ಮಕ್ಕಳಷ್ಟೇ ಅಲ್ಲ ವಯಸ್ಕರನ್ನೂ ಕಾಡಬಹುದು ಟಾನ್ಸಿಲೈಟಿಸ್: ಶಸ್ತ್ರಚಿಕಿತ್ಸೆ ಅಗತ್ಯವೇ? (ಕುಶಲವೇ ಕ್ಷೇಮವೇ)

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ.
ಟಾನ್ಸಿಲೈಟಿಸ್
ಟಾನ್ಸಿಲೈಟಿಸ್

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಮಕ್ಕಳಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು ಟಾನ್ಸಿಲೈಟಿಸಿನ ಪ್ರಮುಖ ಕಾರಣವಾಗಿದೆ. ಇದಲ್ಲದೇ ಅಡಿನೊ ವೈರಸ್, ಹರ್ಪಿಸ್, ಇ ಬಿ ವೈರಸ್, ಮೀಸಲ್ಸ್ ವೈರಸ್‍ ಕೂಡ ಟಾನ್ಸಿಲೈಟಿಸ್ ಸಮಸ್ಯೆಗೆ ಕಾರಣವಾಗುತ್ತವೆ.

ಟಾನ್ಸಿಲೈಟಿಸ್ ಸಮಸ್ಯೆಯು ಹತ್ತು ವರ್ಷದೊಳಗಿನ ಮಕ್ಕಳಲ್ಲಿ ಇದ್ದಕ್ಕಿದ್ದಂತೆ ಕಂಡುಬರುವುದು. ಕೆಲವೊಮ್ಮೆ ಈ ಸಮಸ್ಯೆ ತುಂಬಾ ದೀರ್ಘಕಾಲದವರೆಗೆ ಕಾಡುತ್ತದೆ. ಈ ಸಮಸ್ಯೆ ಕೆಲವರಿಗೆ ಪದೇ ಪದೇ ಕಾಡಬಹುದು. ಇದರಿಂದ ಮಕ್ಕಳ ಬೆಳವಣಿಗೆಯು ಕುಂಠಿತವಾಗುತ್ತದೆ. ವಯಸ್ಕರನ್ನೂ ಟಾನ್ಸಿಲ್ ಸಮಸ್ಯೆ ಕಾಡಬಹುದು.

ಟಾನ್ಸಿಲೈಟಿಸ್ ನ ಪ್ರಮುಖ ಲಕ್ಷಣಗಳು

ಟಾನ್ಸಿಲೈಟಿಸ್ ನ ಪ್ರಮುಖ ಲಕ್ಷಣಗಳು ಎಂದರೆ ಬಾಯಿ ದುರ್ವಾಸನೆ, ತುಂಬಾ ಚಳಿಯಾಗುವುದು, ಜ್ವರ, ಗಂಟಲಿನಲ್ಲಿ ನೋವು, ಆಹಾರ ನುಂಗಲು ಕಷ್ಟವಾಗುವುದು ,ಹೊಟ್ಟೆ ನೋವು, ತಲೆ ನೋವು, ಕುತ್ತಿಗೆ ಬಿಗಿಯಾಗುವುದು, ಕೆಮ್ಮು, ಕಿವಿನೋವು, ಟಾನ್ಸಿಲ್ ಗ್ರಂಥಿಗಳು ಊದಿಕೊಳ್ಳುವುದು, ಗಂಟಲು ಊದಿಕೊಳ್ಳುವುದು ಮತ್ತು ಬಾಯಿ ಅಗಲಿಸಲು ಕಷ್ಟವಾಗುವುದು. ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡು ಬರುತ್ತದೆ. ಟಾನ್ಸಿಲೈಟಿಸ್ ಬಂದಾಗ ಅದಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಮುಂದೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಗಂಟಲು ನೋವಿನೊಂದಿಗೆ ಜ್ವರ, ಎರಡು ದಿನಗಳಾದರೂ ಗಂಟಲು ನೋವು ಸರಿಹೋಗದೇ ಇರುವುದು, ಆಹಾರ ನುಂಗುವಾಗ ನೋವು ಅಥವಾ ಕಷ್ಟ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು.

