳಿಯಿರಿ (ಕುಶಲವೇ ಕ್ಷೇಮವೇ)
ಇಂದು ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ತಮ ಜೀವನ ನಡೆಸಲು ಅಲೋಪತಿ, ಆಯುರ್ವೇದ, ಹೋಮಿಯೋಪಥಿ, ಸಿದ್ಧ, ಯುನಾನಿ ಹೀಗೆ ಹಲವಾರು ವೈದ್ಯಕೀಯ ಮತ್ತು ಚಿಕಿತ್ಸಾ ಪದ್ಧತಿಗಳಿವೆ. ಇವುಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಥಿ ಕೂಡ ಒಂದು.
Published: 01st October 2022 11:50 AM | Last Updated: 01st October 2022 06:49 PM | A+A A-

ನ್ಯಾಚುರೋಪಥಿ (ಸಂಗ್ರಹ ಚಿತ್ರ)
ಇಂದು ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ತಮ ಜೀವನ ನಡೆಸಲು ಅಲೋಪತಿ, ಆಯುರ್ವೇದ, ಹೋಮಿಯೋಪಥಿ, ಸಿದ್ಧ, ಯುನಾನಿ ಹೀಗೆ ಹಲವಾರು ವೈದ್ಯಕೀಯ ಮತ್ತು ಚಿಕಿತ್ಸಾ ಪದ್ಧತಿಗಳಿವೆ. ಇವುಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಥಿ ಕೂಡ ಒಂದು.
ನ್ಯಾಚುರೋಪಥಿ ಎಂದರೇನು?
ಇದೊಂದು ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು ಇದರಲ್ಲಿ ಯಾವುದೇ ರಸಾಯನಿಕಜನ್ಯ ಔಷಧಿಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಅಗತ್ಯವಿರುವಲ್ಲಿ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಆ ಮೂಲಕ ನಮ್ಮದೇಹವು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುವ ಉತ್ತಮ, ಸುರಕ್ಷಿತ ಮತ್ತು ನೈಸರ್ಗಿಕ ಮಾರ್ಗವನ್ನು ನೀಡುತ್ತದೆ. “ಪ್ರಕೃತಿಯು ನಮ್ಮನ್ನು ಗುಣಪಡಿಸುತ್ತದೆ, ಔಷಧಿಗಳಲ್ಲ” ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವವಾಗಿದೆ.
ಇದನ್ನೂ ಓದಿ: ಸ್ತ್ರೀಯರನ್ನು ಕಾಡುತ್ತಿರುವ ಪಿಸಿಓಡಿ ಸಮಸ್ಯೆ
ಪ್ರಕೃತಿ ಚಿಕಿತ್ಸೆಯ ಸಿದ್ಧಾಂತದ ಪ್ರಕಾರ ಕಾಯಿಲೆಯ ಮೂಲ – ಕ್ರಿಮಿಗಳಲ್ಲ; ಕ್ರಿಮಿಗಳನ್ನು ಬೆಳೆಸುವಂತಹ ಕಶ್ಮಲಗಳು ದೇಹದಲ್ಲಿ ಸಂಗ್ರಹಣೆಗೊಂಡಾಗ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ದೇಹಕ್ಕೆ ಪ್ರವೇಶಿಸಿದ ಕ್ರಿಮಿಗಳ ಸಂಖ್ಯೆ ಯಥೇಚ್ಛವಾಗಿ ಬೆಳೆದು ಕಾಯಿಲೆಗೆ ಕಾರಣವಾಗುತ್ತವೆ. ಆದ್ದರಿಂದ ಪ್ರಾಕೃತಿಕ ಮತ್ತು ಸಂಪ್ರದಾಯಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡು ದೇಹದಲ್ಲಿನ ಕಶ್ಮಲಗಳನ್ನು ವಿಸರ್ಜನಾಂಗಗಳ ಮೂಲಕ ಹೊರಹಾಕಿ ಶುಭ್ರಪಡಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರಿಂದ ಎಲ್ಲಾ ವೈರಾಣುಗಳು, ಬ್ಯಾಕ್ಟೀರಿಯಾ ಇತರೆ ರೋಗಕಾರಕ ಕ್ರಿಮಿಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಈ ವೈರಾಣು, ಬ್ಯಾಕ್ಟೀರಿಯಾ, ಕ್ರಿಮಿಗಳು ದೇಹವನ್ನು ಪ್ರವೇಶಿಸಿದರೂ ದೇಹಾರೋಗ್ಯ ಸರಿಯಾಗಿರುತ್ತದೆ.
ಪ್ರಕೃತಿ ಚಿಕಿತ್ಸೆಯಲ್ಲಿ ಯೋಗ ಮತ್ತು ಪರ್ಯಾಯ ಜೀವನ ಪದ್ಧತಿ
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆ ಬಹಳ ಮುಖ್ಯ. ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತುರಾತ್ರಿ) ಹಲ್ಲುಜ್ಜುವಿಕೆ, ಮಲ ವಿಸರ್ಜನೆ ಮತ್ತು ಸ್ನಾನದ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು.ಆಗಾಗ್ಗೆ ಕೈ-ಕಾಲು ಮತ್ತು ಮುಖವನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು.
ಪ್ರಕೃತಿ ಚಿಕಿತ್ಸೆಯ ಪ್ರಕಾರ ಮನೆಯಲ್ಲಿ ಆಗಿಂದಾಗ್ಗೆ ತಯಾರಿಸಿದ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು, ಸಸ್ಯಾಹಾರ ಸೇವನೆ ಮಾಡುವುದು, ಪ್ರತಿದಿನ 2 ರಿಂದ 3 ಲೀಟರ್ ನಷ್ಟು ನೀರನ್ನು ಕುಡಿಯುವುದು, ಋತುವಿಗೆ ತಕ್ಕಂತೆ ಬೆಳೆಯುವ (ಸೀಸನಲ್) ಹಣ್ಣುಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ. ಊಟದಲ್ಲಿ ಹೆಚ್ಚು ತರಕಾರಿ ಮತ್ತು ಸೊಪ್ಪು ಸೇವನೆ ಮಾಡುವುದು ಪ್ರಮುಖವಾದುದು. ಸಿಗರೇಟು, ಮದ್ಯ ಇಂತಹ ಎಲ್ಲಾ ದುಶ್ಚಟಗಳಿಂದ ದೂರವಿರುವುದು ಮಹತ್ವವಾದುದು. ಹಾಗೆಯೇ ನಿತ್ಯ ಯೋಗಾಸನಗಳನ್ನು ಮಾಡುವುದು ನಮ್ಮ ಸಮಗ್ರ ವ್ಯಕ್ತಿತ್ವವನ್ನು ವಿಕಸನ ಮಾಡುತ್ತದೆ. ಪ್ರತಿದಿನ ನಾಲ್ಕು ಬಾರಿ ಸೂರ್ಯ ನಮಸ್ಕಾರ, ಆಸನಗಳು (ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸನ, ಮತ್ಸ್ಯಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಅರ್ಧಮತ್ಸ್ಯೇಂದ್ರಾಸನ, ಶಶಾಂಕಾಸನ, ಶವಾಸನ), ಪ್ರಾಣಾಯಾಮ (ಭಸ್ತ್ರಿಕಾ,ಉಜ್ಜಯಿ, ನಾಡಿಶೋಧನ, ಭ್ರಾಮರಿ 9 ಸುತ್ತುಗಳು) ಮತ್ತು ಧ್ಯಾನವನ್ನು ಕನಿಷ್ಠ ಒಂದು ಗಂಟೆ ಕಾಲ ಮಾಡುವುದರಿಂದ ದೇಹದ ಸ್ನಾಯುಗಳು, ರಕ್ತ ಪರಿಚಲನೆ, ನರಮಂಡಲಗಳು, ಚೋದನೀಯ ಹಾಗೂ ನಿರ್ನಾಳ ಗ್ರಂಥಿಗಳು ಮತ್ತು ಇತರ ಎಲ್ಲಾ ಅವಯವಗಳು ಬಲಯುತವಾಗುವುದರ ಜೊತೆಗೆ ನಮ್ಮ ಮಾನಸಿಕ ಒತ್ತಡ ದೂರವಾಗಿರೋಗ ನಿರೋಧಕ ಶಕ್ತಿಯನ್ನು ಸುಸ್ಥಿರವಾಗುತ್ತದೆ.
ಇದನ್ನೂ ಓದಿ: ಮಕ್ಕಳಷ್ಟೇ ಅಲ್ಲ ವಯಸ್ಕರನ್ನೂ ಕಾಡಬಹುದು ಟಾನ್ಸಿಲೈಟಿಸ್: ಶಸ್ತ್ರಚಿಕಿತ್ಸೆ ಅಗತ್ಯವೇ?