ಟಾನ್ಸಿಲ್ಲಿನ ಸಮಸ್ಯೆಯಿಂದ ತೊಂದರೆಯಾಗಿರುವ ಮಕ್ಕಳಿಗೆ ಮೊತ್ತಮೊದಲಿಗೆ ನುಂಗಲು ಸುಲಭವಾಗಿರುವ ಆಹಾರವನ್ನು ನೀಡಬೇಕು. ಗಂಜಿ ಮುಂತಾದ ದ್ರವ ಪದಾರ್ಥಗಳು, ಸೂಪ್, ಹಾಲು ಹಾಗೂ ಬೆಚ್ಚಗಿನ ನೀರನ್ನು ಕೊಡಬೇಕು. ಮಕ್ಕಳು ಕೆಮ್ಮುವಾಗ ಮತ್ತು ಸೀನುವಾಗ ಕೈವಸ್ತ್ರವನ್ನು ಅಡ್ಡ ಹಿಡಿಯಲು ಹೇಳಬೇಕು. ಮಕ್ಕಳ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಅಷ್ಟೇನು ಗಂಭೀರ ಅಲ್ಲದಿದ್ದರೆ ವೈದ್ಯರು ಆಂಟಿಬಯಾಟಿಕ್‍ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ದೀರ್ಘಕಾಲದಿಂದ ಸಮಸ್ಯೆ ಇದ್ದರೆ ಟಾನ್ಸಿಲೆಕ್ಟಮಿ ಎಂಬ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುವುದು.

ಟಾನ್ಸಿಲೈಟಿಸ್ ಗೆ ಮನೆಮದ್ದು

ಟಾನ್ಸಿಲ್ ಸೋಂಕು  ದವಡೆಯ ಕೆಳಭಾಗದಲ್ಲಿ ಊತವನ್ನು ಉಂಟು ಮಾಡಿ ಆಹಾರವನ್ನು ನುಂಗಲು ಕಷ್ಟವಾಗುವಂತೆ ಮಾಡುತ್ತದೆ. ಬಹಳ ಸರಳವಾಗಿ ಉಪ್ಪ್ಪುಸೇರಿಸಿದ ಬೆಚ್ಚಗಿನ ನೀರಿನಿಂದ ಬಾಯಿ-ಗಂಟಲನ್ನು ಮುಕ್ಕಳಿಸುವುದರಿಂದ (ಗಾರ್ಗ್ಲಿಂಗ್) ಟಾನ್ಸಿಲ್ ಸೋಂಕನ್ನು ತಕ್ಕಮಟ್ಟಿಗೆ ನಿವಾರಿಸಬಹುದು. ಹೀಗೆ ದಿನಕ್ಕೆ ಎರಡು ಸಲವಾದರೂ ಮಾಡಬೇಕು. ಇದು ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೂ ಪರಿಹಾರವಾಗಿದೆ. ಹಾಗೆಯೇ ಪ್ರತಿದಿನ ರಾತ್ರಿ ಮಲಗುವ ಮೊದಲು ಜೇನುತುಪ್ಪ ಬೆರೆಸಿದ ಬಿಸಿ ಹಾಲನ್ನು ಸೇವಿಸುವುದರಿಂದ ಟಾನ್ಸಿಲ್ ನೋವು ಕಡಿಮೆಯಾಗುತ್ತದೆ. ಇದು ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸ್ವಚ್ಛಗೊಳಿಸಿ ನೋವನ್ನು ನಿವಾರಿಸುತ್ತದೆ.