ಉಪವಾಸ ಪ್ರಕೃತಿ ಚಿಕಿತ್ಸೆಯಲ್ಲಿ ಪ್ರಮುಖವಾದ ಅಂಶ. ಉಪವಾಸವೆಂದರೆ ದಿನದಲ್ಲಿ ಸ್ವಲ್ಪ ಸಮಯ ಅಥವಾ ಸಂಪೂರ್ಣವಾಗಿ ಎಲ್ಲಾರೀತಿಯ ಆಹಾರ ಸೇವಿಸುವುದರಿಂದ ದೂರವಿರುವುದು. ನಿರಾಹಾರಿಯಾಗಿರುವುದು ಆರೋಗ್ಯ ರಕ್ಷಣೆಗೆ ಬಹಳ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ. ಸಂಪೂರ್ಣ ಉಪವಾಸ ಸಾಧ್ಯವಾಗದಿದ್ದರೆ ನೀರು, ಕನಿಷ್ಠ ತಾಜಾ ಹಣ್ಣಿನ ರಸ ಅಥವಾ ಹಸಿ ತರಕಾರಿ ಸೇವನೆಯೊಂದಿಗೂ ಸಾಧ್ಯ.ಅತ್ಯಂತ ಪರಿಣಾಮಕಾರಿಯಾದ ವಿಧಾನವೆಂದರೆ ಲಿಂಬೆ ರಸ ಸೇವಿಸಿ ಉಪವಾಸವಿರುವುದು. ಉಪವಾಸ ಮಾಡುವಾಗ, ದೇಹವು ತನ್ನಲ್ಲಿ ಸಂಗ್ರಹವಾಗಿರುವ ಅಗಾಧ ಪ್ರಮಾಣದ ತ್ಯಾಜ್ಯವನ್ನು ದಹಿಸಿ ವಿಸರ್ಜಿಸುತ್ತದೆ. ಉಪವಾಸದ ಅವಧಿಯಲ್ಲಿ ರೋಗಿಯು ಎಷ್ಟು ಸಾಧ್ಯವೋ ಅಷ್ಟು ದೈಹಿಕ ವಿಶ್ರಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ಹೊಂದುವುದು ಅತಿ ಮುಖ್ಯ.
ಪ್ರಕೃತಿ ಚಿಕಿತ್ಸೆಯ ವಿಧಗಳು
ಇದಲ್ಲದೇ ಪ್ರಕೃತಿ ಚಿಕಿತ್ಸೆಯಲ್ಲಿ ವಿವಿಧ ಸಮಸ್ಯೆಗಳಿಗೆ ತಕ್ಕಂತೆ ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೆಟ್‍ಥೆರಪಿ, ಬಣ್ಣ ಚಿಕಿತ್ಸೆ, ಅಕ್ಯುಪಂಕ್ಚರ್, ಆಕ್ಯುಪ್ರೆಶರ್, ಎಲೆಕ್ಟ್ರೋಥೆರಪಿ ಹೀಗೆ ಹತ್ತು ಹಲವಾರು ಚಿಕಿತ್ಸೆಗಳಿವೆ.
ಪ್ರಕೃತಿ ಚಿಕಿತ್ಸೆ ಎಂಬ ಜೀವನಶೈಲಿ
ಪ್ರಕೃತಿ ಚಿಕಿತ್ಸೆಯು ಮಾನವಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ ನೀಡುವ ಮಾರ್ಗವಾಗಿದೆ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆಗೆ ಪ್ರಕೃತಿ ಚಿಕಿತ್ಸೆಗೆ ಆಧಾರವಾಗಿವೆ. ಪ್ರಕೃತಿ ಚಿಕಿತ್ಸೆಯು ನಿಸರ್ಗವೇ ಶ್ರೇಷ್ಠ ಚಿಕಿತ್ಸಕ ಎಂಬ ಅಂಶವನ್ನು ಅವಲಂಬಿಸಿದೆ ಮತ್ತು ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮುಂತಾದ ಮಾನವ ದೇಹದ ಎಲ್ಲಾ ಅಂಶಗಳನ್ನು ಯಶಸ್ವಿಯಾಗಿ ಪರಿಗಣಿಸುತ್ತದೆ. ಇದರಲ್ಲಿ ಆಹಾರವೇ ಔಷಧ ಮತ್ತು ಹೊರಗಿನ ಯಾವುದೇ ಔಷಧಗಳನ್ನು ಬಳಸುವುದಿಲ್ಲ. ಇಂದು ಪ್ರಕೃತಿ ಚಿಕಿತ್ಸೆಯನ್ನು ಜಾಗತಿಕ ವೈಜ್ಞಾನಿಕ ಮತ್ತು ವೈದ್ಯಕೀಯ ಸಮುದಾಯವು ಅಂಗೀಕರಿಸಿದೆ ಮತ್ತು ಸಾಂಪ್ರದಾಯಿಕ ಔಷಧ ಅಥವಾ ಶಸ್ತ್ರಚಿಕಿತ್ಸೆಗೆ ಬದಲಾಗಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಕೃತಿ ಚಿಕಿತ್ಸೆ ಕಡೆಗೆ ಮುಖ ಮಾಡುತ್ತಿದ್ದಾರೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com