ಬಿಸಿ ಹಾಲಿಗೆ ಅರಿಶಿನ ಮತ್ತು ಕರಿಮೆಣಸಿನ ಕಾಳಿನ ಪುಡಿಯನ್ನು ಸೇರಿಸಿ ಎರಡು ಅಥವಾ ಮೂರು ದಿನಗಳ ಕಾಲ ಕುಡಿಯುವುದೂ ಗಂಟಲಿನ ನೋವನ್ನು ಕಡಿಮೆ ಮಾಡುತ್ತದೆ. ತುಳಸಿ ಎಲೆಗಳನ್ನು ನೀರನ್ನು ಕುದಿಸಿ ಕರಿಮೆಣಸನ್ನು ಸೇರಿಸಿ ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಲೋಟ ಬಿಸಿ ನೀರಿಗೆ ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಅದಕ್ಕೆಎರಡು ಚಮಚ ಜೇನುತುಪ್ಪ ಮಿಶ್ರಣ ಮಾಡಿ. ಇದು ಬೆಚ್ಚಗಿರುವಾಗ ನಿಧಾನವಾಗಿ ಕುಡಿಯಿರಿ. ಇದನ್ನು ಒಂದು ವಾರದವರೆಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಯಿರಿ. ಬಾಯಿಯ ಮೂಲಕ ಬಿಸಿ ಹಬೆಯನ್ನು ತೆಗೆದುಕೊಳ್ಳುವುದು ಉತ್ತಮ ಪರಿಹಾರವಾಗಿದ್ದು ಇದು ಗಂಟಲನ್ನು ತೇವವಾಗಿರಿಸುತ್ತದೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಬಾರ್ಲಿಯ ಬಳಕೆಯಿಂದ ಟಾನ್ಸಿಲ್ ಸೋಂಕನ್ನು ಕಡಿಮೆ ಮಾಡಬಹುದು. ರಾತ್ರಿಯಲ್ಲಿ ಮಲಗುವ ಮೊದಲು ಒಂದು ಕಪ್ ಬಾರ್ಲಿಯನ್ನು ಶುದ್ಧ ನೀರಿನಲ್ಲಿ ನೆನೆಸಿ. ಮರುದಿನ ಬಾರ್ಲಿಯನ್ನು ಫಿಲ್ಟರ್ ಮಾಡಿ ನೀರನ್ನು ಕುಡಿಯಿರಿ. ಹಾಗೇ ಬಾರ್ಲಿಯನ್ನು ಪೇಸ್ಟ್ ಮಾಡಿ ಕುತ್ತಿಗೆಗೆ ಹಚ್ಚಿ. ಇದು ಟಾನ್ಸಿಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಟಾನ್ಸಿಲೈಟಿಸ್ ಗೆ ಆಯುರ್ವೇದ ಚಿಕಿತ್ಸೆ

ಆಯುರ್ವೇದದಲ್ಲಿ ಟಾನ್ಸಿಲ್ಸ್ ಸಮಸ್ಯೆಗೆ ಉತ್ತಮ ಚಿಕಿತ್ಸೆ ಇದೆ. ಮನೆಮದ್ದಿನಲ್ಲಿ ಕಡಿಮೆ ಆಗದೇ ಇದ್ದ ಪಕ್ಷದಲ್ಲಿ ನೀವು ಆಯುರ್ವೇದ ವೈದ್ಯರನ್ನು ಕಂಡರೆ ಸಮಸ್ಯೆಯನ್ನು ಗಮನಿಸಿ ಮೂರು ಅಥವಾ ಆರು ತಿಂಗಳುಗಳ ಕಾಲ ತೆಗೆದುಕೊಳ್ಳಲು ಸೂಚಿಸುತ್ತಾರೆ. ಆಹಾರ ಪಥ್ಯವನ್ನೂ ಹೇಳಬಹುದು. ಗಾರ್ಗಲ್ ಮಾಡಲು ತ್ರಿಫಲ ಕಷಾಯದಂತಹ ಕೆಲವು ಔಷಧೀಯ ಕಷಾಯಗಳನ್ನು ನೀಡಬಹುದು. ಪದೇ ಪದೇ ಟಾನ್ಸಿಲೈಟಿಸ್ ಸೋಂಕಿನಿಂದ ಜ್ವರ ಬರುತ್ತಿದ್ದಲ್ಲಿ ಆಂಟಿಬಯಾಟಿಕ್‍ಗಳನ್ನು ತೆಗೆದುಕೊಳ್ಳಲು ಸೂಚಿಸಬಹುದು. ದೀರ್ಘಕಾಲ ಈ ಸಮಸ್ಯೆ ಕಾಡುತ್ತಿದ್ದರೆ ಅಂತಹವರು ಶಸ್ತ್ರಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com